ಸಾವಿಗೆ ಕೆಮ್ಮಿನ ಸಿರಪ್ ನಂಟು ತನಿಖೆ ಚುರುಕು
ನವದೆಹಲಿ/ಹೈದರಾಬಾದ್/ಚೆನ್ನೈ (ರಾಯಿಟರ್ಸ್/ಪಿಟಿಐ): ಮಧ್ಯಪ್ರದೇಶ ಹಾಗೂ ರಾಜಸ್ಥಾನ ದಲ್ಲಿ ಒಟ್ಟು 11 ಮಕ್ಕಳ ಸಾವಿಗೆ ಕಲುಷಿತ ಕೆಮ್ಮಿನ ಸಿರಪ್ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
ತಮಿಳುನಾಡಿನಲ್ಲಿ ತಯಾರಾದ ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ನ ಮಾದರಿಗಳಲ್ಲಿ ‘ಡೈಇಥಿಲೀನ್ ಗ್ಲೈಕೋಲ್(ಡಿಇಜಿ) ಎಂಬ ದ್ರಾವಣದ ಪ್ರಮಾಣ ಅನುಮತಿಸಿದ ಮಿತಿಗಿಂತಲೂ ಅಧಿಕ ಮಟ್ಟದಲ್ಲಿ ಇತ್ತು ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಮಕ್ಕಳ ಸಾವಿಗೂ, ಈ ಕೆಮ್ಮಿನ ಸಿರಪ್‌ಗೂ ನಂಟು ಇದೆಯೇ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಕಾಂಚಿಪುರಂ ಜಿಲ್ಲೆಯ ಸುಂಗುವರಛತ್ರಂನಲ್ಲಿರುವ ಸ್ರೇಸನ್ ಫಾರ್ಮಾ ಕಂಪನಿಯ ಘಟಕದಲ್ಲಿ ‘ಕೋಲ್ಡ್ರಿಫ್’ ಅನ್ನು ತಯಾರಿಸಲಾಗುತ್ತಿದೆ. ಈ ಸಿರಪ್‌ಅನ್ನು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಪುದುಚೇರಿಗೆ ಪೂರೈಸ ಲಾಗುತ್ತಿದೆ.
ಮಧ್ಯಪ್ರದೇಶದ ಛಿಂದ್ವಾರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 9 ಮಕ್ಕಳು ಹಾಗೂ ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಈ ಸಾವುಗಳಿಗೆ ಕೆಮ್ಮಿನ ಸಿರಪ್ ಸೇವನೆಯೇ ಕಾರಣ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಸಚಿವಾಲಯ ತನಿಖೆಗೆ ಮುಂದಾಗಿದೆ. ‘ಡಿಇಜಿ’ ವಿಷಕಾರಿ ದ್ರಾವಣ ವಾಗಿದ್ದು, ಅದನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಅನೇಕ ದೇಶ ಗಳಲ್ಲಿ ಸಂಭವಿಸಿದ ಸಾವುಗಳಿಗೆ ಈ ದ್ರಾವಣ ಕಾರಣ ಎಂದು ಹೇಳಲಾಗು ತ್ತಿದೆ. ಅನುಮತಿಸಿದ ಮಿತಿಗಿಂತಲೂ ಅಧಿಕ ಪ್ರಮಾಣದಲ್ಲಿ ‘ಡಿಇಜಿ’ ಹಾಗೂ ಇಥಿಲೀನ್ ಗ್ಲೈಕೋಲ್(ಇಜಿ) ಬಳಕೆ ಮೂತ್ರಪಿಂಡಕ್ಕೆ ಹಾನಿ ತರುತ್ತದೆ.
ಪರಿಶೀಲನೆ: ಆರು ರಾಜ್ಯಗಳಲ್ಲಿರುವ 19 ಔಷಧ ತಯಾರಿಕೆ ಘಟಕಗಳಲ್ಲಿ ಉತ್ಪಾದನೆಯಾಗುತ್ತಿರುವ ಕೆಮ್ಮಿನ ಸಿರಪ್ ಹಾಗೂ ಆ್ಯಂಟಿಬಯೊಟಿಕ್ ಸೇರಿ ಇತರ ಔಷಧಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದನ್ನು ಪರಿಶೀಲಿಸುವ ಕಾರ್ಯಕ್ಕೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಚಾಲನೆ ನೀಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಎನ್‌ಐವಿ, ಐಸಿಎಂಆರ್, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಿಡಿಎಸ್‌ಸಿಒ ಹಾಗೂ ನಾಗ್ಪುರದ ಎಐಐಎಂಎಸ್‌ನ ತಜ್ಞರ ತಂಡವು, ಮಕ್ಕಳ ಸಾವಿಗೆ ಕಾರಣ ಎನ್ನಲಾದ ಕೆಮ್ಮಿನ ಸಿರಪ್‌ನ ಮಾದರಿಗಳ ವಿಶ್ಲೇಷಣೆ ಕೈಗೊಂಡಿದೆ.
‘ತಮಿಳುನಾಡಿನ ಸಿರಪ್ ಕಲುಷಿತ’
ಮಧ್ಯಪ್ರದೇಶ ಸರ್ಕಾರದ ಮನವಿ ಮೇರೆಗೆ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆಯು, ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ನ ಮಾದರಿಗಳ ಪರೀಕ್ಷೆ ನಡೆಸಿದೆ. ಈ ಮಾದರಿಗಳಲ್ಲಿ, ಅನುಮತಿಸಿದ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ‘ಡಿಇಜಿ’ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆ ಅಧಿಕಾರಿಯೊಬ್ಬರು ಕೂಡ ಇದೇ ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ಕಾಂಚಿಪುರಂನಲ್ಲಿರುವ ಸ್ರೇಸನ್ ಫಾರ್ಮಾ ಕಂಪನಿಯ ಘಟಕದಲ್ಲಿ ಈ ಸಿರಪ್ ಅನ್ನು ತಯಾರಿಸಲಾಗುತ್ತಿದೆ.
ತನ್ನ ಘಟಕದಲ್ಲಿ ತಯಾರಾಗುವ ಕೆಮ್ಮಿನ ಸಿರಪ್‌ನಲ್ಲಿ ‘ಡಿಇಜಿ’ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಇರುವ ಕುರಿತು ಸ್ರೇಸನ್ ಫಾರ್ಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
‘ಕೆಮ್ಮಿನ ಸಿರಪ್ ಪರೀಕ್ಷಾ ವರದಿ ಕೈಸೇರಿದ ಬೆನ್ನಲ್ಲೇ, ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ‘ಕೋಲ್ಡ್ರಿಫ್’ ಮಾರಾಟವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ಮಾರುಕಟ್ಟೆಯಿಂದ ಈ ಸಿರಪ್ ಅನ್ನು ಹಿಂಪಡೆಯುವಂತೆಯೂ ಸೂಚಿಸಿದೆ’ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸಿಡಿಎಸ್‌ಸಿಒ ಆರು ಹಾಗೂ ಮಧ್ಯಪ್ರದೇಶದ ಆಹಾರ ಮತ್ತು ಔಷಧ ನಿರ್ವಹಣೆ(ಎಂಪಿಎಫ್‌ಡಿಎ) ಇಲಾಖೆ ಮೂರು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಮಾದರಿಗಳಲ್ಲಿ ಡೈಇಥಿಲೀನ್ ಗ್ಲೈಕೋಲ್(ಡಿಇಜಿ) ಮತ್ತು ಇಥಿಲೀನ್ ಗ್ಲೈಕೋಲ್(ಇಜಿ) ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿತ್ತು.
ಪ್ರಮುಖ ಅಂಶಗಳು
l ‘ಕೋಲ್ಡ್ರಿಫ್’ ಉತ್ಪಾದನೆ ಸ್ಥಗಿತಗೊಳಿಸುವಂತೆ ಸ್ರೇಸನ್ ಫಾರ್ಮಾ ಕಂಪನಿಗೆ ತಮಿಳುನಾಡು ಸರ್ಕಾರ ಸೂಚನೆ
l ಸದ್ಯ, ಛಿಂದ್ವಾರ ಹಾಗೂ ನಾಗ್ಪುರದಲ್ಲಿ ದಾಖಲಾಗಿರುವ ಮಕ್ಕಳು ಸೇರಿ ಪಟ್ಟು 13 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಛಿಂದ್ವಾರದಲ್ಲಿ ‘ಕೋಲ್ಡ್ರಿಫ್’ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿರುವುದು ಹೃದಯ ವಿದ್ರಾವಕ. ಮಧ್ಯಪ್ರದೇಶದಲ್ಲಿ ಈ ಸಿರಪ್ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಸಿರಪ್ ತಯಾರಿಸಿರುವ ಕಂಪನಿಯ ಇತರ ಉತ್ಪನ್ನಗಳ ಮಾರಾಟವನ್ನು ಕೂಡ ನಿಷೇಧಿಸಲಾಗುತ್ತದೆ
ಮೋಹನ್ ಯಾದವ್, ಮಧ್ಯಪ್ರದೇಶ ಮುಖ್ಯಮಂತ್ರಿ
ಕೆಮ್ಮಿನ ಸಿರಪ್ ಕೋಲ್ಡ್ರಿಫ್ ಕಲಬೆರಕೆಯಾಗಿರುವುದು ಮಾದರಿಗಳ ಪರೀಕ್ಷೆಯಿಂದ ತಿಳಿದುಬಂದಿದ್ದು, ಈ ಬಗ್ಗೆ ವಿವರಣೆ ಕೇಳಲಾಗಿದೆ. ಕಂಪನಿಯು ತೃಪ್ತಿಕರ ವಿವರಣೆ ನೀಡುವವರೆಗೆ ಈ ಸಿರಪ್ ಉತ್ಪಾದನೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ
ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆ
ಶಂಕಿತ ಮೂತ್ರಪಿಂಡ ಸಮಸ್ಯೆಯಿಂದಾಗಿ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಬ್ರೇಕ್ ಆಯಿಲ್ ದ್ರಾವಣ ಮಿಶ್ರಿತ ಕೆಮ್ಮಿನ ಸಿರಪ್ ಕೊಟ್ಟಿದ್ದೇ ಮಕ್ಕಳ ಸಾವಿಗೆ ಕಾರಣ
ಕಮಲ್ ನಾಥ್, ಕಾಂಗ್ರೆಸ್‌ನ ಹಿರಿಯ ನಾಯಕ
ಕೆಮ್ಮು, ನೆಗಡಿ ನಿವಾರಣೆಗಾಗಿ ಬಳಸುವ ಡೆಕ್ಸ್‌ಟ್ರೊಮಿಥೋರ್ಫನ್ ಔಷಧವನ್ನು ನಾಲ್ಕು ವರ್ಷ ಒಳಗಿನ ಮಕ್ಕಳಿಗೆ ನೀಡದಂತೆ ಕೇಂದ್ರ ಸರ್ಕಾರ 2021ರಲ್ಲಿಯೇ ಸಲಹೆ ನೀಡಿದೆ
ಗಾಯತ್ರಿ ರಾಥೋರ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜಸ್ಥಾನ
ಕೇರಳದಲ್ಲಿ ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ಕಲುಷಿತಗೊಂಡಿದೆ ಎನ್ನಲಾದ ಬ್ಯಾಚ್‌ನ ಈ ಸಿರಪ್‌ಅನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿರಲಿಲ್ಲ. ಆದಾಗ್ಯೂ, ಸುರಕ್ಷತಾ ಕ್ರಮವಾಗಿ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ
ವೀಣಾ ಜಾರ್ಜ್, ಆರೋಗ್ಯ ಸಚಿವೆ, ಕೇರಳ
ರಾಜಸ್ಥಾನ: ಔಷಧ ನಿಯಂತ್ರಕ ಅಮಾನತು
ಜೈಪುರ: ಕೆಮ್ಮಿನ ಸಿರಪ್ ಸೇವನೆಯಿಂದಾಗಿ ರಾಜ್ಯದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿ, ರಾಜ್ಯದ ಔಷಧ ನಿಯಂತ್ರಕ ರಾಜಾರಾಮ್ ಶರ್ಮಾ ಅವರನ್ನು ಅಮಾನತು ಮಾಡಿ ರಾಜಸ್ಥಾನ ಸರ್ಕಾರ ಶನಿವಾರ ಆದೇಶಿಸಿದೆ.
ಅಲ್ಲದೇ, ಜೈಪುರ ಮೂಲದ ಕೆಸನ್ಸ್ ಫಾರ್ಮಾ ಕಂಪನಿ ಉತ್ಪಾದಿಸುವ 19 ಔಷಧಗಳು ಹಾಗೂ ಡೆಕ್ಸ್‌ಟ್ರೊಮಿಥೋರ್ಫನ್ ಹೊಂದಿರುವ ಇತರ ಎಲ್ಲ ಕೆಮ್ಮಿನ ಸಿರಪ್‌ಗಳ ಮಾರಾಟವನ್ನು ಸಹ ಸ್ಥಗಿತಗೊಳಿಸಿ ಆದೇಶಿಸಲಾಗಿದೆ.
ರಾಜಾರಾಮ್ ಶರ್ಮಾ, ಔಷಧಗಳ ಗುಣಮಟ್ಟ ಪತ್ತೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಹೇಳಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ, ಸಮಗ್ರ ತನಿಖೆಗೆ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಆದೇಶಿಸಿದ್ದಾರೆ.
‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ‘ವಿಷನ್ ಗ್ರೂಪ್’
ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯಡಿ (ಮುಜರಾಯಿ) ಇರುವ ‘ಸಿ’ ವರ್ಗದ ದೇವಾಲಯಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರವು ‘ವಿಷನ್ ಗ್ರೂಪ್’ ರಚಿಸಿದೆ.
ಕೆ.ಇ. ರಾಧಾಕೃಷ್ಣ, ಕೆ.ಸಿ. ರಾಮಮೂರ್ತಿ, ಶಕುಂತಲಾ ಶೆಟ್ಟಿ, ಮಹಾಂತೇಶ್ ಬಿರಾದಾರ್, ಶ್ರೀಪಾದ ಎಸ್.ಬಿ., ಶ್ರೀನಿವಾಸ ಪಿ.ಸಿ., ಯತಿರಾಜ ಸಂಪತ್ ಕುಮಾರನ್ ಎಸ್.ಎನ್. ಅವರನ್ನು ‘ವಿಶನ್ ಗ್ರೂಪ್’ ಸದಸ್ಯರನ್ನಾಗಿ ಮಾಡಿದೆ.
ರಾಜ್ಯದಲ್ಲಿ 34,563 ಮುಜರಾಯಿ ದೇವಸ್ಥಾನಗಳಿವೆ. ಅದರಲ್ಲಿ ‘ಎ’ ವರ್ಗದ 205, ‘ಬಿ’ ವರ್ಗದ 193 ದೇವಸ್ಥಾನಗಳಾಗಿದ್ದು, ಕಡಿಮೆ ಆದಾಯ ಇರುವ 34,165 ಪುರಾತನ ದೇವಸ್ಥಾನಗಳನ್ನು ‘ಸಿ’ ವರ್ಗ ಎಂದು ಗುರುತಿಸಲಾಗಿದೆ. ಇವುಗಳ ಅಭಿವೃದ್ಧಿಗೆ ಅಗತ್ಯ ಸಂದರ್ಭದಲ್ಲಿ ಸರ್ಕಾರದಿಂದ ಹಾಗೂ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಅನುದಾನ ನೀಡಲಾಗುತ್ತಿದೆ. ದೇವಾಲಯಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಅವುಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ರಾಜ್ಯ ಧಾರ್ಮಿಕ ಪರಿಷತ್ ನಿರ್ದೇಶನ ನೀಡಿತ್ತು.
ಅದರಂತೆ ‘ವಿಷನ್ ಗ್ರೂಪ್’ ರಚಿಸುವುದಾಗಿ ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು.
ಚಿತ್ರದುರ್ಗ: ಅರಣ್ಯದಲ್ಲಿ ಅದಿರಿಗೆ ಶೋಧ
ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮೀಸಲು ಅರಣ್ಯದಲ್ಲಿ ಮ್ಯಾಂಗನೀಸ್ ಹಾಗೂ ಕಬ್ಬಿಣದ ಅದಿರಿನ ಅನ್ವೇಷಣೆ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್) ಕರ್ನಾಟಕ ಅರಣ್ಯ ಇಲಾಖೆ ಅನುಮತಿ ನೀಡಿದೆ.
ತಾಲ್ಲೂಕಿನ ನೀರ್ತಡಿ ಮೀಸಲು ಅರಣ್ಯದಲ್ಲಿ 64.7 ಹೆಕ್ಟೇರ್ ಪ್ರದೇಶದಲ್ಲಿ ಕಂಪನಿಯು ಒಂದು ವರ್ಷ ಅದಿರಿನ ಹುಡುಕಾಟ ನಡೆಸಲಿದೆ. ಈಗಾಗಲೇ ಗಣಿಗಾರಿಕೆ ನಡೆದಿರುವ (ಬ್ರೋಕನ್ ಲ್ಯಾಂಡ್) 37.59 ಹೆಕ್ಟೇರ್‌ನಲ್ಲಿ ಮತ್ತೆ ಗಣಿಗಾರಿಕೆ ನಡೆಸಲು ಸಾಧ್ಯವೇ ಎಂಬುದನ್ನು ಕಂಪನಿ ಪರಿಶೀಲನೆ ನಡೆಸಲಿದೆ. ಜತೆಗೆ, 27.16 ಹೆಕ್ಟೇರ್ ದಟ್ಟ ಅರಣ್ಯದಲ್ಲಿ ಪ್ರಕ್ರಿಯೆ ನಡೆಸಲಿದೆ. ಈ ಪ್ರಸ್ತಾವಕ್ಕೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಒಪ್ಪಿಗೆ ನೀಡಿ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಕೇಂದ್ರ ಅರಣ್ಯ ಸಚಿವಾಲಯದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.
ಅದಿರು ಅನ್ವೇಷಣೆಗೆ ಇಲ್ಲಿ ಕೆಐಒಸಿಎಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಗದಿತ ಸ್ಥಳದಲ್ಲಿ ಅದಿರಿನ ನಿಕ್ಷೇಪ ಇದೆಯೇ ಇಲ್ಲವೇ ಎಂಬುದನ್ನು ಏಜೆನ್ಸಿ ಪತ್ತೆ ಮಾಡಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸುತ್ತದೆ. ಒಂದು ವೇಳೆ ಅದಿರು ದಾಸ್ತಾನು ಇದ್ದರೆ ಗಣಿ ಇಲಾಖೆಯು ಬ್ಲಾಕ್ ರಚಿಸಿ, ಅದನ್ನು ಹರಾಜಿಗೆ ಇಡುತ್ತದೆ.
ಕಾಶಿಮೂರ್ತಿ ಶೆಟ್ಟಿ ಹಾಗೂ ಮಕ್ಕಳು ಹೊಂದಿರುವ ಗಣಿ ಅನುಮತಿ (ಸಂಖ್ಯೆ–1177) ಅಡಿಯಲ್ಲಿ ಅದಿರು ಅನ್ವೇಷಣೆ ಕಾರ್ಯ ನಡೆಸಲು ಕೆಐಒಸಿಎಲ್‌ನ ಉಪ ಮುಖ್ಯ ವ್ಯವಸ್ಥಾಪಕರು ಅರಣ್ಯ ಇಲಾಖೆಗೆ 2024ರ ಜೂನ್‌ನಲ್ಲಿ ಪ್ರಸ್ತಾವ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಯೋಜನಾ ಪರಿಶೀಲನಾ ಸಮಿತಿ ಇದಕ್ಕೆ ಒಪ್ಪಿಗೆ ನೀಡಿದ ಬಳಿಕ ಅರಣ್ಯ ಇಲಾಖೆಗೆ ಕಳುಹಿಸಲಾಗಿತ್ತು.
ಚಿತ್ರದುರ್ಗ ಡಿಸಿಎಫ್ ಅವರು ಯೋಜನಾ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ‘ಈ ಅರಣ್ಯವು ಇಳಿಜಾರಿನ ಪ್ರದೇಶವಾಗಿದ್ದು, ಕಂಪನಿಯು ಈ ಪ್ರದೇಶದಲ್ಲಿ ಮಣ್ಣು ಹಾಗೂ ತೇವಾಂಶ ಸಂರಕ್ಷಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗ ಬಹುದು. ಆದಾಗ್ಯೂ, ಈ ಶೋಧ ಕಾರ್ಯಾಚರಣೆಯು ಅಂತಿಮವಾಗಿ ಗಣಿಗಾರಿಕೆ ಕಾರ್ಯಾಚರಣೆಗೆ ಕಾರಣವಾಗುತ್ತದೆ. ಆದ್ದರಿಂದ ಈ ಶೋಧದ ಭಾಗವಾಗಿ ಎಸ್‌ಎಂಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದ ರಿಂದ ದೀರ್ಘಾವಧಿಯಲ್ಲಿ ಉದ್ದೇಶ ಈಡೇರುವುದಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜತೆಗೆ, ಗಣಿ ಹುಡುಕಾಟ ನಡೆಸಲು ಶಿಫಾರಸು ಮಾಡಿದ್ದರು. ಇದಕ್ಕೆ ಬಳ್ಳಾರಿ ಸಿಸಿಎಫ್ ಸಹಮತ ವ್ಯಕ್ತಪಡಿಸಿದ್ದರು.
ಮುಖ್ಯಾಂಶಗಳು
lಅದಿರಿನ ಹುಡುಕಾಟದ ಸಂದರ್ಭದಲ್ಲಿ 700–1000 ಮರಗಳ ಹನನ ಮಾಡಲಾಗುತ್ತದೆ
lಅದಿರಿನ ಅನ್ವೇಷಣೆ ವೇಳೆ 24 ಕಂದಕಗಳನ್ನು ಹಾಗೂ 34 ಕೊಳವೆಬಾವಿಗಳನ್ನು ಕೊರೆಯಲಾಗುತ್ತದೆ
lಸಾದರಹಳ್ಳಿ ಹಾಗೂ ಕೇಶವಪುರ ಅರಣ್ಯ ವ್ಯಾಪ್ತಿಯಲ್ಲಿ ಸಂಪರ್ಕ ರಸ್ತೆ ನಿರ್ಮಿಸಲಾಗುತ್ತದೆ
lಈ ಅರಣ್ಯದಲ್ಲಿ ಕರಡಿ, ಚಿರತೆ, ನರಿ, ಕಾಡುಹಂದಿ, ಮುಳ್ಳು ಹಂದಿ ಮತ್ತಿತರ ಕಾಡುಪ್ರಾಣಿಗಳಿವೆ
lಗಣಿ ಹುಡುಕಾಟಕ್ಕೆ ಪ್ರತಿಯಾಗಿ ಕಂಪನಿಯು 9.4 ಹೆಕ್ಟೇರ್‌ನ ನಿವ್ವಳ ಒಟ್ಟು ಮೌಲ್ಯ ಪಾವತಿಸಲು ಒಪ್ಪಿದೆ
ವಿಧಿಸಿರುವ ಷರತ್ತುಗಳು
lಅರಣ್ಯ ಭೂಮಿಯ ಕಾನೂನಾತ್ಮಕ ಸ್ಥಿತಿಗತಿ ಬದಲಾಗುವಂತಿಲ್ಲ
lಪ್ರಸ್ತಾವಿತ ಪ್ರದೇಶದ ಮತ್ತು ಸುತ್ತಮುತ್ತಲಿನ ಸಸ್ಯ, ಪ್ರಾಣಿಗಳಿಗೆ ಯಾವುದೇ ಹಾನಿ ಮಾಡುವಂತಿಲ್ಲ
lಈ ಅರಣ್ಯ ಭೂಮಿಯನ್ನು ಉಪಗುತ್ತಿಗೆ ನೀಡುವಂತಿಲ್ಲ ಹಾಗೂ ಅಡಮಾನ ಇಡುವಂತಿಲ್ಲ
lಅರಣ್ಯ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ
lಕಾಡಿನಲ್ಲಿ ಕಲ್ಲುಗಳನ್ನು ಪುಡಿ ಮಾಡುವಂತಿಲ್ಲ ಹಾಗೂ ಒಡೆಯುವಂತಿಲ್ಲ
ಸರ್ಬಿ: ಅತಿ ಕಡಿಮೆ ಜನಸಂಖ್ಯೆಯ ಜಾತಿ
ಪ್ರಜಾವಾಣಿ ವಾರ್ತೆ
ಚಿಕ್ಕಬಳ್ಳಾಪುರ: ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯ ಜನರನ್ನು ಹೊಂದಿರುವ ರಾಜಸ್ಥಾನ ಮೂಲದ ಜಾತಿಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಪತ್ತೆಯಾಗಿದೆ. ಮೂಲದ ಪ್ರಕಾರ ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಈ ಜಾತಿಯ ಜನರು ಇಲ್ಲ ಎಂದು ಗೊತ್ತಾಗಿದೆ.
ಜಿಲ್ಲೆಯ ಮಂಚೇನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ‘ಸರ್ಬಿ’ ಜಾತಿಗೆ ಸೇರಿದ ಎರಡು ಕುಟುಂಬ ಸಮೀಕ್ಷೆಯಲ್ಲಿ ಕಂಡುಬಂದಿವೆ. ಈ ಎರಡು ಕುಟುಂಬಗಳಲ್ಲಿ ಒಟ್ಟು ಏಳು ಸದಸ್ಯರು ಇದ್ದಾರೆ.
ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಜನರನ್ನು ಹೊಂದಿರುವ ಜಾತಿಯೂ ಇದಾಗಿದೆ. ಹಿಂದುಳಿದ ವರ್ಗಗಳ ಆಯೋಗವು ಹೊರಡಿಸಿರುವ ಸಮೀಕ್ಷೆಯ ಜಾತಿಗಳ ಪಟ್ಟಿಯಲ್ಲಿ ‘ಸರ್ಬಿ’ ಜಾತಿಯ ಹೆಸರು ಇಲ್ಲ.
ಈ ಜಾತಿ ಕೋಡ್ ಸಹ ಇಲ್ಲ. ಈ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಯಾವ ಪಟ್ಟಿಯಲ್ಲಿ ‘ಸರ್ಬಿ’ ಜಾತಿ ನಮೂದಿಸಬೇಕು ಎಂದು ಜಿಲ್ಲಾಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆಯೋಗಕ್ಕೆ ಪತ್ರ ಬರೆದಿತ್ತು. ಆಯೋಗವು ‘ಸರ್ಬಿ’ ಜಾತಿಯನ್ನು ಇತರ ಕಾಲಂನಲ್ಲಿ ನಮೂದಿಸುವಂತೆ ತಿಳಿಸಿದೆ.
‘ಸರ್ಬಿ ಜಾತಿ ರಾಜಸ್ಥಾನ ಮೂಲದ್ದು ಎನ್ನಲಾಗುತ್ತಿದೆ. ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲಿ ಈ ಜಾತಿಯ ಜನರು ಇಲ್ಲ. ಸಮೀಕ್ಷೆ ಜಾತಿಯ ಪಟ್ಟಿಯಲ್ಲಿ ಇದರ ಹೆಸರು ಇರಲಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದೆವು. ಇತರೆ ಕಾಲಂನಲ್ಲಿ ನಮೂದಿಸಲು ತಿಳಿಸಿದ್ದಾರೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮುನಿರತ್ನಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು. .
ಅಂಕಸಮುದ್ರ: ವಲಸೆ ಹಕ್ಕಿಗಳ ಪಾರುಪತ್ಯ
ವಿಜಯನಗರ ಜಿಲ್ಲೆಯ ಪಕ್ಷಿಧಾಮ l ವಿವಿಧೆಡೆಯಿಂದ ಬಂದ ಬಾನಾಡಿಗಳ ಕಲರವ
ಪಕ್ಷಿಗಳನ್ನು ವೀಕ್ಷಿಸಲು ಕಳೆದ ವರ್ಷದಿಂದ ಬೆಂಗಳೂರಿನಿಂದ ಕುಟುಂಬ ಸಮೇತ ಬರುತ್ತಿದ್ದೇನೆ. ಇಲ್ಲಿನ ಹಕ್ಕಿಗಳ ಸೌಂದರ್ಯ ಅದ್ಭುತಬದ್ರೀಶ್, ಪಕ್ಷಿ ವೀಕ್ಷಕ, ಬೆಂಗಳೂರು
ಇಲ್ಲಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಈ ಬಾರಿ ನಿಗದಿತ ಅವಧಿಗಿಂತಲೂ ಮೊದಲೇ ವಿದೇಶಿ ಹಕ್ಕಿಗಳ ಕಲರವ ಅನುರಣಿಸುತ್ತಿದೆ. ಜಾಲಿಮರಗಳ ಮೇಲೆ ದೇಶಿ ಹಕ್ಕಿಗಳ ಗೂಡು ಕಟ್ಟಿದ್ದು, ಪಾರುಪತ್ಯ ನಡೆಸಿವೆ.
ಬಹುಸಂಖ್ಯೆಯ ಇಂಡಿಯನ್ ಕಾರ್ಮೋರೆಂಟ್ (ನೀರು ಕಾಗೆ), ಲಿಟಲ್ ಕಾರ್ಮೋರೆಂಟ್ (ಸಣ್ಣ ನೀರು ಕಾಗೆ), ಬ್ಲ್ಯಾಕ್ ಹೆಡೆಡ್ ಐಬೀಸ್ (ಕರಿತಲೆ ಕೆಂಬರಲು), ಗ್ಲೋಸಿ ಐಬೀಸ್(ಮಿಂಚು ಕೆಂಬರಲು), ವರಟೆ ಬಾತು (ಸ್ಪಾಟ್ ಬಿಲ್ ಡಕ್) ಸಂತಾನನೋತ್ಪತ್ತಿ ಕಾರ್ಯದಲ್ಲಿ ನಿರತವಾಗಿವೆ. ಇವುಗಳ ಸಂಖ್ಯೆ ಸಾವಿರ ದಾಟಿದೆ. ಪಕ್ಷಿಧಾಮದ ಮರಗಳಲ್ಲಿ ಮರಿಗಳಿಗೆ ಬಾಯಿತುತ್ತು ನೀಡುವ ದೃಶ್ಯ, ಗೂಡುಗಳಿಂದ ಹೊರಬಂದ ಚಿಣ್ಣರ ಚಿನ್ನಾಟದ ಚಿಲಿಪಿಲಿ ಸಂಗೀತದ ನಿನಾದವಂತೂ ಪಕ್ಷಿ ಪ್ರೇಮಿಗಳನ್ನು ಧ್ಯಾನಸ್ಥರನ್ನಾಗಿ ಮಾಡುತ್ತಿವೆ.
ಯುರೋಪ್ ಮೂಲದ ಹಕ್ಕಿಗಳಾದ ಬಿಳಿ ಹುಬ್ಬಿನ ಬಾತು (ಗಾರ್ಗೆನಿ), ಜೌಗು ಸೆಳೆವ (ಮಾರ್ಷ್ ಹ್ಯಾರಿಯರ್), ಬಿಳಿಕತ್ತಿನ ಉಲಿಯಕ್ಕಿ (ಲೆಸರ್ ವೈಟ್‍ತ್ರೋಟ್), ಇಡುನಾ ರಾಮ (ಸೈಕ್ಸ್ ನ ವಾರ್ಬ್ಲರ್), ಬೂದು ಉಲಿಯಕ್ಕಿ (ಬ್ಲಿಥ್ಸ್ರೀಡ್ ವಾರ್ಬ್ಲರ್), ಹಳದಿ ಸಿಪಿಲೆ (ಯಲ್ಲೊ ವಾಗ್‍ಟೆಲ್) ಹಕ್ಕಿಗಳೂ ಇಲ್ಲಿಗೆ ಈಗಾಗಲೇ ಬಂದಿವೆ.
ಯುರೋಪ್‌ನಿಂದ ಹಕ್ಕಿಗಳು ಈ ಬಾರಿ ತಿಂಗಳ ಮುಂಚೆಯೇ ಬಂದಿವೆ. ಒಂದು ವಾರದಿಂದ ಈ ವಿದೇಶಿ ಬಾನಾಡಿ ಅತಿಥಿಗಳಿಗೆ ಸ್ಥಳೀಯ ಹಕ್ಕಿಗಳು ಆತಿಥ್ಯ ನೀಡಿವೆ. ಮುಂದಿನ ಏಪ್ರಿಲ್‌ವರೆಗೆ ಅವು ಇಲ್ಲಿಯೇ ನೆಲೆಯೂರಲಿವೆ.
ಶಿಳ್ಳೆಬಾತು ಆಕರ್ಷಣೆ: ಪಕ್ಷಿಧಾಮಕ್ಕೆ ಮೊದಲ ಬಾರಿಗೆ ಉತ್ತರ ಭಾರತ ದಿಂದ ವಲಸೆ ಬಂದಿರುವ ಅಪರೂಪದ ದೊಡ್ಡ ಗಾತ್ರದ ಶಿಳ್ಳೆಬಾತು (ಫುಲ್ವೆಸ್ ವಿಸಿಲಿಂಗ್ ಡಕ್) ತನ್ನ ಸಂಖ್ಯೆಯನ್ನು 20ಕ್ಕೆ ಏರಿಸಿಕೊಂಡಿದೆ. ಈ ಪಕ್ಷಿ ಸದಾ ಸಂಗಾತಿಯೊಂದಿಗೆ ಇರುತ್ತದೆ.
ತುಂಗಭದ್ರಾ ಹಿನ್ನೀರಿನ ಏತ ನೀರಾವರಿ ಮೂಲಕ ನೀರು ಹರಿದ ಪರಿಣಾಮ ಅಂಕಸಮುದ್ರ ಪಕ್ಷಿಧಾಮದ ಒಡಲು ಸಂಪೂರ್ಣ ಭರ್ತಿ ಆಗಿದೆ. ಪಕ್ಷಿಗಳ ಕಲರವ ಹೆಚ್ಚಾಗಿದೆ. ರಾಜ್ಯದ ವಿವಿಧೆಡೆಯಿಂದ ಬರುವ ಪ್ರವಾಸಿಗರು, ವಿದೇಶಿಯರ ಸಂಖ್ಯೆಯೂ ಹೆಚ್ಚಾಗಿದೆ.
ಟೋಲ್: ಯುಪಿಐ ಬಳಸಿದರೆ ಶುಲ್ಕ ಕಡಿಮೆ
ಸಕ್ರಿಯ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಪ್ಲಾಜಾ ಪ್ರವೇಶಿಸುವ ವಾಹನಗಳು ಯುಪಿಐ ಮೂಲಕ ಶುಲ್ಕ ಪಾವತಿ ವಿಧಾನ ಆಯ್ಕೆ ಮಾಡಿಕೊಂಡರೆ, ಸಾಮಾನ್ಯ ಟೋಲ್ ಶುಲ್ಕದ 1.25 ಪಟ್ಟು ಶುಲ್ಕ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ಈ ಹೊಸ ನಿಯಮ ನವೆಂಬರ್ 15ರಿಂದ ಜಾರಿಗೆ ಬರಲಿದೆ. ಪ್ರಸ್ತುತ, ಫಾಸ್ಟ್‌ಟ್ಯಾಗ್ ಇಲ್ಲದವರು ಟೋಲ್‌ನಲ್ಲಿ, ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವುದಾದರೆ ಎರಡು ಪಟ್ಟು ಹೆಚ್ಚು ಪಾವತಿಸಬೇಕಿದೆ.
ಈ ಹೊಸ ನಿಯಮದಿಂದ ಟೋಲ್‌ನಲ್ಲಿ ನಗದು ವಹಿವಾಟು ಕಡಿಮೆ ಆಗಲಿದೆ. ಅಲ್ಲದೆ, ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು, ಟೋಲ್ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ವಿದೇಶಿ ವಿನಿಮಯ ಸಂಗ್ರಹ ಇಳಿಕೆ
ಮುಂಬೈ (ಪಿಟಿಐ): ಸೆಪ್ಟೆಂಬರ್ 26ಕ್ಕೆ ಅಂತ್ಯಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು ₹20,700 ಕೋಟಿಯಷ್ಟು ಕಡಿಮೆ ಆಗಿದೆ.
ಒಟ್ಟು ಮೀಸಲು ಸಂಗ್ರಹ ₹62.15 ಲಕ್ಷ ಕೋಟಿಯಷ್ಟಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ ₹38,994 ಕೋಟಿಯಷ್ಟು ಕಡಿಮೆಯಾಗಿದ್ದು, ₹51.63 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, ₹19,865 ಕೋಟಿಯಾಗಿದ್ದು, ₹8.43 ಲಕ್ಷ ಕೋಟಿಯಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ₹798 ಕೋಟಿ ಕಡಿಮೆ ಆಗಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪಾಲು ₹41,479 ಕೋಟಿಯಾಗಿದೆ ಎಂದು ತಿಳಿಸಿದೆ.
ಜಪಾನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ ಸನೆ ತಾಕೈಚಿ?
ಜಪಾನ್‌ನ ಇತಿಹಾಸದಲ್ಲಿ ಮೊದಲ ಬಾರಿ ಮಹಿಳೆಯೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
ಆಡಳಿತರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಕಟ್ಟಾ ಸಂಪ್ರದಾಯ ವಾದಿಯಾಗಿರುವ ಸನೆ ತಾಕೈಚಿ ಅವರನ್ನು ಹೊಸ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಸನೆ ತಾಕೈಚಿ ಅವರನ್ನು ಸ್ತ್ರೀವಾದ ಪ್ರತಿಪಾದಿಸುವ ದೃಷ್ಟಿಯಿಂದ ಆಯ್ಕೆ ಮಾಡಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಡೆದ ಚುನಾವಣೆಯಲ್ಲಿ 54 ವರ್ಷದ ಸನೆ ತಾಕೈಚಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ದೇಶದ ರಕ್ಷಣೆ ಹಾಗೂ ಆರ್ಥಿಕತೆ ವಿಚಾರದಲ್ಲಿ ಕೇಂದ್ರಿಕರಿಸಿ, ಕಠಿಣ ನಿಲುವಿನ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ಪಕ್ಷದ ಆಂತರಿಕ ಚುನಾವಣೆಯಲ್ಲಿ ದೇಶದ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯ್ಚುಮಿ ಅವರ ಪುತ್ರ ಹಾಗೂ ಕೃಷಿ ಸಚಿವ 44 ವರ್ಷದ ಶಿಂಜಿರೊ ಕೊಯ್ಚುಮಿ ಅವರನ್ನು ಸನೆ ತಾಕೈಚಿ ಮಣಿಸಿದರು. ಸಂಸತ್ತಿನಲ್ಲಿ ಅವರಿಗೆ ಅನುಮೋದನೆ ಸಿಕ್ಕ ಬಳಿಕ ಸನೆ ತಾಕೈಚಿ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರಕ್ಕೇರುವುದು ಖಚಿತವಾಗಿದೆ.
ನಾಯಕಿಯಾಗಿ ಆಯ್ಕೆಯಾಗು ತ್ತಿದ್ದಂತೆಯೇ, ದೇಶದಲ್ಲಿ ‘ಹೊಸ ಯುಗ’ ಆರಂಭಗೊಂಡಿದೆ ಎಂದು ಶ್ಲಾಘಿಸಿದರು.
ಮಾರ್ಗರೆಟ್ ಥ್ಯಾಚರ್ ಅವರನ್ನು ತನ್ನ ನಾಯಕಿ ಎಂದು ಪರಿಗಣಿಸಿರುವ ತಾಕೈಚಿ, ಎಲ್‌ಡಿಪಿ ಪಕ್ಷದ ಗತವೈಭವವನ್ನು ಮರುಸ್ಥಾಪಿಸಲು ಬೆಟ್ಟದಷ್ಟು ಕೆಲಸಗಳು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ.
ಟ್ರಂಪ್ ಶಾಂತಿ ಸೂತ್ರ: ಹಮಾಸ್ ಭಾಗಶಃ ಒಪ್ಪಿಗೆ
ಗಾಜಾದಲ್ಲಿ ಯುದ್ಧ ಕೊನೆಗೊಳಿಸಲು ಮತ್ತು ಉಳಿದ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಶಾಂತಿ ಯೋಜನೆಯ ಕೆಲವು ಅಂಶಗಳನ್ನು ಒಪ್ಪಿಕೊಳ್ಳುತ್ತೇವೆ’ ಎಂದು ಹಮಾಸ್ ತಿಳಿಸಿದೆ.
ಆದರೆ, ಇತರ ವಿಷಯಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಮಾತುಕತೆ ನಡೆಸಬೇಕಿದೆ ಎಂದೂ ಅದು ಶನಿವಾರ ಹೇಳಿದೆ.
ಹಮಾಸ್ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಟ್ರಂಪ್ ಅವರ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರು ವುದಾಗಿ ಇಸ್ರೇಲ್ ಸೇನೆ ಶನಿವಾರ ಮಾಹಿತಿ ನೀಡಿದೆ.
‘ಇಸ್ರೇಲ್‌ನ ನಾಯಕರು ಯೋಜನೆ ಅನುಷ್ಠಾನಕ್ಕೆ ಸಿದ್ಧತಾ ಕಾರ್ಯವನ್ನು ಮುಂದುವರಿಸಲು ಸೂಚಿಸಿದ್ದಾರೆ’ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಮುಂದುವರಿದ ಕಾರ್ಯಾಚರಣೆ: ಗಾಜಾ ಮೇಲೆ ದಾಳಿ ನಡೆಸದಂತೆ ಟ್ರಂಪ್ ಅವರು ಇಸ್ರೇಲ್‌ಗೆ ಸೂಚಿಸಿದ ಬಳಿಕವೂ, ಇಸ್ರೇಲ್ ಪಡೆಗಳು ಗಾಜಾಪಟ್ಟಿಯಲ್ಲಿ ಶನಿವಾರ ಕಾರ್ಯಾಚರಣೆ ಮುಂದುವರಿಸಿವೆ. ಅಲ್ಲದೆ ನಿವಾಸಿಗಳಿಗೆ ಅಲ್ಲಿಂದ ತೆರಳದಂತೆ ಸೇನೆ ಎಚ್ಚರಿಕೆಯನ್ನೂ ನೀಡಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿ, ಬಾಂಬ್ ದಾಳಿಯಲ್ಲಿ 20ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.
ತನ್ನ ಯೋಜನೆಯ ಕೆಲ ಅಂಶಗಳನ್ನು ಒಪ್ಪಿಕೊಂಡಿರುವುದಾಗಿ ಹಮಾಸ್ ಹೇಳಿದ ಬಳಿಕ, ಟ್ರಂಪ್ ಅವರು ಗಾಜಾ ಮೇಲಿನ ಬಾಂಬ್ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಸೂಚಿಸಿದ್ದರು. ‘ಯೋಜನೆಯ ಕೆಲ ಅಂಶಗಳನ್ನು ಒಪ್ಪಿಕೊಳ್ಳುವುದಾಗಿ ಹಮಾಸ್ ನೀಡಿರುವ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅವರು ಸಹ ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂಬುದಾಗಿ ನಾನು ನಂಬುತ್ತೇನೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದರು.
ಇಸ್ರೇಲ್–ಹಮಾಸ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ಒತ್ತೆಯಾಳುಗಳ ವಿನಿಮಯ ಕುರಿತ ಟ್ರಂಪ್ ಈ ವಾರದ ಆರಂಭದಲ್ಲಿ ಪ್ರಸ್ತಾವ ಮುಂದಿಟ್ಟಿದ್ದರು. ಅದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಹ ಟ್ರಂಪ್ ಯೋಜನೆಯನ್ನು ಅನುಮೋದಿಸಿ, ‘ಯುದ್ಧ ಅಂತ್ಯಗೊಳಿಸಲು ಇಸ್ರೇಲ್ ಬದ್ಧವಾಗಿದೆ’ ಎಂದೂ ಹೇಳಿದ್ದರು.
ಹಮಾಸ್ ಬಳಿ ಇರುವ ಒತ್ತೆಯಾಳುಗಳ ಬಿಡುಗಡೆ ಮತ್ತು ಇಸ್ರೇಲ್ ಬಂಧನದಲ್ಲಿ ಇರುವ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳ ಬಿಡುಗಡೆ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಈಜಿಪ್ಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧ: ಹಮಾಸ್
ದೀರ್ ಅಲ್–ಬಲಾಹ್ (ಎಪಿ/ಎಎಫ್‌ಪಿ): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಯೋಜನೆ ಅನ್ವಯ, ತನ್ನ ಬಳಿ ಇರುವ ಇಸ್ರೇಲ್‌ನ ಎಲ್ಲ ಜೀವಂತ ಒತ್ತೆಯಾಳುಗಳನ್ನು ಮತ್ತು ಕೆಲ ಒತ್ತೆಯಾಳುಗಳ ಮೃತ ದೇಹಗಳನ್ನು ಹಿಂದಿರುಗಿಸಲು ಸಿದ್ಧ ಇರುವುದಾಗಿ ಹಮಾಸ್ ತಿಳಿಸಿದೆ.
ಯೋಜನೆ ಪ್ರಕಾರ, ಹಮಾಸ್ ತನ್ನ ಬಳಿ ಇರುವ 48 ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕಿದೆ. ಈ ಪೈಕಿ 20 ಜನರು ಜೀವಂತ ಇದ್ದಾರೆ ಎಂದು ನಂಬಲಾಗಿದೆ. ಈ ಪ್ರಕ್ರಿಯೆ ಮೂರು ದಿನಗಳಲ್ಲಿ ನೆರವೇರಬೇಕು ಎಂದು ಹೇಳಲಾಗಿದೆ. ಇದಲ್ಲದೆ, ಹಮಾಸ್ ಅಧಿಕಾರವನ್ನು ಬಿಡಬೇಕು ಮತ್ತು ನಿಶ್ಶಸ್ತ್ರಗೊಳ್ಳಬೇಕು ಎಂದೂ ಪ್ರಸ್ತಾಪಿತ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.
‘ಒತ್ತೆಯಾಳುಗಳ ಬಿಡುಗಡೆಗೆ ಸಮ್ಮತಿಸಿರುವ ಹಮಾಸ್, ಗಾಜಾ ಭವಿಷ್ಯ ಮತ್ತು ಪ್ಯಾಲೆಸ್ಟೀನಿಯರ ಹಕ್ಕು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮತ್ತಷ್ಟು ಮಾತುಕತೆ ಬಾಕಿ ಇದೆ ಎಂಬುದಾಗಿ ಅದು ತಿಳಿಸಿದೆ’ ಎಂದು ಮೂಲಗಳು ಹೇಳಿವೆ.
‘ಎಲ್ಲ ವಿಷಯಗಳನ್ನು ಪರಿಹರಿಸುವುದಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಮಾತುಕತೆ ನಡೆಸಲಾಗುವುದು’ ಎಂದು ಹಮಾಸ್‌ನ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್, ಒಟ್ಟು 1,200 ಜನರನ್ನು ಕೊಂದಿತ್ತು. ಅಲ್ಲದೆ 251 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಈ ಸಂಬಂಧ ಗಾಜಾ ಪಟ್ಟಿಯಲ್ಲಿ ನಡೆದ ಯುದ್ಧದಲ್ಲಿ 66,000ಕ್ಕೂ ಹೆಚ್ಚು ಪ್ಯಾಲೆಸ್ಟೀನ್ ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚು ಎಂದು ಗಾಜಾದ ಆರೋಗ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆಧಾರ್ ಅಪ್‌ಡೇಟ್ ಮಕ್ಕಳಿಗೆ ಶುಲ್ಕ ಮನ್ನಾ
ನವದೆಹಲಿ (ಪಿಟಿಐ): ಆಧಾರ್ ಕಾರ್ಡ್‌ನಲ್ಲಿ ಮಕ್ಕಳ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಲು ವಿಧಿಸಲಾಗುತ್ತಿದ್ದ ಶುಲ್ಕವನ್ನು ವರ್ಷದ ಮಟ್ಟಿಗೆ ಮನ್ನಾ ಮಾಡಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಶನಿವಾರ ತಿಳಿಸಿದೆ.
ಅಕ್ಟೋಬರ್ 1ರಿಂದ ಇದು ಜಾರಿಗೆ ಬಂದಿದ್ದು, ಒಂದು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ಹೇಳಿದೆ.
ಮಕ್ಕಳ ‘ಕಡ್ಡಾಯ ಬಯೊಮೆಟ್ರಿಕ್ ನವೀಕರಣ’ಕ್ಕೆ (ಎಂಬಿಯು) ಶುಲ್ಕ ಮನ್ನಾ ಮಾಡಿರುವುದರಿಂದ 6 ಕೋಟಿ ಮಕ್ಕಳಿಗೆ ಉಪಯುಕ್ತವಾಗಲಿದೆ ಎಂದು ಅದು ತಿಳಿಸಿದೆ.
ಐದು ವರ್ಷದೊಳಗಿನ ಮಕ್ಕಳ ಭಾವಚಿತ್ರ, ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ ಮತ್ತು ಜನನ ಪ್ರಮಾಣ ಪತ್ರವನ್ನು ಒದಗಿಸಿ ಆಧಾರ್‌ಗೆ ನೋಂದಾಯಿಸಬಹುದು. ಈ ವಯಸ್ಸಿನ ಮಕ್ಕಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಪಾಪೆ (ಐರಿಸ್) ಅಷ್ಟಾಗಿ ಪಕ್ವವಾಗಿರುವುದಿಲ್ಲ. ಹೀಗಾಗಿ ಅವರ ಬಯೋಮೆಟ್ರಿಕ್ ದಾಖಲಿಸಲು ಆಗುವುದಿಲ್ಲ.
ಹಾಲಿ ನಿಯಮದ ಪ್ರಕಾರ ಮಕ್ಕಳಿಗೆ ಐದು ವರ್ಷಗಳು ತುಂಬಿದ ಬಳಿಕ ಅವರ ಬೆರಳಚ್ಚು, ಕಣ್ಣಿನ ಪಾಪೆ ಮತ್ತು ಭಾವಚಿತ್ರಗಳನ್ನು ಆಧಾರ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಆ ಮಕ್ಕಳು 15ರಿಂದ 17ರ ನಡುವಿನ ವಯಸ್ಸಿನಲ್ಲಿ ಇರುವಾಗ ಎರಡನೇ ಬಾರಿಗೆ ಅವುಗಳನ್ನು ಅಪ್‌ಡೇಟ್ ಮಾಡಬೇಕು. ಹೀಗೆ 5ರಿಂದ 7 ವರ್ಷ ಮತ್ತು 15ರಿಂದ 17 ವರ್ಷದ ನಡುವಿನ ಮಕ್ಕಳ ಬಯೋಮೆಟ್ರಿಕ್ ಅಪ್‌ಡೇಟ್‌ಗೆ ಈಗ ಶುಲ್ಕ ವಿಧಿಸುವುದಿಲ್ಲ. ಆ ನಂತರ ಪ್ರತಿ ಅಪ್‌ಡೇಟ್‌ಗೆ ₹125 ವಿಧಿಸಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ. ಪ್ರಾಧಿಕಾರದ ಈ ನಿರ್ಧಾರದಿಂದ 5ರಿಂದ 17 ವರ್ಷದೊಳಗಿನ ಎಲ್ಲ ಮಕ್ಕಳಿಗೂ ‘ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್’ ವರ್ಷದ ಮಟ್ಟಿಗೆ ಉಚಿತವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪೂರ್ವಭಾವಿ ಪರೀಕ್ಷೆ ಬಳಿಕ ತಾತ್ಕಾಲಿಕ ಕೀ–ಉತ್ತರ ಪ್ರಕಟ: ಯುಪಿಎಸ್‌ಸಿ
ನವದೆಹಲಿ (ಪಿಟಿಐ): ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆ ಬಳಿಕ ತಾತ್ಕಾಲಿಕ ಕೀ–ಉತ್ತರಗಳನ್ನು ಪ್ರಕಟಿಸಲು ನಿರ್ಧರಿ ಸಲಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಗಳೂ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸುವ ಯುಪಿಎಸ್‌ಸಿ, ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಅಂತಿಮ ಫಲಿತಾಂಶದ ಬಳಿಕ ಅಂತಿಮ ಕೀ– ಉತ್ತರಗಳನ್ನು ಪ್ರಕಟಿಸಲಾಗುವುದು ಎಂದು ಅದು ಮಾಹಿತಿ ನೀಡಿದೆ.
ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಆಯೋಗ ಪ್ರಮಾಣ ಪತ್ರ ಸಲ್ಲಿಸಿದೆ.
ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ನೇಮಿಸಿದ್ದ ಅಮಿಕಸ್ ಕ್ಯೂರಿಯ ಸಲಹೆಗಳನ್ನು ಪಡೆದು, ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ, ಪ್ರಮಾಣ ಪತ್ರ ಸಲ್ಲಿಸಿರುವುದಾಗಿ ಆಯೋಗ ತಿಳಿಸಿದೆ.
‘ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ಕೀ– ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಾಗ, ಪ್ರತಿ ಆಕ್ಷೇಪಣೆಗೆ ಮೂರು ಅಧಿಕೃತ ಮೂಲಗಳ ದಾಖಲೆಗಳನ್ನು ಸಲ್ಲಿಸಬೇಕು. ಆ ದಾಖಲೆಗಳು ಪೂರಕ ಎಂದು ಕಂಡು ಬರದಿದ್ದರೆ ಅವುಗಳನ್ನು ತಿರಸ್ಕರಿಸಲಾ ಗುವುದು ಎಂದು ಆಯೋಗ ಹೇಳಿದೆ.
‘ಅಭ್ಯರ್ಥಿಗಳು ಸಲ್ಲಿಸಿದ ದಾಖಲೆಗಳು ಅಧಿಕೃತವೋ ಅಥವಾ ಅಲ್ಲವೋ ಎಂಬುದನ್ನು ಆಯೋಗ ನಿರ್ಧರಿಸುತ್ತದೆ’ ಎಂದು ಅದು ಉಲ್ಲೇಖಿಸಿದೆ.
‘ಇದಕ್ಕಾಗಿ ವಿಷಯ ತಜ್ಞರ ತಂಡವನ್ನು ರಚಿಸಲಾಗುತ್ತದೆ. ಅದು ಅಭ್ಯರ್ಥಿಗಳ ಆಕ್ಷೇಪಣೆಗಳು, ಮೂಲ ದಾಖಲೆಗಳನ್ನು ಪರಾಮರ್ಶಿಸಿ ಅಂತಿಮ ಕೀ– ಉತ್ತರಗಳನ್ನು ಸಿದ್ಧಪಡಿಸುತ್ತದೆ. ಅದನ್ನು ಆಧರಿಸಿಯೇ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗು ತ್ತದೆ. ಈ ವಿಧಾನಗಳನ್ನು ಸಾಧ್ಯವಾದಷ್ಟು ಬೇಗ ಅನುಸರಿಸಲು ಆಯೋಗ ಬಯಸುತ್ತದೆ’ ಎಂದು ವಿವರಿಸಿದೆ.
ಏಕ್ತಾಗೆ ಬೆಳ್ಳಿ, ಪ್ರವೀಣ್‌ಗೆ ಕಂಚಿನ ಪದಕ
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಪ್ರವೀಣ್ ಕುಮಾರ್ ಅವರು ಶನಿವಾರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಟಿ64 ಹೈಜಂಪ್‌ನಲ್ಲಿ ಚಿನ್ನ ಗೆಲ್ಲಲಾಗದಿದ್ದರೂ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಕ್ಲಬ್ ಥ್ರೊನಲ್ಲಿ ಏಕತಾ ಭ್ಯಾನ್ ಬೆಳ್ಳಿ ಗೆದ್ದರು.
ಭಾರತದ ಅಥ್ಲೀಟುಗಳು ಒಂಬತ್ತನೇ ದಿನವಾದ ಶನಿವಾರ ಒಟ್ಟು ಮೂರು ಪದಕಗಳನ್ನು ಪಡೆದರು. ಆದರೆ ಬಂಗಾರ ಒಲಿಯಲಿಲ್ಲ.
ಭಾನುವಾರ ಈ ಕೂಟದ ಕೊನೆಯ ದಿನವಾಗಿದ್ದು, ಆತಿಥೇಯ ತಂಡ ಈಗಾಗಲೇ 18 ಪದಕಗಳನ್ನು ಗೆದ್ದುಕೊಂಡು ಪದಕಪಟ್ಟಿಯಲ್ಲಿ ಇದುವರೆಗಿನ ಅತ್ಯುತ್ತಮ ಸಾಧನೆ ದಾಖಲಿಸಿದೆ. ಇದರಲ್ಲಿ ಆರು ಚಿನ್ನ, ಏಳು ಬೆಳ್ಳಿ, ಐದು ಕಂಚಿನ ಪದಕಗಳು ಒಳಗೊಂಡಿವೆ. ಬ್ರೆಜಿಲ್ 37 ಪದಕಗಳೊಡನೆ (12–18–7) ಅಗ್ರಸ್ಥಾನದಲ್ಲಿದೆ. ಭಾರತದ ಈ ಹಿಂದಿನ ಶ್ರೇಷ್ಠ ಸಾಧನೆ ಜಪಾನ್‌ನ ಕೋಬೆ (2024) ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದಾಖಲಾಗಿತ್ತು. ಅಲ್ಲಿ 17 ಪದಕಗಳನ್ನು (6–5–6) ಗೆದ್ದುಕೊಂಡಿತ್ತು.
ಭಾರತಕ್ಕೆ ದಿನದ ಮೂರನೇ ಪದಕವನ್ನು ಪುರುಷರ ಷಾಟ್‌ಪಟ್ ಎಫ್57 ವಿಭಾಗದಲ್ಲಿ ಸೋಮನ್ ರಾಣಾ ತಂದುಕೊಟ್ಟರು. ಸೇನೆಯಲ್ಲಿರುವ 42 ವರ್ಷದ ಸೋಮನ್ 14.69 ಮೀ. ದೂರ ಎಸೆ ದರು. ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಬೆಳ್ಳಿ ಗೆದ್ದಿದ್ದ ಅವರು ನಾಲ್ಕನೆ ಥ್ರೊನಲ್ಲಿ ಈ ದೂರ ದಾಖಲಿಸಿದರು. ಈ ವಿಭಾಗದಡಿ ಸ್ಪರ್ಧಿಗಳು ಕಾಲಿನ ಊನದಿಂದಾಗಿ ಕುಳಿತ ಸ್ಥಿತಿಯಲ್ಲೇ ಸ್ಪರ್ಧಿಸಬೇಕಾಗುತ್ತದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಪ್ರವೀಣ್ ಇಲ್ಲೂ ಫೇವರಿಟ್ ಆಗಿದ್ದರು. ಆದರೆ ಅವರು 2.00 ಮೀ. ಎತ್ತರ ಜಿಗಿಯಲು ಮಾತ್ರ ಸಾಧ್ಯವಾಯಿತು. ಉಜ್ಬೇಕಿಸ್ತಾನದ ತೆಮುರ್ಬೆಕ್ ಗಿಯಾಝೋವ್ (2.03 ಮೀ.) ಚಿನ್ನ ಗೆದ್ದರು. ಬ್ರಿಟನ್‌ನ ಜೊನಾಥನ್ ಬ್ರೂಮ್–ಎಡ್ವರ್ಡ್ಸ್ ಸಹ 2.00 ಮೀ. ಜಿಗಿದರೂ ಬೆಳ್ಳಿ ಪಡೆದರು. 37 ವರ್ಷ ವಯಸ್ಸಿನ ಎಡ್ವರ್ಡ್ಸ್ ಮೊದಲ ಯತ್ನದಲ್ಲೇ 2.00 ಮೀ. ಜಿಗಿದರೆ, ಪ್ರವೀಣ್ ಎರಡನೇ ಯತ್ನದಲ್ಲಿ ಈ ಎತ್ತರ ದಾಖಲಿಸಿದ್ದರು.
‘10–12 ದಿನಗಳಿಂದ ಪೃಷ್ಠದ ನೋವು ಕಾಡುತ್ತಿದೆ. ಹೀಗಾಗಿ ರನ್‌ಅಪ್ ಕೂಡ ಮೊಟಕುಗೊಳಿಸಿದ್ದೆ’ ಎಂದು 22 ವರ್ಷ ವಯಸ್ಸಿನ ಪ್ರವೀಣ್ ಹೇಳಿದರು. ಈ ವಿಭಾಗದಲ್ಲಿ ಸ್ಪರ್ಧಿಸುವವರ ಒಂದು ಕಾಲು ಮಾತ್ರ ಸುಸ್ಥಿತಿಯಲ್ಲಿರುತ್ತದೆ.
ಭ್ಯಾನ್‌ಗೆ ಬೆಳ್ಳಿ: ಮಹಿಳೆಯರ ಎಫ್ 51 ಕ್ಲಬ್ ಥ್ರೊನಲ್ಲಿ ಏಕತಾ ಆರನೇ ಹಾಗೂ ಅಂತಿಮ ಯತ್ನದಲ್ಲಿ 19.80 ಮೀ. ದೂರ ದಾಖಲಿಸಿದರು. ಉಕ್ರೇನಿನ ಝೊಯಾ ಒವಿಸಿ (24.03 ಮೀ.) ಚಿನ್ನ ಗೆದ್ದರೆ, ತಟಸ್ಥ ದೇಶಗಳ ತಂಡದ ಏಕತೆರಿನಾ ಪೊಟಪೊವಾ (18.60 ಮೀ.) ಕಂಚು ಗೆದ್ದರು. ಕೈ ಅಥವಾ ಕಾಲುಗಳಲ್ಲಿ ಹೆಚ್ಚಿನ ಊನ ಇದ್ದವರು ಈ ವಿಭಾಗದಡಿ ಸ್ಪರ್ಧಿಸುತ್ತಾರೆ.