ಪರಿಹಾರ ದರ ನಿಗದಿ
ಸಂದರ್ಭ: ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ‘ಕೃಷ್ಣಾ ಮೇಲ್ದಂಡೆ ಯೋಜನೆ–3’ನೇ ಹಂತದ ಯೋಜನೆಗಾಗಿ ಮುಳುಗಡೆ ಆಗುವ ಮತ್ತು ನಾಲೆಗಾಗಿ ಸ್ವಾಧೀನಪಡಿ ಸಿಕೊಳ್ಳುವ ಜಮೀನಿಗೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪರಿಹಾರದ ದರ ನಿಗದಿ ಮಾಡಲಾಗಿದೆ.
- ನೀರಾವರಿ ಜಮೀನಿಗೆ ಎಕರೆಗೆ ₹40 ಲಕ್ಷ ಮತ್ತು ಒಣ ಭೂಮಿಗೆ ಎಕರೆಗೆ ₹30 ಲಕ್ಷ ಪರಿಹಾರ ನೀಡಲು ಒಪ್ಪಿಗೆ ನೀಡಲಾಗಿದೆ. ಒಣ ಭೂಮಿಗೆ ಎಕರೆಗೆ ₹25 ಲಕ್ಷ ದರ ನಿಗದಿ ಮಾಡಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ. ಆದ್ದರಿಂದ ಕಡಿಮೆ ದರ ನಿಗದಿ ಮಾಡಲಾಗಿದೆ.
- ಅಣೆಕಟ್ಟಿನ ಎತ್ತರ ಹೆಚ್ಚಿಸು ವುದರಿಂದ ಹಿನ್ನೀರಿನಿಂದ ಸುಮಾರು 75 ಸಾವಿರ ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುತ್ತದೆ. 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಬಹುದು. ಇದರಿಂದ ಈ ಭಾಗದ ಜನರ ಜೀವನಮಟ್ಟವೂ ಸುಧಾರಣೆ ಆಗಲಿದೆ.
- ‘ಭೂಸ್ವಾಧೀನದ ವಿಚಾರವಾಗಿ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ. 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಈ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ.
- ‘2013ರ ಭೂ ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯ ಸೆಕ್ಷನ್ 51ರ ಅಡಿ ಭೂಸ್ವಾಧೀನ, ಪುನರ್‌ವಸತಿ ಪ್ರಾಧಿಕಾರವನ್ನು ರಚಿಸಲು ಅವಕಾಶವಿದೆ. ಹೀಗಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಪ್ರಾಧಿಕಾರವನ್ನು ರಚಿಸಲಿದೆ. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರಾಧಿಕಾರ ರಚನೆ ಆಗಲಿದೆ.
ಏನಿದು ಕೃಷ್ಣಾ ಮೇಲ್ಡಂಡೆ ಯೋಜನೆ ?
- ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಮುಖ ನೀರಾವರಿ ಯೋಜನೆಯಾಗಿದೆ.
- ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿದೆ.
- ಕೃಷ್ಣಾ ನದಿ ಮತ್ತು ಅದರ ಉಪನದಿಗಳಾದ ಭೀಮಾ ಹಾಗೂ ಇತರ ನದಿಗಳ ನೀರನ್ನು ಬಳಸಿಕೊಂಡು ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಯೋಜನೆಯಿಂದ 6.5 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಗುರಿ ಇದೆ.
- ಯುಕೆಪಿ-ಹಂತ III: ಕರ್ನಾಟಕ ಸರ್ಕಾರವು ಡಿಸೆಂಬರ್ 3, 2011 ರಂದು ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ತನ್ನ ಪಾಲಿನ ನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಐದು ವರ್ಷಗಳ ಕ್ರಿಯಾ ಯೋಜನೆಯನ್ನು ಅನಾವರಣಗೊಳಿಸಿತು. ಯುಕೆಪಿಯ ಹಂತ III 130 ಟಿಎಂಸಿಎಫ್‌ಟಿ ನೀರನ್ನು ಬಳಸುತ್ತದೆ. ಯೋಜನೆಯ ಮೂರನೇ ಹಂತವನ್ನು ಪೂರ್ಣಗೊಳಿಸಲು ಕರ್ನಾಟಕ ಸರ್ಕಾರ ₹17,000 ಕೋಟಿ (US$2.0 ಬಿಲಿಯನ್) ಖರ್ಚು ಮಾಡಲಿದೆ.
- ಹಂತ III ಆಲಮಟ್ಟಿ ಅಣೆಕಟ್ಟಿನ ಪೂರ್ಣ ಜಲಾಶಯದ ನೀರಿನ ಮಟ್ಟವನ್ನು 524 ಮೀಟರ್ (1,719 ಅಡಿ) ಗೆ ಹೆಚ್ಚಿಸುವುದನ್ನು ಒಳಗೊಂಡಿದೆ ಮತ್ತು ಇದಕ್ಕೆ 30 ಹಳ್ಳಿಗಳ ಸ್ಥಳಾಂತರದ ಅಗತ್ಯವಿರುತ್ತದೆ. ಒಂದು ಲಕ್ಷ ಎಕರೆ (405 ಕಿಮೀ2) ಭೂಮಿ ಮುಳುಗುತ್ತದೆ.
- ಯುಕೆಪಿ ಹಂತ III ಮುಲ್ವಾಡ್, ಚಿಮ್ಮಲಗಿ ಮತ್ತು ಇಂಡಿಯಲ್ಲಿ ಲಿಫ್ಟ್ ನೀರಾವರಿ ಯೋಜನೆಗಳು ಮತ್ತು ನಾರಾಯಣಪುರ ಬಲದಂಡೆ ಕಾಲುವೆಯ ವಿಸ್ತರಣೆ ಮತ್ತು ಭೀಮಾ ತಿರುವು ಯೋಜನೆಯನ್ನು ಒಳಗೊಂಡಿರುತ್ತದೆ. ಹಂತ III ರಾಂಪುರ, ಮಲ್ಲಾಬಾದ್, ಕೊಪ್ಪಳ ಮತ್ತು ಹೆರಕಲ್‌ನಲ್ಲಿ ಲಿಫ್ಟ್ ನೀರಾವರಿ ಯೋಜನೆಗಳ ವಿಸ್ತರಣೆಯನ್ನು ಸಹ ಒಳಗೊಂಡಿರುತ್ತದೆ.
ಯೋಜನೆಯ ಹೈಲೈಟ್ಸ್
- ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 ರ ತೀರ್ಪಿನ ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕಾಗಿ 130 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದು, ಇದರಿಂದ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಾಧ್ಯವಾಗಲಿದೆ.
- ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರಲ್ಲಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟ 519 ಮೀಟರ್ ನಿಂದ 524 ಮೀಟರ್ ಗೆ ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100 ಟಿ ಎಂ ಸಿ. ನೀರಿನ ಪ್ರಮಾಣ ಸಂಗ್ರಹ ಅಂದಾಜಿಸಲಾಗಿದೆ.
- ಯೋಜನೆ ಅನುಷ್ಠಾನಕ್ಕೆ ಒಟ್ಟು 1,33,867 ಎಕ್ರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಇದರಲ್ಲಿ 75,563 ಎಕ್ರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಸೇರಿದೆ. ಇದುವರೆಗೆ 29,566ಎಕ್ರೆ ಭೂಸ್ವಾಧೀನ ಐತೀರ್ಪು ಹೊರಡಿಸಲಾಗಿದೆ. 59,354 ಎಕ್ರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ.
- ಮುಳುಗಡೆ ಹೊಂದಲಿರುವ ಜಮೀನನ್ನು 2ಹಂತದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸುವ ಬದಲು ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ.
- ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ರೂ. 51,148 ಕೋಟಿ ಯೋಜನಾ ಮೊತ್ತ ಅಂದಾಜಿಸಲಾಗಿತ್ತು. ಈಗ ಪರಿಷ್ಕೃತ ರೂ. 87,818ಕೋಟಿ ಅಂದಾಜಿಸಲಾಗಿದೆ. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ರೂ. 17,627 ಕೋಟಿ ಆರಂಭದಲ್ಲಿ ಅಂದಾಜಿಸಲಾಗಿತ್ತು. ಪ್ರಸ್ತುತ ಪರಿಷ್ಕೃತ ಮೊತ್ತ ರೂ. 40,557.09 ಕೋಟಿ ರೂಪಾಯಿ ಅಂದಾಜಿಸಲಾಗಿದೆ.
- ಯೋಜನೆಗೆ ಸಂಬಂಧಿಸಿದಂತೆ 9 ಉಪ ಯೋಜನಾ ಸಿವಿಲ್ ಕಾಮಗಾರಿಗಳಿಗೆ ಪರಿಷ್ಕೃತ ಅಂದಾಜು ಮೊತ್ತ 25,122.53 ಕೋಟಿ ರೂಪಾಯಿ ಅಂದಾಜಿಸಲಾಗಿದೆ.
ಕರಡಿ ‘ವಸಿಕರನ್’ಗೆ ಕೃತಕ ಕಾಲು
ಸಂದರ್ಭ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕರಡಿ ರಕ್ಷಣಾ ಕೇಂದ್ರದಲ್ಲಿ ‘ವಸಿಕರನ್’ ಹೆಸರಿನ ಕರಡಿಗೆ ಮೂರು ದಿನಗಳಿಂದ ಕೈಗೊಳ್ಳಲಾಗಿದ್ದ ಕೃತಕ ಕಾಲು ಜೋಡಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
- ಇದರಿಂದಾಗಿ ಕರಡಿಯು ಮತ್ತೆ ಮೊದಲಿನಂತೆ ಮರ ಏರುವುದು, ನೆಲ ಕೆರೆಯುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ.
- ವಿಶ್ವದಲ್ಲೇ ಕರಡಿಗೆ ಕೃತಕ ಕಾಲು ಜೋಡಣೆ ಮಾಡಲಾದ ಮೊಟ್ಟಮೊದಲ ಪ್ರಕರಣ ಇದಾಗಿದೆ.
- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ.
- ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 2019ರಲ್ಲಿ ಬೇಟೆಗಾರರ ಬಲೆಗೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿದ್ದ ‘ವಸಿಕರನ್’ನನ್ನು ಇಲ್ಲಿಗೆ ತರಲಾಗಿತ್ತು.
ಬಫರ್ ಝೋನ್ ಕಡಿತ ಮರುಪರಿಶೀಲನೆಗೆ ಸಲಹೆ
ಸಂದರ್ಭ: ‘ಕೆರೆಗಳ ಬಫರ್ ಝೋನ್ ಕಡಿತಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗುತ್ತದೆ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಕೆ. ಚಂದ್ರಶೇಖರ್.
- ‘ಎಲ್ಲ ಕೆರೆಗಳಿಗೆ 30 ಮೀಟರ್ ಬಫರ್ ಝೋನ್ ಅನ್ನು ನಿಗದಿಪಡಿಸಲಾಗಿದೆ. ಅದನ್ನು ಕಡಿತಗೊಳಿಸಿ ಒಂದೊಂದು ಕೆರೆಗೆ ಒಂದೊಂದು ರೀತಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ನಿಗದಿಪಡಿಸಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.
ಹುಲಿಗಳ ಸಂಖ್ಯೆ ಮತ್ತು ಸಂಘರ್ಷ
ಸಂದರ್ಭ: ಬಂಡೀಪುರದ ಸಫಾರಿ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ನೈಸರ್ಗಿಕ ಕಾರಣಗಳಿಂದ ಗಾಯಗೊಂಡು ಕುಂಟುತ್ತಿರುವ ದೃಶ್ಯ. ಇದು, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿ ಕೆಲವು ವನ್ಯಜೀವಿ ಆಸಕ್ತರು ಆ ಹುಲಿಗೆ ಚಿಕಿತ್ಸೆ ನೀಡಲು ಮತ್ತು ಅದರ ಮರಿಗಳಿಗೆ ಕೃತಕವಾಗಿ ಆಹಾರವನ್ನೊದಗಿಸಲು ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ ಪರಿಣಾಮ, ಇಲಾಖೆ ಏನೇನೊ ಕಸರತ್ತು ಮಾಡಿತು.
- ಎರಡನೆಯದು: ಮೈಸೂರಿನ ಇಲವಾಲದ ಹತ್ತಿರ ಹುಲಿಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿದೆ ಎಂಬ ಸುದ್ದಿ.
- ಮೂರನೆಯದು: ಬಂಡೀಪುರ ಹುಲಿ ಯೋಜನೆಯ ಹತ್ತಿರವಿರುವ ಕುಂದುಕೆರೆ ಗ್ರಾಮದ ಬಳಿಯಿರುವ ಪುಟ್ಟ ಗುಡ್ಡದಲ್ಲಿ ಇತ್ತೀಚೆಗೆ ಎರಡು ಹುಲಿಗಳು ಕಾಣಿಸಿಕೊಂಡು, ಅವುಗಳಲ್ಲಿ ಒಂದು ಹುಲಿ ಇನ್ನೊಂದು ಹುಲಿಯಿಂದ ಗಾಯಗೊಂಡು ನಿತ್ರಾಣಗೊಂಡಿರುವ ಸುದ್ದಿ.
- ನಾಲ್ಕನೆಯದು: ಬಂಡೀಪುರದ ಬಳಿಯಿರುವ ಬೊಮ್ಮಲಾಪುರ ಎಂಬ ಹಳ್ಳಿಯಲ್ಲಿ ಗ್ರಾಮಸ್ಥರು ಹುಲಿ ಸಂಘರ್ಷದಿಂದ ಬೇಸತ್ತು, ಹುಲಿಯನ್ನು ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಅರಣ್ಯ ಇಲಾಖೆಯ ನೌಕರರನ್ನೇ ಕೂಡಿ ಹಾಕಿದ ಘಟನೆ.
- ಈ ನಾಲ್ಕೂ ಘಟನೆಗಳು ಸ್ವತಂತ್ರವೆನಿಸಿದರೂ, ಅವುಗಳಿಗೆ ಮತ್ತು ವನ್ಯಜೀವಿ ಸಂರಕ್ಷಣೆಯ ವಿಧಾನಗಳಿಗೆ ಕೊಂಡಿಗಳಿವೆ. ನಿಸರ್ಗದಲ್ಲಿ ಹುಲಿಯನ್ನು ಭಕ್ಷಿಸುವ ಇತರ ಪ್ರಾಣಿಗಳು ಇಲ್ಲವಾದುದರಿಂದ ಅದು ಪಾರಿಸರಿಕ ಗೋಪುರದ ತುದಿಯಲ್ಲಿರುವ ವನ್ಯಜೀವಿ. ಹಾಗಾಗಿ, ಹುಲಿಗಳಿಗೆ ಉತ್ತಮ ರಕ್ಷಣೆ ಸಿಕ್ಕರೆ ಅವುಗಳ ಸಂಖ್ಯೆ ಹೆಚ್ಚುತ್ತದೆ. ಆವಾಸಸ್ಥಾನದ ವ್ಯಾಪ್ತಿ, ಆ ಪ್ರದೇಶದಲ್ಲಿರುವ ಬಲಿಪ್ರಾಣಿಗಳ ಸಾಂದ್ರತೆಗೆ ಅನುಗುಣವಾಗಿ ಅವುಗಳ ಸಂಖ್ಯೆಯನ್ನು ನೈಸರ್ಗಿಕ ಕಾರಣಗಳು ನಿಯಂತ್ರಿಸುತ್ತವೆ. ಹುಲಿಗಳ ನೈಸರ್ಗಿಕ ಮರಣ ಪ್ರಮಾಣಕ್ಕೆ ಮುಖ್ಯ ಕಾರಣಗಳು: ನೆಲಹರವಿಗಾಗಿ ಹುಲಿಗಳ ಕಾದಾಟ, ನೈಸರ್ಗಿಕ ಕಾರಣಗಳಿಂದ ಆಗುವ ಗಾಯಗಳು, ರೋಗ, ಆಹಾರ ಅಥವಾ ನೀರಿನ ಕೊರತೆ. ಇವುಗಳಲ್ಲಿ ಕೊನೆಯದು ಅಪರೂಪ.
- ಏಕೆಂದರೆ, ಆಹಾರ ಮತ್ತು ನೀರಿನ ಕೊರತೆಯಿದ್ದರೆ ಹುಲಿಗಳ ಸಂಖ್ಯೆ ನೈಸರ್ಗಿಕವಾಗಿ ಕಡಿಮೆಯಿದ್ದು, ಅವುಗಳ ಸಂಖ್ಯೆ ಹೆಚ್ಚುವುದಿಲ್ಲ. ಇದನ್ನು ಮಲೆಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿಧಾಮ ಮತ್ತಿತರ ಪ್ರದೇಶಗಳಲ್ಲಿ ನಿರ್ದಿಷ್ಟವಾಗಿ ಕಾಣಬಹುದು. ಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆಸಿರುವ ಅಧ್ಯಯನಗಳ ಪ್ರಕಾರ, ಈ ಎರಡು ವನ್ಯಜೀವಿಧಾಮಗಳಲ್ಲಿ 12–15 ಹುಲಿಗಳಿವೆ. ಒಂದಕ್ಕೊಂದು ಹೊಂದಿಕೊಂಡಿರುವ ಈ ವನ್ಯಜೀವಿಧಾಮಗಳ ಒಟ್ಟು ಭೂ ವಿಸ್ತೀರ್ಣ 1,991 ಚ.ಕಿ.ಮೀ. (ಸುಮಾರು 4,91,987 ಎಕರೆ).
- ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳಂತೆಯೇ ಭೌಗೋಳಿಕವಾಗಿ ಕೂಡಿಕೊಂಡಿರುವ ಬಂಡೀಪುರ ಮತ್ತು ನಾಗರಹೊಳೆ ಹುಲಿ ಯೋಜನಾ ಪ್ರದೇಶಗಳ ಒಟ್ಟು ವಿಸ್ತೀರ್ಣ 1,771 ಚ.ಕಿ.ಮೀ. (ಸುಮಾರು 4,37,624 ಎಕರೆ). ಇತ್ತೀಚಿನ ವರದಿಗಳ ಪ್ರಕಾರ, ಇಲ್ಲಿರುವ ಹುಲಿಗಳ ಸಂಖ್ಯೆ 288. ಅಂದರೆ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಿಗಿಂತ 200 ಚ.ಕಿ.ಮೀ. ಕಡಿಮೆ ಇರುವ ಪ್ರದೇಶಕ್ಕಿಂತ ಸುಮಾರು 20 ಪಟ್ಟು ಹೆಚ್ಚು ಹುಲಿಗಳು ಬಂಡೀಪುರ–ನಾಗರಹೊಳೆಯಲ್ಲಿವೆ. ಇಲ್ಲಿ ಹಲವು ದಶಕಗಳಿಂದ ಆಗಿರುವ ರಕ್ಷಣಾ ಕಾರ್ಯಗಳು ಮತ್ತು ಹುಲಿಗಳ ಆವಾಸಸ್ಥಾನಗಳ ನಿರ್ವಹಣೆಯಿಂದ ಈ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಪಾರಿಸರಿಕ ಸಮತೋಲನದ ಮಟ್ಟ ತಲುಪಿವೆ ಅಥವಾ ಅದಕ್ಕಿಂತ ಹೆಚ್ಚಾಗಿವೆ. ಇದರ ಪರಿಣಾಮವಾಗಿ ಪ್ರಾಯದ ಹುಲಿಗಳು ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಯ ಸಣ್ಣಪುಟ್ಟ ಕಾಡುಗಳು ಅಥವಾ ಕೃಷಿ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ. ಈ ಸಣ್ಣಪುಟ್ಟ ಕಾಡುಗಳು ಅಥವಾ ಕೃಷಿ ಪ್ರದೇಶ ಹುಲಿಗಳಿಗೆ ಪಾರಿಸರಿಕ ಮತ್ತು ಸಾಮಾಜಿಕವಾಗಿ ಸೂಕ್ತ ಪ್ರದೇಶಗಳಲ್ಲ. ಅಲ್ಲಿ ಅವುಗಳಿಗೆ ಬೇಕಿರುವಷ್ಟು ನೈಸರ್ಗಿಕ ಆಹಾರ ಸಿಗದಿರುವುದರಿಂದ, ಅವು ಹೆಚ್ಚಾಗಿ ಜಾನುವಾರುಗಳ ಮೇಲೆ ಅವಲಂಬಿತ ವಾಗಿವೆ. ಇದು ಸ್ಥಳೀಯರನ್ನು ತೊಂದರೆಗೆ ಸಿಲುಕಿಸಿದೆ ಮತ್ತು ಕೃಷಿ ಪ್ರದೇಶಗಳಲ್ಲಿ ಹುಲಿಗಳಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
- ನಾವು ಪಾರಿಸರಿಕ ಮತ್ತು ಸಾಮಾಜಿಕ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳದೆ ಬಂಡೀಪುರ–ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸುವ ಕಾರ್ಯ ವಿಧಾನ ಗಳನ್ನು ಅಳವಡಿಸಿಕೊಂಡಿದ್ದೇವೆ. ಸಾಮಾಜಿಕ ಮಾಧ್ಯಮಗಳ ಒತ್ತಡಕ್ಕೆ ಮಣಿದು ಅವುಗಳಿಗೆ ಚಿಕಿತ್ಸೆ ನೀಡಿ, ಅವುಗಳ ನೈಸರ್ಗಿಕ ಮರಣ ಪ್ರಮಾಣಕ್ಕೆ ಅವಕಾಶ ಕೊಡದೆ ಸಂಖ್ಯೆಯನ್ನು ಅನೈಸರ್ಗಿಕವಾಗಿ ಹೆಚ್ಚಿಸುತ್ತಿದ್ದೇವೆ. ಸಾಕುಪ್ರಾಣಿಗಳು ಮತ್ತು ವನ್ಯಜೀವಿಗಳ ಬಗ್ಗೆ ಇರುವ ವ್ಯತ್ಯಾಸಗಳನ್ನು ಅರಿತುಕೊಳ್ಳದೆ, ಹುಲಿಗಳನ್ನು ಸಾಕುಪ್ರಾಣಿಗಳ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಿದ್ದೇವೆ.
- ಬಂಡೀಪುರದಲ್ಲಿ ಗಾಯಗೊಂಡು ಪತ್ತೆಯಾದ ಹೆಣ್ಣು ಹುಲಿಗೆ ನಾಲ್ಕು ಮರಿಗಳಿವೆ. ಈ ತಾಯಿ ಮತ್ತು ಮರಿಗಳು ಉಳಿಯುವುದು ಬಹು ಮುಖ್ಯವಾದರೂ, ಅವುಗಳು ನೈಸರ್ಗಿಕವಾಗಿ ಉಳಿಯಬೇಕೇ ಹೊರತು ಅವುಗಳನ್ನು ಕೃತಕವಾಗಿ ಬದುಕಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಹುಲಿಗಳ ಸಂಖ್ಯೆಯನ್ನು ಅಸಹಜವಾಗಿ ಹೆಚ್ಚಿಸಿದಂತಾಗುತ್ತದೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಹುಲಿಗಳು ಅಧಿಕವಾಗಿರುವ ಬಂಡೀಪುರ–ನಾಗರಹೊಳೆಯಂತಹ ಪ್ರದೇಶಗಳಲ್ಲಿ ವಾರ್ಷಿಕವಾಗಿ ಹುಲಿಗಳಲ್ಲಿ ಶೇ 25ರಷ್ಟು ನೈಸರ್ಗಿಕ ಮರಣ ಪ್ರಮಾಣವಿರುತ್ತದೆ. ಇದನ್ನು ತಡೆದರೆ, ಹುಲಿಗಳ ಸಂಖ್ಯೆ ಅವುಗಳಿಗಿರುವ ಆವಾಸಸ್ಥಾನಕ್ಕಿಂತ ಹೆಚ್ಚಾಗಿ ಜನವಸತಿ ಪ್ರದೇಶಗಳಿಗೆ ವಲಸೆ ಹೋಗಿ ತಮ್ಮ ವಸಾಹತು ಸ್ಥಾಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಇದು ಮಾನವ–ಹುಲಿ ಸಂಘರ್ಷದಂತಹ ಗಂಭೀರ ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.
- ಇನ್ನೊಂದು ಗಂಭೀರ ಸಮಸ್ಯೆ, ಹುಲಿಗಳ ಆವಾಸ ಸ್ಥಾನಗಳ ಅವೈಜ್ಞಾನಿಕ ನಿರ್ವಹಣೆ. ವರ್ಷಪೂರ್ತಿ ವನ್ಯಜೀವಿಗಳಿಗೆ ನೀರು ಸಿಗುವ ಹಾಗೆ ಮಾಡಲು ಹೊಸ ಕೆರೆಗಳ ನಿರ್ಮಾಣ, ಕೊಳವೆಬಾವಿಗಳನ್ನು ತೋಡುವುದು ಮಾಡುತ್ತಿದ್ದೇವೆ. ವರ್ಷಪೂರ್ತಿ ನೀರು ಸಿಗುವು ದರಿಂದ ಹುಲಿಗಳಿಗೆ ಅವಶ್ಯಕವಾದ ಸಾರಂಗ ಗಳಂತಹ ಪ್ರಾಣಿಗಳು ಅಸ್ವಾಭಾವಿಕವಾಗಿ ವೃದ್ಧಿಸುತ್ತದೆ. ಋತುಮಾನಕ್ಕೆ ಅನುಗುಣವಾಗಿ ನೀರಿದ್ದರೆ, ದೈಹಿಕವಾಗಿ ಸಮರ್ಥ ಪ್ರಾಣಿಗಳು ಮಾತ್ರ ಬದುಕಿ, ಇನ್ನುಳಿದವು ಅಸುನೀಗಿ ಅವುಗಳ ಸಂಖ್ಯೆಯನ್ನು ನಿಸರ್ಗ ಪಾರಿಸರಿಕ ಮಟ್ಟದಲ್ಲಿ ಕಾಯ್ದುಕೊಳ್ಳುತ್ತದೆ.
- ಸಾರಂಗಗಳ ಸಂಖ್ಯೆ ಹೆಚ್ಚಾದಾಗ ಹುಲಿಗಳ ಸಂಖ್ಯೆಯೂ ಹೆಚ್ಚುತ್ತದೆ. ಆದರೆ, ಅವುಗಳ ಆವಾಸಸ್ಥಾನದ ವ್ಯಾಪ್ತಿ ಹೆಚ್ಚಾಗುವುದಿಲ್ಲ. 5 ಜನರಿಗೆ ಸರಿಹೊಂದುವಂತೆ ಕಟ್ಟಿದ ಮನೆಯಲ್ಲಿ 15–20 ಜನರನ್ನು ತುರುಕಿದ ಹಾಗೆ ಆಗುತ್ತದೆ. ಇದರ ಪರಿಣಾಮವಾಗಿ ಹುಲಿಗಳು ಹೊಸ ವ್ಯಾಪ್ತಿಯನ್ನು ಹುಡುಕಿಕೊಂಡು, ತಾವು ಹುಟ್ಟಿರುವ ಪ್ರದೇಶವನ್ನು ಬಿಟ್ಟು ಕೃಷಿ ಪ್ರದೇಶಗಳಿಗೆ ಮತ್ತು ಚಿಕ್ಕಪುಟ್ಟ ಕಾಡುಗಳತ್ತ ವಲಸೆ ಹೋಗುವುದು ಪ್ರಾರಂಭವಾಗಿದೆ. ಹೀಗೆಯೇ ಮುಂದುವರಿದರೆ, ಈಗ ಮೈಸೂರು, ಮಡಿಕೇರಿ ತಲುಪಿರುವ ಹುಲಿಗಳು ಬೇರೆ ಬೇರೆ ಪ್ರದೇಶಗಳಿಗೆ ಹಬ್ಬುವ ಸಾಧ್ಯತೆಯಿದೆ. ವನ್ಯಜೀವಿ ಸಂರಕ್ಷಣಾ ದೃಷ್ಟಿಕೋನದಿಂದಷ್ಟೇ ನೋಡಿದರೆ ಇದು ಸಂಭ್ರಮಿಸುವ ವಿಚಾರವಾದರೂ, ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ, ಮತ್ತು ಅದನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಅಧಿಕವಾಗುತ್ತಿರುವ ಹುಲಿಗಳನ್ನು ಸೂಕ್ತವಲ್ಲದ ಪ್ರದೇಶಗಳಲ್ಲಿ ತುರುಕಲು ಪ್ರಯತ್ನಿಸುವುದು ಪಾರಿಸರಿಕ ದೃಷ್ಟಿಕೋನದಿಂದಾಗಲೀ ಅಥವಾ ಸಾಮಾಜಿಕ ದೃಷ್ಟಿಕೋನದಿಂದಾಗಲೀ ಸರಿಯಲ್ಲ. ಈ ತರಹದ ಪ್ರದೇಶಗಳಲ್ಲಿ ಹುಲಿಗಳ ಇರುವಿಕೆಯಿಂದ ಹುಲಿಗಳಿಗೆ ಕೂಡ ತೊಂದರೆಯೇ. ಸಂಘರ್ಷ ಹೆಚ್ಚಾದಂತೆ ಹುಲಿಗಳ ಬಗ್ಗೆ ಸಮಾಜಕ್ಕಿದ್ದ ತಾಳಿಕೆಯ ಸೌಹಾರ್ದ ಕಡಿಮೆಯಾಗಿ, ಅದರ ವಿರುದ್ದದ ಮನಃಸ್ಥಿತಿ ಮತ್ತು ನಡವಳಿಕೆ ಹೆಚ್ಚುತ್ತದೆ.
- ಬೊಮ್ಮಲಾಪುರದ ಗ್ರಾಮಸ್ಥರು ತೆಗೆದುಕೊಂಡ ನಿಲುವು ಬಹುಶಃ ಹಲವು ವರ್ಷಗಳಿಂದ ಮಾನವ–ವನ್ಯಜೀವಿ ಸಂಘರ್ಷದ ಬಗ್ಗೆ ಅಂತರಂಗದೊಳಗೆ ಹುದುಗಿದ್ದ ಅಸಹಾಯಕ ಮನೋವೃತ್ತಿಯನ್ನು ತೋರಿಸುತ್ತಿರಬಹುದು. ಈಗಲಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ತರುವ ಒತ್ತಡಕ್ಕೆ ಮಣಿಯದೆ, ವನ್ಯಜೀವಿಯ ಆವಾಸಸ್ಥಾನಗಳ ಅವೈಜ್ಞಾನಿಕ ನಿರ್ವಹಣೆಯನ್ನು ತಪ್ಪಿಸಬೇಕಾಗಿದೆ. ಬಹು ಮುಖ್ಯವಾಗಿ, ಆರ್ಥಿಕ ಕಾರಣಗಳಿಗೆ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನಿಲ್ಲಿಸದಿದ್ದರೆ ಹುಲಿಗಳಿಗಾಗಲೀ ಸಮಾಜಕ್ಕಾಗಲೀ ಒಳಿತಾಗದು.
- ಈಗಿನ ಸಂಘರ್ಷದ ಪರಿಸ್ಥಿತಿಗೆ ವನ್ಯಜೀವಿ ಆವಾಸ ಗಳ ಅವೈಜ್ಞಾನಿಕ ನಿರ್ವಹಣೆಯೂ ಕಾರಣ. ಈ ಧೋರಣೆ ಬದಲಾಯಿಸಿಕೊಂಡರೆ, ಮುಂಬರುವ ದಿನಗಳಲ್ಲಿ ಸಂಘರ್ಷಕ್ಕೊಳಗಾಗುವ ವನ್ಯಜೀವಿಗಳ ಸಂಖ್ಯೆಯಲ್ಲಿ ಸಮತೋಲನ ಕಾಣಬಹುದು. ಇದರಿಂದ ಇಲವಾಲ, ಬೊಮ್ಮಲಾಪುರ, ಇನ್ನಿತರ ಪ್ರದೇಶಗಳಿಗೆ ಹುಲಿಗಳು ಹೋಗುವುದು ಕಡಿಮೆಯಾಗಿ ಸಂಘರ್ಷ ತಗ್ಗುವ ದಿನಗಳನ್ನು ಕಾಣಬಹುದು. ಇಲ್ಲವಾದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುವುದು, ಅದರ, ಮತ್ತು ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯ ಜನರ ಆಕ್ರೋಶ ಇನ್ನೂ ಹೆಚ್ಚಲಿದೆ.
ಪಟ್ಟಿಯಲ್ಲಿಲ್ಲ ಹಲವು ಪ್ರಸಿದ್ಧ ತಾಣಗಳು: 1,275 ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಸಂಖ್ಯೆ

ಟೈಫನ್ ಕ್ಷಿಪಣಿ ಹಿಂತೆಗೆದುಕೊಳ್ಳಲು ಚೀನಾ ಆಗ್ರಹ
ಸಂದರ್ಭ: ಜಪಾನ್‌ನಲ್ಲಿ ನಿಯೋಜಿಸಿರುವ ಮಧ್ಯಮ ಶ್ರೇಣಿಯ ಟೈಫನ್ ಕ್ಷಿಪಣಿಯನ್ನು ಹಿಂತೆಗೆದುಕೊಳ್ಳುವಂತೆ ಅಮೆರಿಕವನ್ನು ಚೀನಾ ಒತ್ತಾಯಿಸಿದೆ.
- ‘ಟೈಫನ್ ಕ್ಷಿಪಣಿಯು ಪ್ರಾದೇಶಿಕ ಕಾರ್ಯತಂತ್ರದ ಭದ್ರತೆಗೆ ಕಾಯಂ ಬೆದರಿಕೆಯಾಗಿದೆ. ಜಂಟಿ ಸಮರಾ ಭ್ಯಾಸದ ನೆಪದಲ್ಲಿ ಅಮೆರಿಕವು ಜಪಾನ್‌ನಲ್ಲಿ ಈ ಕ್ಷಿಪಣಿಯನ್ನು ನಿಯೋಜಿಸಿದೆ. ಇದನ್ನು ಹಿಂತೆಗೆದು ಕೊಳ್ಳಬೇಕು’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ ಲಿನ್ ಜಿಯಾನ್ ಒತ್ತಾಯಿಸಿದ್ದಾರೆ.
- ಈ ಮೊದಲು ಫಿಲಿಪ್ಪೀನ್ಸ್‌ನಲ್ಲಿ ‘ಟೈಫನ್’ ಕ್ಷಿಪಣಿ ನಿಯೋಜನೆಗೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ, ಫಿಲಿಪ್ಪೀನ್ಸ್ ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ಖರೀದಿಸಿತ್ತು.
‘ಮಾತುಕತೆ ಸಕಾರಾತ್ಮಕ’:ಹೆಚ್ಚುವರಿ ತೆರಿಗೆ ರದ್ದುಪಡಿಸಲು ಅಮೆರಿಕಕ್ಕೆ ಭಾರತ ಒತ್ತಾಯ
ಸಂದರ್ಭ: ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿಚಾರವಾಗಿ ಅಮೆರಿಕದ ನಿಯೋಗದ ಜೊತೆಗಿನ ಮಾತುಕತೆಯು ಸಕಾರಾತ್ಮಕವಾಗಿ ಇತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.
- ಇಬ್ಬರಿಗೂ ಅನುಕೂಲ ಆಗುವ ಒಪ್ಪಂದವೊಂದಕ್ಕೆ ಆದಷ್ಟು ಬೇಗ ಅಂತಿಮ ರೂಪ ನೀಡಲು ಎರಡೂ ದೇಶಗಳು ಒಪ್ಪಿವೆ ಎಂದು ಕೂಡ ಸಚಿವಾಲಯವು ಹೇಳಿದೆ.
- ‘ಎರಡೂ ಕಡೆಯವರಿಗೆ ಪ್ರಯೋಜನಕಾರಿ ಆಗುವಂತಹ ವ್ಯಾಪಾರ ಒಪ್ಪಂದವನ್ನು ಬೇಗನೆ ಸಾಧ್ಯವಾಗಿಸುವ ಪ್ರಯತ್ನಕ್ಕೆ ಇನ್ನಷ್ಟು ಚುರುಕು ನೀಡಲು ತೀರ್ಮಾನಿಸಲಾಗಿದೆ’ ಎಂದು ಸಚಿವಾಲಯವು ಹೇಳಿದೆ. ಎರಡೂ ದೇಶಗಳ ಪ್ರತಿನಿಧಿಗಳ ನಡುವೆ ಮಂಗಳವಾರ ಇಡೀ ದಿನ ಮಾತುಕತೆ ನಡೆದಿದೆ.
- ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಮುಖ್ಯ ಸಂಧಾನಕಾರ ಬ್ರೆಂಡನ್ ಲಿಂಚ್ ಅವರ ಜೊತೆ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತಾದ ಮಾತುಕತೆಗಳು ಸಕಾರಾತ್ಮಕವಾಗಿದ್ದವು ಎಂದು ಸಚಿವಾಲಯವು ಹೇಳಿದೆ.
- ಲಿಂಚ್ ಅವರು ನವದೆಹಲಿಗೆ ಬಂದಿದ್ದಾರೆ. ಮಾತುಕತೆ ವೇಳೆ ಭಾರತದ ಪ್ರತಿನಿಧಿಗಳ ನೇತೃತ್ವವನ್ನು ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ವಹಿಸಿದ್ದರು.
- ಎರಡೂ ದೇಶಗಳು ವರ್ಚುವಲ್ ವೇದಿಕೆಯ ಮೂಲಕ ಮಾತುಕತೆ ಮುಂದುವರಿಸಲಿವೆ. ಅಲ್ಲದೆ, ಮುಂದಿನ ಭೌತಿಕ ಸಭೆಗೆ ಸೂಕ್ತ ದಿನಾಂಕ ಯಾವುದು ಎಂಬುದನ್ನು ಕೂಡ ನಿರ್ಧರಿಸಲಿವೆ ಎಂದು ಮೂಲವೊಂದು ತಿಳಿಸಿದೆ.
- ಅಮೆರಿಕವು ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸಿದೆ. ಪ್ರತಿಸುಂಕದ ರೂಪದಲ್ಲಿ ಶೇ 25ರಷ್ಟು ತೆರಿಗೆ ಹಾಗೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಶೇ 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ. ಈ ತೆರಿಗೆ ಕ್ರಮಗಳು ಜಾರಿಗೆ ಬಂದ ನಂತರದಲ್ಲಿ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ವ್ಯಾಪಾರ ಒಪ್ಪಂದದ ಮಾತುಕತೆಗೆ ಭಾರತಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಶೇ 50ರಷ್ಟು ತೆರಿಗೆ ವಿಧಿಸುವ ಕ್ರಮವನ್ನು ಭಾರತವು ‘ಅನ್ಯಾಯ’ ಎಂದು ಹೇಳಿದೆ.
- ಮಾತುಕತೆ ಮುಂದುವರಿಯಬೇಕು ಎಂದಾದರೆ ಭಾರತದ ಮೇಲೆ ಹೇರಿರುವ ಹೆಚ್ಚುವರಿ ಶೇ 25ರಷ್ಟು ಸುಂಕವನ್ನು ರದ್ದುಪಡಿಸಬೇಕು ಎಂದು ಭಾರತದ ಅಧಿಕಾರಿಗಳು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.
- ‘ಮಾತುಕತೆಯಲ್ಲಿ ಪ್ರಗತಿಯು, ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದ ಶೇ 25ರಷ್ಟು ತೆರಿಗೆಯನ್ನು ಅಮೆರಿಕವು ಹಿಂಪಡೆಯುವುದನ್ನು ಅವಲಂಬಿಸಿದೆ. ಅದು ಸಾಧ್ಯವಾಗದೆ ಇದ್ದರೆ ರಾಜಕೀಯವಾಗಿ ಅಥವಾ ಆರ್ಥಿಕ ದೃಷ್ಟಿಯಿಂದ ಯಾವುದೇ ಮಹತ್ವದ ತಿರುವು ಲಭಿಸುವುದಿಲ್ಲ’ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್‌ನ (ಜಿಟಿಆರ್‌ಐ) ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
ಜಿಎಸ್‌ಟಿ ಇಳಿಕೆ ಕುರಿತು ಮಾಹಿತಿ ನೀಡಲು ಸೂಚನೆ
ಸಂದರ್ಭ: ಭೌತಿಕ ಮಳಿಗೆಗಳ ಮೂಲಕ ರಿಟೇಲ್ ಮಾರಾಟದಲ್ಲಿ ತೊಡಗಿರುವವರು ಜಿಎಸ್‌ಟಿ ದರ ಇಳಿಕೆಯಿಂದಾಗಿ ಉತ್ಪನ್ನಗಳ ಬೆಲೆಯಲ್ಲಿ ಆಗುವ ಇಳಿಕೆಯನ್ನು ಗ್ರಾಹಕರಿಗೆ ಗೊತ್ತಾಗುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸೂಚಿಸಿದೆ.
- ರಿಟೇಲ್ ವಹಿವಾಟಿನಲ್ಲಿ ತೊಡಗಿರುವವರ ಸಂಘಕ್ಕೆ ಸೂಚನೆಯೊಂದನ್ನು ರವಾನಿಸಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು (ಡಿಪಿಐಐಟಿ), ರಿಟೇಲ್ ವಹಿವಾಟಿನಲ್ಲಿ ತೊಡಗಿರುವವರು ಜಿಎಸ್‌ಟಿಯಲ್ಲಿ ಆಗಿರುವ ಇಳಿಕೆಯನ್ನು ರಸೀದಿಯಲ್ಲಿ ‘ಜಿಎಸ್‌ಟಿ ರಿಯಾಯಿತಿ’ ಎಂಬುದಾಗಿ ನಮೂದಿಸಬೇಕು ಎಂದು ಹೇಳಿದೆ.
- ‘ಜಿಎಸ್‌ಟಿಯಿಂದಾಗಿನ ರಿಯಾಯಿತಿಯನ್ನು ಪ್ರಮುಖವಾಗಿ ತೋರಿಸಬೇಕು. ಉದಾಹರಣೆಗೆ, ಪೋಸ್ಟರ್‌ಗಳು, ಫ್ಲೈಯರ್‌ಗಳು ಹಾಗೂ ಜಾಹೀರಾತುಗಳ ಮೂಲಕ (ಟಿ.ವಿ., ಮುದ್ರಣ ಮತ್ತು ಆನ್‌ಲೈನ್ ಮಾಧ್ಯಮ) ತಿಳಿಸಬೇಕು’ ಎಂದು ಅದು ಸೂಚಿಸಿದೆ.
‘ಜಿಎಸ್ಟಿ ಇಳಿಕೆ ಲಾಭ ಗ್ರಾಹಕರಿಗೆ’
- ಜಿಎಸ್‌ಟಿ ದರದಲ್ಲಿನ ಪರಿಷ್ಕರಣೆಯ ಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮದರ್ ಡೈರಿ ಮಂಗಳವಾರ ಹೇಳಿದೆ. ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು, ಸಂಸ್ಕರಿತ ಆಹಾರ ಸೇರಿದಂತೆ ತನ್ನ ಬಹುತೇಕ ಉತ್ಪನ್ನಗಳ ಬೆಲೆಯು ಸೆಪ್ಟೆಂಬರ್ 22ರಿಂದ ಕಡಿಮೆ ಆಗಲಿದೆ ಎಂದು ಅದು ಹೇಳಿದೆ.
- ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಂಗಸಂಸ್ಥೆ ಮದರ್ ಡೈರಿ. 200 ಗ್ರಾಂ ಪನೀರ್ ಬೆಲೆಯು ₹95 ಇರುವುದು ₹92ಕ್ಕೆ, 1 ಲೀಟರ್ ತುಪ್ಪದ ಬೆಲೆಯು ₹675 ಇರುವುದು ₹645ಕ್ಕೆ 100 ಗ್ರಾಂ ಬೆಣ್ಣೆಯ ಬೆಲೆಯು ₹62 ಇರುವುದು ₹58ಕ್ಕೆ ಇಳಿಕೆ ಕಾಣಲಿದೆ ಎಂದು ಹೇಳಿದೆ.
ಸತತ ನಾಲ್ಕನೇ ಸಲ ಚಿನ್ನ ಗೆದ್ದ ಕಿಪ್ಯೆಗಾನ್
ಸಂದರ್ಭ: ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್: 1500 ಮೀ. ಓಟದಲ್ಲಿ ಕೆನ್ಯಾ ಅಥ್ಲೀಟ್ ದಾಖಲೆ
- ಫೇತ್ ಕಿಪ್ಯೆಗಾನ್ ಎಂದಿನಂತೆ ಕೊನೆಯ ಲ್ಯಾಪ್‌ನಲ್ಲಿ ಅತ್ಯಮೋಘ ವೇಗ ಸಾಧಿಸಿ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ 1500 ಮೀ. ಓಟದಲ್ಲಿ ಅಭೂತಪೂರ್ವ ನಾಲ್ಕನೇ ಸಲ ಚಿನ್ನ ಗೆದ್ದುಕೊಂಡರು.
- ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ ಕಿಪ್ಯೆಗಾನ್ ಮಂಗಳವಾರ 3ನಿ.52.15 ಸೆ.ಗಳಲ್ಲಿ ಓಟವನ್ನು ಪೂರೈಸಿ ಸಂಭ್ರಮಿಸಿದರು. ಆ ಹಾದಿಯಲ್ಲಿ ವಿಶ್ವದ ಅತಿ ಶ್ರೇಷ್ಠ ಮಧ್ಯಮ ದೂರದ ಓಟಗಾರ್ತಿ ಎಂಬ ಹಿರಿಮೆಗೂ ಪಾತ್ರರಾದರು.
- ಇದೇ ದೇಶದ ದೋರ್ಕಸ್ ಇವೊಯಿ 3ನಿ.54.02 ಸೆ.ಗಳಲ್ಲಿ ಗುರಿತಲುಪಿ ಬೆಳ್ಳಿ ಗೆದ್ದರೆ, ಆಸ್ಟ್ರೇಲಿಯಾದ ಜೆಸಿಕಾ ಹಲ್ (3:55.16) ಕಂಚಿನ ಪದಕ ತಮ್ಮದಾಗಿಸಿಕೊಂಡರು.
- 31 ವರ್ಷ ವಯಸ್ಸಿನ ಕಿಪ್ಯೆಗಾನ್ ನಾಲ್ಕು ಪದಕಗಳನ್ನು ಪಡೆಯುವ ಮೂಲಕ, ಪುರುಷರ ವಿಭಾಗದಲ್ಲಿ ಮೊರಾಕೊದ ಹಿಶಮ್ ಎಲ್ ಗೆರೂಝ್ ಅವರು 1997–2003ರ ಅವಧಿಯಲ್ಲಿ ಗೆದ್ದ ಪದಕಗಳ ಸಾಧನೆ ಸರಿಗಟ್ಟಿದರು.
- ಕಾರ್ಡೆಲ್‌ಗೆ ಚಿನ್ನ: ಈ ಋತುವಿನಲ್ಲಿ ಉತ್ತಮ ಲಯದಲ್ಲಿರುವ ಅಮೆರಿಕದ ಕಾರ್ಡೆಲ್ ಟಿಂಚ್ ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದರು. ಜಮೈಕಾದ ಇಬ್ಬರು ಓಟಗಾರರ ಪೈಪೋಟಿ ಎದುರಿಸಿದ ಅವರು 12.99 ಸೆ.ಗಳಲ್ಲಿ ದೂರ ಕ್ರಮಿಸಿ ಮೊದಲಿಗರಾದರು.
- ಒರ್ಲಾಂಡೊ ಬೆನೆಟ್ (13.08 ಸೆ) ಮತ್ತು ಟೈಲರ್ ಮ್ಯಾಸನ್ (13.12 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
- ನಾಲ್ಕನೇ ಬಾರಿ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದ ಅಮೆರಿಕದ ಗ್ರಾಂಟ್ ಹೊಲೊವೆ ವರ ಕನಸು ನುಚ್ಚುನೂರಾಯಿತು.
- ಒಲಿಂಪಿಕ್ ಚಾಂಪಿಯನ್ ಸಹ ಆಗಿರುವ 27 ವರ್ಷ ವಯಸ್ಸಿನ ಗ್ರಾಂಟ್ ಸೆಮಿಫೈನಲ್‌ನಲ್ಲಿ ಆರನೇ ಸ್ಥಾನಕ್ಕೆ ಸರಿದು ನಿರಾಶರಾದರು.
ಮಹಿಳೆಯರ 400 ಮೀ. ಓಟ: ಮೆಕ್‌ಲಾಗ್ಲಿನ್ ವಿಶ್ವದಾಖಲೆ
ಸಂದರ್ಭ: ಅಮೆರಿಕದ ಮೆಕ್‌ಲಾಗ್ಲಿನ್–ಲೆವ್ರೋನ್ ಅವರು ಮಂಗಳವಾರ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಓಟದಲ್ಲಿ ನೂತನ ವಿಶ್ವದಾಖಲೆ ಬರೆದರು.
- 400 ಮೀ. ಹರ್ಡಲ್ಸ್‌ನಲ್ಲಿ ವಿಶ್ವದಾಖಲೆ ಹೊಂದಿರುವ 26 ವರ್ಷ ವಯಸ್ಸಿನ ಮೆಕ್‌ಲಾಗ್ಲಿನ್ ಟೋಕಿಯೊದಲ್ಲಿ ಹರ್ಡಲ್ಸ್ ಬದಲು ಬರೇ 400 ಮೀ. ಓಟದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು. ಅವರು 48.29 ಸೆ.ಗಳಲ್ಲಿ ಗುರಿತಲುಪಿದರು. ಇದರಿಂದಾಗಿ 2006ರಷ್ಟು ಹಿಂದೆ ಸಾನ್ಯಾ ರಿಚರ್ಡ್ಸ್–ರಾಸ್ ಹೆಸರಿನಲ್ಲಿದ್ದ ಹಳೆಯ ದಾಖಲೆ (48.70 ಸೆ.) ಭಗ್ನಗೊಂಡಿತು.
- ಮೆಕ್‌ಲಾಗ್ಲಿನ್ ಅವರು ಫೈನಲ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಅಥ್ಲೀಟ್ ಆಗಿದ್ದಾರೆ.
ಅಗ್ರಸ್ಥಾನಕ್ಕೆ ಮರಳಿದ ಮಂದಾನ
ಸಂದರ್ಭ: ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ ಸ್ಮೃತಿ ಮಂದಾನ ಅವರು ಪ್ರಕಟವಾದ ಮಹಿಳಾ ಐಸಿಸಿ ಏಕದಿನ ರ‍್ಯಾಂಕಿಂಗ್‌ನ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.
- ಸೆ. 30ರಂದು ಆರಂಭವಾಗುವ ಮಹಿಳಾ ಏಕದಿನ ವಿಶ್ವಕಪ್‌ಗೆ ಮೊದಲು ಅಗ್ರಸ್ಥಾನ ಪಡೆದಿರುವುದು ಮಂದಾನ ಅವರ ವಿಶ್ವಾಸ ಹೆಚ್ಚಿಸಲಿದೆ. 2019ರಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದ ಅವರು, ಈ ವರ್ಷ ಎರಡು ಸಲ ಅಲ್ಪಾ ವಧಿಗೆ ಈ ಸ್ಥಾನ ಉಳಿಸಿಕೊಂಡಿದ್ದರು.
- ಮಂದಾನ 735 ರೇಟಿಂಗ್ ಪಾಯಿಂಟ್ ಪಡೆದಿದ್ದರೆ, ಇಂಗ್ಲೆಂಡ್‌ನ ನಾಟ್ ಶಿವರ್–ಬ್ರಂಟ್ 731 ಪಾಯಿಂಟ್ಸ್ ಹೊಂದಿದ್ದಾರೆ.
- ಭಾರತ ತಂಡದ ಆರಂಭ ಆಟಗಾರ್ತಿ ಪ್ರತಿಕಾ ರಾವಲ್ ನಾಲ್ಕು ಸ್ಥಾನ ಬಡ್ತಿ ಪಡೆದು 42ನೇ ಸ್ಥಾನದಲ್ಲಿದ್ದಾರೆ.
- ಮುಲ್ಲನಪುರ ಪಂದ್ಯದಲ್ಲಿ ಅಜೇಯ 77 ರನ್ ಹೊಡೆದಿದ್ದ ಆಸ್ಟ್ರೇಲಿಯಾದ ಎಡಗೈ ಆಟಗಾರ್ತಿ ಬೆತ್ ಮೂನಿ ಮೂರು ಸ್ಥಾನ ಬಡ್ತಿ ಪಡೆದು ಐದನೇ ಸ್ಥಾನಕ್ಕೇರಿದ್ದಾರೆ.
- ಭಾರತದ ಸ್ಪಿನ್ನರ್ ಸ್ನೇಹ ರಾಣಾ ಐದು ಸ್ಥಾನ ಬಡ್ತಿ ಪಡೆದು 13ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.