ಸಾಮಾನ್ಯ ಅಧ್ಯಯನ 2: ಅನಿವಾಸಿ ಭಾರತೀಯ
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ಎನ್‌ಆರ್‌ಐ ಕೋಟಾ
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ಇನ್ನು ಮುಂದೆ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಶೇ 15ರಷ್ಟು ಸೀಟುಗಳನ್ನು ಮೀಸಲಿಡಲಾಗುತ್ತಿದೆ.
- 2025-26ನೇ ಸಾಲಿನಿಂದಲೇ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ಆದೇಶ ಹೊರಡಿಸಿದೆ. 400 ಸರ್ಕಾರಿ ಕಾಲೇಜುಗಳಿಗೆ ಸಿಕ್ಕಿವೆ.
- ಈ ವರ್ಷ ಹೊಸ 400 ಸೀಟುಗಳಲ್ಲಿ ಎನ್‌ಆರ್‌ಐ ಕೋಟಾ ನಿಗದಿಪಡಿಸ ಲಾಗಿದೆ. ₹25 ಲಕ್ಷ ಶುಲ್ಕ ನಿಗದಿಮಾಡಲಾಗಿದೆ. ಇದರಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸರ್ಕಾರದ ಅನುದಾನದ ಮೇಲೆ ಹೆಚ್ಚು ಅವಲಂಬಿತವಾಗದೆ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ ಎಂದರು.
ಸಾಮಾನ್ಯ ಅಧ್ಯಯನ 2: ವಿಶ್ವಸಂಸ್ಥೆಯ ಸಾಮಾನ್ಯ ಸಭೆ
ಯುಎನ್‌ಜಿಎ: ಮೋದಿ ಬದಲು ಜೈಶಂಕರ್ ಭಾಷಣ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಉನ್ನತ ಮಟ್ಟದ ಸಾಮಾನ್ಯ ಚರ್ಚೆಯಲ್ಲಿ (ಯುಎನ್‌ಜಿಎ) ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಇರುವುದಿಲ್ಲ. ಭಾಷಣಗಾರರ ತಾತ್ಕಾಲಿಕ ಪರಿಷ್ಕೃತ ಪಟ್ಟಿ ಪ್ರಕಟಿಸಲಾಗಿದ್ದು, ಅದರಲ್ಲಿ ಭಾರತದ ಪ್ರಧಾನಿಯ ಹೆಸರಿಲ್ಲ. ಭಾರತದಿಂದ ಒಬ್ಬ ‘ಸಚಿವ’ ಪ್ರತಿನಿಧಿಸುತ್ತಾರೆ ಎಂಬ ಮಾಹಿತಿ ಪಟ್ಟಿಯಲ್ಲಿದೆ.
- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನ ಇದೇ 9ರಿಂದ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ವಾಡಿಕೆಯಂತೆ ಮೊದಲು ಮಾತನಾಡುವ ಅವಕಾಶ ಬ್ರೆಜಿಲ್ ನಂತರ ಅಮೆರಿಕಕ್ಕೆ ಇದೆ.
- ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಯುಎನ್‌ಜಿಎ’ ವೇದಿಕೆಯಲ್ಲಿ ವಿಶ್ವ ಮುಖಂಡರನ್ನು ಉದ್ದೇಶಿಸಿ ಇದೇ 23ರಂದು ಭಾಷಣ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬದಲು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇದೇ 27ರಂದು ಭಾಷಣ ಮಾಡಲಿದ್ದಾರೆ.
- ಇಸ್ರೇಲ್, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ‘ಯುಎನ್‌ಜಿಎ’ ವೇದಿಕೆಯಲ್ಲಿ ಮಾತನಾಡಲು ಇದೇ 26ರಂದು ಅವಕಾಶ ನೀಡಲಾಗಿದೆ.
- ಇಸ್ರೇಲ್–ಹಮಾಸ್ ಸಂಘರ್ಷ, ರಷ್ಯಾ–ಉಕ್ರೇನ್ ಯುದ್ಧದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ಸಾಮಾನ್ಯ ಅಧ್ಯಯನ 2:
ಅಮೆರಿಕ: ರಕ್ಷಣಾ ಇಲಾಖೆ ಹೆಸರು ‘ಯುದ್ಧ’ ಎಂದು ನಾಮಕರಣ
ವಿಶ್ವದಾದ್ಯಂತ ಯುದ್ಧ ನಿಲ್ಲಿಸುವ ಕುರಿತು ಶಾಂತಿ ಪ್ರಚಾರ ಮಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇದೀಗ ತಮ್ಮ ದೇಶದ ರಕ್ಷಣಾ ಇಲಾಖೆಯ ಹೆಸರನ್ನೇ ‘ಯುದ್ಧ ಇಲಾಖೆ’ಯನ್ನಾಗಿ ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ.
- ‘ಅಮೆರಿಕವು ವಿಶ್ವದ ಶಕ್ತಿಶಾಲಿ ರಾಷ್ಟ್ರ ಎಂಬ ಸಂದೇಶ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಗೆಲುವು ಮತ್ತು ಪ್ರಬಲ ಸಾಮರ್ಥ್ಯದ ಸಂದೇಶವನ್ನು ನೀಡುತ್ತದೆ ಎಂದು ಭಾವಿಸಿದ್ದೇನೆ’ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
- ಕಾಂಗ್ರೆಸ್ (ಅಮೆರಿಕ ಸಂಸತ್ತು) ಸಂಸದರು ಮರುನಾಮಕರಣಕ್ಕೆ ಔಪಚಾರಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಮರುನಾಮಕರಣ ಆದೇಶದ ಬಳಿಕ ರಕ್ಷಣಾ ಇಲಾಖೆಯ ಕಚೇರಿಯ ಆವರಣದಲ್ಲಿನ ಫಲಕ ಹಾಗೂ ವೆಬ್‌ಸೈಟ್ ಸೇರಿದಂತೆ ಎಲ್ಲಾ ಕಡೆ ಹೆಸರು ಬದಲಾವಣೆ ಮಾಡಲಾಗಿದೆ.
ಸಾಮಾನ್ಯ ಅಧ್ಯಯನ 2: ಕೇಂದ್ರ ಚುನಾವಣಾ ಆಯೋಗ; ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್)
ದೇಶವ್ಯಾಪಿ ‘ಎಸ್‌ಐಆರ್’ಗೆ ಸಿದ್ಧತೆ
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ವಿರೋಧ ವ್ಯಕ್ತವಾಗಿರುವಾಗಲೇ, ದೇಶದಾದ್ಯಂತ ‘ಎಸ್‌ಐಆರ್’ ಜಾರಿಗೊಳಿಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
- ದೇಶವ್ಯಾಪಿ ‘ಎಸ್‌ಐಆರ್’ ಜಾರಿಗೆ ಕೈಗೊಳ್ಳಬೇಕಿರುವ ಸಿದ್ಧತೆಗಳ ಕುರಿತು ಚರ್ಚಿಸಲು ಆಯೋಗದ ಉನ್ನತ ಅಧಿಕಾರಿಗಳು ಸೆಪ್ಟೆಂಬರ್ 10ರಂದು ವಿವಿಧ ರಾಜ್ಯಗಳ ಚುನಾವಣಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
- ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ, ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ ನಡೆಸುತ್ತಿರುವ ಮೂರನೆಯ ಸಭೆ ಇದಾಗಿದೆ.
- ಬಿಹಾರದ ನಂತರ ದೇಶದ ಉಳಿದ ರಾಜ್ಯಗಳಲ್ಲೂ ‘ಎಸ್‌ಐಆರ್’ ಜಾರಿಗೊಳಿಸುವುದಾಗಿ ಚುನಾವಣಾ ಆಯೋಗ ಈ ಹಿಂದೆಯೇ ಹೇಳಿತ್ತು. 2026ರಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅಂದರೆ, ಈ ವರ್ಷಾಂತ್ಯದಿಂದಲೇ ಈ ರಾಜ್ಯಗಳಲ್ಲಿ ‘ಎಸ್‌ಐಆರ್’ ಪ್ರಕ್ರಿಯೆಗಳು ಆರಂಭಗೊಳ್ಳುವ ಸಾಧ್ಯತೆ ಇದೆ.
‘ಎಸ್‌ಐಆರ್’ ಉದ್ದೇಶ
- l ಜನ್ಮಸ್ಥಳ ಪರಿಶೀಲನೆಯ ಮೂಲಕ ವಿದೇಶಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು
- l ಬಾಂಗ್ಲಾದೇಶ, ಮ್ಯಾನ್ಮಾರ್ ಸೇರಿ ದೇಶದಲ್ಲಿ ನುಸುಳಿರುವ ವಿದೇಶಿ ಅಕ್ರಮ ವಲಸಿಗರನ್ನು ಗುರುತಿಸುವುದು
- l ಮತದಾರರ ಪಟ್ಟಿಯ ಸಮಗ್ರತೆ ರಕ್ಷಿಸಲು, ಸಾಂವಿಧಾನಿಕ ಆದೇಶ ನಿರ್ವಹಿಸಲು ಆಯೋಗದ ಕ್ರಮ
- l ಮತಗಟ್ಟೆ ಅಧಿಕಾರಿಗಳು ಬೂತ್ ಮಟ್ಟದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ಮತದಾರರ ವಿವರವನ್ನು ಸಂಗ್ರಹಿಸಿ, ಖಚಿತಪಡಿಸಿಕೊಳ್ಳುವುದು
ಘೋಷಣಾ ಪತ್ರ– ಹೊಸ ನಮೂನೆ
- ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಬಯಸುವವರಿಗೆ ಮತ್ತು ಹೊರ ರಾಜ್ಯಗಳಿಗೆ ಸ್ಥಳಾಂತರಗೊಂಡವರಿಗೆ ‘ಎಸ್‌ಐಆರ್’ನಲ್ಲಿ ‘ಘೋಷಣಾ ಪತ್ರ’ ಎಂಬ ಹೊಸ ನಮೂನೆಯನ್ನು ಪರಿಚಯಿಸಲಾಗಿದೆ.
- ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವವರು 1987ರ ಜುಲೈ 1ರ ಮೊದಲು ಜನಿಸಿದವರಾಗಿದ್ದರೆ, ಭಾರತದಲ್ಲಿ ಜನಿಸಿದ್ದೇವೆ ಎನ್ನುವುದಕ್ಕೆ ಜನ್ಮ ದಿನಾಂಕ ಮತ್ತು ಜನ್ಮಸ್ಥಳದ ದಾಖಲೆ ಒದಗಿಸಬೇಕು. 1987ರ ಜುಲೈ 1ರಿಂದ 2004ರ ಡಿಸೆಂಬರ್ 2ರ ಒಳಗೆ ಜನಿಸಿದವರು ತಮ್ಮ ಪೋಷಕರ ಜನ್ಮದಿನಾಂಕ, ಜನ್ಮಸ್ಥಳದ ದಾಖಲೆಯನ್ನೂ ಒದಗಿಸಬೇಕು.
ಸುಪ್ರೀಂಕೋರ್ಟ್ ಸೂಚನೆ
- ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಮತ್ತು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
- ಕೆಲವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಈಗಾಗಲೇ ತಮ್ಮ ರಾಜ್ಯಗಳಲ್ಲಿ ಕೊನೆಯ ಬಾರಿ ಪರಿಷ್ಕರಣೆ ಆಗಿರುವ ಮತದಾರರ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದ್ದಾರೆ. ಹೆಚ್ಚಿನ ರಾಜ್ಯಗಳು 2002–2004ರ ಅವಧಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ್ದವು.