Fri. Oct 10th, 2025

ಸಾಮಾನ್ಯ ಅಧ್ಯಯನ 1: ಇ–ಕಾಮರ್ಸ್‌ ; ಬ್ಯಾಂಕ್‌ ಮತ್ತು ಬ್ಯಾಂಕೇತರ ಸಂಸ್ಥೆ

ಗ್ರಾಹಕರಿಗೆ ನೇರವಾಗಿ ಸಾಲ ಪರವಾನಗಿ ಪಡೆದ ಅಮೆಜಾನ್

ಸಂದರ್ಭ: ಬೆಂಗಳೂರು ಮೂಲದ ಬ್ಯಾಂಕೇತರ ಹಣಕಾಸು ಕಂಪನಿ ಆಕ್ಸಿಯೊ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಾಗತಿಕ ಇ–ಕಾಮರ್ಸ್‌ ಕಂಪನಿ ಅಮೆಜಾನ್‌ ತಿಳಿಸಿದೆ. ಅಲ್ಲದೆ, ದೇಶದಲ್ಲಿ ನೇರವಾಗಿ ಗ್ರಾಹಕರಿಗೆ ಸಾಲ ನೀಡುವ ಪರವಾನಗಿ ಪಡೆಯಲಾಗಿದೆ ಎಂದು ತಿಳಿಸಿದೆ.

  • ಆಕ್ಸಿಯೊ 12 ವರ್ಷದ ಹಳೆಯದಾದ ಫಿನ್‌ಟೆಕ್‌ ಕಂಪನಿಯಾಗಿದೆ. ಸಣ್ಣ ಗ್ರಾಹಕರು ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲವನ್ನು ನೀಡುತ್ತದೆ.
  • 2018ರಿಂದ ಅಮೆಜಾನ್‌, ಆಕ್ಸಿಯೊ ಜೊತೆಗೆ ಒಪ್ಪಂದ ಮಾಡಿಕೊಂಡು ಸಾಲವನ್ನು ನೀಡುತ್ತಿತ್ತು. ಕಳೆದ ಡಿಸೆಂಬರ್‌ನಿಂದ ಸ್ವಾಧೀನ ಪ್ರಕ್ರಿಯೆ ಮಾತುಕತೆ ನಡೆಯುತ್ತಿತ್ತು. ಜೂನ್‌ನಲ್ಲಿ ಆರ್‌ಬಿಐ ಒಪ್ಪಂದಕ್ಕೆ ಅನುಮೋದಿಸಿದೆ.
  • ಆಕ್ಸಿಯೊ ಸ್ವಾಧೀನದಿಂದ ಅಮೆಜಾನ್‌ ತನ್ನ ವೇದಿಕೆಯ ಮೂಲಕ ಗ್ರಾಹಕರಿಗೆ ಮತ್ತು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ವಿವಿಧ ರೀತಿಯ ಸಾಲವನ್ನು ನೀಡಲು ಯೋಜಿಸಿದೆ.
  • ದೇಶದಲ್ಲಿ ಫ್ಲಿಪ್‌ಕಾರ್ಟ್‌ ಸೇರಿದಂತೆ ಬಹುತೇಕ ಇ–ಕಾಮರ್ಸ್‌ ಕಂಪನಿಗಳು ಬ್ಯಾಂಕ್‌ ಮತ್ತು ಬ್ಯಾಂಕೇತರ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಂಡು ಸಾಲ ನೀಡುತ್ತವೆ. ಆದರೆ, ಅಮೆಜಾನ್‌ ಈಗ ನೇರವಾಗಿ ಸಾಲ ನೀಡುವ ಪರವಾನಗಿ ಪಡೆದಿದೆ.

ಸಾಮಾನ್ಯ ಅಧ್ಯಯನ 1:

ಜಿಎಸ್‌ಟಿ: ತುಟ್ಟಿಯಾಗಲಿರುವ ಐಪಿಎಲ್‌ ಟಿಕೆಟ್

ಸಂದರ್ಭ: ಮುಂದಿನ ಆವೃತ್ತಿಯಿಂದ ಐಪಿಎಲ್‌ ಪಂದ್ಯ ವೀಕ್ಷಿಸಲು ಹೋಗುವವರು ಟಿಕೆಟ್‌ಗೆ ಹೆಚ್ಚಿನ ಹಣ ತೆರ ಬೇಕಾಗುತ್ತದೆ. ಸರ್ಕಾರ, ಇಂಥ ಪಂದ್ಯಗಳ ಟಿಕೆಟ್‌ಗೆ ವಿಧಿಸುವ ಜಿಎಸ್‌ಟಿಯನ್ನು ಶೇ 28 ರಿಂದ 40ರ ವ್ಯಾಪ್ತಿಗೆ ತಂದಿದೆ.

  • ‘ಕ್ಯಾಸಿನೊ, ರೇಸ್‌ ಕ್ಲಬ್‌ಗಳ ಪ್ರವೇಶ ಅಥವಾ ಐಪಿಎಲ್‌ನಂಥ ಕ್ರೀಡಾ ಕಾರ್ಯ ಕ್ರಮಗಳಿಗೆ ಪ್ರವೇಶದ ಟಿಕೆಟ್‌ಗಳ ಮೇಲೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಜೊತೆ ಶೇ 40 ಜಿಎಸ್‌ಟಿ ವಿಧಿಸಲಾಗುತ್ತಿದೆ.
  • ₹500 ಮೂಲದರದ ಟಿಕೆಟ್‌ಗೆ ಈ ಹಿಂದೆ ಶೇ 28 ಜಿಎಸ್‌ಟಿ ಸೇರಿ ₹640 ಆಗುತಿತ್ತು. ಈಗ ಶೇ 40 ಜಿಎಸ್‌ಟಿ ಹೇರಿಕೆ ಯಿಂದ ಟಿಕೆಟ್‌ ದರ ₹700 ಆಗಲಿದೆ.
  • ಐಪಿಎಲ್‌ ಟಿಕೆಟ್‌ಗಳನ್ನು ‘ಐಷಾರಾಮಿ ಸರಕು’ಗಳ ವ್ಯಾಪ್ತಿಗೆ ತರಲಾಗಿದೆ.
  • ಆದರೆ ಅಂತರರಾಷ್ಟ್ರೀಯ ಪಂದ್ಯಗಳ ಟಿಕೆಟ್‌ ದರ ಕೊಂಚ ಅಗ್ಗವಾಗಲಿದೆ. ಇತರೆ ಕ್ರೀಡಾ ಚಟುವಟಿಕೆಯಡಿ ಬರುವುದರಿಂದ ಈ ಪಂದ್ಯಗಳ ಟಿಕೆಟ್‌ ಮೇಲೆ ಶೇ 18 ಜಿಎಸ್‌ಟಿ ಮಾತ್ರ ವಿಧಿಸಲಾಗುತ್ತದೆ.

ಸಾಮಾನ್ಯ ಅಧ್ಯಯನ 2: ರಾಜ್ಯ ಚುನಾವಣಾ ಆಯೋಗ; ಸ್ಥಳೀಯ ಸಂಸ್ಥೆಗಳ ಚುನಾವಣೆ

ಪ್ರತ್ಯೇಕ ಮತ ಪಟ್ಟಿ, ಬ್ಯಾಲಟ್ ಪೇಪರ್

ಸಂದರ್ಭ: ತನ್ನ ವ್ಯಾಪ್ತಿಯಲ್ಲಿರುವ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು ಮತ ಪತ್ರ (ಬ್ಯಾಲಟ್ ಪೇಪರ್) ಬಳಕೆ ಹಾಗೂ ರಾಜ್ಯ ಚುನಾವಣಾ ಆಯೋಗದ ನೇತೃತ್ವದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ.

  • ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ವೂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳಿಗೆ ಹೊಸ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲು ಸರ್ಕಾರ ತೀರ್ಮಾನಿಸಿದೆ.
  • ಈ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬದಲಿಗೆ ಮತ ಪತ್ರ (ಬ್ಯಾಲಟ್ ಪೇಪರ್) ಬಳಸಿ ಮತ ಚಲಾಯಿಸುವ ವ್ಯವಸ್ಥೆಯನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ.
  • ಇವೆರಡೂ ವಿಷಯಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗುವುದು. ಮತದಾರರ ಪಟ್ಟಿ ಪರಿಷ್ಕರಿಸಿ, ಹೊಸ ಪಟ್ಟಿ ತಯಾರಿಸಲು ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಹೊಸ ನಿಯಮಾವಳಿಗಳನ್ನು ರೂಪಿಸಲಾಗುವುದು’, ನಿಯಮಗಳನ್ನು ಅಂತಿಮಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲಾಗುವುದು.
  • ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌.ಸಂಗ್ರೇಶಿ ಅವರು ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ 2024ರ ಸೆಕ್ಷನ್‌ 35 ಅನ್ನು ಉಲ್ಲೇಖಿಸಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು.
  • ಅದರ ಆಧಾರದ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಂಚಾಯತ್‌ರಾಜ್‌ ಕಾಯ್ದೆ, ಮುನಿಸಿಪಾಲಿಟಿ ಕಾಯ್ದೆಯಲ್ಲೂ ಈ ಅವಕಾಶ ಕಲ್ಪಿಸಲಾಗಿದೆ.
  • ಅಲ್ಲದೇ, ಕೇಂದ್ರ ಚುನಾವಣಾ ಆಯೋಗದಂತೆ ರಾಜ್ಯ ಚುನಾವಣಾ ಆಯೋಗವೂ ಸ್ವಾಯತ್ತ ಸಂಸ್ಥೆ. ಕೇಂದ್ರ ಚುನಾವಣಾ ಆಯೋಗದಷ್ಟೇ ರಾಜ್ಯ ಚುನಾವಣಾ ಆಯೋಗಕ್ಕೂ ಅಧಿಕಾರ ಇದೆ. ಮತದಾರರ ಪಟ್ಟಿಯನ್ನೂ ಸ್ವತಂತ್ರವಾಗಿ ತಯಾರಿಸಬಹುದಾಗಿದೆ.
  • 2010 ಮತ್ತು 2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಇವಿಎಂಗಳನ್ನು ಬಳಸಲಾಗುತ್ತಿತ್ತು. ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮತಪತ್ರ ಬಳಸಲಾಗುತ್ತಿದೆ. ವಿಧಾನಪರಿಷತ್ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸಲಾಗುತ್ತಿತ್ತು.

ಸಾಮಾನ್ಯ ಅಧ್ಯಯನ 2: ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಮಾಜಿ ದೇವದಾಸಿಯರ ಮರು ಸಮೀಕ್ಷೆ

2 ಸಮೀಕ್ಷೆಗಳಿಗೆ ಸಿ.ಎಂ ಚಾಲನೆ

ಸಂದರ್ಭ: ರಾಜ್ಯದಲ್ಲಿ ಸೆ. 15ರಿಂದ ಒಟ್ಟು 45 ಕೆಲಸದ ದಿನ, ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಮತ್ತು 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಯಲಿದೆ. ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ನಡೆಯುತ್ತಿರುವುದು ವಿಶೇಷ.

  • ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಯಲಿರುವ ಈ ಸಮೀಕ್ಷೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
  • ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಈ ಸಮೀಕ್ಷೆಗಳನ್ನು ನಡೆಸಲು ಸರ್ಕಾರ ಉದ್ದೇಶಿಸಿದೆ. ಎರಡೂ ಸಮೀಕ್ಷೆಗಳು ಪ್ರತ್ಯೇಕವಾಗಿ ನಡೆಯಲಿವೆ.
  • ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ‘ಕರ್ಮಣಿ ವೆಬ್ ಅಪ್ಲಿಕೇಷನ್‌’ ಹಾಗೂ ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಸೇವಾ ಸಿಂಧು ಮೂಲಕ ‘ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ವೆಬ್ ಅಪ್ಲಿಕೇಷನ್‌’ ಸಿದ್ಧಪಡಿಸಲಾಗಿದೆ. 
  • ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯನ್ನು ಎಲ್ಲ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗುವುದು.
  • ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯು ಅದೇ ಸಮುದಾಯದವರ ಮೂಲಕವೇ ನಡೆಯಲಿರುವುದು ವಿಶೇಷವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.
  • ಮಾಜಿ ದೇವದಾಸಿ ಯರ ಮರು ಸಮೀಕ್ಷೆಯನ್ನು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳ ಕಚೇರಿಯಲ್ಲಿ ನಡೆಸಲಾಗು ವುದು.

ಸಮೀಕ್ಷೆಗಳ ವೈಶಿಷ್ಟ್ಯ

  • lಮೊಬೈಲ್‌ ಆ್ಯಪ್‌ ಬಳಕೆ
  • lಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಂಡ ಸಮಿತಿ
  • lಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಮಾಜಿ ದೇವದಾಸಿ ಮಹಿಳೆಯರ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಆಂತರಿಕ ಸಮಿತಿ.

ಮಾಜಿ ದೇವದಾಸಿ ಸಮೀಕ್ಷೆ ಎಲ್ಲೆಲ್ಲಿ?

  • ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳು.

ಸಾಮಾನ್ಯ ಅಧ್ಯಯನ 2:

ಡಿ.ಕೆ ಶಿವಕುಮಾರ್‌ ದೇಶದ ಎರಡನೇ ಶ್ರೀಮಂತ ಸಚಿವ

ಸಂದರ್ಭ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇಶದ ಎರಡನೇ ಶ್ರೀಮಂತ ಸಚಿವ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.

  • ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರ ಗಳನ್ನು ವಿಶ್ಲೇಷಿಸಿ ಎಡಿಆರ್ ವರದಿ ಬಿಡುಗಡೆ ಮಾಡಿದೆ. 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರು ಸಲ್ಲಿಸಿರುವ ಪ್ರಮಾಣಪತ್ರಗಳನ್ನು ವಿಶ್ಲೇಷಿಸಲಾಗಿದೆ.
  • ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರು ಇದ್ದಾರೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ.
  • 643 ಸಚಿವರ ಪೈಕಿ 302 ಮಂದಿ (ಶೇ 47) ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. 174 ಸಚಿವರ ವಿರುದ್ಧ (ಶೇ 27) ಗಂಭೀರ ಅಪರಾಧ ಪ್ರಕರಣಗಳಿವೆ. ಈ ಸಚಿವರು ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಸಂಪುಟದ 72ರಲ್ಲಿ 29 (ಶೇ 40) ಮಂದಿ ವಿರುದ್ಧ ಪ್ರಕರಣಗಳಿವೆ.

ಸಾಮಾನ್ಯ ಅಧ್ಯಯನ 2:

ಐಐಎಸ್‌ಸಿ ಅತ್ಯುತ್ತಮ ವಿವಿ

ಸಂದರ್ಭ: ಕೇಂದ್ರ ಶಿಕ್ಷಣ ಇಲಾಖೆಯು ಬಿಡುಗಡೆಗೊಳಿಸಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ–2025ರ (ಎನ್‌ಐಆರ್‌ಎಫ್) ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಸತತ 10ನೇ ವರ್ಷವೂ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. 

  • ಎನ್‌ಐಆರ್‌ಎಫ್‌ನ 10ನೇ ಆವೃತ್ತಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಕಟಿಸಿದರು.
  • ‘ಸಮಗ್ರ’ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌ (ಐಐಟಿ ಮದ್ರಾಸ್‌) ಸತತ 7ನೇ ವರ್ಷವೂ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಈ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ 2ನೇ ಸ್ಥಾನದಲ್ಲಿದ್ದರೆ, ಐಐಟಿ ಬಾಂಬೆ ಹಾಗೂ ಐಐಟಿ ದೆಹಲಿ ನಂತರದ ಸ್ಥಾನದಲ್ಲಿವೆ.
  • ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ ಅಗ್ರಸ್ಥಾನದಲ್ಲಿದೆ. ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಈ ಸಂಸ್ಥೆಯು, ಎನ್‌ಐಆರ್‌ಎಫ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಸ್ಥಾನ ಪಡೆದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಎರಡನೇ ಸ್ಥಾನದಲ್ಲಿದೆ.
  • ಕಾಲೇಜುಗಳ ವಿಭಾಗದಲ್ಲಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜು ಮೊದಲ ಹಾಗೂ ಮಿರಾಂಡಾ ಹೌಸ್‌ ಎರಡನೇ ಸ್ಥಾನದಲ್ಲಿವೆ. ಹಂಸರಾಜ್‌ ಕಾಲೇಜು ಮತ್ತು ಕಿರೋರಿ ಮಾಲ್‌ ಕಾಲೇಜು ನಂತರದ ಸ್ಥಾನದಲ್ಲಿವೆ.
  • ಎಂಜಿನಿಯರಿಂಗ್ ಕಾಲೇಜುಗಳ ಮೊದಲ 10 ಸ್ಥಾನದಲ್ಲಿವೆ 9 ಐಐಟಿಗಳಿವೆ. ಐಐಟಿ ಮದ್ರಾಸ್, ಐಐಟಿ ಬಾಂಬೆ ಹಾಗೂ ಐಐಟಿ ದೆಹಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ತಿರುಚನಾಪಳ್ಳಿಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯು (ಎನ್‌ಐಟಿ) ಪಟ್ಟಿಯಲ್ಲಿರುವ ಐಐಟಿಯೇತರ ಸಂಸ್ಥೆಯಾಗಿದೆ.
  • ರಾಜ್ಯದ ಸಂಸ್ಥೆಗಳಿಗೆ ಗೌರವ: ಸುರತ್ಕಲ್‌ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರಶಾಸ್ತ್ರ ಸಂಸ್ಥೆ,  ಕ್ರಮವಾಗಿ 54ನೇ ಹಾಗೂ 60ನೇ ಸ್ಥಾನ ಗಳಿಸಿವೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಜೆಎಸ್‌ಎಸ್ ಅಕಾಡೆಮಿ 38ನೇ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ 96ನೇ ಸ್ಥಾನ ಪಡೆದಿವೆ.
  • ಸರ್ಕಾರಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 50ನೇ ಸ್ಥಾನ ಪಡೆದಿದ್ದು, ರಾಜ್ಯದ ಯಾವುದೇ ಸರ್ಕಾರಿ ಕಾಲೇಜು ಟಾಪ್ 100ರಲ್ಲಿ ಸ್ಥಾನ ಪಡೆದಿಲ್ಲ.
  • ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಇನೋವೇಶನ್‌ ಸಂಸ್ಥೆಗಳಲ್ಲಿ ಎಂ.ಎಸ್. ರಾಮಯ್ಯ ಟೆಕ್ನಾಲಜಿ, ಕ್ರೈಸ್ಟ್‌ ವಿಶ್ವವಿದ್ಯಾಲಯ, ಐಐಟಿ ಧಾರವಾಡ, ಮ್ಯಾನೇಜ್ಮೆಂಟ್‌ ಕಾಲೇಜುಗಳಲ್ಲಿ ಅಲಯನ್ಸ್‌ ವಿಶ್ವವಿದ್ಯಾಲಯ, ವೈದ್ಯಕೀಯ ಸಂಸ್ಥೆಗಳಲ್ಲಿ ಮಣಿಪಾಲ–ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜುಗಳು, ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಬೆಳಗಾವಿಯ ಜೆಎನ್‌ಎಂಸಿ, ಎಂ.ಎಸ್. ರಾಮಯ್ಯ ಕಾಲೇಜು ಸ್ಥಾನ ಪಡೆದಿವೆ.
  • ‘ಕೆಲ ವಿಶ್ವವಿದ್ಯಾಲಯಗಳು ಎನ್‌ಐಆರ್‌ಎಫ್‌ಗೆ ಅರ್ಜಿ ಸಲ್ಲಿಸಿಲ್ಲ. ಬೋಧಕ ಸಿಬ್ಬಂದಿ ಕೊರತೆ, ಸಂಶೋಧನಾ ಚಟುವಟಿಕೆಗಳ ಸ್ಥಗಿತದ ಕಾರಣ ಕೆಲವು ಮಾನ್ಯತೆ ಕಳೆದುಕೊಂಡಿವೆ. ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗಿಯಾದರೆ ರಾಜ್ಯಕ್ಕೆ ಇನ್ನೂ ಹೆಚ್ಚಿನ ಸ್ಥಾನಗಳು ಲಭಿಸಲಿವೆ’ ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಪ್ರಮುಖ ವಿಭಾಗಗಳು

  • lಮ್ಯಾನೇಜ್‌ಮೆಂಟ್‌ ಕಾಲೇಜುಗಳ ವಿಭಾಗದಲ್ಲಿ ಅಹಮದಾಬಾದ್‌ನ ಐಐಎಂ ಮೊದಲ ಸ್ಥಾನಲ್ಲಿದ್ದರೆ ಐಐಎಂ ಬೆಂಗಳೂರು 2ನೇ ಸ್ಥಾನದಲ್ಲಿದೆ
  • lಕಾನೂನು ವಿಭಾಗದಲ್ಲಿ ‘ನ್ಯಾಷನಲ್‌ ಲಾ ಸ್ಕೂಲ್ ಆಫ್‌ ಇಂಡಿಯಾ ಯೂನಿವರ್ಸಿಟಿ’ಯು ಮೊದಲ ಸ್ಥಾನ ಪಡೆದುಕೊಂಡಿದೆ. ದೆಹಲಿಯ ನ್ಯಾಷನಲ್‌ ಲಾ ಯೂನಿವರ್ಸಿಟಿ ಹಾಗೂ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ ಯೂನಿವರ್ಸಿಟಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ
  • lಸಂಶೋಧನಾ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ ಮೊದಲ ಹಾಗೂ ಐಐಟಿ ಮದ್ರಾಸ್‌ 2ನೇ ಸ್ಥಾನದಲ್ಲಿವೆ
  • lಮುಕ್ತ ವಿಶ್ವವಿದ್ಯಾಲಯ ವಿಭಾಗದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಮೊದಲ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಮೈಸೂರು ಎರಡನೇ ಸ್ಥಾನದಲ್ಲಿದೆ

ಸಾಮಾನ್ಯ ಅಧ್ಯಯನ 2:

ಕುಕಿ ಸಂಘಟನೆ ಜತೆ ಕೇಂದ್ರ ಒಪ್ಪಂದ

ಸಂದರ್ಭ: ಮಣಿಪುರದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸು ವುದೂ ಸೇರಿದಂತೆ ಹಲವು ನಿಯಮಗಳ ಕುರಿತ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಹಾಗೂ ಎರಡು ಪ್ರಮುಖ ಕುಕಿ ಸಂಘಟನೆ ಗಳು ಸಹಿ ಹಾಕಿದವು.

  • ‘ಕುಕಿ ರಾಷ್ಟ್ರೀಯ ಸಂಘಟಣೆ (ಕೆಎನ್‌ಒ) ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್) ಕಾರ್ಯಾಚರಣೆ ನಿಗ್ರಹ (ಎಸ್‌ಒಒ) ಒಪ್ಪಂದಕ್ಕೆ ಸಹಿ ಹಾಕಿವೆ.
  • ಕಳೆದ ಕೆಲ ದಿನಗಳಿಂದ ಗೃಹ ಸಚಿವಾಲಯದ ಅಧಿಕಾರಿಗಳು ಮತ್ತು ಕುಕಿ ಗುಂಪುಗಳ ನಿಯೋಗದ ನಡುವೆ ನಡೆದ ಸರಣಿ ಸಭೆಗಳ ಬಳಿಕ ಈ ಒಪ್ಪಂದ ನಡೆದಿದೆ ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ದೆಹಲಿಯಲ್ಲಿ ಗೃಹ ಸಚಿವಾಲಯ, ಮಣಿಪುರ ಸರ್ಕಾರ, ಕೆಎನ್‌ಒ ಮತ್ತು ಯುಪಿಎಫ್ ಪ್ರತಿನಿಧಿಗಳ ನಡುವೆ ತ್ರಿಪಕ್ಷೀಯ ಸಭೆ ನಡೆಯಿತು. ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ ಒಂದು ವರ್ಷದ ಅವಧಿಗೆ ಜಾರಿಗೆ ಬರುವಂತೆ ನಿಯಮಗಳು ಮತ್ತು ಷರತ್ತು ಗಳ ಅನ್ವಯ ಎಲ್ಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ’ ಎಂದು ಗೃಹ ಸಚಿವಾಲಯ ತಿಳಿಸಿದೆ.
  • ಮಣಿಪುರದ ಪ್ರಾದೇಶಿಕ ಸಮಗ್ರತೆ ಯನ್ನು ಕಾಪಾಡಿಕೊಳ್ಳಲು ಮತ್ತು ಮಾತುಕತೆಯ ಮೂಲಕ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ತರಲು ಎಲ್ಲರೂ ಒಪ್ಪಿಕೊಂಡಿದ್ದಾರೆ.
  • ಸಂಘರ್ಷ ಪೀಡಿತ ಪ್ರದೇಶಗಳಿಂದ ಏಳು ಶಿಬಿರಗಳನ್ನು ಸ್ಥಳಾಂತರಿಸಬೇಕು. ನಿರಾಶ್ರಿತರ ಶಿಬಿರಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಹತ್ತಿರದ ಸಿಆರ್‌‍ಪಿಎಫ್‌ ಮತ್ತು ಬಿಎಸ್‌ಎಫ್‌ ಶಿಬಿರ ಗಳಿಗೆ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸ ಬೇ‌ಕು. ವಿದೇಶಿ ಪ್ರಜೆಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಮತ್ತು‌ ಸಂಘಟನೆಯ ಸದಸ್ಯರನ್ನು ಭದ್ರತಾ ಪಡೆಗಳ ಕಟ್ಟುನಿಟ್ಟಿನ ತನಿಖೆಗೆ ಒಳಪಡಿಸಲು ಕೆಎನ್ಒ ಮತ್ತು ಯುಪಿಎಫ್ ಒಪ್ಪಿಕೊಂಡಿವೆ.
  • 2008ರಲ್ಲಿ ಮೊದಲ ಬಾರಿಗೆ ಎಸ್ಒಒ ಒಪ್ಪಂದ ನಡೆದಿತ್ತು. ಬಳಿಕ ಅದನ್ನು ನಿಗದಿತ ಅವಧಿಗೆ ನವೀಕರಿಸ ಲಾಗುತ್ತಿತ್ತು. ಆದರೆ, ಜನಾಂಗೀಯ ಕಲಹದಿಂದಾಗಿ ಫೆಬ್ರುವರಿ 2024ರಿಂದ ಈ ಒಪ್ಪಂದ ಮುಂದುವರಿದಿರಲಿಲ್ಲ.

ಸಾಮಾನ್ಯ ಅಧ್ಯಯನ 2:

ಜೆಪಿಸಿ ರಚನೆ; ಮತ್ತಷ್ಟು ವಿಳಂಬ: ಸಮಿತಿಯಲ್ಲಿ ಸೇರದಿರಲು ಹಲವು ಪಕ್ಷಗಳ ನಿರ್ಧಾರ

ಸಂದರ್ಭ: ಬಂಧನಕ್ಕೆ ಒಳಗಾಗಿ 30 ದಿನ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಪದಚ್ಯುತಿಗೊಳಿಸುವುದಕ್ಕೆ ಅನುವು ಮಾಡಿಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಎರಡು ವಾರಗಳು ಕಳೆದಿವೆ. ಆದರೆ ಮಸೂದೆಯನ್ನು ಪರಿಶೀಲಿಸಲಿ ರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸದಸ್ಯರ ಹೆಸರು ಇನ್ನೂ ಅಂತಿಮಗೊಂಡಿಲ್ಲ.

  • ವಕ್ಫ್‌ (ತಿದ್ದುಪಡಿ) ಮಸೂದೆ– 2024 ಮತ್ತು ‘ಒಂದು ರಾಷ್ಟ್ರ–ಒಂದು ಚುನಾವಣೆ’ಗೆ ಸಂಬಂಧಿಸಿದ ಮಸೂದೆಗಳ ಪರಿಶೀಲನೆಗೆ ಜೆಪಿಸಿ ರಚನೆ ಪ್ರಕ್ರಿಯೆ ತ್ವರಿತವಾಗಿ ನಡೆದಿತ್ತು. ಆದರೆ ಈ ಮಸೂದೆಯ ವಿಚಾರದಲ್ಲಿ ಜೆಪಿಸಿ ರಚನೆ ವಿಳಂಬವಾಗಿದೆ.
  • ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ಹುದ್ದೆಯಿಂದ ಪದಚ್ಯುತಿ ಗೊಳಿಸಲು ಸಾಧ್ಯವಾಗುವಂತಹ ಮೂರು ಮಸೂದೆಗಳನ್ನು ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್‌ 20ರಂದು ಲೋಕಸಭೆಯಲ್ಲಿ ಮಂಡಿಸಿದ್ದರು. ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ ತಿದ್ದುಪಡಿ ಮಸೂದೆ, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ತಿದ್ದುಪಡಿ ಮಸೂದೆ– 2025 ಗಳನ್ನು ಪರಿಶೀಲನೆಗೆ ಜೆಪಿಸಿಗೆ ಒಪ್ಪಿಸಲಾಗಿದೆ ಎಂದು ಶಾ ಹೇಳಿದ್ದರು.
  • ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಸಮಾಜವಾದಿ ಪಾರ್ಟಿ (ಎಸ್‌ಪಿ), ಎಎಪಿ ಮತ್ತು ಶಿವಸೇನಾ (ಯುಬಿಟಿ) ಪಕ್ಷಗಳು ಜೆಪಿಸಿ ಸೇರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿವೆ. ಈ ಮಸೂದೆ ‘ರಾಜಕೀಯ ಅಸ್ತ್ರ’ವಾಗಿ ಬಳಕೆಯಾಗಬಹುದು ಎಂಬುದು ಈ ಪಕ್ಷಗಳ ಆರೋಪ.
  • ಜೆಪಿಸಿ ಸೇರುವ ಕುರಿತು ಕಾಂಗ್ರೆಸ್ ಪಕ್ಷ ಇದುವರೆಗೂ ಲೋಕಸಭಾ ಸಚಿವಾಲಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಮಿತಿ ಸೇರುವ ಬಗ್ಗೆ ಪಕ್ಷದೊಳಗೆ ಹಾಗೂ ‘ಇಂಡಿಯಾ’ ಮೈತ್ರಿಕೂಟ ದಲ್ಲಿ ಭಿನ್ನಾಭಿಪ್ರಾಯ ಇದೆ. ತನ್ನ ನಿರ್ಧಾರವನ್ನು ಇನ್ನೂ ಬಹಿರಂಗಪಡಿಸ ದಿರುವ ಆರ್‌ಜೆಡಿಗೆ ಕೂಡ ಸಮಿತಿಗೆ ಸೇರುವ ಇಷ್ಟವಿಲ್ಲ.

ಸಾಮಾನ್ಯ ಅಧ್ಯಯನ 3: ಎ.ಐ ನಗರ

ಬಿಡದಿಯಲ್ಲಿ ದೇಶದ ಮೊದಲ ಎ.ಐ ನಗರ

ಸಂದರ್ಭ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿಯಲ್ಲಿ ನಿರ್ಮಾಣವಾಗಲಿರುವ ಬಿಡದಿ ಸಮಗ್ರ ಉಪನಗರ ಯೋಜನೆ ಅಡಿ ‘ಕೆಲಸ, ವಾಸ, ಉಲ್ಲಾಸ’ ಪರಿಕಲ್ಪನೆ ಅಡಿ ದೇಶದಲ್ಲೇ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ನಗರವನ್ನು ಅಭಿವೃದ್ಧಿಪಡಿಸಲಾಗುವುದು.

  • ಯೋಜನೆಗಾಗಿ ಒಂಬತ್ತು ಗ್ರಾಮಗಳ 8,493 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು. ಭೂಮಿ ಕೊಟ್ಟವರಿಗೆ 2013ರ ಭೂ ಸ್ವಾಧೀನ ಕಾಯ್ದೆ ಅಡಿ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪ್ರತಿ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿವರೆಗೆ ಪರಿಹಾರ ನೀಡಲಾಗುವುದು. ಒಪ್ಪಿಗೆ ಪತ್ರ ಕೊಟ್ಟವರಿಗೆ ಮೂರು ದಿನದಲ್ಲಿ ಪರಿಹಾರದ ಚೆಕ್ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
  • ‘ಪರಿಹಾರದ ಬದಲು ಯೋಜನೆಯ ಸಹಭಾಗಿತ್ವ ಪಡೆಯಲು ಮುಂದೆ ಬರುವ ರೈತರಿಗೆ, ವಸತಿ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ 50:50 ಅನುಪಾತದಲ್ಲಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿ ಪಡಿಸುವ ಪ್ರದೇಶದಲ್ಲಿ 45:55 ಅನುಪಾತದಲ್ಲಿ ನಿವೇಶನ ಒದಗಿಸಲಾಗುವುದು.
  • ಯೋಜನೆಯ ಅಂತಿಮ ಅಧಿಸೂಚನೆ ದಿನಾಂಕದಿಂದ ಪರಿಹಾರ ನೀಡುವುವರೆಗೆ ಹಾಗೂ ಅಭಿವೃದ್ಧಿ ಪಡಿಸಿದ ಜಾಗವನ್ನು ಮಾಲೀಕರಿಗೆ ಹಸ್ತಾಂತರ ಮಾಡುವವರೆಗೆ ಜೀವನೋಪಾಯದ ಬೆಂಬಲಕ್ಕಾಗಿ ಪ್ರತ್ಯೇಕವಾಗಿ ವಾರ್ಷಿಕ ಪರಿಹಾರ ನೀಡಲಾಗುವುದು.
  • ವರ್ಷಕ್ಕೆ ಪ್ರತಿ ಎಕರೆ ಖುಷ್ಕಿ ಜಮೀನಿಗೆ (ಒಣಭೂಮಿ) ₹30 ಸಾವಿರ, ತರಿಗೆ ಜಮೀನಿಗೆ (ಮಳೆ ಅಥವಾ ನೀರಾವರಿಯಿಲ್ಲದೆ ವ್ಯವಸಾಯ ಮಾಡುವ ಭೂಮಿ) ₹40 ಸಾವಿರ, ಭಾಗಾಯ್ತು ಭೂಮಿಗೆ (ನೀರಾವರಿ ಅಥವಾ ಮಳೆಯಾಶ್ರಿತ ತೋಟ) ₹50 ಸಾವಿರ ಹಾಗೂ ಭೂರಹಿತ ಕುಟುಂಬಕ್ಕೆ ₹25 ಸಾವಿರ ನೀಡಲಾಗುವುದು.

ಸಾಮಾನ್ಯ ಅಧ್ಯಯನ 3:

ಶಿಶು ಮರಣ ಪ್ರಮಾಣ ಶೇ 37ರಷ್ಟು ಇಳಿಕೆ

ಸಂದರ್ಭ: ದೇಶದಲ್ಲಿ ಶಿಶುಗಳ ಮರಣ ಪ್ರಮಾಣದಲ್ಲಿ (ಐಎಂಆರ್‌) ಗಣನೀಯ ಇಳಿಕೆ ದಾಖಲಾಗಿದೆ. 2013ಕ್ಕೆ ಹೋಲಿಸಿದರೆ 2023ರಲ್ಲಿ ಶಿಶುಗಳ ಮರಣ ಪ್ರಮಾಣವು ದಾಖಲೆಯ ಶೇ 37ರಷ್ಟು ಕಡಿಮೆಯಾಗಿದೆ.

  • ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಬಿಡುಗಡೆಗೊಳಿಸಿರುವ 2023ರ ಮಾದರಿ ನೋಂದಣಿ ವರದಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ.
  • ಒಂದು ವರ್ಷದಲ್ಲಿ ಜನಿಸಿದ ಪ್ರತಿ ಸಾವಿರ ಮಗುವಿನ ಪೈಕಿ ಮರಣ ಹೊಂದಿದ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ ಈ ದತ್ತಾಂಶ ನಿಗದಿಪಡಿಸಲಾಗುತ್ತದೆ.
  • 2013ರಲ್ಲಿ ಶೇ 40ಕ್ಕೆ ತಲುಪಿದ್ದ ಶಿಶುಗಳ ಮರಣ ಪ್ರಮಾಣವು 2023ರ ವೇಳೆಗೆ 25ಕ್ಕೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
  • ಅಲ್ಲದೇ, 1971ಕ್ಕೆ ಹೋಲಿಸಿದರೆ ಶಿಶುಗಳ ಮರಣ ಪ್ರಮಾಣವು 2023ರ ವೇಳೆಗೆ ಬರೋಬ್ಬರಿ ಶೇ 80ರಷ್ಟು ಇಳಿಕೆಯಾಗಿದೆ. 1971ರಲ್ಲಿ ಶಿಶುಗಳ ಮರಣ ಸಂಖ್ಯೆಯು 129 ಆಗಿತ್ತು ಎಂದೂ ವರದಿ ಉಲ್ಲೇಖಿಸಿದೆ. 

0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments