ವೆಂಕಟೇಶ್ ಕುಮಾರ್‌ಗೆ ‘ಸಂಗೀತ ವಿದ್ವಾನ್’ ಗರಿ
ಸಂದರ್ಭ: ಮೈಸೂರು ದಸರಾ ಸಂದರ್ಭದಲ್ಲಿ ನೀಡುವ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
- ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಸಂಗೀತ ಸಾಧಕರಿಗೆ ರಾಜ್ಯ ಸರ್ಕಾರ ನೀಡುವ 2025ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
- ಪ್ರಶಸ್ತಿಯು ₹ 5 ಲಕ್ಷ ನಗದು, ಸರಸ್ವತಿ ವಿಗ್ರಹ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
- ವೈ.ಕೆ. ಮುದ್ದುಕೃಷ್ಣ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಮೈಸೂರು ಅರಮನೆಯ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
- ‘ಅದ್ಭುತ ಗಾಯನದ ಮೂಲಕ ವೆಂಕಟೇಶ್ ಕುಮಾರ್ ಅವರು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರ ಸಾಧನೆ ಪರಿಗಣಿಸಿ ಈ ಆಯ್ಕೆ ಮಾಡಲಾಗಿದ’.
ಎಚ್–1ಬಿ ವೀಸಾ ಶುಲ್ಕ 1 ಲಕ್ಷ ಡಾಲರ್‌ಗೆ ಹೆಚ್ಚಳ
ಸಂದರ್ಭ: ವಿವಿಧ ದೇಶಗಳ ಜನರನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಕಂಪನಿ ಗಳು ತಮ್ಮ ಉದ್ಯೋಗಿಗಳಿಗಾಗಿ ಪಡೆಯುವ ಎಚ್–1ಬಿ ವೀಸಾ ಅರ್ಜಿಗೆ ಸಂಬಂಧಿಸಿದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
- ಚಾಲ್ತಿಯಲ್ಲಿ ಇರುವವರಿಗೆ ಅನ್ವಯಿಸದು: ‘ಪರಿಷ್ಕೃತ ನಿಯಮವು ಮಾನ್ಯತೆ ಹೊಂದಿದ ಎಚ್–1ಬಿ ವೀಸಾ ಹೊಂದಿರುವವರಿಗೆ ಅನ್ವಯ ಆಗುವುದಿಲ್ಲ. ಹೊಸ ಶುಲ್ಕವು ಈಗಾಗಲೇ ಎಚ್–1ಬಿ ವೀಸಾ ಹೊಂದಿರುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ. ‘ಅಮೆರಿಕಕ್ಕೆ ಮರಳಲು ಯಾವುದೇ ಸಮಸ್ಯೆಯಿಲ್ಲ. ವೀಸಾ ನವೀಕರಿಸುವವರಿಗೂ ಯಾವುದೇ ತೊಂದರೆಯಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
- ‘ಮುಂದಿನ ದಿನಗಳಲ್ಲಿ ಲಾಟರಿ ಮೂಲಕ ಆಯ್ಕೆಯಾಗುವ ಎಚ್–1ಬಿ ವೀಸಾ ಅರ್ಜಿದಾರರಿಗೆ ಮಾತ್ರ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ’ ಎಂದು ಸ್ಪಷ್ಟಪಡಿಸಿದೆ.
- ‘ಇತರ ದೇಶಗಳಿಂದ ಅಮೆರಿಕಕ್ಕೆ ಬರುವ ಜನರು ಅಧಿಕ ಕೌಶಲ ಉಳ್ಳವರಾಗಿರಬೇಕು ಹಾಗೂ ಈ ವೀಸಾ ಪಡೆದು ಬರುವವರಿಂದಾಗಿ ಸ್ಥಳೀಯರು ತಮ್ಮ ಉದ್ಯೋಗ ಕಳೆದುಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಟ್ರಂಪ್ ಆಡಳಿತ ಹೇಳಿದೆ.
- ಟ್ರಂಪ್ ಅವರ ಈ ನಡೆಯು, ಉದ್ಯೋಗ ವೀಸಾ ಪಡೆದು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರು, ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮೇಲೆ ಭಾರಿ ಪರಿಣಾಮ ಬೀರಲಿದೆ.
- ‘ಎಚ್–1ಬಿ ವೀಸಾ ಸೌಲಭ್ಯದ ಪ್ರಯೋಜನ ಪಡೆಯಲು ಬಯಸುವ ಕಂಪನಿಗಳ ಮೇಲೆ ಅಧಿಕ ವೆಚ್ಚ ಹೇರು ವುದು ಅಗತ್ಯವಾಗಿದೆ. ಈ ಮೂಲಕ, ಅವುಗಳು ಈ ವೀಸಾ ಸೌಲಭ್ಯ ದುರ್ಬಳಕೆ ಮಾಡದಂತೆ ತಡಯಬಹುದಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.
‘ಭಾರತದ ಕಂಪನಿಗಳ ಮೇಲೆ ಪರಿಣಾಮ’
- ಅಮೆರಿಕದ ಎಚ್–1ಬಿ ವೀಸಾ ಅರ್ಜಿ ಶುಲ್ಕ ₹88.09 ಲಕ್ಷ ತಂತ್ರಜ್ಞಾನ ಸೇವಾ ಕಂಪನಿಗಳಿಗೆ ತೊಂದರೆ: ನಾಸ್ಕಾಂ
- ಎಚ್–1ಬಿ ವೀಸಾ ಅರ್ಜಿಗಳಿಗೆ ವಿಧಿಸುವ ಶುಲ್ಕವನ್ನು 1 ಲಕ್ಷ ಅಮೆರಿಕನ್ ಡಾಲರ್‌ಗೆ (ಅಂದಾಜು ₹88.09 ಲಕ್ಷ) ನಿಗದಿಪಡಿಸುವ ಅಮೆರಿಕ ಸರ್ಕಾರದ ತೀರ್ಮಾನವು ಭಾರತದ ತಂತ್ರಜ್ಞಾನ ಸೇವಾ ಕಂಪನಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನಾಸ್ಕಾಂ ಅಂದಾಜು ಮಾಡಿದೆ.
- ಅಮೆರಿಕದಲ್ಲಿಯೇ ಉಳಿದು ಮಾಡಬೇಕಾದ ಕೆಲಸಗಳ ಮೇಲೆ ಈ ತೀರ್ಮಾನದಿಂದಾಗಿ ಪರಿಣಾಮ ಉಂಟಾಗಲಿದೆ ಎಂದು ಐ.ಟಿ. ಸೇವಾ ಕಂಪನಿಗಳ ಸಂಘಟನೆಯಾದ ನಾಸ್ಕಾಂ ಹೇಳಿದೆ.
- ಅಮೆರಿಕದ ಎಚ್–1ಬಿ ವೀಸಾಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದು ಭಾರತದ ಟೆಕಿಗಳು. ಅಮೆರಿಕವು ಪ್ರತಿ ವರ್ಷ 6,50,000 ಎಚ್–1ಬಿ ವೀಸಾ ನೀಡುತ್ತದೆ. ಈ ಬಗೆಯ ವೀಸಾಗಳನ್ನು 2024–25ರಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡ ಕಂಪನಿಗಳ ಪಟ್ಟಿಯಲ್ಲಿ ಅಮೆಜಾನ್ ಮೊದಲ ಸ್ಥಾನದಲ್ಲಿದೆ (10,044).
ಅಮೆರಿಕಕ್ಕೆ ನಷ್ಟ, ಭಾರತಕ್ಕೆ ಲಾಭ: ಅಮಿತಾಭ್ ಕಾಂತ್
- ‘ಎಚ್–1ಬಿ ವೀಸಾ ಶುಲ್ಕ ಹೆಚ್ಚಳದ ನಿರ್ಧಾರವು ಅಮೆರಿಕದಲ್ಲಿ ಅನ್ವೇಷಣೆಗಳು ಉಸಿರುಗಟ್ಟುವಂತೆ ಮಾಡಲಿದೆ. ಆದರೆ, ಈ ನಿರ್ಧಾರವು ಭಾರತದ ಅಭಿವೃದ್ಧಿಗೆ ವೇಗ ನೀಡಲಿದೆ’ ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
- ವೀಸಾ ಶುಲ್ಕ ಹೆಚ್ಚಳವು, ಜಾಗತಿಕ ಪ್ರತಿಭೆಗಳಿಗೆ ಬಾಗಿಲು ಹಾಕುವ ಕೆಲಸ ಮಾಡಲಿದೆ. ಇದರಿಂದ ಅಮೆರಿಕದಲ್ಲಿ ಸ್ಥಾಪನೆಯಾಗಬೇಕಾದ ಪ್ರಯೋಗಾಲಯಗಳು, ಅಲ್ಲಿಗೆ ಸಿಗಬೇಕಾದ ಹಕ್ಕುಸ್ವಾಮ್ಯ, ಅಲ್ಲಿ ಆಗಬೇಕಾದ ಸಂಶೋಧನೆ ಮತ್ತು ಅಲ್ಲಿ ಸ್ಥಾಪನೆ ಆಗಬಹುದಾಗ ನವೋದ್ಯಮಗಳು ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಗುರುಗ್ರಾಮದಂತಹ ನಗರಗಳಿಗೆ ಹೋಗುವಂತೆ ಮಾಡಲಿದೆ ಎಂದು ಹೇಳಿದ್ದಾರೆ.
- ಇದರಿಂದಾಗಿ ಭಾರತದ ಅತ್ಯುತ್ತಮ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ನಾವೀನ್ಯಕಾರರು ವಿಕಸಿತ ಭಾರತದ ಗುರಿ ಮತ್ತು ಪ್ರಗತಿಗೆ ಕೊಡುಗೆ ನೀಡಲು ಅವಕಾಶ ಹೊಂದಲಿದ್ದಾರೆ. ಅಮೆರಿಕದ ಈ ನಿರ್ಧಾರವು ಭಾರತಕ್ಕೆ ಲಾಭ ಉಂಟುಮಾಡುತ್ತದೆ ಎಂದು ಅಮಿತಾಭ್ ಕಾಂತ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಎಂಎಸ್‌ಪಿ ಅಡಿ ಐದು ಧಾನ್ಯಗಳ ಖರೀದಿ
ಸಂದರ್ಭ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಐದು ಧಾನ್ಯಗಳ ಖರೀದಿಗೆ ಕೇಂದ್ರ ಕೃಷಿ ಸಚಿವಾಲಯ ಅನುಮತಿ ನೀಡಿದೆ.
- 2025-26ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ(ಶೇಂಗಾ), ಸೋಯಾಬಿನ್ ಮತ್ತು ಸೂರ್ಯಕಾಂತಿ ಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
- 38,000 ಟನ್ ಹೆಸರು ಕಾಳು, 60,810 ಟನ್ ಉದ್ದು, 15,650 ಟನ್ ಸೂರ್ಯಕಾಂತಿ, 61,148 ಟನ್ ಕಡಲೆಬೀಜ ಮತ್ತು 1,15,000 ಟನ್ ಸೋಯಾಬೀನ್ ಖರೀದಿಗೆ ಅನುಮತಿ ಸಿಕ್ಕಿದೆ.
- ಪ್ರಸಕ್ತ ಮುಂಗಾರಿನಲ್ಲಿ ರಾಜ್ಯದ ಕೃಷಿಕರು ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾನ್ಯಗಳನ್ನು ಖರೀದಿಸುವಂತೆ ಒತ್ತಾಯಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದರು.
- ಕರ್ನಾಟಕದ ರೈತರಿಗೆ ಕಲ್ಪಿಸಿರುವ ಈ ಬೆಂಬಲ ಬೆಲೆ ಯೋಜನೆಯ ನೆರವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಒದಗಿಸಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ
ಸಂದರ್ಭ: ಬೆಳಗಾವಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯ ಸದಸ್ಯ.
- ‘ಬೆಳಗಾವಿ ಬಾಲಾಜಿ ಟ್ರಸ್ಟ್ ಎಂಬ ಸಂಸ್ಥೆಯು ಸುವರ್ಣ ಸೌಧದ ಎದುರು ಏಳು ಎಕರೆ ಜಾಗವನ್ನು ಖರೀದಿಸಿದೆ. ಅಲ್ಲಿ ಅಂದಾಜು ₹100 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ’.
ಮೋಹನ್‌ಲಾಲ್‌ಗೆ ಫಾಲ್ಕೆ ಗರಿ
ಸಂದರ್ಭ: ಮಲಯಾಳ ಚಿತ್ರರಂಗದ ಹಿರಿಯ ನಟ ಮೋಹನ್‌ಲಾಲ್ ಅವರನ್ನು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
- ಸಿನಿಮಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಸಿನಿಮಾದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.
- 2023ನೇ ಸಾಲಿನ ಪ್ರಶಸ್ತಿಗೆ 65 ವರ್ಷದ ಮೋಹನ್‌ಲಾಲ್ ಅವರನ್ನು ಆಯ್ಕೆ ಮಾಡಿರುವ ವಿಷಯವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ‘ಎಕ್ಸ್’ನಲ್ಲಿ ಪ್ರಕಟಿಸಿದ್ದಾರೆ. ಸೆಪ್ಟೆಂಬರ್ 23ರಂದು ನಡೆಯಲಿರುವ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
- ಮೋಹನ್‌ಲಾಲ್ ಅವರಿಗೆ 2001ರಲ್ಲಿ ಪದ್ಮಶ್ರೀ ಮತ್ತು 2019ರಲ್ಲಿ ಪದ್ಮಭೂಷಣ ಪುರಸ್ಕಾರ ಲಭಿಸಿದ್ದವು.
- 350ಕ್ಕೂ ಹೆಚ್ಚು ಸಿನಿಮಾದಲ್ಲಿ ನಟನೆ ನಾಲ್ಕು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ಮೋಹನ್‌ಲಾಲ್ ಅವರು ಮಲಯಾಳ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ಮಾತ್ರ, ಇರುವರ್, ದೃಶ್ಯಂ, ವಾನಪ್ರಸ್ಥಂ, ಕಂಪನಿ, ಮುಂದಿರಿವಳ್ಳಿಗಳ್ ತಳಿರ್ಕುಂಬೋಳ್ ಮತ್ತು ಪುಲಿಮುರುಗನ್ ಅವರಿಗೆ ಹೆಸರು ತಂದುಕೊಟ್ಟ ಪ್ರಮುಖ ಚಿತ್ರಗಳಾಗಿವೆ.
ಬಹುಪತ್ನಿತ್ವ ಒಪ್ಪಲಾಗದು: ಹೈಕೋರ್ಟ್
ಸಂದರ್ಭ: ‘ಪತ್ನಿಯರನ್ನು ಸಲಹುವ ಸಾಮರ್ಥ್ಯ ಇಲ್ಲದಿದ್ದರೆ ಮುಸ್ಲಿಂ ಪುರುಷನೊಬ್ಬ ಒಂದಕ್ಕಿಂತ ಹೆಚ್ಚು ಮದುವೆಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
- ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್‌ಮಣ್ಣ ನಿವಾಸಿ 39 ವರ್ಷದ ಮಹಿಳೆಯೊಬ್ಬರು, ಭಿಕ್ಷಾಟನೆಯಿಂದ ಜೀವನ ನಿರ್ವಹಣೆ ಮಾಡುತ್ತಿರುವ ತನ್ನ ಪತಿಯಿಂದ ಪ್ರತಿ ತಿಂಗಳು ₹10 ಸಾವಿರ ಜೀವನಾಂಶ ಕೋರಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.
- ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್, ‘ಮುಸ್ಲಿಂ ಪುರುಷನೊಬ್ಬನಿಗೆ ತನ್ನ ಪತ್ನಿಯರನ್ನು ನೋಡಿಕೊಳ್ಳುವ ಆರ್ಥಿಕ ಸಾಮರ್ಥ್ಯ ಇಲ್ಲದಿದ್ದರೆ ಮತ್ತು ಆತನ ಪತ್ನಿಯರಲ್ಲಿ ಒಬ್ಬರು ಜೀವನಾಂಶಕ್ಕಾಗಿ ಕೋರ್ಟ್ ಮೊರೆ ಹೋಗುತ್ತಾರೆ ಎನ್ನುವುದಾದರೆ ಆತನ ಬಹುಪತ್ನಿತ್ವ ವನ್ನು ಒಪ್ಪಲು ಸಾಧ್ಯವಿಲ್ಲ’ ಎಂದಿದ್ದಾರೆ.
- ದೂರುದಾರ ಮಹಿಳೆ ಮೊದಲು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಅಲ್ಲಿ ಆಕೆಯ ಮನವಿಯನ್ನು ತಳ್ಳಿಹಾಕಿದಾಗ, ಹೈಕೋರ್ಟ್ ಮೆಟ್ಟಿಲೇರಿದ್ದರು. ‘ಪಾಲಕ್ಕಾಡ್‌ನ ಕುಂಬಡಿ ಗ್ರಾಮದ 44 ವರ್ಷದ ನನ್ನ ಪತಿಯು ಭಿಕ್ಷಾಟನೆಯಿಂದ ಜೀವಿಸುತ್ತಿದ್ದು, ತಿಂಗಳಿಗೆ ₹25 ಸಾವಿರ ಆದಾಯವಿದೆ. ಆದರೆ, ನನಗೆ ಜೀವನಾಂಶ ನೀಡುತ್ತಿಲ್ಲ’ ಎಂದು ದೂರಿದ್ದರು.
- ದೂರುದಾರ ಮಹಿಳೆಯ ವಾದ ಆಲಿಸಿದ ನ್ಯಾಯಮೂರ್ತಿ, ‘ಭಿಕ್ಷಾಪಾತ್ರೆಗೆ ಕೈ ಹಾಕಲು ಹೋಗಬೇಡಿ’ ಎನ್ನುವ ಮಲಯಾಳಂ ನುಡಿಗಟ್ಟು ಬಳಸಿದರು. ಈ ಪ್ರಕರಣದಲ್ಲಿ ‘ಪತ್ನಿಗೆ ಜೀವನಾಂಶ ನೀಡುವಂತೆ ಭಿಕ್ಷುಕನಿಗೆ ಕೋರ್ಟ್ ನಿರ್ದೇಶಿಸುವಂತಿಲ್ಲ. ಆದರೆ, ದೂರುದಾರ ಮಹಿಳೆಗೆ ಆಹಾರ, ಬಟ್ಟೆಗಳನ್ನು ಒದಗಿಸಲಾಗಿದೆಯೇ ಎನ್ನುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು’ ಎಂದರು.
- ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಆದೇಶದ ಪ್ರತಿಯನ್ನು ನೀಡುವಂತೆ ಸೂಚಿಸಿದ ಕೋರ್ಟ್, ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿತು.
‘ಏಕಪತ್ನಿತ್ವ: ಜಾಗೃತಿ ಮೂಡಿಸಬೇಕು’
- ಬಹುತೇಕ ಮುಸ್ಲಿಮರು ಏಕಪತ್ನಿತ್ವವನ್ನೇ ಅನುಸರಿ ಸುತ್ತಾರೆ. ಇದು ಕುರಾನ್‌ನ ನಿಜವಾದ ಆಶಯವನ್ನು ಪ್ರತಿಬಿಂಬಿ ಸುತ್ತದೆ. ಕೆಲವರಷ್ಟೇ ಬಹುಪತ್ನಿತ್ವ ಹೊಂದಿದ್ದಾರೆ. ಸಮುದಾಯ ಮತ್ತು ಧಾರ್ಮಿಕ ಮುಖಂಡರು ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.