Fri. Oct 10th, 2025

  • ಮತಾಂತರಗೊಂಡವರು ಕ್ರೈಸ್ತರೇ

ಸಂದರ್ಭ: ಕುರುಬ, ಬ್ರಾಹ್ಮಣ, ಲಿಂಗಾಯತ, ದಲಿತ, ವೈಶ್ಯ ಮತ್ತು ಒಕ್ಕಲಿಗರಲ್ಲಿ ಯಾರೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ಅವರೆ ಲ್ಲರೂ ಕ್ರೈಸ್ತರೇ ಆಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮೀಕ್ಷಾ ಕೈಪಿಡಿ ಬಿಡುಗಡೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
  • ‘ಮತಾಂತರಗೊಂಡವ‌ರ ಧರ್ಮ ವನ್ನು ಉಲ್ಲೇಖಿಸುವಾಗ ಅವರ ಮೂಲ ಜಾತಿಯ ಹೆಸರು ಸೇರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆಯಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಮತಾಂತರ ಗೊಂಡವರು ಕ್ರೈಸ್ತರೇ ಆಗುತ್ತಾರೆ’ ಎಂದರು.
  • ‘ಸಮೀಕ್ಷೆಗೆ ಬಂದಾಗ ಏನು ಬರೆಯುತ್ತಾರೋ ಬರೆಯಲಿ. ಮತಾಂತರ ಗೊಂಡವರು ಅಥವಾ ಜಾತಿಧರ್ಮದ ಹೆಸರಿನ ಗೊಂದಲ ಇದ್ದರೆ ಅದನ್ನು ಹಿಂದುಳಿದ ವರ್ಗಗಳ ಆಯೋಗ ವಿಶ್ಲೇಷಣೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಮಾಹಿತಿ ಮಾತ್ರ ಸಂಗ್ರಹಿಸುತ್ತಿದ್ದೇವೆ’ ಎಂದು ಹೇಳಿದರು.
  • ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿದ್ದ ಜಾತಿ ಪಟ್ಟಿಯಲ್ಲಿ ಕುರುಬ ಕ್ರಿಶ್ಚಿಯನ್‌. ಕುಂಬಾರ ಕ್ರಿಶ್ಚಿಯನ್‌, ಮಡಿವಾಳ ಕ್ರಿಶ್ಚಿಯನ್‌, ನೇಕಾರ ಕ್ರಿಶ್ಚಿಯನ್ಸೇರಿ 100ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ಧರ್ಮದ ಹೆಸರಿನಲ್ಲಿ ಸೇರಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
  • ಸರ್ಕಾರ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಕ್ಯಾಥೋಲಿಕ್‌, ಪ್ರೊಟೆಸ್ಟಂಟ್‌, ಪೆಂಟಕೋಸ್ಟ್‌ ಇತ್ಯಾದಿ ಮೂಲ ಕ್ರೈಸ್ತ ಪಂಗಡಗಳ ಹೆಸರೇ ಇಲ್ಲ. ಅವರಿಗೆ ಕೇವಲ ಕ್ರೈಸ್ತರೆಂದು ಗುರುತಿಸಿ ಕೊಳ್ಳಲು ಅವಕಾಶ ನೀಡಿದೆ’ ಎಂದು ಬಿಜೆಪಿ ನಾಯಕರು ದೂರಿದ್ದರು.

ವೀರಶೈವ– ಲಿಂಗಾಯತ.. ಏನಾದರೂ ಬರೆಯಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

  • ‘ವೀರಶೈವ– ಲಿಂಗಾಯತರು ಧರ್ಮ ಮತ್ತು ಜಾತಿಯನ್ನು ತಮಗೆ ಹೇಗೆ ಬೇಕೋ ಹಾಗೆ ಬರೆಸಿಕೊಳ್ಳಲಿ’ ಎಂದು ಸಿದ್ದರಾಮಯ್ಯ ಹೇಳಿದರು.
  • ‘ವೀರಶೈವ ಲಿಂಗಾಯತರು ಹಿಂದೂ ಧರ್ಮ ಎಂಬುದನ್ನು ಬಳಸದೇ ಲಿಂಗಾಯತ ಧರ್ಮ ಎಂದೇ ನಮೂದಿಸಬೇಕು ಎಂದು ಕೆಲವರು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಧರ್ಮದ ಪಟ್ಟಿಯಲ್ಲಿ ಲಿಂಗಾಯತ ಧರ್ಮದ ಉಲ್ಲೇಖ ಇಲ್ಲ. ಹೀಗಾಗಿ ಏನೆಂದು ಬರೆಸಬೇಕೆಂಬ ಗೊಂದಲಕ್ಕೆ ಆ ಸಮುದಾಯದ ಜನ ಸಿಲುಕಿದ್ದಾರೆ’ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
  • ‘ಅವರು ‘ವೀರಶೈವ–ಲಿಂಗಾಯತ’ ಧರ್ಮ ಅಂತ ಬರೆಯಿಸಲಿ, ‘ವೀರಶೈವ’ ಧರ್ಮ ಅಂತಾನೆ ಬರೆಯಿಸಲಿ, ಕೇವಲ ವೀರಶೈವ ಅಥವಾ ಲಿಂಗಾಯತ ಅಂತ ಬೇಕಾದರೂ ಬರೆಯಿಸಿಕೊಳ್ಳಲಿ. ನಮಗೆ ಬೇಕಾಗಿರುವುದು ಅವರ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಮಾತ್ರ. ಏನು ಬೇಕಾದರೂ ಬರೆಯಿಸಿಕೊಳ್ಳಲಿ’ ಎಂದು ಹೇಳಿದರು.
  • ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತ ಧರ್ಮ ಎಂದೇ ಬರೆಯಿಸಬೇಕು ಎಂದು ಆ ಸಮುದಾಯದ ಕೆಲವು ಮಠಾಧೀಶರು ಮತ್ತು ಪ್ರಮುಖರು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಸಮೀಕ್ಷೆಯ ಕೈಪಿಡಿಯಲ್ಲಿ ಹಿಂದೂ, ಇಸ್ಲಾಂ, ಕ್ರೈಸ್ತ, ಜೈನ, ಸಿಖ್, ಬೌದ್ಧ, ಪಾರ್ಸಿ, ನಾಸ್ತಿಕ, ಗೊತ್ತಿಲ್ಲ, ತಿಳಿಸಲು ನಿರಾಕರಿಸುತ್ತಾರೆ ಮತ್ತು ಇತರೆ ಎಂದು ಇದೆ. ‘ಪ್ರಮುಖ 7 ಧರ್ಮಗಳ ಹೊರತಾಗಿ ಇತರೆ ಧರ್ಮಗಳಿದ್ದಲ್ಲಿ, ಅವುಗಳನ್ನು ಇತರೆ ವಿಭಾಗದಲ್ಲಿ ಕೋಡ್ಸಂಖ್ಯೆ 11ರಲ್ಲಿ ನಮೂದಿಸಬಹುದುಎಂದು ಸೂಚಿಸಲಾಗಿದೆ.
  • ಡಿಸೆಂಬರ್ನಲ್ಲಿ ಜಾತಿವಾರು ಸಮೀಕ್ಷೆ ವರದಿ ಸಲ್ಲಿಕೆ: ಸಿ.ಎಂ

ಸಂದರ್ಭ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇದೇ 22ರಂದು ಆರಂಭಗೊಂಡು ಅ.7ರವರೆಗೆ ನಡೆಯಲಿದ್ದು, ಡಿಸೆಂಬರ್‌ನಲ್ಲಿ ವರದಿ ಸಲ್ಲಿಕೆಯಾಗಲಿದೆ.

  • ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಒಳಗೊಂಡ ಪ್ರಶ್ನಾವಳಿ ಇರುತ್ತದೆ. ಅದರಲ್ಲಿ ಪ್ರತಿ ಸದಸ್ಯರ ಧರ್ಮ, ಜಾತಿ, ಉಪಜಾತಿ, ವಿದ್ಯಾರ್ಹತೆ, ಕುಲಕಸುಬು ಕೌಶಲ್ಯ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳನ್ನು ಸಂಗ್ರಹಿಸ ಲಾಗುವುದು. ಈಗಾಗಲೇ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವ ಕೆಲಸ ನಡೆದಿದೆ. ರಾಜ್ಯದ 2 ಕೋಟಿ ಮನೆಗಳ ಪೈಕಿ ಈವರೆಗೆ 1.55 ಕೋಟಿ ಮನೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ.
  • ಶಿಕ್ಷಕರು ಮನೆಗೆ ಸಮೀಕ್ಷೆ ಬರುವುದಕ್ಕೆ 3 ದಿನಗಳ ಮೊದಲೇ ಆಶಾ ಕಾರ್ಯಕರ್ತೆಯರು ಪ್ರಶ್ನಾವಳಿಗಳನ್ನು ವಿತರಿಸುತ್ತಾರೆ. ಇದರಿಂದ ಮನೆಯ ಸದಸ್ಯರು ಎಲ್ಲ ಪ್ರಶ್ನೆಗಳನ್ನು ಓದಿಕೊಂಡು ಉತ್ತರಿಸಲು ಸಹಾಯಕವಾಗುತ್ತದೆ. ಪ್ರಶ್ನೆಗಳನ್ನು ಓದಲು ಬಾರದಿದ್ದವರು ಬೇರೆಯವರ ಸಹಾಯ ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು. ಅದಕ್ಕಾಗಿ ಪ್ರತಿಯೊಂದು ಕುಟುಂಬಗಳೂ ತಯಾರಿರಬೇಕು. ಆಶಾ ಕಾರ್ಯಕರ್ತೆಯರು ಪ್ರಶ್ನಾವಳಿ ವಿತರಿಸುತ್ತಾರೆ.
  • ಒಂದು ವೇಳೆ ಯಾರಿಗಾದರೂ ಸಮೀಕ್ಷೆಯಲ್ಲಿ ಭಾಗವಹಿಸಲು ಆಗದಿದ್ದರೆ ಅಥವಾ ಮನೆಯಲ್ಲಿ ಇಲ್ಲದೇ ಇದ್ದರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಮತ್ತು ವೈಬ್‌ಸೈಟ್‌ನಲ್ಲಿ ಸಮೀಕ್ಷೆಯ ಮೂಲಕ ಪ್ರಶ್ನೆಗಳಿಗೆ ಉತ್ತರ ನೀಡಿ ಸಮೀಕ್ಷೆಯಲ್ಲಿ ಭಾಗವಹಿಸಬಹುದು.

ಸಮೀಕ್ಷೆಗೆ ವಿನೂತನ ವಿಧಾನ

ಈ ಸಮೀಕ್ಷೆಯಲ್ಲಿ ಎಲ್ಲಾ ಕುಟುಂಬಗಳು ಪೂರ್ಣವಾಗಿ ಒಳ್ಳಗೊಳ್ಳಬೇಕು ಎಂಬ ಕಾರಣಕ್ಕಾಗಿ ವಿನೂತನ ಸಮೀಕ್ಷಾ ವಿಧಾನ ಅನುಸರಿಸಲಾಗುತ್ತಿದೆ.

  • ರಾಜ್ಯದ ಬಹುಪಾಲು ಮನೆಗಳು ವಸತಿ ಉದ್ದೇಶದ ವಿದ್ಯುತ್ ಸಂಪರ್ಕ ಹೊಂದಿದ್ದು, ಅವುಗಳಿಗೆ  ಆರ್‌.ಆರ್‌ ಸಂಖ್ಯೆ ಹೊಂದಿರುವ ಎಲೆಕ್ಟ್ರಿಕ್‌ ಮೀಟರ್‌ಗಳು ಇರುತ್ತವೆ. ಈ ಮಾಹಿತಿ ಆಧರಿಸಿ ಮನೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಹೀಗಾಗಿ ಎಲ್ಲ ಮನೆಗಳು ಮತ್ತು ಕುಟುಂಬಗಳು ಈ ಜಾಲದಲ್ಲಿ ಬಂದಿವೆ.
  •  ವಿದ್ಯುತ್ ಸಂಪರ್ಕ ಹೊಂದಿರದ ಮನೆಗಳನ್ನೂ ಪ್ರತ್ಯೇಕ ವಿಧಾನದಿಂದ ಸಮೀಕ್ಷೆಗೆ ಒಳಪಡಿಸಲಾಗುವುದು. ವಿದ್ಯುತ್‌ ಸಂಪರ್ಕವಿಲ್ಲದ ಮನೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳನ್ನು ಬಳಸಿ ಅಂತಹ ಮನೆಗಳನ್ನು ಜಿಯೋಟ್ಯಾಗ್‌ ಮಾಡಿ, ಸಮೀಕ್ಷಾ ಬ್ಲಾಕ್‌ಗಳನ್ನು ರಚಿಸಲಾಗಿದೆ. ಈ ಮೂಲಕ 2 ಕೋಟಿ ಕುಟುಂಬಗಳ 7 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳ‍ಪಡಿಸಲಾಗುವುದು.

‘ಗ್ಯಾರಂಟಿ’ ಮಾಹಿತಿಯೂ ಸಂಗ್ರಹ

  • ಯಾವುದೇ ಕುಟುಂಬ ಸರ್ಕಾರದಿಂದ ಪಡೆದ ಸವಲತ್ತು, ಎಂದರೆ ಗಂಗಾ ಕಲ್ಯಾಣ, ಭೂಒಡೆತನ, ಸ್ವಾವಲಂಬಿ ಸಾರಥಿ, ಪ್ರೇರಣಾ ಯೋಜನೆ(ಕಿರುಸಾಲ), ಸ್ವಯಂ ಉದ್ಯೋಗ(ನೇರ ಸಾಲ), ಕೈಗಾರಿಕಾ ನಿವೇಶನ, ಕೈಗಾರಿಕೆ ಸ್ಥಾಪಿಸಲು ನೆರವು. ಕೃಷಿ ಸಂಬಂಧಿತ ನೆರವು, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗಲ ವಿಕಲ ವೇತನದ ಜತೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮಾಹಿತಿ ನೀಡಬೇಕು. ಇದರಿಂದ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುತ್ತಿದೆಯೆ ಎಂಬ ಮಾಹಿತಿ ಸಿಗುತ್ತದೆ.
  • ಚಲನಚಿತ್ರಗಳ ಟಿಕೆಟ್ ಗರಿಷ್ಠ ದರ ₹200

ಸಂದರ್ಭ: ರಾಜ್ಯದಲ್ಲಿ ಮಲ್ಟಿ ಪ್ಲೆಕ್ಸ್‌ಗಳೂ ಸೇರಿ ಎಲ್ಲ ಚಿತ್ರ ಮಂದಿರಗಳಲ್ಲಿ ಚಲನಚಿತ್ರಗಳ ಟಿಕೆಟ್‌ ದರವನ್ನು (ತೆರಿಗೆ ಬಿಟ್ಟು) ಗರಿಷ್ಠ ₹200ಕ್ಕೆ ನಿಗದಿಪಡಿಸಿ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

  • ಈ ನಿಯಮ ಜಾರಿಗೆ ಬಂದಿದ್ದು, ಕನ್ನಡ ಸೇರಿ ಎಲ್ಲ ಭಾಷೆಗಳ ಚಲನಚಿತ್ರಗಳಿಗೂ ಈ ಆದೇಶ ಅನ್ವಯವಾಗಲಿದೆ. ಆದರೆ, 75 ಅಥವಾ ಅದಕ್ಕಿಂತ ಕಡಿಮೆ ಆಸನ ಹೊಂದಿರುವ ಪ್ರೀಮಿಯಂ ಸೌಲಭ್ಯ ಗಳನ್ನು ಒಳಗೊಂಡ ಮಲ್ಟಿಪ್ಲೆಕ್ಸ್‌ಗಳಿಗೆ ಈ ನಿಯಮದಿಂದ ವಿನಾಯ್ತಿ ನೀಡಲಾಗಿದೆ.
  • ಯಾವುದೇ ಭಾಷೆಯ ಚಿತ್ರವಾದರೂ ಸರಿ ಗರಿಷ್ಠ ದರ ₹200 ದಾಟುವಂತಿಲ್ಲ. ಟಿಕೆಟ್ಮೇಲೆ ಶೇ 18ರಷ್ಟು ತೆರಿಗೆ ಇರುತ್ತದೆ.
  • ಚಿತ್ರ ಮಂದಿರದಲ್ಲಿ ಎರಡು ಅಥವಾ ಮೂರು ಕ್ಲಾಸ್‌ಗಳ ಆಸನ ವ್ಯವಸ್ಥೆ ಇದ್ದರೆ ಅವುಗಳ ಬೆಲೆಯೂ ₹150ಕ್ಕಿಂತ ಕಡಿಮೆ ಆಗಲಿದೆ.
  • ಮಲ್ಟಿಪ್ಲೆಕ್ಸ್‌ಗಳಲ್ಲಿ ಪರಭಾಷಾ ಚಿತ್ರಗಳ ಟಿಕೆಟ್‌ ದರದ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ಕೆಲವು ಚಿತ್ರಗಳ ಟಿಕೆಟ್‌ ದರ ₹2,000–₹3000 ದಾಟುತ್ತಿತ್ತು.
  • ತಮಿಳುನಾಡು ಮಾದರಿಯಲ್ಲೇ ಕರ್ನಾಟಕದಲ್ಲೂ ಟಿಕೆಟ್ದರವನ್ನು ನಿಗದಿ ಮಾಡಬೇಕು ಎಂಬುದು ಕನ್ನಡ ಚಲನಚಿತ್ರ ರಂಗದ ಬೇಡಿಕೆಯಾಗಿತ್ತು.
  • ರಾಜೇಂದ್ರ ಸಿಂಗ್ ಬಾಬು ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ, ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂದಿನ ಅಧ್ಯಕ್ಷ ಸಾ.ರಾ.ಗೋವಿಂದು ಕೈಜೋಡಿಸಿದ್ದರು.
  • ‘ತಮಿಳುನಾಡು, ಆಂಧ್ರದಲ್ಲೂ ಟಿಕೆಟ್‌ ದರ ಕಡಿಮೆ ಇದೆ. ಅಲ್ಲಿ ತೆರಿಗೆಯೂ ಸೇರಿ ಟಿಕೆಟ್‌ ದರ ₹150ರಿಂದ ₹200ರ ಒಳಗೆ ಇದೆ. ಕರ್ನಾಟಕದಲ್ಲಿ ಮಾತ್ರ ಅತ್ಯಂತ ದುಬಾರಿ ಆಗಿತ್ತು. ಇದರಿಂದ ಕನ್ನಡ ಚಿತ್ರಗಳ ಮೇಲೂ ಪರಿಣಾಮ ಬೀರಿತ್ತು. ಹೊಸ ಅಧಿಸೂಚನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದರು.
  • ಶರಾವತಿ ಪಂಪ್ಡ್ ಸ್ಟೋರೇಜ್: 120 ಎಕರೆಯಷ್ಟೇ ಬಳಕೆ

ಸಂದರ್ಭ: ‘ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್ ಜಲವಿದ್ಯುತ್ ಯೋಜನೆಗೆ 120 ಎಕರೆಯಷ್ಟೇ ಬಳಕೆಯಾಗಲಿದ್ದು, ಹೆಚ್ಚುವರಿ 2 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.

  • ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಯೋಜನೆಗೆ ಗುರುತಿಸಿರುವ ಪ್ರದೇಶದಲ್ಲಿ ಸರ್ಕಾರದ ಜಾಗವೇ ಇದೆ. 40 ಎಕರೆಯಷ್ಟು ಖಾಸಗಿ ಜಮೀನು ಸ್ವಾಧೀನ ಮಾಡಿಕೊಳ್ಳಬೇಕು.
  • ಶಿವನಸಮುದ್ರ ಯೋಜನೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅನುಷ್ಠಾನಗೊಂಡಿತ್ತು. ‘ವಿದ್ಯುತ್ ಉತ್ಪಾದನೆ ಮಾಡಿದರೆ ನೀರಿನ ಸತ್ವ ಹೋಗುತ್ತದೆ, ಆ ನೀರನ್ನು ಕೃಷಿಗೆ ಬಳಸಲು ಆಗುವು ದಿಲ್ಲ’ ಎಂದು ಸ್ವಹಿತಾಸಕ್ತಿಯ ಕೆಲವರು ಸುಳ್ಳು ಹಬ್ಬಿಸಿದ್ದರು. ಅಂಥ ಜನ ಎಲ್ಲಾ ಕಾಲದಲ್ಲೂ ಇರುತ್ತಾರೆ’ ಎಂದರು.
  • ಚಿಲ್ಲರೆ ಹಣದುಬ್ಬರ ಅಲ್ಪ ಏರಿಕೆ

ಸಂದರ್ಭ: ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ ತಿಂಗಳಿನಲ್ಲಿ ಶೇ 2.07ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.

  • ಚಿಲ್ಲರೆ  ಹಣದುಬ್ಬರ  ಪ್ರಮಾಣವು  ಜುಲೈನಲ್ಲಿ ಶೇ 1.61ರಷ್ಟಿತ್ತು.  2024ರ ಆಗಸ್ಟ್‌ನಲ್ಲಿ ಶೇ 3.65ರಷ್ಟಿತ್ತು. 9 ತಿಂಗಳಿನಿಂದ ಇಳಿಕೆ ಕಂಡಿದ್ದ ಹಣ ದುಬ್ಬರವು ಈಗ ಸ್ವಲ್ಪ ಏರಿಕೆಯಾಗಿದೆ. ನವೆಂಬರ್‌ನಲ್ಲಿ ಶೇ 5.48 ದಾಖಲಾಗಿತ್ತು. 
  • ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಎಣ್ಣೆ ಮತ್ತು ವೈಯಕ್ತಿಕ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಹಣ ದುಬ್ಬರ ಏರಿಕೆಯಾಗಿದೆ ಎಂದು ತಿಳಿಸಿದೆ.
  • ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ  ಪ್ರಮಾಣವು ಶೇ 4 ಹಂತದಲ್ಲಿ ಇರಬೇಕು, ಅದು ಶೇ 2ಕ್ಕಿಂತ ಕಡಿಮೆ ಆಗಬಾರದು ಎಂಬುದು ಆರ್ಬಿಐಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಗುರಿ.
  • ದೇಶದ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರವು ಜುಲೈನಲ್ಲಿ ಶೇ 1.18ರಷ್ಟಿತ್ತು. ಆಗಸ್ಟ್‌ನಲ್ಲಿ ಶೇ 1.69ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಶೇ 2.1ರಿಂದ ಶೇ 2.47ಕ್ಕೆ ಹೆಚ್ಚಳವಾಗಿದೆ.
  • ‘ಆಹಾರ ಮತ್ತು ಪಾನೀಯ ವಿಭಾಗದ ವಸ್ತುಗಳ ದರದಲ್ಲಿನ ಹೆಚ್ಚಳದಿಂದ ಹಣದುಬ್ಬರವು ಆಗಸ್ಟ್‌ನಲ್ಲಿ ಹೆಚ್ಚಾಗಿದೆ’ ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ. ಇತ್ತೀಚೆಗೆ ಸುರಿದ ಹೆಚ್ಚಿನ ಮಳೆ ಮತ್ತು ದೇಶದ ಕೆಲವು ಭಾಗದಲ್ಲಿ ಉಂಟಾದ ಪ್ರವಾಹವು ಬೆಳೆಯ ಇಳುವರಿ ಮೇಲೆ ಪರಿಣಾಮ ಬೀರಬಹುದು. ಇದರಿಂದ ದರವು ಹೆಚ್ಚಳವಾಗಬಹುದು ಎಂದು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಎರಡನೇ ಸ್ಥಾನ

  • ಅತಿ ಹೆಚ್ಚು ಹಣದುಬ್ಬರ ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದ ಲ್ಲಿದ್ದು, ಶೇ 3.81ರಷ್ಟಿದೆ.
  • ಮೊದಲ ಸ್ಥಾನದಲ್ಲಿ ಕೇರಳ ಶೇ 9.04 ಹೊಂದಿದ್ದರೆ, ಅಸ್ಸಾಂನಲ್ಲಿ ಅತಿ ಕಡಿಮೆ ಹಣದುಬ್ಬರ (–) ಶೇ 0.66 ಇದೆ.
  • .ಐನಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ: ಸಚಿವ ನಿತಿನ್ಗಡ್ಕರಿ

ಸಂದರ್ಭ: ‘ಕೃಷಿ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವು ಕ್ರಾಂತಿಕಾರಕ ಬದಲಾವಣೆ ತರಲಿದ್ದು, ಇದರಿಂದ ರೈತರ ಜೀವನ ಮಟ್ಟ ಸುಧಾರಿಸಲಿದೆ.

  • ‘ಸದ್ಯ ದೇಶದಲ್ಲಿ 350ರಿಂದ 400 ಕಾರ್ಖಾನೆಗಳು ಎಥೆನಾಲ್‌ ಉತ್ಪಾದಿಸುತ್ತಿವೆ. ಜೋಳದಿಂದ ಎಥೆನಾಲ್‌ ಉತ್ಪಾದಿಸುವುದರಿಂದ ರೈತರಿಗೆ ₹45 ಸಾವಿರ ಕೋಟಿಯಷ್ಟು ಆದಾಯ ಸಿಗುತ್ತಿದೆ. ಮೊದಲು ಜೋಳಕ್ಕೆ ಕ್ವಿಂಟಲ್‌ಗೆ ₹1,200 ದರ ಇತ್ತು. ಈಗ ಅದು ₹2,800ಕ್ಕೆ ಏರಿಕೆಯಾಗಿದೆ.
  • ₹882 ಕೋಟಿ ವೆಚ್ಚದಲ್ಲಿ ಸೌರಕೋಶ ಘಟಕ

ಸಂದರ್ಭ: ‘ಜಪಾನಿನ ಹೊಸಾಡಾ ಹೋಲ್ಡಿಂಗ್ಸ್‌ ಕಂಪನಿಯು ರಾಜ್ಯದಲ್ಲಿ  ಸೌರಕೋಶ ತಯಾರಿಕಾ ಘಟಕವನ್ನು ಸ್ಥಾಪಿಸಲು ₹882 ಕೋಟಿ ಹೂಡಿಕೆ ಮಾಡಲಿದೆ.

  • ಬಂಡವಾಳ ಆಕರ್ಷಣೆಗಾಗಿ ಜಪಾನ್‌ ಪ್ರವಾಸದಲ್ಲಿರುವ ಎಂ.ಬಿ.ಪಾಟೀಲರು ಹೋಸಾಡಾ ಹೋಲ್ಡಿಂಗ್ಸ್‌ ಅಧ್ಯಕ್ಷ ನಕಾಮುರಾ ಸ್ಯಾನ್‌ ಅವರ ಭೇಟಿಯ ನಂತರ ಈ ಮಾಹಿತಿ ನೀಡಿದ್ದಾರೆ.
  • ‘ತೋಂಗ್‌ ತರ್‌ ಎನರ್ಜಿ ಸೊಲ್ಯೂಷನ್ಸ್‌ (ಟಿಟಿಇಎಸ್‌) ಸಹಯೋಗದಲ್ಲಿ ಈ ಯೋಜನೆ ಕಾರ್ಯಗತವಾಗಲಿದೆ. ಫೆಬ್ರುವರಿಯಲ್ಲಿ ನಡೆದಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಟಿಟಿಇಎಸ್‌ ಕಂಪನಿಯು ₹490 ಕೋಟಿ ವೆಚ್ಚದಲ್ಲಿ ಘಟಕ ಆರಂಭಿಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. ಈಗ ಹೊಸಾಡಾ ಹೋಲ್ಡಿಂಗ್ಸ್‌ ಸಹಯೋಗದಲ್ಲಿ ಒಟ್ಟು ₹882 ಕೋಟಿ ಹೂಡಿಕೆ ಆಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.
  • ‘ಸೌರಫಲಕಗಳಲ್ಲಿ ಬಳಸುವ ಸೌರಕೋಶಗಳ ತಯಾರಿಕೆಯಲ್ಲಿ ಇದು ಮಹತ್ವದ ಮೈಲುಗಲ್ಲಾಗಲಿದೆ. ದೇಶದ ಸೌರಕೋಶಗಳ ಬೇಡಿಕೆ ಪೂರೈಸುವಲ್ಲಿ ರಾಜ್ಯಕ್ಕೆ ಮಹತ್ವದ ಸ್ಥಾನ ದೊರೆಯಲಿದೆ. ಈ ಘಟಕದಿಂದ 500 ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದಿದ್ದಾರೆ.
  • ‘ಕ್ರೀಡಾ ಪರಿಕರಗಳ ತಯಾರಿಕಾ ಕಂಪನಿ ಇನಾಬತಾವು ರಾಜ್ಯದಲ್ಲಿ ತನ್ನ ಘಟಕ ಸ್ಥಾಪಿಸಲಿದ್ದು, 2027ರಲ್ಲಿ ಅದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಡೈ ತಯಾರಿಕಾ ಕಂಪನಿ ಟೆತ್ಸುಜಿಕಾವಾ ರಾಜ್ಯದಲ್ಲಿನ ತನ್ನ ಘಟಕವನ್ನು ವಿಸ್ತರಿಸುವ ಬಗ್ಗೆ ಆಸಕ್ತಿ ತೋರಿಸಿದೆ’ ಎಂದು ಹೇಳಿದ್ದಾರೆ.
  • ಯುರೋಪ್ಅಡ್ಡಿ: ಮಾತುಕತೆ ಸ್ಥಗಿತ

ಸಂದರ್ಭ:‘ರಷ್ಯಾ–ಉಕ್ರೇನ್‌ ಸಂಘರ್ಷ ಕೊನೆಗೊಳಿಸಿ, ಶಾಂತಿ ಸ್ಥಾಪಿಸುವ ಮಾತುಕತೆಯೂ ಸ್ಥಗಿತಗೊಂಡಿದ್ದು, ಐರೋಪ್ಯ ದೇಶಗಳು ಈ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿವೆ’ ಎಂದು ಕ್ರೆಮ್ಲಿನ್‌ ತಿಳಿಸಿದೆ.

  • ಮಾತುಕತೆಗೆ ರಷ್ಯಾವೂ ಈಗಲೂ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದೆ.
  • ರಷ್ಯಾ ಹಾಗೂ ಉಕ್ರೇನ್‌ನ ಸಂಧಾನಕಾರರು ಈ ವರ್ಷದಲ್ಲಿ ಇಸ್ತಾಂಬುಲ್‌ನಲ್ಲಿ ಮೂರು ಸುತ್ತಿನ ಮಾತುಕತೆ ನಡೆಸಿದ್ದರು. ಜುಲೈ 23ರಂದು ನಡೆದ ಕೊನೆಯ ಮಾತುಕತೆಯಲ್ಲಿ ಯುದ್ಧದಲ್ಲಿ ಸಿಕ್ಕಿಬಿದ್ದ ಯುದ್ಧ ಕೈದಿಗಳು ಹಾಗೂ ಮೃತಪಟ್ಟ ಯೋಧರ ದೇಹಗಳ ಹಸ್ತಾಂತರ ಸಂಬಂಧ ಹಲವು ಮಾತುಕತೆಗಳು ನಡೆದಿದ್ದವು.
  • ಉಕ್ರೇನ್ ‘ವಾಸ್ತವ ಸ್ಥಿತಿಗಳನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ರಷ್ಯಾ ಆರೋಪಿಸಿದೆ. ತನಗೆ ಸೇರಿದ ಜಾಗವನ್ನು ವಶಕ್ಕೆ ಪಡೆಯಲು ರಷ್ಯಾವು ಹೆಚ್ಚು ಆಸಕ್ತಿ ತೋರಿಸುತ್ತಿದೆ ಎಂದು ಉಕ್ರೇನ್ ದೂರಿದೆ.
  • ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಡಿಸಲು ನಡೆಸಿದ ಪ್ರಯತ್ನಗಳು ಕೂಡ ಫಲ ನೀಡಿಲ್ಲ.
  • ‘ಮಾತುಕತೆ ಮಾರ್ಗವೂ ಸಿದ್ಧ ಗೊಂಡಿದ್ದು, ಕಾರ್ಯನಿರ್ವಹಿಸುತ್ತಿವೆ. ಆದರೆ, ಯುರೋಪ್‌ ರಾಷ್ಟ್ರಗಳು ಇದಕ್ಕೆ ಅಡ್ಡಿಯಾಗುತ್ತಿವೆ’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.
  • ನೇಪಾಳ: ಸುಶೀಲಾ ಕಾರ್ಕಿ ಪ್ರಧಾನಿ

ಸಂದರ್ಭ: ನೇಪಾಳದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ (73) ಅವರು ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

  • ‘ಜೆನ್‌–ಝಿ’ ಪ್ರತಿಭಟನೆಯಿಂದಾಗಿ ಈ ವಾರದ ಆರಂಭದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ದಿಢೀರ್‌ ರಾಜೀನಾಮೆಯ ನಂತರ ನೇಪಾಳದಲ್ಲಿ ತಲೆತೋರಿದ್ದ ರಾಜಕೀಯ ಅನಿಶ್ಚಿತತೆಗೆ ಇದರೊಂದಿಗೆ ತೆರೆಬಿದ್ದಂತಾಗಿದೆ.
  • ಸಂಸತ್ತು ವಿಸರ್ಜನೆ: ನೇಪಾಳ ಸಂಸತ್ತನ್ನು ಶುಕ್ರವಾರ ತಡರಾತ್ರಿ ವಿಸರ್ಜಿಸಲಾಯಿತು. ‘ಪ್ರಧಾನ ಮಂತ್ರಿಯ ಶಿಫಾರಸಿನ ಮೇರೆಗೆ ಸಂಸತ್ತನ್ನು ವಿಸರ್ಜಿಸಲಾಗಿದೆ. 2026ರ ಮಾರ್ಚ್‌ 5ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ’ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
  • ದೇಶದಾದ್ಯಂತ ಪಟಾಕಿ ನಿಷೇಧಿಸಿ

ಸಂದರ್ಭ: ದೆಹಲಿಯಲ್ಲಿ ಮಾತ್ರ ಪಟಾಕಿ ನಿಷೇಧ ಮಾಡಿರುವುದನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ದೇಶದಾದ್ಯಂತ ಈ ಬಗ್ಗೆ ನಿಯಮ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

  • ‘ಶುದ್ಧ ಗಾಳಿಯನ್ನು ಪಡೆಯುವುದು ದೆಹಲಿ ಜನರ ಹಕ್ಕಾಗಿದ್ದರೆ, ದೇಶದ ಇತರ ನಾಗರಿಕರಗೂ ಆ ಹಕ್ಕು ಇರುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್ ಅವರಿದ್ದ ಪೀಠ ತಿಳಿಸಿದೆ.
  • ದೆಹಲಿಯಲ್ಲಿ ಪಟಾಕಿ ನಿಷೇಧ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ‘ಈ ರೀತಿಯ ನಿಯಮಗಳು ದೇಶದಾದ್ಯಂತ ಇರಬೇಕು. ಇದನ್ನು ಕೇವಲ ದೆಹಲಿಗೆ ಸೀಮಿತಗೊಳಿಸಬಾರದು. ಯಾಕೆಂದರೆ, ಉಳಿದವರೂ ಈ ದೇಶದ ನಾಗರಿಕರು’ ಎಂದು ನ್ಯಾಯಪೀಠ ಹೇಳಿದೆ.
  • ಪಕ್ಷಗಳ ನಿಯಂತ್ರಣಕ್ಕೆ ನಿಯಮ: ಆಯೋಗಕ್ಕೆ ನೋಟಿಸ್

ಸಂದರ್ಭ: ಜಾತ್ಯತೀತ, ಪಾರದರ್ಶಕ ಮತ್ತು ನ್ಯಾಯವನ್ನು ಉತ್ತೇಜಿಸಲು ರಾಜಕೀಯ ಪಕ್ಷಗಳ ನೋಂದಣಿ ಮತ್ತು ನಿಯಂತ್ರಣಕ್ಕಾಗಿ ನಿಯಮಗಳನ್ನು ರೂಪಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

  • ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರ್ಧರಿಸಿತು. ಅಲ್ಲದೆ ಅರ್ಜಿಯು ನೋಂದಾಯಿತ ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನು ಒಳಗೊಳ್ಳುವಂತೆ ಉಲ್ಲೇಖಿಸಲು ಪೀಠವು ಅರ್ಜಿದಾರ ಅಶ್ವಿನಿ ಉಪಾಧ್ಯಾಯ ಅವರಿಗೆ ಹೇಳಿತು.
  • ಈ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ಭಾರತ ಕಾನೂನು ಆಯೋಗಕ್ಕೂ ಪೀಠ ನೋಟಿಸ್‌ ಜಾರಿ ಮಾಡಿತು.
  • ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ಯಾವುದೇ ನಿಯಮ ಮತ್ತು ನಿಬಂಧನೆಗಳಿಲ್ಲ. ಇದರಿಂದಾಗಿ ಅನೇಕ ಪ್ರತ್ಯೇಕತಾವಾದಿಗಳು ದೇಣಿಗೆ ಸಂಗ್ರಹಿಸಲು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ರಚಿಸಿಕೊಂಡಿದ್ದಾರೆ. ಪಕ್ಷಗಳ ಕೆಲ ಪದಾಧಿಕಾರಿಗಳು ಪೊಲೀಸರ ರಕ್ಷಣೆಯನ್ನೂ ಪಡೆಯುತ್ತಿ ದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
  • ಮಗಳ ವಿವಾಹದ ವೆಚ್ಚ ಭರಿಸುವುದು ತಂದೆಯ ಕರ್ತವ್ಯ

ಸಂದರ್ಭ: ಮಗಳ ವಿವಾಹದ ವೆಚ್ಚ ಭರಿಸುವುದು ತಂದೆಯ ಕರ್ತವ್ಯ ವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದಂಪತಿಯ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

  • ಮಗಳ ಮದುವೆಯ ಖರ್ಚಿಗಾಗಿ ₹10 ಲಕ್ಷ ನೀಡುವಂತೆ ತಂದೆಗೆ ಸೂಚಿಸಿದ ಪೀಠ, ದಂಪತಿಯ ವಿಚ್ಛೇದನಕ್ಕೆ ಕುಟುಂಬ ನ್ಯಾಯಾಲಯವು ನೀಡಿದ್ದ ಅನುಮತಿಯನ್ನು ಎತ್ತಿಹಿಡಿಯಿತು.
  • ವಿಚ್ಛೇದನದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರ ಪೀಠ ನಡೆಸಿತು. 1996ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜೋಡಿಯ ಸಂಬಂಧ ಸಂಪೂರ್ಣ ಬೇರ್ಪಟ್ಟಿರುವುದು ಮತ್ತು ಮಧ್ಯಸ್ಥಿಕೆಯ ಪ್ರಯತ್ನ ವಿಫಲವಾಗಿರುವುದನ್ನು ಪೀಠವು ಗಮನಿಸಿತು.
  • ‘ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯದ ಹೊರತಾಗಿಯೂ ತನ್ನ ಮಗಳ ವಿವಾಹದ ವೆಚ್ಚಗಳನ್ನು ಭರಿಸುವುದು ಪುರುಷನ ಕರ್ತವ್ಯವಾಗಿದೆ. ಆದ್ದರಿಂದ ಈ ಉದ್ದೇಶಕ್ಕಾಗಿ ₹10 ಲಕ್ಷವನ್ನು ನೀಡಬೇಕೆಂದು ಬಯಸುತ್ತೇವೆ’ ಎಂದು ಪೀಠ ತಿಳಿಸಿತು.
  • ದಂಪತಿಯ ವಿಚ್ಛೇದನಕ್ಕೆ ಅನುಮತಿ ನೀಡಿ ಕುಟುಂಬ ನ್ಯಾಯಾಲಯವು 2019ರಲ್ಲಿ ಹಾಗೂ ದೆಹಲಿ ಹೈಕೋರ್ಟ್ 2023ರಲ್ಲಿ ನೀಡಿದ್ದ ತೀರ್ಪಿನಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು.
  • ಸಭಾಪತಿಯಾಗಿ ರಾಧಾಕೃಷ್ಣನ್ಪದಗ್ರಹಣ

ಸಂದರ್ಭ: ನೂತನ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಪಿ.ರಾಧಾಕೃಷ್ಣನ್‌ ಅವರು, ರಾಜ್ಯಸಭೆಯ ಸಭಾಪತಿಯಾಗಿ ಪದಗ್ರಹಣ ಮಾಡಿದರು.

  • ರಾಜ್ಯಸಭೆ ಸಭಾಪತಿಗಳ ಕಚೇರಿಗೆ ತೆರಳಿದ ರಾಧಾಕೃಷ್ಣನ್‌ ಅವರು ಮೇಲ್ಮನೆಯ ಚುನಾವಣಾಧಿಕಾರಿ ಕಚೇರಿಯಲ್ಲಿ ಪದಗ್ರಹಣ ದಾಖಲೆಗಳಿಗೆ ಸಹಿ ಮಾಡಿದರು. ಗೃಹ ಇಲಾಖೆಯೂ ಉಪರಾಷ್ಟ್ರಪತಿಯಾಗಿ ರಾಧಾಕೃಷ್ಣನ್‌ ಅವರ ಪದಗ್ರಹಣ ಸಂಬಂಧ ಪ್ರತ್ಯೇಕ ಅಧಿಸೂಚನೆಯನ್ನೂ ಹೊರಡಿಸಿತು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments