- ಮೂರು ಪಾಲಿಕೆಯಲ್ಲಿ ಆರ್.ಆರ್. ನಗರ
ಸಂದರ್ಭ: ಎರಡು ನಗರ ಪಾಲಿಕೆಗಳಲ್ಲಿ ದಾಸರಹಳ್ಳಿ, ಮಹದೇವಪುರ, ಯಶವಂತಪುರ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ವಾರ್ಡ್‌ಗಳು.
- ಒಂದು ವಿಧಾನಸಭೆ ಕ್ಷೇತ್ರದ ಪ್ರದೇಶಗಳು ಒಂದೇ ನಗರ ಪಾಲಿಕೆಯಲ್ಲಿ ಇರಬೇಕೆಂಬ ನಿಯಮಗಳಿದ್ದರೂ, ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಪ್ರದೇಶಗಳು ಎರಡಕ್ಕಿಂತ ಹೆಚ್ಚು ನಗರ ಪಾಲಿಕೆಗಳಲ್ಲಿ ಹಂಚಿಕೆಯಾಗಿವೆ.

- ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 (ಜಿಬಿಜಿಎ) ಅಧ್ಯಾಯ 4ರ ನಗರ ಪಾಲಿಕೆ ರಚನೆಯ ಉಪ ಪ್ರಕರಣ 3ರ ಪ್ರಕಾರ, ‘ಒಂದು ವಿಧಾನಸಭೆ ಕ್ಷೇತ್ರವನ್ನು ಎರಡು ಅಥವಾ ಹೆಚ್ಚಿನ ನಗರ ಪಾಲಿಕೆಗಳಿಗೆ ವಿಭಜಿಸತಕ್ಕದ್ದಲ್ಲ’. ಆದರೆ, ನಗರ ಪಾಲಿಕೆಗಳ ವಾರ್ಡ್ ಪುನರ್ ವಿಂಗಡಣೆಯ ಕರಡು ಅಧಿಸೂಚನೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಒಟ್ಟು 19 ವಾರ್ಡ್‌ಗಳು ಮೂರು ನಗರ ಪಾಲಿಕೆಗಳಿಗೆ ಹಂಚಿಕೆಯಾಗಿವೆ.
- ಪಶ್ಚಿಮ ನಗರ ಪಾಲಿಕೆಯಲ್ಲಿ 13 ವಾರ್ಡ್‌ಗಳಿದ್ದರೆ, ಉತ್ತರ ನಗರ ಪಾಲಿಕೆಯಲ್ಲಿ ಐದು ವಾರ್ಡ್ ಹಾಗೂ ದಕ್ಷಿಣ ನಗರ ಪಾಲಿಕೆಯಲ್ಲಿ ಒಂದು ವಾರ್ಡ್ ಇದೆ.
- ಯಶವಂತಪುರ ವಿಧಾನಸಭೆ ಕ್ಷೇತ್ರದ 12 ವಾರ್ಡ್‌ಗಳಲ್ಲಿ ಒಂದು ವಾರ್ಡ್ ದಕ್ಷಿಣ ನಗರ ಪಾಲಿಕೆಯಲ್ಲಿದ್ದರೆ, ಉಳಿದ 11 ವಾರ್ಡ್‌ಗಳು ಪಶ್ಚಿಮ ನಗರ ಪಾಲಿಕೆಯಲ್ಲಿವೆ. ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ 18 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳು ಉತ್ತರ ನಗರ ಪಾಲಿಕೆಯಲ್ಲಿದ್ದರೆ, ಪಶ್ಚಿಮ ನಗರ ಪಾಲಿಕೆಯಲ್ಲಿ 10 ವಾರ್ಡ್‌ಗಳಿವೆ. ಪದ್ಮನಾಭಗರ ವಿಧಾನಸಭೆ ಕ್ಷೇತ್ರದ 14 ವಾರ್ಡ್‌ಗಳಲ್ಲಿ ದಕ್ಷಿಣ ನಗರ ಪಾಲಿಕೆಯಲ್ಲಿ 6 ವಾರ್ಡ್ ಹಾಗೂ ಪಶ್ಚಿಮ ನಗರ ಪಾಲಿಕೆಯಲ್ಲಿ 8 ವಾರ್ಡ್‌ಗಳು ಹಂಚಿಕೆಯಾಗಿವೆ. ಮಹದೇವಪುರ ವಿಧಾನಸಭೆ ಕ್ಷೇತ್ರದ 24 ವಾರ್ಡ್‌ಗಳಲ್ಲಿ ಒಂದು ವಾರ್ಡ್ ಮಾತ್ರ ದಕ್ಷಿಣ ನಗರ ಪಾಲಿಕೆಯಲ್ಲಿದ್ದು, ಉಳಿದ 23 ವಾರ್ಡ್‌ಗಳು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿವೆ.
- 25 ಸಾವಿರ ಜನಸಂಖ್ಯೆ: ಐದೂ ನಗರ ಪಾಲಿಕೆಗಳ ವಾರ್ಡ್ ಜನಸಂಖ್ಯೆಯನ್ನು ಸರಾಸರಿ 25 ಸಾವಿರ ಇರುವಂತೆ ಪುನರ್ ವಿಂಗಡಣೆ ಮಾಡಲಾಗಿದೆ. ಒಟ್ಟು 368 ವಾರ್ಡ್‌ಗಳಲ್ಲಿ ಪ್ರತಿಯೊಂದು ವಾರ್ಡ್‌ನ ಜನಸಂಖ್ಯೆ 20 ಸಾವಿರದಿಂದ 27 ಸಾವಿರ ಇದೆ.
ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್
- ಜಿಬಿಎ ವ್ಯಾಪ್ತಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಕೆ.ಆರ್. ಪುರದಲ್ಲಿ ಅತಿಹೆಚ್ಚು ವಾರ್ಡ್‌ಗಳಿದ್ದು, ಆನೇಕಲ್ ವಿಧಾನಸಭೆ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದಂತೆ ಒಂದು ವಾರ್ಡ್ ಮಾತ್ರ ಇದೆ.
- ಕೆ.ಆರ್. ಪುರದಲ್ಲಿ 27 ವಾರ್ಡ್‌ಗಳಿದ್ದು, ಮಹದೇವಪುರದಲ್ಲಿ 24 ವಾರ್ಡ್‌ಗಳಿವೆ. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 20 ವಾರ್ಡ್‌ಗಳಿದ್ದರೆ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರದಲ್ಲಿ ತಲಾ 19 ವಾರ್ಡ್‌ಗಳಿವೆ. ದಾಸರಹಳ್ಳಿ (18 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಪದ್ಮನಾಭನಗರ (14 ವಾರ್ಡ್), ಬ್ಯಾಟರಾಯನಪುರ (14 ವಾರ್ಡ್) ಮತ್ತು ವಿಜಯನಗರ, ಬಿಟಿಎಂ ಲೇಔಟ್, ಸಿ.ವಿ. ರಾಮನ್ ನಗರ, ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರಗಳಲ್ಲಿ ತಲಾ 13 ವಾರ್ಡ್‌ಗಳಿವೆ.
ಯಾವ ಪಾಲಿಕೆಯಲ್ಲಿದೆ ಯಾವ ವಿಧಾನಸಭೆ ಕ್ಷೇತ್ರ?
- ಬೆಂಗಳೂರು ಕೇಂದ್ರ ನಗರ ಪಾಲಿಕೆ– ಒಟ್ಟು 63 ವಾರ್ಡ್: ಚಾಮರಾಜಪೇಟೆ (10 ವಾರ್ಡ್), ಚಿಕ್ಕಪೇಟೆ (12 ವಾರ್ಡ್), ಸಿ.ವಿ. ರಾಮನ್ ನಗರ (13 ವಾರ್ಡ್), ಗಾಂಧಿನಗರ (10 ವಾರ್ಡ್), ಶಾಂತಿನಗರ (10 ವಾರ್ಡ್), ಶಿವಾಜಿನಗರ (8 ವಾರ್ಡ್).
- ಬೆಂಗಳೂರು ಉತ್ತರ ನಗರ ಪಾಲಿಕೆ– ಒಟ್ಟು 72 ವಾರ್ಡ್: ದಾಸರಹಳ್ಳಿ (8 ವಾರ್ಡ್), ಪುಲಕೇಶಿನಗರ (11 ವಾರ್ಡ್) ಬ್ಯಾಟರಾಯನಪುರ (14 ವಾರ್ಡ್), ಯಲಹಂಕ (7 ವಾರ್ಡ್), ರಾಜರಾಜೇಶ್ವರಿನಗರ (5 ವಾರ್ಡ್), ಸರ್ವಜ್ಞನಗರ (16 ವಾರ್ಡ್), ಹೆಬ್ಬಾಳ (11 ವಾರ್ಡ್).
- ಬೆಂಗಳೂರು ದಕ್ಷಿಣ ನಗರ ಪಾಲಿಕೆ– ಒಟ್ಟು 72 ವಾರ್ಡ್: ಆನೇಕಲ್ (1 ವಾರ್ಡ್), ಜಯನಗರ (10 ವಾರ್ಡ್), ಪದ್ಮನಾಭನಗರ (6 ವಾರ್ಡ್), ಬಿಟಿಎಂ ಲೇಔಟ್ (13 ವಾರ್ಡ್), ಬೆಂಗಳೂರು ದಕ್ಷಿಣ (19 ವಾರ್ಡ್), ಬೊಮ್ಮನಹಳ್ಳಿ (20 ವಾರ್ಡ್), ಮಹದೇವಪುರ (1 ವಾರ್ಡ್), ಯಶವಂತಪುರ (1 ವಾರ್ಡ್), ರಾಜರಾಜೇಶ್ವರಿ ನಗರ (1 ವಾರ್ಡ್).
- ಬೆಂಗಳೂರು ಪೂರ್ವ ನಗರ ಪಾಲಿಕೆ– ಒಟ್ಟು 50 ವಾರ್ಡ್: ಕೆ.ಆರ್. ಪುರ (27 ವಾರ್ಡ್), ಮಹದೇವಪುರ (23 ವಾರ್ಡ್)
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ– ಒಟ್ಟು 111 ವಾರ್ಡ್: ಗೋವಿಂದರಾಜ ನಗರ (13 ವಾರ್ಡ್), ದಾಸರಹಳ್ಳಿ (10 ವಾರ್ಡ್), ಪದ್ಮನಾಭನಗರ (8 ವಾರ್ಡ್), ಬಸವನಗುಡಿ (10 ವಾರ್ಡ್), ಮಲ್ಲೇಶ್ವರ (10 ವಾರ್ಡ್), ಮಹಾಲಕ್ಷ್ಮಿ ಲೇಔಟ್ (12 ವಾರ್ಡ್), ಯಶವಂತಪುರ (11 ವಾರ್ಡ್), ರಾಜರಾಜೇಶ್ವರಿ ನಗರ (13 ವಾರ್ಡ್), ರಾಜಾಜಿನಗರ (11 ವಾರ್ಡ್), ವಿಜಯನಗರ (13 ವಾರ್ಡ್).
- ಗುಹಾಗೆ ಗಾಂಧಿ ಸೇವಾ ಪ್ರಶಸ್ತಿ
ಸಂದರ್ಭ: ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ– ಕರ್ನಾಟಕ’ಕ್ಕೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.
- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರತಿ ವರ್ಷ ನೀಡಲಾಗುವ ಈ ಪ್ರಶಸ್ತಿಯನ್ನು, ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ₹5 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.
- ಗಾಂಧೀಜಿಯವರ ತತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಗುಹಾ ಆವರು ಮಹತ್ವದ ಪಾತ್ರವಹಿಸಿದ್ದಾರೆ. ಆದ್ದರಿಂದ ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.
- ಗುಹಾ ಅವರು ಗಾಂಧಿ ಚಿಂತನೆಗಳು, ಭಾರತದ ಸಮಕಾಲೀನ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಮತ್ತು ಕ್ರಿಕೆಟ್ ಕುರಿತ ತಮ್ಮ ಅಧ್ಯಯನ ಮತ್ತು ಗ್ರಂಥ ರಚನೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
- ಜನ ವಿಶ್ವಾಸ ಮಸೂದೆ: ಆಯ್ಕೆ ಸಮಿತಿಗೆ ತೇಜಸ್ವಿ ಮುಖ್ಯಸ್ಥ
ಸಂದರ್ಭ: ‘ಜನ ವಿಶ್ವಾಸ ಮಸೂದೆ 2025’ ಅನ್ನು ಪರಿ ಶೀಲಿಸಲು ಹೊಸದಾಗಿ ರಚಿಸಿರುವ ಆಯ್ಕೆ ಸಮಿತಿಯ ಮುಖ್ಯಸ್ಥ ರನ್ನಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಲಾಗಿದೆ.
- 24 ಸಂಸದೀಯ ಸ್ಥಾಯಿ ಸಮಿತಿಗಳನ್ನು ಪುನರ್‌ರಚಿಸಲಾಗಿದ್ದು, ಜನ ವಿಶ್ವಾಸ ಮಸೂದೆ ಹಾಗೂ ಆದಾಯ ತೆರಿಗೆ ಮಸೂದೆಗಳಿಗೆ ಹೊಸದಾಗಿ ಆಯ್ಕೆ ಸಮಿತಿಗಳನ್ನು ರಚಿಸಲಾಗಿದೆ.
- 30 ದಿನಗಳವರೆಗೆ ನಿರಂತರವಾಗಿ ಜೈಲಿನಲ್ಲಿರುವ ಪ್ರಧಾನಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸುವ ಕೇಂದ್ರ ಸರ್ಕಾರದ ಮಸೂದೆಯ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸುವ ಬಗ್ಗೆ ಗೊಂದಲ ಮುಂದುವರಿದಿದೆ.
- ‘ಯುಪಿಐ ವಹಿವಾಟು: ಶುಲ್ಕ ಪ್ರಸ್ತಾವ ಇಲ್ಲ’
ಸಂದರ್ಭ: ಯುಪಿಐ ಆಧಾರಿತ ಪಾವತಿಗಳಿಗೆ ಯಾವುದೇ ಬಗೆಯ ಶುಲ್ಕ ವಿಧಿಸುವ ಪ್ರಸ್ತಾವ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
- ಕ್ರೆಡಿಟ್ ಕಾರ್ಡ್ ಬಳಸಿ ಮೊಬೈಲ್ ಫೋನ್ ಖರೀದಿ ಮಾಡಿದವರು ಇಎಂಐ ಪಾವತಿಯಲ್ಲಿ ವಿಫಲರಾದರೆ, ಅವರ ಮೊಬೈಲ್ ಫೋನ್‌ಅನ್ನು ದೂರದಿಂದಲೇ ಲಾಕ್ ಮಾಡುವ ವ್ಯವಸ್ಥೆಯನ್ನು ಚಾಲ್ತಿಗೆ ತರಬೇಕು ಎಂಬ ಪ್ರಸ್ತಾವನೆಯು ಸಾಲ ನೀಡುವ ಕಂಪನಿಗಳಿಂದ ಬಂದಿದೆ. ಇದನ್ನು ಆರ್‌ಬಿಐ ಪರಿಶೀಲಿಸುತ್ತಿದೆ ಎಂದು ಗವರ್ನರ್ ಹೇಳಿದ್ದಾರೆ.
- ಯುಪಿಐ ಬಳಸಿ ಮಾಡುವ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಪ್ರಸ್ತಾವ ಇದೆಯೇ ಎಂಬ ಪ್ರಶ್ನೆಯನ್ನು ಗವರ್ನರ್ ಎದುರು, ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ನಂತರ ಇರಿಸಲಾಗಿತ್ತು.
- ಮೊಬೈಲ್ ಫೋನ್‌ಗಳನ್ನು ದೂರದಿಂದಲೇ ಲಾಕ್ ಮಾಡುವ ಸೌಲಭ್ಯಕ್ಕೆ ಅನುಮತಿ ನೀಡುವುದರ ಒಳಿತು, ಕೆಡುಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ತಿಳಿಸಿದ್ದಾರೆ.
- ‘ಇಲ್ಲಿ ಗ್ರಾಹಕರ ಹಕ್ಕುಗಳು, ಅವರ ಅಗತ್ಯಗಳು, ದತ್ತಾಂಶದ ಸುರಕ್ಷತೆ, ಸಾಲದಾತ ಕಂಪನಿಗಳ ಅಗತ್ಯಗಳು ಇವುಗಳೆಲ್ಲ ವನ್ನು ಪರಿಶೀಲಿಸಿದಾಗ ಒಳಿತು, ಕೆಡುಕುಗಳು ಇರುವುದು ಗೊತ್ತಾಗುತ್ತದೆ. ಹೀಗಾಗಿ ನಾವು ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದೇವೆ. ಮುಂದೆ ನಾವು ಇದರ ಬಗ್ಗೆ ನಿಲುವು ತೆಗೆದುಕೊಳ್ಳುತ್ತೇವೆ’ ಎಂದು ರಾವ್ ಹೇಳಿದ್ದಾರೆ.
- ರೆಪೊ ದರವನ್ನು ಮುಂದಿನ ದಿನಗಳಲ್ಲಿ ತಗ್ಗಿಸುವ ಸಾಧ್ಯತೆ ಕುರಿತಾದ ಪ್ರಶ್ನೆಗೆ ಗವರ್ನರ್ ಮಲ್ಹೋತ್ರಾ ಅವರು, ಹಣ ದುಬ್ಬರ ಪ್ರಮಾಣವು ಗಣನೀಯವಾಗಿ ಕಡಿಮೆ ಆಗಿರುವ ಕಾರಣ ಮುಂದೆ ಹಣ ಕಾಸಿನ ನಿಲುವನ್ನು ಇನ್ನಷ್ಟು ಸಡಿಲಗೊಳಿಸಲು ಅವಕಾಶ ಇದೆ ಎಂದು ಉತ್ತರಿಸಿದ್ದಾರೆ.
ಬೆಳವಣಿಗೆ ಅಂದಾಜು ಪರಿಷ್ಕರಣೆ:
- ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 6.8ಕ್ಕೆ ಹೆಚ್ಚಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ. ಅಲ್ಲದೆ, ಇಡೀ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 2.6ಕ್ಕೆ ತಗ್ಗಬಹುದು ಎಂದು ಕೂಡ ಅದು ನಿರೀಕ್ಷಿಸಿದೆ.
- ತೆರಿಗೆ ಪಾಲು: ರಾಜ್ಯಕ್ಕೆ ₹3,705 ಕೋಟಿ
ಸಂದರ್ಭ: ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ ಹೆಚ್ಚುವರಿಯಾಗಿ ₹3,705 ಕೋಟಿ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಹೋಲಿಸಿದರೆ ಬಿಜೆಪಿ ಆಡಳಿತವಿರುವ ಉತ್ತರದ ರಾಜ್ಯಗಳಿಗೆ ಬಿಡುಗಡೆಯಾಗಿರುವ ಮೊತ್ತ ಹೆಚ್ಚು ಇದೆ.
- ಕೇಂದ್ರವು 28 ರಾಜ್ಯಗಳಿಗೆ ಒಟ್ಟು ₹1,01,603 ಕೋಟಿ ಬಿಡುಗಡೆ ಗೊಳಿಸಿದೆ. ಅಕ್ಟೋಬರ್ 10ರಂದು ಬಿಡುಗಡೆಯಾಗಲಿರುವ ಸಾಮಾನ್ಯ ಮಾಸಿಕ ಹಂಚಿಕೆಯ ಜೊತೆಗೆ ಹೆಚ್ಚುವರಿಯಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.


- 15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ.
- ‘ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಈ ಕಂತು ಬಿಡುಗಡೆ ಗೊಳಿಸಲಾಗಿದೆ’ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
- ‘ಜನನ –ಮರಣ ದತ್ತಾಂಶ ಜೋಡಿಸಿ’
ಸಂದರ್ಭ: ಜನನ ಮತ್ತು ಮರಣ ನೋಂದಣಿಯ ದತ್ತಾಂಶವನ್ನು ಮತದಾರರ ಪಟ್ಟಿಯೊಂದಿಗೆ ಜೋಡಣೆ ಮಾಡಿದರೆ, ಮೃತಪಟ್ಟ ವ್ಯಕ್ತಿಗಳ ಹೆಸರು ಪಟ್ಟಿಯಲ್ಲಿ ಉಳಿದುಕೊಳ್ಳುವುದನ್ನು ತಪ್ಪಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ.
- ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಹಲವು ವರ್ಷಗಳಿಂದ ಮತದಾರರ ಪಟ್ಟಿಯಲ್ಲಿ ಉಳಿದುಕೊಂಡಿದ್ದ ಮೃತಪಟ್ಟಿರುವ ವ್ಯಕ್ತಿಗಳ ಹೆಸರನ್ನು ತೆಗೆದುಹಾಕ ಲಾಯಿತು. ಎಸ್‌ಐಆರ್ ಜತೆಗೆ ಜನನ–ಮರಣ ನೋಂದಣಿ ದತ್ತಾಂಶವನ್ನು ಚುನಾವಣಾ ವ್ಯವಸ್ಥೆಗೆ ಜೋಡಿಸಿದರೆ ಈ ಲೋಪವನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಬಿಹಾರದ ಎಸ್‌ಐಆರ್ ಉಳಿದ ರಾಜ್ಯಗಳಿಗೂ ಮಾದರಿ ಆಗಲಿದೆ ಎಂದು ಆಯೋಗ ತಿಳಿಸಿದೆ.
- ಸೋಯಾ, ಶೇಂಗಾ ಖರೀದಿ ಕೇಂದ್ರ ಆರಂಭಿಸಲು ಸೂಚನೆ
ಸಂದರ್ಭ: ಬೆಂಬಲ ಬೆಲೆಯಲ್ಲಿ ಸೋಯಾಬಿನ್ ಮತ್ತು ಶೇಂಗಾ ಖರೀದಿ ಮಾಡಲು ಖರೀದಿ ಕೇಂದ್ರ ಆರಂಭಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಯನ್ನು ಏಕಕಾಲಕ್ಕೆ ಆರಂಭಿಸಬೇಕು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಸಮಿತಿಗಳಿಗೆ ಸೂಚಿಸಿದ್ದಾರೆ.
- ಸೋಯಾಬಿನ್ ಕ್ವಿಂಟಾಲ್‌ಗೆ ₹5,328 ಹಾಗೂ ಶೇಂಗಾಗೆ ₹7,623 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಬೀದರ್, ಬೆಳಗಾವಿ, ಧಾರವಾಡ, ಹಾವೇರಿ, ಯಾದಗಿರಿ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಯಾಬಿನ್, ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಗದಗ, ಬಾಗಲಕೋಟೆ, ದಾವಣಗೆರೆ, ರಾಯಚೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶೇಂಗಾ ಖರೀದಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
- ನಾಫೆಡ್, ಎನ್‌ಸಿಸಿಎಫ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಏಜೆನ್ಸಿಗಳನ್ನಾಗಿ ನೇಮಕ ಮಾಡಲಾಗಿದೆ. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಶಿವಾನಂದ ಪಾಟೀಲ ಹೇಳಿದ್ದಾರೆ.
- ಅಲ್ಲದೇ ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಖರೀದಿ ಕೇಂದ್ರಗಳಲ್ಲಿ ಲೋಪಗಳಾಗದಂತೆ ಎಚ್ಚರಿಕೆ ವಹಿಸಬೇಕು. ಮಾರ್ಗಸೂಚಿ ಅನ್ವಯ ಖರೀದಿ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ನಿರಂತರವಾಗಿ ನಿಗಾವಹಿಸಬೇಕು ಎಂದು ಅವರು ಸಂಬಂಧಪಟ್ಟ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
- ರೈಲು ಉಪಕರಣ: ಭಾರತ ಪ್ರಮುಖ ರಫ್ತುದಾರ
ಸಂದರ್ಭ:ರೈಲು ಬೋಗಿ, ಕೋಚ್‌ಗಳು, ಲೋಕೊಮೋಟಿವ್ಸ್ ಹಾಗೂ ಪ್ರೊಪಲ್ಷನ್ ಸಿಸ್ಟಮ್ ಸೇರಿದಂತೆ ಹಲವು ಉಪಕರಣಗಳ ಜಾಗತಿಕ ರಫ್ತುದಾರನಾಗಿ ಭಾರತವು ವೇಗವಾಗಿ ಹೊರಹೊಮ್ಮುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
- ‘ಭಾರತದ ರೈಲ್ವೆ ಉಪಕರಣಗಳು ಹೆಚ್ಚಾಗಿ ಜಾಗತಿಕ ಮಾರುಕಟ್ಟೆಯನ್ನು ತಲುಪುತ್ತಿವೆ. 16 ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಬಳಸುತ್ತಿವೆ. ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿ ಹಾಗೂ ಪೂರೈಕೆಯೆಡೆಗೆ ಭಾರತದ ಬದ್ಧತೆಯನ್ನು ತೋರಿಸುತ್ತದೆ’ ಎಂದು ಅದು ಹೇಳಿದೆ.
- ‘ಆಸ್ಟ್ರೇಲಿಯಾ, ಕೆನಡಾ, ರಷ್ಯಾ, ಸೌದಿ ಅರೇಬಿಯಾ, ಫ್ರಾನ್ಸ್, ಮೆಕ್ಸಿಕೊ, ರೊಮೇನಿಯಾ, ಸ್ಪೇನ್, ಜರ್ಮನಿ, ಇಟಲಿ, ಶ್ರೀಲಂಕಾ, ಮ್ಯಾನ್ಮಾರ್, ಬಾಂಗ್ಲಾದೇಶ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ರೈಲು ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿವೆ. ‘ಮೇಕ್ ಇನ್ ಇಂಡಿಯಾ’ ಹಾಗೂ ‘ಮೇಕ್ ಫಾರ್ ದಿ ವಲ್ರ್ಡ್’ ಉಪಕ್ರಮಗಳ ಅಡಿಯಲ್ಲಿ ರಫ್ತು ಮಾಡಲಾಗುತ್ತಿದೆ’ ಎಂದು ಇಲಾಖೆ ತಿಳಿಸಿದೆ.
- ಬಿಹಾರದ ಲೋಕೊಮೋಟಿವ್ ಉತ್ಪಾದನಾ ಘಟಕದಿಂದ ಜಿನೆವಾಗೆ ಮೊದಲ ಬಾರಿ ಜೂನ್‌ನಲ್ಲಿ ಲೋಕೊಮೋಟಿವ್ ರಫ್ತು ಮಾಡಲಾಯಿತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
- ದಾಖಲೆಯ 7 ಪದಕ ಗೆದ್ದ ಶ್ರೀಹರಿ
ಸಂದರ್ಭ: ಭಾರತದ ಈಜು ಪಟುಗಳು ಬುಧವಾರ ಮುಕ್ತಾಯ ಗೊಂಡ 11ನೇ ಏಷ್ಯನ್ ಈಜು ಚಾಂಪಿ ಯನ್‌ಷಿಪ್‌ನಲ್ಲಿ ಒಟ್ಟು 13 ಪದಕಗಳನ್ನು ಗೆಲ್ಲುವುದರೊಂದಿಗೆ ಯಶಸ್ವಿಯಾಗಿ ಅಭಿಯಾನ ಮುಗಿಸಿದರು. ಕರ್ನಾಟಕದ ಈಜುತಾರೆ ಶ್ರೀಹರಿ ನಟರಾಜ್ ಅವರು ದಾಖಲೆಯ ಏಳು ಪದಕ ಜಯಿಸಿದರು.
- 24 ವರ್ಷ ವಯಸ್ಸಿನ ಶ್ರೀಹರಿ ಅವರು 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಅದರೊಂದಿಗೆ ಕೂಟದ ಇತಿಹಾಸ ದಲ್ಲಿ ಹೆಚ್ಚು (7) ಪದಕ ಗೆದ್ದ ಭಾರತದ ಈಜುಪಟು ಎಂಬ ಗೌರವಕ್ಕೂ ಭಾಜನರಾದರು. ಅವರು 55.23 ಸೆಕೆಂಡುಗಳಲ್ಲಿ ಗುರಿ ತಲುಪಿದರು.
- ಚೀನಾದ ಗುಕೈಲೈ ವಾಂಗ್ (54.27 ಸೆ.) ಮತ್ತು ತೈವಾನ್‌ನ ಲು ಲುನ್ ಶುವಾಂಗ್ (54.45 ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು. ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಈಜುಪಟು ರಿಷಭ್ ದಾಸ್ ನಾಲ್ಕನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
- ಪುರುಷರ 4×100 ಮೀ. ಫ್ರೀಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಶ್ರೀಹರಿ, ಆಕಾಶ್ ಮಣಿ, ಥಾಮಸ್ ದೊರೈ ಹಾಗೂ ರೋಹಿತ್ ಬೆನೆಡಿಕ್ಟನ್ ಅವರನ್ನೊಳಗೊಂಡ ಭಾರತ ತಂಡವು (3ನಿ.21.49ಸೆ.) ಕಂಚು ಜಯಿಸಿತು. ಚೀನಾ (3ನಿ.20.24ಸೆ.) ಚಿನ್ನ ಗೆದ್ದರೆ, ಬೆಳ್ಳಿ ಪದಕವು ತೈವಾನ್ (3ನಿ.20.59ಸೆ.) ಪಾಲಾಯಿತು.
- ಮಹಿಳೆಯರ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಭವ್ಯಾ ಸಚದೇವ ಅವರು (4ನಿ. 26.89ಸೆ.) ಕಂಚಿನ ಪದಕ ಜಯಿಸಿದರು. ಇದು ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ. ಜಪಾನ್‌ನ ಹರುನೊ ತನಿಮೊಟೊ (4ನಿ.16.39ಸೆ.) ಚಿನ್ನ ಗೆದ್ದರೆ, ವಿಯೆಟ್ನಾಂನ ಖಾ ನಿ ಗುಯೆನ್ (4ನಿ. 25.50ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
- ಪುರುಷರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಜನ್ ಪ್ರಕಾಶ್ (1ನಿ.57.90ಸೆ.) ಅವರು ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಕೂಟದಲ್ಲಿ 4 ಬೆಳ್ಳಿ ಹಾಗೂ 9 ಕಂಚು ಗೆದ್ದ ಭಾರತ, ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆಯಿತು. 38 ಚಿನ್ನ ಸೇರಿ ಒಟ್ಟು 49 ಪದಕಗಳನ್ನು ಗೆದ್ದ ಚೀನಾ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.
- ಮುಕೇಶ್ಗೆ ಸ್ವರ್ಣ
ಸಂದರ್ಭ: ಉದಯೋನ್ಮುಖ ಶೂಟರ್ ಮುಕೇಶ್ ನೇಲವಲ್ಲಿ ಅವರು ಇಲ್ಲಿ ಮುಕ್ತಾಯಗೊಂಡ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಷಿಪ್‌ನಲ್ಲಿ ಪುರುಷರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ತೇಜಸ್ವನಿ ಸಿಂಗ್ ಅವರು ಬೆಳ್ಳಿ ಜಯಿಸಿದರು.
- ಜೂನಿಯರ್ ಪುರುಷರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಮುಕೇಶ್ ಅವರು 585 ಸ್ಕೋರ್‌ನೊಡನೆ ಅಗ್ರಸ್ಥಾನ ಪಡೆದರು. ವೈಯಕ್ತಿಕ ತಟಸ್ಥ ಅಥ್ಲೀಟ್ (ಎಐಎನ್) ಅಲೆಕ್ಸಾಂಡರ್ ಕೊವಲೆವ್ (577) ರಜತ ಗೆದ್ದರೆ, ಭಾರತದ ಮತ್ತೊಬ್ಬ ಸ್ಪರ್ಧಿ ಸಾಹಿಲ್ ಚೌಧರಿ (573) ಕಂಚಿನ ಪದಕ ತಮ್ಮದಾಗಿಸಿಕೊಂಡರು.
- ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ 19 ಪದಕ ಗಳನ್ನು (6 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು) ಗೆದ್ದ ಭಾರತ ತಂಡ ಪದಕ ಪಟ್ಟಿ ಯಲ್ಲಿ ಅಗ್ರಸ್ಥಾನ ಪಡೆಯಿತು. ಎಐಎನ್ ಸ್ಪರ್ಧಿಗಳು 10 ಪದಕಗಳೊಂದಿಗೆ (4 ಚಿನ್ನ, 2 ಬೆಳ್ಳಿ ಹಾಗೂ 4 ಕಂಚು) ಎರಡನೇ ಸ್ಥಾನ ಪಡೆದರು.