ಎಐ ಆಧಾರಿತ ‘ವ್ಯೋಮಮಿತ್ರ’ ಅಭಿವೃದ್ಧಿ: ಇಸ್ರೊ
ಸಂದರ್ಭ: ಮಾನವಸಹಿತ ಗಗನಯಾನಕ್ಕೆ ಪೂರ್ವಬಾವಿಯಾಗಿ ಕೈಗೊಳ್ಳಲಾಗುವ ಮಾನವರಹಿತ ಕಾರ್ಯಾಚರಣೆಗೆ ವಿನ್ಯಾಸಗೊಳಿಸಲಾಗಿರುವ ‘ವ್ಯೋಮಮಿತ್ರ’ವು, ಮನುಷ್ಯನ ಪ್ರತಿಕೃತಿ ಯಂತಿರುವ ರೊಬೊಟ್ ಆಗಿದ್ದು, ಇದು ಕೃತಕ ಬುದ್ಧಿಮತ್ತೆ (ಎಐ) ಆಧರಿಸಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಗುರುವಾರ ಇಲ್ಲಿ ಹೇಳಿದ್ದಾರೆ.
- ‘ವ್ಯೋಮಮಿತ್ರ’ ಹೊತ್ತ ಬಾಹ್ಯಾಕಾಶ ಕೋಶವನ್ನು ಡಿಸೆಂಬರ್ ಅಂತ್ಯಕ್ಕೆ ಉಡ್ಡಯನ ಮಾಡಲಾಗುವುದು.
- ‘ಮಾನವಸಹಿತ ಗಗನಯಾನ ಕಾರ್ಯಕ್ರಮದ ಭಾಗವಾಗಿ ಗಗನಯಾನಿಗಳನ್ನು ಹೊತ್ತ ಕೋಶವನ್ನು ಭೂಮಿಯಿಂದ 400 ಕಿ.ಮೀ ದೂರದ ಕಕ್ಷೆಗೆ ಕಳುಹಿಸಲಾಗುವುದು. ಈ ವೇಳೆ, ತಾಪಮಾನ, ವಾಯುಭಾರ, ತೇವಾಂಶ ಹಾಗೂ ಇಂಗಾಲದ ಡೈಆಕ್ಸೈಡ್ ಪ್ರಮಾಣದಂತಹ ಅಂಶಗಳ ಕುರಿತು ಅಧ್ಯಯನ ನಡೆಸಲಾಗುವುದು’.
- ‘ಈ ಮಹತ್ವಾಕಾಂಕ್ಷೆ ಯೋಜನೆಗೆ ಭಾರತೀಯ ವಾಯುಪಡೆ, ನೌಕಾಪಡೆ, ಡಿಆರ್‌ಡಿಒ ಹಾಗೂ ಇತರ ಹಲವು ಸಂಸ್ಥೆಗಳು ಇಸ್ರೊ ಜೊತೆ ಕೈಜೋಡಿಸಿವೆ’.
ಕೆಲ ಭಾರತೀಯರ ವೀಸಾ ರದ್ದು
ಸಂದರ್ಭ: ‘ಫೆಂಟಾನಿಲ್’ ಮಾದಕದ್ರವ್ಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪದ ಮೇರೆಗೆ ಭಾರತದ ಕೆಲ ಉದ್ಯಮ ಕಾರ್ಯನಿರ್ವಾಹಕರು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪ್ರಮುಖರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವರಿಗೆ ವೀಸಾ ನಿರಾಕರಿಸಲಾಗಿದೆ ಎಂದು ಅಮೆರಿಕ ತಿಳಿಸಿದೆ.
- ಮಾದಕದ್ರವ್ಯ ಕಳ್ಳಸಾಗಣೆ ಆರೋಪದ ಮೇರೆಗೆ ವೀಸಾ ರದ್ದು ಮಾಡಿರುವ ಮತ್ತು ವೀಸಾ ನಿರಾಕರಿಸಿರುವ ವ್ಯಕ್ತಿಗಳ ಗುರತನ್ನು ಅಮೆರಿಕದ ರಾಯಭಾರ ಕಚೇರಿ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಅಮೆರಿಕದ ಈ ಕ್ರಮದ ಬಗ್ಗೆ ಕೇಂದ್ರ ಸರ್ಕಾರದಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ತಿಳಿಸಿದೆ. ಇದರ ಪರಿಣಾಮ, ವೀಸಾ ರದ್ದುಗೊಳಿಸಿರುವ ಅಥವಾ ನಿರಾಕರಿಸಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬದ ಸದಸ್ಯರು ಅಮೆರಿಕಕ್ಕೆ ಪ್ರಯಾಣಿಸಲು ಅನರ್ಹರು ಎಂದು ಪ್ರಕಟಣೆ ವಿವರಿಸಿದೆ.
ವಿಶ್ವ ಕುಸ್ತಿ: ಅಂತಿಮ್‌ಗೆ ಕಂಚು
ಸಂದರ್ಭ: ಯುವ ಕುಸ್ತಿಪಟು ಅಂತಿಮ್ ಪಂಘಲ್ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಪದಕ ತಮ್ಮದಾಗಿಸಿಕೊಂಡರು. ಈ ಚಾಂಪಿಯನ್ ಷಿಪ್‌ನಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಇದಾಗಿದೆ.
- 2023ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ 21 ವರ್ಷದ ಅಂತಿಮ್, ಮಹಿಳೆಯರ 53 ಕೆ.ಜಿ. ವಿಭಾಗದ ಕಂಚಿನ ಪದಕದ ಸ್ಪರ್ಧೆಯಲ್ಲಿ 9–1 ಅಂತರದಿಂದ ಸ್ವೀಡನ್‌ನ ಎಮ್ಮಾ ಜೊನ್ನಾ ಡೆನಿಸ್ ಮಾಲ್ಮ್‌ಗ್ರೆನ್ ಅವರನ್ನು ಸುಲಭವಾಗಿ ಮಣಿಸಿದರು. ಎಮ್ಮಾ ಅವರು 23 ವರ್ಷದೊಳಗಿನ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.
- ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಎರಡನೇ ಮಹಿಳಾ ಕುಸ್ತಿಪಟು ಎಂಬ ಹಿರಿಮೆಗೆ ಅಂತಿಮ್ ಪಾತ್ರವಾದರು. ವಿನೇಶ್ ಪೋಗಟ್ ಎರಡು ಪದಕ ಗೆದ್ದ ಮೊದಲ ಕುಸ್ತಿಪಟುವಾಗಿದ್ದಾರೆ.