Thu. Oct 9th, 2025

  • ನೀರಿದ್ದರೆ ನಾಳೆಗೆ ಚಾಲನೆ ಇಂದು

ಸಂದರ್ಭ: ಅಂತರ್ಜಲ ಅತಿಬಳಕೆಯ 525 ಗ್ರಾ.ಪಂ.ಗಳಲ್ಲಿ ಯೋಜನೆ: ‘ರಾಜ್ಯದ 16 ಜಿಲ್ಲೆಗಳ, 27 ತಾಲ್ಲೂಕಗಳಲ್ಲಿ ಅಂತರ್ಜಲದ ಅತಿಬಳಕೆಯ ಪಟ್ಟಿಯಲ್ಲಿರುವ 525 ಗ್ರಾಮ ಪಂಚಾಯಿತಿಗಳಲ್ಲಿ ‘ನೀರಿದ್ದರೆ ನಾಳೆ’ ಯೋಜನೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಚಾಲನೆ ನೀಡಲಿದ್ದಾರೆ.

  • ನೀರಿನ ಮಹತ್ವ ತಿಳಿಸುವುದು, ಜಲಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು, ನಾಗರಿಕರನ್ನು ನೀರಿನ ಸಂರಕ್ಷಣೆ ಅಭಿಯಾನದಲ್ಲಿ ಪಾಲುದಾರರನ್ನಾಗಿ ಮಾಡುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ.
  • ಅಭಿಯಾನಕ್ಕೆ ನಟ ವಸಿಷ್ಠ ಸಿಂಹ ಅವರನ್ನು ರಾಯಭಾರಿಯಾಗಿ ನೇಮಿಸಲಾಗಿದೆ’ ಎಂದರು.
  • ‘ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಿನ ಭದ್ರತೆಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು.
  • ಅಂತರ್ಜಲ ಸಾಕ್ಷರತೆಗೆ ಒತ್ತು ನೀಡಲಾಗುವುದು. ಅಂತರ್ಜಲಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಸ್ತುತ ಪರಿಸ್ಥಿತಿ, ಅಂಕಿ ಅಂಶದ ಲಭ್ಯತೆ ಬಗ್ಗೆ ಶಾಲಾ ಮಟ್ಟಗಳಲ್ಲೇ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.
  • ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂತರ್ಜಲದ ಅತಿಬಳಕೆ ಇರುವ 100ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ₹ 200 ಕೋಟಿ ವೆಚ್ಚದಲ್ಲಿ ಅಂತರ್ಜಲ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ.
  • ‘ಕೆರೆ ಬಳಕೆದಾರರ ಸಂಘಗಳ ಮೂಲಕ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಒತ್ತು ನೀಡಲು ಉದ್ದೇಶಿಸ ಲಾಗಿದೆ. ಜಲಮೂಲಗಳ ಸಮಗ್ರ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ ಡಿಜಿಟಲ್ ವಾಟರ್ ಸ್ಟಾಕ್ ಅಳವಡಿಕೆಗೆ ಚಿಂತನೆ ನಡೆದಿದೆ. ಈ ಕಾರ್ಯಕ್ರಮದ ಅನುಷ್ಠಾನದ ಮೂಲಕ ಕರ್ನಾಟಕ ರಾಜ್ಯವನ್ನು ಜಲ ಸಮೃದ್ಧಗೊಳಿಸುವ ಗುರಿ ಹೊಂದಲಾಗಿದೆ.
  • ಯುದ್ಧದ ಸಾಧ್ಯತೆ ನಿಜ

ಸಂದರ್ಭ:‘ಭಾರತದೊಂದಿಗೆ ಯುದ್ಧದ ಸಾಧ್ಯತೆ ಇರುವುದು ನಿಜ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ಹೇಳಿದ್ದಾರೆ.

  • ‘ಭವಿಷ್ಯದಲ್ಲಿ ಭಾರತದೊಂದಿಗೆ ಮತ್ತೊಮ್ಮೆ ಶಸ್ತ್ರಾಸ್ತ್ರ ಸಂಘರ್ಷ ಎದುರಾದರೆ ನಮ್ಮ ದೇಶವು ಅದರಲ್ಲಿ ದೊಡ್ಡಮಟ್ಟದ ಯಶಸ್ಸು ಸಾಧಿಸುತ್ತದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
  • ‘ಪಾಕಿಸ್ತಾನಕ್ಕೆ 6 ತಿಂಗಳ ಹಿಂದೆ ಇರುವುದಕ್ಕಿಂತಲೂ ಈಗ ಹೆಚ್ಚಿನ ಸಂಖ್ಯೆಯ ಬೆಂಬಲಿ ಗರಿದ್ದಾರೆ. ಆದರೆ, ಭಾರತವು ಮೇ ಸಂಘರ್ಷದ ನಂತರ ಹಲವು ದೇಶಗಳ ಬೆಂಬಲವನ್ನು ಕಳೆದುಕೊಂಡಿದೆ’ ಎಂದು ಅವರು ಅಮೆರಿಕದ ಹೆಸರು ಉಲ್ಲೇಖಿಸದೇ ಹೇಳಿದ್ದಾರೆ.
  • ‘ಮತ್ತೊಮ್ಮೆ ಶಸ್ತ್ರಾಸ್ತ್ರ ಸಂಘರ್ಷದ ಸಾಧ್ಯತೆ ಇರುವುದರಿಂದ ಪಾಕಿಸ್ತಾನವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಸಂಘರ್ಷ ಉಲ್ಬಣಗೊಳ್ಳುವುದು ನಮಗೆ ಬೇಕಿಲ್ಲ. ಆದರೆ, ಯುದ್ಧದ ಸಾಧ್ಯತೆ ಇರುವುದಂತೂ ನಿಜ. ಇದನ್ನು ನಾನು ಅಲ್ಲಗಳೆಯುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
  • ‘ಮೊಘಲ್‌ ದೊರೆ ಔರಂಗಜೇಬನ ಅಲ್ಪ ಅವಧಿ ಹೊರತುಪಡಿಸಿ, ಭಾರತವು ಎಂದಿಗೂ ಏಕೀಕೃತ ದೇಶವಾಗಿರಲಿಲ್ಲ. ಆದರೆ, ಪಾಕಿಸ್ತಾನವು ಅಲ್ಲಾಹುವಿನ ಹೆಸರಿನಲ್ಲಿ ಸೃಷ್ಟಿಯಾಗಿದೆ ಮತ್ತು ಹಲವು ಆಂತರಿಕ ಸಮಸ್ಯೆಗಳಿದ್ದರೂ ಮೇ ಸಂಘರ್ಷದ ನಂತರ ಒಗ್ಗಟ್ಟಾಗಿದೆ. ‘ನಮ್ಮ ತವರಿನಲ್ಲಿ ನಾವು ಪರಸ್ಪರ ವಾದಿಸುತ್ತೇವೆ ಮತ್ತು ಸ್ಪರ್ಧಿಸುತ್ತೇವೆ. ಆದರೆ, ಭಾರತದೊಂದಿಗೆ ಹೋರಾಟ ಮಾಡಬೇಕಾಗಿ ಬಂದಾಗ ನಾವು  ಒಂದಾಗುತ್ತೇವೆ’ ಎಂದು ಹೇಳಿದ್ದಾರೆ.
  • ಭಾರತದ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು, ‘ಮತ್ತೆ ದುಸ್ಸಾಹಸಗಳಿಗೆ ಕೈ ಹಾಕದಂತೆ’ ಪಾಕಿಸ್ತಾನಕ್ಕೆ ಇತ್ತೀಚೆಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಖ್ವಾಜಾ ಪ್ರತಿಕ್ರಿಯೆ ಹೊರಬಿದ್ದಿದೆ.
  • 12.54 ಲಕ್ಷ ಹೆಕ್ಟೇರ್ಬೆಳೆ ಹಾನಿ

ಸಂದರ್ಭ: ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಪ್ರದೇಶದ ರೈತರ ಬೆಳೆ ಹಾನಿಗೆ ಪರಿಹಾರ ಪಾವತಿಗಾಗಿ ₹2,000 ಕೋಟಿ ನಿಗದಿ ಮಾಡಲಾಗಿದ್ದು, 30 ದಿನಗಳ ಒಳಗೆ ರೈತರ ಖಾತೆಗಳಿಗೆ ಪರಿಹಾರದ ಮೊತ್ತ ಪಾವತಿ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

  • ನೈರುತ್ಯ ಮುಂಗಾರು ಅವಧಿಯಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಒಟ್ಟು 12.54 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಪೂರ್ಣಗೊಳಿಸಿದ 9 ಜಿಲ್ಲೆಗಳಲ್ಲಿನ 5.29 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಗೆ ಮೊದಲ ಸುತ್ತಿನ ಪರಿಹಾರ ಪಾವತಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
  • ಸೆಪ್ಟೆಂಬರ್‌ ಮೊದಲ ವಾರದವರೆಗೆ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಪ್ರದೇಶಗಳು ಜಲಾವೃತಗೊಂಡು ಸುಮಾರು 5.29 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಳೆ ನಷ್ಟವಾದ ಜಿಲ್ಲೆಗಳು ಜಂಟಿ ಸಮೀಕ್ಷೆ ಪೂರ್ಣಗೊಳಿಸಿ ಬೆಳೆ ಹಾನಿ ಪರಿಹಾರ ಪಾವತಿಗೆ ಸಿದ್ಧವಾಗಿದ್ದವು. ತದನಂತರ ಸೆಪ್ಟೆಂಬರ್‌ ತಿಂಗಳ ಕೊನೆಯಲ್ಲಿ ಸುರಿದ ಮಳೆ ಹಾಗೂ ಮಹಾರಾಷ್ಟ್ರ ಭಾಗದ ಜಲಾಶಯಗಳಿಂದ ಹೊರ ಹರಿಸಲಾದ ನದಿ ಪ್ರವಾಹದಿಂದ ಕಲಬುರಗಿ, ಯಾದಗಿರಿ, ಬೀದರ್‌ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 7.24 ಲಕ್ಷ ಹೆಕ್ಟೇರ್‌ ಬೆಳೆ ನಷ್ಟಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
  • ಈ ನಾಲ್ಕು ಜಿಲ್ಲೆಗಳ ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ಪುನಃ ಮಾಡಬೇಕಾದ ಅಗತ್ಯವಿದೆ. ಬೆಳೆ ಹಾನಿ ಪ್ರದೇಶ ಪರಿಷ್ಕರಣೆಗೊಳ್ಳಲಿದ್ದು, 7.24 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯ ಜಂಟಿ ಸಮೀಕ್ಷೆಯು ಪ್ರಗತಿಯಲ್ಲಿದೆ. 10 ದಿನಗಳಲ್ಲಿ ಬೆಳೆ ಹಾನಿ ಪರಿಹಾರ ಪಾವತಿಸಲಾಗುವುದು. ಒಟ್ಟಾರೆ 2025ರ ನೈರುತ್ಯ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟೇರ್‌ ಬೆಳೆ ಹಾನಿ ಆಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹8,500 ಹೆಚ್ಚುವರಿ ಪಾವತಿ ಮಾಡಲಿದೆ ಎಂದೂ ಹೇಳಿದ್ದಾರೆ.
  • ಕೆರೆ ಬಫರ್ವಲಯ: ವಿವರಣೆ ಶೀಘ್ರ

ಸಂದರ್ಭ: ಕೆರೆಗಳ ಬಫರ್‌ ವಲಯಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಕುರಿತಂತೆ ಕಾನೂನು ತಜ್ಞರ ಸಲಹೆಯೊಂದಿಗೆ ರಾಜ್ಯಪಾಲರಿಗೆ ವಿವರಣೆಯನ್ನು ಶೀಘ್ರವೇ ಸಲ್ಲಿಸಲಾಗುವುದು.

  • ತಿದ್ದೋಲೆ: ‘ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ– 2025ಕ್ಕೆ ತಿದ್ದೋಲೆಯನ್ನು ತರಲಾಗಿದೆ. ಕೆರೆಯ ಕಂದಾಯ ಗಡಿಯಿಂದ ಬಫರ್‌ ವಲಯವನ್ನು ಮೀಟರ್‌ಗಳಲ್ಲಿ ನಿಗದಿಪಡಿಸಲಾಗಿದೆ.
  • ಪರಿಷ್ಕರಣೆಯಂತೆ,  5 ಗುಂಟೆವರೆಗಿನ ಕೆರೆಗಳಿಗೆ ಬಫರ್‌ ವಲಯ ಇರುವುದಿಲ್ಲ. 100ಕ್ಕೂ ಹೆಚ್ಚು ಎಕರೆಯ ಕೆರೆಗೆ 30 ಮೀಟರ್‌ ಬಫರ್‌ ವಲಯ ನಿಗದಿಪಡಿಸಲಾಗಿದೆ.
  • ವಾಯುಪಡೆಯ ಸಾಮರ್ಥ್ಯ ಬಿಚ್ಚಿಟ್ಟ ಆಪರೇಷನ್ಸಿಂಧೂರ

ಸಂದರ್ಭ:‘ಆಕ್ರಮಣಕಾರಿ ವಾಯು ದಾಳಿಯ ಮೂಲಕ ಕೆಲವೇ ದಿನಗಳಲ್ಲಿ ಸೇನಾ ಕಾರ್ಯಾಚರಣೆಯ ಫಲಿತಾಂಶವನ್ನು ಹೇಗೆ ನಿರ್ಧರಿಸಬಹುದು ಎನ್ನುವುದನ್ನು ಭಾರತೀಯ ವಾಯುಪಡೆ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ವಿಶ್ವದ ಎದುರು ತೆರೆದಿಟ್ಟಿದೆ’ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಎ.ಪಿ.ಸಿಂಗ್ ಹೇಳಿದ್ದಾರೆ.

  • ಹಿಂಡನ್‌ ವಾಯು ನೆಲೆಯಲ್ಲಿ ನಡೆದ 93ನೇ ವಾಯುಪಡೆ ದಿನಾಚರಣೆಯಲ್ಲಿ ಮಾತನಾಡಿದ ಅವರು,‘ರಾಷ್ಟ್ರೀಯ ಹಿತಾಸಕ್ತಿ ವಿಚಾರ ಬಂದಾಗ ವಾಯುಪಡೆಯ ಸಾಮರ್ಥ್ಯ ಹೇಗೆ ಅನಾವರಣಗೊಂಡಿತು ಎನ್ನುವುದಕ್ಕೆ ಸಿಂಧೂರ ಕಾರ್ಯಾಚರಣೆ ಸ್ಪಷ್ಟ ನಿದರ್ಶನ. ಇದು ನಮಗೆ ವೃತ್ತಿಪರ ಹೆಮ್ಮೆ.
  • ವಾಯುಪಡೆಯು ದಿಟ್ಟವಾದ ಮತ್ತು ನಿಖರವಾದ ದಾಳಿಯು  ಶತ್ರು ಪಾಳಯದ  ಯುದ್ಧ ವಿಮಾನಗಳನ್ನು ಹೊಡೆದುರುಳಿಸಿತು’ ಎಂದರು.
  • ಸಿಂಧೂರ ಕಾರ್ಯಾಚರಣೆಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ ರಾಫೇಲ್ಸ್ಕ್ವಾಡ್ರನ್ ಸೇರಿದಂತೆ ವಿವಿಧ ಐಎಎಫ್‌ ಘಟಕಗಳನ್ನು ಅಭಿನಂದಿಸಿದ ಸಿಂಗ್‌, ಪ್ರಶಂಸನಾ ಪತ್ರಗಳನ್ನು ವಿತರಿಸಿದರು.
  • ಸುಧಾರಣಾ ಪ್ರಕ್ರಿಯೆಗೆ ವೇಗ

ಸಂದರ್ಭ:‘1 ಜಿ.ಬಿ. ಡೇಟಾ ಬೆಲೆಯು ಈಗ ಒಂದು ಕಪ್ ಚಹಾದ ಬೆಲೆಗಿಂತ ಕಡಿಮೆ’:ವಿವಿಧ ವಲಯಗಳಲ್ಲಿನ ತಯಾರಿಕಾ ಚಟುವಟಿಕೆ ಭಾರತದಲ್ಲಿಯೇ ನಡೆಯಬೇಕು ಎಂದು ಮತ್ತೊಮ್ಮೆ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಸುಧಾರಣಾ ಪ್ರಕ್ರಿಯೆಗಳಿಗೆ ಕೇಂದ್ರ ಸರ್ಕಾರವು ವೇಗ ನೀಡುತ್ತಿದೆ ಎಂದರು.

  • ಮೊಬೈಲ್‌ ತಯಾರಿಕೆಯಿಂದ ಆರಂಭಿಸಿ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳವರೆಗೆ ಎಲ್ಲವೂ ಭಾರತದಲ್ಲೇ ತಯಾರಾಗುವಂತೆ ಆಗಬೇಕು ಎಂದು ಅವರು ಹೇಳಿದರು. ಭಾರತವು ಹೂಡಿಕೆಗೆ ಅತ್ಯುತ್ತಮವಾದ ಅವಕಾಶಗಳನ್ನು ನೀಡುತ್ತಿದೆ ಎಂದರು.
  • ‘ಭಾರತೀಯ ಮೊಬೈಲ್‌ ಕಾಂಗ್ರೆಸ್‌’ ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆ, ಹೂಡಿಕೆಗಳನ್ನು ಸ್ವಾಗತಿಸುವ ಸರ್ಕಾರದ ನಿಲುವು, ಉದ್ಯಮ ನಡೆಸುವುದನ್ನು ಸುಲಲಿತವಾಗಿಸುವ ನೀತಿಗಳು ಭಾರತವು ಹೂಡಿಕೆದಾರ ಸ್ನೇಹಿ ತಾಣ ಎಂಬ ಹೆಸರು ಗಳಿಸುವಂತೆ ಮಾಡಿವೆ’ ಎಂದು ಹೇಳಿದರು.
  • ‘ಭಾರತದಲ್ಲಿ ಹೂಡಿಕೆ ಮಾಡಲು, ಭಾರತದಲ್ಲೇ ತಯಾರಿಸಲು ಇದು ಪ್ರಶಸ್ತವಾದ ಸಮಯ’ ಎಂದು ಮೋದಿ ಅವರು ಹೇಳಿದರು.
  • ದೊಡ್ಡ ಮಟ್ಟದ ಬದಲಾವಣೆಗಳು ಹಾಗೂ ದೊಡ್ಡ ಮಟ್ಟದ ಸುಧಾರಣೆಗಳ ವರ್ಷ ಇದಾಗಿರಲಿದೆ ಎಂದು ತಾವು ಆಗಸ್ಟ್‌ 15ರಂದು ಘೋಷಿಸಿದ್ದನ್ನು ಮೋದಿ ನೆನಪಿಸಿದರು. ‘ಸುಧಾರಣೆಗಳ ವೇಗವನ್ನು ಇನ್ನಷ್ಟು ಹೆಚ್ಚಿಸು ತ್ತಿದ್ದೇವೆ’ ಎಂದು ಅವರು ಹೇಳಿದರು. ಆದರೆ ಈ ಕುರಿತಾಗಿ ಹೆಚ್ಚಿನ ವಿವರ ನೀಡಲಿಲ್ಲ.
  • ಸೆಮಿಕಂಡಕ್ಟರ್‌, ಮೊಬೈಲ್ಮತ್ತು ಎಲೆಕ್ಟ್ರಾನಿಕ್ಸ್ಗಳ ತಯಾರಿಕಾ ವಲಯದಲ್ಲಿ ಭಾರತವು ಅಗಾಧ ಅವಕಾಶಗಳನ್ನು ನೀಡುತ್ತಿದೆ. ಉದ್ಯಮ ಕ್ಷೇತ್ರ, ನವೋದ್ಯಮಗಳು ಈಗ ಮುಂದಡಿ ಇರಿಸಬೇಕು ಎಂದರು.
  • ಡಿಜಿಟಲ್ ಜಗತ್ತಿನಲ್ಲಿ ಭಾರತವು ಒಂದು ದಶಕದಲ್ಲಿ ಸಾಧಿಸಿದ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತದಲ್ಲಿ 1 ಜಿ.ಬಿ. ಡೇಟಾ ಬೆಲೆಯು ಈಗ ಒಂದು ಕಪ್ ಚಹಾದ ಬೆಲೆಗಿಂತ ಕಡಿಮೆ ಆಗಿದೆ ಎಂದರು. ‘ಡಿಜಿಟಲ್ ಸಂಪರ್ಕವು ಇಂದು ಭಾರತದಲ್ಲಿ ಐಷಾರಾಮದ ಸಂಗತಿಯಾಗಿ ಉಳಿದಿಲ್ಲ. ಅದು ಈಗ ಪ್ರತಿ ಭಾರತೀಯನ ಅವಿಭಾಜ್ಯ ಅಂಗವಾಗಿದೆ’ ಎಂದು ಬಣ್ಣಿಸಿದರು.
  • ಮೂವರು ವಿಜ್ಞಾನಿಗಳಿಗೆ ರಸಾಯನ ವಿಜ್ಞಾನ ನೊಬೆಲ್

ಸಂದರ್ಭ: ಜಪಾನ್‌ನ ಸುಸುಮು ಕಿಟಾಗವಾ, ಬ್ರಿಟನ್‌ನ ರಿಚರ್ಡ್‌ ರಾಬ್ಸನ್‌ ಮತ್ತು ಜೋರ್ಡಾನ್‌ನ ಒಮರ್‌ ಎಂ.ಯಾಘಿ ಅವರು 2025ನೇ ಸಾಲಿನ ರಸಾಯನ ವಿಜ್ಞಾನ ನೊಬೆಲ್‌ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ.

  • ಲೋಹಸಾವಯವ ಚೌಕಟ್ಟು’ (ಎಂಒಎಫ್‌) ಅಭಿವೃದ್ಧಿಯಲ್ಲಿ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಗಳನ್ನು ಪರಿಗಣಿಸಿ, ನೊಬೆಲ್ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಶ್‌ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಹನ್ಸ್‌ ಎಲೆಗ್ರೆನ್‌ ಇಲ್ಲಿ ತಿಳಿಸಿದ್ದಾರೆ.
  • ಸುಸುಮು ಕಿಟಾಗವಾ ಜಪಾನ್ ಕ್ಯೂಟೊ ವಿಶ್ವವಿದ್ಯಾಲಯದಲ್ಲಿ, ರಿಚರ್ಡ್ರಾಬ್ಸನ್ಆಸ್ಟ್ರೇಲಿಯಾದ ಮೆಲ್ಬರ್ನ್ವಿ.ವಿಯಲ್ಲಿ ಹಾಗೂ ಒಮರ್ಕ್ಯಾಲಿಫೋರ್ನಿಯಾ ವಿ.ವಿಯಲ್ಲಿ  ರಸಾಯನ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಈ ಮೂವರೂ ವಿಜ್ಞಾನಿಗಳು ಒಟ್ಟು 1.2 ದಶಲಕ್ಷ ಡಾಲರ್‌ (₹10.65 ಕೋಟಿ) ನೊಬೆಲ್‌ ನಗದು ಪುರಸ್ಕಾರವನ್ನು ಹಂಚಿಕೊಳ್ಳಲಿದ್ದಾರೆ. 
  • ವೈದ್ಯವಿಜ್ಞಾನ ಮತ್ತು ಭೌತವಿಜ್ಞಾನ ಕ್ಷೇತ್ರದ ನೊಬೆಲ್‌ ಪುರಸ್ಕಾರವನ್ನು ಈಗಾಗಲೇ ಘೋಷಿಸಲಾಗಿದೆ. ಸಾಹಿತ್ಯ ಕ್ಷೇತ್ರದ ನೊಬೆಲ್‌ ಪುರಸ್ಕಾರ ಮತ್ತು ನೊಬೆಲ್‌ ಶಾಂತಿ ಪ್ರಶಸ್ತಿ ಹಾಗೂ ಅರ್ಥಶಾಸ್ತ್ರದ ನೊಬೆಲ್‌ ಪುರಸ್ಕಾರ ಅ.13ರಂದು ಪ್ರಕಟಗೊಳ್ಳಲಿವೆ.
  • ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ಗೋರ್

ಸಂದರ್ಭ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಪ್ತ ಸರ್ಗಿಯೊ ಗೋರ್‌ ಅವರು ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

  • ಪ್ರತಿಸುಂಕದ ವಿಚಾರವಾಗಿ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧ ಹದಗೆಟ್ಟಿ ರುವ ಸಂದರ್ಭದಲ್ಲಿ ಗೋರ್‌ ಅವರು ರಾಯಭಾರಿ ಯಾಗಿ ಆಯ್ಕೆಯಾಗಿರುವುದು ಗಮನಾರ್ಹ ಸಂಗತಿ.
  • ‘ಅಮೆರಿಕ –ಭಾರತ ನಡುವಿನ ವ್ಯಾಪಾರ ಒಪ್ಪಂದಗಳು ಅಮೆರಿಕದ ಸ್ಫರ್ಧಾತ್ಮಕತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಇತರ ದೇಶಗಳ ಮೇಲಿನ ಚೀನಾದ ಆರ್ಥಿಕ ಹತೋಟಿಯನ್ನು ಕಡಿಮೆಗೊಳಿಸುತ್ತವೆ’ ಎಂದು ಗೋರ್‌ ಪ್ರತಿಕ್ರಿಯಿಸಿದ್ದಾರೆ.
  • ಭಾರತಕ್ಕೆ ಆಗಮಿಸಿದ ಸ್ಟಾರ್ಮರ್

ಸಂದರ್ಭ: ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಭಾರತಕ್ಕೆ ಆಗಮಿಸಿದರು. ಇದು ಭಾರತಕ್ಕೆ ಅವರ ಚೊಚ್ಚಲ ಪ್ರವಾಸ.

  • ಜುಲೈನಲ್ಲಿ ಭಾರತ ಮತ್ತು ಬ್ರಿಟನ್‌ ನಡುವೆ ಲಂಡನ್‌ನಲ್ಲಿ ಮಹತ್ವದ ವ್ಯಾಪಾರ ಒಪ್ಪಂದ ಏರ್ಪಟ್ಟಿತ್ತು. ಅದಾದ ಬಳಿಕ ಬ್ರಿಟನ್‌ ಪ್ರಧಾನಿ ಸ್ಟಾರ್ಮರ್‌ ಅವರು ಎರಡು ದಿನಗಳ ಮಟ್ಟಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.
  • ಭಾರತಕ್ಕೆ ಬರುತ್ತಿದ್ದಂತೆ ಸ್ಟಾರ್ಮರ್‌ ಅವರು, ‘ಭಾರತದಲ್ಲಿ ಅಪೂರ್ವವಾದ ಅವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತವು 2028 ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಲಿದೆ. ಅವರೊಂದಿಗಿನ ವ್ಯಾಪಾರವು ತ್ವರಿತ ಮತ್ತು ಅಗ್ಗವಾಗಲಿದ್ದು, ಅಪೂರ್ವವಾದ ಅವಕಾಶಗಳು ದೊರೆಯಲಿವೆ. ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವು ಪರಸ್ಪರರ ಬೆಳವಣಿಗೆಗೆ ಸಹಕಾರಿಯಾಗಲಿದೆ’ ಎಂದರು.
  • ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು, ‘ಭಾರತಕ್ಕೆ ಐತಿಹಾಸಿಕ ಭೇಟಿ ನೀಡಿರುವ ಸ್ಟಾರ್ಮರ್‌ ಅವರಿಗೆ ಸ್ವಾಗತ. ಬ್ರಿಟನ್‌ನಿಂದ ಅತಿದೊಡ್ಡ ವ್ಯಾಪಾರ ನಿಯೋಗದ ಜತೆಗೆ ಬಂದಿರುವ ಅವರು ಎರಡು ದೇಶಗಳ ನಡುವಿನ ಭವಿಷ್ಯವನ್ನು ಸಮೃದ್ಧಗೊಳಿಸುವ ಆಶಯ ಹೊಂದಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಯಶ್‌ ರಾಜ್‌ ಫಿಲ್ಮ್‌ ಸ್ಟುಡಿಯೊಗೆ ಭೇಟಿ

  • ಬ್ರಿಟನ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರು ಮುಂಬೈನ ಅಂಧೇರಿಯಲ್ಲಿರುವ ಯಶ್‌ ರಾಜ್‌ ಫಿಲ್ಮ್‌ ಸ್ಟುಡಿಯೊಗೆ ಭೇಟಿ ನೀಡಿದರು. ಇದು ಬಾಲಿವುಡ್‌ನ ಪ್ರಮುಖ ನಿರ್ಮಾಣ ಕೇಂದ್ರ.
  • ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಸಂಬಂಧ ಬಲಪಡಿಸುವುದು ಮತ್ತು ಬ್ರಿಟನ್‌– ಭಾರತದ ಚಲನಚಿತ್ರೋದ್ಯಮಗಳ ನಡುವಿನ ಸಹಯೋಗವನ್ನು ಉತ್ತೇಜಿಸುವ ಗುರಿಯನ್ನು ಈ ಭೇಟಿ ಹೊಂದಿದೆ. ‘ಮುಂದಿನ ವರ್ಷದಿಂದ ಬ್ರಿಟನ್‌ನಲ್ಲಿ ಬಾಲಿವುಡ್‌ನ ಮೂರು ಹೊಸ ಬ್ಲಾಕ್‌ ಬಸ್ಟರ್‌ಗಳು ನಿರ್ಮಾಣವಾಗಲಿವೆ’ ಎಂದು ಈ ವೇಳೆ ಮಾಹಿತಿ ನೀಡಿದರು.
  • ಬಿ.ಎಸ್‌. ಚಂದ್ರಶೇಖರ್‌, ಬ್ರಯನ್ಲಾರಾಗೆ ಜೀವಮಾನ ಸಾಧನೆ ಪ್ರಶಸ್ತಿ ಗರಿ

ಸಂದರ್ಭ: ಸ್ಪಿನ್ ಬೌಲಿಂಗ್ ದಂತಕಥೆ, ಕನ್ನಡಿಗ ಬಿ.ಎಸ್. ಚಂದ್ರಶೇಖರ್ ಅವರಿಗೆ ಜೀವಮಾನ ಸಾಧನೆಗಾಗಿ ಸಿಯೆಟ್ ಕ್ರಿಕೆಟ್ ರೇಟಿಂಗ್ ಪುರಸ್ಕಾರ ನೀಡಿ ಗೌರವಿಸಲಾಯಿತು.

  • ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಬ್ಯಾಟರ್ ಬ್ರಯನ್ ಲಾರಾ ಅವರಿಗೂ ಜೀವಮಾನ ಸಾಧನೆ ಗೌರವ ಪ್ರದಾನ ಮಾಡಲಾಯಿತು.
  • ಪ್ರಸ್ತುತ ಭಾರತ ಟಿ20 ತಂಡದ ವಿಕೆಟ್‌ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ವರ್ಷದ ಸಾಧಕರ ಗೌರವ ಗಳಿಸಿದರು.
  • ಭಾರತ ತಂಡದ ನಿಕಟಪೂರ್ವ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶೇಷ ಸ್ಮರಣಿಕೆ ನೀಡಲಾಯಿತು. ಈಚೆಗೆ ಅವರ ನಾಯಕತ್ವದಲ್ಲಿ ಭಾರತ ತಂಡವು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿತ್ತು. ಇದೇ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ್ದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರೂ ವಿಶೇಷ ಗೌರವಕ್ಕೆ ಪಾತ್ರರಾದರು.
  • ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿರುವ ಎರಡನೇ ಬ್ಯಾಟರ್ ಇಂಗ್ಲೆಂಡ್‌ನ ಜೋ ರೂಟ್ ಅವರಿಗೆ ಪುರುಷರ ವಿಭಾಗದ ಅಂತರ ರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿನೀಡಲಾಯಿತು. ಹ್ಯಾರಿ ಬ್ರೂಕ್ ವರ್ಷದ ಬ್ಯಾಟರ್, ಶ್ರೀಲಂಕಾದ ಪ್ರಭಾತ್ ಜಯಸೂರ್ಯ ಅವರಿಗೆ ವರ್ಷದ ಬೌಲರ್‌ ಗೌರವ ನೀಡಲಾಯಿತು. ಭಾರತ ಮಹಿಳಾ ತಂಡದ ದೀಪ್ತಿ ಶರ್ಮಾ ಅವರಿಗೆ ವರ್ಷದ ಅಂತರ ರಾಷ್ಟ್ರೀಯ ಬೌಲರ್ ಹಾಗೂ ಸ್ಮೃತಿ ಮಂದಾನಗೆ ಉತ್ತಮ ಬ್ಯಾಟರ್‌ ಗೌರವ ಒಲಿಯಿತು.
  • ಕಳೆದ ರಣಜಿ ಟ್ರೋಫಿ ಕ್ರಿಕೆಟ್ ಋತುವಿನಲ್ಲಿ 69 ವಿಕೆಟ್ ಗಳಿಸಿದ ವಿದರ್ಭ ತಂಡದ ಹರ್ಷ್ ದುಬೆ ಅವರಿಗೆ ದೇಶಿ ಕ್ರಿಕೆಟ್‌ ಋತುವಿನ ಉತ್ತಮ ಆಟಗಾರ ಗೌರವ ಸಂದಿತು.
  • ಮುಂಬೈನ ಅಂಗಕ್ರಿಷ್ ರಘುವಂಶಿ ಅವರು ‘ಉದಯೋನ್ಮುಖ ಆಟಗಾರ’ ಪ್ರಶಸ್ತಿ ಗಳಿಸಿದರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments