Fri. Oct 10th, 2025

ದೇಶದ ಮೊದಲ ಬುಲೆಟ್‌ ರೈಲಿಗೆ 2027ಕ್ಕೆ ಚಾಲನೆ

ಸಂದರ್ಭ: ಗುಜರಾತ್‌ನ ಸೂರತ್‌ ಮತ್ತು ಬಿಲಿಮೊರಾ ನಡುವಿನ 50 ಕಿ.ಮೀ. ಉದ್ದದ ಬುಲೆಟ್‌ ರೈಲು ಯೋಜನೆ 2027ರಲ್ಲಿ ಪೂರ್ಣಗೊಳ್ಳಲಿದ್ದು, ಈ ಮೂಲಕ ದೇಶದ ಮೊದಲ ಬುಲೆಟ್‌ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ.

  • ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಬುಲೆಟ್‌ ರೈಲು ಯೋಜನೆಯ ಮೊದಲ ಹಂತ ಇದಾಗಿದೆ.
  • ‘ಬುಲೆಟ್‌ ರೈಲು ಯೋಜನೆಯ ಕಾಮಗಾರಿಯು ಭರದಿಂದ ಸಾಗುತ್ತಿದೆ. ಠಾಣೆ–ಅಹಮದಾಬಾದ್‌ ನಡುವೆ 2028ರಲ್ಲಿ ಬುಲೆಟ್‌ ರೈಲು ಸಂಚಾರ ಆರಂಭಗೊಳ್ಳಲಿದೆ. ಮುಂಬೈ ಮತ್ತು ಅಹಮದಾಬಾದ್‌ ನಡುವೆ 2029ರಲ್ಲಿ ಬುಲೆಟ್‌ ರೈಲು ಸಂಚರಿಸಲಿದೆ. 
  • ಈ ಯೋಜನೆಯು ಪೂರ್ಣಗೊಂಡ ಬಳಿಕ ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಪ್ರಯಾಣದ ಅವಧಿ ಕೇವಲ 2 ಗಂಟೆ 7 ನಿಮಿಷ ಇರಲಿದೆ.  
  • ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಬುಲೆಟ್‌ ರೈಲು ಯೋಜನೆಗೆ 2017ರಲ್ಲಿ ಚಾಲನೆ ನೀಡಲಾಗಿತ್ತು. 2023ರಲ್ಲಿ ಈ ಯೋಜನೆ ಪೂರ್ಣಗೊಳಿಸಲು ಯೋಜಿಸಲಾಗಿತ್ತು, ಆದರೆ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಕಾಮಗಾರಿ ವಿಳಂಬಗೊಂಡಿದೆ.

ಕಾಂತಾರಕ್ಕೆ ಕೆಎಸ್‌ಡಿಎಲ್‌ ಸಹ ಪ್ರಾಯೋಜಕ: ಎಂ.ಬಿ.ಪಾಟೀಲ

ಸಂದರ್ಭ: ‘ಕಾಂತಾರ– ಚಾಪ್ಟರ್ 1 ಸಿನಿಮಾಕ್ಕೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮವು (ಕೆಎಸ್‌ಡಿಎಲ್‌), ಸುಗಂಧ ಭಾಗಿದಾರ ಆಗಿ ಸಹ ಪ್ರಾಯೋಜಕತ್ವ ನೀಡಲಿದೆ’.

  • ‘ಕನ್ನಡ ಚಿತ್ರರಂಗವು ಸ್ಯಾಂಡಲ್‌ ವುಡ್‌ ಎಂದೇ ಹೆಸರಾಗಿದೆ. ಇನ್ನು ಕೆಎಸ್‌ಡಿಎಲ್‌ ಮೈಸೂರ್‌ ಸ್ಯಾಂಡಲ್‌ ಸೋಪ್‌ಗಳಿಗೆ ಖ್ಯಾತಿ. ಈಗ ಚಿತ್ರತಂಡ ಮತ್ತು ಕೆಎಸ್‌ಡಿಎಲ್‌ ಮಧ್ಯೆ ಒಪ್ಪಂದ ವಾಗಿದ್ದು, ಚಿತ್ರದ ಪ್ರತಿ ಪ್ರದರ್ಶನದಲ್ಲೂ ಕೆಎಸ್‌ಡಿಎಲ್‌ ಉತ್ಪನ್ನ ಗಳಿಗೆ ಪ್ರಚಾರ ಸಿಗಲಿದೆ’.
  • ‘ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳ, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಸೇರಿ 7 ಭಾಷೆಗಳಲ್ಲಿ ಕಾಂತಾರ ತೆರೆ ಕಾಣಲಿದೆ. ಭಾರತದ 7,000 ಹಾಗೂ 30 ರಾಷ್ಟ್ರಗಳ 6,500ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಅಲ್ಲೆಲ್ಲಾ ಕೆಎಸ್‌ಡಿಎಲ್‌ ಉತ್ಪನ್ನಗಳಿಗೆ ಪ್ರಚಾರ ಸಿಗಲಿದೆ. ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಯತ್ನಿಸುತ್ತಿರುವ ಕೆಎಸ್‌ಡಿಎಲ್‌ಗೆ ಇದರಿಂದ ಅನುಕೂಲ ವಾಗಲಿದೆ’.

ಅಂಡಮಾನ್‌ನಲ್ಲಿ ತೈಲ ನಿಕ್ಷೇಪ ಪತ್ತೆ

ಸಂದರ್ಭ: ಅಂಡಮಾನ್‌ ದ್ವೀಪದ ಬಳಿ ತೈಲ ನಿಕ್ಷೇಪ ಪತ್ತೆ ಆಗಿದೆ ಎಂದು ಸರ್ಕಾರಿ ಸ್ವಾಮ್ಯದ ಆಯಿಲ್‌ ಇಂಡಿಯಾ ಲಿಮಿಟೆಡ್ (ಒಐಎಲ್‌) ತಿಳಿಸಿದೆ. ಆದರೆ, ಪತ್ತೆಯಾದ ನಿಕ್ಷೇಪದ ಅಂದಾಜನ್ನು ತಿಳಿಸಿಲ್ಲ. 

  • ಅಂಡಮಾನ್‌ ಸಮುದ್ರ ಪ್ರದೇಶದ ವಿಜಯಪುರಂ–2ರ ಎರಡನೇ ಬಾವಿಯಲ್ಲಿ ನಿಕ್ಷೇ‍ಪ ಪತ್ತೆಯಾಗಿದೆ. 
  • ಆಯಿಲ್‌ ಇಂಡಿಯಾ ಲಿಮಿಟೆಡ್ ಮತ್ತು ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಅಂಡಮಾನ್ ಸಮುದ್ರದಲ್ಲಿ ಹೈಡ್ರೋಕಾರ್ಬನ್‌ ನಿಕ್ಷೇಪದ ಪತ್ತೆಗಾಗಿ ಸಂಶೋಧನೆ ನಡೆಸುತ್ತಿವೆ.
  • ಅಂಡಮಾನ್‌ ದ್ವೀಪದ ಪೂರ್ವ ಕರಾವಳಿಯಿಂದ 9.20 ನಾಟಿಕಲ್‌ ಮೈಲು (17 ಕಿ.ಮೀ) ದೂರದಲ್ಲಿನ ಬಾವಿಯಲ್ಲಿ ತೈಲ ನಿಕ್ಷೇಪ ಪತ್ತೆ ಆಗಿದೆ.

ಅಮೆರಿಕ ಸುಂಕ: ದೇಶದ ಜಿಡಿಪಿ ಮೇಲೆ ಪರಿಣಾಮ?

ಸಂದರ್ಭ: ಭಾರತದ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಅಧಿಕ ಸುಂಕವು ದೇಶದ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು ಎಂದು ಕ್ರಿಸಿಲ್ ಇಂಟೆಲಿಜೆನ್ಸ್‌ ತನ್ನ ಸೆಪ್ಟೆಂಬರ್ ತಿಂಗಳ ವರದಿಯಲ್ಲಿ ಹೇಳಿದೆ. 

  • ಈ ಸುಂಕವು ದೇಶದ ಸರಕು ರಫ್ತು ಮತ್ತು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಆದರೂ, ದೇಶದಲ್ಲಿ ಹಣದುಬ್ಬರ ಇಳಿಕೆ ಮತ್ತು ರೆಪೊ ದರ ಕಡಿತವು ಬೆಳವಣಿಗೆಗೆ ನೆರವಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
  • ಪ್ರಸಕ್ತ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟಾಗಿತ್ತು. ಇದು 15 ತಿಂಗಳ ಗರಿಷ್ಠ ಮಟ್ಟ. ಇದೇ ಅವಧಿಯಲ್ಲಿ ನಾಮಿನಲ್ ಜಿಡಿಪಿ ಶೇ 10.8ರಿಂದ ಶೇ 8.8ಕ್ಕೆ ಇಳಿದಿದೆ. 
  • ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಶೇ 3.5ಕ್ಕೆ ಇಳಿಯುವ ನಿರೀಕ್ಷೆ ಇದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ಶೇ 4.6ರಷ್ಟಿತ್ತು. 
  • ಉತ್ತಮ ಕೃಷಿ ಚಟುವಟಿಕೆಯಿಂದ ಆಹಾರ ಪದಾರ್ಥಗಳ ಹಣದುಬ್ಬರವು ನಿಯಂತ್ರಣದಲ್ಲಿ ಇರುವ ಸಾಧ್ಯತೆ ಇದೆ. ಕಚ್ಚಾ ತೈಲ ಮತ್ತು ಸರಕುಗಳ ಬೆಲೆ ನಿಯಂತ್ರಣದಲ್ಲಿ ಇದೆ. ಇದು ಆಹಾರೇತರ ವಸ್ತುಗಳ ಹಣದುಬ್ಬರ ಪ್ರಮಾಣವನ್ನು ತಗ್ಗಿಸುವ ನಿರೀಕ್ಷೆ ಇದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಮ್ಮೆ ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಶೀತಲ್ ದೇವಿ ಚಾರಿತ್ರಿಕ ಸಾಧನೆ: ಪ್ಯಾರಾ ವಿಶ್ವ ಆರ್ಚರಿ: ಕೈಗಳಿಲ್ಲದೇ ಚಿನ್ನ ಗೆದ್ದ ಮೊದಲ ಮಹಿಳೆ

  • ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಕೈಗಳ ಸಹಾಯವಿಲ್ಲದೇ ಚಿನ್ನ ಗೆದ್ದ ವಿಶ್ವದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆ ಭಾರತದ ಶೀತಲ್ ದೇವಿ ಅವರದಾಯಿತು.
  • ಇಲ್ಲಿ ನಡೆಯುತ್ತಿರುವ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ ಷಿಪ್‌ನ ಪುರುಷರ ವಿಭಾಗದ ಕಾಂಪೌಂಡ್‌ ವೈಯಕ್ತಿಕ ಸ್ಪರ್ಧೆಯಲ್ಲಿ ತೊಮನ್ ಕುಮಾರ್ ಅವರೂ ಚಿನ್ನ ಗೆದ್ದರು.
  • ಕಾಂಪೌಂಡ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 18 ವರ್ಷ ವಯಸ್ಸಿನ ಶೀತಲ್, ಟರ್ಕಿಯ ಅಗ್ರಕ್ರಮಾಂಕದ ಸ್ಪರ್ಧಿ ಒಝ್ನೂರ್ ಕ್ಯುರ್ ಗಿರ್ದಿ ಅವರನ್ನು 146–143 ರಿಂದ ಸೋಲಿಸಿದರು. ಕೈಗಳನ್ನು ಕಳೆದುಕೊಂಡ ಜಮ್ಮು–ಕಾಶ್ಮೀರದ ಬಾಲೆ ಶೀತಲ್ ಕಾಲಿನಿಂದಲೇ ಬಾಣ ಪ್ರಯೋಗಿಸಿ ಹೆಸರು ಮಾಡಿದ್ದಾರೆ.
  • ಕಾಂಪೌಂಡ್‌ ವಿಭಾಗದ ಸ್ಪರ್ಧಿಗಳು ಬಳಸುವ ಬಿಲ್ಲು ಕೇಬಲ್ ಮತ್ತು ಪುಟ್ಟ ರಾಟೆಗಳನ್ನು ಹೊಂದಿರುತ್ತದೆ. ರೀಕರ್ವ್ ವಿಭಾಗದ ಬಿಲ್ಲು ಸಾಂಪ್ರದಾಯಿಕ ರೀತಿಯಲ್ಲಿರುತ್ತದೆ.
  • ಶೀತಲ್ ಅವರು ಈ ಟೂರ್ನಿಯಲ್ಲಿ ಕೈಗಳಿಲ್ಲದೇ ಭಾಗವಹಿಸಿರುವ ಏಕೈಕ ಸ್ಪರ್ಧಿ ಎನಿಸಿದ್ದಾರೆ. ಅವರು ಗಲ್ಲದ ನೆರವು ಪಡೆದು ಕಾಲಿನಿಂದ ಬಾಣ ಪ್ರಯೋಗಿಸು ತ್ತಾರೆ. ಈ ಹಿಂದೆ ಪುರುಷರ ವಿಭಾಗದಲ್ಲಿ ಕೈಗಳಿಲ್ಲದೇ ಬಾಣ ಪ್ರಯೋಗಿಸಿ ಚಿನ್ನ ಗೆದ್ದ ಏಕೈಕ ದಾಖಲೆ ಇರುವುದು ಅಮೆರಿಕದ ಮ್ಯಾಟ್‌ ಸ್ಟುಟ್ಜ್‌ಮನ್ ಹೆಸರಿನಲ್ಲಿ. ಅವರು ದುಬೈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು.
  • ತೊಮನ್‌ಗೆ ಚಿನ್ನ: ಇದಕ್ಕೆ ಮೊದಲು ಶೀತಲ್ ಅವರು ತೊಮನ್ ಕುಮಾರ್ ಜೊತೆಗೂಡಿ ಕಾಂಪೌಂಡ್‌ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು. ಪ್ಲೇಆಫ್‌ನಲ್ಲಿ ಬ್ರಿಟನ್‌ನ ಜೋಡೀ  ಗ್ರೀನ್ಹಮ್– ನಥಾನ್‌ ಮೆಕ್‌ಕ್ವೀನ್ ಜೋಡಿಯನ್ನು 152–149 ರಿಂದ ಸೋಲಿಸಿದ್ದರು.
  • ನಂತರ ನಡೆದ ಪುರುಷರ ವಿಭಾಗದ ಕಾಂಪೌಂಡ್ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ತೊಮನ್ ಅವರು ಸ್ವದೇಶದ ರಾಕೇಶ್ ಕುಮಾರ್ ಅವರನ್ನು 40–20 ರಿಂದ ಸೋಲಿಸಿದರು. ರಾಕೇಶ್ ಅವರು ತಾಂತ್ರಿಕ ತೊಂದರೆಯ ಕಾರಣ ಅರ್ಧದಲ್ಲೇ ಹಿಂದೆ ಸರಿದರು. ರಾಕೇಶ್‌, ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇಲ್ಲಿ ಅವರ ಬಾಣ ಪ್ರಯೋಗಿಸುವ ವೇಳೆ ತಾಂತ್ರಿಕ ತೊಂದರೆ ಕಾಣಿಸಿತು.
  • ಕಾಂಪೌಂಡ್‌ ಪುರುಷರ ಓಪನ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ ಶ್ಯಾಮ್‌ ಸುಂದರ್ ಸ್ವಾಮಿ 141–148 ರಲ್ಲಿ ಬ್ರಿಟನ್‌ನ ನಥಾನ್ ಮೆಕ್‌ಕ್ವೀನ್ ಅವರಿಗೆ ಸೋತರು. ಸ್ವಾಮಿ ಸೆಮಿಫೈನಲ್‌ನಲ್ಲಿ ತೊಮನ್ ಅವರನ್ನು ಸೋಲಿಸಿದ್ದರು.

‘ಬಹುಪಕ್ಷೀಯ ವ್ಯವಸ್ಥೆ ‘ಬ್ರಿಕ್ಸ್‌’ ರಕ್ಷಿಸಲಿ’

ಸಂದರ್ಭ: ಹೆಚ್ಚುತ್ತಿರುವ ರಕ್ಷಣಾ ನೀತಿ, ಸುಂಕದ ಏರಿಳಿತ ಹಾಗೂ ಇತರ ಅಡೆತಡೆಗಳು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಜಾಗತಿಕ ವ್ಯಾಪಾರ ಸಂಬಂಧವನ್ನು  ರಕ್ಷಿಸುವಂತೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ‘ಬ್ರಿಕ್ಸ್‌’ಗೆ ಕರೆ ನೀಡಿದರು.

  • ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಉನ್ನತ ಮಟ್ಟದ ಸಭೆಯ (ಯುಎನ್‌ಜಿಎ) ಸಂದರ್ಭದಲ್ಲಿ ‘ಬ್ರಿಕ್ಸ್‌’ ದೇಶಗಳ ವಿದೇಶಾಂಗ ಸಚಿವರ ಸಭೆಯು ಭಾರತದ ಅಧ್ಯಕ್ಷತೆಯಲ್ಲಿ ನಡೆಯಿತು. 
  • ‘ಬಹುಪಕ್ಷೀಯತೆಯು ಒತ್ತಡದಲ್ಲಿದ್ದಾಗ, ರಚನಾತ್ಮಕ ಬದಲಾವಣೆಯ ಗಟ್ಟಿ ದನಿಯಾಗಿ ‘ಬ್ರಿಕ್ಸ್‌’ ನಿಂತಿದೆ. ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಶಾಂತಿ ಸ್ಥಾಪನೆ, ಮಾತುಕತೆ, ರಾಜತಾಂತ್ರಿಕತೆ ಹಾಗೂ ಅಂತರ ರಾಷ್ಟ್ರೀಯ ಕಾನೂನಿನ ಪಾಲನೆಯನ್ನು, ‘ಬ್ರಿಕ್ಸ್‌’ ಬಲಪಡಿಸಬೇಕು’ ಎಂದು ಜೈಶಂಕರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  
  • 2026ರಲ್ಲಿ ಭಾರತವು ‘ಬ್ರಿಕ್ಸ್‌’ ಅಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ಕುರಿತು ಮಾತನಾಡಿದ ಅವರು, ‘ಡಿಜಟಲೀಕರಣ, ಸ್ಟಾರ್ಟ್‌ಅಪ್‌ ಗಳು, ನಾವೀನ್ಯತೆ ಮತ್ತು ಅಭಿವೃದ್ಧಿ ಪಾಲುದಾರಿಕೆಗಳ ಮೂಲಕ ಆಹಾರ, ಇಂಧನ, ಹವಾಮಾನ ಹಾಗೂ ಸುಸ್ಥಿರ ಅಭಿವೃದ್ಧಿಯ ಮೇಲೆ ದೇಶವು ಕೇಂದ್ರೀಕರಿಸಲಿದೆ’ ಎಂದರು. 

ಶೈಲೇಶ್‌ಗೆ ಹೈಜಂಪ್ ಚಿನ್ನ

ಸಂದರ್ಭ: ಭಾರತದ ಶೈಲೇಶ್ ಕುಮಾರ್ ಮತ್ತು ವರುಣ್ ಸಿಂಗ್ ಭಾಟಿ ಅವರು ಶನಿವಾರ ಆರಂಭವಾದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ ಪುರುಷರ ಹೈಜಂಪ್‌ ಟಿ63 ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದುಕೊಂಡರು.

  • ಮೊದಲ ದಿನವೇ ಆತಿಥೇಯರು ಪದಕ ಖಾತೆ ತೆರೆದರು. 25 ವರ್ಷ ವಯಸ್ಸಿನ ಶೈಲೇಶ್ 1.91 ಮೀ. ಜಿಗಿದು ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದರು. ಆ ಹಾದಿಯಲ್ಲಿ ಏಷ್ಯನ್ ಮತ್ತು ಚಾಂಪಿಯನ್‌ಷಿಪ್ ದಾಖಲೆ ಸುಧಾರಿಸಿದರು.
  • ಹಾಲಿ ಪ್ಯಾರಾಲಿಂಪಿಕ್ ಚಾಂಪಿಯನ್, ಅಮೆರಿಕದ ಎಝ್ರಾ ಫ್ರೆಚ್‌ ಬೆಳ್ಳಿ ಗೆದ್ದರೆ, ವರುಣ್ ಕಂಚಿನ ಪದಕ ಗೆದ್ದರು. ಇಬ್ಬರೂ 1.85 ಮೀ. ಜಿಗಿದರೂ, ಕೌಂಟ್‌ ಬ್ಯಾಂಕ್ ಆಧಾರದಲ್ಲಿ ಅಮೆರಿಕದ ಸ್ಪರ್ಧಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಮೊಣಕಾಲಿನ ಮೇಲಿನವರೆಗೆ ಒಂದು ಕಾಲು ಕಳೆದುಕೊಂಡವರು ಈ ವಿಭಾಗದಲ್ಲಿ (ಟಿ63) ಸ್ಪರ್ಧಿಸುತ್ತಾರೆ.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments