ನದಿ ಜೋಡಣೆ: ಪಾಲು ಹೆಚ್ಚಳಕ್ಕೆ ಪಟ್ಟು
ಸಂದರ್ಭ: ಗೋದಾವರಿ–ಕಾವೇರಿ ನದಿಗಳ ಜೋಡಣೆಯಲ್ಲಿ ನೀರಿನ ಪಾಲು ಹಂಚಿಕೆ ಸೂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಸೇರಿದಂತೆ ಪಾಲುದಾರ ರಾಜ್ಯಗಳು, ನೀರಿನ ಪಾಲನ್ನು ನ್ಯಾಯಬದ್ಧವಾಗಿ ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಸ್ಪಷ್ಟಪಡಿಸಿವೆ.


- ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಅಂತರ್ ನದಿಗಳ ಜೋಡಣೆಯ ವಿಶೇಷ ಸಮಿತಿಯ 23ನೇ ಸಭೆ ಒಮ್ಮತಾಭಿಪ್ರಾಯಕ್ಕೆ ಬರುವಲ್ಲಿ ವಿಫಲ ಆಯಿತು.
- ಇನ್ನೊಂದೆಡೆ, ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡು ಪೂರ್ಣ ಬೆಂಬಲ ವ್ಯಕ್ತಪಡಿಸಿತು. ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿತು.
- ನದಿ ಜೋಡಣೆಗೆ ತಾತ್ವಿಕ ಒಪ್ಪಿಗೆ ವ್ಯಕ್ತಪಡಿಸಿರುವ ತೆಲಂಗಾಣವು, ಪೋಲವರಂನಿಂದಲೇ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಪಟ್ಟು ಹಿಡಿಯಿತು.
- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯಡಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಕುಡಿಯುವ ನೀರು, ಕೈಗಾರಿಕೆ ಹಾಗೂ ನೀರಾವರಿ ಉದ್ದೇಶಕ್ಕೆ ನೀರಿನ ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೈಗಾರಿಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಮಾತ್ರ ಹಂಚಿಕೆ ಆಗಿದೆ. ರಾಜ್ಯಕ್ಕೆ ನೈಜವಾಗಿ 2.19 ಟಿಎಂಸಿ ಅಡಿ ಮಾತ್ರ ಸಿಗಲಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂಬುದು ಕರ್ನಾಟಕದ ಪ್ರಮುಖ ತಕರಾರು. ಈ ಮಹಾ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರ ಧ್ವನಿ ಎತ್ತಿದೆ.
147 ಟಿಎಂಸಿ ಅಡಿಗಾಗಿ ಜಟಾಪಟಿ
- ಗೋದಾವರಿ–ಕಾವೇರಿ ನದಿಗಳ ಜೋಡಣೆ ಯೋಜನೆಯಲ್ಲಿ ಗೋದಾವರಿ–ಕೃಷ್ಣಾ (ನಾಗಾರ್ಜುನಸಾಗರ), ಕೃಷ್ಣಾ–ಪೆನ್ನಾರ್ (ಸೋಮಶಿಲಾ) ಹಾಗೂ ಪೆನ್ನಾರ್–ಕಾವೇರಿ ನದಿಗಳ ಜೋಡಣೆ ಮಾಡಲಾಗುವುದು.
- ಗೋದಾವರಿ ಕಣಿವೆಯ ಹೆಚ್ಚುವರಿ 248 ಟಿಎಂಸಿ ಅಡಿ ನೀರನ್ನು ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ಕಣಿವೆಯ ಭಾಗಕ್ಕೆ ಹರಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಯೋಜಿಸಿತ್ತು. ಈ ಪ್ರಸ್ತಾವಕ್ಕೆ ರಾಜ್ಯಗಳು ಒಪ್ಪಿರಲಿಲ್ಲ. ಬಳಿಕ ಪರಿಷ್ಕೃತ ಪ್ರಸ್ತಾವ ಸಿದ್ಧಪಡಿಸಲಾಗಿತ್ತು.
- ಗೋದಾವರಿ ನದಿಯ ಉಪನದಿ ಇಂದ್ರಾವಳಿಯಲ್ಲಿ ಬಳಕೆಯಾಗದ 147.93 ಟಿಎಂಸಿ ಅಡಿ ನೀರನ್ನು ನದಿ ತಿರುವು ಯೋಜನೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಬೇಡ್ತಿ–ವರದಾ ನದಿ ಜೋಡಣೆಯಿಂದ 18 ಟಿಎಂಸಿ ಅಡಿ ನೀರು ದೊರಕಲಿದೆ ಎಂದು ಅಂದಾಜಿಸಲಾಗಿದೆ.
ವಿಷ್ಣು, ಸರೋಜಾದೇವಿಗೆ ‘ಕರ್ನಾಟಕ ರತ್ನ’
ಸಂದರ್ಭ: ಚಲನಚಿತ್ರ ನಟ ವಿಷ್ಣುವರ್ಧನ್ ಮತ್ತು ನಟಿ ಬಿ.ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
- ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿನಾಂಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸದ್ಯವೇ ನಿಗದಿ ಮಾಡಲಿದೆ ಎಂದು ತಿಳಿಸಿದರು.

- ‘ವಿಷ್ಣುವರ್ಧನ್ ಅವರು ಕನ್ನಡದ ಮೇರುನಟರ ಪೈಕಿ ಒಬ್ಬರು. ಇವರಿಗೆ ಕರ್ನಾಟಕ ರತ್ನ ನೀಡಬೇಕು’ ಎಂದು ವಿಷ್ಣುವರ್ಧನ್ ಕುಟುಂಬ, ಅಭಿಮಾನಿಗಳ ಸಂಘ ಮತ್ತು ಚಲನಚಿತ್ರ ಕಲಾವಿದರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
- ಅಭಿಮಾನ್ ಸ್ಟುಡಿಯೊದಲ್ಲಿದ್ದ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಇತ್ತೀಚೆಗೆ ರಾತ್ರೋರಾತ್ರಿ ನೆಲಸಮ ಮಾಡಿದ್ದರಿಂದ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಮೀನು ನೀಡಬೇಕು ಮತ್ತು ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದರು.
- ಅಲ್ಲದೇ, ನಟಿಯರಾದ ಜಯಮಾಲಾ, ಶ್ರುತಿ, ತಾರಾ ಅನೂರಾಧ, ಮಾಳವಿಕಾ ಅವಿನಾಶ್ ಅವರು ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರತ್ನ ನೀಡುವ ತೀರ್ಮಾನ ಕೈಗೊಂಡಿದೆ.
ಕುವೆಂಪುಗೆ ‘ಭಾರತರತ್ನ’: ಶಿಫಾರಸು

- ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ‘ಭಾರತರತ್ನ’ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಕರ್ನಾಟಕ ರತ್ನ ಪ್ರಶಸ್ತಿ
- ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.
- ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
- ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ೨೦೨೨ ನವೆಂಬರ್ ೦೧ ರಂದು ನೀಡಲಾಗಿದೆ.
ಸಿನಿಮಾ ಕ್ಷೇತ್ರದ್ದೆ ಮೇಲುಗೈ

- ಈ ಹಿಂದೆ ನೀಡಿದ 10 ಕರ್ನಾಟಕ ಪ್ರಶಸ್ತಿಗಳು ಹಾಗೂ ಹೊಸದಾಗ ಘೋಷಣೆಯಾಗಿರುವ ಪ್ರಶಸ್ತಿಗಳು ಸೇರಿ ಒಟ್ಟು 12 ಮಂದಿಯಲ್ಲಿ ನಾಲ್ಕು ಮಂದಿ ಸಿನಿಮಾ ಕ್ಷೇತ್ರದವರಾಗಿದ್ದಾರೆ. ಉಳಿದಂತೆ ಸಮಾಜ ಸೇವೆಗೆ ಶಿವಕುಮಾರ ಸ್ವಾಮೀಜಿ, ಡಿ ವೀರೇಂದ್ರ ಗೌಡ, ಸಾಹಿತ್ಯಕ್ಕೆ ಕುವೆಂಪು, ದೇ ಜವರೇಗೌಡ, ವೈದ್ಯಕೀಯ ಸಾಧನೆಗೆ ಖ್ಯಾತ ಹೃದ್ರೋಗ ತಜ್ಞ ದೇವಿಪ್ರಸಾದ್ ಶೆಟ್ಟಿ, ರಾಜಕೀಯ ಸಾಧನೆಗೆ ಎಸ್ ನಿಜಲಿಂಗಪ್ಪ, ಸಂಗೀತ ಕ್ಷೇತ್ರದಲ್ಲಿ ಭೀಮಸೇನ ಜೋಷಿ, ವಿಜ್ಞಾನಿ ಸಿಎನ್‌ಆರ್ ರಾವ್ ಪಡೆದುಕೊಂಡಿದ್ದಾರೆ.
200 ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿದರುವ ವಿಷ್ಣು
- ನಟ ವಿಷ್ಣುವರ್ಧನ್ ಅವರು 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, 14 ಬಾರಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 7 ಫಿಲ್ಮ್‌ಫೇರ್ ಪ್ರಶಸ್ತಿಗಳು, 8 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಯನ್ನು ಗುರುತಿಸಿ, ಕರ್ನಾಟಕ ಸರ್ಕಾರವು ವಾರ್ಷಿಕ ಪ್ರಶಸ್ತಿಯನ್ನು ಅವರ ಹೆಸರಿನಲ್ಲಿ ಮರುನಾಮಕರಣ ಮಾಡಿತ್ತು.
ಪಂಚಭಾಷೆ ತಾರೆಗೆ ಒಲಿದ ಪ್ರಶಸ್ತಿ

- ಬಿ. ಸರೋಜಾದೇವಿ ಅವರು ಬೆಂಗಳೂರು ಮೂಲದ ದಕ್ಷಿಣ ಭಾರತದ ಖ್ಯಾತ ನಟಿ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ, “ಅಭಿನಯ ಸರಸ್ವತಿ” ಎಂದು ಖ್ಯಾತರಾಗಿದ್ದರು. ತಮ್ಮ 17ನೇ ವಯಸ್ಸಿನಲ್ಲಿ ಕನ್ನಡದ “ಮಹಾಕವಿ ಕಾಳಿದಾಸ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು, 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಲಭಿಸಿವೆ. 2025 ರಲ್ಲಿ ಅನಾರೋಗ್ಯ ಕಾರಣಕ್ಕೆ ನಿಧನರಾದರು.
ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸೆ
ಸಂದರ್ಭ: ನಗರದ ಖಾಸಗಿ ಆಸ್ಪತ್ರೆ ಗಳಲ್ಲಿ ಐವಿಎಫ್ (ಕೃತಕ ಗರ್ಭಧಾರಣೆ) ಚಿಕಿತ್ಸಾ ವೆಚ್ಚ ದುಬಾರಿ ಆಗಿರುವುದ ರಿಂದ, ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಬಿವಿಎಂಸಿಆರ್‌ಐ) ಈ ಕೇಂದ್ರ ತಲೆಯೆತ್ತಲಿದೆ.
- ಬದಲಾದ ಜೀವನಶೈಲಿಯಿಂದ ಜನರಲ್ಲಿ ಫಲವತ್ತತೆ ದರ ಕುಸಿಯುತ್ತಿದೆ. ಇದರಿಂದಾಗಿ ಐವಿಎಫ್ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸಾ ವೆಚ್ಚ ಭರಿಸುವುದು ಬಡ, ಮಧ್ಯಮ ವರ್ಗದವರಿಗೆ ಸವಾಲಾಗಿದೆ. ಆದ್ದರಿಂದ ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಚಿಕಿತ್ಸೆ ಪ್ರಾರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ.
- ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಇರುವ ಎಬಿವಿಎಂಸಿಆರ್‌ಐನಲ್ಲಿ ಈ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಸಿವಿಲ್ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ ಈ ಕೇಂದ್ರ ಕಾರ್ಯಾರಂಭಿಸುವ ಸಾಧ್ಯತೆಯಿದೆ.
- ಈ ಕೇಂದ್ರವು ತಜ್ಞ ವೈದ್ಯರ ಕೊಠಡಿಗಳು, ಪ್ರಯೋಗಾಲಯ, ನೋಂದಣಿ ಕೌಂಟರ್, ಸಮಾಲೋಚನಾ ಕೊಠಡಿ ಸೇರಿ ವಿವಿಧ ವಿಭಾಗಗಳನ್ನು ಹೊಂದಲಿದೆ. ಡೇ ಕೇರ್ ಸೆಂಟರ್‌ನಂತೆ (ಹೊರರೋಗಿ ವಿಭಾಗ) ಕಾರ್ಯ ನಿರ್ವಹಿಸಲಿದೆ. ಐವಿಎಫ್‌ಗೆ ನಿಗದಿಪಡಿ ಸಲಾದ ಮಾನದಂಡದ ಅನುಸಾರ ಕೇಂದ್ರವನ್ನು ಸಜ್ಜುಗೊಳಿಸಲಾಗುತ್ತದೆ. ಬಳಿಕ ಸ್ತ್ರೀರೋಗ ತಜ್ಞರು ಒಳಗೊಂಡಂತೆ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
- ದುಬಾರಿ ಚಿಕಿತ್ಸೆ: ಮಕ್ಕಳಾಗದೇ ಇರುವ ಮಹಿಳೆಯರ ಅಂಡಾಣು ಹಾಗೂ ಪುರುಷರ ವೀರ್ಯಾಣುವನ್ನು ಪ್ರಯೋಗಾಲಯದಲ್ಲಿ ಫಲವತ್ತಾಗಿಸಿ, ನಂತರ ಭ್ರೂಣವನ್ನು ಮಹಿಳೆಯ ಗರ್ಭಕ್ಕೆ ಸೇರಿಸುವ ಕಾರ್ಯವಿಧಾನವೇ ಐವಿಎಫ್. ಬಂಜೆತನದಿಂದ ಬಳಲುತ್ತಿರುವ ದಂಪತಿಗಳಿಗೆ ಮಕ್ಕಳನ್ನು ಹೊಂದಲು ಈ ತಂತ್ರಜ್ಞಾನ ವರದಾನವಾಗಿ ಪರಿಣಮಿಸಿದೆ.
- ಖಾಸಗಿ ಕ್ಲಿನಿಕ್‌ಗಳಲ್ಲಿ ಈ ಚಿಕಿತ್ಸೆಗೆ ₹1.5 ಲಕ್ಷದಿಂದ ₹5 ಲಕ್ಷದವರೆಗೆ ವೆಚ್ಚವಾಗಲಿದೆ. ಈ ಚಿಕಿತ್ಸೆ ಆರೋಗ್ಯ ವಿಮೆಗಳಡಿ ಸೇರ್ಪಡೆಯಾಗದಿರುವುದರಿಂದ, ಬಡ–ಮಧ್ಯಮ ವರ್ಗದವರಿಗೆ ಚಿಕಿತ್ಸಾ ವೆಚ್ಚ ಭರಿಸುವುದು ಕಷ್ಟಸಾಧ್ಯವಾಗಿದೆ.
- ಐವಿಎಫ್ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆ, ಈ ಹಿಂದೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. 2023–24ನೇ ಸಾಲಿನ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬೆಂಗಳೂರಿನಲ್ಲಿ ಐವಿಎಫ್ ಚಿಕಿತ್ಸಾ ಕೇಂದ್ರ ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ, ಪಕ್ಷ ಅಧಿಕಾರಕ್ಕೆ ಬರದಿರುವುದರಿಂದ ಈ ಘೋಷಣೆ ಕಾರ್ಯಗತವಾಗಿರಲಿಲ್ಲ. ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ನಗರದಲ್ಲಿ ಈ ಕ್ಲಿನಿಕ್ ನಿರ್ಮಿಸುತ್ತಿದೆ.
ಎಬಿ–ಎಆರ್ಕೆಗೆ ಒಳಪಡದ ಚಿಕಿತ್ಸೆ
- ಐವಿಎಫ್ ಚಿಕಿತ್ಸೆಯು ಸರ್ಕಾರಿ ಆರೋಗ್ಯ ವಿಮೆಯಾದ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ (ಎಬಿ–ಎಆರ್‌ಕೆ) ಯೋಜನೆಯಡಿ ಸೇರ್ಪಡೆಯಾಗಿಲ್ಲ. ಈ ಯೋಜನೆಯಡಿ ಮಂಡಿಚಿಪ್ಪು ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ ಸೇರಿದಂತೆ 1,650 ಚಿಕಿತ್ಸಾ ಪ್ಯಾಕೇಜ್‌ಗಳಿವೆ. ಆದರೆ, ಐವಿಎಫ್‌ಗೆ ಸಂಬಂಧಿಸಿದ ಚಿಕಿತ್ಸೆಗಳು ಒಳಪಟ್ಟಿಲ್ಲ. ಆದ್ದರಿಂದ ಎಬಿವಿಎಂಸಿಆರ್‌ಐನಲ್ಲಿ ಚಿಕಿತ್ಸಾ ಕೇಂದ್ರ ಸಜ್ಜುಗೊಂಡ ಬಳಿಕ, ವೈದ್ಯಕೀಯ ತಜ್ಞರ ಸಮಿತಿ ಕೈಗೆಟುಕುವ ದರ ನಿಗದಿಪಡಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
‘ಕಾಗದ, ನೋಟ್‌ಬುಕ್ ಮೇಲಿನ ಜಿಎಸ್‌ಟಿ ಗೊಂದಲ ಬಗೆಹರಿಸಿ’
ಸಂದರ್ಭ: ‘ಪಠ್ಯಪುಸ್ತಕ, ನೋಟ್‌ಬುಕ್‌ಗಳಿಗೆ ಶೂನ್ಯ ಜಿಎಸ್‌ಟಿ, ಕಾಗದಕ್ಕೆ ಶೇ 18 ರಷ್ಟು ಜಿಎಸ್‌ಟಿ ವಿಧಿಸಿರುವುದು ಗೊಂದಲ ಉಂಟು ಮಾಡಿದೆ. ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಲಾಭವಾಗ ಲಿದ್ದು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಯಾವುದೇ ಲಾಭವಿಲ್ಲ’ ಎಂದು ಕರ್ನಾಟಕ ಕಾಗದ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರ ಸಂಘ ತಿಳಿಸಿದೆ.
- ‘ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಶೂನ್ಯ ಜಿಎಸ್‌ಟಿ ಮಾಡಿರುವ ಉದ್ದೇಶ ಒಳ್ಳೆಯದಿದೆ. ಆದರೆ, ತಪ್ಪಾದ ನಿಯಮದಿಂದಾಗಿ ಅನುಷ್ಠಾನಕ್ಕೆ ಬರುವುದಿಲ್ಲ. ಬದಲಾಗಿ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ’ ಎಂದು ಸಂಘದ ಮಾಜಿ ಕಾರ್ಯದರ್ಶಿ ಶರವಣ್ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
- ‘ಮಿಲ್‌ನಿಂದ ಸರಬರಾಜಾಗುವ ಕಾಗದವು ಶಾಲಾ ಪಠ್ಯ ಪುಸ್ತಕಕ್ಕೆ ಬಳಕೆಯಾಗುತ್ತದೆಯೇ? ಇಲ್ಲವೇ? ಎಂಬುದು ಗೊತ್ತಾಗುವುದಿಲ್ಲ. ಅದಕ್ಕೆ ಶೇ 18 ಜಿಎಸ್‌ಟಿ ಕಟ್ಟಬೇಕು. ಶಾಲಾ ಪಠ್ಯ ಅಥವಾ ನೋಟ್ ಬುಕ್ ತಯಾರಿಸಿದಾಗ ಶೇ 18 ಜಿಎಸ್‌ಟಿ ವಾಪಸ್ ಬರುವುದಿಲ್ಲ. ಹಾಗಾಗಿ ₹100 ಪುಸ್ತಕ ಖರೀದಿಸಲು ₹118 ನೀಡಬೇಕಾಗುತ್ತದೆ’ ಎಂದರು.
- ‘ಹಿಂದೆ ಎಲ್ಲದಕ್ಕೂ ಶೇ 12 ಜಿಎಸ್‌ಟಿ ಇದ್ದಾಗ ಈ ಗೊಂದಲಗಳಿರಲಿಲ್ಲ. ಈಗ ಕಾಗದ ತಯಾರಿ ಮತ್ತು ನೋಟ್‌ಬುಕ್, ಪಠ್ಯಪುಸ್ತಕ ತಯಾರಿ ಎಲ್ಲವನ್ನು ಒಂದೇ ಕಡೆ ಮಾಡುವುದು ಕಾರ್ಪೊರೇಟ್ ಕಂಪನಿಗಳು ಮಾತ್ರ. ಅವರಿಗೆ ಶೂನ್ಯ ಜಿಎಸ್‌ಟಿಯ ಲಾಭ ಸಿಗಲಿದೆ. ಆ ಪುಸ್ತಕಗಳನ್ನು ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡಲು ಸಾಧ್ಯ. ಇದರಿಂದ ಸಣ್ಣದಾಗಿ ವ್ಯಾಪಾರ ಮಾಡಿಕೊಂಡಿರುವ ಕಾಗದ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರು ಅಂಗಡಿಯ ಬಾಗಿಲು ಹಾಕಬೇಕಾದ ಪರಿಸ್ಥಿತಿ ಬರಲಿದೆ’ ಎಂದರು.
- ಕಾಗದ ಮತ್ತು ಕಾಗದ ಉತ್ಪನ್ನಗಳನ್ನು ಶೇ 5ರ ಜಿಎಸ್‌ಟಿ ಅಡಿಯಲ್ಲಿ ತರಬೇಕು ಎಂದು ಆಗ್ರಹಿಸಿದರು.
ಪೊಲೀಸರ ಆರೋಗ್ಯ ತಪಾಸಣೆಗೆ ‘ಖುಷಿ’ ಯೋಜನೆ
ಸಂದರ್ಭ: ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆ ಹಾಗೂ ನಗರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೊಲೀಸರ ಆರೋಗ್ಯ ತಪಾಸಣೆಗೆ ‘ಖುಷಿ’ ಯೋಜನೆ ಜಾರಿ ಮಾಡಲಾಗಿದೆ.
- ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಈ ಯೋಜನೆಗೆ ಚಾಲನೆ ನೀಡಿದರು.
- ಪೊಲೀಸರ ಆರೋಗ್ಯ ನಿರ್ವಹಣೆಗೆ ರೂಪಿಸಲಾದ ಯೋಜನೆ ಇದಾಗಿದೆ. ಮಧುಮೇಹ, ಅಧಿಕ ರಕ್ತದ ಒತ್ತಡ, ಬೊಜ್ಜು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ತಪಾಸಣೆ ಮಾಡಿಸಿಕೊಳ್ಳಬಹುದು.
- ಪೊಲೀಸ್ ವೃತ್ತಿಯಲ್ಲಿ ದೀರ್ಘಾವಧಿ ಕೆಲಸ, ಅತಿಯಾದ ಒತ್ತಡದ ವಾತಾವರಣ, ಅನಿಯಮಿತ ದಿನಚರಿಗಳಿರುತ್ತವೆ. ಪೊಲೀಸರ ಆರೋಗ್ಯದ ಕಾಳಜಿ ಹಾಗೂ ನಿರ್ವಹಣೆ ಸುಲಭವಾಗಿಲ್ಲ. ವೈಯಕ್ತಿಕ ಯೋಗಕ್ಷೇಮದ ಜೊತೆಗೆ ವೃತ್ತಿಪರ ದಕ್ಷತೆ ಮತ್ತು ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ.
- ಜೀವನಶೈಲಿಯ ಸಮಸ್ಯೆಗಳು ಮತ್ತು ಪೊಲೀಸರು ಎದುರಿಸುತ್ತಿರುವ ಅನೇಕ ಆರೋಗ್ಯ ಸವಾಲುಗಳನ್ನು ಗಮನದಲ್ಲಿ ಇರಿಸಿಕೊಂಡು ‘ಖುಷಿ ಯೋಜನೆ’ ಜಾರಿಗೆ ತರಲಾಗಿದೆ ಎಂದು ಹ್ಯಾಪಿಯೆಸ್ಟ್ ಹೆಲ್ತ್ ಯೋಜನೆ ಅಧಿಕಾರಿಗಳು ತಿಳಿಸಿದರು.
- ಹ್ಯಾಪಿಯೆಸ್ಟ್ ಹೆಲ್ತ್‌ನ ಮುಖ್ಯ ಸಂಪಾದಕ ರವಿ ಜೋಶಿ ಮಾತನಾಡಿ, ‘ಸಮಾಜದ ಬೆನ್ನೆಲುಬು ಆಗಿರುವ ಪೊಲೀಸ್ ಸಿಬ್ಬಂದಿ ಸಮತೋಲನ ಜೀವನ ನಡೆಸಲು ಸಹಾಯ ಮಾಡುವುದೇ ಈ ಯೋಜನೆಯ ಉದ್ದೇಶ’ ಎಂದು ಹೇಳಿದರು.
- ‘ಮಧುಮೇಹ, ಅಧಿಕ ರಕ್ತದ ಒತ್ತಡ ಹಾಗೂ ಬೊಜ್ಜಿನಂತಹ ಸಮಸ್ಯೆಗಳನ್ನು ಪರೀಕ್ಷಿಸದೇ ಬಿಟ್ಟರೆ ಅವುಗಳು ಸದ್ದಿಲ್ಲದೇ ಜೀವನದ ಗುಣಮಟ್ಟ ಹಾಳು ಮಾಡುತ್ತವೆ’ ಎಂದು ಹ್ಯಾಪಿಯೆಸ್ಟ್ ಹೆಲ್ತ್‌ನ ಸಿಇಒ ಶ್ರೀನಿವಾಸ್ ನಾರಾಯಣ್ ಹೇಳಿದರು.
- ‘ಪ್ರಾಜೆಕ್ಟ್ ಖುಷಿ’ ಯೋಜನೆ ಅಡಿ ಮೂರು ತಿಂಗಳು ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಯೊ ಸಿಎನ್‌ಜಿ ಘಟಕಕ್ಕೆ ಜಮೀನು
ಸಂದರ್ಭ: ಪ್ರತಿ ನಿತ್ಯ 300 ಟನ್ ಘನತ್ಯಾಜ್ಯವನ್ನು ಬಳಸಿಕೊಂಡು ಬಯೊ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಉತ್ಪಾದಿಸಲು 18 ಎಕರೆ ಭೂಮಿಯನ್ನು 25 ವರ್ಷಗಳಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.
- ಗೇಲ್ ಇಂಡಿಯಾ ಸಂಸ್ಥೆಯಿಂದ ನಿತ್ಯ 300 ಟನ್ ಘನತ್ಯಾಜ್ಯ ಸಿಎನ್‌ಜಿ ಉತ್ಪಾದನೆ.
- ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯ ಹರಳಗುಂಟೆ ಗ್ರಾಮದಲ್ಲಿ ಹಿಂದಿನ ಬಿಬಿಎಂಪಿ ಮಾಲೀಕತ್ವದಲ್ಲಿರುವ ಸರ್ವೆ ನಂ. 39, 45, 46ರ ಒಟ್ಟು ವಿಸ್ತೀರ್ಣ 29.29 ಎಕರೆಯಲ್ಲಿ 10 ಎಕರೆ ಜಮೀನು ಹಾಗೂ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಮಾಲೀಕತ್ವದಲ್ಲಿರುವ ಸರ್ವೆ ನಂ. 39, 40, 45, 46ರ ಎಂಟು ಎಕರೆ ಜಮೀನನ್ನು ಗೇಲ್ ಇಂಡಿಯಾ ಸಂಸ್ಥೆಗೆ ಗುತ್ತಿಗೆ ನೀಡಲು ಸಮ್ಮತಿಸಲಾಗಿದೆ.
- ಪ್ರತಿನಿತ್ಯ 300 ಟನ್ ಘನತ್ಯಾಜ್ಯ ವನ್ನು ಬಳಸಿಕೊಂಡು ಬಯೊ ಸಿಎನ್‌ಜಿ ಉತ್ಪಾದಿಸುವ ಘಟಕವನ್ನು ಗೇಲ್ ಸಂಸ್ಥೆ ಸ್ಥಾಪಿಸಲಿದೆ. ಮುಂದಿನ ದಿನಗಳಲ್ಲಿ ಈ ಘಟಕದ ಸಾಮರ್ಥ್ಯವನ್ನು 500 ಟನ್‌ಗೆ ವಿಸ್ತರಿಸಲೂ ಅನುಮೋದನೆ ನಿಡಲಾಗಿದೆ. ಕಂದಾಯ ಇಲಾಖೆ ಹಾಗೂ ಬಿಎಸ್‌ಡಬ್ಲ್ಯುಎಂಎಲ್ ಜಂಟಿ ಸರ್ವೆ ನಡೆಸಿ ಭೂಮಿಯನ್ನು ಹಸ್ತಾಂತರಿಸಬೇಕು. ಭವಿಷ್ಯದಲ್ಲಿ ಉದ್ಭವಿಸ ಬಹುದಾದ ಕಾರ್ಯಾಚರಣೆ ಯಲ್ಲಿನ ತೊಡಕುಗಳನ್ನು ಬಗೆಹರಿಸಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರನ್ನು ಪ್ರಾಧಿಕಾರವನ್ನಾಗಿಸಲು ಸಚಿವ ಸಂಪುಟ ನಿರ್ಧರಿಸಿದೆ.
- ಎರಡು ಆಸ್ಪತ್ರೆ: ಯಲಹಂಕದ ಬೆಳ್ಳಹಳ್ಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ 200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸುವ ಬದಲು, ತಲಾ 100 ಹಾಸಿಗೆಗಳ ಎರಡು ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಲು ಸಚಿವ ಸಂಪುಟ ನಿರ್ಣಯಿಸಿದೆ.
- ಯಲಹಂಕದ ಬೆಳ್ಳಹಳ್ಳಿ ಸರ್ವೆ ನಂ.55ರ ಐದು ಎಕರೆ ಜಮೀನಿನಲ್ಲಿ ₹50 ಕೋಟಿ ವೆಚ್ಚದಲ್ಲಿ ಹಾಗೂ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಪಶುಸಂಗೋಪನೆ ಮತ್ತು ಕೃಷಿ ಇಲಾಖೆಯ ಆವರಣದಲ್ಲಿ ₹50 ಕೋಟಿ ವೆಚ್ಚದಲ್ಲಿ ತಲಾ 100 ಹಾಸಿಗೆಗಳ ಸಾಮರ್ಥ್ಯದ ಅತ್ಯಾಧುನಿಕ ಆಸ್ಪತ್ರೆಗಳನ್ನು ನಿರ್ಮಿಸುವ ಕಾಮಗಾರಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ.
100 ಎಂಎಲ್‌ಡಿ ಎಸ್‌ಟಿಪಿ
- ಬೆಂಗಳೂರು ಜಲಮಂಡಳಿ ವತಿಯಿಂದ ಬೈರಮಂಗಲದ ಕೆರೆ ದಡದಲ್ಲಿ ಪ್ರತಿ ನಿತ್ಯ 100 ದಶಲಕ್ಷ ಲೀಟರ್ (ಎಂಎಲ್‌ಡಿ) ಸಾಮರ್ಥ್ಯದ ದ್ವಿತೀಯ ಹಂತದ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಹಾಗೂ 25 ಎಂಎಲ್‌ಡಿ ಸಾಮರ್ಥ್ಯದ ತೃತೀಯ ಹಂತದ ಎಸ್‌ಟಿಪಿಗಳ ಏಳು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅಂದಾಜು ₹391.82 ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
3ಡಿ ವಾಯು ಕಣ್ಗಾವಲು ರೇಡಾರ್ ನಿರ್ಮಾಣ
ಸಂದರ್ಭ: ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಎಂಜಿನಿಯರಿಂಗ್ ಕ್ಷೇತ್ರದ ಪ್ರಮುಖ ಸಂಸ್ಥೆ ಇಂದ್ರಾ ಸಹಯೋಗದಲ್ಲಿ ಸುಧಾರಿತ ನೌಕಾ ವಾಯು ಕಣ್ಗಾವಲು ರೇಡಾರ್ ಅನ್ನು ನಿರ್ಮಿಸಿದೆ.
- 3ಡಿ ವಾಯು ಕಣ್ಗಾವಲು ರೇಡಾರ್ (3ಡಿ–ಎಎಸ್‌ಆರ್) ತಯಾರಿಸುವ ಮೂಲಕ ಮುಂದಿನ ಪೀಳಿಗೆಯ ನೌಕಾ ಕಣ್ಗಾವಲು ರೇಡಾರ್ ವ್ಯವಸ್ಥೆಯನ್ನು ನಿರ್ಮಿಸುವ ಹಾಗೂ ಸಂಯೋಜಿಸುವ ಸಾಮರ್ಥ್ಯ ಪ್ರದರ್ಶಿಸಿದ ಭಾರತದ ಮೊದಲ ಕಂಪನಿಯಾಗಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆಯಲ್ಲಿ 3ಡಿ–ಎಎಸ್‌ಆರ್– ಲಾಂಜಾ–ಎನ್ ಅನ್ನು ಯಶಸ್ವಿಯಾಗಿ ನಿಯೋಜಿಸಲಾಗಿದೆ ಎಂದು ಟಿಎಎಸ್‌ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
- ಭಾರತದ ರಕ್ಷಣಾ ಸ್ವಾವಲಂಬನೆಯ ಅನ್ವೇಷಣೆಯಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ. ಯುದ್ಧನೌಕೆಯ ಎಲ್ಲ ವ್ಯವಸ್ಥೆಗಳೊಂದಿಗೆ ಹೊಂದಾಣಿಕೆ ಸಾಧಿಸುವಂತೆ ರೇಡಾರ್‌ಅನ್ನು ತಯಾರಿಸಲಾಗಿದೆ. ಕರ್ನಾಟಕದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನಲ್ಲಿ ರೇಡಾರ್‌ನ ಜೋಡಣೆ, ಸಂಯೋಜನೆ ಹಾಗೂ ಪರೀಕ್ಷಾ ಕಾರ್ಯವನ್ನು ನಡೆಸಲಾಗಿದೆ ಎಂದು ಹೇಳಿದೆ.
ಮಾರಿಷಸ್‌ಗೆ ₹6,000 ಕೋಟಿ ಪ್ಯಾಕೇಜ್
ಸಂದರ್ಭ: ಭಾರತವು ಮಾರಿಷಸ್‌ಗೆ ₹6,000 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಗುರುವಾರ ಘೋಷಿಸಿದೆ. ಕಡಲ ಭದ್ರತೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಏಳು ಒಪ್ಪಂದಗಳಿಗೆ ಸಹಿ ಹಾಕಿದೆ.
- ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗುಲಾಂ ಅವರೊಂದಿಗೆ ವಾರಾಣಸಿಯಲ್ಲಿ ಗುರುವಾರ ಮಾತುಕತೆ ನಡೆಸಿದ ಮೋದಿ, ‘ಭಾರತ ಮತ್ತು ಮಾರಿಷಸ್ ಎರಡು ದೇಶಗಳಾಗಿದ್ದರೂ ಅವುಗಳ ಕನಸು ಮತ್ತು ಗುರಿ ಒಂದೇ. ಭಾರತ ಮತ್ತು ಮಾರಿಷಸ್ ಪಾಲುದಾರ ರಾಷ್ಟ್ರಗಳಷ್ಟೇ ಅಲ್ಲ, ಒಂದೇ ಕುಟುಂಬದ ಸದಸ್ಯರಂತೆ. ಮಾರಿಷಸ್‌ನ ವಿಶೇಷ ಆರ್ಥಿಕ ವಲಯದ ಭದ್ರತೆ ಮತ್ತು ಕಡಲ ಸಾಮರ್ಥ್ಯವನ್ನು ಬಲಪಡಿಸಲು ಭಾರತ ಸಂಪೂರ್ಣ ಬದ್ಧವಾಗಿದೆ’ ಎಂದು ಅವರು ಹೇಳಿದರು.
- ಮಾರಿಷಸ್‌ನಲ್ಲಿ ಯುಪಿಐ ಮತ್ತು ರುಪೇ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ ಬಳಿಕ ಸ್ಥಳೀಯ ಕರೆನ್ಸಿಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಸುಗಮಗೊಳಿಸಲು ಭಾರತ ಮತ್ತು ಮಾರಿಷಸ್ ಕೆಲಸ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
- ವಿಶೇಷ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ, ಬಂದರು, ವಿಮಾನ ನಿಲ್ದಾಣ, ರಸ್ತೆಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಬಲಪಡಿಸಲು ಹಾಗೂ ಹೊಸ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸುವುದು ಸೇರಿದಂತೆ ಕನಿಷ್ಠ 10 ಯೋಜನೆಗಳನ್ನು ಕಾರ್ಯಗತಗೊಳಿಸಲು ಭಾರತ ಮಾರಿಷಸ್‌ಗೆ ಸಹಾಯ ಮಾಡಲಿದೆ.
- ಈ ಪ್ಯಾಕೇಜ್ ಕೇವಲ ಸಹಾಯವಲ್ಲ, ಬದಲಿಗೆ ಭವಿಷ್ಯದ ಹೂಡಿಕೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
- ಈ ಏಳು ಒಪ್ಪಂದಗಳು ಶಿಕ್ಷಣ, ವಿದ್ಯುತ್, ಜಲವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಅನುಕೂಲವಾಗಲಿವೆ.
ವಲಸೆ ಪ್ರಕ್ರಿಯೆ ತ್ವರಿತ ಕಾರ್ಯಕ್ರಮ ವಿಸ್ತರಣೆ
ಸಂದರ್ಭ: ವಲಸೆ ಅನುಮತಿಗಳನ್ನು ತ್ವರಿತವಾಗಿ ಒದಗಿಸುವ ಎಫ್‌ಟಿಐ–ಟಿಟಿಪಿ (ಫಾಸ್ಟ್‌ಟ್ರ್ಯಾಕ್ ವಲಸೆ–ವಿಶ್ವಸನೀಯ ಪ್ರಯಾಣಿಕ ಯೋಜನೆ) ಸೌಲಭ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೆಚ್ಚುವರಿಯಾಗಿ ಐದು ವಿಮಾನ ನಿಲ್ದಾಣಗಳಲ್ಲಿ ಚಾಲನೆ ನೀಡಿದರು.
- ಈ ಯೋಜನೆಯ ಅಡಿಯಲ್ಲಿ ಭಾರತದ ಪ್ರಜೆಗಳು ಹಾಗೂ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ಇರುವವರಿಗೆ ತ್ವರಿತವಾಗಿ ವಲಸೆ ಅನುಮತಿಗಳನ್ನು ನೀಡಲಾಗುತ್ತದೆ.
- ಈ ಯೋಜನೆಗೆ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024ರ ಜುಲೈನಲ್ಲಿ ಮೊದಲು ಚಾಲನೆ ನೀಡಲಾಗಿತ್ತು. ಈಗ ಇದನ್ನು ಲಖನೌ, ತಿರುವನಂತಪುರ, ತಿರುಚಿರಾಪಳ್ಳಿ, ಕೊಯಿಕ್ಕೋಡ್ ಮತ್ತು ಅಮೃತಸರ ವಿಮಾನ ನಿಲ್ದಾಣಗಳಿಗೆ ಕೂಡ ಗುರುವಾರ ವಿಸ್ತರಣೆ ಮಾಡಲಾಗಿದೆ.
- ‘ಈ ಯೋಜನೆಯು ವಲಸೆ ಪ್ರಕ್ರಿಯೆಗಳನ್ನು ಸರಳವಾಗಿಸುತ್ತದೆ, ತ್ವರಿತವಾಗಿಸುತ್ತದೆ’ ಎಂದು ಸಚಿವ ಶಾ ಅವರು ಹೇಳಿದ್ದಾರೆ. ಅರ್ಹ ಪ್ರಯಾಣಿಕರಿಗೆ ಇ–ಗೇಟ್ ಸೌಲಭ್ಯವನ್ನು ಬಳಸಲು ಹಾಗೂ ಎಂದಿನ ವಲಸೆ ಸರತಿ ಸಾಲನ್ನು ತಪ್ಪಿಸಿಹೋಗಲು ಅವಕಾಶ ನೀಡಲಾಗುತ್ತದೆ. ಈ ಸೌಲಭ್ಯ ಪಡೆಯಲು ಬಯಸುವ ಪ್ರಯಾಣಿಕರು ಆನ್‌ಲೈನ್ ಮೂಲಕ (www.ftittp.mha.gov.in) ಅರ್ಜಿ ಸಲ್ಲಿಸಿ, ತಮ್ಮ ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು. ಅಲ್ಲದೆ, ಇತರ ಕೆಲವು ಮಾಹಿತಿಯನ್ನೂ ಒದಗಿಸಬೇಕು. ಎಫ್‌ಟಿಐ ನೋಂದಣಿಯು ಗರಿಷ್ಠ ಐದು ವರ್ಷಗಳ ಅವಧಿಗೆ ಅಥವಾ ಪಾಸ್‌ಪೋರ್ಟ್‌ನ ಅವಧಿಯವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಚಾಲ್ತಿಯಲ್ಲಿ ಇರುತ್ತದೆ.
6,856 ಆದಿವಾಸಿ ಕುಟುಂಬಕ್ಕೆ ‘ಗೃಹಭಾಗ್ಯ’
ಸಂದರ್ಭ: ಅರಣ್ಯ ಮತ್ತು ಅರಣ್ಯಾಧಾರಿತ ಆದಿವಾಸಿ ಸಮುದಾಯಗಳ 6,856 ವಸತಿ ರಹಿತ ಕುಟುಂಬಗಳಿಗೆ ‘ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆ’ಯಡಿ ಮನೆಗಳನ್ನು ನಿರ್ಮಿಸಿಕೊಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
- ಇದಕ್ಕಾಗಿ ₹160 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಪ್ರತಿ ಮನೆಯನ್ನು ₹4.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು. ಸೋಲಿಗ, ಹಸಲ, ಗೌಡ್ಲು, ಸಿದ್ದಿ, ಕುಡಿಯ, ಮಲೆಕುಡಿಯ, ಕಾಡು ಕುರುಬ, ಇರುಳಿಗ, ಬೆಟ್ಟ ಕುರುಬ, ಯರವ, ಪಣಿಯನ್ ಮತ್ತಿತರ ಸಮುದಾಯಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಅವರು ಹೇಳಿದರು.
- ನಿಯಮ ಸರಳೀಕರಣ: ‘ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳ ತಿದ್ದುಪಡಿ’ಗೆ ಒಪ್ಪಿಗೆ ನೀಡಲಾಗಿದೆ.
- ಈ ತಿದ್ದುಪಡಿಯಿಂದಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ, ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುವಾಗ, ಕೆರೆಗಳಲ್ಲಿ ಹೂಳು ತೆಗೆಯುವಾಗ, ಕೃಷಿ ಮತ್ತು ಮೀನುಗಾರಿಕೆ ಹೊಂಡ ಗಳ ನಿರ್ಮಾಣ ವೇಳೆ ದೊರೆಯುವ ಮರಳು, ಮತ್ತಿತರ ಉಪಖನಿಜಗಳನ್ನು ಬಳಕೆ ಮಾಡಿದ ನಂತರ ಉಳಿದದ್ದನ್ನು ಸಾಗಣೆಗೆ ಅವಕಾಶ ನೀಡಲಾಗುವುದು. ರಾಜಧನ ಮತ್ತು ಇತರ ಪಾವತಿಗಳಲ್ಲಿ ಸೋರಿಕೆ ಆಗುವುದನ್ನು ತಡೆಯಲು ನಿಯಮ ಸರಳೀಕರಣ ಮಾಡಲಾಗಿದೆ.
ಪ್ರಮುಖ ತೀರ್ಮಾನಗಳು:
- lಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ 2.0 (ಕೆ.ಜಿಐಎಸ್ 2.0) ಅನ್ನು ಅನುಷ್ಠಾನಗೊಳಿಸಲು ₹150 ಕೋಟಿ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ವತಿಯಿಂದ ಇದನ್ನು ಅನುಷ್ಠಾನಗೊಳಿಸಲಾಗುವುದು. ದತ್ತಾಂಶ ಸಂಗ್ರಹ ಸ್ಥಳ, ಹೋಸ್ಟಿಂಗ್ ಮೂಲ ಸೌಕರ್ಯ ಮತ್ತು ಅದರ ಭದ್ರತೆ ಕೈಗೊಳ್ಳಲಾಗುವುದು. ಡ್ರೋನ್ ಮತ್ತು ಉಪಗ್ರಹ ಸೆರೆ ಹಿಡಿದ ಚಿತ್ರಗಳನ್ನು ಸ್ವಯಂ ಚಾಲಿತವಾಗಿ ಅಳವಡಿಸಿಕೊಳ್ಳುತ್ತದೆ.
- lಬಯೋ ಡೀಸೆಲ್(ಬಿ–100) ಅನ್ನು ಹೈ ಸ್ಪೀಡ್ ಡೀಸೆಲ್ನೊಂದಿಗೆ ಮಿಶ್ರಣ ಮಾಡುವ (ಪರವಾನಗಿ) ಆದೇಶ 2025 ಕರಡು ಅಧಿಸೂಚನೆಗೆ ಅನುಮೋದನೆ.
- lಪಿಎಂ ಕುಸುಮ್–ಬಿ ಯೋಜನೆಯಡಿ ನೆಟ್‌ವರ್ಕ್ ಗ್ರಿಡ್‌ನಿಂದ ಎಷ್ಟೇ ದೂರದಲ್ಲಿದ್ದರೂ ಸೋಲಾರ್ ಪಂಪ್‌ಸೆಟ್‌ಗಳಿಗೆ ಅದರ ವೆಚ್ಚದ ಶೇ 50 ರಷ್ಟು ಮೊತ್ತವನ್ನು ಸಹಾಯಧನ ನೀಡಲು ತೀರ್ಮಾನ. ಇದರಿಂದ ರೈತರ ಬೆಳೆಗಳಿಗೆ ಹಗಲು ನೀರು ನೀಡಬೇಕು ಎಂಬ ಬೇಡಿಕೆ ಈಡೇರಲಿದೆ.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್
ಸಂದರ್ಭ: ಡಿಜಿ– ಕಂದಾಯ ಯೋಜನೆಯಡಿ ಕಂದಾಯ ಇಲಾಖೆಯ ಗ್ರಾಮ ಅಧಿಕಾರಿಗಳು, ಕಂದಾಯ ಆಡಳಿತ ಅಧಿಕಾರಿಗಳಿಗೆ 3500 ಕ್ರೋಮ್‌ಬುಕ್ ಖರೀದಿಸಿ, ವಿತರಿಸಲು ತೀರ್ಮಾನಿಸಲಾಗಿದೆ.
- ಇದರ ಒಟ್ಟು ವೆಚ್ಚ ₹19.25 ಕೋಟಿ. ಪ್ರತಿ ಕ್ರೋಮ್‌ಬುಕ್‌ನ ಬೆಲೆ ₹55,000 ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು
- ಹಿರಿಯರಿಗೆ ‘ವಯೋ ವಂದನಾ’: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 70 ವರ್ಷ ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ ಹಿರಿಯರಿಗೆ (ಇಎಸ್‌ಐಎಸ್ ಫಲಾನುಭವಿಗಳು) ಆರೋಗ್ಯ ಸೇವೆಗಳ ಪ್ರಯೋಜನ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ.
- ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಮಾರ್ಗಸೂಚಿಗಳ ಪ್ರಕಾರ ‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳು, ಅಂಗನವಾಡಿಗೆ ದಾಖಲಾಗಿರುವ ಮಕ್ಕಳ ಕುಟುಂಬದ ಹಿರಿಯರಿಗೆ ಈ ಸೇವೆ ಲಭ್ಯವಾಗಲಿದೆ ಎಂದು ಪಾಟೀಲ ಹೇಳಿದರು.
ಇವಿಎಂ ಬದಲು ಮತಪತ್ರ ಸುಗ್ರೀವಾಜ್ಞೆ ಇಲ್ಲ
- ಜಿಬಿಎ ಮತ್ತು ಇತರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ಮತ ಪತ್ರಬಳಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸದಿರಲು ಸರ್ಕಾರ ತೀರ್ಮಾನಿಸಿದೆ.
- ತಿದ್ದುಪಡಿ ಮಾಡಿದ ಬಳಿಕ ಸುಗ್ರೀವಾಜ್ಞೆ ಹೊರಡಿಸಲು ಕಳೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಇಂದು ಈ ವಿಷಯ ಚರ್ಚೆಗೆ ಬರಲಿಲ್ಲ. ‘ಕಾನೂನಿಗೆ ತಿದ್ದುಪಡಿ ಮಾಡಬೇಕು. ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ಇವಿಎಂ ಅಥವಾ ಮತಪತ್ರ ಎರಡರಲ್ಲಿ ಯಾವುದಾದರೂ ಒಂದನ್ನು ಬಳಸಬಹುದು ಎಂಬ ಅಂಶ ಸುಪ್ರೀಂಕೋರ್ಟ್ನ ಒಂದು ತೀರ್ಪಿನಲ್ಲಿದೆ. ಹೀಗಾಗಿ ಸುಗ್ರೀವಾಜ್ಞೆಯ ಅವಶ್ಯ ಬೀಳದು ಎಂಬ ಚರ್ಚೆ ನಡೆದಿದೆ’ ಎಂದು ಮೂಲಗಳು ಹೇಳಿವೆ.
ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಸಂದರ್ಭ: ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಅವರು ಅಂಕಿತ ಹಾಕುವುದಕ್ಕೆ ಕಾಲಮಿತಿ ವಿಧಿಸಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಳಿರುವ ಪ್ರಶ್ನೆಗಳ ಕುರಿತು 10 ದಿನಗಳವರೆಗೆ ವಾದ–ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿತು.
- ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿ ಗಳಾದ ಸುರ್ಯಕಾಂತ್, ವಿಕ್ರಮ್ ನಾಥ್, ಪಿ.ಎಸ್.ನರಸಿಂಹ ಮತ್ತು ಎ.ಎಸ್.ಚಂದೂರ್ಕರ್ ಅವರನ್ನು ಒಳಗೊಂಡ ಸಂವಿಧಾನ ಪೀಠ ಈ ಕುರಿತು ಆಗಸ್ಟ್ 19ರಿಂದ ವಿಚಾರಣೆ ಪ್ರಾರಂಭಿಸಿತ್ತು.
- ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ವಾದದ ಮುಕ್ತಾಯದೊಂದಿಗೆ ಪೀಠವು ತೀರ್ಪನ್ನು ಕಾಯ್ದಿರಿಸಿತು. ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೂ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು.
- ರಾಷ್ಟ್ರಪತಿ ಅವರು ಎತ್ತಿದ್ದ ಪ್ರಶ್ನೆಗಳನ್ನು ಆಕ್ಷೇಪಿಸಿದ ವಿರೋಧ ಪಕ್ಷಗಳ ಆಡಳಿತವಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ, ತೆಲಂಗಾಣ, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳ ಪರ ವಕೀಲರು ವಿರೋಧಗಳನ್ನು ದಾಖಲಿಸುವ ಮೂಲಕ ತಮ್ಮ ವಾದ ಅಂತಿಮಗೊಳಿಸಿದರು.
- ಮಸೂದೆಗಳಿಗೆ ಅಂಕಿತ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಪ್ರಶ್ನಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಏಪ್ರಿಲ್ 8ರಂದು ತೀರ್ಪು ನೀಡಿತ್ತು. ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ರಾಷ್ಟ್ರಪತಿಯ ವರಿಗೆ ಕಾಲಮಿತಿ ನಿಗದಿ ಮಾಡಿತ್ತು. ಇದರ ಬೆನ್ನಲ್ಲೇ, ರಾಷ್ಟ್ರಪತಿಯ ವರು ಸುಪ್ರೀಂ ಕೋರ್ಟ್‌ಗೆ ಐದು ಪುಟಗಳ ಪತ್ರ ಬರೆದು, 14 ಪ್ರಶ್ನೆಗಳನ್ನು ಎತ್ತಿದ್ದರು.
ಸೋನಿಯಾ ವಿರುದ್ಧದ ಅರ್ಜಿ ವಜಾ
- ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತದ ಪೌರತ್ವ (1983) ಪಡೆಯುವುದಕ್ಕೂ ಮೂರು ವರ್ಷಗಳ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದರು ಎಂದು ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
- ಪೌರತ್ವದ ವಿಷಯವು ಕೇಂದ್ರ ಸರ್ಕಾರದ ವಿಶೇಷ, ಸಾಂವಿಧಾನಿಕ ಮತ್ತು ಶಾಸನಬದ್ಧ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಅನಗತ್ಯವಾಗಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ ನ್ಯಾಯಾಧೀಶರು ಅರ್ಜಿಯನ್ನು ವಜಾಗೊಳಿಸಿದರು.
- ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪವನ್‌ಕುಮಾರ್ ಹೆಸರು ಶಿಫಾರಸು
ಸಂದರ್ಭ: ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯನ್ನಾಗಿ ನೇಮಕ ಮಾಡುವಂತೆ ಕರ್ನಾಟಕ ಹೈಕೋರ್ಟ್‌ನ ನ್ಯಾಯ ಮೂರ್ತಿ ಪವನ್‌ಕುಮಾರ್ ಬಿ.ಭಜಂತ್ರಿ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದೆ.
- ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್‌ನಾಥ್ ಅವರ ನ್ನೊಳಗೊಂಡ ಕೊಲಿಜಿಯಂ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.
- ಇದಲ್ಲದೆ, ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯಾಗಿ ಕಲ್ಕತ್ತ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮೆನ್ ಸೇನ್ ಹಾಗೂ ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ಸುಂದರ್ ಅವರ ಹೆಸರುಗಳನ್ನು ಶಿಫಾರಸು ಮಾಡಿದೆ.
- 2015ರ ಜನವರಿ 2ರಂದು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2015ರಲ್ಲಿ ಪಂಜಾಬ್–ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದ ಅವರು, ನಂತರದಲ್ಲಿ ಪಟ್ನಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ 2021ರ ಅ.20ರಂದು ವರ್ಗಾವಣೆಗೊಂಡಿದ್ದರು. 2025ರ ಅಕ್ಟೋಬರ್ 22ರಂದು ನಿವೃತ್ತಿ ಹೊಂದಲಿದ್ದಾರೆ.
- ‘ಸದನ ಇರುವುದು ಜನರ ಒಳಿತಿಗಾಗಿ’
ಸಂದರ್ಭ: ಸಂಸತ್ತು ಅಥವಾ ವಿಧಾನ ಮಂಡಲದ ಸದನಗಳು ಇರುವುದು ಜನರ ಸಮಸ್ಯೆ–ಆಗುಹೋಗುಗಳ ಚರ್ಚೆಗೆ. ಅದನ್ನು ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ಬಳಸಿಕೊಳ್ಳಬಾರದು ಎಂಬ ಅಭಿಪ್ರಾಯಕ್ಕೆ ಕಾಮನ್‌ವೆಲ್ತ್ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದ ವೇದಿಕೆ ಸಾಕ್ಷಿಯಾಯಿತು.
- ನಗರದಲ್ಲಿ ಇದೇ 12 ಮತ್ತು 13ರಂದು ನಡೆಯಲಿರುವ ಈ ಸಮ್ಮೇಳನದಲ್ಲಿ ಲೋಕಸಭೆಯ ಸ್ಪೀಕರ್ ಮತ್ತು ಉಪಸ್ಪೀಕರ್, ಎಲ್ಲ ರಾಜ್ಯಗಳ ವಿಧಾನಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ವಿಧಾನ ಪರಿಷತ್ತಿನ ಸಭಾಪತಿ, ಉಪಸಭಾಪತಿ ಭಾಗಿಯಾಗಲಿದ್ದಾರೆ.
- ದೇಶದ ಎಲ್ಲ ರಾಜ್ಯಗಳಿಂದ ಬಂದಿದ್ದ ಗಣ್ಯರನ್ನು ಬರಮಾಡಿಕೊಂಡ ನಂತರ ಸಾಕ್ಷ್ಯಚಿತ್ರವೊಂದರ ಮೂಲಕ ಅವರೆಲ್ಲರಿಗೆ ಕರ್ನಾಟಕ ಸಂಸ್ಕೃತಿ–ಪರಂಪರೆ ಮತ್ತು ಹೆಗ್ಗಳಿಕೆಯನ್ನು ಪರಿಚಯಿಸಿಕೊಡಲಾಯಿತು. ದೇಶದ ಮೊದಲ ಸಂಸತ್ತು ‘ಅನುಭವ ಮಂಟಪ’. ಭಾರತದ ಪ್ರಜಾಪ್ರಭುತ್ವದ ತಳಹದಿಯನ್ನು ಕರ್ನಾಟಕದ ವಚನ ಚಳವಳಿಯಿಂದಲೇ ಕಾಣಬಹುದು ಎಂದು ಸಾಕ್ಷ್ಯಚಿತ್ರವು ವಿವರಿಸಿತು.
- ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ‘ಸದನಗಳಲ್ಲಿ ನಡೆಯುವ ಕಲಾಪವನ್ನು ಇನ್ನಷ್ಟು ಉತ್ತಮಗೊಳಿಸುವ ಹಾದಿಗಳನ್ನು ಈ ಸಮ್ಮೇಳನದಲ್ಲಿ ಚರ್ಚಿಸುತ್ತೇವೆ’ ಎಂದರು.
- ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ‘ಸದನಗಳು ಇರುವುದು ಚರ್ಚೆ ಮತ್ತು ಸಂವಾದದ ಮೂಲಕ ಜನರ ಕಷ್ಟ, ಸಮಸ್ಯೆ, ಆಗುಹೋಗುಗಳ ಬಗ್ಗೆ ಗಮನಹರಿಸಲು. ಜನಪ್ರತಿನಿಧಿಗಳು ಇದೇ ಹಾದಿಯಲ್ಲಿ ನಡೆಯುವಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಸಭಾಧ್ಯಕ್ಷರ ಮೇಲಿದೆ’ ಎಂದರು.
- ‘ನಮ್ಮ ಸಂವಿಧಾನವನ್ನು ಅಂಗೀಕರಿಸಿಕೊಳ್ಳುವ ಮುನ್ನ ಸುದೀರ್ಘವಾದ ಚರ್ಚೆ ನಡೆದಿದೆ. ವಾದ–ಪ್ರತಿವಾದಗಳು, ಸಮ್ಮತಿ–ಅಸಮ್ಮತಿಗಳು ಹಾಗೂ ಅವೆಲ್ಲವನ್ನು ಒಳಗೊಂಡ ಸಮನ್ವಯವಾದದ ರೂಪವಾಗಿ ಸಂವಿಧಾನ ರೂಪುಗೊಂಡಿದೆ. ಸದನ–ಕಲಾಪವನ್ನು ಇನ್ನಷ್ಟು ಉತ್ತಮವಾಗಿ ಹೇಗೆ ನಡೆಸಬಹುದು ಎಂಬುದರ ಸಾಧ್ಯತೆಗಳನ್ನು ಈ ಎರಡು ದಿನಗಳ ಸಮ್ಮೇಳನದಲ್ಲಿ ಪರಿಶೀಲಿಸೋಣ’ ಎಂದು ಕರೆ ನೀಡಿದರು.
- ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ಬಸವಣ್ಣನ ಕೊಡುಗೆಯನ್ನು ರಾಜ್ಯಸಭೆಯ ಉಪಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಪ್ರಸ್ತಾಪಿಸಿದರೆ, ವಿಧಾನ ಪರಿಷತ್ತಿನ ಮಹತ್ವವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ವಿವರಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು.