ಪ್ರೌಢಶಾಲೆಯಿಂದಲೇ ಕೌಶಲ ತರಬೇತಿ
ಸಂದರ್ಭ: ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ‘ಶಾಲೆಯಲ್ಲೇ ಕೌಶಲ’ ಎಂಬ ಕಾರ್ಯಕ್ರಮ ರೂಪಿಸಿದೆ.
- ಮೊದಲ ಹಂತದಲ್ಲಿ 200 ಸರ್ಕಾರಿ ಪ್ರೌಢಶಾಲೆಗಳು ಹಾಗೂ 50 ಪದವಿ ಪೂರ್ವ ಕಾಲೇಜುಗಳನ್ನು ಗುರುತಿಸಿದ್ದು, ಒಟ್ಟು 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಮೂಲಕ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ಇನ್ನಷ್ಟು ಶಾಲಾ–ಕಾಲೇಜುಗಳಿಗೆ ಈ ಕಾರ್ಯಕ್ರಮ ವಿಸ್ತರಿಸಲಾಗುತ್ತದೆ.
- ಈಗಾಗಲೇ ಶಾಲಾ–ಕಾಲೇಜುಗಳನ್ನು ಗುರುತಿಸಿ, ಅಲ್ಲಿನ ವಿದ್ಯಾರ್ಥಿಗಳಿಗೆ ಯಾವ ಐಟಿಐನಲ್ಲಿ ತರಬೇತಿ ನೀಡಬೇಕು ಎಂಬುದನ್ನು ಅಂತಿಮಗೊಳಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದ್ದು, ತರಬೇತಿ ನೀಡುವ ಕೆಲಸವನ್ನು ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮಾಡಲಿದೆ.
- ವಾರದಲ್ಲಿ ಮೂರು ದಿನ, ನಿತ್ಯ ಎರಡು ಗಂಟೆ ಕಾಲ ಆಯಾ ಶಾಲೆ ಗಳೊಂದಿಗೆ ಮ್ಯಾಪಿಂಗ್ ಮಾಡಲಾದ ಐಟಿಐಗಳ ತರಬೇತುದಾರರು ಶಾಲೆಗಳಿಗೆ ತೆರಳಿ ತಾಂತ್ರಿಕ ತರಬೇತಿ ನೀಡುತ್ತಾರೆ. ಇದಕ್ಕಾಗಿ 30 ವಿದ್ಯಾರ್ಥಿಗಳಿಗೆ ಒಬ್ಬರಂತೆ 250 ತರಬೇತುದಾರರನ್ನು ಗುರುತಿಸ ಲಾಗಿದೆ. ಪ್ರಾಯೋಗಿಕ ತರಬೇತಿಯನ್ನು ಶಾಲೆಗಳಿಗೆ 10 ಕಿ.ಮೀ. ಅಂತರದಲ್ಲಿರುವ ಐಟಿಐಗಳಲ್ಲೇ ಶನಿವಾರ ನಾಲ್ಕು ಗಂಟೆ ನೀಡಲಾಗುತ್ತದೆ.
- ಈ ಕಾರ್ಯಕ್ರಮದಡಿ ವಿದ್ಯಾರ್ಥಿ ಗಳಿಗೆ ಇಂಟರ್ನ್‌ಶಿಪ್ ಕಡ್ಡಾಯ ವಾಗಲಿದೆ. ಪ್ರೌಢಶಾಲಾ ಹಂತದಲ್ಲಿ 8, 9ನೇ ತರಗತಿ ಹಾಗೂ ಕಾಲೇಜು ಹಂತದಲ್ಲಿ ಮೊದಲ ಪಿಯುಸಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಹೆಚ್ಚು ಮಕ್ಕಳು ದಾಖಲಾತಿ ಇರುವ ಶಾಲಾ–ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.
- ತರಬೇತಿಗಾಗಿ ಈ ವರ್ಷ ₹5.25 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಿದ್ದು, ಇದನ್ನು ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿ ಭರಿಸಲಾಗುತ್ತದೆ.
ಜೂನಿಯರ್ ಟೆಕ್ನಿಷಿಯನ್ ಕೋರ್ಸ್
- ವಿದ್ಯಾರ್ಥಿಗಳಿಗೆ ವಿವಿಧ ಕೌಶಲಗಳ ಬಗ್ಗೆ ತಿಳಿಸಿಕೊಡುವ ಇದಕ್ಕೆ ಜೂನಿಯರ್ ಟೆಕ್ನಿಷಿಯನ್ ಕೋರ್ಸ್ ಎಂದು ಹೆಸರಿಡಲಾಗಿದೆ. ಆಟೊಮೊಬೈಲ್, ಆಟೊ ಮಿಷನ್, ಪ್ಲಂಬಿಂಗ್, ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆ–ರಿಪೇರಿ, ಇಂಟರ್‌ನೆಟ್, ಬೇಸಿಕ್ ಕಂಪ್ಯೂಟರ್ ಇತ್ಯಾದಿಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ.
‘ಸಹಜೀವನ ಬಳಿಕ ಮದುವೆಗೆ ನಿರಾಕರಿಸಿದರೆ ಅಪರಾಧವಲ್ಲ’
ಸಂದರ್ಭ: ಸಹಜೀವನದಲ್ಲಿದ್ದು ನಾಲ್ಕು ವರ್ಷ ಒಪ್ಪಿತ ದೈಹಿಕ ಸಂಬಂಧ ಹೊಂದಿದ ಬಳಿಕ ಮದುವೆಯಾಗುವು ದಕ್ಕೆ ಪುರುಷನೊಬ್ಬ ನಿರಾಕರಿಸಿದಲ್ಲಿ ಅದು ಗಂಭೀರ ಅಪರಾಧವಾಗು ವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
- ‘ಸರಿ– ತಪ್ಪುಗಳನ್ನು ನಿರ್ಧರಿಸಬಲ್ಲ ಸಾಮರ್ಥ್ಯ ವಿರುವ ವಯಸ್ಕರಿಬ್ಬರು ಹಲವು ವರ್ಷ ಸಹಜೀವನ ನಡೆಸುತ್ತಿದ್ದರೆ, ಅವರು ಅಂತಹ ಸಂಬಂಧವನ್ನು ಸ್ವ ಇಚ್ಛೆಯಿಂದ ಆಯ್ಕೆ ಮಾಡಿಕೊಂಡಿರುತ್ತಾರೆ ಹಾಗೂ ಅದರಿಂದಾಗುವ ಪರಿಣಾಮಗಳ ಕುರಿತು ಅವರಿಗೆ ಅರಿವು ಇರುತ್ತದೆ ಎಂದೇ ಊಹಿಸಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಅರುಣಕುಮಾರ್ ಸಿಂಗ್ ದೇಶವಾಲ್ ಅವರು ಇದ್ದ ಪೀಠ ಹೇಳಿದೆ.
- ಸಹಜೀವನ ಸಂಗಾತಿ ಯಾಗಿದ್ದ ಪುರುಷನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕರಿಸಿದ ವೇಳೆ, ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
- ‘ಮದುವೆ ಮಾಡಿಕೊಳ್ಳುವ ಭರವಸೆ ಇದ್ದ ಕಾರಣವೇ ಒಪ್ಪಿತ ಸಂಬಂಧಕ್ಕೆ ಸಮ್ಮತಿಸಿದ್ದೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯ ಇಲ್ಲ’ ಎಂದು ಸೆಪ್ಟೆಂಬರ್ 8ರಂದು ಹೊರಡಿಸಿರುವ ಆದೇಶದಲ್ಲಿ ಪೀಠ ಹೇಳಿದೆ.
- ಒಪ್ಪಿತ ಸಂಬಂಧದಲ್ಲಿದ್ದ ಪುರುಷನ ವಿರುದ್ಧ ತಾನು ನೀಡಿದ್ದ ದೂರನ್ನು ಮಹೋಬಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿ ಕಳೆದ ವರ್ಷ ಆಗಸ್ಟ್ 17ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.
ಜೈವಿಕ ತಂತ್ರಜ್ಞಾನ ಸಂಶೋಧನೆಗೆ ವರದಾನ
ಸಂದರ್ಭ: ಇಪ್ಪತ್ತೊಂದನೇ ಶತಮಾನವನ್ನು ಜ್ಞಾನ ಮತ್ತು ವಿಜ್ಞಾನದ ಶತಮಾನ ಎಂದು ಕರೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ, ಬಯೊಟೆಕ್ನಾಲಜಿ ಅಥವಾ ಜೈವಿಕ ತಂತ್ರಜ್ಞಾನ ಕ್ಷೇತ್ರವು ಬೆಳೆಯುತ್ತಿದೆ.
- ಮಾನವ ಜೀವನದ ಗುಣಮಟ್ಟ ಸುಧಾರಣೆ, ಆಹಾರ ಭದ್ರತೆ, ಆರೋಗ್ಯ ಸಂರಕ್ಷಣೆ, ಪರಿಸರ ಸಂರಕ್ಷಣೆ, ಕೈಗಾರಿಕಾ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನವು ಕ್ರಾಂತಿಯನ್ನು ಉಂಟುಮಾಡುತ್ತಿದೆ.
- ಈ ತಂತ್ರಜ್ಞಾನದಲ್ಲಿನ ಸಂಶೋಧನೆ ವಿವಿಧ ದಿಕ್ಕುಗಳಲ್ಲಿ ಸಾಗುತ್ತಿದೆ. ಜೆನೆಟಿಕ್ ಎಂಜಿನಿಯರಿಂಗ್, ಮಾಲಿಕ್ಯುಲಾರ್ ಬಯಾಲಜಿ , ಅಗ್ರಿಕಲ್ಚರಲ್ ಬಯೊಟೆಕ್ನಾಲಜಿ, ಫಾರ್ಮಸ್ಯೂಟಿಕಲ್ ಬಯೊಟೆಕ್ನಾಲಜಿ, ಇಂಡಸ್ಟ್ರಿಯಲ್ ಬಯೊಪ್ರೋಸೆಸಸ್ ಹಾಗೂ ಎನ್‌ವಿರಾನ್‌ಮೆಂಟಲ್ ಬಯೊಟೆಕ್ನಾಲಜಿ ಪ್ರಮುಖವಾಗಿವೆ. ಉದಾಹರಣೆಗೆ, ಜೆನೆಟಿಕ್ ಎಂಜಿನಿಯರಿಂಗ್ ಮೂಲಕ ತಳಿ ಪರಿವರ್ತಿತ ಬೆಳೆಗಳು (ಜೆನೆಟಿಕಲಿ ಮಾಡಿಫೈಡ್ ಕ್ರಾಪ್ಸ್) ಅಭಿವೃದ್ಧಿಯಾಗಿದ್ದು, ಅವು ಹೆಚ್ಚಿನ ಉತ್ಪಾದನೆ, ಕೀಟ ನಿರೋಧಕತೆಗೆ ಕಾರಣವಾಗಿವೆ. ಆರೋಗ್ಯ ಕ್ಷೇತ್ರದಲ್ಲಿ, ಕೃತಕ ಇನ್ಸುಲಿನ್ ಉತ್ಪಾದನೆ, ಲಸಿಕೆಗಳ ತಯಾರಿಕೆಯು ಜೈವಿಕ ತಂತ್ರಜ್ಞಾನ ಸಂಶೋಧನೆಯ ಫಲ. ಜೆನೋಮ್ ತಿದ್ದುಪಡಿ ತಂತ್ರಜ್ಞಾನವು ವೈದ್ಯಕೀಯ ರಂಗದಲ್ಲಿ ನವೀನ ಸಂಶೋಧನೆಯ ದಿಕ್ಕನ್ನು ತೋರಿಸುತ್ತಿದೆ.
ಉದ್ಯೋಗಾವಕಾಶ: ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಅವಕಾಶಗಳು ತೆರೆದಿವೆ.
1.ಆರೋಗ್ಯ ಕ್ಷೇತ್ರ– ಔಷಧ ಕಂಪನಿಗಳು, ಲಸಿಕೆ ತಯಾರಿಕಾ ಘಟಕಗಳು, ಕ್ಲಿನಿಕಲ್ ಸಂಶೋಧನಾ ಸಂಸ್ಥೆಗಳು.
2.ಕೃಷಿ ಕ್ಷೇತ್ರ– ಬೀಜ ಉತ್ಪಾದನಾ ಕಂಪನಿಗಳು, ಸಸ್ಯ ಸಂಶೋಧನಾ ಕೇಂದ್ರಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳು.
3.ಪರಿಸರ ನಿರ್ವಹಣೆ– ಜಲಶುದ್ಧೀಕರಣ ಘಟಕಗಳು, ತ್ಯಾಜ್ಯ ನಿರ್ವಹಣಾ ಕೈಗಾರಿಕೆಗಳು, ನವೀನ ಶಕ್ತಿಯ ತಂತ್ರಜ್ಞಾನ.
4.ಕೈಗಾರಿಕಾ ಕ್ಷೇತ್ರ– ಎನ್‌ಜೈಮ್ ತಯಾರಿಕೆ, ಜೈವಿಕ ಇಂಧನ, ಬಯೊಫಾರ್ಮಸ್ಯೂಟಿಕಲ್ಸ್.
5.ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು– ಸಂಶೋಧನಾ ಸಹಾಯಕ, ಉಪನ್ಯಾಸಕ, ವಿಜ್ಞಾನಿ ಹುದ್ದೆಗಳು.
6.ವಿದೇಶದಲ್ಲಿ ಅವಕಾಶ– ಅಮೆರಿಕ, ಯುರೋಪ್, ಜಪಾನ್, ಸಿಂಗಪುರದಂತಹ ದೇಶಗಳಲ್ಲಿ ಸಂಶೋಧನೆ ಹಾಗೂ ಕೈಗಾರಿಕಾ ಕೆಲಸಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದಾರೆ. ಇದೇ ರೀತಿ, ಬಯೊಟೆಕ್ನಾಲಜಿಯಲ್ಲಿ ಸ್ಟಾರ್ಟ್–ಅಪ್ ಉದ್ದಿಮೆಗಳು ಕೂಡ ವೇಗವಾಗಿ ಬೆಳೆಯುತ್ತಿವೆ. ಆರೋಗ್ಯ ನಿರ್ಣಾಯಕ ಕಿಟ್‌ಗಳು, ಸಸ್ಯ ಆಧಾರಿತ ಉತ್ಪನ್ನಗಳು, ಜೈವಿಕ ಇಂಧನ, ಆಹಾರ ತಂತ್ರಜ್ಞಾನದಲ್ಲಿ ಯುವ ಉದ್ಯಮಿಗಳು ಹೊಸ ಹಾದಿ ತೆರೆಯುತ್ತಿದ್ದಾರೆ.
ಅಸ್ಸಾಂ: ಒಂದೂವರೆ ತಾಸಿನಲ್ಲಿ ನಾಲ್ಕು ಬಾರಿ ಭೂಕಂಪ
ಸಂದರ್ಭ: ಗುವಾಹಟಿ/ ಕೋಲ್ಕತ್ತ/ ಇಂಫಾಲ್/ ಇಟಾನಗರ (ಪಿಟಿಐ): ಅಸ್ಸಾಂನಲ್ಲಿ ಒಂದೂವರೆ ತಾಸಿನಲ್ಲಿ ನಾಲ್ಕು ಬಾರಿ ಭೂಮಿಯು ಕಂಪನ.
- ರಾಜ್ಯದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.8ರಷ್ಟು ದಾಖಲಾಗಿತ್ತು. 4.58ಕ್ಕೆ ಎರಡನೇ ಬಾರಿ ಸಂಭವಿಸಿದ ಭೂಕಂಪನದ ತೀವ್ರತೆಯು 3.1ರಷ್ಟು ಮತ್ತು 5.21ಕ್ಕೆ ಮೂರನೇ ಬಾರಿಗೆ ಸಂಭವಿಸಿದ ಭೂಕಂಪದ ತೀವ್ರತೆಯು 2.9ರಷ್ಟಿತ್ತು. 6.11ಕ್ಕೆ ನಾಲ್ಕನೇ ಬಾರಿ ಸಂಭವಿಸಿದ ಭೂಕಂಪದ ತೀವ್ರತೆಯು 2.7ರಷ್ಟು ದಾಖಲಾಗಿದೆ.
- ಅಸ್ಸಾಂನ ಉದಲಗುರಿ ಮತ್ತು ಸೋನಿತ್‌ಪುರದಲ್ಲಿ ಭೂಕಂಪನದ ಕೇಂದ್ರ ಬಿಂದುಗಳು ಪತ್ತೆಯಾಗಿವೆ.
- ಮಣಿಪುರ ಮತ್ತು ಅರುಣಾಚಲ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಕೆಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿತ್ತು.
ವಿಶ್ವ ಬಾಕ್ಸಿಂಗ್: ಭಾರತಕ್ಕೆ ‘ಚಿನ್ನ ಡಬಲ್’
ಸಂದರ್ಭ: ಜೈಸ್ಮಿನ್ ಲಾಂಬೊರಿಯಾ (57ಕೆ.ಜಿ) ಮತ್ತು ಮೀನಾಕ್ಷಿ ಹೂಡಾ (48ಕೆ.ಜಿ) ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದರು.

- ಪ್ಯಾರಿಸ್ ಒಲಿಂಪಿಕ್ ಕೂಟದ ಮಹಿಳೆಯರ 57 ಕೆ.ಜಿ. ವಿಭಾಗದ ಬೆಳ್ಳಿ ಪದಕ ವಿಜೇತ ಬಾಕ್ಸರ್ ಪೋಲೆಂಡ್‌ನ ಜೂಲಿಯಾ ಎಸ್‌ಝೆರೆಮೆತಾ ಅವರನ್ನು ಜೈಸ್ಮಿನ್ ಸೋಲಿಸಿದರು. ಭಾರತದ ಬಾಕ್ಸರ್ 4–1 (30-27 29-28 30-27 28-29 29-28) ರಿಂದ ಕಠಿಣ ಪೈಪೋಟಿ ಯೊಡ್ಡಿದ ತಮ್ಮ ಎದುರಾಳಿಯನ್ನು ಸೋಲಿಸಿದರು. ಇದರೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
- ಮಧ್ಯಾಹ್ನದ ನಂತರ ನಡೆದ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಮೀನಾಕ್ಷಿ ಅವರು ಕಜಾಕಸ್ತಾನದ ನಾಝೀಂ ಕೈಝೈಬೆ ವಿರುದ್ಧ ಜಯಭೇರಿ ಬಾರಿಸಿದರು. ನಾಝೀಂ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದರು.
- ಇದರೊಂದಿಗೆ ಜೈಸ್ಮಿನ್ ಮತ್ತು ಮೀನಾಕ್ಷಿ ಅವರು ವಿಶ್ವ ಚಾಂಪಿಯನ್‌ಷಿಪ್ ನಲ್ಲಿ ಚಿನ್ನ ಗೆದ್ದ ಭಾರತೀಯ ಬಾಕ್ಸರ್‌ಗಳ ಯಾದಿಯಲ್ಲಿ ಸ್ಥಾನ ಪಡೆದರು. ಆರು ಸಲ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018), ಎರಡು ಬಾರಿ ಚಾಂಪಿಯನ್ ನಿಖತ್ ಜರೀನ್ (2022 ಮತ್ತು 2023), ಸರಿತಾ ದೇವಿ (2006), ಜೆನ್ನಿ ಆರ್.ಎಲ್ (2006), ಕೆ.ಸಿ. ಲೇಖಾ (2006), ನೀತು ಗಂಗಾಸ್ (2023), ಲವ್ಲಿನಾ ಬೊರ್ಗೊಹೈನ್ (2023) ಮತ್ತು ಸವಿತಿ ಬೂರಾ (2023) ಅವರ ನಂತರ ಜೈಸ್ಮಿನ್ ಮತ್ತು ಮೀನಾಕ್ಷಿ ಅವರೂ ಈ ಪಟ್ಟಿಗೆ ಸೇರ್ಪಡೆಯಾದರು. 24 ವರ್ಷದ ಜೈಸ್ಮಿನ್ ಅವರಿಗೆ ಇದು ಮೂರನೇ ವಿಶ್ವ ಚಾಂಪಿಯನ್‌ಷಿಪ್.
- ಮಹಿಳೆಯರ ವಿಭಾಗದಲ್ಲಿ ಮತ್ತೆರಡು ಪದಕಗಳೂ ಭಾರತಕ್ಕೆ ಒಲಿದವು. ನೂಪುರ್ ಶೆರಾನ್ (80 ಕೆ.ಜಿ ಮೇಲ್ಪಟ್ಟು) ಮತ್ತು ಪೂಜಾರಾಣಿ (80 ಕೆ.ಜಿ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು.
- 80 ಕೆ.ಜಿ ಮೇಲ್ಪಟ್ಟವರ ವಿಭಾಗದ ಫೈನಲ್‌ನಲ್ಲಿ ನೂಪುರ್ ಅವರು 2–3ರ ಅಲ್ಪ ಅಂತರದ ಸೋಲನ್ನು ಪೋಲೆಂಡ್‌ನ ಅಗಾತಾ ಕಾಜಾಮರಸ್ಕಾ ವಿರುದ್ಧ ಅನುಭವಿಸಿದರು. ತಾಂತ್ರಿಕ ಅಂಕಗಳೊಂದಿಗೆ ಪೋಲೆಂಡ್ ಬಾಕ್ಸರ್ ಮೇಲುಗೈ ಸಾಧಿಸಿದರು.
- ಪೂಜಾ ಅವರು ಸೆಮಿಫೈನಲ್‌ನಲ್ಲಿ 1–4ರಿಂದ ಸ್ಥಳೀಯ ಫೆವರಿಟ್ ಎಮಿಲಿ ಅಷ್ಕಿತ್ ವಿರುದ್ಧ ಸೋತು ಕಂಚಿನ ಪದಕ ಪಡೆದರು.
ಏಷ್ಯಾ ಕಪ್: ಭಾರತ ರನ್ನರ್ಸ್ ಅಪ್
ಸಂದರ್ಭ: ಭಾರತ ಮಹಿಳಾ ತಂಡವು ಭಾನುವಾರ ಇಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಚೀನಾ ವಿರುದ್ಧ 1–4 ಗೋಲುಗಳಿಂದ ಪರಾಭವಗೊಂಡು, ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಯಿತು.
- ಈ ಸೋಲಿನೊಂದಿಗೆ ಸಲೀಮಾ ಟೆಟೆ ಬಳಗವು ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ಸುವರ್ಣಾವಕಾಶವನ್ನು ಕಳೆದುಕೊಂಡಿತು. ಚಾಂಪಿಯನ್ ಚೀನಾ ತಂಡವು ವಿಶ್ವಕಪ್‌ಗೆ ಟಿಕೆಟ್ ಪಡೆದುಕೊಂಡಿತು.
- ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನುಭವಿ ಫಾರ್ವರ್ಡ್ ಆಟಗಾರ್ತಿ ನವನೀತ್ ಅವರು ಮೊದಲ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ಒದಗಿಸಿದ್ದರು. ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿ, ಆತಿಥೇಯರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದರು.
- ನಂತರದಲ್ಲಿ ಚೀನಾ ತಂಡವು ಸತತ ಮೂರು ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಹೊಡೆಯುವುದಕ್ಕೆ ತಡೆಯೊಡ್ಡುವಲ್ಲಿ ಯಶಸ್ವಿಯಾದ ಭಾರತದ ಆಟಗಾರ್ತಿಯರು 21ನೇ ನಿಮಿಷದವರೆಗೆ ಮುನ್ನಡೆ ಕಾಯ್ದುಕೊಂಡರು. ಆದರೆ, ನಾಲ್ಕನೇ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಜಿಕ್ಸಿಯಾ ಔ ಅವರು ಚೆಂಡನ್ನು ಗುರಿ ಸೇರಿಸಿದ್ದರಿಂದ ಉಭಯ ತಂಡಗಳ ಸ್ಕೋರ್ ಸಮಬಲಗೊಂಡಿತು.
- 41ನೇ ನಿಮಿಷದಲ್ಲಿ ಹಾಂಗ್ ಲಿ ಅವರು ಫೀಲ್ಡ್ ಗೋಲು ಬಾರಿಸಿ ಆತಿಥೇಯ ತಂಡಕ್ಕೆ 2–1 ಮುನ್ನಡೆ ಒದಗಿಸಿದರು. ನಂತರದಲ್ಲಿ ಮೀರಾಂಗ್ ಝೌ (51ನೇ ನಿಮಿಷ) ಮತ್ತು ಜಿಯಾಕಿ ಜಾಂಗ್ (53ನೇ ನಿ) ಗೋಲು ತಂದಿತ್ತು. ಚೀನಾ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು.
- ಟೂರ್ನಿಯಲ್ಲಿ ಚೀನಾ ವಿರುದ್ಧ ಭಾರತಕ್ಕೆ ಇದು ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ಸೂಪರ್ ಫೋರ್ ಹಂತದಲ್ಲೂ 1–4 ಗೋಲುಗಳಿಂದ ಭಾರತ ಪರಾಭವಗೊಂಡಿತ್ತು.
- ಜಪಾನ್‌ಗೆ ಗೆಲುವು: ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಜಪಾನ್ ತಂಡವು 2–1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಸ್ಪರ್ಧಿಸಿದ್ದವು.
ಶೂಟಿಂಗ್ ವಿಶ್ವಕಪ್: ಮೇಘನಾಗೆ ಕಂಚು
ಸಂದರ್ಭ: ಅನುಭವಿ ಶೂಟರ್ ಮೇಘನಾ ಸಜ್ಜನರ್ ಅವರು ಐಎಸ್‌ಎಸ್‌ಎಫ್ ವಿಶ್ವಕಪ್ ರೈಫಲ್/ ಪಿಸ್ತೂಲ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆದ್ದರು. ಋತುವಿನ ಕೊನೆಯ ವಿಶ್ವಕಪ್ ಟೂರ್ನಿಯಲ್ಲಿ ಭಾರತವು ಐದನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತು.
- ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕರ್ನಾಟಕದ ಮೇಘನಾ 230.0 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ವಿಶ್ವಕಪ್‌ನಲ್ಲಿ ಅವರಿಗೆ ದೊರೆತ ಚೊಚ್ಚಲ ಪದಕ ಇದಾಗಿದೆ.
- ಚೀನಾದ ಉದಯೋನ್ಮುಖ ತಾರೆ ಪೆಂಗ್ ಕ್ಸಿನ್ಲು 255.3 ಅಂಕ ಸಂಪಾದಿಸಿ, ವಿಶ್ವದಾಖಲೆ ಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿ ದರು. ಅವರು ಸ್ವದೇಶದ ವಾಂಗ್ ಜಿಫೀ (254.8) ಅವರ ದಾಖಲೆಯನ್ನು ಮುರಿದರು. ನಾರ್ವೆಯ ಜೀನೆಟ್ ಹೆಗ್ ಡ್ಯುಸ್ಟಾಡ್ ಬೆಳ್ಳಿ ಪದಕ ಗೆದ್ದರು.
- 31 ವರ್ಷದ ಮೇಘನಾ (632.7) ಅವರು ಅರ್ಹತಾ ಸುತ್ತಿನಲ್ಲಿ ಏಳನೇ ಸ್ಥಾನ ದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಪೆಂಗ್ (637.4) ಅಗ್ರಸ್ಥಾನ ಪಡೆದಿದ್ದರು.