- ಪಾರದರ್ಶಕತೆಗಾಗಿ ಏಕೀಕೃತ ಭೂಸ್ವಾಧೀನ ವ್ಯವಸ್ಥೆ ಜಾರಿ
ಸಂದರ್ಭ: ಭೂಸ್ವಾಧೀನ ಪ್ರಕ್ರಿಯೆ ಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನ್ಯಾಯ ಒದಗಿಸುವುದ ಕ್ಕಾಗಿ ‘ಏಕೀಕೃತ ಭೂಸ್ವಾಧೀನ ವ್ಯವಸ್ಥೆ’ಗೆ (ಯುಎಲ್‌ಎಂಎಸ್) ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೋಮವಾರ ಚಾಲನೆ ನೀಡಿದರು.
- ಕಂದಾಯ ಇಲಾಖೆಯ ಭೂಮಿ ತಂತ್ರಾಂಶ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಇ–ಸ್ವತ್ತು, ನಗರಾಭಿವೃದ್ಧಿ ಇಲಾಖೆಯ ಇ–ಆಸ್ತಿ ತಂತ್ರಾಂಶ, ಯುಎಲ್‌ಎಂಎಸ್ ಇ–ಖಾತಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶ ಮತ್ತು ಕೆಜಿಐಎಸ್‌ನಂತಹ ಎಲ್ಲಾ ತಂತ್ರಾಂಶ ಗಳನ್ನು ಒಳಗೊಂಡ ವ್ಯವಸ್ಥೆಯಾಗಿದೆ.
- ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ‘ಈ ವ್ಯವಸ್ಥೆಯು ನೈಜ ದತ್ತಾಂಶವನ್ನು ಒದಗಿಸುತ್ತದೆ. ಅಲ್ಲದೇ, ಆರ್ಥಿಕ ಇಲಾಖೆಯ ಖಜಾನೆ–2 ತಂತ್ರಾಂಶ ದೊಂದಿಗೆ ಜೋಡಣೆ ಮಾಡಲಾಗಿದೆ. ಸಮಗ್ರ ಭೂಸ್ವಾಧೀನ ವ್ಯವಸ್ಥೆಯು ರಾಜ್ಯದಾದ್ಯಂತ ಭೂಸ್ವಾಧೀನ ಪ್ರಕ್ರಿಯೆ ಯನ್ನು ಸಮನ್ವಯಗೊಳಿಸುತ್ತದೆ. ಅಲ್ಲದೇ, ಈಗ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಮತ್ತು ಹಿಂದೆ ನಡೆಸಿದ ಭೂಸ್ವಾಧೀನ ಪ್ರಕರಣ ಗಳಲ್ಲಿನ ಮೊಕದ್ದಮೆಗಳನ್ನು ಗುರುತಿಸುವ ಸಮಗ್ರ ಡಿಜಿಟಲ್ ವೇದಿಕೆಯೂ ಇದಾಗಿದೆ’ ಎಂದರು.
- ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಕೆಶಿಪ್, ಕೆ–ರೈಡ್, ಮೆಟ್ರೊ, ಕೆಐಎಡಿಬಿ ಮತ್ತಿತರ ಸಂಸ್ಥೆಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ. ಇವುಗಳ ಭೂಸ್ವಾಧೀನದ ಸಂಪೂರ್ಣ ಮಾಹಿತಿಯು ಈ ವ್ಯವಸ್ಥೆಯಲ್ಲಿ ಸಿಗುತ್ತದೆ. ಭೂಸ್ವಾಧೀನದ ಎಲ್ಲಾ ಪ್ರಸ್ತಾವಗಳು, ಅದರ ಸ್ಥಿತಿಗತಿಯ ಬಗ್ಗೆ ನೈಜ ಸಮಯದ ಮಾಹಿತಿಯನ್ನು ಪಾಲುದಾರರು ಮತ್ತು ತೀರ್ಮಾನ ತೆಗೆದುಕೊಳ್ಳುವ ಸಂಸ್ಥೆಗಳಿಗೆ ಕ್ರೋಡೀಕೃತ ಡ್ಯಾಶ್ ಬೋರ್ಡ್ ಮೂಲಕ ಒದಗಿಸಲಾಗುತ್ತದೆ ಎಂದು ಅವರು ವಿವರಿಸಿದರು.
- ಭೂಸ್ವಾಧೀನ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಐ–ತೀರ್ಪು ರಚನೆ, ಪರಿಹಾರ ವಿತರಣೆ ಮತ್ತು ಪುನರ್ವಸತಿ ವರೆಗಿನ ಸಂಪೂರ್ಣ ಪ್ರಕ್ರಿಯೆ ನಿರ್ವಹಿಸಲು ಈ ವ್ಯವಸ್ಥೆ ಏಕ ಮಾತ್ರ ಡಿಜಿಟಲ್ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಕೃಷ್ಣಬೈರೇಗೌಡ ಹೇಳಿದರು.
- ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಅಗತ್ಯವಿರುವ ಭೂಸ್ವಾಧೀನ ಸಂಸ್ಥೆಗಳು ಹಂತ ಹಂತವಾಗಿ ಈ ತಂತ್ರಾಂಶವನ್ನು ಅಳವಡಿಸಿಕೊಳ್ಳುತ್ತವೆ. ಈ ತಂತ್ರಾಂಶವು ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಪ್ರಮಾಣೀಕೃತ ಮತ್ತು ಕಾನೂನುಬದ್ಧ ಅನುಸರಣಾ ವಿಧಾನವನ್ನು ಖಚಿತ ಪಡಿಸುತ್ತದೆ ಎಂದರು.
- ಭಾರತದ ಮೊದಲ ಐಬಿಆರ್ ಲಸಿಕೆ ಅಭಿವೃದ್ಧಿ
ಸಂದರ್ಭ: ಹೈದರಾಬಾದ್‌ನ ಲಸಿಕೆ ತಯಾರಿಕಾ ಕಂಪನಿ ‘ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್’ (ಐಐಎಲ್) ಸೋಂಕಿತ ಜಾನುವಾರುಗಳ ಮೂಗು ಮತ್ತು ಗಂಟಲಿನ ಉರಿಯೂತ (ಐಬಿಆರ್) ಕಾಯಿಲೆಗೆ ಭಾರತದ ಮೊದಲ ಲಸಿಕೆ ‘ಜೀನ್ ಡಿಲೀಟೆಡ್ ದಿವಾ’ ಅಭಿವೃದ್ಧಿಪಡಿಸಿ ರ ಬಿಡುಗಡೆ ಮಾಡಿದೆ.
- ಈ ಲಸಿಕೆಯು ಸೋಂಕಿತ ಜಾನುವಾರುಗಳಿಂದ ಇತರ ಜಾನುವಾರುಗಳನ್ನು ರಕ್ಷಿಸುತ್ತದೆ. ಭಾರತದಲ್ಲಿ ಐಬಿಆರ್ ಸಾಂಕ್ರಾಮಿಕ ರೋಗವಾಗಿದ್ದು, ಗಾಳಿಯ ಮೂಲಕ ಹರಡುತ್ತದೆ ಮತ್ತು ಜಾನುವಾರುಗಳ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಜಾನುವಾರುಗಳಲ್ಲಿ ಬಂಜೆತನ, ಕಡಿಮೆ ಹಾಲು ಉತ್ಪಾದನೆ, ಗರ್ಭಪಾತಕ್ಕೂ ಕಾರಣವಾಗುತ್ತದೆ.
- ಭಾರತದಲ್ಲಿ ಈವರೆಗೆ ಈ ಸೋಂಕಿಗೆ ಯಾವುದೇ ಲಸಿಕೆಯಾಗಲೀ, ಚಿಕಿತ್ಸೆಯಾಗಲೀ ಲಭ್ಯವಿರಲಿಲ್ಲ. ಸದ್ಯ ಈ ಲಸಿಕೆಯ ಅಭಿವೃದ್ಧಿಯಿಂದಾಗಿ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ.
- ಶೂಟಿಂಗ್: ಓಜಸ್ವಿ, ಹಿಮಾಂಶುಗೆ ಚಿನ್ನ
ಸಂದರ್ಭ: ಉದಯೋನ್ಮುಖ ಶೂಟರ್ ಓಜಸ್ವಿ ಠಾಕೂರ್ ಅವರು ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಈ ಸ್ಪರ್ಧೆಯಲ್ಲಿ ಮೂರೂ ಪದಕಗಳನ್ನು ಗೆದ್ದು ಭಾರತ ಕ್ಲೀನ್‌ಸ್ವೀಪ್ ಮಾಡಿಕೊಂಡಿತು.
- ಕರ್ಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಕೂಟದಲ್ಲಿ 16 ವರ್ಷದ ಓಜಸ್ವಿ 252.7 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. 250.2 ಅಂಕ ಗಳಿಸಿದ ಹೃದಯಶ್ರೀ ಕೊಂಡೂರ್ ಬೆಳ್ಳಿ ಗೆದ್ದರೆ, ಶಾಂಭವಿ ಕ್ಷೀರಸಾಗರ್ (229.4) ಕಂಚಿನ ಪದಕ ತಮ್ಮದಾಗಿಸಿಕೊಂಡರು.
- ಹಿಮಾಂಶುಗೆ ಚಿನ್ನ: ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಹಿಮಾಂಶು ಚಿನ್ನಕ್ಕೆ ಗುರಿಯಿಟ್ಟರು. 633.7 ಸ್ಕೋರ್‌ನೊಂದಿಗೆ ಅರ್ಹತಾ ಸುತ್ತಿನಲ್ಲೂ ಅಗ್ರಸ್ಥಾನ ಪಡೆದಿದ್ದ ಹಿಮಾಂಶು, ಫೈನಲ್‌ನಲ್ಲಿ (250.9) ಪಾಬಲ್ಯ ಮುಂದುವರಿಸಿದರು. ಸ್ವತಂತ್ರ ತಟಸ್ಥ ಸ್ಪರ್ಧಿ (ಎಎನ್‌ಎ) ಡಿಮಿಟ್ರಿ ಪಿಮೆನೋವ್ (249.9) ಬೆಳ್ಳಿ ಪದಕ ಗೆದ್ದರೆ, ಅಭಿನವ್ ಶಾ (228.4) ಕಂಚು ಜಯಿಸಿದರು. ನರೇನ್ ಪ್ರಣವ್ (187.0) ಐದನೇ ಸ್ಥಾನ ಪಡೆದರು.
- ಪುರುಷರ 25 ಮೀ. ರ‍್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಸ್ವತಂತ್ರ ತಟಸ್ಥ ಸ್ಪರ್ಧಿ ಅಲೆಕ್ಸಾಂಡರ್ ಕೊವಾಲೆವ್ ಅವರು ಭಾರತದ ಮುಕೇಶ್ ನೆಲವಲ್ಲಿ ಅವರನ್ನು ರೋಚಕ ಶೂಟ್ಆಫ್‌ನಲ್ಲಿ ಮಣಿಸಿ ಚಿನ್ನ ಗೆದ್ದರು.
- ಈಜು: ಶ್ರೀಹರಿಗೆ ಮತ್ತೊಂದು ಪದಕ
ಸಂದರ್ಭ: ಕರ್ನಾಟಕದ ಈಜು ತಾರೆ ಶ್ರೀಹರಿ ನಟರಾಜ್ ಅವರು 11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮತ್ತೊಂದು ಪದಕ ಜಯಿಸಿದರು. ಅವರು, ಕರ್ನಾಟಕದವರೇ ಆದ ಅನೀಶ್ ಗೌಡ, ಸಜನ್ ಪ್ರಕಾಶ್ ಹಾಗೂ ಶೋನ್ ಗಂಗೂಲಿ ಜೊತೆಗೂಡಿ 4×200 ಮೀ. ಫ್ರೀಸ್ಟೈಲ್‌ನಲ್ಲಿ ಸೋಮವಾರ ಬೆಳ್ಳಿ ಪದಕ ಜಯಿಸಿದರು.
- ಅಂತಿಮ ಕ್ಷಣದಲ್ಲಿ ಶ್ರೀಹರಿ ಅವರು ತೋರಿದ ಮಿಂಚಿನ ಪ್ರದರ್ಶನದಿಂದಾಗಿ ಭಾರತ ತಂಡವು 7ನಿ., 23.38 ಸೆಕೆಂಡುಗಳಲ್ಲಿ ಗುರಿ ತಲುಪಿತು. ಮಲೇಷ್ಯಾ (7:23.43) ಕಂಚಿಗೆ ತೃಪ್ತಿಪಟ್ಟಿತು.
- ಡೈವಿಂಗ್‌ನಲ್ಲಿ ಚಾರಿತ್ರಿಕ ಕಂಚು: ಮಣಿಪುರದ ಸಾಯಿರಾಮ್ ಮತ್ತು ವಿಲ್ಸನ್ ಸಿಂಗ್ ನಿಂಗ್‌ತೌಜಮ್ ಅವರು ಪುರುಷರ 10 ಮೀಟರ್ ‘ಸಿಂಕ್ರೊನೈಸ್ ಡೈವಿಂಗ್’ನಲ್ಲಿ ಚಾರಿತ್ರಿಕ ಕಂಚಿನ ಪದಕ ಗೆದ್ದರು.
- ಡೈವಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಇದೇ ಮೊದಲ ಬಾರಿಗೆ ಪದಕದ ಸಾಧನೆ ಮಾಡಿದ್ದಾರೆ. ಈ ಮೂಲಕ ಮುಂದಿನ ವರ್ಷ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೂ ಅರ್ಹತೆ ಪಡೆಯುವ ಹೊಸ್ತಿಲಲ್ಲಿದ್ದಾರೆ.
- ಸಾಯಿರಾಮ್ ಮತ್ತು ವಿಲ್ಸನ್ ಅವರು 300.66 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಚೀನಾದ ಜಾಂಗ್ಯು ಕುಯಿ ಮತ್ತು ಜಾನ್‌ಹಾಂಗ್ ಕ್ಸು (381.75) ಮತ್ತು ಮಲೇಷ್ಯಾದ ಬರ್ಟ್ರಾಂಡ್ ರೋಡಿಕ್ಟ್ ಲಿಸೆಸ್ ಮತ್ತು ಎನ್ರಿಕ್ ಎಂ. ಹೆರಾಲ್ಡ್ (329.73) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.
- 1,500 ಮೀಟರ್ ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್ ಹಾಗೂ 200 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ರಿಷಭ್ ದಾಸ್ ಅವರು ಕಂಚು ಜಯಿಸಿದರು.
- ಕೈಗಾರಿಕಾ ಉತ್ಪಾದನೆ ಏರಿಕೆ
ಸಂದರ್ಭ: ದೇಶದ ಕೈಗಾರಿಕಾ ಉತ್ಪಾದನೆಯು ಆಗಸ್ಟ್‌ನಲ್ಲಿ ಶೇ 4ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.
- ಗಣಿಗಾರಿಕೆ ವಲಯದ ಚಟುವಟಿಕೆ ಉತ್ತಮವಾಗಿದೆ. ಹೀಗಾಗಿ, ಕೈಗಾರಿಕಾ ಉತ್ಪಾದನೆಯು ಪ್ರಗತಿ ಕಂಡಿದೆ ಎಂದು ಅದು ತಿಳಿಸಿದೆ. ಕೈಗಾರಿಕಾ ಉತ್ಪಾದನೆಯು ಜುಲೈನಲ್ಲಿ ಶೇ 4.3ರಷ್ಟು ಬೆಳವಣಿಗೆ ಕಂಡಿತ್ತು. 2024ರ ಆಗಸ್ಟ್‌ನಲ್ಲಿ ಉತ್ಪಾದನೆಯ ಬೆಳವಣಿಗೆಯು ಹೇಳಿಕೊಳ್ಳುವಷ್ಟು ಮಟ್ಟದಲ್ಲಿ ಇರಲಿಲ್ಲ ಎಂದು ಹೇಳಿದೆ.
- ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಗಣಿಗಾರಿಕೆ ವಲಯದ ಉತ್ಪಾದನೆ ಶೇ 4.3ರಷ್ಟು ಆಗಿತ್ತು. ಅದು ಈ ಬಾರಿ ಶೇ 6ರಷ್ಟಾಗಿದೆ. ತಯಾರಿಕಾ ವಲಯದ ಬೆಳವಣಿಗೆ ಶೇ 3.8 ಮತ್ತು ವಿದ್ಯುತ್ ವಲಯದ ಪ್ರಗತಿ ಶೇ 4.1ರಷ್ಟಾಗಿದೆ.
- ಕಳೆದ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಅವಧಿಯಲ್ಲಿ ಐಐಪಿ ಬೆಳವಣಿಗೆ ಶೇ 4.3ರಷ್ಟಾಗಿತ್ತು. ಈ ಬಾರಿ ಅದು ಶೇ 2.8ಕ್ಕೆ ಇಳಿದಿದೆ.
- ‘ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಕೈಗಾರಿಕಾ ಉತ್ಪಾದನೆ ಇಳಿಕೆ ಕಂಡಿದೆ. ಜುಲೈನಲ್ಲಿ ತಯಾರಿಕಾ ವಲಯದ ಪ್ರಗತಿ ಶೇ 6ರಷ್ಟಿತ್ತು. ಇದು ಆಗಸ್ಟ್‌ನಲ್ಲಿ ಶೇ 3.8ಕ್ಕೆ ಇಳಿದಿದೆ. ಇದೇ ಬೆಳವಣಿಗೆ ಇಳಿಕೆಗೆ ಕಾರಣ’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
- ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಈ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತದೆ.