Fri. Oct 10th, 2025

7 ವರ್ಷ ಬಳಿಕ ಮೋದಿ ಚೀನಾಕ್ಕೆ
ಎರಡು ದಿನಗಳ ಜಪಾನ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಶನಿವಾರ ಚೀನಾದ ತಿಯಾನ್‌ಜಿನ್‌ಗೆ ಬಂದಿಳಿದರು.

  • ತಿಯಾನ್‌ಜಿನ್‌ ನಗರದಲ್ಲಿ ‘ಎಸ್‌ಸಿಒ’ ಶೃಂಗಸಭೆ ನಡೆಯಲಿದೆ. ಸುಮಾರು ಏಳು ವರ್ಷಗಳ ಬಳಿಕ ಮೋದಿ ಅವರು ಚೀನಾಕ್ಕೆ ತೆರಳಿದ್ದಾರೆ.
  • ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿನ ಸಂಘರ್ಷದ ಬಳಿಕ ಭಾರತ–ಚೀನಾ ನಡುವಿನ ಸಂಬಂಧ ಹಳಸಿತ್ತು. ಸಂಬಂಧ ಸುಧಾರಣೆ ನಿಟ್ಟಿನಲ್ಲೂ ಮೋದಿ ಅವರ ಭೇಟಿ ಪ್ರಾಮುಖ್ಯ ಪಡೆದಿದೆ.
  • ಇನ್ನೊಂದೆಡೆ ಅಮೆರಿಕದ ಸುಂಕ ಸಮರದಿಂದ (ಶೇ 50ರಷ್ಟು ಸುಂಕ) ಮೋದಿ ಅವರು ಜಪಾನ್‌, ಚೀನಾ ಸೇರಿ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಆರ್ಥಿಕ ಪಾಲುದಾರಿಕೆ ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ನಿಗದಿಯಾಗಿರುವ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
  • ‘ಎಸ್‌ಸಿಒ’ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವಿವಿಧ ದೇಶಗಳ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ.
  • ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯದ ನ್ಯಾಟೊ ಮಿಲಿಟರಿ ಮೈತ್ರಿಕೂಟದ ವಿರುದ್ಧ, ಮಧ್ಯ ಏಷ್ಯಾದ ರಾಷ್ಟ್ರಗಳ ನಡುವಿನ ಸಂಬಂಧ ಗಾಢವಾಗಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಚೀನಾಕ್ಕೂ ‘ಎಸ್‌ಸಿಒ’ ವೇದಿಕೆ ಮಹತ್ವದ್ದಾಗಿದೆ.
  • ಪುಟಿನ್ ಮಾತುಕತೆ: ಉಕ್ರೇನ್‌ – ರಷ್ಯಾ ಸಂಘರ್ಷದ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿದ್ದ ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್‌ ಅವರೊಂದಿಗೆ ಪುಟಿನ್‌ ಮಾತುಕತೆ ನಡೆಸಲಿದ್ದಾರೆ. ಇರಾನ್‌ ಅಧ್ಯಕ್ಷ ಪೆಜೆಶ್ಕಿಯಾನ್‌ ಅವರೊಂದಿಗೆ ಟೆಹರಾನ್‌ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್‌ ಹೇಳಿದೆ.
  • 20ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗಿ: ಶಾಂಘೈ ಸಹಕಾರ ಸಂಘಟನೆಯಲ್ಲಿ ಚೀನಾ, ಭಾರತ, ರಷ್ಯಾ, ಪಾಕಿಸ್ತಾನ, ಇರಾನ್‌, ಕಜಾಕಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ಉಜ್ಬೆಕಿಸ್ತಾನ ಮತ್ತು ಬೆಲಾರಸ್‌ ಸೇರಿ 10 ಸದಸ್ಯ ದೇಶಗಳಿವೆ.
  • ಇದಲ್ಲದೆ 16 ದೇಶಗಳು ‘ಎಸ್‌ಸಿಒ’ನ ವೀಕ್ಷಕರು ಅಥವಾ ಸಂವಾದ ಪಾಲುದಾರ ದೇಶಗಳಾಗಿವೆ. ತಿಯಾನ್‌ಜಿನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ 20ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಲಿದ್ದಾರೆ.

ಜಿನ್‌ಪಿಂಗ್ ಜತೆ ಚರ್ಚೆ ಇಂದು

  • ಶೃಂಗಸಭೆ ಸಂದರ್ಭದಲ್ಲಿ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜಗತ್ತಿನಾದ್ಯಂತ ಬಹುತೇಕ ಎಲ್ಲ ಪ್ರಮುಖ ದೇಶಗಳ ಆರ್ಥಿಕತೆ ಮೇಲೆ ಅಮೆರಿಕದ ಸುಂಕ ಹೇರಿಕೆಯು ನಕಾರಾತ್ಮಕ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಚೀನಾ ಅಧ್ಯಕ್ಷರೊಂದಿಗೆ ನಡೆಸಲಿರುವ ಮಾತುಕತೆ ಮಹತ್ವ ಪಡೆದುಕೊಂಡಿದೆ.ಭಾರತ– ಚೀನಾ ಆರ್ಥಿಕ ಸಹಕಾರ ವಿಸ್ತರಣೆ ಮತ್ತು ಗಡಿ ವಿಚಾರವೂ ಉಭಯ ಮುಖಂಡರ ನಡುವಿನ ಸಭೆಯಲ್ಲಿ ಚರ್ಚೆಗೆ ಬರಲಿದೆ.
  • ‘ಜಾಗತಿಕವಾಗಿ ಆರ್ಥಿಕ ಸ್ಥಿರತೆ ತರುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವುದು ಭಾರತ ಮತ್ತು ಚೀನಾ ಎರಡೂ ದೇಶಗಳಿಗೆ ಮಹತ್ವದ್ದು, ಭಾರತ–ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧವು, ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಸಮೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಮೋದಿ ಹೇಳಿದ್ದಾರೆ.

‘ಸುವರ್ಣ ಅಧ್ಯಾಯ’

  • ‘ಜಪಾನ್‌ ಭೇಟಿಯು ಫಲದಾಯಕವಾಗಿದೆ. ಉಭಯ ದೇಶಗಳ ನಡುವೆ ಮಹತ್ವದ 13 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರ ಪ್ರಯೋಜನ ದೇಶದ ಜನರಿಗೆ ಲಭಿಸಲಿದೆ. ಜಪಾನ್‌ ಪ್ರಧಾನಿ ಶಿಗೆರು ಇಶಿಬಾ, ಅಲ್ಲಿನ ಸರ್ಕಾರ ಮತ್ತು ಜನರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
  • ‘ಭಾರತ – ಜಪಾನ್‌ ನಡುವೆ ಆರ್ಥಿಕ ಪಾಲುದಾರಿಕೆಯ ಹೊಸ ಮತ್ತು ಸುವರ್ಣ ಅಧ್ಯಾಯವೊಂದು ಆರಂಭಗೊಂಡಿದೆ’ ಎಂದು ಪ್ರಧಾನಿ ಹೇಳಿದ್ದಾರೆ.

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments