Fri. Oct 10th, 2025

  • ರಕ್ಷಿತ್‌, ಅರ್ಚನಾ ಅತ್ಯುತ್ತಮ ನಟನಟಿ

ಸಂದರ್ಭ: 2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟಗೊಂಡಿದ್ದು, ರಕ್ಷಿತ್‌ ಶೆಟ್ಟಿ ಅವರು ‘ಚಾರ್ಲಿ 777’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು, ಅರ್ಚನಾ ಜೋಯಿಸ್‌ ‘ಮ್ಯೂಟ್‌’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

  • ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಅತ್ಯುತ್ತಮ ಮನರಂಜನಾ ಚಿತ್ರ’ ಎಂಬ ಹಿರಿಮೆಗೆ ಪಾತ್ರವಾಗಿದೆ.
  • ರಘು ಕೆ.ಎಂ ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’ ಮೊದಲನೇ ಅತ್ಯುತ್ತಮ ಚಿತ್ರವಾಗಿದ್ದು, ಕಿರಣ್‌ ರಾಜ್‌ ನಿರ್ದೇಶನದ ‘ಚಾರ್ಲಿ 777’ ಎರಡನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
  • ಹೃದಯ ಶಿವ ನಿರ್ದೇಶನದ ‘ಬಿಸಿಲು ಕುದುರೆ’ ಮೂರನೇ ಅತ್ಯುತ್ತಮ ಚಿತ್ರವಾಗಿದೆ. ಕೃಷ್ಣಮೂರ್ತಿ ಚಮರಂ ನಿರ್ದೇಶನದ ‘ಭಾರತೀಯ ಪ್ರಜೆಗಳಾದ ನಾವು’ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರವಾಗಿ ಆಯ್ಕೆಗೊಂಡಿದೆ.
  • ‘ರತ್ನನ್‌ ಪ್ರಪಂಚ’ ಚಿತ್ರಕ್ಕಾಗಿ ಪ್ರಮೋದ್‌ ಅತ್ಯುತ್ತಮ ಪೋಷಕ ನಟ ಹಾಗೂ ಉಮಾಶ್ರೀ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಕರ್ತ ಸದಾಶಿವ ಶೆಣೈ ಅಧ್ಯಕ್ಷತೆಯಲ್ಲಿ ಆಯ್ಕೆ ಸಲಹಾ ಸಮಿತಿ ರಚಿಸಲಾಗಿತ್ತು.
  • ಕೆಎಸ್ಆರ್ಟಿಸಿಶಕ್ತಿವಿಶ್ವದಾಖಲೆ

ಸಂದರ್ಭ: ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಯಾದ ‘ಶಕ್ತಿ’ ಯೋಜನೆಯಡಿ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು 500 ಕೋಟಿ‌ ಬಾರಿ ಉಚಿತವಾಗಿ ಪ್ರಯಾಣ ಮಾಡಿರುವುದು ವಿಶ್ವದಾಖಲೆಗೆ ಸೇರ್ಪಡೆಯಾಗಿದೆ.

  • ಇತ್ತೀಚೆಗಷ್ಟೇ ಗೋಲ್ಡನ್ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದ ಉಚಿತ ಪ್ರಯಾಣವು ಈಗ ಇಂಟರ್‌ ನ್ಯಾಷನಲ್‌ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ವರ್ಲ್ಡ್‌ ರೆಕಾರ್ಡ್ ಆಫ್‌ ಎಕ್ಸೆಲೆನ್ಸ್‌ ಆಗಿ ದಾಖಲಾಗಿದೆ.
  • ನಿಗಮಗಳ ಅಧಿಕಾರಿಗಳು, ನೌಕರರ ಪರಿಶ್ರಮ ಮತ್ತು ಪ್ರಯಾಣಿಕರ ಬೆಂಬಲದಿಂದ ಈ ಸಾಧನೆ ಆಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
  • ಚಿನ್ನದ ಬೆಲೆ ಅನಿಶ್ಚಿತತೆಯ ಮಾಪಕ

ಸಂದರ್ಭ:  ‘ಕಚ್ಚಾ ತೈಲದ ಬೆಲೆಯು ತೀರಾ ಈಚಿನವರೆಗೆ ಜಾಗತಿಕ ಅನಿಶ್ಚಿತತೆಗಳ ಮಾಪಕದಂತೆ ಕೆಲಸ ಮಾಡು ತ್ತಿತ್ತು. ಈಗ ಆ ಸ್ಥಾನವನ್ನು ಚಿನ್ನದ ಬೆಲೆಯು ಆಕ್ರಮಿಸಿಕೊಂಡಿರುವಂತೆ ಕಾಣುತ್ತಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹೇಳಿದ್ದಾರೆ.

  • ವಿತ್ತೀಯ ದೃಷ್ಟಿಯಿಂದ ಈ ಸಂದರ್ಭದಲ್ಲಿ ಜಗತ್ತಿನ ಬಹುತೇಕ ದೇಶಗಳು ಒತ್ತಡಕ್ಕೆ ಸಿಲುಕಿವೆ. ಇಂದಿನ ವ್ಯಾಪಾರ ನೀತಿಗಳು ಕೆಲವು ದೇಶಗಳ ಆರ್ಥಿಕ ಬೆಳವಣಿಗೆಯನ್ನು ಹಾಳು ಮಾಡಬಹುದು. ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳಲ್ಲಿ ಒಂದಿಷ್ಟು ಕುಸಿತ ಎದುರಾಗಬಹುದು ಎಂದು ಮಲ್ಹೋತ್ರಾ ಅವರು ಎಚ್ಚರಿಕೆ ನೀಡಿದ್ದಾರೆ.
  • ರೆಪೊ ದರವನ್ನು ಶೇಕಡ 5.5ರ ಮಟ್ಟದಲ್ಲಿ ಕಾಯ್ದುಕೊಳ್ಳುವ ತೀರ್ಮಾನವನ್ನು ಬುಧವಾರ ತೆಗೆದುಕೊಂಡ ಸಂದರ್ಭದಲ್ಲಿ ಆರ್‌ಬಿಐ, ಜಾಗತಿಕ ಅರ್ಥ ವ್ಯವಸ್ಥೆಯು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಗಟ್ಟಿತನವನ್ನು ತೋರಿಸಿದೆಯಾದರೂ, ಮುನ್ನೋಟವು ಅಷ್ಟೊಂದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ.
  • ‘ಹಿಂದಿನ ದಶಕದಲ್ಲಿ ಜಾಗತಿಕ ಮಟ್ಟದ ಬಿಕ್ಕಟ್ಟುಗಳು ಕಚ್ಚಾ ತೈಲ ಬೆಲೆ ಏರಿಕೆಗೆ ಕಾರಣವಾಗುತ್ತಿದ್ದವು. ಅಂತಹ ಬಿಕ್ಕಟ್ಟುಗಳು ಈಗ ಎದುರಾಗಿದ್ದರೂ, ಕಚ್ಚಾ ತೈಲದ ಬೆಲೆಯು ಒಂದು ಹಂತದಲ್ಲಿ ಮಾತ್ರ ಏರಿಳಿತ ಕಾಣುತ್ತಿದೆ. ದೇಶದ ಒಟ್ಟು ಜಿಡಿಪಿಯಲ್ಲಿ ಕಚ್ಚಾ ತೈಲದ ಮಹತ್ವವು ಕಡಿಮೆ ಆಗಿರುವುದು ಇದಕ್ಕೆ ಕಾರಣ ಆಗಿರಬಹುದು. ಇದು ಭಾರತದಲ್ಲಿ ಮಾತ್ರವಲ್ಲದೆ, ವಿಶ್ವದ ಇತರೆಡೆಗಳಲ್ಲಿಯೂ ಆಗಿದೆ’ ಎಂದು ಮಲ್ಹೋತ್ರಾ ಹೇಳಿದ್ದಾರೆ. ‘ಬಹುಶಃ ಈಗ ಚಿನ್ನದ ಬೆಲೆಯು ಜಾಗತಿಕ ಅನಿಶ್ಚಿತತೆಯ ಮಾಪಕದಂತೆ ಕೆಲಸ ಮಾಡುತ್ತಿದೆ’ ಎಂದು ಅವರು ಕೌಟಿಲ್ಯ ಅರ್ಥಶಾಸ್ತ್ರ ಸಮಾವೇಶದಲ್ಲಿ ಹೇಳಿದ್ದಾರೆ.
  • ತಂತ್ರಜ್ಞಾನ ವಲಯದ ಕೆಲವು ಷೇರುಗಳ ಬೆಲೆಯು ಜಾಗತಿಕ ಷೇರುಪೇಟೆ ಗಳ ಒಟ್ಟಾರೆ ಏರಿಕೆಗೆ ಕಾರಣವಾಗಿರುವ ಬಗ್ಗೆ ಅನಿಸಿಕೆ ಹಂಚಿಕೊಂಡ ಅವರು, ‘ಷೇರುಪೇಟೆಗಳಲ್ಲಿ ಕುಸಿತವೊಂದು ಎದುರಾಗಬಹುದು’ ಎಂದು ಎಚ್ಚರಿಸಿದ್ದಾರೆ.
  • ದೇಶದ ಅರ್ಥ ವ್ಯವಸ್ಥೆಯ ಮೂಲಭೂತ ಅಂಶಗಳು ಬಲಿಷ್ಠವಾಗಿ ಇವೆ. ಜಗತ್ತಿನಲ್ಲಿ ಅನಿಶ್ಚಿತತೆ ಇದ್ದರೂ ಭಾರತದಲ್ಲಿ ಸ್ಥಿರತೆ ಇದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.
  • ಹಣದುಬ್ಬರ ಕಡಿಮೆ ಇರುವುದು, ವಿದೇಶಿ ವಿನಿಮಯ ಸಂಗ್ರಹವು ಚೆನ್ನಾಗಿ ಇರುವುದು ಹಾಗೂ ಬ್ಯಾಂಕ್‌ ಮತ್ತು ಕಾರ್ಪೊರೇಟ್ ಕಂಪನಿಗಳ ಲೆಕ್ಕಪತ್ರವು ಸುಸ್ಥಿತಿಯಲ್ಲಿ ಇರುವುದು ಇದಕ್ಕೆ ಕಾರಣ ಎಂದಿದ್ದಾರೆ.
  • ಭಾರತದೊಂದಿಗೆ ವ್ಯಾಪಾರಅಸಮತೋಲನ ಸರಿಪಡಿಸಿ

ಸಂದರ್ಭ: ಅಧಿಕ ಪ್ರಮಾಣದ ಕಚ್ಚಾತೈಲ ಖರೀದಿಸುತ್ತಿರುವ ಭಾರತದೊಂದಿಗೆ ವ್ಯಾಪಾರ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಹಾಗೂ ಔಷಧವನ್ನು ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ತನ್ನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

  • ಇದೇ ಡಿಸೆಂಬರ್‌ನಲ್ಲಿ ನಡೆಯುವ ವಾರ್ಷಿಕ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವುದನ್ನು ಖಚಿತಪಡಿಸಿದ ಬೆನ್ನಲ್ಲೇ ಪುಟಿನ್‌ ಈ ಘೋಷಣೆ ಮಾಡಿದ್ದಾರೆ.
  • ರಷ್ಯಾ ದಕ್ಷಿಣ ಭಾಗದ ಸೋಚಿ ಪಟ್ಟಣದಲ್ಲಿರುವ ‘ಬ್ಲ್ಯಾಕ್‌ ಸೀ’ ರೆಸಾರ್ಟ್‌ನಲ್ಲಿ ಗುರುವಾರ ತಡರಾತ್ರಿ ನಡೆದ ಭಾರತ ಸೇರಿದಂತೆ 140 ದೇಶದ ಭದ್ರತೆ ಹಾಗೂ ಭೌಗೋಳಿಕ ರಾಜಕೀಯ ತಜ್ಞರನ್ನು ಒಳಗೊಂಡ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.
  • ‘ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕವು ಹೆಚ್ಚಿನ ಸುಂಕ ಹೇರಿದ್ದರಿಂದ ಉಂಟಾದ ನಷ್ಟಕ್ಕೆ ಪ್ರತಿಯಾಗಿ ಅಲ್ಲಿಂದ ಹೆಚ್ಚಿನ ವಸ್ತುಗಳನ್ನು ಖರೀದಿಸುವ ಮೂಲಕ ಸಮತೋಲನಗೊಳಿಸಲಾಗುತ್ತದೆ. ಆ ಮೂಲಕ ಸಾರ್ವಭೌಮ ರಾಷ್ಟ್ರ ಪ್ರತಿಷ್ಠೆಯೂ ಹೆಚ್ಚಲಿದೆ’ ಎಂದು ತಿಳಿಸಿದ್ದಾರೆ.
  • ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕವು ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸುತ್ತಿದ್ದು, ಶೇಕಡಾ 50ರಷ್ಟು ತೆರಿಗೆ ವಿಧಿಸಿದಂತಾಗಿದೆ. ಇದರಿಂದ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ವಸ್ತುಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.
  • ಈ ವಿಚಾರವನ್ನು ಉಲ್ಲೇಖಿಸಿದ ಪುಟಿನ್‌, ‘ವ್ಯಾಪಾರ ಅಸಮತೋಲನ ತೆಗೆದುಹಾಕುವ ನಿಟ್ಟಿನಲ್ಲಿ ಭಾರತದ ಕೃಷಿ, ಔಷಧಗಳನ್ನು ಹೆಚ್ಚಿನ ಸಂಖ್ಯೆಯನ್ನು ಖರೀದಿಸಲಾಗುತ್ತದೆ. ಔಷಧ, ಔಷಧ ಉತ್ಪನ್ನಗಳ ವಿಚಾರದಲ್ಲಿ ನಮ್ಮ ಕಡೆಯಿಂದ ಕ್ರಮ ಕೈಗೊಳ್ಳಬಹುದು’ ಎಂದು ತಿಳಿಸಿದ್ದಾರೆ.
  • ಮೊದಲ ಮಹಿಳಾ ಆರ್ಚ್ ಬಿಷಪ್ಸೆರಾ

ಸಂದರ್ಭ: ಮೊಟ್ಟ ಮೊದಲ ಬಾರಿಗೆ ಮಹಿಳಾ ಆರ್ಚ್‌ಬಿಷಪ್‌ ನೇಮಕ ಮಾಡುವ ಮೂಲಕ ಚರ್ಚ್‌ ಆಫ್‌ ಇಂಗ್ಲೆಂಡ್‌ ಇತಿಹಾಸ ನಿರ್ಮಾಣ ಮಾಡಿದೆ. ಕ್ಯಾಂಟರ್‌ಬರಿ ಚರ್ಚ್‌ನ ಆರ್ಚ್‌ಬಿಷಪ್‌ ಆಗಿ ಸೆರಾ ಮುಲ್ಲಲಿ ಅವರನ್ನು ಶುಕ್ರವಾರ ಘೋಷಣೆ ಮಾಡಲಾಗಿದೆ.

  • ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿ ರೆವರೆಂಡ್ ಜಸ್ಟಿನ್‌ ವಿಲ್ಬೆ ಅವರು ಕಳೆದ ವರ್ಷ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಸೆರಾ ಅವರು 2018ರಿಂದ ಬಿಷಪ್‌ ಆಗಿದ್ದರು.
  • 106ನೇ ಆರ್ಚ್‌ಬಿಷಪ್‌ ಆಗಿ ಸೆರಾ ಅವರ ನೇಮಕಕ್ಕೆ ಮೂರನೇ ಕಿಂಗ್‌ ಚಾರ್ಲ್ಸ್‌ ಅಧಿಕೃತ ಒಪ್ಪಿಗೆ ನೀಡಿದ್ದರು. ಶುಶ್ರೂಷಕಿಯಾಗಿದ್ದ ಸೆರಾ ಅವರ ನೇಮಕವನ್ನು ಇಂಗ್ಲೆಂಡ್‌ ಪ್ರಧಾನಿ ಕೀರ್ ಸ್ಟಾರ್ಮರ್‌ ಸ್ವಾಗತಿಸಿದ್ದಾರೆ.
  • 63 ವರ್ಷದ ಸೆರಾ 106ನೇ ಆರ್ಚ್‌ಬಿಷಪ್‌ ಆಗಲಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಅವರ ನೇಮಕವನ್ನು ದೃಢೀಕರಿಸಲಾಗುತ್ತದೆ.
  • ಶಾಂತಿ ಒಪ್ಪಂದಕ್ಕೆ ಸಹಿ: ಹಮಾಸ್ಗೆ ಗಡುವು

ಸಂದರ್ಭ: ಗಾಜಾದಲ್ಲಿ ಯುದ್ಧ ಕೊನೆಗೊಳಿಸುವ ಉದ್ದೇಶದಿಂದ ಸಿದ್ಧಪಡಿಸಿರುವ 20 ಅಂಶಗಳ ಯೋಜನೆಗೆ, ಅಮೆರಿಕ ಕಾಲಮಾನದ ಪ್ರಕಾರ ಭಾನುವಾರ ಸಂಜೆ 6 ಗಂಟೆಯೊಳಗೆ (ಭಾರತೀಯ ಕಾಲಮಾನ ನಸುಕಿನ ಜಾವ 3.30) ಸಹಿ ಹಾಕಬೇಕು ಎಂದು ಹಮಾಸ್‌ ಸಂಘಟನೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ತಾಕೀತು ಮಾಡಿದ್ದಾರೆ.

  • ‘ಇದು ಕೊನೆಯ ಅವಕಾಶ. ಒಂದು ವೇಳೆ ಹಮಾಸ್‌ ಈ ಒಪ್ಪಂದಕ್ಕೆ ಸಹಿ ಹಾಕದಿ ದ್ದರೆ ಹಿಂದೆಂದೂ ಕಂಡಿರದಂತಹ ಭೀಕರ ದಾಳಿಗಳನ್ನು ಹಮಾಸ್‌ ಎದುರಿಸಬೇಕಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.
  • ಈ ಕುರಿತು ಅವರು ಪೋಸ್ಟ್‌ ಮಾಡಿದ್ದು, ‘ಅಮಾಯಕ ಪ್ಯಾಲೆಸ್ಟೀನಿಯನ್ನರು ಕೂಡಲೇ ಗಾಜಾದಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು’ ಎಂದೂ ಅವರು ಹೇಳಿದ್ದಾರೆ.

‘ಕಾಲಾವಕಾಶ ಅಗತ್ಯ’

  • ಗಾಜಾಪಟ್ಟಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತಾಪಿಸಿರುವ 20 ಅಂಶಗಳ ಯೋಜನೆಯನ್ನು ಅಧ್ಯಯನ ನಡೆಸಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಹಮಾಸ್‌ ಸಂಘಟನೆ ಹೇಳಿದೆ. ‘ಟ್ರಂಪ್‌ ಅವರ ಯೋಜನೆ ಬಗ್ಗೆ ಹಮಾಸ್‌ ಸಮಾಲೋಚನೆ ನಡೆಸುತ್ತಿದೆ. ಇದಕ್ಕಾಗಿ ಸ್ವಲ್ಪ ಕಾಲಾವಕಾಶ ಅಗತ್ಯವಿರುವ ಬಗ್ಗೆ ಸಂಧಾನಕಾರರಿಗೆ ಮಾಹಿತಿ ನೀಡಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ, ಹಮಾಸ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ವೇಟ್ಲಿಫ್ಟಿಂಗ್‌: ಮೀರಾಗೆ ಬೆಳ್ಳಿ

ಸಂದರ್ಭ: ಅನುಭವಿ ಮೀರಾಬಾಯಿ ಚಾನು ಅವರು ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ ಷಿಪ್‌ನ ಮಹಿಳೆಯರ 48 ಕೆ.ಜಿ. ವಿಭಾಗ ದಲ್ಲಿ ಬೆಳ್ಳಿ ಪದಕ ಗೆದ್ದು ಕೊಂಡರು. ಇದು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಅವರಿಗೆ ಮೂರನೇ ಪದಕ.

  • ಈ ಹಿಂದೆ 2017 ಮತ್ತು 2022ರಲ್ಲೂ ಅವರು ರಜತ ಪದಕ ಜಯಿಸಿದ್ದರು. ಅವರು ಒಟ್ಟು 199 ಕೆ.ಜಿ. ಭಾರ ಎತ್ತಿದರು. 31 ವರ್ಷ ವಯಸ್ಸಿನ ಚಾನು ಸ್ನಾಚ್‌ನಲ್ಲಿ 84 ಕೆ.ಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ115 ಕೆ.ಜಿ ಎತ್ತಿದರು.
  • ಸ್ನಾಚ್‌ ಸ್ಪರ್ಧೆಯ ವೇಳೆ ಅವರು ಪರದಾಡಿದರು. 87 ಕೆ.ಜಿ. ಎತ್ತಲು ಹೋಗಿ ಎರಡು ಸಲ ವಿಫಲರಾದರು. ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ ಅವರು ಮೂರೂ ಯತ್ನಗಳಲ್ಲಿ (109, 112 ಮತ್ತು 115 ಕೆ.ಜಿ) ಸರಾಗವಾಗಿ ಭಾರ ಎತ್ತಿದರು. ಅವರು 115 ಕೆ.ಜಿ. ಭಾರವನ್ನು ಇದಕ್ಕಿಂತ ಮೊದಲು ಟೋಕಿಯೊ ಒಲಿಂಪಿಕ್ಸ್‌ನಲ್ಲಿ (2021) ಎತ್ತಿದ್ದರು.
  • ಉತ್ತರ ಕೊರಿಯಾದ ರಿ ಸಾಂಗ್ ಗುಮ್ 213 ಕೆ.ಜಿ. ಭಾರ (91 ಕೆ.ಜಿ+ 122 ಕೆ.ಜಿ) ಎತ್ತಿ ಚಿನ್ನ ಗೆದ್ದರಲ್ಲದೇ, ಆ ಹಾದಿಯಲ್ಲಿ ಕ್ಲೀನ್ ಆ್ಯಂಡ್‌ ಜರ್ಕ್‌ ಮತ್ತು ಒಟ್ಟು ತೂಕ ವಿಭಾಗದಲ್ಲಿ ನೂತನ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
  • ಥಾಯ್ಲೆಂಡ್‌ನ ಥಾನ್ಯಥಾನ್ ಸುಕ್ಚೆರೋನ್‌ ಒಟ್ಟು 198 ಕೆ.ಜಿ. ಭಾರ (88+110 ಕೆ.ಜಿ) ಎತ್ತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
  • ನಿಶಾದ್ಕುಮಾರ್‌, ಸಿಮ್ರನ್ಗೆ ಚಿನ್ನ

ಸಂದರ್ಭ: ಭಾರತದ ನಿಶಾದ್ ಕುಮಾರ್‌ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಹೈಜಂಪ್‌ ಟಿ47 ಸ್ಪರ್ಧೆಯಲ್ಲಿ ನೂತನ ಏಷ್ಯನ್ ದಾಖಲೆಯೊಡನೆ ಚಿನ್ನ ಗೆದ್ದರು. ಈ ಕೂಟದ ಏಳನೇ ದಿನ ಸಿಮ್ರನ್‌ ಶರ್ಮಾ ಅವರು ವೈಯಕ್ತಿಕ ಶ್ರೇಷ್ಠ ಅವಧಿಯೊಡನೆ ಮಹಿಳೆಯರ 100 ಮೀ. (ಟಿ12) ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

  • ಈ ಹಿಂದೆ ಹಲವು ಅಂತರ ರಾಷ್ಟ್ರೀಯ ಕೂಟಗಳಲ್ಲಿ ಎರಡನೇ ಸ್ಥಾನ ಗಳಿಸಿದ್ದ ನಿಶಾದ್‌ 2.14 ಮೀ. ಜಿಗಿಯುವ  ಮೂಲಕ ಮೊದಲ ಬಾರಿ ವಿಶ್ವ ಕೂಟದಲ್ಲಿ ಚಿನ್ನ ಗೆದ್ದರು. ಅವರು  ಟೋಕಿಯೊ ಮತ್ತು ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತು ಎರಡು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಬೆಳ್ಳಿ ಗೆದ್ದಿದ್ದರು. ಮೂರು ಬಾರಿಯ ವಿಶ್ವ ಚಾಂಪಿಯನ್ ಅಮೆರಿಕದ ರೊಡೆರಿಕ್‌ ಟೌನ್ಸೆಂಡ್ (2.03 ಮೀ.) ಎರಡನೇ ಸ್ಥಾನಕ್ಕೆ ಸರಿದರು.
  • ಇಲ್ಲಿ ಚಿನ್ನ ಖಚಿತವಾದ ನಂತರ ನಿಶಾದ್ ಅವರು ವಿಶ್ವ ದಾಖಲೆಗೆ ಯತ್ನಿಸಿದರೂ 2.18 ಮೀ. ಜಿಗಿಯಲು ಹೋಗಿ ವಿಫಲರಾದರು. ಮುಂಗೈ ಕಳೆದುಕೊಂಡ ಸ್ಪರ್ಧಿಗಳು ಈ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ.
  • ಸಿಮ್ರನ್‌ 100 ಮೀ. ಓಟವನ್ನು 11.95 ಸೆ.ಗಳಲ್ಲಿ ಕ್ರಮಿಸಿದರು. ಈ ವಿಭಾಗದ ಅಥ್ಲೀಟುಗಳು ಭಾಗಶಃ ದೃಷ್ಟಿದೋಷ ಹೊಂದಿರುತ್ತಾರೆ.
  • ಭಾರತದ ಪ್ರೀತಿ ಪಾಲ್ 30.903 ಸೆ.ಗಳೊಂದಿಗೆ 200 ಮೀ. ಓಟದಲ್ಲಿ (ಟಿ35) ಕಂಚಿನ ಪದಕ ಗೆದ್ದುಕೊಂಡರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments