ಸಾಮಾನ್ಯ ಅಧ್ಯಯನ 2: ಸರ್ಕಾರೇತರ ಸಂಸ್ಥೆ; ಶಿಕ್ಷಣ ಮತ್ತು ಮಹಿಳಾ ಸಬಲೀಕರಣ
‘ಎಜುಕೇಟ್ ಗರ್ಲ್ಸ್’ಗೆ ಮ್ಯಾಗ್ಸೆಸೆ
ಸಂದರ್ಭ: ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ವಿವಿಧ ರೀತಿಯ ಶೋಷಣೆಯಿಂದ ಅವರನ್ನು ವಿಮೋಚನೆ ಗೊಳಿಸುವಲ್ಲಿ ನಿರತವಾಗಿರುವ ಸ್ವಯಂ ಸೇವಾ ಸಂಸ್ಥೆ ‘ಎಜುಕೇಟ್ ಗರ್ಲ್ಸ್’ಗೆ ಈ ಬಾರಿಯ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.
- ‘ಎಜುಕೇಟ್ ಗರ್ಲ್ಸ್’ ಸಂಸ್ಥೆಯು ರೇಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತದ ಮೊದಲ ಸಂಘಟನೆಯಾಗಿದೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ರೇಮನ್ ಮ್ಯಾಗ್ಸೆಸೆ ಅವಾರ್ಡ್ ಫೌಂಡೇಷನ್ (ಆರ್‌ಎಂಎಎಫ್) ಪ್ರಕಟಣೆಯಲ್ಲಿ ತಿಳಿಸಿದೆ.
- ‘ದಿ ಫೌಂಡೇಷನ್ ಟು ಎಜುಕೇಟ್ ಗರ್ಲ್ಸ್ ಗ್ಲೋಬಲಿ’ ಎಂಬುದು ಸಂಸ್ಥೆಯ ಮೂಲ ಹೆಸರಾಗಿದ್ದು, ಇದು ‘ಎಜುಕೇಟ್ ಗರ್ಲ್ಸ್’ ಎಂದೇ ಪ್ರಸಿದ್ಧ. ಸಫೀನಾ ಹುಸೇನ್ ಅವರು ಸಂಘಟನೆಯನ್ನು 2007ರಲ್ಲಿ ಸ್ಥಾಪಿಸಿದ್ದಾರೆ.
- ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನವೆಂಬರ್ 7ರಂದು ನಡೆಯುವ ಸಮಾರಂಭದಲ್ಲಿ 67ನೇ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
- ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿನ ಕಾರ್ಯಕ್ಕಾಗಿ ಮಾಲ್ದೀವ್ಸ್ನ ಶಾಹಿನಾ ಅಲಿ ಹಾಗೂ ಫಿಲಿಪ್ಪೀನ್ಸ್ನ ಫ್ಲಾವಿಯಾನೊ ಆಂಟೊನಿಯೊ ಎಲ್ ವಿಲ್ಲಾನುಯೆವಾ ಅವರಿಗೂ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಐತಿಹಾಸಿಕ ಕ್ಷಣ: ಸಫೀನಾ
- ‘ಸಂಸ್ಥೆಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿರುವುದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣ. ದೇಶದ ಮೂಲೆಯೊಂದರಲ್ಲಿ ಒಬ್ಬ ಬಾಲಕಿಯಿಂದ ಈ ಶಿಕ್ಷಣ ಅಭಿಯಾನ ಆರಂಭಗೊಂಡಿತು. ಜನರೇ ಮುನ್ನಡೆಸುತ್ತಿರುವ ಚಳವಳಿಯೊಂದು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವುದು ಖುಷಿ ತಂದಿದೆ’ ಎಂದು ‘ಎಜುಕೇಟ್ ಗರ್ಲ್ಸ್’ನ ಸಂಸ್ಥಾಪಕಿ ಸಫೀನಾ ಹುಸೇನ್.
- ‘ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಟೀಮ್ ಬಾಲಿಕಾ’ದ ಸ್ವಯಂ ಸೇವಕರು, ಪಾಲುದಾರರು, ಬೆಂಬಲ ನೀಡುತ್ತಿರುವವರಿಗೆ ಈ ಪ್ರಶಸ್ತಿಯಿಂದ ಗೌರವ ಸಿಕ್ಕಂತಾಗಿದೆ. ಅಲ್ಲದೇ, ಲಕ್ಷಾಂತರ ಬಾಲಕಿಯರು ತಮ್ಮ ಶಿಕ್ಷಣದ ಹಕ್ಕನ್ನು ಮರಳಿ ಪಡೆದಿರುವುದನ್ನು ಸಹ ಈ ಪ್ರಶಸ್ತಿ ದೃಢೀಕರಿಸುತ್ತದೆ.
- ‘ಸಾಂಪ್ರದಾಯಿಕ ಕಟ್ಟಳೆಗಳ ಬಂಧನ ಹಾಗೂ ಅನಕ್ಷರತೆಯಿಂದ ಬಾಲಕಿಯರು ಮತ್ತು ಯುವತಿಯರನ್ನು ಮುಕ್ತರನ್ನಾಗಿಸುವುದು, ಆ ಮೂಲಕ ಅವರಲ್ಲಿ ಧೈರ್ಯ ತುಂಬುವುದು, ಕೌಶಲಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಿ, ಅವರಲ್ಲಿನ ಸುಪ್ತಪ್ರತಿಭೆಯನ್ನು ಪೋಷಿಸುವ ದಿಸೆಯಲ್ಲಿ ‘ಎಜುಕೇಟ್ ಗರ್ಲ್ಸ್’ ಪ್ರದರ್ಶಿಸಿದ ಬದ್ಧತೆ ಗಮನಿಸಿ, ಏಷ್ಯಾದ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಂಘಟನೆಯನ್ನು ಆಯ್ಕೆ ಮಾಡಲಾಗಿದೆ’ ಎಂದು ಆರ್‌ಎಂಎಎಫ್ ತಿಳಿಸಿದೆ.
- ‘ರಾಜಸ್ಥಾನದಲ್ಲಿ ಆರಂಭಗೊಂಡ ಸಂಘಟನೆಯು ಶಾಲೆಯಿಂದ ದೂರ ಉಳಿದ ಹಾಗೂ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಬಾಲಕಿಯರನ್ನು ಗುರುತಿಸಿ, ಅವರನ್ನು ಪುನಃ ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಕೆಲಸ ಆರಂಭಿಸಿತು. ಅವರು ಉನ್ನತ ಶಿಕ್ಷಣ ಪೂರೈಸಿ, ಉದ್ಯೋಗ ಪಡೆಯುವವರೆಗೆ ಅವರ ಬೆಂಬಲಕ್ಕೆ ನಿಲ್ಲುವ ಕಾರ್ಯ ಮಾಡುತ್ತಿದೆ’ ಎಂದು ಫೌಂಡೇಷನ್ ಹೇಳಿದೆ.
- ‘ಪ್ರಾಯೋಗಿಕವಾಗಿ 50 ಗ್ರಾಮಗಳ ಶಾಲೆಗಳಲ್ಲಿ ತನ್ನ ಕಾರ್ಯಕ್ರಮ ಆರಂಭಿಸಿದ್ದ ಸಂಘಟನೆ, ದೇಶದಾದ್ಯಂತ 30 ಸಾವಿರಕ್ಕೂ ಅಧಿಕ ಗ್ರಾಮಗಳಿಗೆ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ. 20 ಲಕ್ಷಕ್ಕೂ ಅಧಿಕ ಬಾಲಕಿಯರಿಗೆ ಶಿಕ್ಷಣ ನೀಡಿದೆ’ ಎಂದೂ ತಿಳಿಸಿದೆ.
ಮೂಲಗಳು: ಪ್ರಜಾವಾಣಿ
ಸಾಮಾನ್ಯ ಅಧ್ಯಯನ 2: ಭಾರತದಲ್ಲಿ ಮಳೆಯ ಮಾದರಿ
ಪಂಜಾಬ್: 25 ವರ್ಷದಲ್ಲೇ ಅಧಿಕ ಮಳೆ
ಸಂದರ್ಭ:ಪಂಜಾಬ್‌ನಲ್ಲಿ ಆಗಸ್ಟ್ ತಿಂಗಳಲ್ಲಿ 25.37 ಸೆಂ.ಮೀ.ನಷ್ಟು ಮಳೆ ಸುರಿದಿದೆ. ಈ ಪ್ರಮಾಣವು ವಾಡಿಕೆಗಿಂತ ಶೇ 74ರಷ್ಟು ಅಧಿಕವಾಗಿದೆ. ಕಳೆದ 25 ವರ್ಷಗಳಲ್ಲೇ ಈ ಪ್ರಮಾಣದ ಮಳೆಯನ್ನು ರಾಜ್ಯ ಕಂಡಿರಲಿಲ್ಲ.
- ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ.
- ಜನರ ಸುರಕ್ಷತೆಗಾಗಿ ಸೇನೆಯು ‘ಮಾನವ ನೆರವು ಮತ್ತು ವಿಪತ್ತು ಪರಿಹಾರ’ (ಎಚ್‌ಎಡಿಆರ್) ಕಾರ್ಯಾಚರಣೆ ನಡೆಸುತ್ತಿದೆ. ವಾಯುಪಡೆಯು 20 ವಿಮಾನಗಳು, ಮೂರು ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
- ತೀವ್ರ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮೂರು ರಾಷ್ಟ್ರೀಯ ಹೆದ್ದಾರಿಗಳೂ ಸೇರಿ ಒಟ್ಟು 822 ರಸ್ತೆಗಳು ಮುಚ್ಚಿವೆ. 1,236 ವಿದ್ಯುತ್ ಪರಿವರ್ತಕಗಳು ಮತ್ತು 424 ಜಲ ಪೂರೈಕೆ ಯೋಜನೆಗಳಿಗೆ ಹಾನಿಯಾಗಿದೆ.
ಮೂಲಗಳು: ಪ್ರಜಾವಾಣಿ