Fri. Oct 10th, 2025

ಶಾಲೆಗಳ ಅಭಿವೃದ್ಧಿಗೆ ಇನ್ನು ‘ಸಿಎಸ್‌ಆರ್‌ ನಿಧಿ’

ಸಂದರ್ಭ: ‘ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಬಳಸಿ ಕೊಂಡು ಸರ್ಕಾರಿ ಶಾಲೆಗಳ ಸ್ಥಾಪನೆ, ಅಭಿವೃದ್ಧಿ ಮಾಡುವ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

  • ‘ಸರ್ಕಾರಿ ಶಾಲೆಗಳ ಸ್ಥಾಪನೆ, ಅತ್ಯುತ್ತಮ ಕಟ್ಟಡಗಳನ್ನು ನಿರ್ಮಿಸಿ ಕೊಡುವ ಕಂಪನಿಗಳ ಹೆಸರನ್ನೇ ಶಾಲೆಗೆ ಇಡಲು ಅನುಮತಿ ನೀಡಲಾಗುವುದು. ನಗರದ ಮಾದರಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಸಿಬಿಎಸ್‌ಇ ಮಾದರಿ ಶಿಕ್ಷಣ ಪಡೆಯಲು ಅವಕಾಶಕಲ್ಪಿಸಲಾಗುವುದು.
  • ‘ಈಗಾಗಲೇ ಒಂದಷ್ಟು ಶಾಲೆಗಳು ಪ್ರಾರಂಭವಾಗಿವೆ. ಮುಂದಿನ ಶೈಕ್ಷಣಿಕ ವರ್ಷದ ಒಳಗೆ 2,000 ಶಾಲೆಗಳ ನಿರ್ಮಾಣದ ಗುರಿ ಇಟ್ಟುಕೊಂಡಿದ್ದೇವೆ. ರಾಜ್ಯದಲ್ಲಿ ₹7,800 ಕೋಟಿಯಷ್ಟು ಸಿಎಸ್‌‌ಆರ್‌ ಹಣ ಲಭ್ಯವಿದೆ. ನನ್ನ ಕ್ಷೇತ್ರದಲ್ಲಿ ಟೊಯೊಟಾ ಕಂಪನಿ ತಲಾ‌ ₹10 ಕೋಟಿ ವೆಚ್ಚದಲ್ಲಿ ಏಳು ಕೆಪಿಎಸ್‌ ಶಾಲೆ ಕಟ್ಟಡ ನಿರ್ಮಾಣ ಮಾಡುತ್ತಿದೆ. ಅದೇ ರೀತಿ ಇತರೆ ಉದ್ಯಮಿಗಳನ್ನೂ ಉತ್ತೇಜಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಮೂರು ಪಂಚಾಯಿತಿಗಳಿಗೆ ಒಂದು‌ ಕೆಪಿಎಸ್‌ ಶಾಲೆ ಆರಂಭಿಸಲಾಗುವುದು. ಮಕ್ಕಳು ಸರ್ಕಾರಿ ಶಾಲೆಗಳನ್ನು ತೊರೆಯದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.

‘ಜಿಎಸ್‌ಟಿ ಪರಿಷ್ಕರಣೆ: ಲಾಭ ಗ್ರಾಹಕರಿಗೆ’

ಸಂದರ್ಭ: ಜಿಎಸ್‌ಟಿ ದರಗಳ ಪರಿಷ್ಕರಣೆಯ ಪ್ರಯೋಜನಗಳನ್ನು ಗ್ರಾಹಕರಿಗೆ ಸಂಪೂರ್ಣವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿಗಾವಹಿಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್.

  • ವಿವಿಧ ವಸ್ತುಗಳ ಮೇಲಿನ ತೆರಿಗೆ ಇಳಿಕೆಯು ಅವುಗಳ ಬೆಲೆಗಳಲ್ಲಿ ಪ್ರತಿಫಲಿಸಲಿವೆ ಎಂಬ ಭರವಸೆಯನ್ನು ಉದ್ಯಮ ಕ್ಷೇತ್ರ ನೀಡಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  • ನಿತ್ಯ ಬಳಕೆಯ ಹತ್ತು ಹಲವು ಉತ್ಪನ್ನಗಳು, ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯು ಇತ್ತೀಚೆಗೆ ತೆಗೆದುಕೊಂಡಿದ್ದು, ಈ ತೀರ್ಮಾನಗಳು ನವರಾತ್ರಿಯ ಮೊದಲ ದಿನವಾದ ಇದೇ 22ರಿಂದಲೇ ಜಾರಿಗೆ ಬರಲಿವೆ.

‘ಚಿಲ್ಲರೆ ಹಣದುಬ್ಬರ ಇಳಿಕೆ ನಿರೀಕ್ಷೆ’

ಸಂದರ್ಭ: ಜಿಎಸ್‌ಟಿ ಸರಳೀಕರಣದಿಂದ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಚಿಲ್ಲರೆ ಹಣದುಬ್ಬರವು

ಶೇ 0.65ರಿಂದ ಶೇ 0.75ರಷ್ಟು ಇಳಿಕೆ ಆಗಲಿದೆ ಎಂದು ಎಸ್‌ಬಿಐ ರಿಸರ್ಚ್‌ ತಿಳಿಸಿದೆ.

  • ಮನೆ ಬಳಕೆಯ ಅಗತ್ಯ ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆಯು ಜಿಎಸ್‌ಟಿ ಸರಳೀಕರಣದಿಂದ ಕಡಿಮೆ ಆಗಲಿದೆ. ಇದು ಚಿಲ್ಲರೆ ಹಣದುಬ್ಬರ ಇಳಿಕೆಗೆ ನೆರವಾಗಲಿದೆ ಎಂದು ತಿಳಿಸಿದೆ.
  • ಅಗತ್ಯ ವಸ್ತುಗಳ (ಅಂದಾಜು 295 ಸರಕುಗಳು) ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿದಿದೆ ಅಥವಾ ಶೂನ್ಯವಾಗಿದೆ. ಹೀಗಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.25ರಿಂದ ಶೇ 0.30ರಷ್ಟು ಕಡಿಮೆಯಾಗಲಿದೆ.
  • ಅಲ್ಲದೆ, ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಸಹ ಇಳಿಕೆಯಾಗಿದ್ದು, ಶೇ 0.40ರಿಂದ ಶೇ 0.45ರಷ್ಟು ಹಣದುಬ್ಬರ ಕಡಿಮೆಯಾಗಲಿದೆ. ಒಟ್ಟಾರೆ, ಮುಂದಿನ ಆರ್ಥಿಕ ವರ್ಷದ ವೇಳೆಗೆ ಹಣದುಬ್ಬರ ಶೇ 0.65ರಿಂದ ಶೇ 0.75ರಷ್ಟು ಇಳಿಕೆ ಆಗಲಿದೆ ಎಂದು ತಿಳಿಸಿದೆ.

ಟಾಟಾ ಮೋಟರ್ಸ್ ವಾಹನ ಬೆಲೆ ಇಳಿಕೆ

  • ದೇಶದ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್‌ ಸೆಪ್ಟೆಂಬರ್‌ 22ರಿಂದ ಜಾರಿಗೆ ಬರುವಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ.
  • ಟಿಯಾಗೊ ಕಾರಿನ ಬೆಲೆಯನ್ನು ₹75 ಸಾವಿರ ಕಡಿಮೆ ಮಾಡಿದೆ. ಟಿಗಾರ್‌ (₹80 ಸಾವಿರ), ಆಲ್ಟ್ರೋಜ್ (₹1.10 ಲಕ್ಷ), ಪಂಚ್‌ (₹85 ಸಾವಿರ), ನೆಕ್ಸಾನ್‌ (₹1.55 ಲಕ್ಷ), ಹ್ಯಾರಿಯರ್‌ ₹1.4 ಲಕ್ಷ ಮತ್ತು ಸಫಾರಿ ದರ ₹1.45 ಲಕ್ಷದವರೆಗೆ ಕಡಿಮೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
  • ಜಿಎಸ್‌ಟಿ ಕಡಿತದ ಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗು ವುದು ಎಂದು ಟಾಟಾ ಮೋಟರ್ಸ್ ತಿಳಿಸಿದೆ.

‘ವ್ಯಾಪಾರ ಒಪ್ಪಂದ: ಭಾರತದ ಜೊತೆ ಶೀಘ್ರ ಮಾತುಕತೆ’

ಸಂದರ್ಭ: ವ್ಯಾಪಾರ ಒಪ್ಪಂದ ಕುರಿತಂತೆ ಅಮೆರಿಕದೊಂದಿಗೆ ಭಾರತ ಶೀಘ್ರವೇ ಮಾತುಕತೆ ನಡೆಸಲಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್‌ ಹೇಳಿದ್ದಾರೆ.

  • ‘ಒಂದು ಅಥವಾ ಎರಡು ತಿಂಗಳ ಒಳಗಾಗಿ ಭಾರತ ಮಾತುಕತೆಗೆ ಮುಂದಾಗಲಿದೆ. ಕ್ಷಮೆ ಕೋರುವ ಜೊತೆಗೆ ಟ್ರಂಪ್‌ ಅವರೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಕೂಡ ಯತ್ನಿಸಲಿದೆ.
  • ಪ್ರಧಾನಿ ಮೋದಿ ಅವರೊಂದಿಗಿನ ಒಪ್ಪಂದ ಯಾವ ರೀತಿಯದ್ದಾಗಿರಬೇಕು ಎಂಬುದನ್ನು ಟ್ರಂಪ್‌ ಅವರೇ ನಿರ್ಧರಿಸುವರು’ ಎಂದು ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಲುಟ್ನಿಕ್ ಹೇಳಿದ್ದಾರೆ.
  • ‘ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧಕ್ಕೂ ಮೊದಲು ರಷ್ಯಾದಿಂದ ಭಾರತ ಖರೀದಿಸುತ್ತಿದ್ದ ತೈಲದ ಪ್ರಮಾಣ ಶೇ2ಕ್ಕಿಂತಲೂ ಕಡಿಮೆ ಇತ್ತು. ಈಗ, ಭಾರತ ತನ್ನ ಬೇಡಿಕೆಯ ಶೇ40ರಷ್ಟು ತೈಲವನ್ನು ರಷ್ಯಾದಿಂದ ಖರೀದಿ ಮಾಡುತ್ತಿದೆ’ ಎಂದಿದ್ದಾರೆ.

‘ಹಣ ಮರುಪಾವತಿ: ಹಕ್ಕು ವಿವಾದ ಇತ್ಯರ್ಥಪಡಿಸಿ’

ಸಂದರ್ಭ: ಭವಿಷ್ಯನಿಧಿ ವಂತಿಗೆ ಪಾವತಿಸುವಲ್ಲಿ ವಿಫಲವಾಗಿರುವ ಅಕ್ರೊಪೆಟಲ್ ಟೆಕ್ನಾಲಜೀಸ್ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ ಸ್ವತ್ತುಗಳ ಮಾರಾಟದಿಂದ ಸಂಗ್ರಹವಾಗಿರುವ ಹಣದ ಮೇಲೆ, ಇಪಿಎಫ್‌ಒ ಹಾಗೂ ಸಾಲ ನೀಡಿರುವ ‌ಎಕ್ಸಿಸ್‌ ಬ್ಯಾಂಕ್‌ ಮತ್ತು ಇತರ ಎರಡು ಬ್ಯಾಂಕುಗಳ ಪೈಕಿ ಯಾರು ಮೊದಲು ಹಕ್ಕು ಹೊಂದಿದ್ದಾರೆ ಎಂಬ ಬಗ್ಗೆ  ನಿರ್ಧರಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

  • ಈ ವಿಚಾರವಾಗಿ ಎಡೆಲ್‌ವೀಸ್ ಅಸೆಟ್ ರಿಕನ್‌ಸ್ಟ್ರಕ್ಷನ್ ಲಿಮಿಟೆಡ್‌ನ(ಇಎಆರ್‌ಎಲ್) ಮೇಲ್ಮನವಿ ವಜಾಗೊಳಿಸಿ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಫೆಬ್ರುವರಿ 1ರಂದು ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.
  • ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂಜಯ ಕರೋಲ್‌ ಹಾಗೂ ಸಂದೀಪ್ ಮೆಹ್ತಾ ಅವರು ಇದ್ದ ನ್ಯಾಯಪೀಠವು,ಇಎಆರ್‌ಎಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
  • ಈ ವಿವಾದಕ್ಕೆ ಸಂಬಂಧಿಸಿ ಕಕ್ಷಿದಾರರ‌ರಾಗಿರುವ ಎಲ್ಲ ಸಂಸ್ಥೆಗಳು ಹೈಕೋರ್ಟ್‌ ಮುಂದೆ ತಮ್ಮ ವಾದ ಮಂಡಿಸಲು ಸ್ವತಂತ್ರವಾಗಿವೆ ಎಂದೂ ಪೀಠ ಹೇಳಿದೆ.
  • ವಿಚಾರಣೆ ವೇಳೆ, ಇಎಆರ್‌ಎಲ್‌ ಪರ ಹಿರಿಯ ವಕೀಲ ಕೃಷ್ಣನ್ ವೇಣುಗೋಪಾಲ್, ‘ಬಾಕಿ ಇರುವ ವಂತಿಗೆ ಹಣದ ಮೇಲೆ ಇ‍ಪಿಎಫ್‌ಒಗೆ ಮೊದಲ ಹಕ್ಕು ಇದೆ’ ಎಂದರು.
  • ‘ಕಂಪನಿಗೆ ಸಾಲ ನೀಡಿರುವ ಬ್ಯಾಂಕುಗಳ ಪೈಕಿ ಎಕ್ಸಿಸ್‌ ಬ್ಯಾಂಕ್, ಒಂದು ಸ್ವತ್ತನ್ನು ₹12 ಕೋಟಿಗೆ ಮಾರಾಟ ಮಾಡಿದೆ. ಕಂಪನಿಯು ಎರಡು ಸ್ವತ್ತುಗಳನ್ನು ಒಟ್ಟು ₹7 ಕೋಟಿಗೆ ಮಾರಾಟ ಮಾಡಿದೆ. ಹೀಗಾಗಿ, ಇಪಿಎಫ್‌ಒ ತನಗೆ ಬರಬೇಕಾದ ಬಾಕಿ ಮೊತ್ತವನ್ನು ಎಕ್ಸಿಸ್‌ ಬ್ಯಾಂಕ್‌ನಿಂದ ವಸೂಲು ಮಾಡಿಕೊಳ್ಳಬಹುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
  • ‘ಪಿಎಫ್‌ ಕಾಯ್ದೆಯಡಿ, ಬಾಕಿ ಮೊತ್ತವನ್ನು ಎಕ್ಸಿಸ್‌ ಬ್ಯಾಂಕಿನಿಂದ ಮಾಡಿಕೊಳ್ಳಬೇಕೇ ಹೊರತು ಮೇಲ್ಮನವಿದಾರರಿಂದಲ್ಲ’ ಎಂದೂ ವಾದಿಸಿದರು.
  • ಇಪಿಎಫ್‌ಒ ಪರ ಹಾಜರಿದ್ದ ವಕೀಲ ದುಷ್ಯಂತ ಪರಾಶರ, ‘ಮೇಲ್ಮನವಿದಾರರ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌ನ ಕ್ರಮ ಸರಿಯಾಗಿಯೇ ಇದೆ’ ಎಂದರು.
  • ‘ಎಸ್‌ಎಆರ್‌ಎಫ್‌ಎಇಎಸ್‌ಐ ಕಾಯ್ದೆಯ ಸೆಕ್ಷನ್ 35ರ ಪ್ರಕಾರ, ಬ್ಯಾಂಕಿನ ಸಾಲ ಮರುಪಾವತಿಯೇ ಆದ್ಯತೆಯಾಗಲಿದೆ. ಹೀಗಾಗಿ, ಭವಿಷ್ಯನಿಧಿ ವಂತಿಗೆ ಸಂಬಂಧಿಸಿ ಬ್ಯಾಂಕಿನಿಂದ ಯಾವುದೇ ವಸೂಲಾತಿ ಮಾಡುವ ಹಾಗಿಲ್ಲ’ ಎಂದು ಎಕ್ಸಿಸ್‌ ಬ್ಯಾಂಕ್‌ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್‌ ಜೈನ್‌, ಪೀಠಕ್ಕೆ ತಿಳಿಸಿದರು.
  • ಎಲ್ಲ ಕಕ್ಷಿದಾರರ ವಾದ ಆಲಿಸಿದ ಪೀಠ, ‘ವಸೂಲಾಗಬೇಕಾದ ಬಾಕಿ ಮೊತ್ತದ ಮೇಲೆ ಇಪಿಎಫ್‌ಒ, ಎಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್(ಈಗ ಎಸ್‌ಬಿಐನಲ್ಲಿ ವಿಲೀನವಾಗಿದೆ) ಪೈಕಿ ಯಾರಿಗೆ ಮೊದಲ ಹಕ್ಕು ಇದೆ ಎಂಬ ಬಗ್ಗೆ ಹೈಕೋರ್ಟ್‌ ನಿರ್ಧರಿಸಲಿದೆ’ ಎಂದು ಪೀಠ, ಅರ್ಜಿ ವಿಲೇವಾರಿ ಮಾಡಿತು.

‘ದಾಖಲೆ ಇಲ್ಲದ ವಹಿವಾಟು: ಅಲ್ಲಗಳೆಯಲಾಗದು’

  • ಚೆಕ್‌, ಬ್ಯಾಂಕ್‌ ವರ್ಗಾವಣೆ ದಾಖಲೆ ಅಥವಾ ರಶೀದಿ ಇಲ್ಲ ಎಂಬ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
  • ‘ಹಣದ ವಹಿವಾಟು ಎಂದಮೇಲೆ ಅದರಲ್ಲಿ ನಗದು ಕೂಡ ಇರಬಹುದು. ಅದು ಅಸಹಜವೇನೂ ಅಲ್ಲ’ ಎಂದು ಕೋರ್ಟ್‌ ತಿಳಿಸಿದೆ.
  • ವ್ಯಕ್ತಿಯೊಬ್ಬರು ಅಧಿಕೃತ ವಿಧಾನಗಳ ಮೂಲಕ (ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ಸ್‌ ಅಥವಾ ಬ್ಯಾಂಕ್‌ ವಹಿವಾಟು) ಹಣ ವರ್ಗಾವಣೆಯನ್ನು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದರೆ, ಅಂತಹ ಮೊತ್ತವನ್ನು ನಗದು ಮೂಲಕ ಪಾವತಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅದರಲ್ಲೂ ಸಾಲ ಮರುಪಾವತಿ ಕುರಿತು ಸ್ಪಷ್ಟವಾಗಿ ವಚನಪತ್ರ ಇದ್ದಲ್ಲಿ ಹಾಗೆ ನಿರ್ಧರಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್‌ ಅಮಾನುಲ್ಲಾ ಮತ್ತು ವಿಪುಲ್‌.ಎಂ ಪಾಂಚೋಲಿ ಅವರ ಪೀಠ ಹೇಳಿದೆ.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments