- ಪರಿಷ್ಕೃತ ಜಿಎಸ್ಟಿ ಇಂದಿನಿಂದ
ಸಂದರ್ಭ: ನಿತ್ಯ ಬಳಕೆಯ ಉತ್ಪನ್ನಗಳು, ಆಹಾರ ಉತ್ಪನ್ನಗಳು, ವಾಹನಗಳು ಸೇರಿದಂತೆ ಸರಿಸುಮಾರು 375 ಉತ್ಪನ್ನಗಳ ಬೆಲೆಯು ಕಡಿಮೆ ಆಗಲಿವೆ.

- ವಿವಿಧ ಉತ್ಪನ್ನಗಳು ಹಾಗೂ ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಜಿಎಸ್‌ಟಿ ಮಂಡಳಿ ಪರಿಷ್ಕರಿಸಿದ್ದು, ಪರಿಷ್ಕೃತ ದರಗಳು ಜಾರಿಗೆ ಬರುತ್ತಿವೆ. ಇದರ ಪ್ರಯೋಜನ ವನ್ನು ಬಹುತೇಕ ಕಂಪನಿಗಳು ಗ್ರಾಹಕರಿಗೆ ವರ್ಗಾವಣೆ ಮಾಡಿವೆ.
- ಇಷ್ಟು ವರ್ಷ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ನಾಲ್ಕು ತೆರಿಗೆ ಹಂತಗಳು (ಶೇ 5, 12, 18 ಮತ್ತು 28) ಇದ್ದವು. ಆದರೆ ಇನ್ನು ಮುಂದೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಎರಡು ತೆರಿಗೆ ಹಂತಗಳು (ಶೇ 5 ಮತ್ತು 18) ಇರಲಿವೆ. ಐಷಾರಾಮಿ ಉತ್ಪನ್ನಗಳು ಹಾಗೂ ತಂಬಾಕಿನ ಉತ್ಪನ್ನಗಳಿಗೆ ಶೇ 40ರಷ್ಟು ತೆರಿಗೆ ಇರಲಿದೆ. ಈ ಬದಲಾವಣೆಗಳ ಪರಿಣಾಮವಾಗಿ ದೇಶದ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
- ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳನ್ನು (ಎಫ್‌ಎಂಸಿಜಿ) ತಯಾರಿಸುವ ಕಂಪನಿಗಳು ಪರಿಷ್ಕೃತ ದರವನ್ನು ಪ್ರಕಟಿಸಿವೆ. ಸೋಪು, ಶಾಂಪೂ, ಟೂತ್‌ಪೇಸ್ಟ್ ಸೇರಿದಂತೆ ತಮ್ಮ ಹತ್ತು ಹಲವು ಉತ್ಪನ್ನಗಳ ಮೇಲೆ ಹೊಸ ಎಂಆರ್‌ಪಿ ನಮೂದಿಸಿವೆ.
- ಕುರುಕಲು, ಕಾಫಿ ಮತ್ತು ಚಹಾ ಪುಡಿ, ಐಸ್‌ಕ್ರೀಂ, ಚಾಕೊಲೇಟ್ ಹಾಗೂ ಇತರ ಆಹಾರ ವಸ್ತುಗಳ ತಯಾರಿಕಾ ಕಂಪನಿಗಳು ಕೂಡ ತೆರಿಗೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಸಜ್ಜಾಗಿವೆ.
- ಈ ಕಂಪನಿಗಳು ಪರಿಷ್ಕೃತ ಎಂಆರ್‌ಪಿ ಇರುವ ಉತ್ಪನ್ನಗಳನ್ನು ವಿತರಕರಿಗೆ, ಇ–ವಾಣಿಜ್ಯ ಕಂಪನಿಗಳ ಗೋದಾಮುಗಳಿಗೆ, ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಿಗೆ ರವಾನಿಸಿರುವುದಾಗಿ ಹೇಳಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಉತ್ಪನ್ನಗಳ ಬೆಲೆಯನ್ನು ವಿಶೇಷವಾದ ರಿಯಾಯಿತಿಗಳ ಮೂಲಕ ಸರಿಹೊಂದಿಸಲಾಗಿದೆ ಎಂದು ಹೇಳಿವೆ.
- ಡಾಬರ್, ಐಟಿಸಿ, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್, ಇಮಾಮಿ, ನೆಸ್ಲೆ, ಆರ್‌ಸಿಪಿಎಲ್, ಅಮೂಲ್, ಎಚ್‌ಯುಎಲ್‌ನಂತಹ ಪ್ರಮುಖ ಕಂಪನಿಗಳು ಪರಿಷ್ಕೃತ ದರದ ಪಟ್ಟಿಯನ್ನು ತಮ್ಮ ವಿತರಕರಿಗೆ ರವಾನಿಸಿವೆ. ಅಲ್ಲದೆ, ತಮ್ಮ ವೆಬ್‌ಸೈಟ್‌ಗಳ ಮೂಲಕ ಹೊಸ ದರವನ್ನು ಗ್ರಾಹಕರಿಗೂ ತಿಳಿಸಿವೆ.
- ಕೆಐಒಸಿಎಲ್ ವಿರುದ್ಧ ಗ್ರಾಮಸಭೆ ನಿರ್ಣಯ
ಸಂದರ್ಭ: ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್) ಉದ್ದೇಶಿತ ದೇವದಾರಿ ಗಣಿಗೆ ಮತ್ತೊಂದು ಅಡ್ಡಿ ಎದುರಾಗಿದೆ. ಗಣಿಯ ವಿರುದ್ಧ ಸ್ಥಳೀಯ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
- ದೇವದಾರಿ ಗಣಿಗೆ ಸಂಬಂಧಿಸಿ ಕೆಐಒಸಿಎಲ್ ಮತ್ತು ಅರಣ್ಯ ಇಲಾಖೆ ನಡುವಿನ ನ್ಯಾಯಾಂಗ ಹೋರಾಟದಲ್ಲಿ ಕೋರ್ಟ್ ಕೆಐಒಸಿಎಲ್ ಪರ ಇತ್ತೀಚೆಗೆ ಆದೇಶ ನೀಡಿದೆ. ಈ ಮಧ್ಯೆ ಸಂಡೂರು ತಾಲ್ಲೂಕಿನ ನರಸಿಂಗಪುರ ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮ ಸಭೆ ಜರುಗಿತು.
- ಸಭೆಯಲ್ಲಿ ಕೆಐಒಸಿಎಲ್‌ಗೆ ವಿರೋಧ ವ್ಯಕ್ತವಾಗಿದೆ. ‘ಅರಣ್ಯ ಪ್ರದೇಶ, ಮಳೆ, ಪರಿಸರ ಹಿತದೃಷ್ಟಿಯಿಂದ ಕುದುರೆಮುಖ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಗ್ರಾಮಸ್ಥರು ತೀರ್ಮಾನಿಸಿದರು. ಕಂಪನಿಯು ಕೆಲ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಇದಕ್ಕೆ ಅನುಮತಿ ನೀಡಬೇಕು ಎಂದು ಗ್ರಾಮಸ್ಥರೊಬ್ಬರು ಸಭೆಯಲ್ಲಿ ತಿಳಿಸಿದರು. ಮುಂದಿನ ಕ್ರಮಕ್ಕಾಗಿ ಸಂಡೂರು ತಹಶೀಲ್ದಾರರಿಗೆ ಪತ್ರ ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದು ಗ್ರಾಮ ಪಂಚಾಯಿತಿ ನಿರ್ಣಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
- ನಿರ್ಣಯಕ್ಕೆ ಮಾನ್ಯತೆಯುಂಟೇ?: ಗ್ರಾಮ ಸಭೆಯ ನಿರ್ಣಯಗಳಿಗೆ ಮಾನ್ಯತೆ ಇರುತ್ತದೆ. ಆದರೆ, ಇದು ಮುಖ್ಯ ಖನಿಜಕ್ಕೆ (ಮೇಜರ್ ಮಿನರಲ್) ಸಂಬಂಧಿಸಿದ ವಿಷಯ. ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಮುಖ್ಯ ಖನಿಜಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ ಈ ವಿಷಯದಲ್ಲಿ ಗ್ರಾಮಸಭೆ ನಿರ್ಣಯಕ್ಕೆ ಮಾನ್ಯತೆ ಇಲ್ಲ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ವ್ಯಕ್ತವಾಗಿದೆ.
- ‘ಗ್ರಾಮ ಪಂಚಾಯಿತಿ ಎಂಬುದು ಸ್ಥಳೀಯ ಸರ್ಕಾರ. ನಮ್ಮ ನಿರ್ಧಾರಕ್ಕೆ ಮಾನ್ಯತೆ ಇದೆ. ಗಣಿ ಲಾರಿಗಳ ಓಡಾಟದಿಂದ ನಮ್ಮ ಗ್ರಾಮಗಳು ದೂಳಿನಲ್ಲಿ ಮುಳುಗಿವೆ. ನಾವೆಲ್ಲರೂ ಶಾಪಗ್ರಸ್ತರಾಗಿದ್ದೇವೆ. ಹೊಸ ಗಣಿ ಬರುವುದಕ್ಕೆ ನಮ್ಮ ವಿರೋಧವಿದೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ.
- ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಅರಣ್ಯದ 401.57 ಹೆಕ್ಟೇರ್ ಪ್ರದೇಶದಲ್ಲಿ ಕೆಐಒಸಿಎಲ್ ‘ದೇವದಾರಿ’ ಗಣಿಗಾರಿಕೆ ನಡೆಸಲು ಯೋಜನೆ ರೂಪಿಸಿದೆ. ಆದರೆ, ಅರಣ್ಯ ತೀರುವಳಿ ಪತ್ರ ಇನ್ನೂ ಸಿಕ್ಕಿಲ್ಲ. ಗಣಿಗೆ ಒಂದು ಲಕ್ಷ ಮರಗಳನ್ನು ಕಡಿಯುವ ಅಗತ್ಯವಿದೆ ಎಂದು ಈಗಾಗಲೇ ಅರಣ್ಯ ಇಲಾಖೆ ಹೇಳಿದ್ದು, ಜತೆಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದೆ.
- ಭಾರತ್ಜೆನ್ ಎ.ಐ ಮಾದರಿಗೆ ಹಣಕಾಸಿನ ನೆರವು: ವೈಷ್ಣವ್
ಸಂದರ್ಭ: ಕೇಂದ್ರ ಸರ್ಕಾರದ ಬೆಂಬಲವಿರುವ ಕೃತಕ ಬುದ್ಧಿಮತ್ತೆಯ (ಎ.ಐ) ಪ್ರಮುಖ ಯೋಜನೆ ‘ಭಾರತ್‌ಜೆನ್’ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ₹988.6 ಕೋಟಿ ಧನಸಹಾಯವನ್ನು ನೀಡಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
- ₹1,500 ಕೋಟಿ ಮೊತ್ತದ ‘ಇಂಡಿಯಾ ಎ.ಐ ಮಿಷನ್ 2025’ ಅಡಿಯಲ್ಲಿ ಭಾರತದ ಸರ್ಕಾರಿ ಎ.ಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಭಾರತ್‌ಜೆನ್‌ನ ವಹಿಸಬಹುದಾದ ಪಾತ್ರವನ್ನು ಈ ಧನಸಹಾಯವು ತೋರಿಸುತ್ತದೆ.
- ಶಕ್ತಿಯುತ ಎ.ಐ ಮಾದರಿಗಳನ್ನು ರಚಿಸಲು ಭಾರತ್‌ಜೆನ್‌ಗೆ ಈ ಧನಸಹಾಯವು ನೆರವು ನೀಡುತ್ತದೆ. ಇದು ಧ್ವನಿಯನ್ನು ಅಕ್ಷರಗಳಿಗೆ ಪರಿವರ್ತಿಸುವ, ಅಕ್ಷರಗಳನ್ನು ಓದಿಹೇಳುವ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
- ಆನಂದ ಸಂಕೇಶ್ವರಗೆ ‘ಸೌತ್ ಇಂಡಿಯಾ ಬ್ಯುಸಿನೆಸ್’ ಪ್ರಶಸ್ತಿ
ಸಂದರ್ಭ: ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ‘ಸೌತ್ ಇಂಡಿಯಾ ಬ್ಯುಸಿನೆಸ್ ಪ್ರಶಸ್ತಿ’ (ಎಸ್ಐಬಿಎ) ಸಂದಿದೆ.
- ದುಬೈನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿ ಯುಎಇ ರಾಯಭಾರಿ ಆಗಿದ್ದ ಅಹ್ಮದ್ ಅಬ್ದುಲ್ ರೆಹಮಾನ್ ಅಲ್ಬನ್ನಾ ಅವರು ಆನಂದ ಸಂಕೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ ಜಾಗತಿಕವಾಗಿ ಪ್ರಭಾವ ಬೀರಿರುವವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
- ವಿಆರ್ಎಲ್ ಸಂಸ್ಥೆಯನ್ನು ದೇಶದ ದೊಡ್ಡ ಸಾರಿಗೆ ಕಂಪನಿಯಾಗಿ, ಕಾರ್ಯಾ ಚರಣೆ ದಕ್ಷತೆಯಲ್ಲಿ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬೆಳೆಸುವಲ್ಲಿ ಆನಂದ ಸಂಕೇಶ್ವರ ಕೊಡುಗೆ ನೀಡಿದ್ದಾರೆ ಎಂದು ಕಾರ್ಯಕ್ರಮದ ಸಂಘಟಕರು ಹೇಳಿರು ವುದಾಗಿ ಪ್ರಕಟಣೆ ತಿಳಿಸಿದೆ.
- ಎಚ್–1ಬಿ ವೀಸಾ: ಕ್ರಮಕ್ಕೆ ಒತ್ತಾಯ
ಸಂದರ್ಭ: ‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್–1ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕವನ್ನು ಹೆಚ್ಚಿಸಿರುವುದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಯುದ್ಧೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು‘ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಆಗ್ರಹಿಸಿದ್ದಾರೆ.
- ‘ಎಚ್–1ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕ ಹೆಚ್ಚಳದಿಂದ ತೆಲುಗು ಐಟಿ ವೃತ್ತಿಪರರಿಗೆ ಆಗಿರುವ ನೋವನ್ನು ಊಹಿಸಲೂ ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಸೌಹಾರ್ದದಿಂದ ಪರಿಹರಿಸಬೇಕು’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
- ‘ಶುಲ್ಕ ಹೆಚ್ಚಿಸುವ ಟ್ರಂಪ್ ಅವರ ಆದೇಶವು ಆಘಾತಕಾರಿಯಾಗಿದೆ. ಭಾರತ–ಅಮೆರಿಕ ನಡುವಿನ ಐತಿಹಾಸಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕ್ರಮವು ಸ್ವೀಕಾರಾರ್ಹವಲ್ಲ’ ಎಂದೂ ಅವರು ಹೇಳಿದ್ದಾರೆ.
- ‘ಅಮೆರಿಕಕ್ಕಾಗಿ ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮ ದೇಶದ ಅಪಾರ ಸಂಖ್ಯೆಯ ಐಟಿ ವೃತ್ತಿಪರರು, ಕೌಶಲ ಆಧಾರಿತ ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
- ಎಚ್–1ಬಿ ವೀಸಾದ ದುರ್ಬಳಕೆಯು ರಾಷ್ಟ್ರೀಯ ಭದ್ರತೆಗೆ ಆತಂಕಕಾರಿ ಎಂದಿರುವ ಟ್ರಂಪ್, ಅರ್ಜಿಗೆ ಸಂಬಂಧಿಸಿದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸುವ ಆದೇಶಕ್ಕೆ ಶುಕ್ರವಾರ ಸಹಿ ಹಾಕಿದ್ದರು. ಅಮೆರಿಕಕ್ಕೆ ವಲಸೆಯೇತರ ಕಾರ್ಮಿಕರ ಪ್ರವೇಶದ ಮೇಲೆ ನಿರ್ಬಂಧ ಹೇರಲು ಶುಲ್ಕ ಹೆಚ್ಚಳ ಮಾಡುತ್ತಿರುವುದಾಗಿ ಹೇಳಿದ್ದರು.
‘ಅಮೆರಿಕದಿಂದ ಬಲವಂತದ ತಂತ್ರ’
- ‘ಅಮೆರಿಕವು ತನ್ನ ವ್ಯಾಪಾರ ಹಿತಾಸಕ್ತಿ ರಕ್ಷಿಸಿಕೊಳ್ಳಲು ಭಾರತದ ಮೇಲೆ ಬಲವಂತದ ತಂತ್ರಗಳನ್ನು ಅನುಸರಿಸುತ್ತಿದೆ. ಕೇಂದ್ರ ಸರ್ಕಾರವು ಈ ಅನ್ಯಾಯದ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಬೇಕು’ ಎಂದು ಸಿಪಿಎಂ ಪಾಲಿಟ್‌ಬ್ಯೂರೊ ಆಗ್ರಹಿಸಿದೆ.
- ಅಮೆರಿಕದ ಶೇ 50 ಸುಂಕ ನೀತಿಗೆ ಭಾರತ ಮಣಿಯುವಂತೆ ಮಾಡಲು ಎಚ್–1ಬಿ ವೀಸಾ ಅರ್ಜಿಯ ಶುಲ್ಕ ಹೆಚ್ಚಳದಂತಹ ಬಲವಂತದ ಕ್ರಮಗಳನ್ನು ಕೈ ಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆನ್ನು ಎಡಪಕ್ಷಗಳು ಬಯಸುತ್ತವೆ ಎಂದಿದೆ.
- ಪವನ್‌ಕುಮಾರ್ ಭಜಂತ್ರಿ ಪಟ್ನಾ ಹೈಕೋರ್ಟ್ ಸಿಜೆ
ಸಂದರ್ಭ: ಕರ್ನಾಟಕದ ಪವನ್‌ಕುಮಾರ್ ಭೀಮಪ್ಪ ಭಜಂತ್ರಿ ಅವರು ಬಿಹಾರದ ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
- ಬಿಹಾರ ರಾಜ್ಯಪಾಲರಾದ ಆರೀಫ್ ಮೊಹಮ್ಮದ್ ಖಾನ್ ಅವರು ರಾಜಭವನದಲ್ಲಿ ಪವನ್‌ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
- 1990ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಪವನ್‌ಕುಮಾರ್ ಅವರು, 2015ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ನಂತರ ಪಂಜಾಬ್, ಹರಿಯಾಣ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ, 2018ರಲ್ಲಿ ಮತ್ತೆ ಕರ್ನಾಟಕ ಹೈ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2021ರಿಂದ ಪಟ್ನಾ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
- ಸಾತ್ವಿಕ್–ಚಿರಾಗ್ ಮತ್ತೆ ರನ್ನರ್ಸ್ ಅಪ್
ಸಂದರ್ಭ: ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ಸ್ ಅಪ್‌ನೊಂದಿಗೆ ಅಭಿಯಾನ ಮುಗಿಸಿದರು.
- ಎಂಟನೇ ಕ್ರಮಾಂಕದ ಭಾರತದ ಆಟಗಾರರು ಪುರುಷರ ಡಬಲ್ಸ್ ಫೈನಲ್‌ನಲ್ಲಿ 19-21, 15-21ರಿಂದ ವಿಶ್ವದ ಅಗ್ರಮಾನ್ಯ ಜೋಡಿ ಕಿಮ್ ವಾನ್ ಹೋ ಮತ್ತು ಸಿಯೋ ಸೆಯುಂಗ್ ಜೇ ಅವರಿಗೆ ಮಣಿದರು. ದಕ್ಷಿಣ ಕೊರಿಯಾದ ಈ ಆಟಗಾರರು 45 ನಿಮಿಷದಲ್ಲಿ ನೇರ ಗೇಮ್‌ಗಳಿಂದ ಮೇಲುಗೈ ಸಾಧಿಸಿದರು.
- ಏಷ್ಯನ್ ಗೇಮ್ಸ್ ಚಾಂಪಿಯನ್ ಜೋಡಿ ಈ ಟೂರ್ನಿಯ ಮೂಲಕ ತಮ್ಮ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ಛಲದಲ್ಲಿದ್ದರು. ಹೋದ ತಿಂಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಕಂಚಿನ ಪದಕ ಮತ್ತು ಹೋದ ವಾರ ಹಾಂಗ್‌ಕಾಂಗ್ ಓಪನ್‌ನಲ್ಲಿ ರನ್ನರ್ಸ್ ಅಪ್ ಆಗಿದ್ದ ಸಾತ್ವಿಕ್–ಚಿರಾಗ್ ಇಲ್ಲಿ ಒಂದೂ ಗೇಮ್ ಬಿಟ್ಟುಕೊಡದೆ ಪ್ರಶಸ್ತಿ ಸುತ್ತು ತಲುಪಿ, ಭರವಸೆ ಮೂಡಿಸಿದ್ದರು.
- ಇತರ ಜೊತೆಗಾರರೊಂದಿಗೆ ಪ್ರಯೋಗ ಮಾಡಿ ಮತ್ತೆ ಈ ಋತುವಿನಲ್ಲಿ ಒಂದಾದ ಕಿಮ್ ಮತ್ತು ಸಿಯೋ ಅವರು 2025ರಲ್ಲಿ ಒಂಬತ್ತನೇ ಟೂರ್ನಿಯಲ್ಲಿ ಫೈನಲ್ ಸ್ಪರ್ಧಿಸಿದ್ದಾರೆ. ಆ ಪೈಕಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಆಲ್ ಇಂಗ್ಲೆಂಡ್ ಮತ್ತು ಇಂಡೋನೇಷ್ಯಾ ಓಪನ್ ಸೇರಿದಂತೆ ಆರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
- ಪ್ಯಾರಾ ಬ್ಯಾಡ್ಮಿಂಟನ್: ಪ್ರಮೋದ್ಗೆ ಚಿನ್ನ, ಕೃಷ್ಣ, ಸುಕಾಂತ್ಗೆ ಬೆಳ್ಳಿ
ಸಂದರ್ಭ: ಭಾರತದ ಪ್ರಮೋದ್ ಭಗತ್ ಅವರು ಬೀಜಿಂಗ್‌ನಲ್ಲಿ ಭಾನುವಾರ ನಡೆದ ಚೀನಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಚಿನ್ನ ಗೆದರೆ, ಸುಕಾಂತ ಕದಂ ಮತ್ತು ಕೃಷ್ಣ ನಗರ್ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.
- ಅನುಭವಿ ಪ್ರಮೋದ್ ಭಾಗವತ್ ಅವರು 18 ತಿಂಗಳ ಅಮಾನತಿನ ನಂತರ ಆಟಕ್ಕೆ ಸ್ಮರಣೀಯ ಪುನರಾಗಮನ ಮಾಡಿದ್ದು, ಪುರುಷರ ಎಸ್‌ಎಲ್3 ವಿಭಾಗದ ಸಿಂಗಲ್ಸ್‌ನಲ್ಲಿ ಚಿನ್ನದ ಗೆದ್ದುಕೊಂಡರು. ಪ್ರಮೋದ್, ಉತ್ತಮ ಹೋರಾಟ ಕಂಡ ಫೈನಲ್‌ನಲ್ಲಿ ಇಂಡೊನೇಷ್ಯಾದ ಮುಹ ಅಲ್ ಇಮ್ರಾನ್ ಎದುರು ಮೊದಲ ಸೆಟ್ ಸೋತರೂ ನಂತರ 21–19, 21–16 ರಲ್ಲಿ ಜಯಗಳಿಸಿದರು.
- ಪುರುಷರ ರಿಲೆ: ಚಿನ್ನ ಕಸಿದ ಬೋಟ್ಸ್ವಾನಾ
ಸಂದರ್ಭ: ರೋಮಾಂಚಕ ಹಣಾಹಣಿಯಲ್ಲಿ ಅಮೆರಿಕ ತಂಡವನ್ನು ಕೊನೆಯ ಲೆಗ್‌ನಲ್ಲಿ ಹಿಂದೆಹಾಕಿದ ಬೋಟ್ಸ್‌ವಾನಾ ತಂಡವು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 4×400 ಮೀಟರ್ಸ್ ರಿಲೆ ಚಿನ್ನವನ್ನು ಬಾಚಿಕೊಂಡಿತು. ಈ ಓಟದಲ್ಲಿ ಚಿನ್ನ ಗೆದ್ದ ಆಫ್ರಿಕಾದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಯಿತು.
- ಭಾನುವಾರ ಮಳೆ ಜೋರಾಗಿದ್ದು ಸ್ಪರ್ಧೆಗಳ ವೇಳಾಪಟ್ಟಿ ಏರುಪೇರಾಯಿತು. ಬೆಳಿಗ್ಗೆ ರನ್‌ಆಫ್‌ನಲ್ಲಿ ಕೆನ್ಯಾ ತಂಡವನ್ನು ಹಿಂದೆಹಾಕಿ ಫೈನಲ್ ತಲುಪಿದ್ದ ಪ್ರಬಲ ಅಮೆರಿಕವು ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅಂತಿಮ ಲೆಗ್ ಇರುವಾಗ ಅಮೆರಿಕ ಮುಂದಿತ್ತು. ಆದರೆ 400 ಮೀ. ಓಟದಲ್ಲಿ ವೈಯಕ್ತಿಕ ಚಿನ್ನ ಗೆದ್ದಿದ್ದ, ಕಾಲಿನ್ ಕೆಬಿನಾಟ್ಶಿಪಿ ಅವರು ಮಳೆಯ ನಡುವೆ ಅತ್ಯಮೋಘವಾಗಿ ಅಂತಿಮ ಲೆಗ್ ಓಡಿ ಬೋಟ್ಸ್‌ವಾನಾಕ್ಕೆ ಐತಿಹಾಸಿಕ ಚಿನ್ನ ತಂದುಕೊಟ್ಟರು. ಈ ತಂಡ 2ನಿಮಿಷ 57.56 ಸೆಕೆಂಡುಗಳಲ್ಲಿ ಗುರಿತಲುಪಿತು.
- ನಿಕೋಲಾಗೆ ಚಿನ್ನ: ಆಸ್ಟ್ರೇಲಿಯಾದ ನಿಕೋಲಾ ಒಲಿಸ್ಲೇಗರ್ಸ್ ಅವರು ಮಹಿಳೆಯರ ಹೈಜಂಪ್ ಚಿನ್ನ ಗೆದ್ದರು. ಮಳೆಯಿಂದ ಈ ಸ್ಪರ್ಧೆಯ ಕೊನೆಯ ಸುತ್ತಿನ ಯತ್ನಕ್ಕೆ ಸ್ಪರ್ಧಿಗಳು ಸಾಕಷ್ಟು ಕಾಯಬೇಕಾಯಿತು.
- ಎರಡು ಬಾರಿಯ ಒಲಿಂಪಿಕ್ ಬೆಳ್ಳಿ ವಿಜೇತೆ ನಿಕೋಲಾ 2.00 ಮೀ. ಜಿಗಿದು ಮೊದಲಿಗರಾದರು. ವಿಶ್ವದಾಖಲೆ ಹೊಂದಿರುವ ಉಕ್ರೇನ್‌ನ ಯರೊಸ್ಲಾವಾ ಮಹುಚಿಕಿ 2.02 ಮೀ. ಎತ್ತರಕ್ಕೆ ಜಿಗಿಯಲು ಉದ್ದೇಶಿಸಿದರೂ ವಿಫಲರಾದರು. ಪೋಲೆಂಡ್‌ನ ಮರಿಯಾ ಜೋಡ್ಜಿಕ್ (2.00) ಬೆಳ್ಳಿ ಗೆದ್ದರು. ಮಹುಚಿಕಿ ಅಂತಿಮವಾಗಿ ಸರ್ಬಿಯಾದ ಆ್ಯಂಜೆಲಿನಾ ಟೋಪಿಕ್ ಅವರೊಂದಿಗೆ 1.97 ಮೀ. ಜಿಗಿದು ಕಂಚಿನ ಪದಕ ಹಂಚಿಕೊಂಡರು.
- ‘ನಾಡಹಬ್ಬ’ಕ್ಕೆ ಬಾನು ಚಾಲನೆ ಇಂದು
ಸಂದರ್ಭ: ರಾಜ್ಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಅರಂಭವಾಗಿದೆ.
- ಅಂತರರಾಷ್ಟ್ರೀಯ ‘ಬುಕರ್’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ( ಸೆ.22 to ಅ.2 ರವರೆಗೆ ನಡೆಯುವ ಉತ್ಸವಕ್ಕೆ ಚಾಲನೆ ನೀಡ ಲಿದ್ದಾರೆ
- ಇದೇ ಮೊದಲು: ಮೈಸೂರು ದಸರಾ ಉದ್ಘಾಟನೆಗೆ ಮುಸ್ಲಿಂ ಮಹಿಳೆಯನ್ನು ಆಯ್ಕೆ ಮಾಡಿರುವುದು ಇದೇ ಮೊದಲು.
ರಾಜವಂಶಸ್ಥರಿಂದ ‘ಖಾಸಗಿ ದರ್ಬಾರ್’
- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನಖಚಿತ ಸಿಂಹಾಸನದಲ್ಲಿ ಕುಳಿತು 11ನೇ ವರ್ಷದ ‘ಖಾಸಗಿ ದರ್ಬಾರ್’ ನಡೆಸಲಿದ್ದಾರೆ.
- ಗಜಪಡೆಯ ನಾಯಕ ‘ಅಭಿಮನ್ಯು’ ಆನೆ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕೃತ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಲಿದ್ದಾರೆ.
- ಯುವ ಕನಸು ನುಚ್ಚು ನೂರು?: ಎಚ್––1ಬಿ ವೀಸಾ ಶುಲ್ಕ ಹೆಚ್ಚಳ: ಸ್ಪಷ್ಟನೆಯಿಂದ ಭಾರತೀಯರು ಕೊಂಚ ನಿರಾಳ
ಸಂದರ್ಭ: ಅಮೆರಿಕದ ಐಟಿ ಉದ್ಯೋಗಿಗಳಾಗಿರುವ ಕೆಲವು ಭಾರತೀಯರು ತವರಿಗೆ ಬರುವುದಕ್ಕಾಗಿ ಸ್ಯಾನ್ ಫ್ರಾನ್ಸಿಸ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಏರಿದ್ದರು. ಸ್ವಲ್ಪ ಹೊತ್ತಿನಲ್ಲಿ ವಿಮಾನ ಹೊರಡುವುದಿತ್ತು. ಅಷ್ಟು ಹೊತ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್–1ಬಿ ವೀಸಾದ ಅರ್ಜಿ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಸುಮಾರು ₹88 ಲಕ್ಷ) ಏರಿಸುವ ಕಾರ್ಯಾದೇಶಕ್ಕೆ ಸಹಿ ಹಾಕಿದರು.


- ವಿಮಾನದಲ್ಲಿದ್ದ ಭಾರತೀಯರಿಗೆ ಈ ಸುದ್ದಿ ಸಿಕ್ಕಿದ್ದೇ ತಡ, ಆತಂಕಗೊಂಡರು. ತಮ್ಮನ್ನು ವಿಮಾನದಿಂದ ಕೆಳಗಿಳಿಸುವಂತೆ ವಿಮಾನದ ಸಿಬ್ಬಂದಿಗೆ ಕೇಳಿಕೊಂಡರು. ಟೆಕಿಗಳಿಗೆ ಮಾತ್ರವಲ್ಲ, ಅವರನ್ನು ನೇಮಿಸಿಕೊಂಡಿರುವ ಮೆಟಾ, ಮೈಕ್ರೊಸಾಫ್ಟ್, ಗೂಗಲ್ನಂತಹ ತಂತ್ರಜ್ಞಾನ ಕ್ಷೇತ್ರದ ಬೃಹತ್ ಕಂಪನಿಗಳೂ ಈ ಆದೇಶದಿಂದ ಗಾಬರಿಗೊಂಡು ಈ ವೀಸಾದ ಅಡಿಯಲ್ಲಿ ಕೆಲಸ ಮಾಡುತ್ತಿರುವ ತಮ್ಮೆಲ್ಲಾ ಸಿಬ್ಬಂದಿಗೆ ದೇಶ ತೊರೆಯದಂತೆ ಸೂಚಿಸಿದವು.
- ‘ಅಮೆರಿಕವೇ ಮೊದಲು’ ಎಂದು ಹೇಳುತ್ತಿರುವ ಟ್ರಂಪ್ ಆಡಳಿತದ ನಿರ್ಧಾರ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
- ಅಮೆರಿಕದ ನಿರ್ಧಾರವು ಭಾರತೀಯರ ‘ಕುಟುಂಬಗಳನ್ನು ಗಲಿಬಿಲಿಗೊಳಿಸಲಿದೆ’ ಎಂಬ ಭಾರತದ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಕೂಡ ಟ್ರಂಪ್ ಆದೇಶದಿಂದ ಭಾರತೀಯರ ಮೇಲಾಗಲಿರುವ ಪರಿಣಾಮವನ್ನು ಒತ್ತಿ ಹೇಳುತ್ತದೆ. ಅದಕ್ಕೆ ಕಾರಣವೂ ಇದೆ.
- ಈ ವೀಸಾ ಯೋಜನೆಯ ಅತಿ ಹೆಚ್ಚು ಫಲಾನುಭವಿಗಳು ಭಾರತೀಯ ಯುವ ಜನರು. ಅಮೆರಿಕದಲ್ಲಿ ದುಡಿದು ಹಣ ಸಂಪಾದಿಸಬೇಕು ಎಂಬ ಅವರ ಕನಸನ್ನು ನನಸು ಮಾಡಿದ್ದು ಇದೇ ಎಚ್–1ಬಿ ವೀಸಾ. ಈ ವೀಸಾದ ಮೂಲಕ ಅಲ್ಲಿಗೆ ತೆರಳಿ ಒಂದಷ್ಟು ವರ್ಷ ಕೆಲಸ ಮಾಡಿ, ನಂತರ ಪೌರತ್ವ ಪಡೆದು ಅಲ್ಲಿಯೇ ನೆಲಸಿದ ಭಾರತೀಯರ ಸಂಖ್ಯೆ ದೊಡ್ಡದಿದೆ.
- ಹೀಗಿರುವಾಗ 2,000 ಡಾಲರ್‌ನಿಂದ 5,000 ಡಾಲರ್‌ವರೆಗೆ ಇದ್ದ ವೀಸಾ ಶುಲ್ಕವನ್ನು ದಿಢೀರ್ ಒಂದು ಲಕ್ಷ ಡಾಲರ್‌ಗೆ ಏರಿಸಿರುವುದು ಅಮೆರಿಕದಲ್ಲಿ ಕೆಲಸ ಮಾಡಬೇಕು, ನಂತರ ಅಲ್ಲಿಯೇ ನೆಲಸಬೇಕು ಎನ್ನುವ ದೇಶದ ಲಕ್ಷಾಂತರ ಯುವಕ–ಯುವತಿಯರ ಕನಸಿಗೆ ತಣ್ಣೀರು ಎರಚಿದೆ.
- ಈ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಈಗ ಕೆಲಸ ಮಾಡುತ್ತಿರುವವರೂ ಶನಿವಾರ ಆದೇಶ ಹೊರಬಿದ್ದ ತಕ್ಷಣ ಆತಂಕಗೊಂಡಿದ್ದರು. ತಮ್ಮನ್ನು ನೇಮಕ ಮಾಡಿಕೊಂಡ ಕಂಪನಿಗಳು ಲಕ್ಷ ಡಾಲರ್ ಶುಲ್ಕ ಭರಿಸದೇ ಇದ್ದರೆ, ಕೆಲಸ ಕಳೆದುಕೊಂಡು ಭಾರತಕ್ಕೆ ಮರಳಬೇಕಾದೀತು ಎಂಬ ಕಳವಳ ಅವರನ್ನು ಕಾಡಿತ್ತು. ಆದರೆ, ಶ್ವೇತಭವನದಿಂದ ಸ್ಪಷ್ಟನೆ ಹೊರಬಿದ್ದ ಬಳಿಕ ಅವರು ಕೊಂಚ ನಿರಾಳರಾಗಿದ್ದಾರೆ.
- ಶ್ವೇತ ಭವನದ ಆಡಳಿತ ನೀಡಿರುವ ಸ್ಪಷ್ಟನೆಯ ಪ್ರಕಾರ, ಹೊಸ ಶುಲ್ಕ ಹೊಸ ಅರ್ಜಿಗಳಿಗಷ್ಟೇ ಅನ್ವಯವಾಗುತ್ತದೆ (ಮುಂದಿನ ಲಾಟರಿ ಸೈಕಲ್‌ಗೆ). ಈ ವೀಸಾದಡಿ ಈಗ ಕೆಲಸ ಮಾಡುತ್ತಿರುವವರು ಹೊಸ ಶುಲ್ಕ ಪಾವತಿಸಬೇಕಾಗಿಲ್ಲ. ಅಲ್ಲದೇ ವೀಸಾ ಅವಧಿ ಮುಕ್ತಾಯಗೊಂಡ ನಂತರ ಸಲ್ಲಿಸಲಾಗುವ ನವೀಕರಣ ಅರ್ಜಿಗೂ ಇದು ಅನ್ವಯವಾಗುವುದಿಲ್ಲ. ಹಾಲಿ ವೀಸಾ ಹೊಂದಿರುವವರು ಈಗಿನಂತೆ ಹೊರ ದೇಶಗಳಿಗೆ ಹೋಗಬಹುದು, ಅಮೆರಿಕಕ್ಕೆ ಬರಬಹುದು. ಅದೇ ರೀತಿ, ಎಚ್–1ಬಿ ವೀಸಾಕ್ಕಾಗಿ ಪ್ರತಿ ವರ್ಷ ಲಕ್ಷ ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಆರಂಭದಲ್ಲಿ ವರದಿಯಾಗಿತ್ತು. ಆದರೆ, ಇದಕ್ಕೂ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, ಈ ಶುಲ್ಕವು ವೀಸಾದ ಪೂರ್ಣ ಅವಧಿಗೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
- ಕಡಿಮೆಯಾಗಲಿದೆ ಅವಕಾಶ: ಹೊರದೇಶಗಳ ಕೌಶಲಯುಕ್ತ ವೃತ್ತಿಪರರನ್ನು ನೇಮಿಸಿಕೊಳ್ಳುವ ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ಶುಲ್ಕವನ್ನು ಭರಿಸುವುದೂ ಅವುಗಳೇ. ಶುಲ್ಕ ಹೆಚ್ಚಾಗಿರುವುದು ಕಂಪನಿಗಳಿಗೆ ಹೊರೆಯಾಗುವುದು ಖಂಡಿತ. ಹಾಗಾಗಿ, ವಿದೇಶ ವೃತ್ತಿಪರರನ್ನು ನೇಮಿಸುವುದಕ್ಕಾಗಿ ಅಷ್ಟು ಮೊತ್ತದ ಶುಲ್ಕ ನೀಡಲು ಅವುಗಳು ಹಿಂದೇಟು ಹಾಕಬಹುದು. ಇಲ್ಲವೇ ಹೆಚ್ಚು ಪರಿಣತಿ ಇರುವ ನಿರ್ದಿಷ್ಟ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳಲೇ ಬೇಕು ಎಂಬಂತಹ ಅನಿವಾರ್ಯ ಸನ್ನಿವೇಶದಲ್ಲಿ ಮಾತ್ರ ಈ ವೀಸಾದಡಿ ಕಂಪನಿಗಳು ನೇಮಕಾತಿಗೆ ಮುಂದಾಗಬಹುದು. ನೇಮಕ ಮಾಡಿದರೂ, ಉದ್ಯೋಗಿಗಳ ಸಂಖ್ಯೆ ತುಂಬಾ ಕಡಿಮೆ ಇರಬಹುದು. ವೀಸಾ ನವೀಕರಣಕ್ಕೆ ಹೊಸ ಶುಲ್ಕ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿರುವುದು ಸಮಾಧಾನಕರ ಸಂಗತಿ. ನವೀಕರಣಕ್ಕೆ ಈ ಶುಲ್ಕ ಅನ್ವಯವಾಗಿದ್ದರೆ ಸಾವಿರಾರು ಭಾರತೀಯರು ಕೆಲಸ ಕಳೆದುಕೊಳ್ಳುತ್ತಿದ್ದರು ಎಂಬುದು ತಜ್ಞರ ಅಭಿಪ್ರಾಯ.
ಭಾರತೀಯರೇ ಫಲಾನುಭವಿಗಳು
- ‘ಎಚ್1–ಬಿ’ ಯು ವಲಸೆಯೇತರ ವೀಸಾ. ಹೊರದೇಶಗಳ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ಕೆಲಸ ನೀಡಲು ಅಲ್ಲಿನ ಕಂಪನಿಗಳಿಗೆ ಇದು ಅವಕಾಶ ನೀಡುತ್ತದೆ. ಇದು ತಾತ್ಕಾಲಿಕ ವೀಸಾ ಆಗಿದ್ದು, ಇದಕ್ಕೆ ಮೂರರಿಂದ ಆರು ವರ್ಷಗಳ ಅವಧಿ ಇರುತ್ತದೆ.
- ಈ ವೀಸಾದ ಅಡಿಯಲ್ಲಿ ಅಮೆರಿಕಕ್ಕೆ ತೆರಳುವವರಲ್ಲಿ ಭಾರತೀಯರೇ ಮುಂದೆ ಇದ್ದಾರೆ. ಭಾರತದ ಎಂಜಿನಿಯರ್‌ಗಳು ಹಾಗೂ ಇತರ ಕ್ಷೇತ್ರಗಳ ತಜ್ಞರನ್ನು ತಂತ್ರಜ್ಞಾನ ಹಾಗೂ ಇತರ ಕಂಪನಿಗಳು ಕರೆಸಿಕೊಳ್ಳುತ್ತವೆ. ಅಮೆರಿಕ ಸರ್ಕಾರ ವಿತರಿಸುವ ಬಹುಪಾಲು ವೀಸಾಗಳ ಫಲಾನುಭವಿಗಳು ತಂತ್ರಜ್ಞಾನ ಕಂಪನಿಗಳು. ಕಂಪ್ಯೂಟರ್‌ಗೆ ಸಂಬಂಧಿಸಿದ ಉದ್ಯೋಗದಲ್ಲಿರುವ ಶೇ 65ರಷ್ಟು ಮಂದಿ ಈ ವೀಸಾದ ಫಲಾನುಭವಿಗಳು.
- ಪ್ಯೂ ರಿಸರ್ಚ್ ವರದಿ ಪ್ರಕಾರ 2023ರಲ್ಲಿ ಎಚ್1– ಬಿ ವೀಸಾಗಳಲ್ಲಿ ಶೇ 73ರಷ್ಟು ಭಾರತೀಯರು ಪಡೆದಿದ್ದರು. ಚೀನಾದ ನಾಗರಿಕರ ಪಾಲು ಶೇ 12. ಉಳಿದ ಎಲ್ಲ ದೇಶಗಳ ನಾಗರಿಕರಿಗೆ ಸಿಕ್ಕಿದ್ದು ಶೇ 15ರಷ್ಟು ವೀಸಾಗಳು.
ಶುಲ್ಕ ಹೆಚ್ಚಳ: ಟ್ರಂಪ್ ವಾದವೇನು?
- ಟ್ರಂಪ್ ಅವರು ತಮ್ಮ ಕಾರ್ಯಾದೇಶದಲ್ಲಿ, ಎಚ್–1ಬಿ ವೀಸಾ ಅರ್ಜಿ ಶುಲ್ಕ ಹೆಚ್ಚಿಸುವುದಕ್ಕೆ ಏನು ಕಾರಣ ಎಂಬುದನ್ನೂ ವಿವರಿಸಿದ್ದಾರೆ. ಕಂಪನಿಗಳು ಈ ವೀಸಾ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಸ್ಥಳೀಯರಿಗೆ ಹೆಚ್ಚು ಸಂಬಳ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡದೆ, ಹೊರದೇಶಗಳಿಂದ ಕಡಿಮೆ ಸಂಬಳಕ್ಕೆ ವೃತ್ತಿಪರರನ್ನು ಕರೆಸಿಕೊಂಡು ಉದ್ಯೋಗ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
- ವಿಜ್ಞಾನ, ತಂತ್ರಜ್ಞಾನ ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರದಲ್ಲಿ (ಸ್ಟೆಮ್) ದುಡಿಯುತ್ತಿರುವ ವಿದೇಶಿ ಉದ್ಯೋಗಿಗಳ ಸಂಖ್ಯೆ 2000 ಮತ್ತು 2019ರ ನಡುವೆ ದುಪ್ಪಟ್ಟಾಗಿದೆ. ಐಟಿ ಕಂಪನಿಗಳು ಈ ವೀಸಾ ಯೋಜನೆಯನ್ನು ಅತಿ ಹೆಚ್ಚು ದುರ್ಬಳಕೆ ಮಾಡಿಕೊಂಡಿವೆ. ಕಳೆದ ಐದು ವರ್ಷಗಳಲ್ಲಿ ಕಂಪನಿಗಳು ಎಚ್–1ಬಿ ವೀಸಾ ಪಡೆಯುವ ಪ್ರಮಾಣ ಶೇ 65ರಷ್ಟು ಹೆಚ್ಚಾಗಿದೆ ಎಂದು ಟ್ರಂಪ್ ಅವರು ಆದೇಶದಲ್ಲಿ ವಿವರಿಸಿದ್ದಾರೆ.
- ಕಂಪನಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಎಚ್–1ಬಿ ವೀಸಾಕ್ಕೆ ಅರ್ಜಿ ಸಲ್ಲಿಸಿ ವಿದೇಶದವರಿಗೆ ಉದ್ಯೋಗ ನೀಡುತ್ತಿವೆ. ಅದೇ ಸಮಯದಲ್ಲಿ ಹೆಚ್ಚು ಸಂಬಳದ ಕಾರಣಕ್ಕೆ ಅಮೆರಿಕದವರನ್ನು ಕೆಲಸದಿಂದ ತೆಗೆಯುತ್ತಿವೆ. ಎಂದು ಆರೋಪಿಸಿರುವ ಅವರು, ಇದಕ್ಕೆ ಹಲವು ಉದಾಹರಣೆಗಳನ್ನೂ ನೀಡಿದ್ದಾರೆ. ವೀಸಾ ಯೋಜನೆಯ ದುರ್ಬಳಕೆ ತಡೆಯಲು ಮತ್ತು ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಲು ವೀಸಾ ಅರ್ಜಿ ಶುಲ್ಕ ಹೆಚ್ಚಿಸುವುದು ಅನಿವಾರ್ಯ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
- ಈ ಆದೇಶ ಒಂದು ವರ್ಷ (ಸೆ.21 2026) ಜಾರಿಯಲ್ಲಿರಲಿದೆ ಎಂದು ಕಾರ್ಯಾದೇಶದಲ್ಲಿ ಹೇಳಲಾಗಿದೆ. ಒಂದು ವೇಳೆ, ಅದರ ಒಳಗಾಗಿ ಅವಧಿಯನ್ನು ವಿಸ್ತರಿಸದೇ ಇದ್ದರೆ ಆದೇಶ ಅನೂರ್ಜಿತ ಗೊಳ್ಳಲಿದೆ.
ಸದ್ಬಳಕೆಗೆ ಅವಕಾಶ
- ಟ್ರಂಪ್ ಅವರ ಈ ಕ್ರಮವನ್ನು ಸದ್ಬಳಕೆ ಮಾಡುವುದಕ್ಕೆ ಭಾರತಕ್ಕೆ ಅವಕಾಶ ಇದೆ. ಅಮೆರಿಕದಲ್ಲಿನ ಕಂಪನಿಗಳು ಪರಿಣತ ವೃತ್ತಿಪರರನ್ನು ನೇಮಕ ಮಾಡಿಕೊಳ್ಳದೇ ಇದ್ದರೆ, ಅವರು ಭಾರತದಲ್ಲೇ ಉಳಿಯಲಿದ್ದಾರೆ. ಅವರಿಗೆ ಇಲ್ಲೇ ಉತ್ತಮ ಅವಕಾಶ ಸಿಕ್ಕಿದರೆ ದೇಶದಲ್ಲಿ ಉದ್ಯಮಗಳು ಬೆಳೆಯುತ್ತವೆ. ಇದು ದೇಶದ ಅಭಿವೃದ್ಧಿಗೂ ಅನುಕೂಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
- ‘ಅಮೆರಿಕದಿಂದ ವಾಪಸ್ ಆಗುವ ಮತ್ತು ದೇಶದಲ್ಲಿರುವ ತಜ್ಞ ಪ್ರತಿಭೆಗಳನ್ನು ದೇಶದ ಸಾಫ್ಟ್‌ವೇರ್, ಕ್ಲೌಡ್ ಮತ್ತು ಸೈಬರ್‌ಭದ್ರತೆ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಬಳಸಿಕೊಂಡು ಲಾಭ ಪಡೆಯುವ ಯೋಜನೆಯನ್ನು ಭಾರತ ರೂಪಿಸಬೇಕು. ಆ ಮೂಲಕ ‘ಡಿಜಿಟಲ್ ಸ್ವರಾಜ್ ಮಿಷನ್’ಗೆ ಉತ್ತೇಜನ ನೀಡಬೇಕು’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
‘ಅಮೆರಿಕಕ್ಕೇ ನಷ್ಟ’
- ಟ್ರಂಪ್ ಅವರ ಈ ನಿರ್ಧಾರದಿಂದ ಭಾರತಕ್ಕಿಂತಲೂ ಅಮೆರಿಕಕ್ಕೆ ಹೆಚ್ಚು ನಷ್ಟ ಆಗಬಹುದು ಎಂದು ಚಿಂತಕರ ಚಾವಡಿ ಜಿಟಿಆರ್‌ಐ ಹೇಳಿದೆ.
- ‘ಅಮೆರಿಕದಲ್ಲಿ ಭಾರತದ ಐಟಿ ಕಂಪನಿಗಳು ಈಗಾಗಲೇ ಶೇ 50ರಿಂದ ಶೇ 80ರಷ್ಟು ಸ್ಥಳೀಯರನ್ನೇ ನೇಮಕ ಮಾಡಿಕೊಂಡಿವೆ. ಟ್ರಂಪ್ ಕ್ರಮವು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸದು. ಭಾರತೀಯರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಕಂಪನಿಗಳು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಕಂಪನಿಗಳು, ಹೊರದೇಶಗಳಿಂದಲೇ ತಮ್ಮ ಕಂಪನಿಗಳ ಕಾರ್ಯಾಚರಣೆಯನ್ನು ತೀವ್ರಗೊಳಿಸಬಹುದು. ಉದಾಹರಣೆಗೆ, ತಮ್ಮ ಉದ್ಯೋಗಿಗಳ ಮೂಲಕ ಭಾರತದಿಂದಲೇ ಕಾರ್ಯಾಚರಣೆಯನ್ನು ಹೆಚ್ಚಿಸಬಹುದು’ ಎಂದು ಅದು ಅಭಿಪ್ರಾಯಪಟ್ಟಿದೆ.
- ಟ್ರಂಪ್ ನೀತಿಯಿಂದಾಗಿ ಭಾರತದ ಐಟಿ ವಲಯವು ಅಮೆರಿಕದ ಪ್ರಾಜೆಕ್ಟ್‌ಗಳಿಗಾಗಿ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
- ಭಾರತದ ಐಟಿ ವಲಯವು ತನ್ನ ಒಟ್ಟಾರೆ ಆದಾಯದಲ್ಲಿ ಅಮೆರಿಕದಿಂದಲೇ ಶೇ 57ರಷ್ಟು ಆದಾಯ ಪಡೆಯುತ್ತದೆ.
- ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ನಿವೃತ್ತಿ
ಸಂದರ್ಭ: ಇದು ಮಹಿಳೆಯರ ಕೈಲಾಗುವಂಥ ಕೆಲಸವಲ್ಲ ಎನ್ನುತ್ತಿದ್ದ ಕಾಲದಲ್ಲಿಯೇ ರೈಲು ಎಂಜಿನಿಯರ್ ಆಗಿ ಉದ್ಯೋಗ ಪಡೆದವರು ಸುರೇಖಾ ಯಾದವ್. ಮಹಿಳೆಯೊಬ್ಬರು ರೈಲು ಚಲಾಯಿಸಿದ ಏಷ್ಯಾದ ಮೊದಲಿಗರಿವರು. 36 ವರ್ಷದ ವೃತ್ತಿ ಜೀವನ ಮುಗಿಸಿದ ಸುರೇಖಾ ಅವರು ಇದೇ 30ರಂದು ನಿವೃತ್ತಿಯಾಗಲಿದ್ದಾರೆ.
- 1988ರಲ್ಲಿ ಇವರು ರೈಲು ಎಂಜಿನಿಯರ್ ಆಗಿ ತಮ್ಮ ವೃತ್ತಿ ಆರಂಭಿಸಿ ದರು. ಗುರಿ ಸಾಧನೆ, ಹಿಡಿದ ಛಲ ಬಿಡದಿರುವುದು ಮತ್ತು ಅತ್ಯಂತ ಸವಾಲಿನ ವೃತ್ತಿರಂಗದಲ್ಲಿನ ಲಿಂಗ ತಾರ ತಮ್ಯದ ಅಡೆತಡೆಗಳನ್ನು ಮೀರಿದ ಇವರ ಜೀವನಗಾಥೆಯೇ ಅಸಾಧಾರಣ ವಾದುದು. ಅವರಿಗೀಗ 60 ವರ್ಷ.
- ಗೂಡ್ಸ್ ರೈಲಿನ ಚಾಲಕಿಯಾಗಿ ಅವರು ತಮ್ಮ ವೃತ್ತಿ ಆರಂಭಿಸಿದರು. ಬಳಿಕ, ಮುಂಬೈನ ಲೋಕಲ್ ರೈಲುಗಳಲ್ಲಿ ಕಾರ್ಯನಿರ್ವಹಿಸಿದರು. ಪ್ರತಿಷ್ಠಿತ ‘ಡೆಕ್ಕನ್ ಕ್ವೀನ್’ನನ್ನೂ ಇವರು ಚಲಾಯಿಸಿದ್ದಾರೆ. ಆಧುನಿಕ ಕಾಲದ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಚಲಾಯಿಸಿದ್ದಾರೆ. ವಿಶೇಷವೆಂದರೆ, ಇಷ್ಟೊಂದು ವೈವಿಧ್ಯಮಯ ರೈಲುಗಳನ್ನು ಚಲಾಯಿಸಿದ ಮೊದಲ ಮಹಿಳೆಯೂ ಇವರೇ ಆಗಿದ್ದಾರೆ.
- ‘ಈ ವೃತ್ತಿ ಆಯ್ಕೆ ಮಾಡಿಕೊಳ್ಳಲು ಪೋಷಕರು ನನಗೆ ಬೇಡ ಎನ್ನಲೇ ಇಲ್ಲ’ ಎನ್ನುವ ಸುರೇಖಾ ಅವರು ಹುಟ್ಟಿದ್ದು ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ. ಹೈಸ್ಕೂಲ್ ಮುಗಿಸಿದ ಬಳಿಕ ಇವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದರು. ಸುರೇಖಾ ಅವರ ಪತಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಎಂಜಿನಿಯರ್‌ಗಳು.
- ಸುರೇಖಾ ಹಲವು ಮೊದಲುಗಳಿಗೆ ಹೆಸರಾದವರು. 1989ರಲ್ಲಿ ಇವರ ಸಹಾಯಕ ಲೋಕೋ ಚಾಲಕಿಯಾದರು. 1996ರಲ್ಲಿ ಗೂಡ್ಸ್ ರೈಲು ಚಾಲಕಿಯಾದರು. 2000ರಲ್ಲಿ ರೈಲು ಚಾಲಕಿಯಾದರು. 2010ರಲ್ಲಿ ಘಾಟ್ ಡ್ರೈವರ್ ಆದರು. 2023ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಚಲಾಯಿಸಿದರು.
- ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಸುರೇಖಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.
‘ಸೇವೆ ಅಜರಾಮರ’
- ತಮಗೆ ಎದುರಾದ ಎಲ್ಲ ಅಡೆತಡೆಗಳನ್ನು ದಾಟಿದವರು. ಅಸಂಖ್ಯ ಮಹಿಳೆಯರಿಗೆ ಸ್ಫೂರ್ತಿದಾಯಕರು. ಯಾವುದೇ ಕನಸನ್ನೂ ನನಸು ಮಾಡಿಕೊಳ್ಳುವುದು ಸಾಧ್ಯ ಎಂದು ತೋರಿಸಿಕೊಟ್ಟವರು. ಭಾರತೀಯ ರೈಲ್ವೆಯಲ್ಲಿ ಮಹಿಳಾ ಸಬಲೀಕರಣದ ರೂಪಕವಾಗಿ ಸುರೇಖಾ ಅವರ ವೃತ್ತಿ ಜೀವನವು ಅಜರಾಮರ
ಒಮ್ಮೆಲೆ ಹೆಚ್ಚಿಸಿದರೆ ಹೊರೆ
- ಐದು–ಹತ್ತು ವರ್ಷಗಳಿಗೊಮ್ಮೆ ಟಿಕೆಟ್ ದರ ಒಮ್ಮೆಲೇ ಹೆಚ್ಚಿಸಿದರೆ ಪ್ರಯಾಣಿಕರಿಗೂ ಹೊರೆಯಾಗುತ್ತದೆ. ಕಾಲಕಾಲಕ್ಕೆ ಅಲ್ಪ ಪ್ರಮಾಣದಲ್ಲಿ ವೈಜ್ಞಾನಿಕವಾಗಿ ದರ ಏರಿಕೆ ಮಾಡಿದಾಗ ಹೊರೆಯಾಗುವುದು ತಪ್ಪಲಿದೆ. ಅಲ್ಲದೇ ರಾಜಕೀಯ ಹಿತಾಸಕ್ತಿಗಳಿಂದ ದೂರ ಇದ್ದು, ಸ್ವತಂತ್ರವಾಗಿ ಸಮಿತಿಯು ಕಾರ್ಯನಿರ್ವಹಿಸುವುದರಿಂದ ಸಂಸ್ಥೆಗಳಿಗೂ ಒಳಿತಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.