Thu. Oct 9th, 2025

  • ಬೌದ್ಧಧರ್ಮ ಸೇರಿದ್ದರೆ ಎಸ್ಸಿ ಪ್ರಮಾಣಪತ್ರ

ಸಂದರ್ಭ: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಪರಿಶಿಷ್ಟ ಜಾತಿಯವರ ‍ಪೈಕಿ ಯಾರಾದರೂ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಅಂಥವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಮತ್ತೊಮ್ಮೆ ಆದೇಶ ಹೊರಡಿಸಿದೆ.

  • ಕೇಂದ್ರ ಸರ್ಕಾರ 1990ರ ನ. 20ರಂದು ಬರೆದ ಪತ್ರದಲ್ಲಿದ್ದ ಸೂಚನೆಯಂತೆ, ‘ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಮತ್ತು ಧರ್ಮದ ಕಾಲಂನಲ್ಲಿ ಬೌದ್ದ ಧರ್ಮ ಎಂದು ನಮೂದಿಸುವಂತೆ ಜಾತಿ ಪ್ರಮಾಣಪತ್ರ ನೀಡುವ ಪ್ರಾಧಿಕಾರಿಗಳಿಗೆ ರಾಜ್ಯ ಸರ್ಕಾರ 2013ರ ಡಿ. 9ರಂದೇ ಆದೇಶ ನೀಡಿತ್ತು.
  • ಆದರೆ, ಹೀಗೆ ಮತಾಂತರ ಗೊಂಡವರಿಗೆ ಜಾತಿ ಪ್ರಮಾಣಪತ್ರ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿ ಆದೇಶ ಹೊರಡಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಹಲವು ಸಂಘಸಂಸ್ಥೆಗಳು ಮನವಿ ಸಲ್ಲಿಸಿದ್ದವು.
  • ಈ ಕಾರಣಕ್ಕೆ ಮತ್ತೆ ಆದೇಶ ಹೊರಡಿಸಿರುವ ಇಲಾಖೆ, ‘ಪರಿಶಿಷ್ಟ ಜಾತಿಯಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರು ಜಾತಿ ಪ್ರಮಾಣಪತ್ರ ಪಡೆಯಲು ಸಲ್ಲಿಸುವ ಅರ್ಜಿಗಳಲ್ಲಿ ಧರ್ಮದ ಕಾಲಂನಲ್ಲಿ ‘ಬೌದ್ಧ’ (ಬುದ್ಧಿಸಂ) ಎಂದು ನಮೂದಿಸಲು ಅವಕಾಶ ಕಲ್ಪಿಸಬೇಕು. ಅರ್ಜಿದಾರರು ಅಥವಾ ಪೋಷಕರು ಇಚ್ಚಿಸಿದರೆ ಶಾಲಾ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಸರ್ಕಾರಿ, ಖಾಸಗಿ ಶಾಲೆಗಳು ಮತ್ತು ಇತರ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿನ ದಾಖಲೆಗಳಲ್ಲಿ ಧರ್ಮದ ಕಾಲಂನಲ್ಲಿಯೂ ಬೌದ್ಧ ಎಂದು ನಮೂದಿಸಲು ಅವಕಾಶ ನೀಡಬೇಕು. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ನಿಗಮ ಮಂಡಳಿಗಳು, ಇತರ ಸಂಸ್ಥೆಗಳು ಈ ಆದೇಶದಂತೆ ಕ್ರಮ ವಹಿಸಬೇಕು’ ಎಂದು ತಿಳಿಸಿದೆ.
  • ಅಪರಾಧ ಹೆಚ್ಚು, ಶಿಕ್ಷೆ ಕಡಿಮೆ
  • ಸೇವಾ ವಲಯ ಪ್ರಗತಿ ಇಳಿಕೆ

ಸಂದರ್ಭ: ದೇಶದ ಸೇವಾ ವಲಯದ ಚಟುವಟಿಕೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಇಳಿಕೆಯಾಗಿದೆ ಎಂದು ಮಾಸಿಕ ಸಮೀಕ್ಷೆಯ ವರದಿಯೊಂದು ತಿಳಿಸಿದೆ.

  • ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ 60.9 ದಾಖಲಾದೆ. ಇದು ಆಗಸ್ಟ್‌ನಲ್ಲಿ 62.9ರಷ್ಟಿತ್ತು. ಆಗಸ್ಟ್‌ನ ಮಟ್ಟವು 15 ವರ್ಷಗಳ ಗರಿಷ್ಠವಾಗಿತ್ತು.
  • ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ.
  • ‘ದೇಶದ ಸೇವಾ ವಲಯದ ಚಟುವಟಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯು ತೀವ್ರಗತಿಯಲ್ಲಿ ಹೆಚ್ಚುತ್ತಿಲ್ಲ. ಹೀಗಾಗಿ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಸೂಚ್ಯಂಕವು ಇಳಿಕೆ ಕಂಡಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್‌ ಭಂಡಾರಿ ಹೇಳಿದ್ದಾರೆ.
  • ಮೂವರಿಗೆ ವೈದ್ಯಕೀಯ ಕ್ಷೇತ್ರದ ನೊಬೆಲ್

ಸಂದರ್ಭ: ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಂಬಂಧಿಸಿದ ಸಂಶೋಧನೆಗಾಗಿ ವಿಜ್ಞಾನಿಗಳಾದ ಅಮೆರಿಕದ ಮೇರಿ ಈ. ಬ್ರಂಕೋ, ಫ್ರೆಡ್‌ ರಾಮ್ಸ್‌ಡೆಲ್‌ ಹಾಗೂ ಜಪಾನ್‌ನ ಶಿಮೋನ್‌ ಸಕಾಗುಚಿ ಅವರಿಗೆ 2025ನೇ ಸಾಲಿನ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದೆ.

  • ಸ್ಟಾಕ್‌ಹೋಮ್‌ನ ಕರೊಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ವೈದ್ಯಕೀಯ ನೊಬೆಲ್‌ ಪುರಸ್ಕೃತರ ಹೆಸರುಗಳನ್ನು ಪ್ರಕಟಿಸುವುದರೊಂದಿಗೆ ಈ ವರ್ಷದ ನೊಬೆಲ್‌ ಪುರಸ್ಕಾರ ಘೋಷಣೆಗೆ ಚಾಲನೆ ಸಿಕ್ಕಂತಾಗಿದೆ.
  • ಕ್ಯಾನ್ಸರ್‌ಗೆ ಹೊಸ ವಿಧಾನದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಬಲ್ಲ ‘ಮೈಕ್ರೋಆರ್‌ಎನ್‌ಎ’ ಆವಿಷ್ಕಾರಕ್ಕಾಗಿ ಅಮೆರಿಕದ ವಿಕ್ಟರ್‌ ಆ್ಯಂಬ್ರೊಸ್ ಮತ್ತು ಗ್ಯಾರಿ ರುವ್ಕನ್‌ ಅವರಿಗೆ ಕಳೆದ ವರ್ಷ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪುರಸ್ಕಾರ ದೊರೆತಿತ್ತು.
  • ಭೌತವಿಜ್ಞಾನ, ರಸಾಯನ ವಿಜ್ಞಾನ ಕ್ಷೇತ್ರಗಳ ಪ್ರಶಸ್ತಿ ವಿಜೇತರ ಹೆಸರನ್ನು ಕ್ರಮವಾಗಿ ಹಾಗೂ ಬುಧವಾರ ಪ್ರಕಟಿಸಲಾಗುತ್ತದೆ.
  • ಸಾಹಿತ್ಯ ಕ್ಷೇತ್ರದ ಪುರಸ್ಕಾರವನ್ನು ಹಾಗೂ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾ ಗುತ್ತದೆ. ಅ.13ರಂದು ಅರ್ಥಶಾಸ್ತ್ರ ನೊಬೆಲ್‌ ಪುರಸ್ಕಾರ ಘೋಷಿಸಲಾಗುತ್ತದೆ. ಡಿಸೆಂಬರ್‌ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
  • ಇಸ್ರೇಲ್‌–ಹಮಾಸ್ಮಾತುಕತೆ ಆರಂಭ

ಸಂದರ್ಭ: ಯುದ್ಧ ಅಂತ್ಯಗೊಳಿಸಲು ಅಮೆರಿಕವು ಸಿದ್ಧಪಡಿಸಿದ ಶಾಂತಿ ಯೋಜನೆ ಕುರಿತು ಇಸ್ರೇಲ್‌ ಹಾಗೂ ಹಮಾಸ್‌ ಬಂಡುಕೋರ ಸಂಘಟನೆಯ ನಿಯೋಗಗಳು ಈಜಿಪ್ಟ್‌ನ ರೆಸಾರ್ಟ್‌ವೊಂದರಲ್ಲಿ ಮಧ್ಯಾಹ್ನ ದಿಂದ ಮಾತುಕತೆ ಆರಂಭಿಸಿವೆ. ಈಜಿಪ್ಟ್‌ ಹಾಗೂ ಕತಾರ್‌ ಮಾತುಕತೆಯ ಮಧ್ಯಸ್ಥಿಕೆ ವಹಿಸಿವೆ.

  • ಯುದ್ಧವು ಆರಂಭಗೊಂಡು ಅ.7ಕ್ಕೆ ಎರಡು ವರ್ಷ ಪೂರೈಸ ಲಿದೆ. ಈ ಸಭೆಯಲ್ಲಿ ಅಮೆರಿಕದ ಮಧ್ಯಪ್ರಾಚ್ಯದ ರಾಯಭಾರಿ ಸ್ಟೀವ್‌ ವಿಟ್‌ಆಫ್‌ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಳಿಯ ಜರೆಡ್‌ ಕುಶ್ನರ್ ಅವರೂ ಭಾಗಿಯಾಗಲಿದ್ದಾರೆ.
  • ಮೊದಲ ಹಂತದಲ್ಲಿ ಯಾವ ರೀತಿಯಲ್ಲಿ ಕದನವಿರಾಮ ಇರ ಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ. ಗಾಜಾ ಪಟ್ಟಿಯಿಂದ ಇಸ್ರೇಲ್‌ ಸೇನೆಯು ಭಾಗಶಃ ವಾಪಸಾಗಬೇಕು. ಇಸ್ರೇಲ್‌ ವಶದಲ್ಲಿರುವ ಪ್ಯಾಲೆಸ್ಟೀನ್‌ನ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ ಹಮಾಸ್‌ ವಶದಲ್ಲಿ ಇರುವ ಇಸ್ರೇಲ್‌ ಒತ್ತೆಯಾಳುಗಳು ಬಿಡುಗಡೆ ಮಾಡುವುದರ ಕುರಿತೂ ಮಾತುಕತೆ ನಡೆಯಲಿದೆ.
  • 3 ರಾಜ್ಯಗಳಿಗೆ ಎನ್ಎಚ್ಆರ್ಸಿ ನೋಟಿಸ್

ಸಂದರ್ಭ: ಮಕ್ಕಳಲ್ಲಿ ಕೆಮ್ಮಿನ ಔಷಧಿಗಳ ಬಳಕೆಯ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿದ ಕೇರಳ ಸರ್ಕಾರ

ಮಕ್ಕಳ ದುರಂತ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಮೋಹನ್ ಯಾದವ್ ಮುಖ್ಯಮಂತ್ರಿ, ಮಧ್ಯಪ್ರದೇಶ.

  • ಕೆಮ್ಮಿನ ಸಿರಪ್‌ ಸೇವನೆಯಿಂದ ಮಕ್ಕಳು ಮೃತಪಟ್ಟಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು (ಎನ್‌ಎಚ್ಆರ್‌ಸಿ) ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ನೋಟಿಸ್‌ ನೀಡಿದೆ.
  • ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಮತ್ತು ಕಲಬೆರಕೆ ಔಷಧಗಳ ಮಾರಾಟವನ್ನು ತಕ್ಷಣದಿಂದಲೇ ನಿಷೇಧಿಸುವಂತೆ ನಿರ್ದೇಶಿಸಿದೆ.
  • ಕಲಬೆರಕೆ ಔಷಧಗಳ ಪೂರೈಕೆ ಬಗ್ಗೆಯೂ ತನಿಖೆ ನಡೆಸಲು ಆದೇಶಿಸುವಂತೆ ಹಾಗೂ ಅಂತಹ ಔಷಧಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಾ ವರದಿ ನೀಡಲು ಎಲ್ಲ ಪ್ರಾದೇಶಿಕ ಪ್ರಯೋಗಾಲಯಗಳಿಗೆ ಸೂಚನೆ ನೀಡಲು, ಭಾರತೀಯ ಔಷಧ ನಿಯಂತ್ರಣ ವಿಭಾಗ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ,ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಎನ್‌ಎಚ್‌ಆರ್‌ಸಿ ಆದೇಶಿಸಿದೆ.
  • ಕಲಬೆರಕೆ ಔಷಧಿಗಳನ್ನು ನಿಷೇಧಿಸಿರುವ ಕುರಿತು ವರದಿ ನೀಡಲು ಮೂರು ರಾಜ್ಯಗಳ ಮುಖ್ಯ ಔಷಧ ನಿಯಂತ್ರಕರಿಗೆ ಆದೇಶ ನೀಡುವಂತೆಯೂ ಸೂಚಿಸಿದೆ.
  • ಔಷಧ ನಿಯಂತ್ರಕರ ವರ್ಗಾವಣೆ (ಛಿಂದ್ವಾಢ ವರದಿ): ಕೆಮ್ಮಿನ ಸಿರಪ್‌ ಸೇವನೆ ಬಳಿಕ ಮೂತ್ರಪಿಂಡ ವೈಫಲ್ಯದಿಂದ 14 ಮಕ್ಕಳು ಮೃತಪಟ್ಟ ಪ್ರಕರಣದ ತನಿಖೆ ನಡೆದಿರುವಾಗಲೇ, ರಾಜ್ಯದ ಔಷಧ ನಿಯಂತ್ರಕರಾದ ದಿನೇಶ್‌ ಮೌರ್ಯ ಅವರನ್ನು ಮಧ್ಯಪ್ರದೇಶ ಸರ್ಕಾರ ವರ್ಗಾಯಿಸಿದೆ.
  • ಛಿಂದ್ವಾಢದಲ್ಲಿ ಡ್ರಗ್‌ ಇನ್ಸ್‌ಪೆಕ್ಟರ್‌ ಆಗಿದ್ದ ಗೌರವ್ ಶರ್ಮಾ, ಜಬಲ್‌ಪುರದಲ್ಲಿ ಡ್ರಗ್‌ ಇನ್ಸ್‌ಪೆಕ್ಟರ್‌ ಆಗಿದ್ದ ಶರದ್‌ ಕುಮಾರ್ ಜೈನ್ ಹಾಗೂ ಆಹಾರ ಮತ್ತು ಔಷಧ ಆಡಳಿತದ ಉಪ ನಿರ್ದೇಶಕ ಶೋಭಿತ್ ಕೋಸ್ಟಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಎಸ್‌ಐಟಿ ರಚನೆ: ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.
  • ವೈದ್ಯರು ಶಿಫಾರಸಿಗೆ ಮಾತ್ರ ಔಷಧಿ ಕೊಡಿ

ಸಂದರ್ಭ: ವೈದ್ಯರು ಶಿಫಾರಸು ಮಾಡಿದರೆ ಮಾತ್ರ 12 ವರ್ಷದ ಒಳಗಿನ ಮಕ್ಕಳಿಗೆ ಔಷಧ ನೀಡಬೇಕು ಎಂದು ಕೇರಳ ಆರೋಗ್ಯ ಇಲಾಖೆ ಆದೇಶಿಸಿದೆ.

  • ಮಕ್ಕಳಲ್ಲಿ ಕೆಮ್ಮಿನ ಔಷಧಿಗಳ ಬಳಕೆಯ ಅಧ್ಯಯನ ಮಾಡಲು ಮೂವರು ತಜ್ಞರ ಸಮಿತಿ ರಚಿಸಿದ್ದು, ತುರ್ತು ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ಉನ್ನತ ಮಟ್ಟದ ಸಭೆಯ ನಂತರ ಇಲ್ಲಿ ತಿಳಿಸಿದರು. ರಾಜ್ಯ ಔಷಧ ನಿಯಂತ್ರಕ, ಮಕ್ಕಳ ಆರೋಗ್ಯ ನೋಡಲ್‌ ಅಧಿಕಾರಿ ಮತ್ತು ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ ರಾಜ್ಯ ಘಟಕದ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.
  • ಈ ಸಮಿತಿ ನೀಡುವ ವರದಿಯು ಮಕ್ಕಳಲ್ಲಿ ಕೆಮ್ಮು ಸಿರಪ್‌ ಬಳಕೆಗೆ ಹೊಸ ಮಾರ್ಗಸೂಚಿ ರೂಪಿಸಲು ಸಹಾಯ ಮಾಡಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • ‘ವೈದ್ಯರು ಈ ಹಿಂದೆಯೇ ನೀಡಿದ್ದ ಔಷಧ ಸಲಹಾ ಚೀಟಿಗಳನ್ನು ಬಳಸಿಕೊಂಡು ಔಷಧಿಗಳನ್ನು ವಿತರಿಸಬಾರದು. ಈ ಕುರಿತಂತೆ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಲಾಗಿದೆ’ ಎಂದೂ ವೀಣಾ ಹೇಳಿದ್ದಾರೆ.
  • ಎಸ್‌ಆರ್‌–13 ಬ್ಯಾಚ್‌ನ ಕೋಲ್ಡ್ರಿಫ್‌ ಸಿರಪ್‌ ಸೇವಿಸಿದ ಕೆಲವು ಮಕ್ಕಳು ಬೇರೆ ರಾಜ್ಯಗಳಲ್ಲಿ ಮೃತಪಟ್ಟಿದ್ದರಿಂದ, ಡ್ರಗ್ಸ್‌ ನಿಯಂತ್ರಣ ಇಲಾಖೆಯು ರಾಜ್ಯದಲ್ಲಿ ಅದರ ಮಾರಾಟವನ್ನು ಸ್ಥಗಿತಗೊಳಿಸಿದೆ.
  • ವಿಷಕಾರಿ ಅಂಶವನ್ನು ಹೊಂದಿರುವ ಕೋಲ್ಡ್ರಿಫ್‌ ಕಂಪನಿಯ ಕೆಮ್ಮಿನ ಸಿರಪ್‌ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವಂತೆ ತೆಲಂಗಾಣ ಸರ್ಕಾರವು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದೆ.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments