- ಆಹಾರ ಸಂಸ್ಕರಣೆ ಉದ್ದಿಮೆಗಳಿಗೆ ಸಹಾಯಧನ ಬಿಡುಗಡೆ
ಸಂದರ್ಭ: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆಯಡಿ ಶೇ 35ರಷ್ಟು ಸಹಾಯಧನ ಅಂದರೆ ₹60.90 ಕೋಟಿ ಬಿಡುಗಡೆ ಮಾಡಲಾಗಿದೆ.
- ಸೆ.28ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ವರ್ಲ್ಡ್ ಫುಡ್ ಇಂಡಿಯಾ 2025 ವ್ಯಾಪಾರ ಮೇಳದ ಭಾಗವಾಗಿ ಸಹಾಯಧನವನ್ನು 1,642 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.
- ಇದರಲ್ಲಿ ಕೇಂದ್ರದ ಪಾಲು ₹ 36.54 ಕೋಟಿ ಹಾಗೂ ರಾಜ್ಯದ ಪಾಲು ₹ 24.36 ಕೋಟಿ ಆಗಿರಲಿದೆ. ಹಾಗೆಯೇ ರಾಜ್ಯ ಸರ್ಕಾರದಿಂದ ₹ 27.17 ಕೋಟಿ ಹೆಚ್ಚುವರಿ ಟಾಪ್-ಅಪ್ ಅನುದಾನವನ್ನು ಫಲಾನುಭವಿಗಳಿಗೆ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ(ಕೆಪೆಕ್) ಅಧ್ಯಕ್ಷ ಬಿ.ಎಚ್. ಹರೀಶ್ ತಿಳಿಸಿದ್ದಾರೆ.
- ಈ ಅನುದಾನ ಆಹಾರ ಸಂಸ್ಕರಣಾ ಕ್ಷೇತ್ರ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.
- ನಾಪತ್ತೆ ಪ್ರಕರಣ: ಆಧಾರ್ ಮಾಹಿತಿ ಒದಗಿಸಲು ನಿರ್ದೇಶನ
ಸಂದರ್ಭ: ‘ನನ್ನ ಮಗ ನಾಪತ್ತೆ ಆಗಿದ್ದು ಆತ ಆಧಾರ್ ಬಳಕೆ ಮಾಡಿದ್ದ ಸ್ಥಳದ ವಿವರಗಳನ್ನು ಒದಗಿಸಲು ನಿರ್ದೇಶಿಸಬೇಕು’ ಎಂಬ ತಂದೆಯೊಬ್ಬರ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಮಾಹಿತಿ ಒದಗಿಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ (ಯುಐಎಡಿಐ) ನಿರ್ದೇಶಿಸಿದೆ.
- ಈ ಸಂಬಂಧ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ (ಧಾರವಾಡ) ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
- ‘ತನಿಖೆಯ ವೇಳೆ ಪೊಲೀಸರಾಗಲಿ ಅಥವಾ ಇತರೆ ಯಾವುದೇ ಸಂಸ್ಥೆಯಾ ಗಲಿ ದೃಢೀಕರಣ ಸೇರಿದಂತೆ ಆಧಾರ್ ಅನ್ನು ಬಳಕೆ ಮಾಡಬೇಕಾಗಿ ಬಂದರೆ ಅಂತಹ ಸಂದರ್ಭಗಳಲ್ಲಿ ಆಧಾರ್ ಕಾಯ್ದೆ-2016ರ ಕಲಂ 33ರ ಅನ್ವಯ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಬೇಕು.
- ಹೈಕೋರ್ಟ್ ಯುಐಡಿಎಐಗೆ ಆಧಾರ್ ವಿವರಗಳನ್ನು ಬಳಸಿಕೊಳ್ಳಲು ಮತ್ತು ಅದನ್ನು ಕೊನೆಯದಾಗಿ ಯಾವ ಸ್ಥಳದಲ್ಲಿ ಬಳಕೆ ಮಾಡಲಾಗಿದೆ ಎಂಬ ವಿವರ ಒದಗಿಸಲು ಸೂಕ್ತ ಆದೇಶಗಳನ್ನು ಹೊರಡಿಸಲು ಸಮಯ ಮತ್ತು ಅವಕಾಶ ನೀಡುವ ಮೂಲಕ ಆದೇಶಗಳನ್ನು ನೀಡಲಿದೆ’ ಎಂದು ನ್ಯಾಯಪೀಠ ತಿಳಿಸಿದೆ.
- ‘ಆಧಾರ್ ಕಾಯ್ದೆಯ ಕಲಂ 29ರ ಅಡಿಯಲ್ಲಿ ಮಾಹಿತಿ ನೀಡಲು ನಿರ್ಬಂಧವಿದೆ. ಆದರೆ, ಆ ನಿರ್ಬಂಧ ಮೂಲ ಬಯೋಮೆಟ್ರಿಕ್ ಮಾಹಿತಿಗಷ್ಟೇ ಸೀಮಿತವಾಗಿದೆ. ಆದರೆ, ಯಾರಾದರೂ ನಿರ್ದಿಷ್ಟವಾಗಿ ಅರ್ಜಿ ಸಲ್ಲಿಸಿದಾಗ ಆಧಾರ್ ಸಂಖ್ಯೆ, ಬಯೋಮೆಟ್ರಿಕ್ ಮಾಹಿತಿ ಮತ್ತು ಡೆಮೋಗ್ರಾಫಿಕ್ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ತನಿಖೆಯ ಉದ್ದೇಶಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಯುಐಡಿಎಐಗೆ ನ್ಯಾಯಾಲಯಗಳು ಸೂಕ್ತ ನಿರ್ದೇಶನ ನೀಡಬಹುದಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.
- ‘ನನ್ನ ಮಗ 2019ರಿಂದ ಕಾಣೆ ಆಗಿದ್ದಾನೆ. ಈವರೆಗೂ ಪತ್ತೆಯಾಗಿಲ್ಲ. ಆದರೆ, 2023ರ ಜೂನ್ 20ರಂದು ಆತನ ಆಧಾರ್ ಬಳಕೆ ದೃಢೀಕರಣವಾಗಿರುವ ಮಾಹಿತಿ ಇದೆ. ಹಾಗಾಗಿ, ಆ ವಿವರ ಒದಗಿಸಲು ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.
- ಬ್ಯಾಡ್ಮಿಂಟನ್: ಭಾರತಕ್ಕೆ 4 ಪದಕ
ಸಂದರ್ಭ: ಭಾರತ ತಂಡದ ಸ್ಪರ್ಧಿಗಳು, ಕ್ವಾಲಾಲಂಪುರದಲ್ಲಿ ಸೆ. 16 ರಿಂದ 20ರವರೆಗೆ ನಡೆದ ವಿಶೇಷ ಒಲಿಂಪಿಕ್ಸ್ ಏಷ್ಯಾ ಪೆಸಿಫಿಕ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಂದು ಚಿನ್ನ, ಮೂರು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.
- ಚಾನ್ವಿ ಶರ್ಮಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದರು. ನಂತರ ಸುಜಿತಾ ಸುಕುಮಾರನ್ ಜೊತೆಗೂಡಿ ಡಬಲ್ಸ್‌ನಲ್ಲಿ ಬೆಳ್ಳಿ ಜಯಿಸಿದರು ಎಂದು ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಪ್ರಕಟಣೆ ತಿಳಿಸಿದೆ.
- ಅಂಕಿತ್ ದಲಾಲ್ ಪುರುಷರ ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿದರಲ್ಲದೇ, ನಂತರ ಡಬಲ್ಸ್‌ನಲ್ಲಿ ಅಮಲ್ ಬಿಜು ಜೊತೆಗೂಡಿ ಇನ್ನೊಂದು ಬೆಳ್ಳಿ ಪದಕವನ್ನೂ ಗೆದ್ದರು.
- ಜೂನಿಯರ್ ಶೂಟಿಂಗ್: ಜೊನಾಥನ್ಗೆ ಸ್ವರ್ಣ
ಸಂದರ್ಭ: ಭಾರತದ ಉದಯೋನ್ಮುಖ ಶೂಟರ್ ಜೊನಾಥನ್ ಗ್ಯಾವಿನ್ ಆ್ಯಂಟನಿ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಟೂರ್ನಿಯ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಗುರಿ ಇಟ್ಟರು.
- ಟೂರ್ನಿಯ ಎರಡನೇ ದಿನವಾದ ಶುಕ್ರವಾರ ನಡೆದ ಫೈನಲ್ ಸುತ್ತಿನಲ್ಲಿ ಜೊನಾಥನ್ ಅವರು 244.8 ಪಾಯಿಂಟ್ಸ್ ಸಂಪಾದಿಸಿದರು. ಇಟಲಿಯ ಲ್ಯೂಕಾ ಅರಿಘಿ (236.3) ಹಾಗೂ ಸ್ಪೇನ್‌ನ ಲ್ಯೂಕಾಸ‌್ ಸ್ಯಾಂಚೆಝ್ ಟೋಮ್ (215.1) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು.
- ಕ್ವಾಲಿಫಿಕೇಶನ್ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ಭಾರತದ ಚಿರಾಗ್ ಶರ್ಮಾ ಅವರು, ಫೈನಲ್ ಹಣಾಹಣಿಯಲ್ಲಿ ನೀರಸ ಪ್ರದರ್ಶನದೊಂದಿಗೆ (115.6) ಎಂಟನೇ ಹಾಗೂ ಕೊನೆಯ ಸ್ಥಾನ ಪಡೆದರು.
- ರಜತ ಗೆದ್ದ ರಶ್ಮಿಕಾ: ಜೂನಿಯರ್ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ರಶ್ಮಿಕಾ ಸೆಹಗಲ್ ಅವರು 236.1 ಪಾಯಿಂಟ್ಸ್‌ಗಳೊಡನೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಸ್ವತಂತ್ರ ತಟಸ್ಥ ಸ್ಪರ್ಧಿ (ಎಎನ್‌ಎ) ಎವಿಲಿನಾ ಶೀನಾ (240.9) ಸ್ವರ್ಣ ಗೆದ್ದರೆ, ಇರಾನ್‌ನ ಫಾತಿಮಾ ಶೆಕರಿ (213.8) ಕಂಚಿನ ಪದಕ ತಮ್ಮದಾಗಿಸಿಕೊಂಡರು.
- ಆದರೆ, ಕ್ವಾಲಿಫಿಕೇಶನ್ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದ ವಂಶಿಕಾ ಚೌಧರಿ ಹಾಗೂ ಮೋಹಿನಿ ಸಿಂಗ್ ಅವರು ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ವಂಶಿಕಾ (174.2) ಅವರು 5ನೇ ಸ್ಥಾನ ಪಡೆದರೆ, ಮೋಹಿನಿ (153.2) ಅವರು 6ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.