Fri. Oct 10th, 2025

ವಕ್ಫ್‌ (ತಿದ್ದುಪಡಿ) ಕಾಯ್ದೆ–2025: ಪ್ರಮುಖ ಅಂಶಗಳಿಗೆ ತಡೆ

ಸಂದರ್ಭ: ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷ ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬಹುದು ಎಂಬ ಷರತ್ತು ಸೇರಿದಂತೆ ವಕ್ಫ್‌ (ತಿದ್ದುಪಡಿ) ಕಾಯ್ದೆ–2025ರ ಕೆಲವು ಪ್ರಮುಖ ಅಂಶಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಆದರೆ, ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

ಯಾವ ಕಾನೂನಿಗೆ ತಡೆ?

  • 2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ, ಯಾವ ವ್ಯಕ್ತಿಯು ಕನಿಷ್ಟ ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಪಾಲಿಸುತ್ತಿದ್ದಾನೋ ಆ ವ್ಯಕ್ತಿಯು ಮಾತ್ರ ವಕ್ಫ್ ಮಂಡಳಿಗಳಿಗೆ ಭೂಮಿಯನ್ನು ದಾನ ಕೊಡಲು ಅರ್ಹ ಎಂಬ ಅಂಶಕ್ಕೆ ಸದ್ಯಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಒಪ್ಪಿದೆ. ಈ ಅಂಶದ ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ಈ ಅಂಶಕ್ಕೆ (ಕಾಯ್ದೆಯಲ್ಲಿರುವ ಸೆಕ್ಷನ್ 3 (1), (r) ತಡೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
  • ಇನ್ನು, ಎರಡನೆಯದಾಗಿ, ವಕ್ಫ್ ಆಸ್ತಿಯನ್ನು ಗುರುತಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಸರ್ಕಾರದಿಂದ ನಿಯೋಜಿಸಲಾಗಿರುವ ಅಧಿಕಾರಿಗೆ ನೀಡಿರುವ ಅಂಶಕ್ಕೂ ತಡೆಯನ್ನು ನೀಡಲಾಗಿದೆ. ಇದು ಅಧಿಕಾರ ಪ್ರತ್ಯೇಕತೆಯ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಇನ್ನಿತರ ತಡೆಗಳು:

  • ಆಸ್ತಿ ಅತಿಕ್ರಮಣದ ಬಗ್ಗೆ ಸಂಬಂಧಿಸಿದ ಅಧಿಕಾರಿಯು ವರದಿ ಸಲ್ಲಿಸುವವರೆಗೆ ವಕ್ಫ್ ಆಸ್ತಿ ಎಂದು ಪರಿಗಣಿಸಬಾರದು ಎಂಬ ಅಂಶ (ಕಾಯ್ದೆಯಲ್ಲಿರುವ ಸೆಕ್ಷನ್ 3C (2).
  • ಒಂದು ವೇಳೆ ಆಸ್ತಿಯು ಸರ್ಕಾರಿ ಜಮೀನು ಎನ್ನುವುದನ್ನು ನಿಯೋಜಿತ ಅಧಿಕಾರಿಯು (ಅಥವಾ ಜಿಲ್ಲಾಧಿಕಾರಿ) ವಕ್ಫ್ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಗುರುತಿಸಿದರೆ, ಕಂದಾಯ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬ ಅಂಶಕ್ಕೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
  • ನಿಯೋಜಿತ ಅಧಿಕಾರಿ ಸಲ್ಲಿಸಿರುವ ವರದಿ ಆಧರಿಸಿ, ದಾಖಲೆಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಮಾಡಬೇಕು. ಎಂದು ವಕ್ಫ್ ಬೋರ್ಡ್ ಗೆ ರಾಜ್ಯ ಸರ್ಕಾರ ಸೂಚಿಸಬೇಕು ಎಂಬ ಅಂಶ. (ಸೆಕ್ಷನ್ 3ಸಿ (4)).

ಆದೇಶದ ಪ್ರಮುಖಾಂಶಗಳು

l ಕನಿಷ್ಠ ಐದು ವರ್ಷ ಇಸ್ಲಾಂ ಧರ್ಮವನ್ನು ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬಹುದು ಎಂಬ ಅಂಶ ಹೊಂದಿರುವ ಸೆಕ್ಷನ್ 3(1)(ಆರ್‌)ಗೆ ಪೀಠ ತಡೆ ನೀಡಿದೆ

lಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿ ದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸುವವರೆಗೂ ತಡೆಯಾಜ್ಞೆ ಜಾರಿಯಲ್ಲಿರಲಿದೆ ಎಂದು ಹೇಳಿದೆ

l‘ವಿವಾದದಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ನಿಯೋಜಿತ ಅಧಿಕಾರಿ ತನ್ನ ವರದಿ ಸಲ್ಲಿಸುವವರೆಗೂ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿಗಣಿಸಬಾರದು’ ಎಂದು ಹೇಳುವ ಅಂಶಕ್ಕೂ ತಡೆ ನೀಡಿದೆ

l ನಿಯೋಜಿತ ಅಧಿಕಾರಿಯು ಆಸ್ತಿಯನ್ನು ಸರ್ಕಾರಿ ಆಸ್ತಿ ಎಂದು ನಿರ್ಧರಿಸಿದರೆ, ಅವರು ಕಂದಾಯ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂಬ ಅಂಶಕ್ಕೆ ತಡೆ ನೀಡಲಾಗಿದೆ

l ವಿವಾದಿತ ಆಸ್ತಿಯ ಮಾಲೀಕತ್ವದ ಬಗ್ಗೆ ನ್ಯಾಯಮಂಡಳಿಯು ಅಂತಿಮ ನಿರ್ಣಯ ತೆಗೆದುಕೊಳ್ಳುವವರೆಗೆ ಮತ್ತು ಮೇಲ್ಮನವಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಮುಂದಿನ ಆದೇಶದವರೆಗೆ ಆ ಆಸ್ತಿಯ ಹಕ್ಕನ್ನು ಯಾವುದೇ ಮೂರನೇ ವ್ಯಕ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ

l ರಾಜ್ಯ ವಕ್ಫ್ ಮಂಡಳಿಗಳು ಮತ್ತು ಕೇಂದ್ರ ವಕ್ಫ್‌ ಪರಿಷತ್ತಿನಲ್ಲಿ ಮುಸ್ಲಿಮೇತರರ ಪ್ರಾತಿನಿಧ್ಯಕ್ಕೆ ಮಿತಿ ಹೇರಿದೆ

l ಕೇಂದ್ರ ವಕ್ಫ್‌ ಪರಿಷತ್ತಿನ 22 ಸದಸ್ಯರಲ್ಲಿ ಗರಿಷ್ಠ ನಾಲ್ವರು ಮುಸ್ಲಿಮೇತರರು ಇರಬಹುದು

l ರಾಜ್ಯ ವಕ್ಫ್‌ ಮಂಡಳಿಯ 11 ಸದಸ್ಯರಲ್ಲಿ ಗರಿಷ್ಠ ಮೂವರು ಮುಸ್ಲಿಮೇತರರಿಗಷ್ಟೇ ಅವಕಾಶ

ಪೀಠ ಹೇಳಿದ್ದು…

lಕಾಯ್ದೆಯು ಅಸಾಂವಿಧಾನಿಕವಾಗಿದೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದೆನಿಸಿದಾಗ ಮಾತ್ರ ಅದನ್ನು ತಡೆಹಿಡಿಯಬೇಕು

lಪೀಠವು ಒಂದು ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಗಣಿಸುವಾಗ ಅದರ ನೈಜ ಸ್ವರೂಪ, ಕಾರ್ಯವ್ಯಾಪ್ತಿ ಮತ್ತು ಉದ್ದೇಶವನ್ನು ಪರಿಗಣಿಸುವುದು ಅಗತ್ಯ

lಸಂವಿಧಾನದಲ್ಲಿರುವ ಅಂಶಗಳ ಸ್ಪಷ್ಟ ಉಲ್ಲಂಘನೆಯ ಹೊರತು, ಸಂಸತ್ತು ಅಥವಾ ರಾಜ್ಯ ಶಾಸಕಾಂಗ ರೂಪಿಸಿದ ಕಾಯ್ದೆಯನ್ನು ಅಮಾನ್ಯವೆಂದು ಘೋಷಿಸಲು ಸಾಧ್ಯವಿಲ್ಲ

ವಕ್ಫ್ ತಿದ್ದುಪಡಿ ಮಸೂದೆ, 2025: ಭಾರತದಲ್ಲಿ ವಕ್ಫ್ ಇತಿಹಾಸ
ಪರಿಚಯ

ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಮಹತ್ವವನ್ನು ಹೊಂದಿರುವ ವಕ್ಫ್ ಆಸ್ತಿಗಳನ್ನು ನಿಯಂತ್ರಿಸಲು ಮತ್ತು ರಕ್ಷಿಸಲು ಭಾರತ ಕೆಲಸ ಮಾಡುತ್ತಿದೆ. ಮೊದಲ ಪ್ರಮುಖ ಕಾನೂನು, 1954 ರ ವಕ್ಫ್ ಕಾಯ್ದೆ, ಈ ಆಸ್ತಿಗಳ ನಿರ್ವಹಣೆಗೆ ಅಡಿಪಾಯ ಹಾಕಿತು. ಕಾಲಾನಂತರದಲ್ಲಿ, ಆಡಳಿತವನ್ನು ಸುಧಾರಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು ಕಾನೂನುಗಳನ್ನು ನವೀಕರಿಸಲಾಗಿದೆ. ವಕ್ಫ್ ತಿದ್ದುಪಡಿ ಮಸೂದೆ 2025 ಪಾರದರ್ಶಕತೆಯನ್ನು ಹೆಚ್ಚಿಸುವುದು, ನಿರ್ವಹಣೆಯನ್ನು ಬಲಪಡಿಸುವುದು ಮತ್ತು ವಕ್ಫ್ ಸ್ವತ್ತುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಸುಧಾರಣೆಗಳು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅನುಸರಿಸುತ್ತವೆ.

ಕೇಂದ್ರ ಸರ್ಕಾರ ಜಾರಿಗೆ ತಂದ 1995ರ ವಕ್ಫ್ ಕಾಯ್ದೆಯು ಪ್ರಸ್ತುತ ವಕ್ಫ್ ಆಸ್ತಿಗಳನ್ನು ನಿಯಂತ್ರಿಸುತ್ತದೆ. ಪ್ರಮುಖ ಆಡಳಿತ ಮಂಡಳಿಗಳೆಂದರೆ:

ಕೇಂದ್ರ ವಕ್ಫ್ ಕೌನ್ಸಿಲ್ (ಸಿಡಬ್ಲ್ಯೂಸಿ) – ನೀತಿಯ ಬಗ್ಗೆ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಸಲಹೆ ನೀಡುತ್ತದೆ ಆದರೆ ವಕ್ಫ್ ಆಸ್ತಿಗಳನ್ನು ನೇರವಾಗಿ ನಿಯಂತ್ರಿಸುವುದಿಲ್ಲ.
ರಾಜ್ಯ ವಕ್ಫ್ ಮಂಡಳಿಗಳು (ಎಸ್ ಡಬ್ಲ್ಯೂಬಿಗಳು) – ಪ್ರತಿ ರಾಜ್ಯದಲ್ಲಿ ವಕ್ಫ್ ಆಸ್ತಿಗಳನ್ನು ನಿರ್ವಹಿಸುವುದು ಮತ್ತು ರಕ್ಷಿಸುವುದು.
ವಕ್ಫ್ ನ್ಯಾಯಮಂಡಳಿಗಳು – ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ನಿರ್ವಹಿಸುವ ವಿಶೇಷ ನ್ಯಾಯಾಂಗ ಸಂಸ್ಥೆಗಳು.
ಈ ವ್ಯವಸ್ಥೆಯು ಉತ್ತಮ ನಿರ್ವಹಣೆ ಮತ್ತು ಸಮಸ್ಯೆಗಳ ತ್ವರಿತ ಪರಿಹಾರವನ್ನು ಖಚಿತಪಡಿಸುತ್ತದೆ. ವರ್ಷಗಳಲ್ಲಿ, ಕಾನೂನು ಬದಲಾವಣೆಗಳು ವಕ್ಫ್ ಆಡಳಿತವನ್ನು ಹೆಚ್ಚು ಪಾರದರ್ಶಕ, ದಕ್ಷ ಮತ್ತು ಉತ್ತರದಾಯಿಯನ್ನಾಗಿ ಮಾಡಿವೆ.

ಭಾರತದಲ್ಲಿ ವಕ್ಫ್ ಇತಿಹಾಸದ ಅವಲೋಕನ

ಭಾರತದಲ್ಲಿ ವಕ್ಫ್ ಆಸ್ತಿಗಳನ್ನು ಆಡಳಿತವನ್ನು ಸುಧಾರಿಸಲು ಮತ್ತು ದುರಾಡಳಿತವನ್ನು ತಡೆಗಟ್ಟಲು ಹಲವಾರು ಕಾನೂನುಗಳಿಂದ ನಿಯಂತ್ರಿಸಲಾಗಿದೆ:

ಮುಸಲ್ಮಾನ ವಕ್ಫ್ ಮಾನ್ಯತೆ ಕಾಯ್ದೆ, 1913:
ಕುಟುಂಬದ ಲಾಭಕ್ಕಾಗಿ ವಕ್ಫ್ ಗಳನ್ನು ರಚಿಸಲು ಮುಸ್ಲಿಮರಿಗೆ ಅವಕಾಶ ಮಾಡಿಕೊಟ್ಟಿತು, ಅಂತಿಮವಾಗಿ ದತ್ತಿ ಉದ್ದೇಶಗಳಿಗೆ ಕಾರಣವಾಯಿತು.
ವಕ್ಫ್ ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿತ್ತು ಆದರೆ ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ.

  1. ಮುಸಲ್ಮಾನ್ ವಕ್ಫ್ ಕಾಯ್ದೆ, 1923: ವಕ್ಫ್ ನಿರ್ವಹಣೆಯಲ್ಲಿ ಸರಿಯಾದ ಲೆಕ್ಕಪತ್ರ ಮತ್ತು ಪಾರದರ್ಶಕತೆಗಾಗಿ ನಿಯಮಗಳನ್ನು ಪರಿಚಯಿಸಿತು.
  2. ಮುಸಲ್ಮಾನ ವಕ್ಫ್ ಮಾನ್ಯತಾ ಕಾಯ್ದೆ, 1930: ಕುಟುಂಬ ವಕ್ಫ್ ಗಳ ಕಾನೂನು ಸಿಂಧುತ್ವವನ್ನು ಬಲಪಡಿಸಿತು, 1913 ರ ಕಾಯ್ದೆಗೆ ಕಾನೂನು ಬೆಂಬಲವನ್ನು ನೀಡಿತು.
  3. ವಕ್ಫ್ ಕಾಯ್ದೆ, 1954:

ವಕ್ಫ್ ಆಸ್ತಿಗಳ ಮೇಲ್ವಿಚಾರಣೆಗಾಗಿ ಮೊದಲ ಬಾರಿಗೆ ರಾಜ್ಯ ವಕ್ಫ್ ಮಂಡಳಿಗಳನ್ನು (ಎಸ್ ಡಬ್ಲ್ಯೂಬಿ) ರಚಿಸಲಾಯಿತು.
ಭಾರತದ ಸ್ವಾತಂತ್ರ್ಯದ ನಂತರ ವಕ್ಫ್ ನಿರ್ವಹಣೆಯನ್ನು ಬಲಪಡಿಸಲಾಯಿತು.
ರಾಜ್ಯ ವಕ್ಫ್ ಮಂಡಳಿಗಳ ಮೇಲ್ವಿಚಾರಣೆಗಾಗಿ 1964 ರಲ್ಲಿ ಸೆಂಟ್ರಲ್ ವಕ್ಫ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸ್ಥಾಪಿಸಿದರು ಮತ್ತು ವಕ್ಫ್ ಗಳ ಕೇಂದ್ರೀಕರಣಕ್ಕೆ ಮಾರ್ಗವನ್ನು ಒದಗಿಸಿದರು.
ಈ ಕೇಂದ್ರೀಯ ಸಂಸ್ಥೆಯು ವಕ್ಫ್ ಕಾಯ್ದೆ, 1954 ರ ಸೆಕ್ಷನ್ 9 (1) ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲಾದ ವಿವಿಧ ರಾಜ್ಯ ವಕ್ಫ್ ಮಂಡಳಿಗಳ ಅಡಿಯಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತದೆ.

  1. ವಕ್ಫ್ ಕಾಯ್ದೆ, 1954 (1959, 1964, 1969, ಮತ್ತು 1984) ಗೆ ತಿದ್ದುಪಡಿಗಳು: ಈ ತಿದ್ದುಪಡಿಗಳು ವಕ್ಫ್ ಆಸ್ತಿಗಳ ಆಡಳಿತವನ್ನು ಮತ್ತಷ್ಟು ಸುಧಾರಿಸುವ ಗುರಿಯನ್ನು ಹೊಂದಿದ್ದವು.
  2. ವಕ್ಫ್ ಕಾಯ್ದೆ, 1995: ಈ ಸಮಗ್ರ ಕಾಯ್ದೆಯು 1954 ರ ಕಾಯ್ದೆ ಮತ್ತು ಅದರ ತಿದ್ದುಪಡಿಗಳನ್ನು ರದ್ದುಗೊಳಿಸಿತು:

ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತವನ್ನು ನಿಯಂತ್ರಿಸಲು ಇದನ್ನು ಜಾರಿಗೆ ತರಲಾಯಿತು.
ಇದು ವಕ್ಫ್ ಕೌನ್ಸಿಲ್, ರಾಜ್ಯ ವಕ್ಫ್ ಮಂಡಳಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅಧಿಕಾರ ಮತ್ತು ಕಾರ್ಯಗಳನ್ನು ಮತ್ತು ಮುತವಳ್ಳಿಯ ಕರ್ತವ್ಯಗಳನ್ನು ಸಹ ಒದಗಿಸುತ್ತದೆ.
ವಕ್ಫ್ ನ್ಯಾಯಮಂಡಳಿಗಳು, ಸಿವಿಲ್ ನ್ಯಾಯಾಲಯಗಳಿಗೆ ಹೋಲುವ ಅಧಿಕಾರಗಳನ್ನು ಹೊಂದಿರುವ ವಿಶೇಷ ನ್ಯಾಯಾಲಯಗಳನ್ನು ರಚಿಸಿದರು.
ನ್ಯಾಯಾಧಿಕರಣದ ತೀರ್ಪುಗಳು ಅಂತಿಮ ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುವುದಿಲ್ಲ.

  1. ವಕ್ಫ್ (ತಿದ್ದುಪಡಿ) ಕಾಯ್ದೆ, 2013 ಈ ಕೆಳಗಿನವುಗಳನ್ನು ಒಳಗೊಂಡಂತೆ ಗಮನಾರ್ಹ ಬದಲಾವಣೆಗಳನ್ನು ಪರಿಚಯಿಸಿತು:

ಮುಸ್ಲಿಂ ಕಾನೂನು ತಜ್ಞರು ಸೇರಿದಂತೆ ಮೂವರು ಸದಸ್ಯರ ವಕ್ಫ್ ನ್ಯಾಯಮಂಡಳಿಗಳನ್ನು ರಚಿಸಿದರು.
ಪ್ರತಿ ರಾಜ್ಯ ವಕ್ಫ್ ಮಂಡಳಿಯಲ್ಲಿ ಇಬ್ಬರು ಮಹಿಳಾ ಸದಸ್ಯರ ಅಗತ್ಯವಿತ್ತು.
ವಕ್ಫ್ ಆಸ್ತಿಗಳ ಮಾರಾಟ ಅಥವಾ ಉಡುಗೊರೆಯನ್ನು ನಿಷೇಧಿಸಲಾಯಿತು.
ಉತ್ತಮ ಬಳಕೆಗಾಗಿ ವಕ್ಫ್ ಆಸ್ತಿಗಳ ಗುತ್ತಿಗೆ ಅವಧಿಯನ್ನು 3 ವರ್ಷದಿಂದ 30 ವರ್ಷಗಳಿಗೆ ಹೆಚ್ಚಿಸಲಾಗಿದೆ.

  1. ವಕ್ಫ್ (ತಿದ್ದುಪಡಿ) ಮಸೂದೆ, 2025, ಮತ್ತು ಮುಸಲ್ಮಾನ ವಕ್ಫ್ (ರದ್ದತಿ) ಮಸೂದೆ, 2024

ವಕ್ಫ್ ಆಡಳಿತವನ್ನು ಆಧುನೀಕರಿಸುವುದು, ಕಾನೂನು ವಿವಾದಗಳನ್ನು ಕಡಿಮೆ ಮಾಡುವುದು ಮತ್ತು ದಕ್ಷತೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.
1995ರ ಕಾಯ್ದೆ ಮತ್ತು 2013ರ ತಿದ್ದುಪಡಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಯೋಜನೆಗಳು

ಕ್ವಾಮಿ ವಕ್ಫ್ ಬೋರ್ಡ್ ತರಾಕಿಯಾತಿ ಯೋಜನೆ (ಕ್ಯೂಡಬ್ಲ್ಯೂಬಿಟಿಎಸ್) ಮತ್ತು ಶಹರಿ ವಕ್ಫ್ ಸಂಪತ್ತಿ ವಿಕಾಸ್ ಯೋಜನೆ (ಎಸ್ ಡಬ್ಲ್ಯೂಎಸ್ ವಿವೈ) ಅನ್ನು ಭಾರತ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ (ಎಂಒಎಂಎ) ಮೂಲಕ ಜಾರಿಗೆ ತರಲಾಗುತ್ತಿದೆ. ಈ ಎರಡು ಯೋಜನೆಗಳು ರಾಜ್ಯ ವಕ್ಫ್ ಮಂಡಳಿಗಳ ಯಾಂತ್ರೀಕರಣ ಮತ್ತು ಆಧುನೀಕರಣಕ್ಕಾಗಿವೆ.

ಕ್ಯೂಡಬ್ಲ್ಯೂಬಿಟಿಎಸ್ ಅಡಿಯಲ್ಲಿ, ವಕ್ಫ್ ಆಸ್ತಿಗಳ ದಾಖಲೆಗಳನ್ನು ಗಣಕೀಕರಣಗೊಳಿಸಲು ಮತ್ತು ಡಿಜಿಟಲೀಕರಣಗೊಳಿಸಲು ಮತ್ತು ವಕ್ಫ್ ಮಂಡಳಿಗಳ ಆಡಳಿತವನ್ನು ಹೆಚ್ಚಿಸಲು ಮಾನವಶಕ್ತಿಯನ್ನು ನಿಯೋಜಿಸಲು ಸಿಡಬ್ಲ್ಯೂಸಿ ಮೂಲಕ ರಾಜ್ಯ ವಕ್ಫ್ ಮಂಡಳಿಗಳಿಗೆ ಸರ್ಕಾರಿ ಅನುದಾನ (ಜಿಐಎ) ಒದಗಿಸಲಾಗುತ್ತದೆ.
ವಕ್ಫ್ ಆಸ್ತಿಗಳಲ್ಲಿ ವಾಣಿಜ್ಯ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಎಸ್ ಡಬ್ಲ್ಯೂಎಸ್ ವಿವೈ ವಕ್ಫ್ ಮಂಡಳಿಗಳು ಮತ್ತು ಸಂಸ್ಥೆಗಳಿಗೆ ಬಡ್ಡಿರಹಿತ ಸಾಲವನ್ನು ನೀಡುತ್ತದೆ.
2019-20 ರಿಂದ 2023-24 ರವರೆಗೆ ಕ್ಯೂಡಬ್ಲ್ಯೂಬಿಟಿಎಸ್ ಮತ್ತು ಎಸ್ ಡಬ್ಲ್ಯೂಎಸ್ ವಿವೈ ಅಡಿಯಲ್ಲಿ ಕ್ರಮವಾಗಿ 23.87 ಕೋಟಿ ಮತ್ತು 7.16 ಕೋಟಿ ರೂ.

ತೀರ್ಮಾನ:

1913 ರಿಂದ 2024 ರವರೆಗೆ ಭಾರತದಲ್ಲಿ ವಕ್ಫ್ ಕಾನೂನುಗಳಲ್ಲಿನ ಬದಲಾವಣೆಗಳು ಸರಿಯಾದ ಆಡಳಿತ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವಾಗ ಸಮಾಜದ ಪ್ರಯೋಜನಕ್ಕಾಗಿ ವಕ್ಫ್ ಆಸ್ತಿಗಳನ್ನು ರಕ್ಷಿಸಲು ಮತ್ತು ನಿರ್ವಹಿಸಲು ಬಲವಾದ ಪ್ರಯತ್ನವನ್ನು ತೋರಿಸುತ್ತವೆ. ಪ್ರತಿಯೊಂದು ಕಾನೂನು ವಕ್ಫ್ ದತ್ತಿಗಳ ಮುಖ್ಯ ಉದ್ದೇಶವನ್ನು ಉಳಿಸಿಕೊಂಡು ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ವಕ್ಫ್ ತಿದ್ದುಪಡಿ ಮಸೂದೆ 2025 ವಕ್ಫ್ ನಿರ್ವಹಣೆಯನ್ನು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ಅಂತರ್ಗತಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

‘ಅಕ್ರಮವಿದ್ದರೆ ಎಸ್‌ಐಆರ್‌ ರದ್ದು’

ಸಂದರ್ಭ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಸಮಯದಲ್ಲಿ ಕೇಂದ್ರ ಚುನಾವಣಾ ಆಯೋಗ ಅಳವಡಿಸಿ ಕೊಂಡ ವಿಧಾನದಲ್ಲಿ ಯಾವುದೇ ಅಕ್ರಮ ಕಂಡುಬಂದರೆ, ಸಂಪೂರ್ಣ ಪ್ರಕ್ರಿಯೆ ಯನ್ನೇ ರದ್ದುಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

  • ಬಿಹಾರದ ಎಸ್‌ಐಆರ್‌ನ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಅಕ್ಟೋಬರ್‌ 7ರಂದು ನಡೆಸುವುದಾಗಿ ನ್ಯಾಯಮೂರ್ತಿ ಗಳಾದ ಸೂರ್ಯಕಾಂತ್‌ ಹಾಗೂ ಜಾಯ್‌ಮಲ್ಯ ಬಾಗ್ಚಿ ಅವರ ಪೀಠ ತಿಳಿಸಿತು. ಈ ಪ್ರಕ್ರಿಯೆಯ ಕುರಿತು ಅರೆಬರೆ ಅಭಿಪ್ರಾಯಗಳನ್ನು ನೀಡುವುದಿಲ್ಲ ಎಂದೂ ಪೀಠ ಹೇಳಿತು. 

ವಕೀಲರ ವಾದವೇನು?

  • ಎಸ್‌ಐಆರ್‌ ನ ಸಂಪೂರ್ಣ ‍ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬೇಕು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನ್ಯಾಯಾಲಯವು ಅದನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುತ್ತದೆ
  • ಬಫರ್ಝೋನ್ಕಡಿತ ಮಸೂದೆ ವಾಪಸ್

ಸಂದರ್ಭ:  ಕೆರೆಗಳ ಸಂರಕ್ಷಿತ ಪ್ರದೇಶವನ್ನು (ಬಫರ್‌ ಝೋನ್‌) ಕಡಿಮೆ ಮಾಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ’ಯನ್ನು ಸ್ಪಷ್ಟೀಕರಣ ಕೇಳಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ರಾಜ್ಯ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.

  • ಕೆರೆಗಳು ಮತ್ತು ರಾಜಕಾಲುವೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ‘ಸಂರಕ್ಷಿತ ಪ್ರದೇಶ’ ವನ್ನು ನಿಗದಿಪಡಿಸಲು ಹಾಗೂ ಬಫರ್‌ಝೋನ್‌ನಲ್ಲಿ ಸಾರ್ವಜನಿಕ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಗಳನ್ನು ಕೈಗೊಳ್ಳಲು ಮಸೂದೆ ತಿದ್ದುಪಡಿಗೆ ಸರ್ಕಾರ ಮುಂದಾಗಿತ್ತು.
  • ಆದರೆ, ಸರ್ಕಾರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ನಾಗರಿಕರ ಸಂಘವಾದ ‘ಬೆಂಗಳೂರು ಟೌನ್ ಹಾಲ್‌’, ರಾಜ್ಯಪಾಲರಿಗೆ ಪತ್ರ ಬರೆದು ಮಸೂದೆಗೆ ಅಂಕಿತ ಹಾಕದಂತೆ ಮನವಿ ಮಾಡಿತ್ತು.
  • ‘ಕೆರೆಗಳ ಬಫರ್ ಝೋನ್‌ ಅನ್ನು 30 ಮೀಟರ್‌ಗೆ ಇಳಿಸುವುದರಿಂದ ಬೆಂಗಳೂರಿನ ನೀರಿನ ಭದ್ರತೆ ಮತ್ತು ಪರಿಸರ ವ್ಯವಸ್ಥೆಯ ಸಮಗ್ರತೆಗೆ ಅಪಾಯ ಉಂಟಾಗಲಿದೆ. ಪರಿಸರ ಸಮತೋಲನ ಕಾಪಾಡಲು 30 ಮೀಟರ್‌ ಬದಲು 300 ಮೀಟರ್‌ಗೆ ಬಫರ್ ಝೋನ್‌ ಹೆಚ್ಚಿಸುವ ಅಗತ್ಯವಿದೆ’ ಎಂದು ಸಂಘವು ಪತ್ರದಲ್ಲಿ ಪ್ರತಿಪಾದಿಸಿತ್ತು.
  • ‘ಬೆಂಗಳೂರು ಟೌನ್ ಹಾಲ್‌’ ಸಂಘದ ಪತ್ರದಲ್ಲಿದ್ದ ಅಂಶಗಳನ್ನು ಉಲ್ಲೇಖಿಸಿ ಸ್ಪಷ್ಟೀಕರಣ ಕೇಳಿರುವ ರಾಜ್ಯಪಾಲರು, ಆ ಅಂಶಗಳಿಗೆ ವಿವರವಾದ ಸ್ಪಷ್ಟನೆಗಳ ಸಹಿತ ಕಡತ ಮತ್ತೊಮ್ಮೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
  • ಮತಾಂತರಗೊಂಡವರ ಜಾತಿ ಯಾವುದು?

ಸಂದರ್ಭ: ಜಾತಿ ತಾರತಮ್ಯ, ಶೋಷಣೆಗೆ ಗುರಿಯಾಗಿದ್ದ ದಲಿತರು ಸೇರಿದಂತೆ ದುರ್ಬಲ ಜಾತಿಗಳ ಲಕ್ಷಾಂತರ ಮಂದಿ ಕ್ರೈಸ್ತ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ದಲಿತರು ಮತಾಂತರವಾದ ನಂತರವೂ ತಾರತಮ್ಯ, ಸಾಮಾಜಿಕ–ಆರ್ಥಿಕ ಅಸಮಾನತೆ ಎದುರಿಸುತ್ತಿದ್ದಾರೆ. ಹೀಗಾಗಿ ತಮ್ಮನ್ನು ಪರಿಶಿಷ್ಟ ಜಾತಿ (ಎಸ್‌ಸಿ) ಎಂದೇ ಪರಿಗಣಿಸಿ, ಸೌಲಭ್ಯಗಳನ್ನು ನೀಡಬೇಕು ಎಂದು ಹಲವು ದಶಕಗಳಿಂದ ದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರು ಹೋರಾಟ ಮಾಡುತ್ತಿದ್ದಾರೆ.

  • ಸಂವಿಧಾನದ 341ನೇ ವಿಧಿಯ ಅಡಿಯಲ್ಲಿ ಎಸ್ಸಿ ಸಮು ದಾಯಗಳನ್ನು, 342ನೇ ವಿಧಿ ಅಡಿಯಲ್ಲಿ ಪರಿಶಿಷ್ಟ ಪಂಗಡಗಳನ್ನು ಮತ್ತು 340ನೇ ವಿಧಿಯಲ್ಲಿ ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸಲಾಗುತ್ತಿದೆ.
  • ಎಸ್ಸಿ ಪಟ್ಟಿಗೆ ಹೊಸ ಜಾತಿಯನ್ನು ಸೇರಿಸುವ ಇಲ್ಲವೇ ತೆಗೆಯುವ ಅಧಿಕಾರ ಸಂಸತ್ಗೆ ಮಾತ್ರ ಇದೆ. ಸಂಸತ್ತಿನ ನಿರ್ಧಾರದ ಬಳಿಕ ರಾಷ್ಟ್ರಪತಿಯವರು ಸಹಿ ಹಾಕಿ ಅದನ್ನು ಅಧಿಕೃತಗೊಳಿಸುತ್ತಾರೆ.
  • ಒಬ್ಬ ಎಸ್‌ಸಿ ವ್ಯಕ್ತಿಯು ಹಿಂದೂ ಧರ್ಮದಿಂದ ಬೇರೊಂದು ಧರ್ಮಕ್ಕೆ ಮತಾಂತರಗೊಂಡರೆ, ಅವರನ್ನು ಎಸ್‌ಸಿ ಎಂದು ಪರಿಗಣಿಸಲಾಗದು ಎಂದು 341ನೇ ವಿಧಿಯು ಹೇಳುತ್ತದೆ.
  • 1950ರಲ್ಲಿ ಹಿಂದೂಗಳನ್ನು ಮಾತ್ರ ಎಸ್‌ಸಿ ಎಂದು ಸಾಂವಿಧಾನಿಕ ಆದೇಶದ ಮೂಲಕ ಪರಿಗಣಿಸಲಾಗಿತ್ತು. ನಂತರ 1956ರ ತಿದ್ದುಪಡಿ ಮೂಲಕ ದಲಿತ ಸಿಖ್ಖರನ್ನು, 1990ರ ತಿದ್ದುಪಡಿಯ ಮೂಲಕ ದಲಿತ ಬೌದ್ಧರನ್ನು ಎಸ್‌ಸಿಗಳೆಂದು ಪರಿಗಣಿಸಬಹುದು ಎಂದು ಬದಲಿಸಲಾಯಿತು. ಆದರೆ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸುವ ಬಗ್ಗೆ ಯಾವುದೇ ತಿದ್ದುಪಡಿ ಆಗಿಲ್ಲ.
  • ಒಬಿಸಿ ಮೀಸಲಾತಿ: ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಎಸ್‌ಸಿಗಳನ್ನು ಕೆಲವು ರಾಜ್ಯಗಳಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂದರೆ, ರಾಜ್ಯ ಸರ್ಕಾರಗಳು ಬಯಸಿದರೆ, ದಲಿತ ಕ್ರೈಸ್ತರನ್ನು ಮತ್ತು ದಲಿತ ಮುಸ್ಲಿಮರನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಬಹುದು. ಆದರೆ, ಈ ಎರಡೂ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಎಸ್‌ಸಿ ಎಂದು ಪರಿಗಣಿಸಬಹುದೇ ಎನ್ನುವ ವಿಚಾರ ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿದೆ.
  • ಧರ್ಮದ ಆಧಾರದಲ್ಲಿ ಎಸ್‌ಸಿಗಳನ್ನು ಗುರುತಿಸುವ 1950ರ ಸಾಂವಿಧಾನಿಕ ಆದೇಶವೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎನ್ನುವುದು ದಲಿತ ಕ್ರೈಸ್ತ ಸಂಘಟನೆಗಳ ಆರೋಪವಾಗಿದೆ. 15(1) ವಿಧಿಗೆ (ಧರ್ಮದ ಹೆಸರಿನಲ್ಲಿ ತಾರತಮ್ಯ ಸಲ್ಲದು) ಆದೇಶವು ವಿರುದ್ಧವಾಗಿದೆ ಎನ್ನುವುದು ಅವರ ವಾದ. ಹೀಗಾಗಿ ದಲಿತರು ಮತಾಂತರಗೊಂಡರೂ ಅವರ‌‌ನ್ನು ಎಸ್‌ಸಿ ಎಂದೇ ಗುರುತಿಸಬೇಕು ಎನ್ನುವುದು ಅವರ ಆಗ್ರಹ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದು ಎಂದು ಸಂವಿಧಾನ ಹೇಳುತ್ತಿದ್ದು, ಮೀಸಲಾತಿ ನಿರಾಕರಿಸಲೂ ಧರ್ಮ ಆಧಾರವಾಗಬಾರದು ಎನ್ನುವುದು ಅವರ ಪ್ರತಿಪಾದನೆ.
  • 1983ರ ಸೂಸೈ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣ ದಲ್ಲಿ 1950ರ ಸಾಂವಿಧಾನಿಕ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಮತಾಂತರದ ನಂತರವೂ ಜಾತಿ ಮುಂದುವರಿ ಯುತ್ತದೆ ಎನ್ನುವುದನ್ನು ಆ ಪ್ರಕರಣದ ತೀರ್ಪಿನಲ್ಲಿ ಸು‍ಪ್ರೀಂ ಕೋರ್ಟ್ ಒಪ್ಪಿಕೊಂಡಿತು. ಆದರೆ, ಮತಾಂತರಗೊಂಡ ದಲಿತರು ಹಿಂದೂ ದಲಿತರಷ್ಟೇ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ಎಂಬುದಕ್ಕೆ ಸೂಕ್ತ ಆಧಾರ ಇಲ್ಲ ಎಂದಿತು. ಮತಾಂತರಗೊಂಡವರ ಶೋಷಣೆಯ ಸ್ವರೂಪ ಏನು ಅನ್ನುವುದರ ಬಗ್ಗೆ ಸಾಮಾಜಿಕ–ಆರ್ಥಿಕ ದತ್ತಾಂಶ ಒದಗಿಸುವಂತೆ ಸುಪ್ರೀಂ ಕೋರ್ಟ್ ತಾಕೀತು ಮಾಡಿತು.
  • ಅದರ ನಂತರ ಈ ವಿಚಾರದಲ್ಲಿ ಸಾಕಷ್ಟು ಕಾನೂನು ಹೋರಾಟ, ಶಾಸಕಾಂಗದ ಪ್ರಯತ್ನಗಳು ನಡೆದಿವೆ. ಆದರೆ, ಇದುವರೆಗೂ ಯಾವುದೇ ಫಲಶ್ರುತಿ ಸಿಕ್ಕಿಲ್ಲ. ಸಮಾನತೆ, ಘನತೆಯನ್ನು ಅರಸಿ ಮತಾಂತರಗೊಂಡ ದಲಿತರು ಮತ್ತು ಇತರ ದುರ್ಬಲ ಜಾತಿಗಳ ಜನರು, ಆ ಕಾರಣಕ್ಕಾಗಿ ಮೀಸಲಾತಿ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಒಂದು ಮಾನವೀಯ ವಿಚಾರವನ್ನಾಗಿ ಪರಿಗಣಿಸಿ, ಸಮಸ್ಯೆಗೆ ಪರಿಹಾರ ನೀಡಬೇಕು ಎನ್ನುವ ಒತ್ತಾಯವೂ ಇದೆ.

ಹೋರಾಟಕ್ಕೆ ದಶಕಗಳ ಇತಿಹಾಸ

  • ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ದಲಿತರನ್ನು ಕೂಡ ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಬೇಕು ಎಂಬ ಕೂಗಿಗೆ ದಶಕಗಳ ಇತಿಹಾಸವಿದೆ. ಈಗಲೂ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಮತಾಂತರಗೊಂಡವರಿಗೂ ಎಸ್‌ಸಿ ಸ್ಥಾನಮಾನ ನೀಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಿರೋಧಿಸುತ್ತಲೇ ಬಂದಿದೆ. ದಲಿತ ಕ್ರೈಸ್ತರು, ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ಅಭಿಪ್ರಾಯಪಟ್ಟ ಉದಾಹರಣೆಗಳೂ ಇವೆ. ‌
  • lಭಾರತೀಯ ರಿಜಿಸ್ಟ್ರಾರ್‌ ಜನರಲ್‌ (ಆರ್‌ಜಿಐ) ಕಚೇರಿಯು ಆರಂಭದಿಂದಲೂ ಹಿಂದೂ ಅಥವಾ ಸಿಖ್‌ ಧರ್ಮದವರನ್ನು ಬಿಟ್ಟು ಉಳಿದವರನ್ನು ಎಸ್‌ಸಿ ವ್ಯಾಪ್ತಿಗೆ ತರುವುದನ್ನು ಆಕ್ಷೇಪಿಸುತ್ತಲೇ ಇದೆ. ಅಸ್ಪೃಶ್ಯತೆ ಆಚರಣೆಯಿಂದ ಸಾಮಾಜಿಕವಾಗಿ ತಾರತಮ್ಯ ಅನುಭವಿಸುತ್ತಿರುವ ಸಮುದಾಯಗಳಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲಾಗುತ್ತದೆ ಎಂದು 1978ರಲ್ಲಿ ಅದು ಅಭಿಪ್ರಾಯ ಪಟ್ಟಿತ್ತು
  • l2001ರಲ್ಲಿ ಈ ವಿಚಾರ ಮತ್ತೆ ಪ್ರಸ್ತಾಪವಾದಾಗಲೂ ಆರ್‌ಜಿಐ ತನ್ನ ಹಿಂದಿನ ಅಭಿಪ್ರಾಯವನ್ನೇ ವ್ಯಕ್ತಪಡಿಸಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರು ಭಿನ್ನವಾದ ಜಾತಿಯ ಗುಂಪುಗಳಿಗೆ ಸೇರಿದವರು. ಈ ಕಾರಣದಿಂದ ‘ಒಂದು ಜನಾಂಗೀಯ ಗುಂಪಿ’ಗೆ ಸೇರಿದವರು ಎಂದು ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಆರ್‌ಜಿಐ ಪ್ರತಿಪಾದಿಸಿತ್ತು. ಅಸ್ಪೃಶ್ಯತೆ ಆಚರಣೆ ಹಿಂದೂ ಧರ್ಮ ಮತ್ತು ಅದರ ಕವಲುಗಳಲ್ಲಿ ಮಾತ್ರ ಇದೆ. ಕ್ರೈಸ್ತ ಮತ್ತು ಇಸ್ಲಾಂನಲ್ಲಿ ಅಂತಹ ಆಚರಣೆ ಇಲ್ಲದಿರುವುದರಿಂದ, ಪರಿಶಿಷ್ಟ ಜಾತಿಯವರು ಈ ಧರ್ಮಗಳಿಗೆ ಮತಾಂತರಗೊಂಡಾಗ ಅವರ ಎಸ್‌ಸಿ ಮಾನ್ಯತೆ ಹೋಗುತ್ತದೆ ಎಂಬುದು ಅದರ ಮತ್ತೊಂದು ವಾದ. ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಕೂಡ ಇದೇ ವಾದವನ್ನು ಮಂಡಿಸಿದೆ
  • lದಲಿತ ಕ್ರೈಸ್ತರನ್ನು ಎಸ್‌ಸಿಗೆ ಸೇರಿದವರು ಎಂದು ಪರಿಗಣಿಸುವ ಪ್ರಸ್ತಾವವನ್ನು 2019ರಲ್ಲಿ ತಿರಸ್ಕರಿಸಿದ್ದ ಕೇಂದ್ರ ಸರ್ಕಾರ, ಅವರನ್ನು ಎಸ್‌ಸಿ ವರ್ಗದಿಂದ ಹೊರಗಿಡುವುದಕ್ಕೆ 1936ರ ಬ್ರಿಟಿಷ್‌ ಆಡಳಿತದ ಆದೇಶವನ್ನು ಉಲ್ಲೇಖಿಸಿತ್ತು. ಬ್ರಿಟಿಷ್‌ ಸರ್ಕಾರವು ಜಾತಿಗಳನ್ನು ಪಟ್ಟಿ ಮಾಡುವಾಗ ‘ಶೋಷಿತ ವರ್ಗಗಳು’ ಎಂಬ ವರ್ಗೀಕರಣ ಮಾಡಿತ್ತು. ಆದರೆ, ಈ ವರ್ಗಗಳಲ್ಲಿರುವ ಜಾತಿಯಿಂದ ಭಾರತೀಯ ಕ್ರೈಸ್ತರನ್ನು ಹೊರಗಿಟ್ಟಿತ್ತು
  • lದಲಿತ ಕ್ರೈಸ್ತರು ಮತ್ತು ದಲಿತ ಮುಸ್ಲಿಮರಿಗೆ ಎಸ್‌ಸಿ ಮಾನ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸುತ್ತಿರುವವರು, 2007ರಲ್ಲಿ ಯುಪಿಎ ಸರ್ಕಾರ ರಚಿಸಿದ್ದ ರಂಗನಾಥ್‌ ಮಿಶ್ರಾ ನೇತೃತ್ವದ ಸಮಿತಿ ಮಾಡಿದ ಶಿಫಾರಸುಗಳನ್ನು ಉಲ್ಲೇಖಿಸುತ್ತಿದ್ದಾರೆ. ‘ಜನರು ಸ್ವಯಂಪ್ರೇರಿತರಾಗಿ ಮತಾಂತರಗೊಂಡಿರುವುದು ಅವರು ಹೊಂದಿರುವ ಎಸ್‌ಸಿ ಮಾನ್ಯತೆ ಮೇಲೆ ಪರಿಣಾಮ ಬೀರಬಾರದು’ ಎಂದು ಸಮಿತಿ ಹೇಳಿತ್ತು. ಆದರೆ, ಈ ವರದಿಯನ್ನು ಸರ್ಕಾರ ಒಪ್ಪಿಕೊಂಡಿಲ್ಲ ಎಂದು ಎನ್‌ಡಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು
  • lಕಳೆದ ವರ್ಷ ಪ್ರಕರಣವೊಂದರಲ್ಲಿ ತಮಿಳುನಾಡಿನ ಮಹಿಳೆಯೊಬ್ಬರಿಗೆ ಪರಿಶಿಷ್ಟ ಜಾತಿಯ ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಆ ಮಹಿಳೆಯ ಕುಟುಂಬವು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವುದು ವಿಚಾರಣೆ ವೇಳೆ ದೃಢಪಟ್ಟಿತ್ತು
  • lಕ್ರೈಸ್ತ ಧರ್ಮಕ್ಕೆ ಮತಾಂತರ ಆದ ತಕ್ಷಣ ಜನರು ಪರಿಶಿಷ್ಟ ಜಾತಿಯ ಮಾನ್ಯತೆ ಕಳೆದುಕೊಳ್ಳುತ್ತಾರೆ. ಆ ಬಳಿಕ ಅವರಿಗೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ರಕ್ಷಣೆ ಸಿಗುವುದಿಲ್ಲ ಎಂದು ಆಂಧ್ರ ಪ್ರದೇಶದ ಹೈಕೋರ್ಟ್‌ ಈ ವರ್ಷದ ಏಪ್ರಿಲ್‌ನಲ್ಲಿ ಪ್ರಕರಣವೊಂದರಲ್ಲಿ ತೀರ್ಪು ನೀಡಿತ್ತು
  • ಸಗಟು ಹಣದುಬ್ಬರ ಏರಿಕೆ: ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಹಣದುಬ್ಬರ ಏರಿಕೆ: ಕೇಂದ್ರ

ಸಂದರ್ಭ: ದೇಶದ ಸಗಟು  ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಶೇ 0.52ರಷ್ಟು ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  • ಆಹಾರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಸಗಟು ಹಣದುಬ್ಬರವು ಏರಿಕೆಯಾಗಿದೆ ಎಂದು ಅದು ತಿಳಿಸಿದೆ.
  • ಸಗಟು ಹಣದುಬ್ಬರ ಪ್ರಮಾಣವು ಜುಲೈ ಮತ್ತು ಜೂನ್ನಲ್ಲಿ ಕ್ರಮವಾಗಿ ಶೇ (–)0.58 ಮತ್ತು ಶೇ (–) 0.19ರಷ್ಟಿತ್ತು. ಏಪ್ರಿಲ್ನಲ್ಲಿ ಇದು ಶೇ 0.85ರಷ್ಟಿತ್ತು. ಕಳೆದ ಆಗಸ್ಟ್ನಲ್ಲಿ ಶೇ 1.25ರಷ್ಟು ಇತ್ತು ಎಂದು ತಿಳಿಸಿದೆ.
  • ಆಹಾರ ಪದಾರ್ಥಗಳು, ತಯಾರಿಕಾ ವಲಯದ ವಸ್ತುಗಳು, ಆಹಾರೇತರ ಉತ್ಪನ್ನಗಳು, ಸಾರಿಗೆ ಉಪಕರಣಗಳ ಬೆಲೆ ಹೆಚ್ಚಳವಾಗಿದೆ. ಇದು ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ ಎಂದು ಕೇಂದ್ರ ತಿಳಿಸಿದೆ.
  • ಜುಲೈನಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆ ಪ್ರಮಾಣ ಶೇ 6.29ರಷ್ಟಿತ್ತು. ಇದು ಆಗಸ್ಟ್‌ನಲ್ಲಿ ಶೇ 3.06ಕ್ಕೆ ತಗ್ಗಿದೆ. ತರಕಾರಿಗಳು ಮತ್ತು ಧಾನ್ಯಗಳ ಬೆಲೆ ಇಳಿಕೆ ಪ್ರಮಾಣ ಕ್ರಮವಾಗಿ ಶೇ 14.18 ಮತ್ತು ಶೇ 14.85ರಷ್ಟು ಆಗಿದೆ. ಜುಲೈನಲ್ಲಿ ಇದು ಕ್ರಮವಾಗಿ ಶೇ 28.96 ಮತ್ತು ಶೇ 15.12ರಷ್ಟು ಇತ್ತು.
  • ಜಿಎಸ್‌ಟಿ ಪರಿಷ್ಕರಣೆಯಿಂದ ಹಣದುಬ್ಬರವು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಪಿಎಚ್‌ಡಿಸಿಸಿಐ ಅಧ್ಯಕ್ಷ ಹೇಮಂತ್ ಜೈನ್ ಹೇಳಿದ್ದಾರೆ.
  • ಕಚ್ಚಾ ತೈಲ, ಸರಕುಗಳ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವು ಇಳಿಕೆಯಿಂದಾಗಿ ಸೆಪ್ಟೆಂಬರ್‌ ನಲ್ಲಿ ಸಗಟು ಹಣದುಬ್ಬರವು ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ಐಸಿಆರ್‌ಎ ಅಂದಾಜಿಸಿದೆ.
  • ಆಹಾರ ಪದಾರ್ಥಗಳ ಬೆಲೆ ಏರಿಕೆ ಯಿಂದ ಚಿಲ್ಲರೆ ಹಣದುಬ್ಬರವು ಆಗಸ್ಟ್ನಲ್ಲಿ ಶೇ 2.07ರಷ್ಟು ದಾಖಲಾಗಿತ್ತು.
  • ಅಮೆರಿಕಕ್ಕೆ ರಫ್ತು ಆಗಸ್ಟ್ನಲ್ಲಿ ಇಳಿಕೆ

ಸಂದರ್ಭ: ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತುಗಳ ಪ್ರಮಾಣವು ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಶೇಕಡ 14ರಷ್ಟು ಕಡಿಮೆ ಆಗಿದೆ.

  • ಭಾರತದ ಸರಕುಗಳ ಮೇಲೆ ಅಮೆರಿಕವು ಆಗಸ್ಟ್‌ನಿಂದ ಶೇ 50ರಷ್ಟು ತೆರಿಗೆ ವಿಧಿಸುತ್ತಿದೆ. ಆಗಸ್ಟ್‌ನಲ್ಲಿ ಭಾರತದಿಂದ ಅಮೆರಿಕಕ್ಕೆ ₹60,464 ಕೋಟಿ ಮೌಲ್ಯದ ಸರಕುಗಳು, ಸೇವೆಗಳು ರಫ್ತಾಗಿವೆ. ಜುಲೈನಲ್ಲಿ ರಫ್ತು ಮೊತ್ತವು ₹70,512 ಕೋಟಿ ಆಗಿತ್ತು.
  • ಅಮೆರಿಕಕ್ಕೆ ಆಗುವ ರಫ್ತಿನ ಮೊತ್ತ ಕಡಿಮೆ ಆಗಿದ್ದರೂ, ಭಾರತದ ರಫ್ತು ಪಟ್ಟಿಯಲ್ಲಿ ಅಮೆರಿಕವು ಆಗಸ್ಟ್‌ನಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
  • ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ರಫ್ತು ಪ್ರಮಾಣವು ಶೇ 7.15ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ–ಅಂಶಗಳು ಹೇಳಿವೆ.
  • ಅಮೆರಿಕದ ನಂತರದ ಸ್ಥಾನದಲ್ಲಿ ಯುಎಇ, ನೆದರ್ಲೆಂಡ್ಸ್‌, ಚೀನಾ, ಬ್ರಿಟನ್ ಇವೆ.
  • ಆಗಸ್ಟ್‌ 7ರಿಂದ ಅನ್ವಯ ಆಗುವಂತೆ ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 25ರಷ್ಟು ತೆರಿಗೆ ವಿಧಿಸಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಅಮೆರಿಕವು ಆಗಸ್ಟ್‌ 27ರಿಂದ ಅನ್ವಯ ಆಗುವಂತೆ ಭಾರತದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ತೆರಿಗೆ ವಿಧಿಸುತ್ತಿದೆ.
  • ಆರ್ಇಐಟಿಈಕ್ವಿಟಿಎಂದು ಪರಿಗಣನೆ

ಸಂದರ್ಭ: ಮ್ಯೂಚುವಲ್‌ ಫಂಡ್‌ಗಳ ಪಾಲಿಗೆ ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳನ್ನು (ಆರ್‌ಇಐಟಿ) ‘ಈಕ್ವಿಟಿ’ ಎಂದು ವರ್ಗೀಕರಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತೀರ್ಮಾನಿಸಿರುವುದು ಪ್ರಗತಿಪರ ನಡೆ ಎಂದು ಉದ್ಯಮ ವಲಯ ಹೇಳಿದೆ.

  • ಸೆಬಿ ನಡೆಯು ಆರ್‌ಇಐಟಿಗಳಲ್ಲಿ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ ಎಂದು ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ.
  • ಆರ್‌ಇಐಟಿಗಳಲ್ಲಿ ಮ್ಯೂಚುವಲ್‌ ಫಂಡ್‌ಗಳ ಹೂಡಿಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಸೆಬಿ ಕಳೆದ ವಾರ, ಸೆಬಿ (ಮ್ಯೂಚುವಲ್ಫಂಡ್ಸ್‌) ನಿಯಮ – 1996’ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ನೀಡಿದೆ. ತಿದ್ದುಪಡಿ ತಂದು ಆರ್‌ಇಐಟಿಗಳನ್ನು ‘ಈಕ್ವಿಟಿ’ ಎಂದು ವರ್ಗೀಕರಿಸಲಾಗುತ್ತದೆ. ಆದರೆ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳ ವರ್ಗೀಕರಣವನ್ನು ‘ಹೈಬ್ರಿಡ್’ ಎಂದೇ ಉಳಿಸಿಕೊಳ್ಳಲಾಗುತ್ತದೆ.
  • ಸೆಬಿ ಕೈಗೊಂಡಿರುವ ತೀರ್ಮಾನದ ಪರಿಣಾಮವಾಗಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗುತ್ತದೆ, ಇನ್ನಷ್ಟು ಹೆಚ್ಚು ಆರ್‌ಇಐಟಿಗಳು ಭಾರತದ ಷೇರುಪೇಟೆ ಗಳಲ್ಲಿ ನೋಂದಾಯಿತವಾಗಲು ಇದು ಉತ್ತೇಜನ ನೀಡುತ್ತದೆ ಎಂದು ಭಾರತೀಯ ಆರ್‌ಇಐಟಿಗಳ ಸಂಘಟನೆಯು (ಐಆರ್‌ಎ) ಹೇಳಿದೆ. ಷೇರುಪೇಟೆ ನೋಂದಾಯಿತ ಆರ್‌ಇಐಟಿಗಳ ಪ್ರತಿನಿಧಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  • ಆರ್‌ಇಐಟಿಗಳು ಆದಾಯ ತಂದುಕೊಡುವ ರಿಯಲ್‌ ಎಸ್ಟೇಟ್‌ ಆಸ್ತಿಗಳ ಮಾಲೀಕತ್ವ ಹೊಂದಿರುತ್ತವೆ ಅಥವಾ ಅಂತಹ ಆಸ್ತಿಗಳನ್ನು ನಿರ್ವ ಹಿಸುತ್ತಿರುತ್ತವೆ. ಅವು ಹೂಡಿಕೆದಾರರಿಗೆ ಆಸ್ತಿಯನ್ನು ನೇರವಾಗಿ ಖರೀದಿಸದೆಯೇ ಅವುಗಳ ಆದಾಯದಲ್ಲಿ ಒಂದು ಪಾಲನ್ನು ಪಡೆದುಕೊಳ್ಳಲು ನೆರವಾಗುತ್ತವೆ.
  • ಜಾಗತಿಕ ಮಟ್ಟದಲ್ಲಿ ಕೂಡ ಆರ್‌ಇಐಟಿಗಳು ಈಕ್ವಿಟಿ ಸೂಚ್ಯಂಕಗಳ ಭಾಗವಾಗಿವೆ, ಸೆಬಿ ಈಗ ತೆಗೆದು ಕೊಂಡಿ ರುವ ತೀರ್ಮಾನವು ಪ್ರಗತಿಪರವಾದುದು ಎಂದು ಐಆರ್‌ಎ ಹೇಳಿದೆ. ದೇಶದಲ್ಲಿ ಈಗ ಐದು ಆರ್‌ಇಐಟಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿವೆ.
  • ವಂತಾರಕ್ಕೆ ಎಸ್ಐಟಿ ಕ್ಲೀನ್ಚಿಟ್

ಸಂದರ್ಭ: ವನ್ಯಜೀವಿ ರಕ್ಷ‌ಣಾ ಮತ್ತು ಪುನರ್ವಸತಿ ಕೇಂದ್ರ ‘ವಂತಾರ’ದ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿರುವ ಸುಪ್ರೀಂ ಕೋರ್ಟ್‌ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್ ಚಿಟ್‌ ನೀಡಿದೆ.

  • ‘ಅನಂತ್‌ ಅಂಬಾನಿ ಅವರು ಜಾಮ್‌ನಗರದಲ್ಲಿ ನಡೆಸುತ್ತಿರುವ ‘ವಂತಾರ’ದಲ್ಲಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಎಸ್‌ಐಟಿ ವರದಿ ನೀಡಿದ್ದು, ಅದನ್ನು ಸ್ವೀಕರಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
  • ‘ವಂತಾರದ ಕಾರ್ಯಚಟುವಟಿಕೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಅವರ ನೇತೃತ್ವದ ಎಸ್‌ಐಟಿ ನೀಡಿರು‌ವ ವರದಿ ತೃಪ್ತಿ ನೀಡಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿ ದ್ದೇವೆ’ ಎಂದು ‌ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್, ಪಿ.ಬಿ.ವರಾಳೆ ಅವರ ಪೀಠ ತಿಳಿಸಿದೆ.
  • ‘ಇಂತಹ ಆರೋಪಗಳನ್ನು ಇನ್ನೂ ಮುಂದೆ ಪರಿಗಣಿಸಲಾಗುವುದಿಲ್ಲ. ತಜ್ಞರ ಸಹಕಾರದೊಂದಿಗೆ ತನಿಖಾ ತಂಡವು ಎಲ್ಲ ವಿಧದಲ್ಲಿ ಪರಿಶೀಲನೆ ನಡೆಸಿದೆ. ತನಿಖಾ ತಂಡ ನೀಡಿರುವ ವರದಿಯ ಆಧಾರದಲ್ಲಿಯೇ ನಾವು ಮುಂದಿನ ಕ್ರಮಕೈಗೊಳ್ಳುತ್ತೇವೆ. ಈ ವರದಿಯ ಶಿಫಾರಸು ಮತ್ತು ಸಲಹೆಗಳ ಆಧಾರದಲ್ಲಿ ಕ್ರಮಕೈಗೊಳ್ಳಲು ಎಲ್ಲ ಅಧಿಕಾರಿಗಳು ಸ್ವತಂತ್ರರಾಗಿರುತ್ತಾರೆ’ ಎಂದು ಹೇಳಿದೆ.
  • ಭಾರತ ಮತ್ತು ವಿದೇಶಗಳಿಂದ ಕಾನೂನುಬಾಹಿರವಾಗಿ ‘ವಂತಾರ’ವು ವನ್ಯಪ್ರಾಣಿಗಳನ್ನು ಪಡೆದುಕೊಳ್ಳುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾಗಿರುವ ಆರೋಪಗಳು ಮತ್ತು ಈ ಬಗ್ಗೆ ಎನ್‌ಜಿಒ ಮತ್ತು ವನ್ಯಜೀವಿ ಸಂಘಟನೆಗಳು ನೀಡಿದ್ದ ದೂರುಗಳ ಆಧಾರದಲ್ಲಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ಈ ಕುರಿತ ತನಿಖೆಗಾಗಿ ಆಗಸ್ಟ್‌ 25ರಂದು ಎಸ್‌ಐಟಿ ರಚಿಸಿತ್ತು.
  • ನ್ಯಾ. ಚಲಮೇಶ್ವರ್‌ ಅವರ ನೇತೃತ್ವದ ಎಸ್‌ಐಟಿಗೆ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್‌, ಮುಂಬೈನ ಮಾಜಿ ಪೊಲೀಸ್‌ ಆಯುಕ್ತ ಹೇಮಂತ್‌ ನಗ್ರಾಲೆ ಮತ್ತು ಕಂದಾಯ ಸೇವೆಗಳ ಹಿರಿಯ ಅಧಿಕಾರಿ ಅನಿಷ್‌ ಗುಪ್ತಾ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು.
  • ವಂತಾರದಲ್ಲಿನ ಬಂಧಿತ ಆನೆಗಳನ್ನು ಅವುಗಳ ಮಾಲೀಕ‌ರಿಗೆ ಹಿಂದಿರುಗಿಸಲು ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಕೋರಿ ಸಿ.ಆರ್‌. ಜಯ ಸುಕಿನ್‌ ಸಲ್ಲಿಸಿರುವ ಅರ್ಜಿ ಅಸ್ಪಷ್ಟವಾಗಿದೆ ಎಂದು ಸುಪ್ರೀಂಕೋರ್ಟ್‌ ಆ.14ರಂದು ಹೇಳಿತ್ತು.
  • ವೈಶಾಲಿಗೆ ಗ್ರ್ಯಾಂಡ್ಸ್ವಿಸ್ಚೆಸ್ ಕಿರೀಟ: ಮುಂದಿನ ವರ್ಷದ ಕ್ಯಾಂಡಿಡೇಟ್ಸ್ಗೂ ಅರ್ಹತೆ

ಸಂದರ್ಭ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಆರ್‌.ವೈಶಾಲಿ ಸತತ ಎರಡನೇ ಬಾರಿ ಫಿಡೆ ಮಹಿಳಾ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟ ಧರಿಸಿದರು. ಆ ಮೂಲಕ ಮುಂದಿನ ವರ್ಷದ ಮಹಿಳಾ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನೂ ಸಂಪಾದಿಸಿದರು.

  • ಮಾಜಿ ವಿಶ್ವ ಮಹಿಳಾ ಚಾಂಪಿಯನ್‌ ಝೊಂಗ್‌ಯಿ ತಾನ್ ಜೊತೆ ಹೋರಾಡಿ ಡ್ರಾ ಸಾಧಿಸಿದ ಅವರು ಅಂತಿಮವಾಗಿ 11 ಸುತ್ತುಗಳಿಂದ 8 ಅಂಕ ಕಲೆಹಾಕಿದರು.
  • ಅಜರ್‌ಬೈಜಾನ್‌ನ ಉಲ್ವಿಯಾ ಫತಾಲಿಯೇವಾ ಜೊತೆ ಡ್ರಾ ಮಾಡಿಕೊಂಡ ರಷ್ಯಾದ ಕ್ಯಾತರಿನಾ ಲಾಗ್ನೊ ಸಹ ಎಂಟು ಅಂಕ ಪಡೆದರೂ ಟೈಬ್ರೇಕರ್‌ನಲ್ಲಿ ಎರಡನೇ ಸ್ಥಾನಕ್ಕೆ ಸರಿದರು. ಈ ಟೂರ್ನಿಯಿಂದ ಇಬ್ಬರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವ ಕಾರಣ ಲಾಗ್ನೊ ಸಹ ಅವಕಾಶ ಪಡೆದರು.
  • ಈ ಟೂರ್ನಿಯಲ್ಲಿ ವೈಶಾಲಿ ಆರು ಪಂದ್ಯ ಗೆದ್ದು, ಒಂದು ಸೋತು, ನಾಲ್ಕು ಡ್ರಾ ಮಾಡಿಕೊಂಡರು.
  • ವೈಶಾಲಿ ಅವರು ಕ್ಯಾಂಡಿಡೇಟ್ಸ್ಗೆ ಅರ್ಹತೆ ಪಡೆದ ಭಾರತದ ಮೂರನೇ ಆಟಗಾರ್ತಿ. ಜಾರ್ಜಿಯಾದ ಬಟುಮಿಯಲ್ಲಿ ವಿಶ್ವಕಪ್‌ ಗೆದ್ದುಕೊಂಡಿದ್ದ ದಿವ್ಯಾ ದೇಶಮುಖ್ ಮತ್ತು ರನ್ನರ್ ಅಪ್‌ ಆಗಿದ್ದ ಕೋನೇರು ಹಂಪಿ ಅವರು ಈ ಮೊದಲೇ ಅರ್ಹತೆ ಪಡೆದಿದ್ದರು.
  • ಕಜಾಕಸ್ತಾನದ ಬಿಬಿಸಾರ ಅಸೌನ್ಬಯೇವಾ, ಚೀನಾದ ತಾನ್ಝೊಂಗ್ಯಿ ಮತ್ತು  ಯಕ್ಸಿನ್ ಸಾಂಗ್ (ತಲಾ 7.5) ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.
  • ಓಪನ್ ವಿಭಾಗದಲ್ಲಿ ಡಚ್‌ ಗ್ರ್ಯಾಂಡ್‌ಮಾಸ್ಟರ್‌ ಅನಿಶ್‌ ಗಿರಿ ಎಂಟು ಅಂಕ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಗಿರಿ ಜೊತೆಗೆ ಈ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆದ ಮಥಾಯಸ್‌ ಬ್ಲೂಬಾಮ್, ಹಿಕಾರು ನಕಾಮುರಾ (ರೇಟಿಂಗ್ ಆಧಾರ), ಆರ್‌.ಪ್ರಜ್ಞಾನಂದ ಮತ್ತು ಫ್ಯಾಬಿಯಾನ ಕರುವಾನ ಅವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯುವುದು ಖಚಿತವಾಗಿದೆ.‌
  • ಕೊನೆಯ ಮೂರು ಸ್ಥಾನಗಳು, ಗೋವಾದಲ್ಲಿ ಮುಂದಿನ ತಿಂಗಳು ನಡೆಯುವ ವಿಶ್ವಕಪ್‌ನಲ್ಲಿ ತೀರ್ಮಾನವಾಗಲಿವೆ. ಕ್ಯಾಂಡಿಡೇಟ್ಸ್ ವಿಜೇತರು ಹಾಲಿ ವಿಶ್ವ ಚಾಂಪಿಯನ್‌ ಗುಕೇಶ್ ಅವರಿಗೆ ಸವಾಲು ಹಾಕುವ ಅರ್ಹತೆ ಪಡೆಯುತ್ತಾರೆ.
  • ಭಾರತದ ಅರ್ಜುನ್ ಇರಿಗೇಶಿ, ನಿಹಾಲ್ ಸರಿನ್, ವಿದಿತ್ ಗುಜರಾತಿ ತಲಾ 7 ಅಂಕ, ಪ್ರಣವ್‌ ವಿ. 6.5 ಅಂಕ ಪಡೆದರು.
  • ವಿಶ್ವದಾಖಲೆಯೊಂದಿಗೆ ಡುಪ್ಲಾಂಟಿಸ್ಗೆ ಚಿನ್ನ
  • ಸ್ವೀಡನ್‌ನ ದಿಗ್ಗಜ ಅಥ್ಲೀಟ್ ಮೊಂಡೊ ಡುಪ್ಲಾಂಟಿಸ್ ಅವರು ಪೋಲ್‌ವಾಲ್ಟ್‌ ನಲ್ಲಿ ವಿಶ್ವದಾಖಲೆಯೊಂದಿಗೆ ಮೂರನೇ ಬಾರಿ ವಿಶ್ವ ಚಾಂಪಿಯನ್‌ ಷಿಪ್‌ ನಲ್ಲಿ ಚಿನ್ನದ ಪದಕ ಗೆದ್ದರು.
  • 25 ವರ್ಷ ವಯಸ್ಸಿನ ಈ ತಾರೆ, ಟೋಕಿಯೋದ ನ್ಯಾಷನಲ್ ಸ್ಟೇಡಿಯಂ ನಲ್ಲಿ 6.30 ಮೀ ಜಿಗಿದು 14ನೇ ಬಾರಿ ವಿಶ್ವ ದಾಖಲೆ ಸ್ಥಾಪಿಸಿದರು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments