ಎಡಗೈಗೂ 6 ಬಲಗೈಗೂ 6
ಸಂದರ್ಭ:
ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಬಹುವರ್ಷಗಳ ಆಗ್ರಹಗಳಿಗೆ ಮನ್ನಣೆ ನೀಡಿರುವ ರಾಜ್ಯ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಜಾತಿವಾರು ವರ್ಗೀಕರಣವನ್ನು ತುಸು ಪರಿಷ್ಕರಿಸಿ ಜಾರಿ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ.
- 101 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ಅಂದರೆ ಎಡಗೈ, ಬಲಗೈ ಮತ್ತು ಸ್ಪಶ್ಯ ಎಂದು ವರ್ಗೀಕರಿಸಲು ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
- ಪರಿಶಿಷ್ಟ ಜಾತಿಯವರಿಗೆ ಶೇ 17ರಷ್ಟಿರುವ ಮೀಸಲಾತಿಯನ್ನು ಎಡಗೈ, ಬಲಗೈ ಸಂಬಂಧಿತ ಜಾತಿಗಳ ಗುಂಪಿಗೆ ತಲಾ ಶೇ 6, ಕೊರಚ, ಕೊರಮ, ಭೋವಿ, ಲಂಬಾಣಿ ಜಾತಿಗಳನ್ನು ಒಳಗೊಂಡ ಸ್ಪೃಶ್ಯ’ ಗುಂಪುಗಳಿಗೆ ಶೇ 5 ಮೀಸಲಾತಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.
- ಪರಿಶಿಷ್ಟ ಜಾತಿಯಲ್ಲಿ 101 ಮೂಲ ಜಾತಿಗಳನ್ನು ಆಯೋಗವು ಐದು ಗುಂಪುಗಳಾಗಿ ವರ್ಗೀಕರಿಸಿ, ಲಭ್ಯವಿರುವ ಶೇ 17 ಮೀಸಲಾತಿಯನ್ನು ಪ್ರವರ್ಗ ‘ಎ’ಗೆ ಶೇ 1 (ಒಟ್ಟು 59 ಜಾತಿಗಳು), ಪ್ರವರ್ಗ ‘ಬಿ’ಗೆ ಶೇ 6 (18 ಜಾತಿಗಳು), ಪ್ರವರ್ಗ ‘ಸಿ’ಗೆ ಶೇ 5 (17 ಜಾತಿಗಳು), ಪ್ರವರ್ಗ ‘ಡಿ’ಗೆ ಶೇ 4 (4 ಜಾತಿಗಳು), ಪ್ರವರ್ಗ ‘ಇ’ಗೆ ಶೇ 1ರಂತೆ (3 ಜಾತಿಗಳು) ಹಂಚಿಕೆ ಮಾಡಿತ್ತು.
- ಆಯೋಗದ ವರದಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಚಿವ ಸಂಪುಟ ಸಭೆಯಲ್ಲಿ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.
ನಾಗಮೋಹನದಾಸ್ ಆಯೋಗದ ಶಿಫಾರಸು
ಪ್ರವರ್ಗ | ಜಾತಿಗಳ ಸಂಖ್ಯೆ | ಒಟ್ಟು ಜನಸಂಖ್ಯೆ | ಶೇಕಡಾವಾರು ಜನಸಂಖ್ಯೆ | ಶಿಫಾರಸು ಮಾಡಿರುವ ಮೀಸಲಾತಿ (ಶೇ) |
ಪ್ರವರ್ಗ ‘ಎ | 59 | 5,22,099 | 4.97 | 1 |
ಪ್ರವರ್ಗ ‘ಬಿ | 18 | 36,69,246 | 34.91 | 6 |
ಪ್ರವರ್ಗ ‘ಸಿ | 17 | 30,08,633 | 28.63 | 5 |
ಪ್ರವರ್ಗ ‘ಡಿ | 04 | 28,34,939 | 26.97 | 4 |
ಪ್ರವರ್ಗ ‘ಇ | 03 | 74,954 | 4.52 | 1 |
ಒಟ್ಟು | 101 | 1,05,09,871 | 100 | 17 |
101 ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿರುವ ಜೊತೆಗೆ ಇತರ ಐದು ಶಿಫಾರಸು ಗಳನ್ನೂ ಮಾಡಿತ್ತು.
- 2024ರ ಅಕ್ಟೋಬರ್ 28ರಿಂದ ನೇಮಕಾತಿ ಆರಂಭವಾಗುವರೆಗೆ ವಯೋಮಿತಿ ಮೀರಿದವರಿಗೆ ವಯೋಮಿತಿ ಸಡಿಲಿಸಿ ಅವಕಾಶ ನೀಡಬೇಕು.
- ಒಂದು ಪ್ರವರ್ಗದಲ್ಲಿ ಭರ್ತಿಯಾಗದೆ ಉಳಿದ ಹುದ್ದೆಗಳನ್ನು ಕ್ಯಾರಿ ಫಾರ್ವಡ್ ನಿಯಮದಂತೆ ಭರ್ತಿ ಮಾಡಬೇಕು. ನಂತರವೂ ಸೂಕ್ತ ಅಭ್ಯರ್ಥಿ ಲಭ್ಯ ಇಲ್ಲದೇ ಇದ್ದರೆ, ಪರಿಶಿಷ್ಟ ಜಾತಿಯ ಮತ್ತೊಂದು ಪ್ರವರ್ಗಕ್ಕೆ ವರ್ಗಾವಣೆ ಮಾಡಬೇಕು.
- ಕೆಲವು ಜಾತಿಗಳ ಹೆಸರು ಅಪಹಾಸ್ಯಕ್ಕೆ ಈಡಾಗುತ್ತಿದೆ ಎಂಬ ಕಾರಣಕ್ಕೆ ಬದಲಿಸಿಕೊಳ್ಳಲು ಅಪೇಕ್ಷಿಸಿದರೆ ಅವಕಾಶ ಮಾಡಿಕೊಡ ಬೇಕು, ಮೂಲ ಜಾತಿ ಗೊತ್ತಿದ್ದರೂ ಜಾತಿ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣಕ್ಕೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಜಾತಿ ಪ್ರಮಾಣಪತ್ರ ಪಡೆದುಕೊಂಡವರಿಗೆ, ಅವರ ಜಾತಿಯ ಬಗ್ಗೆ ಅಧ್ಯಯನ ನಡೆಸಿ ಜಾತಿ ಪಟ್ಟಿಯಲ್ಲಿ ಸೇರಿಸಲು ಕ್ರಮ ತೆಗೆದು ಕೊಳ್ಳಬೇಕು, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂಬ ಹೆಸರಿನ ಜೊತೆಗೆ ತಮ್ಮ ಮೂಲಜಾತಿಯ ಹೆಸರು ತಿಳಿಸಿದ್ದಾರೆ. ಅವರಿಗೆ ಮೂಲಜಾತಿಯ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳ ಬೇಕೆಂದೂ ಸರ್ಕಾರಕ್ಕೆ ತನ್ನ ವರದಿಯಲ್ಲಿ ಆಯೋಗ ಶಿಫಾರಸು ಮಾಡಿತ್ತು.
ಪ್ರಧಾನಿ, ಸಿಎಂ ಪದಚ್ಯುತಿಗೆ ಅವಕಾಶ: ಸಂವಿಧಾನ ತಿದ್ದುಪಡಿಯ 3 ಮಸೂದೆಗಳ ಮಂಡನೆ ಇಂದು
ಸಂದರ್ಭ:
ಸತತವಾಗಿ 30 ದಿನ ಬಂಧನ ದಲ್ಲಿರುವ ಅಥವಾ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೊಳಗಾಗುವ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯಗಳ ಸಚಿವರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.
- ಮಸೂದೆಯ ಪ್ರಕಾರ, 30 ದಿನ ನಿರಂತರ ಬಂಧನದಲ್ಲಿ ಇದ್ದವರನ್ನು 31ನೇ ದಿನ ಪದಚ್ಯುತ ಗೊಳಿಸಲು ಅವಕಾಶ ಕಲ್ಪಿಸಲಾಗುತ್ತದೆ.
- ಆದರೆ, ಬಂಧನದಿಂದ ಬಿಡುಗಡೆ ಆದವರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರನ್ನಾಗಿ ನೇಮಿಸಲು ನಿರ್ಬಂಧ ಇರುವುದಿಲ್ಲ.
- ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ (ತಿದ್ದುಪಡಿ) ಮಸೂದೆ– 2025 ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
- ಈ ಮೂರೂ ಮಸೂದೆಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಒಪ್ಪಿಸುವ ಗೊತ್ತುವಳಿಯನ್ನೂ ಶಾ ಅವರು ಮಂಡಿಸಲಿದ್ದಾರೆ.
- ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಅಥವಾ ರಾಜ್ಯಗಳ ಸಚಿವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದಾಗ ಅಂಥವರನ್ನು ಹುದ್ದೆಗಳಿಂದ ಪದಚ್ಯುತ ಗೊಳಿಸುವ ಪ್ರಕ್ರಿಯೆಗೆ ಕಾನೂನು ಚೌಕಟ್ಟು ವಿಧಿಸಲು ಈ ಮಸೂದೆಗಳನ್ನು ರೂಪಿಸಲಾಗಿದೆ ಎಂದು ಕಾರಣಗಳು ಮತ್ತು ಉದ್ದೇಶಗಳಲ್ಲಿ ತಿಳಿಸಲಾಗಿದೆ.
ರಾಜ್ಯಪಾಲರಿಗೆ ಅಧಿಕಾರ
- ರಾಜ್ಯಗಳಲ್ಲಿ ರಾಜ್ಯಪಾಲರು ಪದಚ್ಯುತಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ. ದೆಹಲಿ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಯವರು ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರು ಸಕ್ಷಮ ಪ್ರಾಧಿಕಾರಿಗಳಾಗಿರುತ್ತಾರೆ ಎಂಬ ಉಲ್ಲೇಖ ಮಸೂದೆಯಲ್ಲಿದೆ.
- ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ತಮಿಳುನಾಡಿನ ಸಚಿವ ವಿ. ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ನ್ಯಾಯಾಂಗ ಬಂಧನದಲ್ಲಿದ್ದರೂ ಅವರು ಹುದ್ದೆಯಲ್ಲಿ ಮುಂದುವರಿದಿದ್ದರು. ಅಂತಹ ಪ್ರಕರಣಗಳಲ್ಲಿ ಪದಚ್ಯುತಗೊಳಿಸುವುದಕ್ಕಾಗಿಯೇ ಈ ತಿದ್ದುಪಡಿ ಪ್ರಸ್ತಾವಗಳನ್ನು ಮಂಡಿಸಲಾಗುತ್ತಿದೆ.
- ಇದಕ್ಕಾಗಿ ಸಂವಿಧಾನದ 75ನೇ ವಿಧಿಗೆ ಸೆಕ್ಷನ್ 5(ಎ) ಅನ್ನು ಸೇರ್ಪಡೆ ಮಾಡಲಾಗುತ್ತಿದೆ. ಅದರ ಪ್ರಕಾರ, ಹಾಲಿ ಜಾರಿಯಲ್ಲಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಪರಾಧಕ್ಕಾಗಿ ಸತತ 30 ದಿನಗಳಿಂದ ಬಂಧನ ದಲ್ಲಿರುವ ಅಥವಾ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಪ್ರಧಾನಿಯು 31ನೇ ದಿನದಂದು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬೇಕು. ಪ್ರಧಾನಿಯು, ಶಿಫಾರಸು ಮಾಡದಿದ್ದರೂ ಅಂಥ ಸಚಿವರು 31ನೇ ದಿನದಂದು ಅಧಿಕಾರ ಕಳೆದುಕೊಳ್ಳುತ್ತಾರೆ.
- ಅಂಥದ್ದೇ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಪ್ರಧಾನಿಯು 30 ದಿನಗಳಿಂದ ಬಂಧನದಲ್ಲಿದ್ದರೆ 31ನೇ ದಿನದಂದು ಅವರು ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅವರು ರಾಜೀನಾಮೆ ನೀಡದೇ ಇದ್ದಲ್ಲಿ, ಸ್ವಯಂಚಾಲಿತವಾಗಿ ಪದಚ್ಯುತರಾಗುತ್ತಾರೆ ಎಂಬ ಅಂಶ ಮಸೂದೆಯಲ್ಲಿದೆ. ಇದು ರಾಜ್ಯಗಳ ಮುಖ್ಯಮಂತ್ರಿ ಮತ್ತು ಸಚಿವರಿಗೂ ಅನ್ವಯವಾಗುತ್ತದೆ.
‘ಕಾವೇರಿ’ಯಲ್ಲಿ ನೀರು ನಾಯಿಗಳು
- ಇಲ್ಲಿನ ಕಾವೇರಿ ನದಿಯಲ್ಲಿ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಗೋಚರಿಸಿದವು.
- ಪಟ್ಟಣದ ವೆಲ್ಲೆಸ್ಲಿ ಸೇತುವೆಯ ಪೂರ್ವ ಭಾಗದಲ್ಲಿ ನೀರಿನಲ್ಲಿ ಈಜಾಡುತ್ತಿದ್ದ ನೀರು ನಾಯಿಗಳನ್ನು ಜನ ಕುತೂಹಲದಿಂದ ವೀಕ್ಷಿಸಿದರು.
ಮಸೂದೆಗಳಿಗೆ ಅಂಕಿತ: ರಾಷ್ಟ್ರಪತಿ ಪ್ರಶ್ನಿಸಿರುವುದರಲ್ಲಿ ತಪ್ಪೇನಿದೆ–‘ಸುಪ್ರೀಂ’
ಸಂದರ್ಭ:
ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ಪಷ್ಟನೆ ಕೇಳಿರುವುದರಲ್ಲಿ ತಪ್ಪೇನಿದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.
- ತಮಿಳುನಾಡು ಮತ್ತು ಕೇರಳ ಸರ್ಕಾರಗಳ ಪರ ವಕೀಲರು ರಾಷ್ಟ್ರಪತಿಯವರು ಸ್ಪಷ್ಟನೆ ಕೋರಿರುವುದನ್ನು ವಿರೋಧಿಸಿದ್ದು, ಅದು ವಿಚಾರಣೆಗೆ ಯೋಗ್ಯವೇ ಎಂದು ಪ್ರಶ್ನಿಸಿದರು.
- ಬಳಿಕ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು, ‘ರಾಷ್ಟ್ರಪತಿ ಸ್ಪಷ್ಟನೆ ಕೇಳಿರು ವುದರಲ್ಲಿ ತಪ್ಪೇನಿದೆ? ಈ ವಿಚಾರದ ಪ್ರತಿವಾದವನ್ನು ನಿಜಕ್ಕೂ ನೀವು ಗಂಭೀರವಾಗಿ ಪರಿಗಣಿಸಿದ್ದೀರಾ’ಎಂದು ಕೇಳಿತು.
- ಸಂವಿಧಾನದ 143(1)ನೇ ವಿಧಿಯಡಿ ದತ್ತವಾದ ಅಧಿಕಾರವನ್ನು ಬಳಸಿಕೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್ನಿಂದ ಸ್ಪಷ್ಟನೆ ಕೇಳಿದ್ದಾರೆ.
- ಕಾಲಮಿತಿಯೊಳಗೆ ಅಂಕಿತ ಹಾಕಬೇಕು ಎಂದು ಹೇಳುವುದರಿಂದ ಸರ್ಕಾರದ ಒಂದು ಅಂಗವೇ ಹೆಚ್ಚಿನ ಅಧಿಕಾರ ಹೊಂದಿದಂತಾಗಲಿದೆ. ಇದರಿಂದ ‘ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆ’ ಉಂಟಾಗಲಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅಭಿಪ್ರಾಯ ದಾಖಲಿಸಿದೆ. ‘ಈ ವಿಷಯದಲ್ಲಿ ನಮ್ಮ ವ್ಯಾಪ್ತಿಯು ಸಲಹೆ ನೀಡುವುದಕ್ಕಷ್ಟೆ ಸೀಮಿತವಾಗಿದೆ’ ಎಂದೂ ಪೀಠವು ತಿಳಿಸಿತು.
‘ಎಸ್ಮಾ’ ಮಸೂದೆಗೆ ಒಪ್ಪಿಗೆ
ಸಂದರ್ಭ:
ಮುಷ್ಕರ ನಡೆಸುವ ಸಾರಿಗೆ ನಿಗಮಗಳ ಸಿಬ್ಬಂದಿ ವಿರುದ್ಧ ‘ಎಸ್ಮಾ’ ಜಾರಿಗೊಳಿಸುವ ‘ಅಗತ್ಯ ಸೇವೆಗಳ ನಿರ್ವಹಣಾ ತಿದ್ದುಪಡಿ ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿತು.
- 2015ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯ ಅವಧಿ 10 ವರ್ಷಗಳಿದ್ದು, 2025ರ ಮೇ ನಲ್ಲಿ ಅವಧಿ ಮುಕ್ತಾಯವಾದ ಕಾರಣ ಮತ್ತೆ 20 ವರ್ಷಗಳವರೆಗೆ ವಿಸ್ತರಿಸಿ, ತಿದ್ದುಪಡಿ ತರಲಾಗಿದೆ ಎಂದು ಸಾರಿಗೆ ಸಚಿವ ಹೇಳಿದರು.
- ಮುಖ್ಯಾಧಿಕಾರಿಗೆ ಕಟ್ಟಡ ಪರವಾನಗಿ ಅಧಿಕಾರ: ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಮನೆ ಮತ್ತಿತರ ಕಟ್ಟಡಗಳ ನಿರ್ಮಾಣಕ್ಕೆ ಪರವಾನಗಿ ನೀಡುವುದು ವಿಳಂಬವಾಗುತ್ತಿರುವುದನ್ನು ತಪ್ಪಿಸಲು ಮುಖ್ಯಾಧಿಕಾರಿಗಳಿಗೆ ಹೊಣೆ ನೀಡುವ ಕರ್ನಾಟಕ ಮುನ್ಸಿಪಾಲಿಟಿಗಳು ಮತ್ತು ಇತರೆ ಕಾನೂನು ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಕ್ಕಿತು.
- ಜನರು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಪರವಾನಗಿ ನೀಡಬೇಕು. ನಂತರ ನಡೆಯುವ ಕೌನ್ಸಿಲ್‌ನಲ್ಲಿ ಅನುಮತಿ ಪಡೆಯಬೇಕು ಎಂಬ ಷರತ್ತು ವಿಧಿಸಲಾಗಿದೆ.
ಶೂಟಿಂಗ್: ಭಾಕರ್‌ಗೆ ಕಂಚು
ಸಂದರ್ಭ:
ಒಲಿಂಪಿಕ್ ಅವಳಿ ಪದಕ ವಿಜೇತೆ ಮನು ಭಾಕರ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಶೂಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಜೂನಿಯರ್ ವಿಭಾಗದಲ್ಲಿ ರಶ್ಮಿಕಾ ಸೆಹಗಲ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಎಂಟು ಶೂಟರ್‌ಗಳನ್ನು ಒಳಗೊಂಡ ಫೈನಲ್ ಸುತ್ತಿನಲ್ಲಿ 23 ವರ್ಷದ ಭಾಕರ್ 219.7 ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನ ಗಳಿಸಿದರು. ಚೀನಾದ ಕ್ವಿಯಾಂಕೆ ಮಾ (243.2) ಮತ್ತು ಕೊರಿಯಾದ ಜಿಯಿನ್ ಯಂಗ್ (241.6) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದರು.