ಭಾರತಕ್ಕೆ ಏಷ್ಯಾ ಕಪ್ ಗರಿ ವಿಶ್ವಕಪ್ ಟೂರ್ನಿಗೆ ರಹದಾರಿ
ಸಂದರ್ಭ: ರಾಜಗೀರ್, ಬಿಹಾರ (ಪಿಟಿಐ): ಭಾರತ ಪುರುಷರ ಹಾಕಿ ತಂಡವು ಭಾನುವಾರ ಇಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಎದುರು ಜಯಿಸಿತು. ಇದರೊಂದಿಗೆ ಮುಂದಿನ ವರ್ಷ ನಡೆಯಲಿರುವ ಟೂರ್ನಿಗೆ ರಹದಾರಿ ಗಿಟ್ಟಿಸಿತು.
- ದಿಲ್‌ಪ್ರೀತ್ ಸಿಂಗ್ ಅವರು ಹೊಡೆದ ಎರಡು ಗೋಲುಗಳ ಬಲದಿಂದ ಭಾರತ ಹಾಕಿ ತಂಡವು ಏಷ್ಯಾ ಕಪ್ ಗೆದ್ದು ಕೊಂಡಿತು. ಇದರೊಂದಿಗೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಿಕೊಂಡಿತು.
- ಇಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವು 4–1ರಿಂದ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾದ ವಿರುದ್ಧ ಗೆದ್ದಿತು. ಇದು ಭಾರತಕ್ಕೆ ನಾಲ್ಕನೇ ಏಷ್ಯನ್ ಟ್ರೋಫಿ ಆಗಿದೆ. ಈ ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ಟ್ರೋಫಿಗಳನ್ನು ಜಯಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐದು ಬಾರಿ ಗೆದ್ದಿರುವ ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದೆ. ಭಾರತ ತಂಡವು 2003 (ಕೌಲಾಲಂಪುರ), 2007 (ಚೆನ್ನೈ) ಮತ್ತು 2017ರಲ್ಲಿ ಢಾಕಾದಲ್ಲಿ ಏಷ್ಯಾ ಕಪ್ ಜಯಿಸಿತ್ತು.
- ಮುಂದಿನ ವರ್ಷದ ಆಗಸ್ಟ್ 14ರಿಂದ 30ರವರೆಗೆ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್ ಟೂರ್ನಿಗೆ ಭಾರತವು ನೇರಪ್ರವೇಶ ಪಡೆಯಿತು.
- ಭಾರತ ತಂಡದ ದಿಲ್‌ಪ್ರೀತ್ ಅವರು 28ನೇ ನಿಮಿಷ ಮತ್ತು 45ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸುಖಜೀತ್ ಸಿಂಗ್ ಅವರು ಮೊದಲ ನಿಮಿಷದಲ್ಲಿಯೇ ಗೋಲು ಹೊಡೆದು ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಅಮಿತ್ ರೋಹಿದಾಸ್ (50ನೇ ನಿ) ಒಂದು ಗೋಲು ಹೊಡೆದು ಮುನ್ನಡೆ ಒದಗಿಸಿದರು.
- ಕೊರಿಯಾ ತಂಡದ ಏಕೈಕ ಗೋಲನ್ನು ಡಯಾನ್ ಸನ್ (51ನೇ ನಿ) ದಾಖಲಿಸಿದರು.
ಜೊಮಾಟೊ, ಸ್ವಿಗ್ಗಿ ಪ್ಲಾಟ್‌ಫಾರ್ಮ್ ಶುಲ್ಕ ಏರಿಕೆ
ಸಂದರ್ಭ: ಊಟ, ತಿಂಡಿಯನ್ನು ಹೋಟೆಲ್‌ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಜೊಮಾಟೊ, ಸ್ವಿಗ್ಗಿ ಮತ್ತು ಮ್ಯಾಜಿಕ್‌ಪಿನ್ ಪ್ರತಿ ಆರ್ಡರ್ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್ ಫೀ) ಏರಿಕೆ ಮಾಡಿವೆ. ಹಬ್ಬಗಳ ಋತು ಆರಂಭವಾಗಿರುವ ಈ ಹೊತ್ತಿನಲ್ಲಿ ಕಂಪನಿಗಳು ದರ ಹೆಚ್ಚಳ ಮಾಡಿವೆ.
- ಅಲ್ಲದೆ, ಈ ಕಂಪನಿಗಳು ಊಟ, ತಿಂಡಿಯನ್ನು ಮನೆಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಶೇಕಡ 18ರಷ್ಟು ತೆರಿಗೆ ಸೆಪ್ಟೆಂಬರ್ 22ರಿಂದ ಜಾರಿ ಬರಲಿರುವ ಕಾರಣಕ್ಕೆ, ಅದರ ಹೊರೆಯೂ ಗ್ರಾಹಕರಿಗೆ ವರ್ಗಾವಣೆ ಆಗುವ ನಿರೀಕ್ಷೆ ಇದೆ.
- ಸ್ವಿಗ್ಗಿ ಕಂಪನಿಯು ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಆಯ್ದ ನಗರಗಳಲ್ಲಿ ಪ್ರತಿ ಆರ್ಡರ್‌ಗೆ ₹15ಕ್ಕೆ ಹೆಚ್ಚಿಸಿದೆ. ಇದರಲ್ಲಿ ಜಿಎಸ್‌ಟಿ ಸೇರಿದೆ. ಜೊಮಾಟೊ ಜಿಎಸ್‌ಟಿ ಹೊರತುಪಡಿಸಿ ₹12.50ಕ್ಕೆ ಹೆಚ್ಚಿಸಿದೆ. ಮ್ಯಾಜಿಕ್‌ಪಿನ್ ₹10ಕ್ಕೆ ಏರಿಕೆ ಮಾಡಿದೆ.
- ಒಂದು ಅಂದಾಜಿನ ಪ್ರಕಾರ, ಶೇ 18ರಷ್ಟು ಜಿಎಸ್‌ಟಿ ಪರಿಣಾಮವಾಗಿ ಜೊಮಾಟೊ ಮತ್ತು ಸ್ವಿಗ್ಗಿ ಗ್ರಾಹಕರು ಕ್ರಮವಾಗಿ ₹2 ಮತ್ತು ₹2.60 ಹೆಚ್ಚುವರಿ ಶುಲ್ಕವನ್ನು ಪ್ರತಿ ಆರ್ಡರ್‌ಗೆ ನೀಡಬೇಕಾಗುತ್ತದೆ. ದರ ಹೆಚ್ಚಳದ ಬಗ್ಗೆ ಸ್ವಿಗ್ಗಿ ಮತ್ತು ಜೊಮಾಟೊ ಪ್ರತಿಕ್ರಿಯೆ ನೀಡಿಲ್ಲ.
- ‘ಆಹಾರ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಸೇವೆಗೆ ನಾವು ಈಗಾಗಲೇ ಶೇ 18ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದೇವೆ. ಈಗಿನ ಜಿಎಸ್‌ಟಿ ಪರಿಷ್ಕರಣೆ ನಮ್ಮ ಮೇಲೆ ಪರಿಣಾಮ ಬೀರದು. ಗ್ರಾಹಕರ ಮೇಲೂ ಜಿಎಸ್‌ಟಿ ಪರಿಷ್ಕರಣೆಯು ಪರಿಣಾಮ ಬೀರದು. ನಮ್ಮ ಪ್ಲಾಟ್‌ಫಾರ್ಮ್ ಶುಲ್ಕವು ₹10 ಇದೆ. ಇದು ಇತರೆ ಪ್ರಮುಖ ಕಂಪನಿಗಳ ಶುಲ್ಕಕ್ಕಿಂತ ಕಡಿಮೆ’ ಎಂದು ಮ್ಯಾಜಿಕ್‌ಪಿನ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
‘ರಾಜ್ಯದ ಎರಡನೇ ಅಧಿಕೃತ ಭಾಷೆ ತುಳು: ಸಂಪುಟದಲ್ಲಿ ಚರ್ಚೆ’
ಸಂದರ್ಭ:‘ರಾಜ್ಯದ ಎರಡನೇ ಅಧಿಕೃತ ಭಾಷೆ ತುಳು ಎಂದು ಘೋಷಿಸಬೇಕು ಎಂಬ ಬೇಡಿಕೆಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
- ಇಲ್ಲಿ ನಡೆದ ಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
- ‘ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ, ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
- ‘ಕರಾವಳಿ ಜನ ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ, ಧಾರ್ಮಿಕ ಶಕ್ತಿ, ಬ್ಯಾಂಕಿಂಗ್ ವ್ಯವಸ್ಥೆ ಕೊಟ್ಟಿದ್ದಾರೆ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಡಿ.ಕೆ. ಶಿವಕುಮಾರ್ ನಿಮ್ಮವ ಎಂದು ಭಾವಿಸಿ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನಗೆ ಬೆಂಬಲವಾಗಿರಿ. ನಾನು ನಿಮ್ಮ ಆಶೀರ್ವಾದವನ್ನಷ್ಟೇ ಕೇಳುತ್ತಿದ್ದೇನೆ’ ಎಂದರು.
- ‘ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ಆ ಭಾಗದ ಶಾಸಕರು, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಜೊತೆ ನಾನು ಚರ್ಚೆ ಮಾಡಿದ್ದೇನೆ’ ಎಂದು ತಿಳಿಸಿದರು.