ಪ್ರಚಲಿತ ವಿದ್ಯಮಾನಗಳು: 11ನೇ ಸೆಪ್ಟೆಂಬರ್ 2025
ಮರುಸಿಂಚನ: 27 ಜಿಲ್ಲೆಗಳಿಗೆ ವಿಸ್ತರಣೆ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ರೂಪಿಸಿರುವ ಯೋಜನೆ
ಸಂದರ್ಭ: ಕಲಿಕೆಯಲ್ಲಿ ಹಿಂದುಳಿ ದಿರುವ ಮಕ್ಕಳಿಗಾಗಿ ರೂಪಿಸಿರುವ ಮರುಸಿಂಚನ ಯೋಜನೆಯನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾರಿ ಗೊಳಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿನ ಸುಮಾರು 18 ಲಕ್ಷ ಮಕ್ಕಳು ಇದರ ಪ್ರಯೋಜನ ಪಡೆಯುವ ಸಾಧ್ಯತೆ ಇದೆ.
- ‘ಎರಡು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಈ ಯೋಜನೆಯನ್ನು 2025–26ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.
- ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳನ್ನು ಗುರುತಿಸಿ, ಶಾಲಾ ಅವಧಿಯಲ್ಲೇ ಪರಿಹಾರ ಬೋಧನೆ ಮೂಲಕ ಅವರ ಕಲಿಕಾ ಮಟ್ಟವನ್ನು ಸುಧಾರಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ, ಶಿಕ್ಷಕರಿಗೆ ಮಾಡ್ಯೂಲ್‌ಗಳ ಕೈಪಿಡಿ ನೀಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಮಕ್ಕಳಿಗೆ ಕಲಿಸಲಾಗುತ್ತದೆ.
- ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಅಭ್ಯಾಸ ಪುಸ್ತಕಗಳನ್ನು ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ (ಡಿಎಸ್‌ಇಆರ್‌ಟಿ) ಸಿದ್ಧಪಡಿಸಲಿದೆ.
- ಸ್ವಯಂ ಸೇವಾ ಸಂಸ್ಥೆಗಳಾದ ಪೀಪಲ್ ಫಾರ್ ಆಕ್ಷನ್ ಸಂಸ್ಥೆ ಮತ್ತು ಜೆ–ಪಾಲ್ ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗಿದ್ದು, ಕಾಲಕಾಲಕ್ಕೆ ಅಗತ್ಯ ಸಲಹೆಗಳನ್ನು ನೀಡಲಿವೆ.
- ಕಲಿಕೆಯಲ್ಲಿ ಶೇ 40ಕ್ಕಿಂತ ಕಡಿಮೆ ಇರುವ ಅಥವಾ ಶೇ 60ಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಮರುಸಿಂಚನ ಯೋಜನೆಯಡಿ ಪರಿಹಾರ ಬೋಧನೆ ತರಗತಿಗಳನ್ನು ನಡೆಸಬೇಕೇ ಎಂಬುದು ಇನ್ನೂ ಅಂತಿಮವಾಗಿಲ್ಲ.
- ಗುಣಮಟ್ಟ ಸುಧಾರಣೆ: 10ನೇ ತರಗತಿಯಲ್ಲಿ ಕಡಿಮೆ ಫಲಿತಾಂಶ, ಉತ್ತೀರ್ಣರಾಗದೆ ಇರುವುದು ಕಂಡುಬಂದಿದೆ. ಅಲ್ಲದೆ ಮಕ್ಕಳು ಯಾವ ಹಂತದಲ್ಲಿ ಎಷ್ಟು ಕಲಿತಿರಬೇಕೊ, ಅಷ್ಟು ಕಲಿತಿರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಆಯಾ ತರಗತಿಯಿಂದಲೇ ಗುಣಮಟ್ಟದಲ್ಲಿ ಸುಧಾರಣೆ ತರಲು ಮರುಸಿಂಚನ ಕಾರ್ಯಕ್ರಮ ರೂಪಿಸಲಾಗಿದೆ.
- ಅಭ್ಯಾಸ ಪುಸ್ತಕ 80ರಿಂದ 100 ಪುಟ ಇರಲಿದ್ದು, ಮಕ್ಕಳ ಸಾಮರ್ಥ್ಯವನ್ನು ಅರಿತು ಪೂರಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಸಲಾಗುತ್ತದೆ. ಸಾಮಾನ್ಯ ತರಗತಿ ಹೊರತುಪಡಿಸಿ, ಹೆಚ್ಚುವರಿಯಾಗಿ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕಲಿಸುವುದರಿಂದ ಮಕ್ಕಳ ಕಲಿಕಾ ಮಟ್ಟದಲ್ಲಿ ಸುಧಾರಣೆಯಾಗಿರುವುದು ಮೌಲ್ಯಾಂಕನದಿಂದ ದೃಢಪಟ್ಟಿದೆ. ಇದನ್ನು ಆಧರಿಸಿ ಈ ವರ್ಷ ಎಲ್ಲ ಸರ್ಕಾರಿ ಶಾಲೆಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ.
ಪ್ರಾಯೋಗಿಕ ಯೋಜನೆ ಯಶಸ್ವಿ
- 17 ಜಿಲ್ಲೆಗಳ 93 ತಾಲ್ಲೂಕುಗಳಲ್ಲಿ 9ನೇ ತರಗತಿ ಮಕ್ಕಳಿಗೆ 2023–24ರಲ್ಲಿ ಪ್ರಾಯೋಗಿಕವಾಗಿ ಮರುಸಿಂಚನ ಯೋಜನೆ ಜಾರಿಗೊಳಿಸಲಾಗಿತ್ತು. ಕಳೆದ ವರ್ಷ 6ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿಸ್ತರಿಸಲಾಗಿತ್ತು. ಇದು ಯಶಸ್ವಿಯಾಗಿರುವುದನ್ನು ಗಮನಿಸಿ 27 ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.
- ‘ರಾಜ್ಯದಲ್ಲಿ ಒಟ್ಟು 35 ಶೈಕ್ಷಣಿಕ ಜಿಲ್ಲೆಗಳಿವೆ. ಈ ಪೈಕಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿರಸಿ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಒಟ್ಟಾರೆ ಶೈಕ್ಷಣಿಕ ಗುಣಮಟ್ಟ ಚೆನ್ನಾಗಿದೆ. ಆ ಜಿಲ್ಲೆಗಳಲ್ಲೂ ಕೆಲವು ಶಾಲೆಗಳಲ್ಲಿನ ಮಕ್ಕಳ ಕಲಿಕಾ ಮಟ್ಟ ಕಡಿಮೆ ಇರಬಹುದು. ಆದರೆ, ಆ ಜಿಲ್ಲೆಗಳಲ್ಲಿ ಮರುಸಿಂಚನ ಜಾರಿ ಮಾಡುವ ಬಗ್ಗೆ ಸದ್ಯಕ್ಕೆ ನಿರ್ಧರಿಸಿಲ್ಲ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಲಗಳು ತಿಳಿಸಿವೆ.
- ದೇಶದಾದ್ಯಂತ ಎಸ್ಐಆರ್ಗೆ ಸಿದ್ಧತೆ
ಸಂದರ್ಭ: ವರ್ಷಾಂತ್ಯದ ವೇಳೆಗೆ ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಸಲು ಮುಂದಾಗಿರುವ ಚುನಾ ವಣಾ ಆಯೋಗ, ಈ ಕುರಿತು ಶೀಘ್ರದಲ್ಲಿಯೇ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.
- ರಾಷ್ಟ್ರದಾದ್ಯಂತ ಎಸ್‌ಐಆರ್ ನಡೆಸಲು ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಲಾಯಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು, ವಿವೇಕ್ ಜೋಶಿ ಅವರೂ ಪಾಲ್ಗೊಂಡಿದ್ದರು.
- ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಸಿಂಗ್ ಗುಂಜಿ ಯಾಲ್ ಅವರು, ವಿವಾದಗಳ ನಡುವೆಯೂ ರಾಜ್ಯದಲ್ಲಿ ಎಸ್‌ಐಆರ್ ಜಾರಿಗೆ ಅಳವಡಿಸಿಕೊಂಡ ಕಾರ್ಯ ತಂತ್ರ, ನಿಯಮಗಳು, ನಡೆಸಿದ ಕಸರತ್ತಿನ ವಿವರವನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು.
- ಮುಂದಿನ ವರ್ಷದ (2026) ಏಪ್ರಿಲ್–ಮೇ ತಿಂಗಳಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಿದ್ದು, ಅದಕ್ಕೂ ಮುನ್ನವೇ, ಈ ವರ್ಷಾಂತ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
- ಸಭೆಯಲ್ಲಿ ಹಾಜರಿದ್ದ ಸಿಇಒಗಳು ತಮ್ಮ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟಾರೆ ಮತದಾರರ ಸಂಖ್ಯೆ, ಹಿಂದೆ ನಡೆದಿದ್ದ ಎಸ್‌ಐಆರ್ ಮತ್ತು ಮತದಾರರ ಪಟ್ಟಿಯ ಕುರಿತು ವಿವರವಾದ ಮಾಹಿತಿಯನ್ನು ಪ್ರಸ್ತುತ ಪಡಿಸಿದರು ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
- ದೇಶದಾದ್ಯಂತ ಎಸ್‌ಐಆರ್ ನಡೆಸಲು ಚುನಾವಣಾ ಆಯೋಗ ಜೂನ್ 24ರಂದು ನಿರ್ಧರಿಸಿತ್ತು. ಅಕ್ಟೋಬರ್–ನವೆಂಬರ್‌ನಲ್ಲಿ ಚುನಾವಣೆ ನಡೆಯಲಿ ರುವ ಬಿಹಾರದಿಂದ ಅದನ್ನು ಪ್ರಾರಂಭಿಸುವುದಾಗಿ ತಿಳಿಸಿತ್ತು. ದೇಶದ ಇತರ ಭಾಗಗಳಿಗೆ ಮುಂದಿನ ದಿನಗಳಲ್ಲಿ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದೂ ಆಯೋಗ ಹೇಳಿತ್ತು.
- ‘ದೇಶದಲ್ಲಿ 2003ರಲ್ಲಿ ಕೊನೆಯ ದಾಗಿ ಎಸ್‌ಐಆರ್ ನಡೆಸಲಾಗಿತ್ತು. ನಗರೀಕರಣ, ಹೆಚ್ಚುತ್ತಿರುವ ವಲಸೆ ಯಿಂದಾಗಿ ಮತದಾರರ ಪಟ್ಟಿಯಲ್ಲಿ ಪದೇ ಪದೇ ಬದಲಾವಣೆಗಳು ಆಗುತ್ತಿವೆ. ಹೀಗಾಗಿ ಎಸ್‌ಐಆರ್ ಅಗತ್ಯವಾಗಿದೆ’ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿತ್ತು.
- ಬಾಂಗ್ಲಾ ಮತ್ತು ಮ್ಯಾನ್ಮಾರ್ ಅಕ್ರಮ ವಲಸಿಗರನ್ನು ಹಲವು ರಾಜ್ಯಗಳಲ್ಲಿ ಪತ್ತೆ ಮಾಡಿದ ನಂತರ ವಿದೇಶಿ ಅಕ್ರಮ ವಲಸಿಗರನ್ನು ಪಟ್ಟಿಯಿಂದ ತೆಗೆಯುವುದು ಈ ವಿಶೇಷ ಪರಿಷ್ಕರಣೆಯ ಪ್ರಾಥಮಿಕ ಉದ್ದೇಶ.
ಹೊರರಾಜ್ಯಗಳಲ್ಲಿ ನೆಲಸಿರುವವರಿಗೆ ‘ಘೋಷಣಾ ಅರ್ಜಿ’
- ಹೊರರಾಜ್ಯಗಳಲ್ಲಿ ನೆಲಸಿರುವವರಿಗಾಗಿಯೇ ಹೆಚ್ಚುವರಿ ಯಾಗಿ ‘ಘೋಷಣಾ ಅರ್ಜಿ’ಯೊಂದನ್ನು ಪರಿಚಯಿಸಲು ಆಯೋಗ ಮುಂದಾಗಿದೆ. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ಮಧ್ಯೆ ಭಾರತದಲ್ಲಿ ಜನಿಸಿರುವ ಬಗ್ಗೆ ಅವರೆಲ್ಲ ದೃಢಪಡಿಸಬೇಕು. ಜನ್ಮ ದಿನಾಂಕ ಮತ್ತು ವಾಸಸ್ಥಳದ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು.
- ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಈಗಾಗಲೇ ಬಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಯೋಗಕ್ಕೆ ಸೂಚನೆ ನೀಡಿದೆ. ಕೆಲವು ರಾಜ್ಯಗಳು 2002 ಮತ್ತು 2004ರ ಮಧ್ಯೆ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಿದ್ದವು.
ಆಧಾರ್ ಪರಿಗಣನೆಗೆ ಸೂಚನೆ
- ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಮತದಾರರ ಗುರುತಿನ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸುವಂತೆ ಚುನಾವಣಾ ಆಯೋಗವು ಬಿಹಾರದ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
- ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಈ ನಿರ್ದೇಶನ ನೀಡಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಆಯೋಗವು, ‘ಮತದಾರರ ಗುರುತಿಗೆ ಗೊತ್ತುಪಡಿಸಲಾದ 11 ದಾಖಲೆಗಳ ಜೊತೆಗೆ 12ನೇ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸಬಹುದು’ ಎಂದು ತಿಳಿಸಿದೆ.
- ಸೈಬರ್ ಕಮಾಂಡ್ ಘಟಕ ರಚನೆ
ಸಂದರ್ಭ: ‘ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಗಮನದಲ್ಲಿ ರಿಸಿಕೊಂಡು ರೂಪಿಸಲಾಗಿರುವ ದೇಶದ ಮೊದಲ ಸೈಬರ್ ಕಮಾಂಡ್ ಘಟಕವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತಾಗಬೇಕು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
- ನಗರದ ‘ನ್ಯೂಸ್ಪೇಸ್ ರಿಸರ್ಚ್ ಆ್ಯಂಡ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಕಂಪನಿ’ಯ ಅಧಿಕೃತ ಪ್ರತಿನಿಧಿ ಭಾವನಾ ವಿಜಯಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಪ್ರಕರಣದಲ್ಲಿ ಇಂತಹದೊಂದು ಸ್ವತಂತ್ರ ಘಟಕವನ್ನು ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.
- ಈ ಆದೇಶದ ಅನುಪಾಲನೆಯನ್ನು ಪರಿಗಣಿಸಿ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರನ್ನು ತೆರೆದ ಕೋರ್ಟ್ ಹಾಲ್‌ಗೆ ಬರಮಾಡಿಕೊಂಡ ನ್ಯಾಯಪೀಠ, ಸೈಬರ್ ಕಮಾಂಡ್ ಘಟಕ ಅಥವಾ ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ) ರಚನೆಯ ಆದೇಶ ಕೇವಲ ಕಾಗದದಲ್ಲಿ ಉಳಿಯುವಂತಾಗಬಾರದು ಎಂದು ಹೇಳಿತು.
- ಸೈಬರ್ ಅಪರಾಧಗಳ ತನಿಖೆಯಲ್ಲಿನ ಪ್ರಗತಿ ಅಥವಾ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ ಪ್ರಕರಣಗಳನ್ನು ಒಂದೇ ಸೂರಿನಡಿ ತರಬೇಕು. ಸಿಸಿಸಿಯ ಇಂತಹ ಏಕೀಕರಣವನ್ನು ತೋರಿಸುವ ನಿಮ್ಮ ವರದಿಯನ್ನು ಅಮಿಕಸ್ ಕ್ಯೂರಿ ಮೂಲಕ ಈ ನ್ಯಾಯಪೀಠಕ್ಕೆ ಸಲ್ಲಿಸಬೇಕು. ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅದಕ್ಕಾಗಿ ಕ್ರಮ ತೆಗೆದುಕೊಳ್ಳುವುದು ಸಿಸಿಸಿಯ ಆದ್ಯ ಕರ್ತವ್ಯವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ.
- ‘ಈ ಸಂಸ್ಥೆ ಅಥವಾ ಕೇಂದ್ರವು ದೇಶದ ಮೊದಲ ಸೈಬರ್ ಕಮಾಂಡ್ ಘಟಕ (ಸಿಸಿಯು) ಅಥವಾ ಸಿಸಿಸಿ ಎಂಬ ಹೆಗ್ಗಳಿಕೆ ಎಂಬುದನ್ನು ಮರೆಯಬೇಡಿ’ ಎಂದು ಸೂಚಿಸಿತು.
- ‘ಸೈಬರ್ ಅಪರಾಧಗಳನ್ನು ಎದುರಿಸಲು ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸಲು ಸ್ಥಾಪಿಸಿರುವ ಸದರಿ ಘಟಕವು, ಹೊಸ ಯುಗದ ತನಿಖಾ ಕೇಂದ್ರಗಳೊಂದಿಗೆ ಹೊಸ ನಮೂನೆಯ ತಾಂತ್ರಿಕ ಯುಗದ ಅಪರಾಧಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಬೇಕು. ಈ ಘಟಕದ ಅಧಿಕಾರಿಗಳು ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸು ವಂತೆ ಮಾಡಬೇಕು. ಆಗ ಮಾತ್ರ ರಾಜ್ಯವು ಸೈಬರ್ ಅಪರಾಧದಿಂದ ಹೊರಹೊಮ್ಮುತ್ತಿರುವ ಅಪಸವ್ಯಗಳನ್ನು ನಿಯಂತ್ರಿಸಲು ಸಾಧ್ಯ’ ಎಂದು ನ್ಯಾಯಪೀಠ ಎಚ್ಚರಿಸಿದೆ.
- ‘ಸಿಸಿಸಿ ಅಥವಾ ಸೈಬರ್ ಕಮಾಂಡೊ ಘಟಕ ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ಹೊಸ ಉದಯವನ್ನು ಸೂಚಿಸುವ ದೀಪವಾಗಿರಬೇಕು’ ಎಂದು ಸ್ಪಷ್ಟಪಡಿಸಿದೆ. ‘ನ್ಯಾಯಾಲಯ ನೀಡಿರುವ ಈ ಆದೇಶದ ಅನುಪಾಲನೆ ಕುರಿತಂತೆ ಕೈಗೊಳ್ಳಲಾಗುವ ಕ್ರಮಗಳನ್ನು ಇದೇ 24ಕ್ಕೆ ವಿವರಿಸಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
- 371 ಮರ: ‘ಜೀವವೈವಿಧ್ಯ ಪಾರಂಪರಿಕ ತಾಣ’
ಸಂದರ್ಭ: ರೈಲ್ವೆ ಕಂಟೊನ್ಮೆಂಟ್ ಕಾಲೊನಿಯಲ್ಲಿ 371 ಮರಗಳಿರುವ ಎಂಟು ಎಕರೆಗೂ ಹೆಚ್ಚು ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿ, ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ.
- ವಸಂತನಗರದಲ್ಲಿರುವ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ 368 ಮರ ತೆರವುಗೊಳಿಸುವುದಕ್ಕೆ ಪರಿಸರ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಹೋರಾಟ ವನ್ನೂ ನಡೆಸಿದ್ದರು. ಪರಿಸರ ಕಾರ್ಯಕರ್ತರ ಒತ್ತಾಸೆ ಹಾಗೂ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಭರವಸೆಯಂತೆ ಈ ಪ್ರದೇಶವು ‘ಜೀವವೈವಿಧ್ಯ ಪಾರಂಪರಿಕ ತಾಣ’ವಾಗಿದೆ.
- ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣದ 167 ಎಕರೆಯನ್ನು ಈ ಹಿಂದೆ ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಲಾಗಿತ್ತು. ಇದರ ನಂತರ, ರೈಲ್ವೆ ಕಂಟೊನ್ಮೆಂಟ್ ಕಾಲೊನಿ ಈ ಹೆಗ್ಗಳಿಕೆಗೆ ಪಾತ್ರವಾಗಿದೆ.
- ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಮಂಡಳಿಯ ವಿಶೇಷ ಸಭೆ ನಡೆಯಿತು. ಬೆಂಗಳೂರಿನ ಕಂಟೊನ್ಮೆಂಟ್ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ 8.61 ಎಕರೆ ಪ್ರದೇಶವನ್ನು ಹಸಿರು ವಲಯವನ್ನಾಗಿ ಪರಿಗಣಿಸಿ, ಸಂರಕ್ಷಣೆಯ ಅಗತ್ಯವನ್ನು ಮನಗಂಡು, ಜೀವ ವೈವಿದ್ಯ ಕಾಯ್ದೆ–2002 ನಿಬಂಧನೆಗಳ ಅಡಿಯಲ್ಲಿ ಈ ಸ್ಥಳವನ್ನು ‘ಜೀವವೈವಿದ್ಯ ಪಾರಂಪರಿಕ ತಾಣ’ (ಬಿಎಚ್ಎಸ್) ಎಂದು ಘೋಷಿಸಲು ತೀರ್ಮಾನಿಸಲಾಯಿತು.
- ರಾಜಧಾನಿಯ ಹೃದಯ ಭಾಗದಲ್ಲಿ 50 ಜಾತಿಯ 371 ಮರಗಳಿದ್ದು, ರಮಣೀಯ ಸೌಂದರ್ಯ, ಹಕ್ಕಿಗಳ ಚಿಲಿಪಿಲಿಯ ಹಸಿರು ತಾಣವಾಗಿದೆ. ನಗರದ ವಾಸಯೋಗ್ಯತೆ ಯನ್ನು ಉತ್ತಮಪಡಿಸಿ, ಹಸಿರುಹಾಸು ಈ ಪ್ರದೇಶದ ಹೆಗ್ಗುರುತಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಷರತ್ತುಗಳು ಏನು?
lಸೂಕ್ಷ್ಮ ಅನುಮೋದಿತ ನಿರ್ವಹಣಾ ಯೋಜನೆಯಂತೆ ಪಾರಂಪರಿಕ ತಾಣವನ್ನು ನಿರ್ವಹಿಸಬೇಕು
lಸ್ಥಳೀಯರ ಹಕ್ಕುಗಳು ಮತ್ತು ಸವಲತ್ತುಗಳು ಸದಾ ಅಸ್ತಿತ್ವದಲ್ಲಿರುತ್ತವೆ
lಪಾರಂಪರಿಕ ತಾಣದ ನಿರ್ವಹಣೆಯಲ್ಲಿ ಸ್ಥಳೀಯ ಜನರಿಗೆ ಪಾಲ್ಗೊಳ್ಳಲು ಅವಕಾಶ ಇರಬೇಕು
lಜೀವವೈವಿಧ್ಯತೆಯ ಸಂರಕ್ಷಣೆಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ
- ಇಟಲಿ ಪ್ರಧಾನಿ ಜತೆ ಮೋದಿ ಮಾತುಕತೆ
ಸಂದರ್ಭ: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
- ‘ಪ್ರಧಾನಿ ಜಾರ್ಜಿಯಾ ಮೆಲೊನಿ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಿದೆ. ಭಾರತ– ಇಟಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಇಮ್ಮಡಿಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ.
- ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಬೇಕೆಂಬ ಕುರಿತೂ ಮಾತನಾಡಿದೆವು’ ಎಂದು ಮೋದಿ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
- ‘ಭಾರತ–ಯುರೋಪ್ ಒಕ್ಕೂಟದ ವ್ಯಾಪಾರ ಒಪ್ಪಂದ ಮತ್ತು ‘ಭಾರತ– ಮಧ್ಯಪ್ರಾಚ್ಯ– ಯುರೋಪ್ ಆರ್ಥಿಕ ಕಾರಿಡಾರ್’ (ಐಎಂಇಇಸಿ) ಅನುಷ್ಠಾನಕುರಿತು ಬೆಂಬಲ ನೀಡಿದ್ದಕ್ಕಾಗಿ ಮೆಲೊನಿ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದೂ ಹೇಳಿದ್ದಾರೆ. ಭಾರತ ಮತ್ತು ಯುರೋಪ್ ಒಕ್ಕೂಟವು ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಬಲಗೊಳಿಸುವತ್ತ ಮುಂದುವರಿದಿವೆ.
- ಬಿಆರ್ಎಸ್ಗೆ ಅಧಿಕ ಆದಾಯ
- ‘ಕೈಗಾರಿಕೆಗೆ ಎರಡು ಎಕರೆ: ಭೂಮಿ ಪರಿವರ್ತನೆ ಅಗತ್ಯವಿಲ್ಲ’
ಸಂದರ್ಭ: ಕೃಷಿ ಭೂಮಿ ಖರೀದಿ ಸರಳೀಕರಣ ಮತ್ತು ಕೆಲವು ಉದ್ದೇಶ ಗಳಿಗೆ ಭೂಮಿ ಪರಿವರ್ತನೆ ನಿಯಮ ಸಡಿಲಿಕೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಸುಧಾರಣೆಗಳು ಮತ್ತು ಇತರೆ ಕಾನೂನು (ತಿದ್ದುಪಡಿ)’ ಮಸೂದೆ ಸೇರಿ ವಿವಿಧ ಮಸೂದೆಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಅಂಕಿತ ಹಾಕಿದ್ದಾರೆ. ಆ ಬೆನ್ನಲ್ಲೆ, ರಾಜ್ಯ ಸರ್ಕಾರ ಗೆಜೆಟ್ ಹೊರಡಿಸಿದೆ.
- ಶಿಕ್ಷಣ ಸಂಸ್ಥೆಗಳಿಗೆ ಅಥವಾ ಕೈಗಾರಿಕೆ ಗಳಿಗೆ ಎರಡು ಎಕರೆವರೆಗಿನ ಕೃಷಿ ಭೂಮಿಗೆ ಭೂ ಪರಿವರ್ತನೆಯಿಂದ ವಿನಾಯಿತಿ ನೀಡುವ, ಶಿಕ್ಷಣ ಸಂಸ್ಥೆ ಗಳು ಮತ್ತು ಕೈಗಾರಿಕೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಕೃಷಿ ಭೂಮಿ ಖರೀದಿಗೆ ಮಿತಿ, ಜಿಲ್ಲಾಧಿಕಾರಿಗಳಿಗೆ ಭೂಮಿ ಖರೀದಿಸುವ ಅಧಿಕಾರ, ಕೃಷಿ ಭೂಮಿ ಯನ್ನು ಅನುಮತಿ ಇಲ್ಲದೆ ಅಥವಾ ಪರಿವರ್ತನೆ ಮಾಡದೆ ಕೃಷಿಯೇತರ ಉದ್ದೇಶಕ್ಕೆ ಬಳಸಿದರೆ ₹ 1 ಲಕ್ಷ ದಂಡ, ನವೀಕರಿಸಬಹುದಾದ ಇಂಧನ ಉತ್ಪಾದನೆಗಾಗಿ ಕೃಷಿ ಭೂಮಿಯ ಸ್ವಯಂ ಚಾಲಿತ ಪರಿವರ್ತನೆ ಪ್ರಮಾಣಪತ್ರ ನೀಡಲು ಕೂಡಾ ಕರ್ನಾಟಕ ಭೂ ಸುಧಾರಣೆ, ಇತರೆ ಕಾನೂನು ಮಸೂದೆ ಅವಕಾಶ ನೀಡಿದೆ.
- ಇತರ ಮಸೂದೆಗಳು: ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಕೂಡಲ ಸಂಗಮ ಅಭಿವೃದ್ಧಿ ಮಂಡಳಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಬನವಾಸಿ ಅಭಿವೃದ್ಧಿ ಪ್ರಾಧಿಕಾರಗಳಿಗೆ ಮುಖ್ಯಮಂತ್ರಿ ಅಥವಾ ಕಂದಾಯ ಮಂತ್ರಿ ಅಥವಾ ಮುಖ್ಯಮಂತ್ರಿ ಆಯ್ಕೆ ಮಾಡಿದ ಯಾರಾದರು ಸಚಿವರು ಪದನಿಮಿತ್ತ ಅಧ್ಯಕ್ಷರಾಗಿ ಮಾಡಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆಗಳಿಗೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
- ಲಿಫ್ಟ್, ಎಸ್ಕಲೇಟರ್ ಅಥವಾ ಪ್ಯಾಸೆಂಜರ್ ಕನ್ವೇಯರ್‌ಗಳನ್ನು ಭಾರತೀಯ ಗುಣಮಟ್ಟ ಬ್ಯೂರೊ ಪದ್ಧತಿ ಗಳ ಅಸ್ತಿತ್ವದಲ್ಲಿರುವ ಸಂಬಂಧಪಟ್ಟ ಸಂಹಿತೆ ಮತ್ತು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರ (ಸುರಕ್ಷತೆ ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಕ್ರಮಗಳು) ವಿನಿಮಯಗಳ ಅನ್ವಯ ಸ್ಥಾಪಿಸಲು ನಿರ್ದೇಶಿಸುವ ಉದ್ದೇಶದ ‘ಕರ್ನಾಟಕ ಲಿಫ್ಟ್‌ಗಳ, ಎಸ್ಕಲೇಟರ್‌ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‌ಗಳ (ತಿದ್ದುಪಡಿ) ಮಸೂದೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲಾ ಮಟ್ಟದ ಮೇಲುಸ್ತುವಾರಿ ಸಮಿತಿ ರಚಿಸಲು ಅವಕಾಶ ಕಲ್ಪಿಸಲು ರೂಪಿಸಿದ ‘ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ,ನಿಯಂತ್ರಣ) (ತಿದ್ದುಪಡಿ) ಮಸೂದೆ, ಎಸ್ಮಾ ವಿಧಿಸುವ ಅವಕಾಶ ವನ್ನು ಮುಂದಿನ 20 ವರ್ಷಗಳ ಅವಧಿ ವಿಸ್ತರಿಸಲು ಅವಕಾಶ ನೀಡುವ ‘ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ಮಸೂದೆ, ರಾಜ್ಯದ ಬಹುಮಹಡಿ ಕಟ್ಟಡಗಳಿಗೆ ಶೇ 1ರಷ್ಟು ಅಗ್ನಿ ಸೆಸ್ ವಿಧಿಸಲು ಅವಕಾಶ ಮಾಡಿಕೊಡುವ ‘ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ) ಮಸೂದೆ’ಗೂ ಅಂಕಿತ ಹಾಕಿದ್ದಾರೆ.
- ಮನೆ–ಮನೆಯ ಕಥೆ: ಪೋಷಕರ ಪಾಲನೆ ಭತ್ಯೆ ಹೆಚ್ಚಳಕ್ಕೆ ಶಿಫಾರಸು
- ‘ರಾಜ್ಯ ಸ್ಥಾನಮಾನಕ್ಕಾಗಿ ಸತ್ಯಾಗ್ರಹ’
ಸಂದರ್ಭ: ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡುವುದರ ಜೊತೆಗೆ ಅದನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸುವಂತೆ ಒತ್ತಾಯಿಸಿ ಲೇಹ್‌ನಲ್ಲಿ 35 ದಿನಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ತಿಳಿಸಿದ್ದಾರೆ. ಲೇಹ್ ಅಪೆಕ್ಸ್ ನಿಯೋಗ (ಎಲ್‌ಎಬಿ) ಕೂಡ ಇದನ್ನು ಸ್ಪಷ್ಟಪಡಿಸಿದೆ.
- ‘ಕಳೆದ ಎರಡು ತಿಂಗಳಿಂದ ನಮ್ಮ ಬೇಡಿಕೆಗಳ ಕುರಿತು ಕೇಂದ್ರ ಗೃಹ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ವಾಂಗ್ಚುಕ್ ತಿಳಿಸಿದರು.
- ಲೇಹ್‌ನ ಹಿಲ್ ಕೌನ್ಸಿಲ್ ಚುನಾವಣೆ ಶೀಘ್ರವೇ ನಡೆಯಲಿದ್ದು, ಕೇಂದ್ರ ಸರ್ಕಾರವು ಕಳೆದ ಬಾರಿಯ ಚುನಾವಣೆಯಲ್ಲೇ ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದಕ್ಕೆ ಸೇರಿಸುವುದಾಗಿ ಭರವಸೆ ನೀಡಿತ್ತು. ಇದನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಗಾಂಧಿ ಜಯಂತಿಯು ಸತ್ಯಾಗ್ರಹದ ಪ್ರಮುಖ ದಿನವಾಗಲಿದೆ ಎಂದೂ ಅವರು ಹೇಳಿದ್ದಾರೆ.
- ಕೊಪ್ಪಳದಲ್ಲಿ ಉಕ್ಕು ಘಟಕ ಸ್ಥಾಪನೆಗೆ ₹2,345 ಕೋಟಿ
ಸಂದರ್ಭ: ಬಜಾಜ್ ಸಮೂಹದ ಮುಕುಂದ ಸುಮಿ ಸಹಭಾಗಿತ್ವ ದಲ್ಲಿ ಕೊಪ್ಪಳದಲ್ಲಿ ಉಕ್ಕು ತಯಾರಿಕಾ ಘಟಕ ಸ್ಥಾಪನೆಗೆ ಜಪಾನಿನ ಸುಮಿಟಾವೊ ಕಂಪನಿ ₹2,345 ಕೋಟಿ ಹೂಡಿಕೆ ಮಾಡಲಿದೆ.
- ಬಂಡವಾಳ ಆಕರ್ಷಣೆಗಾಗಿ ಜಪಾನ್ ಪ್ರವಾಸದಲ್ಲಿರುವ ಅವರು ಸುಮಿಟಾವೊ ಪ್ರತಿನಿಧಿಗಳ ಜತೆಗಿನ ಸಭೆಯ ನಂತರ ಈ ಮಾಹಿತಿ ನೀಡಿದ್ದಾರೆ. ‘ಈ ಘಟಕವು ವಾರ್ಷಿಕ 3.50 ಲಕ್ಷ ಟನ್ ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿರಲಿದೆ. 2028ರ ವೇಳೆಗೆ ಘಟಕ ಕಾರ್ಯಾರಂಭ ಮಾಡಲಿದೆ. ಅಲ್ಲದೆ ಸುಮಿಟಾವೊ ಕಂಪನಿಯು ರಾಜ್ಯದಲ್ಲಿ ಬಯೊಮಾಸ್ ಘಟಕವನ್ನೂ ಸ್ಥಾಪಿಸಲಿದೆ.
- ‘ಹುಬ್ಬಳ್ಳಿಯಲ್ಲಿರುವ ಎನ್‌ಜಿಇಎಫ್ ಕಾರ್ಖಾನೆಯ ಪುನರಾರಂಭದ ಸಂಬಂಧ ಜೆಎಫ್‌ಇ ಷೋಜಿ ಕಂಪನಿಯ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಲಾಗಿದೆ. ₹400 ಕೋಟಿ ಹೂಡಿಕೆ ಮಾಡಲು ಕಂಪನಿ ಮುಂದೆ ಬಂದಿದೆ. ವಿದ್ಯುತ್‌ಚಾಲಿತ ವಾಹನಗಳ ಮೋಟರ್‌ಗಳ ಕೋರ್‌ಗಳನ್ನು ಈ ಕಾರ್ಖಾನೆಯಲ್ಲಿ ತಯಾರಿಸುವ ಬಗ್ಗೆ ಪರಿಶೀಲನೆ ನಡೆಯಲಿದೆ. ಅದರ ಭಾಗವಾಗಿ ಜೆಎಫ್‌ಇ ಷೋಜಿ ಪ್ರತಿನಿಧಿಗಳನ್ನು ಎನ್‌ಜಿಇಎಫ್ ಕಾರ್ಖಾನೆ ಭೇಟಿಗೆ ಆಹ್ವಾನಿಸಲಾಗಿದೆ.
- ಯಸ್ಕಾವಾ ಕಂಪನಿಯು ಬೆಂಗಳೂರಿನಲ್ಲಿ ಮೋಷನ್ ಕಂಟ್ರೋಲ್ ಮತ್ತು ವೇರಿಯೇಬಲ್ ಫ್ರೀಕ್ವೆನ್ಸಿ ಡ್ರೈವ್‌ನ ತಯಾರಕ ಘಟಕ ಸ್ಥಾಪಿಸುವ ಬಗ್ಗೆ ಆಸಕ್ತಿ ತೋರಿಸಿದೆ ಎಂದಿದ್ದಾರೆ.
- ದೇಶದ ಜಿಡಿಪಿ ಬೆಳವಣಿಗೆ ಅಂದಾಜು ಪರಿಷ್ಕರಣೆ
ಸಂದರ್ಭ: ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದ ದೇಶದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಫಿಚ್ ರೇಟಿಂಗ್ಸ್ ಸಂಸ್ಥೆಯು ಶೇಕಡ 6.9ಕ್ಕೆ ಹೆಚ್ಚಿಸಿದೆ. ಈ ಮೊದಲು ಅದು ಬೆಳವಣಿಗೆ ದರವು ಶೇ 6.5ರಷ್ಟು ಇರಲಿದೆ ಎಂದು ಅಂದಾಜು ಮಾಡಿತ್ತು.
- ಜೂನ್ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರವು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಇದ್ದುದು ಹಾಗೂ ದೇಶಿ ಮಾರುಕಟ್ಟೆಯಲ್ಲಿನ ಬಳಕೆ ಆಧಾರಿತ ಬೇಡಿಕೆಯು ಅಂದಾಜು ಹೆಚ್ಚಿಸುವುದಕ್ಕೆ ಕಾರಣ ಎಂದು ಸಂಸ್ಥೆ ಹೇಳಿದೆ.
- ಸುಂಕ ಸಂಬಂಧಿ ಅನಿಶ್ಚಿತತೆಗಳ ನಂತರ ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಹಲವು ಸಂಸ್ಥೆಗಳು ತಗ್ಗಿಸಿದ್ದವು. ಈಗ ಭಾರತದ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಹೆಚ್ಚು ಮಾಡುತ್ತಿರುವ ಮೊದಲ ಜಾಗತಿಕ ರೇಟಿಂಗ್ಸ್ ಸಂಸ್ಥೆ ಫಿಚ್ ಆಗಿದೆ.
- ಅಮೆರಿಕದ ಜೊತೆಗಿನ ವ್ಯಾಪಾರಕ್ಕೆ ಸಂಬಂಧಿಸಿದ ಬಿಕ್ಕಟ್ಟು ಈಚಿನ ತಿಂಗಳುಗಳಲ್ಲಿ ತೀವ್ರಗೊಂಡಿದೆ. ಅಮೆರಿಕವು ಭಾರತದ ಸರಕುಗಳ ಮೇಲೆ ಒಟ್ಟು ಶೇ 50ರಷ್ಟು ಸುಂಕ ವಿಧಿಸಿದೆ.
- ‘ಇದು ಕಾಲಕ್ರಮೇಣ ಮಾತುಕತೆ ಮೂಲಕ ಕಡಿಮೆ ಮಟ್ಟಕ್ಕೆ ಬರಲಿದೆ ಎಂಬುದು ನಮ್ಮ ನಿರೀಕ್ಷೆ. ಆದರೆ ವ್ಯಾಪಾರ ಸಂಬಂಧದ ಸುತ್ತಲಿನ ಅನಿಶ್ಚಿತತೆಗಳು ಹೂಡಿಕೆಯ ಮೇಲೆ ಪರಿಣಾಮ ಬೀರಬಹುದು. ಜಿಎಸ್‌ಟಿ ವ್ಯವಸ್ಥೆಗೆ ಸರ್ಕಾರವು ಸುಧಾರಣೆ ತಂದಿದೆ. ಇದು ಗ್ರಾಹಕರು ಈ ವರ್ಷದಲ್ಲಿ ಹಾಗೂ ಮುಂದಿನ ಹಣಕಾಸು ವರ್ಷಗಳಲ್ಲಿ ಹೆಚ್ಚು ವೆಚ್ಚ ಮಾಡುವಂತೆ ಉತ್ತೇಜನ ನೀಡಲಿದೆ’ ಎಂದು ಫಿಚ್ ಹೇಳಿದೆ.
- ಎಸ್ಎಸ್ಎಲ್ವಿ ತಂತ್ರಜ್ಞಾನ: ಇಸ್ರೊ– ಎಚ್‌ಎಎಲ್ ಒಪ್ಪಂದ
ಸಂದರ್ಭ: ‘ಸಣ್ಣ ಉಪಗ್ರಹ ಉಡ್ಡಯನ ವಾಹನ’ಗಳ (ಎಸ್‌ಎಸ್‌ಎಲ್‌ವಿ) ಉತ್ಪಾದನಾ ತಂತ್ರಜ್ಞಾನ ವರ್ಗಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜತೆ ಒಡಂಬಡಿಕೆ ಮಾಡಿಕೊಂಡಿದೆ.
- ಇದು ಬಾಹ್ಯಾಕಾಶ ವಲಯದಲ್ಲಿ ಉದ್ಯಮ ಸಹಭಾಗಿತ್ವದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಲಾಗಿದೆ.
- ತಂತ್ರಜ್ಞಾನ ವರ್ಗಾವಣೆ ಕುರಿತ 100ನೇ ಒಪ್ಪಂದಕ್ಕೆ ‘ಇಸ್ರೊ’, ‘ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್’ (ಎನ್‌ಎಸ್‌ಐಎಲ್), ‘ಇನ್‌ಸ್ಪೇಸ್’ ಹಾಗೂ ‘ಎಚ್‌ಎಎಲ್’ ಸಹಿ ಮಾಡಿವೆ.
- ಈ ಕುರಿತ ಒಪ್ಪಂದಕ್ಕೆ ಸಹಿ ಮಾಡಿದ ದಿನದಿಂದ 24 ತಿಂಗಳುಗಳ ಒಳಗೆ ತಂತ್ರಜ್ಞಾನ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ‘ಇನ್‌ಸ್ಪೇಸ್’ ಕೇಂದ್ರ ತಿಳಿಸಿದೆ.
- ಈ ಅವಧಿಯಲ್ಲಿ ಎಸ್‌ಎಸ್‌ಎಲ್‌ವಿಗಳಿಗೆ ಸಂಬಂಧಿಸಿದ ತಾಂತ್ರಿಕ ಜ್ಞಾನ ಮತ್ತು ತರಬೇತಿಯನ್ನು ‘ಇಸ್ರೊ’ ಸಂಸ್ಥೆಯು ಎಚ್‌ಎಎಲ್‌ಗೆ ವರ್ಗಾಯಿಸಲಿದೆ ಎಂದು ಅದು ಹೇಳಿದೆ.
- ‘ವಾಣಿಜ್ಯ ಉದ್ದೇಶಕ್ಕೆ ಬಾಹ್ಯಾಕಾಶ ವಲಯವನ್ನು ಭಾರತವು ಉದಾರೀಕರಿಸಿರುವುದರಿಂದ ಅವಕಾಶಗಳು ವೃದ್ಧಿಸುತ್ತಿವೆ. ಇದಕ್ಕೆ ಪೂರಕವಾಗಿ ಕ್ರಿಯಾತ್ಮಕ ತಂತ್ರಜ್ಞಾನ ವರ್ಗಾವಣೆ ಕಾರ್ಯವಿಧಾನವನ್ನು ಇಸ್ರೊ ಹೊಂದಿದೆ’ ಎಂದು ‘ಇಸ್ರೊ’ ಅಧ್ಯಕ್ಷ ವಿ.ನಾರಾಯಣನ್ ಪ್ರತಿಕ್ರಿಯಿಸಿದ್ದಾರೆ.
- ಎಸ್‌ಎಸ್‌ಎಲ್‌ವಿ ತಂತಜ್ಞಾನ ವರ್ಗಾವಣೆಗೆ ಇಸ್ರೊ, ಎಚ್‌ಎಎಲ್, ಎನ್‌ಎಸ್‌ಐಎಲ್ ಮತ್ತು ಇನ್‌ಸ್ಪೇಸ್ ಒಂದಾಗಿರುವುದು ಈ ಕ್ಷೇತ್ರದಲ್ಲಿ ಮಹತ್ವದ ಮುನ್ನಡೆಯನ್ನು ಸೂಚಿಸುತ್ತದೆ. ಇದು ಬಾಹ್ಯಾಕಾಶ ಉದ್ಯಮವನ್ನು ಸಬಲೀಕರಿಸಲು, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಉಡಾವಣಾ ಸೇವೆಗಳಿಗಾಗಿ ಭಾರತವನ್ನು ಜಾಗತಿಕ ಕೇಂದ್ರವಾಗಿ ಸ್ಥಾಪಿಸಬಯಸಿರುವ ಭಾರತ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ‘ಇನ್‌ಸ್ಪೇಸ್’ನ ಅಧ್ಯಕ್ಷ ಪವನ್ ಕುಮಾರ್ ಗೋಯೆಂಕಾ ಹೇಳಿದ್ದಾರೆ.