Fri. Oct 10th, 2025

  • ನೌಕರರ ಆರೋಗ್ಯಕ್ಕೆಸಂಜೀವಿನಿ

ಸಂದರ್ಭ: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (ಕೆಎಎಸ್‌ಎಸ್‌) ಅ.1ರಿಂದ ಅಧಿಕೃತವಾಗಿ ಜಾರಿಯಾಗಲಿದೆ.

  • ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಅನುಷ್ಠಾನ ವಿಳಂಬವಾಗಿತ್ತು.
  • ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ, ಅನುದಾನಿತ ಸಂಸ್ಥೆಗಳ 3 ಲಕ್ಷ ಸಿಬ್ಬಂದಿ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಪ್ರಯೋಜನ ಸಿಗಲಿದೆ.
  • ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಬಾರಿ ಮಹಿಳಾ ನೌಕರರ ತಂದೆತಾಯಿಗೂ ವಿಸ್ತರಿಸಲಾಗಿದೆ.
  • ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್ಎಎಸ್ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸಲಿದ್ದು, ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸಬೇಕಿದೆ. ಯೋಜನೆ ವ್ಯಾಪ್ತಿಗೆ ಒಳಪಡಿಸಲು ಇಚ್ಛಿಸದವರು ಅ.18ರ ಒಳಗೆ ತಮ್ಮ ಮೇಲಧಿಕಾರಿಗಳ ಮೂಲಕ ಲಿಖಿತ ಆಕ್ಷೇಪ ಸಲ್ಲಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
  • 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ಇಪಿಎಫ್ವಿಮೆ: ನಿಯಮ ಸರಳ

ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟರೆ ಆ ಕುಟುಂಬ ಎದುರಿಸಬೇಕಾಗುವ ಸವಾಲುಗಳು ಒಂದೆರಡಲ್ಲ. ಇಡೀ ಕುಟುಂಬ ಆರ್ಥಿಕ ಮುಗ್ಗಟ್ಟಿಗೆ ಸಿಲುಕುತ್ತದೆ. ಅವಲಂಬಿತರು ಬದುಕಿನ ಬಂಡಿ ಎಳೆಯಲು ಕಷ್ಟಪಡುತ್ತಾರೆ. ಜೀವನದ ಅಂಥ ಅನಿರೀಕ್ಷಿತ ಅವಘಡಗಳಿಂದ ರಕ್ಷಣೆ ನೀಡುವುದು ವಿಮಾ ಸೌಲಭ್ಯ. ದೇಶದಲ್ಲಿ ಖಾಸಗಿ ವಲಯದಲ್ಲಿ ದುಡಿಯುವವರ ಸಂಖ್ಯೆ ಹೆಚ್ಚಿದೆ. ಆದರೆ, ಇಂದಿನ ಧಾವಂತದ ಬದುಕಿನಲ್ಲಿ ವಿಮೆಗೆ ಆದ್ಯತೆ ನೀಡುವವರು ಕಡಿಮೆ. ಬಹುತೇಕರ ಆದ್ಯತೆಯ ಪಟ್ಟಿಯಲ್ಲಿ ವಿಮೆಯದ್ದು ಕೊನೆಯ ಸ್ಥಾನ.

ಸರ್ಕಾರಿ ನೌಕರರಿಗೆ ಹೋಲಿಸಿದರೆ ಖಾಸಗಿ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಅತ್ಯಲ್ಪ. ಹಾಗಾಗಿಯೇ, ಖಾಸಗಿ ವಲಯದ ಸಂಬಳ ಪಡೆಯುವ ಉದ್ಯೋಗಿಗಳಿಗೆ ಜೀವ ವಿಮೆಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರವು 1976ರಲ್ಲಿ ಉದ್ಯೋಗಿಯ ಠೇವಣಿ ಆಧಾರಿತ ವಿಮಾ ಯೋಜನೆಯನ್ನು (ಇಡಿಎಲ್‌ಐ- ಎಂಪ್ಲಾಯೀಸ್‌ ಡೆಪಾಸಿಟ್‌ ಲಿಂಕ್ಡ್‌ ಇನ್ಸೂರೆನ್ಸ್‌ ಸ್ಕೀಮ್‌) ಪರಿಚಯಿಸಿತು. ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಇಪಿಎಫ್ ಖಾತೆದಾರರಿಗೆ ಒದಗಿಸುವ ವಿಮಾ ರಕ್ಷಣೆ ಇದಾಗಿದೆ. ಸೇವಾವಧಿಯಲ್ಲಿ ವಿಮೆಗೆ ಒಳಪಟ್ಟ ವ್ಯಕ್ತಿಯು (ಉದ್ಯೋಗಿ) ಮೃತಪಟ್ಟ ಸಂದರ್ಭದಲ್ಲಿ, ಅವರ ಕುಟುಂಬಕ್ಕೆ ವಿಮಾ ಮೊತ್ತ ಸಿಗಲಿದೆ.

ಸರಳಗೊಂಡ ನಿಯಮಗಳು: ಸದ್ಯ ಈ ವಿಮೆ ಪಡೆಯಲು ನಿಗದಿಪಡಿಸಿದ್ದ ಷರತ್ತುಗಳನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಡಿಲಗೊಳಿಸಿದೆ. ಇದು ಉದ್ಯೋಗಿಗಳ ಪಾಲಿಗೆ ವರದಾನವಾಗಿದೆ.

1. ಈ ಮೊದಲು ಉದ್ಯೋಗಿ ಮೃತಪಟ್ಟ ನಂತರ ಅವರ ಭವಿಷ್ಯ ನಿಧಿ (ಪಿ.ಎಫ್) ಖಾತೆಯಲ್ಲಿರುವ ಮೊತ್ತ ಆಧರಿಸಿ ಸಂತ್ರಸ್ತ ಕುಟುಂಬಕ್ಕೆ ಸಿಗಬೇಕಾದ ವಿಮಾ ಪರಿಹಾರವನ್ನು ಲೆಕ್ಕ ಹಾಕಲಾಗುತ್ತಿತ್ತು. ಪ್ರಸ್ತುತ ಆ ನಿಯಮವನ್ನು ತೆಗೆದುಹಾಕಲಾಗಿದೆ. 

ಇನ್ನು ಮುಂದೆ ಇಪಿಎಫ್‌ಒ ಚಂದಾದಾರರಾದ ಯಾವುದೇ ಉದ್ಯೋಗಿ ಕೆಲಸದಲ್ಲಿ ಇರುವಾಗ ಮೃತಪಟ್ಟರೆ ಅವರ ಪಿ.ಎಫ್. ಖಾತೆಯಲ್ಲಿ ₹50 ಸಾವಿರಕ್ಕಿಂತ ಕಡಿಮೆ ಮೊತ್ತವಿದ್ದರೂ ಅವರ ಕುಟುಂಬಕ್ಕೆ ಕನಿಷ್ಠ ₹50 ಸಾವಿರ ಪರಿಹಾರ ಸಿಗಲಿದೆ. ದೇಶದಲ್ಲಿ ಪ್ರತಿವರ್ಷ 5 ಸಾವಿರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಈ ಹೊಸ ನಿಯಮ ಊರುಗೋಲಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

2. ಉದ್ಯೋಗಿಗಳು ವೈಯಕ್ತಿಕ ಹಾಗೂ ಇತರ ಕಾರಣಗಳಿಗೆ ಕಂಪನಿ ಬದಲಿಸುವುದು ಸಾಮಾನ್ಯ. ಈ ಹಿಂದೆ, ಉದ್ಯೋಗಿಯ 12 ತಿಂಗಳ ನಿರಂತರ ಕೆಲಸವನ್ನು ಲೆಕ್ಕ ಹಾಕಿ ವಿಮಾ ಪರಿಹಾರ ನೀಡಲಾಗುತ್ತಿತ್ತು. ಇದರಿಂದ ಒಂದು ಕಂಪನಿಯಿಂದ ಕೆಲಸ ಬಿಟ್ಟು, ಮತ್ತೊಂದು ಕಂಪನಿಗೆ ಸೇರಿಕೊಳ್ಳುವ ಉದ್ಯೋಗಿಗಳು ಮರಣ ಹೊಂದಿದರೆ ಅವರ ಕುಟುಂಬಗಳು ಇಡಿಎಲ್‌ಐ ಪ್ರಯೋಜನ ಪಡೆಯಲು ತೊಡಕಾಗುತ್ತಿತ್ತು. ಈಗ, ಈ ನಿಯಮವನ್ನೂ ಪರಿಷ್ಕರಿಸಲಾಗಿದೆ. ಉದ್ಯೋಗಿಯು ಒಂದು ಕಂಪನಿ ತೊರೆದು ಮತ್ತೊಂದು ಕಂಪನಿಗೆ ಸೇರಿಕೊಳ್ಳಲು 60 ದಿನಗಳಾದರೂ ಅದನ್ನು ಈಗ ಪರಿಗಣಿಸುವುದಿಲ್ಲ. ಹಳೆಯ ಮತ್ತು ಹೊಸ ಕೆಲಸದ ಅವಧಿಯನ್ನು ಒಟ್ಟಿಗೆ ಸೇರಿಸಿ, ‘ನಿರಂತರ ಕೆಲಸ’ ಎಂದು ಪರಿಗಣಿಸಲಾಗುತ್ತದೆ.

3. ಪಿ.ಎಫ್‌ ಖಾತೆಗೆ ಕೊನೆಯ ಕೊಡುಗೆ ನೀಡಿದ ಆರು ತಿಂಗಳ ಒಳಗಾಗಿ ಉದ್ಯೋಗಿ ಮೃತಪಟ್ಟು, ಅವರ ಹೆಸರು ಕಂಪನಿ/ಸಂಸ್ಥೆಯ ವೇತನದಾರರ ಪಟ್ಟಿಯಲ್ಲಿದ್ದರೆ ಇಡಿಎಲ್‌ಐ ‍ಪ್ರಯೋಜನಕ್ಕೆ ಅರ್ಹ ಎಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.    

ನಿಯಮಗಳ ಸರಳೀಕರಣದಿಂದಾಗಿ ಆಗಾಗ್ಗೆ ಉದ್ಯೋಗ ಬದಲಾಯಿಸುವ, ಮಾಸಿಕ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳು ಎದುರಿಸುತ್ತಿದ್ದ ದೀರ್ಘಕಾಲೀನ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗಿದೆ.

ಆಧಾರ:ಕಾರ್ಮಿಕ ಸಚಿವಾಲಯದ ಅಧಿಸೂಚನೆ, ಇಪಿಎಫ್‌ಒ ವಾರ್ಷಿಕ ವರದಿ

ವಿಮಾ ಲೆಕ್ಕಾಚಾರ ಹೇಗೆ?

ಇಡಿಎಲ್‌ಐ ಅಡಿ ಪ್ರಯೋಜನ ಪಡೆಯಲು 12 ತಿಂಗಳುಗಳಲ್ಲಿ ಚಂದಾದಾರರ ಪಿ.ಎಫ್‌ ಖಾತೆಯಲ್ಲಿನ ಸರಾಸರಿ ಮೊತ್ತವನ್ನು ಪರಿಗಣಿಸಲಾಗುತ್ತದೆ. ಒಟ್ಟಾರೆ ವಿಮಾ ರಕ್ಷಣೆಯ ಲೆಕ್ಕಾಚಾರವು ಎರಡು ಹಂತದ ಪ್ರಕ್ರಿಯೆ. ಮೃತ ಉದ್ಯೋಗಿಯ 12 ತಿಂಗಳ ಸರಾಸರಿ ಮಾಸಿಕ ವೇತನವನ್ನು (ಮೂಲ ವೇತನ + ತುಟ್ಟಿಭತ್ಯೆ ) ಗರಿಷ್ಠ ₹15 ಸಾವಿರಕ್ಕೆ ಮಿತಿಗೊಳಿಸಿ, ಅದನ್ನು 35 ಪಟ್ಟು ಗುಣಿಸುವುದು ಒಂದು ಹಂತ; 12 ತಿಂಗಳಿನಲ್ಲಿ ಮೃತ ಉದ್ಯೋಗಿಯ ಭವಿಷ್ಯ ನಿಧಿ ಖಾತೆಯಲ್ಲಿರುವ ಸರಾಸರಿ ಮೊತ್ತದ ಶೇ 50ರಷ್ಟನ್ನು ಪರಿಗಣಿಸುವುದು ಎರಡನೇ ಹಂತ.

ಈ ಸೌಲಭ್ಯ ಪಡೆಯಲು ಗರಿಷ್ಠ ವೇತನ ಮಿತಿಯನ್ನು ₹15 ಸಾವಿರಕ್ಕೆ ಮಿತಿಗೊಳಿಸಲಾಗಿದೆ. ಮೂಲ ವೇತನವು ಇದಕ್ಕಿಂತಲೂ ಹೆಚ್ಚಿದ್ದರೂ ವಿಮಾ ಸೌಲಭ್ಯ ಪಡೆಯುವಾಗ ₹15 ಸಾವಿರವನ್ನಷ್ಟೇ ಪರಿಗಣಿಸಲಾಗುತ್ತದೆ. 

ಉದಾಹರಣೆಗೆ, ಮಾಸಿಕ ಸಂಬಳ ₹25 ಸಾವಿರ ಇದ್ದು, ಪಿ.ಎಫ್‌. ಖಾತೆಯಲ್ಲಿ ₹6 ಲಕ್ಷ ಇದೆ ಎಂದಿಟ್ಟುಕೊಳ್ಳಿ. ಆಗ ಈ ವಿಧಾನದಲ್ಲಿ ಲೆಕ್ಕ ಹಾಕಿದಾಗ (₹25,000×35= ₹8.75 ಲಕ್ಷ ಮತ್ತು ₹6 ಲಕ್ಷದ ಶೇ 50 ಅಂದರೆ ₹3 ಲಕ್ಷ ) ವಿಮಾ ಮೊತ್ತವು ₹11.75 ಲಕ್ಷ ಆಗುತ್ತದೆ. ಆದರೆ, 2021ರಲ್ಲಿ ಇಡಿಎಲ್‌ಐ ಅಡಿ ಗರಿಷ್ಠ ವಿಮಾ ಮೊತ್ತವನ್ನು ₹7 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಹಾಗಾಗಿ, ನಾಮಿನಿಗೆ ಇಷ್ಟು ಮೊತ್ತವಷ್ಟೇ ಸಿಗುತ್ತದೆ. ಪರಿಷ್ಕೃತ ನಿಯಮಗಳ ಪ್ರಕಾರ ಈ ಯೋಜನೆಯಡಿ ಕನಿಷ್ಠ ₹50 ಸಾವಿರ ಮತ್ತು ಗರಿಷ್ಠ ₹7 ಲಕ್ಷ ವಿಮೆ ಸೌಲಭ್ಯ ಕುಟುಂಬದವರಿಗೆ ಸಿಗಲಿದೆ. 

ಪ್ರಯೋಜನ ಪಡೆಯುವುದು ಹೇಗೆ?

ವಿಮಾದಾರರು (ಉದ್ಯೋಗಿ) ಸೂಚಿಸಿದ ನಾಮಿನಿಗೆ ಯೋಜನೆಯಡಿ ಪರಿಹಾರ ಸಿಗಲಿದೆ. ಒಂದು ವೇಳೆ ನಾಮಿನಿ ಹೆಸರನ್ನು ನೋಂದಾಯಿಸದಿದ್ದರೆ, ಅವರ ಕುಟುಂಬದ ಸದಸ್ಯರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು. ಹಕ್ಕುದಾರರು ಭರ್ತಿ ಮಾಡಿದ ಇಡಿಎಲ್‌ಐ ಅರ್ಜಿಗೆ ಉದ್ಯೋಗದಾತ ಕಂಪನಿ/ ಸಂಸ್ಥೆ ಸಹಿ ಮಾಡಿ ದೃಢೀಕರಿಸಬೇಕು.

ಒಂದು ವೇಳೆ, ಉದ್ಯೋಗದಾತರು ಇಲ್ಲದಿದ್ದರೆ ಅಥವಾ ಉದ್ಯೋಗದಾತರ ಸಹಿ ಪಡೆಯಲು ಸಾಧ್ಯವಾಗದಿದ್ದರೂ ಪರ್ಯಾಯ ಕ್ರಮದ ಮೂಲಕ ವಿಮಾ ಸೌಲಭ್ಯದ ಹಾದಿಯನ್ನು ಸುಗಮಗೊಳಿಸಲಾಗಿದೆ.

ಬ್ಯಾಂಕ್ ವ್ಯವಸ್ಥಾಪಕರು (ಮೃತ ಉದ್ಯೋಗಿಯ ಖಾತೆ ಇರುವ ಬ್ಯಾಂಕ್‌), ಸ್ಥಳೀಯ ಸಂಸದ ಅಥವಾ ಶಾಸಕರು, ಗೆಜೆಟೆಡ್ ಅಧಿಕಾರಿ, ನ್ಯಾಯಾಧೀಶರು, ಸ್ಥಳೀಯ ನಗರ ಸಂಸ್ಥೆಯ ಸದಸ್ಯರು/ ಅಧ್ಯಕ್ಷರು, ಪೋಸ್ಟ್ ಮಾಸ್ಟರ್ ಅಥವಾ ಸಬ್-ಪೋಸ್ಟ್ ಮಾಸ್ಟರ್, ಇಪಿಎಫ್‌ ಅಥವಾ ಇಪಿಎಫ್‌ಒ ಕೇಂದ್ರೀಯ ಧರ್ಮದರ್ಶಿ ಮಂಡಳಿಯ (ಸಿಬಿಟಿ) ಪ್ರಾದೇಶಿಕ ಸಮಿತಿ ಸದಸ್ಯರಿಂದ ಕ್ಲೇಮು ಅರ್ಜಿ ದೃಢೀಕರಿಸಿ ಸೂಕ್ತ ದಾಖಲೆಗಳ ಸಮೇತ ಪ್ರಾದೇಶಿಕ ಇಪಿಎಫ್ ಆಯುಕ್ತರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸ್ವೀಕರಿಸಿದ ನಂತರ ಆಯುಕ್ತರು 30 ದಿನಗಳೊಗೆ ಇತ್ಯರ್ಥಪಡಿಸಬೇಕೆಂಬ ನಿಯಮವಿದೆ.

ಗಿಗ್‌ ಕಾರ್ಮಿಕರಿಗೆ ಸೌಲಭ್ಯ

ಗಿಗ್‌ ಕಾರ್ಮಿಕರು ಸಾಂಪ್ರದಾಯಿಕವಾದ ಉದ್ಯೋಗದಾತ ಮತ್ತು ಉದ್ಯೋಗಿ ನಡುವಿನ ಕೆಲಸದ ವ್ಯವಸ್ಥೆಯಿಂದ ದೂರ ಇರುತ್ತಾರೆ. ಈ ವಲಯದಲ್ಲಿ ದುಡಿಯುವವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಾರ್ಯನಿರತವಾಗಿದೆ. ಇದರಿಂದ ದೇಶದ ಆರ್ಥಿಕತೆಗೆ ಮತ್ತಷ್ಟು ಬೆಂಬಲ ನೀಡಿದಂತಾಗುತ್ತದೆ ಎಂಬುದು ಸಚಿವಾಲಯದ ಲೆಕ್ಕಾಚಾರ. ಗಿಗ್‌ ಕಾರ್ಮಿಕರಿಗೆ ಇಡಿಎಲ್‌ಐ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಚೌಕಟ್ಟು ರೂಪಿಸುವುದಾಗಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವೀಯ ಹೇಳಿದ್ದಾರೆ. 

ಈ ವಿಷಯದಲ್ಲಿ ಕರ್ನಾಟಕ ಸರ್ಕಾರವು ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ‘ಕರ್ನಾಟಕ ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಕಾಯ್ದೆ– 2025’ ರೂಪಿಸಿದೆ. ಈ ಕಾರ್ಮಿಕರು ಸರಕು ಸೇವೆ ವಿತರಣೆ ವೇಳೆ ಅವಘಡಕ್ಕೀಡಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ ಅವರ ಅವಲಂಬಿತರು ತೊಂದರೆಗೆ ಸಿಲುಕುತ್ತಾರೆ. ಇದಕ್ಕಾಗಿ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಕಾಯ್ದೆಯ ಉದ್ದೇಶ.

ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಆಧಾರಿತ ಸೇವೆಯ ಪ್ರತಿ ವಹಿವಾಟಿನ ಮೇಲೆ ಶೇ 1ರಿಂದ ಶೇ 2ರಷ್ಟು ಮೀರದಂತೆ ಕ್ಷೇಮಾಭಿವೃದ್ಧಿ ಶುಲ್ಕ ಸಂಗ್ರಹಿಸಲಾಗುತ್ತದೆ. ಅವರಿಗೆ ಭವಿಷ್ಯ ನಿಧಿ, ಅಪಘಾತ ಸೌಲಭ್ಯ, ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಕ್ಕೆ ನೆರವು, ಅಂತ್ಯಸಂಸ್ಕಾರಕ್ಕೆ ಧನಸಹಾಯ ನೀಡಲು ಕಾಯ್ದೆ ಅವಕಾಶ ಕಲ್ಪಿಸಿದೆ. 

2025–26ನೇ ಆರ್ಥಿಕ ವರ್ಷದಲ್ಲಿ ಗಿಗ್‌ ವಲಯದಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆ ದೇಶದಲ್ಲಿ ಒಂದು ಕೋಟಿ ದಾಟಲಿದ್ದು, 2029–30ರ ವೇಳೆಗೆ 2.35 ಕೋಟಿಗೆ ತಲುಪಲಿದೆ ಎಂದು ನೀತಿ ಆಯೋಗ ಅಂದಾಜಿಸಿದೆ. ಕರ್ನಾಟಕದಲ್ಲಿ 4 ಲಕ್ಷ ಗಿಗ್‌ ಕಾರ್ಮಿಕರಿದ್ದಾರೆ.

ಸೌಲಭ್ಯಕ್ಕೆ ಯಾರು ಅರ್ಹ?

ನೌಕರರ ಭವಿಷ್ಯ ನಿಧಿ (ಇಪಿಎಫ್‌) ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952ರ ಅಡಿ ನೋಂದಣಿಯಾದ ಎಲ್ಲಾ ಕಂಪನಿಗಳು/ ಸಂಸ್ಥೆಗಳು ಇಡಿಎಲ್‌ಐ ಯೋಜನೆಗೆ ಒಳಪಡುತ್ತವೆ. ಅಂತಹ ಸಂಸ್ಥೆಗಳು ಉದ್ಯೋಗಿಗಳಿಗೆ ಇಡಿಎಲ್‌ಐ ಸೌಲಭ್ಯ ಒದಗಿಸಬೇಕಿದೆ. ನೌಕರರ ಭವಿಷ್ಯ ನಿಧಿ ಮತ್ತು ನೌಕರರ ಪಿಂಚಣಿ ಯೋಜನೆ (ಇಪಿಎಸ್‌) ಸಂಯೋಜಿತ ಯೋಜನೆ ಇದಾಗಿದೆ. ಇಪಿಎಫ್‌ ಖಾತೆ ಹೊಂದಿರುವ ಯಾವುದೇ ಉದ್ಯೋಗಿ ಸ್ವಯಂಚಾಲಿತವಾಗಿ ಇಡಿಎಲ್‌ಐಗೆ ಅರ್ಹರಾಗುತ್ತಾರೆ. ಪ್ರತಿ ಉದ್ಯೋಗಿಯು ಅವರ ಹುದ್ದೆ ಅಥವಾ ಸಂಬಳ ಲೆಕ್ಕಿಸದೆ ವಿಮೆಗೆ ಒಳಪಡುತ್ತಾರೆ.

ಉದ್ಯೋಗಿಯು ಈ ವಿಮಾ ಸೌಲಭ್ಯ ಪಡೆಯಲು ವೈಯಕ್ತಿಕವಾಗಿ ಕಂತು ಪಾವತಿಸಬೇಕಿಲ್ಲ. ಕಂಪನಿಗಳೇ ಉದ್ಯೋಗಿಯ ಮೂಲ ವೇತನದ ಶೇ 0.5ರಷ್ಟು ಅಥವಾ ಪ್ರತಿ ತಿಂಗಳು ₹75 ಅನ್ನು ಇಡಿಎಲ್‌ಐಗೆ ಕೊಡುಗೆಯಾಗಿ ನೀಡುತ್ತವೆ. 

  • ಖನಿಜಗಳ ಮೇಲೆ ತೆರಿಗೆಸುಪ್ರೀಂಗೆ ಮೇಲ್ಮನವಿ

ಸಂದರ್ಭ: ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳು ಶಾಸನಬದ್ಧ ಅಧಿಕಾರ ಹೊಂದಿವೆ ಎಂಬ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದೆ.

  • ‘9 ಸದಸ್ಯರು ಇದ್ದ ನ್ಯಾಯಪೀಠವು 8:1ರ ಅನುಪಾತದಲ್ಲಿ ಬಹುಮತ ತೀರ್ಪು ನೀಡಿದೆ. ತೆರಿಗೆ ವಿಧಿಸುವ ವಿಚಾರ ಗಂಭೀರವಾಗಿರುವ ಕಾರಣ, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತಿದೆ’ ಎಂದು ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ವಿಕ್ರಮ ನಾಥ್‌ ಹಾಗೂ ಸಂದೀಪ್‌ ಮೆಹ್ತಾ ಅವರು ಇರುವ ಪೀಠಕ್ಕೆ ತಿಳಿಸಿದ್ದಾರೆ.
  • ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿ, ಆಗ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ.ಚಂದ್ರಚೂಡ್‌ ನೇತೃತ್ವದ 9 ಸದಸ್ಯರಿದ್ದ ಸಂವಿಧಾನ ಪೀಠವು, ಕಳೆದ ವರ್ಷ ಜುಲೈ 25ರಂದು 8:1ರ ಬಹುಮತದ ತೀರ್ಪು ನೀಡಿತ್ತು.
  • ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರ ಇದೆ. ತೆರಿಗೆ ಮತ್ತು ರಾಯಧನ ಬೇರೆಬೇರೆ ಎಂದೂ ಪೀಠ ಸ್ಪಷ್ಟಪಡಿಸಿತ್ತು.
  • ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನ ನಿಲುವು ವ್ಯಕ್ತಪಡಿಸಿದ್ದರು. ರಾಯಧನ ಕೂಡ ತೆರಿಗೆಯ ಒಂದು ರೂಪವೇ ಆಗಿದ್ದು, ಇಂತಹ ತೆರಿಗೆ ಆಕರಣೆ ಮಾಡುವುದಕ್ಕೆ ಕೇಂದ್ರಕ್ಕೆ ಅಧಿಕಾರ ಇದೆ ಎಂದು ಭಿನ್ನ ತೀರ್ಪು ನೀಡಿದ್ದರು.
  • ಡ್ರಗ್ಪ್ರೊಟ್ಎಐ ಔಷಧ ಸಂಶೋಧನೆಯಲ್ಲಿ ಕ್ರಾಂತಿ

ಸಂದರ್ಭ: ಜೀವವನ್ನು ಉಳಿಸುವ ಔಷಧಗಳನ್ನು ಕಂಡುಹಿಡಿಯುವುದು ಒಂದು ದೀರ್ಘ ಮತ್ತು ಸವಾಲಿನ ಹಾದಿ.

  • ಹೊಸ ಔಷಧವೊಂದನ್ನು ಮಾರುಕಟ್ಟೆಗೆ ತರಲು ಹಲವು ವರ್ಷಗಳ ಸಮಯ ಮತ್ತು ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಆದರೂ, ಶೇ 90ರಷ್ಟು ಔಷಧಗಳು ಯಶಸ್ವಿಯಾಗದೆ ಪ್ರಯೋಗ ಹಂತದಲ್ಲೇ ವಿಫಲಗೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣ, ರೋಗದ ಮೇಲೆ ಪರಿಣಾಮ ಬೀರಬಲ್ಲ ಸೂಕ್ತ ಪ್ರೋಟೀನ್ ಗುರಿಯನ್ನು ಆರಂಭದಲ್ಲೇ ನಿರ್ದಿಷ್ಟವಾಗಿ ಗುರುತಿಸಲು ವಿಜ್ಞಾನಿಗಳಿಗೆ ಇರುವ ಸವಾಲು. ಇದಕ್ಕೊಂದು ಪರಿಹಾರವಾಗಿ, ಮುಂಬೈನ ಐಐಟಿ ಬಾಂಬೆ ಸಂಸ್ಥೆಯ ವಿಜ್ಞಾನಿಗಳುಡ್ರಗ್ಪ್ರೊಟ್ಎಐ’ (DrugProtAI) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ನವೀನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಔಷಧ ಸಂಶೋಧನೆಯ ಹಾದಿಯನ್ನು ಬದಲಿಸಬಲ್ಲ ಮಹತ್ವದ ಹೆಜ್ಜೆಯಾಗಿದೆ.
  • ನಮ್ಮ ದೇಹದಲ್ಲಿ ಸುಮಾರು 20,000ಕ್ಕೂ ಹೆಚ್ಚು ವಿಭಿನ್ನ ಪ್ರೋಟೀನ್ಗಳಿವೆ. ಇವು ನಮ್ಮ ದೇಹದ ಜೈವಿಕ ಕ್ರಿಯೆಗಳಿಗೆ ಆಧಾರ. ಪ್ರತಿಯೊಂದು ರೋಗಕ್ಕೂ ಒಂದು ನಿರ್ದಿಷ್ಟ ಕಾರಣವಿರುತ್ತದೆ ಮತ್ತು ಆ ಕಾರಣಕ್ಕೆ ಯಾವುದಾದರು ಪ್ರೋಟೀನ್‌ಗಳ ಪಾತ್ರವಿರುತ್ತದೆ. ಉದಾಹರಣೆಗೆ, ಕ್ಯಾನ್ಸರ್‌ಕೋಶಗಳ ಬೆಳವಣಿಗೆಗೆ ಕೆಲವು ಪ್ರೋಟೀನ್‌ಗಳು ಕಾರಣವಾಗಿರುತ್ತವೆ. ಔಷಧಗಳು ಈ ಪ್ರೋಟೀನ್‌ಗಳಿಗೆ ಅಂಟಿಕೊಂಡು ಅವುಗಳ ಚಟುವಟಿಕೆಯನ್ನು ನಿಯಂತ್ರಿಸಬೇಕು ಅಥವಾ ನಿಲ್ಲಿಸಬೇಕು.
  • ಪ್ರೋಟೀನೊಂದು ಔಷಧವೊಂದರ ಗುರಿಯಾಗಲು ಸೂಕ್ತವಾಗಿದೆಯೇ ಎಂಬುದನ್ನು ವೈಜ್ಞಾನಿಕವಾಗಿ ‘ಡ್ರಗ್ಗೆಬಿಲಿಟಿ’ (Druggability) ಎಂದು ಕರೆಯುತ್ತಾರೆ. ಇದನ್ನು ಗುರುತಿಸುವುದು ಸುಲಭವಲ್ಲ. ಏಕೆಂದರೆ, ಔಷಧಗಳಿಗೆ ಸೂಕ್ತ ಗುರಿಯಾಗಬಲ್ಲ ಪ್ರೋಟೀನ್‌ಗಳ ಸಂಖ್ಯೆ ಬಹಳ ಕಡಿಮೆ. ಸಾಂಪ್ರದಾಯಿಕ ವಿಧಾನಗಳಲ್ಲಿ ಇದರ ಪತ್ತೆಗೆ ಪ್ರಯೋಗಾಲಯಗಳ ಸಂಶೋಧನೆ ಮತ್ತು ಗಣಕಯಂತ್ರ ಆಧಾರಿತ ವಿಶ್ಲೇಷಣೆ ಎರಡನ್ನೂ ಬಳಸಲಾಗುತ್ತದೆ. ಈ ವಿಧಾನಗಳು ನಿಧಾನ ಮತ್ತು ನಿಖರತೆಯಲ್ಲಿ ಸ್ವಲ್ಪ ಕಡಿಮೆ.
  • ಹಿಂದಿನ ತಂತ್ರಜ್ಞಾನಗಳಿಗೆ ಹೋಲಿಸಿದರೆ, ಹೊಸಡ್ರಗ್ಪ್ರೊಟ್ಎಐ ತಂತ್ರಜ್ಞಾನ ಹೆಚ್ಚು ಮಾಹಿತಿಯನ್ನು ವಿಶ್ಲೇಷಿಸುತ್ತದೆ. ಪ್ರೋಟೀನ್ಗಳು ಅಮೈನೊ ಆಮ್ಲಗಳಿಂದ (amino acids) ರೂಪುಗೊಂಡಿರುತ್ತವೆ.
  • ಹಿಂದಿನ ತಂತ್ರಜ್ಞಾನಗಳು ಕೇವಲ ಅಮೈನೊ ಆಮ್ಲಗಳ ರಚನೆಯನ್ನು ಮಾತ್ರ ಪರಿಗಣಿಸುತ್ತಿದ್ದವು. ಆದರೆ, ಡ್ರಗ್ಪ್ರೊಟ್ಎಐಸುಮಾರು 183 ವಿವಿಧ ಪ್ರೋಟೀನ್ಗಳ ಗುಣಲಕ್ಷಣಗಳನ್ನು ವಿಶ್ಲೇಷಿಸುತ್ತದೆ. ಇದರಲ್ಲಿ, ಪ್ರೋಟೀನ್‌ನ ಭೌತಿಕ ಹಾಗೂ ರಾಸಾಯನಿಕ ಗುಣಗಳು, ಅದರ ಅಮೈನೊ ಆಮ್ಲಗಳ ಅನುಕ್ರಮ (sequence), ಇತರೆ ಪ್ರೋಟೀನ್‌ಗಳೊಂದಿಗೆ ಅದು ಹೇಗೆ ಸಂವಹನ ನಡೆಸುತ್ತದೆ, ಮತ್ತು ಕೋಶದ ಯಾವ ಭಾಗದಲ್ಲಿ ಅದು ಇದೆ ಎಂಬ ವಿವರಗಳೂ ಸೇರಿವೆ. ಇದು ಕೇವಲ ಒಂದು ಪ್ರೋಟೀನನ್ನು ಅದರ ರಚನೆಯ ಆಧಾರದ ಮೇಲೆ ನೋಡುವುದಿಲ್ಲ, ಬದಲಿಗೆ ಅದರ ಸಂಪೂರ್ಣ ಗುಣಲಕ್ಷಣಗಳನ್ನು ಆಧರಿಸಿ ವಿಶ್ಲೇಷಿಸುತ್ತದೆ. ಇದು ನಿಖರತೆಯನ್ನು ಹೆಚ್ಚಿಸಿದೆ. ಈ ಕಾರಣಕ್ಕಾಗಿಯೇ ‘ಡ್ರಗ್‌ಪ್ರೊಟ್‌ಎಐ’ ಇತರ ತಂತ್ರಜ್ಞಾನಗಳಾದ ‘ಸ್ಪೈಡರ್’ (SPIDER) ಮತ್ತು ‘ಡ್ರಗ್‌ಟಾರ್’(DrugTar)ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.
  • ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಇರುವ ಒಂದು ದೊಡ್ಡ ಸವಾಲು, ‘ಅಸಮತೋಲಿತ ದತ್ತಾಂಶ’ (imbalanced data) ಅಥವಾ ಮಾಹಿತಿ. ಔಷಧಗಳ ಗುರಿಯಾಗದ ಪ್ರೋಟೀನ್‌ಗಳ ಸಂಖ್ಯೆ, ಗುರಿಯಾಗುವ ಪ್ರೋಟೀನ್‌ಗಳ ಸಂಖ್ಯೆಗಿಂತ ಬಹಳ ಜಾಸ್ತಿ ಇದೆ. ಹೀಗಾಗಿ, ಕೃತಕ ಬುದ್ಧಿಮತ್ತೆಯ ಮಾದರಿಯು ಈ ಮಾಹಿತಿಯ ಮೇಲೆ ತರಬೇತಿಗೊಂಡರೆ, ಅದು ಕೇವಲ ಗುರಿಯಾಗದ ಪ್ರೋಟೀನ್‌ಗಳನ್ನೇ ಹೆಚ್ಚು ನಿಖರವಾಗಿ ಗುರುತಿಸುತ್ತದೆ. ಆದರೆ, ವಿರಳವಾಗಿರುವ, ಆದರೆ ಪ್ರಮುಖವಾಗಿರುವ ಗುರಿಯಾಗಬಲ್ಲ ಪ್ರೋಟೀನ್‌ಗಳನ್ನು ಗುರುತಿಸಲು ವಿಫಲವಾಗುತ್ತದೆ.
  • ಈ ಸಮಸ್ಯೆಯನ್ನು ಪರಿಹರಿಸಲು, ‘ಡ್ರಗ್‌ಪ್ರೊಟ್‌ಎಐ’ ಅನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ‘ಪಾರ್ಟಿಷನಿಂಗ್-ಆಧಾರಿತ ಸಮಗ್ರ ವಿಧಾನ’ (partitioning-based ensemble method) ಎಂಬ ವಿಶೇಷ ತಂತ್ರವನ್ನು ಬಳಸಿದ್ದಾರೆ. ಇದರಡಿಯಲ್ಲಿ, ಗುರಿಯಾಗದ ಪ್ರೋಟೀನ್‌ಗಳ ದೊಡ್ಡ ಸಮೂಹವನ್ನು ಸಣ್ಣ ಸಣ್ಣ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ನಂತರ, ಹಲವಾರು ಕೃತಕ ಬುದ್ಧಿಮತ್ತೆ ಮಾದರಿಗಳನ್ನು ತರಬೇತಿಗೊಳಿಸಲಾಗುತ್ತದೆ. ಪ್ರತಿಯೊಂದು ಮಾದರಿಯು ಒಂದು ಸಣ್ಣ ಗುಂಪಿನೊಂದಿಗೆ, ಮತ್ತು ಗುರಿಯಾಗಬಲ್ಲ ಪ್ರೋಟೀನ್‌ಗಳ ಸಂಪೂರ್ಣ ಗುಂಪಿನೊಂದಿಗೆ ತರಬೇತಿ ಪಡೆಯುತ್ತದೆ. ಇದರಿಂದ, ಎಲ್ಲ ಮಾದರಿಗಳಿಗೂ ಸಮತೋಲಿತ ಮಾಹಿತಿ ಸಿಗುತ್ತದೆ ಮತ್ತು ಪ್ರಮುಖ ಮಾಹಿತಿಯು ಕಣ್ಮರೆಯಾಗುವುದಿಲ್ಲ. ಈ ತಂತ್ರದಿಂದಾಗಿ, ‘ಡ್ರಗ್‌ಪ್ರೊಟ್‌ಎಐ’ ಶೇ. 87ರಷ್ಟು ನಿಖರತೆಯನ್ನು ಸಾಧಿಸಿದೆ.
  • ತಮ್ಮ ಸಾಧನವು ನೈಜವಾಗಿ ಎಷ್ಟು ಪರಿಣಾಮಕಾರಿ ಎಂದು ಪರೀಕ್ಷಿಸಲು, ಸಂಶೋಧಕರು ಒಂದು ವಿಶೇಷ ಪರೀಕ್ಷೆ ನಡೆಸಿದರು. ಅವರು ‘ಡ್ರಗ್‌ಪ್ರೊಟ್‌ಎಐ’ಅನ್ನು ಇತ್ತೀಚೆಗೆ ಔಷಧಗಳಿಗೆ ಗುರಿ ಎಂದು ಗುರುತಿಸಲ್ಪಟ್ಟಿದ್ದ ಪ್ರೋಟೀನ್‌ಗಳನ್ನು ಗುರುತಿಸಲು ಬಳಸಿದರು. ಈ ಪ್ರೋಟೀನ್‌ಗಳನ್ನು ಕೃತಕ ಬುದ್ಧಿಮತ್ತೆ ಮಾದರಿಯ ತರಬೇತಿಯ ಸಮಯದಲ್ಲಿ ಬಳಸಲಾಗಿರಲಿಲ್ಲ. ಈ ಪರೀಕ್ಷೆಯಲ್ಲಿ, ‘ಡ್ರಗ್‌ಪ್ರೊಟ್‌ಎಐ’ 81 ಹೊಸ ಗುರಿಗಳಲ್ಲಿ 61 ಪ್ರೋಟೀನ್‌ಗಳನ್ನು ಸರಿಯಾಗಿ ಗುರುತಿಸಿತು. ಇದು ಈ ತಂತ್ರಜ್ಞಾನದ ಪ್ರಾಯೋಗಿಕ ಮತ್ತು ನೈಜ-ಜೀವನದ ಅನ್ವಯಿಕತೆಯನ್ನು ಸಾಬೀತುಪಡಿಸುತ್ತದೆ.
  • ಈ ಸಾಧನದ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ, ಕೇವಲ ಪ್ರೋಟೀನ್‌ಗಳನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿ ಊಹಿಸುವುದು (prediction) ಮಾತ್ರ ಅಲ್ಲ, ಅದು ‘ಏಕೆ’ ಒಂದು ಪ್ರೋಟೀನ್ ಡ್ರಗ್ಗೆಬಲ್ ಆಗಿದೆ ಎಂಬುದನ್ನು ವಿವರಿಸುತ್ತದೆ. ಶ್ಯಾಪ್’ (SHAP – SHapley Additive exPlanations) ಎಂಬ ತಂತ್ರವನ್ನು ಬಳಸಿ, ಪ್ರೋಟೀನ್ ಯಾವ ಗುಣಲಕ್ಷಣಗಳು ಅದರ ಡ್ರಗ್ಗೆಬಿಲಿಟಿಗೆ ಹೆಚ್ಚು ಕಾರಣವಾಗಿವೆ ಎಂಬುದನ್ನು ಇದು ವಿಶ್ಲೇಷಿಸುತ್ತದೆ. ಉದಾಹರಣೆಗೆ, ಕೋಶ ಸಂಕೇತಗಳನ್ನು (cell signalling) ನಿಯಂತ್ರಿಸುವಕೈನೇಸ್‌’ (kinases) ಎಂಬ ಪ್ರೋಟೀನ್ಗಳು ಮತ್ತು ಕೆಲವು ನಿರ್ದಿಷ್ಟ ರಚನೆಗಳು ಪ್ರೋಟೀನ್ಗಳು ಔಷಧಕ್ಕೆ ಸೂಕ್ತವಾಗಿವೆ ಎಂಬುದರ ಪ್ರಬಲ ಸೂಚಕಗಳಾಗಿವೆ ಎಂದು ತಂತ್ರಜ್ಞಾನ ತೋರಿಸಿಕೊಟ್ಟಿದೆ. ಈ ಅಂಶವು ಸಂಶೋಧಕರಿಗೆ ಒಂದು ನಿರ್ದಿಷ್ಟ ಔಷಧವನ್ನು ಅಭಿವೃದ್ಧಿಪಡಿಸುವ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಿದೆ.
  • ‘ಡ್ರಗ್‌ಪ್ರೊಟ್‌ಎಐ’ನಂತಹ ಸಾಧನಗಳು ಔಷಧ ಸಂಶೋಧನೆಯ ಸಮಯ ಮತ್ತು ಹಣವನ್ನು ಕಡಿಮೆ ಮಾಡಬಹುದು. ಇದು ವಿಶೇಷವಾಗಿ ಬೆಂಗಳೂರು ಮತ್ತು ಕರ್ನಾಟಕದಲ್ಲಿರುವ ಹಲವು ಜೈವಿಕ ತಂತ್ರಜ್ಞಾನ ಮತ್ತು ಔಷಧ ಸಂಶೋಧನಾ ಸಂಸ್ಥೆಗಳಿಗೆ ಬಹಳ ಸಹಕಾರಿ ಆಗಬಹುದು. ಈ ತಂತ್ರಜ್ಞಾನವು ಹೆಚ್ಚು ನಿಖರ ಮತ್ತು ವೇಗವಾಗಿ ಕಾರ್ಯನಿರ್ವಹಿಸುವುದರಿಂದ, ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಗಳಿಗೆ ದಾರಿ ಮಾಡಿಕೊಡುತ್ತದೆ. ಸಂಶೋಧಕರು ಹೊಸ ಔಷಧಗಳನ್ನು ವೇಗವಾಗಿ ಕಂಡುಹಿಡಿದು, ಮನುಕುಲದ ಒಳಿತಿಗಾಗಿ ಅದನ್ನು ಇನ್ನಷ್ಟು ಶೀಘ್ರವಾಗಿ ಮಾರುಕಟ್ಟೆಗೆ ತರಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ‘ಡ್ರಗ್‌ಪ್ರೊಟ್‌ಎಐ’ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗಿದೆ.
  • ಹಣ್ಣುಗಳ ಸಂರಕ್ಷಣೆಗೆ ಪ್ರೋಟೀನ್

ಸಂದರ್ಭ: ಹಣ್ಣುಗಳು ನಮ್ಮ ಆಹಾರದ ಪ್ರಮುಖ ಭಾಗ. ಇವು ನಮ್ಮ ಪೋಷಣೆ ಮತ್ತು ಬೆಳವಣಿಗೆಗೆ ಅತ್ಯವಶ್ಯವಾಗಿ ಬೇಕಾದ ಆಹಾರದ ವಿಧ; ಸೂಕ್ಷ್ಮ ಪೋಷಕಾಂಶಗಳ ಆಕರ; ತುರ್ತಾಗಿ ನಮ್ಮ ದೇಹಕ್ಕೆ ಚೈತನ್ಯ ನೀಡಬಲ್ಲ ಶಕ್ತಿಯ ಮೂಲ.

  • ನಮ್ಮ ಆಹಾರದಲ್ಲಿ ಇಷ್ಟೆಲ್ಲಾ ಮಹತ್ವದ ಪಾತ್ರ ವಹಿಸುವ ಹಣ್ಣುಗಳು ಅಷ್ಟೇ ಬೇಗ ಹಾಳಾಗಿ ಹೋಗುವಂಥವು. ಹಾಗಾಗಿ ಹಣ್ಣುಗಳನ್ನು ದೀರ್ಘಕಾಲ ಸಂರಕ್ಷಿಡುವುದು ಅನಿವಾರ್ಯ. ಕಟಾವು ಮಾಡಿದ ನಂತರ ಒಣಗಿಸುವುದು, ಉಪ್ಪಿನಕಾಯಿ ತಯಾರಿಸುವುದು, ಫರ್ಮೆಂಟೇಶನ್‌ (ಹುದುಗುವಿಕೆ), ಸಕ್ಕರೆ ಪಾಕದಲ್ಲಿ ನೆನೆಸಿಡುವುದು ಮುಂತಾದ ಸಾಂಪ್ರದಾಯಿಕ ವಿಧಾನಗಳನ್ನು ನಾವು ಕೂಡ ಅನುಸರಿಸುತ್ತಿದ್ದೆವು. ಇವು ಇಂದಿಗೂ ಬಳಕೆಯಲ್ಲಿವೆಯೆನ್ನಿ. ಆದರೆ ಈ ವಿಧಾನಗಳಲ್ಲಿ ಹಣ್ಣನ್ನು ಸಂರಕ್ಷಿಸಿ ಅದರಿಂದ ಸಿಗಬೇಕಾದ ಪೋಷಣೆಯನ್ನೇನೊ ಪಡೆದುಕೊಳ್ಳಬಹುದು, ಆಯಾ ಹಣ್ಣುಗಳ ಋತುಮಾನದಿಂದಾಚೆಗೂ! ಆದರೆ ಈ ವಿಧಾನದಿಂದ ತಾಜಾ ಹಣ್ಣುಗಳು ತಿನ್ನಲು ಸಿಗದೆ ಹಣ್ಣನ್ನು ಬೇರೆ ರುಚಿಯಲ್ಲಿ ಸವಿಯಬಹುದಷ್ಟೆ.
  • ವಿಜ್ಞಾನದಲ್ಲಿ ನಾವು ಮುಂದುವರೆದಂತೆ, ಹಣ್ಣುಗಳನ್ನು ಯಥಾವತ್ತಾಗಿ ಶೈತ್ಯಾಗಾರಗಳಲ್ಲಿ ಸಂಗ್ರಹಿಸುವುದು (ಡೀಪ್ಫ್ರೀಜಿಂಗ್‌), ಹಣ್ಣಿನ ರಸಗಳನ್ನು ತೆಗೆದು ಬಾಟಲಿಗಳಲ್ಲಿ ಸಂಗ್ರಹಿಸುವುದು (ಕ್ಯಾನಿಂಗ್), ಒಣಗಿಸಬಹುದಾದ ಹಣ್ಣುಗಳಾದರೆ ಒಣಗಿಸುವುದು, ಫರ್ಮೆಂಟೇಷನ್ಮತ್ತು ಸಕ್ಕರೆ ಪಾಕದಲ್ಲಿ ಸಂಗ್ರಹಿಸುವುದು, ಹೈಡ್ರೋಫೋಬಿಕ್ಸರ್ಫೇಸ್ಟ್ರೀಟ್ಮೆಂಟ್‌ (ತೇವಾಂಶವನ್ನು ಹೀರಿಕೊಳ್ಳದ ಸಿಲೇನುಗಳು, ಫ್ಲೂರೋಕಾರ್ಬನ್ಗಳಂತಹ ರಾಸಾಯನಿಕಗಳನ್ನು ಹಣ್ಣುಗಳ ಹೊರಪದರಕ್ಕೆ ಲೇಪಿಸುವುದು), ತುಸು ಜಟಿಲವಾದ ಹೊರಪದರವಿರುವ ಹಣ್ಣುಗಳಿಗೆ ನೈಸರ್ಗಿಕ ಪಾಲಿಮರುಗಳಾದ ಕೈಟೋಸಾನ್‌, ಶರ್ಕರಗಳ ಪದರವನ್ನು ಲೇಪಿಸುವುದುಹೀಗೆ ಹಲವಾರು ವಿಧಾನಗಳಿಂದ ಹಣ್ಣುಗಳನ್ನು ಹಾಳಾಗದಂತೆ ಶೇಖರಿಸುವ ಅವಧಿಯನ್ನು ವಿಸ್ತರಿಸುವುದನ್ನು ಆರಂಭಿಸಿದೆವು.
  • ಇನ್ನು, ಹೆಚ್ಚಿನ ಪ್ರಮಾಣದಲ್ಲಿ ಬೆಳೆದ, ವೇಗವಾಗಿ ಹಾಳಾಗಿಹೋಗುವಂಥ ಹಣ್ಣುಗಳೆಲ್ಲವನ್ನು ದೀರ್ಘ ಕಾಲದವರೆಗೆ ತಾಜಾರೂಪದಲ್ಲಿ ಬಳಸಬೇಕಾದರೆ ಮತ್ತು ಆರ್ಥಿಕವಾಗಿಯೂ ನಷ್ಟವಾಗದಂತೆ ಖಾತರಿವಹಿಸಲು ಇನ್ನೂ ಆಧುನಿಕವಾದ ಸಂರಕ್ಷಣಾ ವಿಧಾನ ಅನಿವಾರ್ಯವಾಗಿತ್ತು. ಜೆನೆಟಿಕ್‌ ಮಾಡಿಫಿಕೇಶನ್‌, ಶೈತ್ಯಾಗಾರಗಳಲ್ಲಿ ಶೇಖರಿಸುವ ಮತ್ತು ಫಾರ್ಮಾಲ್ಡಿಹೈಡ್‌, ಕಾಫರ್‌ ಸಲ್ಫೇಟ್‌, ಪೊಟ್ಯಾಶಿಯಂ ಸಾರ್ಬೇಟ್‌ ಇತ್ಯಾದಿಗಳಂತಹ ರಾಸಾಯನಿಕಗಳನ್ನು ಬಳಸಿ ಸಂರಕ್ಷಿಸುವ ವಿಧಾನಗಳನ್ನು ಕೂಡ ಅನ್ವೇಷಿ ಸಲಾದರೂ ಇವು ಆರ್ಥಿಕವಾಗಿಯೂ ದುಬಾರಿ ಮತ್ತು ಇಂಗಾಲ ಹೊರಸೂಸುವಿಕೆಯಿಂದಾಗಿ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತವೆ.
  • ಹಾಗಾಗಿ ಈ ಎಲ್ಲ ಅಡ್ಡಪರಿಣಾಮಗಳನ್ನು ನಿವಾರಿಸುತ್ತ ನಾವು ಬೆಳೆದ ಹಣ್ಣುಗಳನ್ನು ಪರಿಣಾಮಕಾರಿಯಾಗಿ ಸಂರಕ್ಷಿಸುವ ವಿಶೇಷ, ಸುಲಭ ಹಾಗೂ ಪರಿಸರಸ್ನೇಹಿ ಪರಿಹಾರವೊಂದನ್ನು ಚೀನಿವಿಜ್ಞಾನಿಗಳು ಪತ್ತೆ ಮಾಡಿದ್ದಾರಂತೆ. ಅದುವೇ ಕಂಪ್ಯೂಟರ್ಸಹಾಯದಿಂದಮಾಲಿಕ್ಯುಲಾರ್ ಸಿಮ್ಯುಲೇಷನ್‌ ’ ತಂತ್ರವನ್ನು ಬಳಸಿಕೊಂಡು ಪ್ರೋಟೀನು ಸಂಯೋಜನೆಯೊಂದನ್ನು ಸಿದ್ಧಪಡಿಸಿ ಹಣ್ಣಿನ ಮೇಲ್ಭಾಗಕ್ಕೆ ಲೇಪನ ಮಾಡುವುದು! ಈ ಸುದ್ದಿಯನ್ನು ಮೊನ್ನೆ ನೇಚರ್‌ ಪತ್ರಿಕೆಯಲ್ಲಿ ಚೀನಾದ ಶಾಂಕ್ಸಿ ನಾರ್ಮಲ್‌ ಯೂನಿವರ್ಸಿಟಿಯ ವಿಜ್ಞಾನಿಗಳು ವರದಿ ಮಾಡಿದ್ದಾರೆ.
  • ಲೈಸೋಜೈಮುಎನ್ನುವ ಕಿಣ್ವಗಳಲ್ಲಿರುವ ಡೈ ಸಲ್ಫೈಡ್ಬಂಧಗಳನ್ನು ಇಳಿಸಿ ಹಾಗೂ ಆಲ್ಫಾ ಸುರುಳಿ ಆಕಾರವನ್ನು ರೂಪಾಂತರಿಸಿ, ಸೋಡಿಯಂ ಆಲ್ಜಿನೇಟ್ಮತ್ತು ಸೆಲ್ಯುಲೋಸಿನ ಸೂಕ್ಷ್ಮಕಣಗಳೊಂದಿಗೆ ಹೊಂದಿಸಿ ಸಿದ್ಧಪಡಿಸಿರುವ ಪ್ರೋಟೀನ್ಇದು. ಸೋಡಿಯಂ ಆಲ್ಜಿನೇಟ್ನೀರಿನಲ್ಲಿ ಕರಗುವ ಒಂದು ನೈಸರ್ಗಿಕ ಪಾಲಿಸ್ಯಾಕರೈಡ್ಆಗಿದ್ದು ಎಮಲ್ಸಿಕಾರಕವಾಗಿ ಬಳಸಬಹುದಾಗಿದೆ. ಸೆಲ್ಯುಲೋಸ್ಒಂದು ನೈಸರ್ಗಿಕ ಪಾಲಿಮರ್‌. ಮೂರು ಪದಾರ್ಥಗಳನ್ನು ಬಳಸಿ ತಯಾರಿಸಿದ ಪ್ರೋಟೀನು ಹಣ್ಣಿನ ಹೊರಪದರೊಂದಿಗೆ ಬೆರೆತುಕೊಂಡು ಹಣ್ಣಿನಲ್ಲಿರುವ ನೀರಿನಾಂಶವನ್ನು ಹೊರಬಿಡದೆ, ಸೂಕ್ಷ್ಮಾಣುಜೀವಿ ಗಳನ್ನು ಬೆಳೆಯಗೊಡದಂತೆ ಹಣ್ಣನ್ನು ರಕ್ಷಿಸುತ್ತದೆ. ಪ್ರೋಟೀನು ನೀರನ್ನು ಇಷ್ಟಪಡದ ಸ್ವಭಾವದಾದ್ದರಿಂದ ಹೊರಗಿನಿಂದ ಹಣ್ಣಿನ ಮೇಲೆ ನೀರು ಬಿದ್ದರೂ ಅದನ್ನು ಹೀರಿಕೊಳ್ಳುವುದಿಲ್ಲ. ಲೇಪಿಸಲೂ ಸುಲಭ. ತನ್ಮೂಲಕ ಹಣ್ಣನ್ನು ಕೆಡದಂತೆ ಸಂಪೂರ್ಣವಾಗಿ ರಕ್ಷಿಸಿಡುತ್ತದೆ.
  • ಕಟಾವು ಮಾಡಿತಂದ ಹಣ್ಣುಗಳು ಗಾಳಿಗೆ ತೆರೆದಿಟ್ಟಾಗ ವೇಗವಾಗಿ ಆಕ್ಸಿಡೀಕರಣಕ್ಕೊಳಗಾಗುತ್ತವೆ. ಆಗ ಪೋಷಕಾಂಶಗಳೂ ನಷ್ಟವಾಗಿ, ಸೂಕ್ಷ್ಮಾಣುಜೀವಿಗಳೂ ಹಣ್ಣಿನ ಒಳಪ್ರವೇಶಿಸಲು ಅನುಕೂಲ ವಾತಾವರಣ ಸೃಷಿಯಾಗುತ್ತದೆ. ಆದರೆ ವಿಜ್ಞಾನಿಗಳು ರೂಪಿಸಿರುವ ಪ್ರೋಟೀನ್‌ ಸಂಯೋಜನೆಯು ಇವೆಲ್ಲವನ್ನೂ ನಿವಾರಿಸುವ ಅತ್ಯುತ್ತಮ ಗುಣವುಳ್ಳವಾಗಿವೆ ಹಾಗೂ ಇದನ್ನು, ಕತ್ತರಿಸಿದ ಹಣ್ಣಿನ ತೊಳೆಗಳನ್ನೂ ತಾಜಾವಾಗಿರಿಸಲು ಬಳಸಬಹುದಾದ್ದರಿಂದ ಜಾಗತಿಕವಾಗಿ ಎದುರಿಸುತ್ತಿರುವ ಆಹಾರ ತ್ಯಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಇದೂ ಒಂದು ಉತ್ತಮ ಮತ್ತು ಸುಸ್ಥಿರ ಪರಿಹಾರವಾಗಿ ಹೊರಹೊಮ್ಮಲಿದೆ ಎನ್ನುವುದು ವಿಜ್ಞಾನಿಗಳ ಆಶಯ.
  • ಪ್ರೋಟೀನು ಹಣ್ಣುಗಳ ಅವಧಿಯನ್ನು ಸುಮಾರು ಎರಡರಿಂದ ಐದು ಪಟ್ಟು ವಿಸ್ತರಿಸುವುದಲ್ಲದೆ, ಸುಮಾರು ಹದಿನೇಳು ರೀತಿಯ ಹಣ್ಣುಗಳನ್ನು ಸಂರಕ್ಷಿಸಲು ತಂತ್ರವನ್ನು ಬಳಸಬಹುದಾಗಿದೆಯಂತೆ. ಹಣ್ಣುಗಳಲ್ಲಿ ಕೆಲವು ಕಟಾವು ಮಾಡಿದ ನಂತರವೂ ಮಾಗಲು ಬೇಕಾದ ಹಾರ್ಮೋನ್‌, ಇಥಿಲೀನ್ ಉತ್ಪಾದನೆಯಾಗುವುದರಿಂದ ಮಾಗುವುದು ಮುಂದುವರೆಯುತ್ತದೆ. ಉದಾಹರಣೆಗೆ, ಬಾಳೆಹಣ್ಣು, ಮಾವು, ಟೊಮ್ಯಾಟೋ ಇತ್ಯಾದಿ. ಕೆಲವು ಹಣ್ಣುಗಳಲ್ಲಿ ಕಟಾವು ಮಾಡಿದ ನಂತರ ಇಥಿಲೀನ್ಉತ್ಪಾದನೆಯಾಗದಿರುವುದರಿಂದ ಮರದಲ್ಲಿಯೇ ಪೂರ್ತಿ ಹಣ್ಣಾದ ನಂತರವಷ್ಟೇ ಕಟಾವು ಮಾಡಬೇಕಿರುತ್ತದೆ. ಉದಾಹರಣೆಗೆ ಸ್ಟ್ರಾಬೆರಿ, ಕಿತ್ತಳೆ, ದ್ರಾಕ್ಷಿ ಮುಂತಾದವು. ಆದರೆ ಈ ಪ್ರೋಟೀನನ್ನು ಇಂಥ ಎರಡೂ ರೀತಿಯ ಹಣ್ಣುಗಳಲ್ಲಿ ಬಳಸಿ ಸಂರಕ್ಷಿಸ ಬಹುದು ಎನ್ನುವುದು ಮತ್ತೊಂದು ಪ್ರಯೋಜನ.
  • ಅಲ್ಲದೇ, ಸಂರಕ್ಷಿಸಿದಷ್ಟೂ ದಿನಗಳವರೆಗೆ ಪೋಷಕಾಂಶಗಳ ಪ್ರಮಾಣ ಸುಮಾರು ಪ್ರತಿಶತ 60-98ರಷ್ಟು ಉಳಿದಿತ್ತಂತೆ. ಅರ್ಥಾತ್‌, ಅವಧಿ ವಿಸ್ತರಣೆಯಾದಷ್ಟೂ ಹಲವು ದಿನಗಳವರೆಗೆ ಪೋಷಕಾಂಶಗಳೂ ಸುಸ್ಥಿರವಾಗಿರುತ್ತವೆ.
  • ಹಣ್ಣಿನೊಳಗಿನ ನೀರಿನಾಂಶವನ್ನೂ ನಷ್ಟವಾಗದಂತೆ ಕಾಪಾಡುವುದರಿಂದ ಹಣ್ಣಿನ ತೂಕದಲ್ಲಿಯೂ ಇಳಿಕೆಯಾಗುವುದಿಲ್ಲ. ಇತರೆ ಆಹಾರ ಸಂಸ್ಕರಣಾ ವಿಧಾನಗಳಲ್ಲಿ ಪೋಷಕಾಂಶಗಳು ನಷ್ವವಾಗುವ ಸಾಧ್ಯತೆ ಇದ್ದು, ಇಲ್ಲಿ ಹಣ್ಣುಗಳು ತಾಜಾರೂಪದಲ್ಲಿ ಸಿಗುವುದಲ್ಲದೆ, ಪೋಷಕಾಂಶಗಳನ್ನೂ ಪೂರ್ಣಪ್ರಮಾಣದಲ್ಲಿ ಉಳಿಸಿಕೊಡುತ್ತದೆ.
  • ಹಣ್ಣುಗಳನ್ನು ಸಂರಕ್ಷಿಸುವ ಇತರೆ ವಿಧಾನಗಳಿಗೆ ಹೋಲಿಸಿದರೆ ಇಂಗಾಲ ಹೊರಸೂಸುವಿಕೆಯಲ್ಲಿಯೂ ಸುಮಾರು ಪ್ರತಿಶತ 90ರಷ್ಟು ಇಳಿಕೆಯಾಗುತ್ತ ದಂತೆ.
  • ಜೊತೆಗೆ ಹೀಗೆ ಲೇಪಿಸುವ ಪ್ರೋಟೀನ್‌ನ ಪದರವು ತಿನ್ನಬಲ್ಲದಾದ್ದರಿಂದ ಅಕಸ್ಮಾತಾಗಿ ಹೊಟ್ಟೆ ಸೇರಿದರೂ ತೊಂದರೆಯಿಲ್ಲ. ಹಣ್ಣುಗಳನ್ನು ಕತ್ತರಿಸುವ ಮುಂಚೆ ಹೊರಪದರವನ್ನು ತೊಳೆಯುವಾಗ ಈ ಪ್ರೋಟೀನ್‌ನ ಲೇಪನವನ್ನು ತೊಳೆದು ಸ್ವಚ್ಛಗೊಳಿಸುವುದೂ ಸುಲಭವಂತೆ. ಸಾಂಪ್ರದಾಯಿಕ ವಿಧಾನಗಳು ಕೆಲವೇ ಹಣ್ಣುಗಳನ್ನು ಮಾತ್ರವೇ ಸಂರಕ್ಷಿಸಲು ಬಳಕೆಯಾದರೆ, ಈ ಪ್ರೋಟೀನ್‌ ವಿಧಾನವು ವೈವಿಧ್ಯಮಯ ಹಣ್ಣುಗಳನ್ನು ಸಂರಕ್ಷಿಸಲು ಬಳಕೆಯಾಗಬಲ್ಲ, ಆರ್ಥಿಕವಾಗಿಯೂ ಅಗ್ಗವಾಗಿರುವ, ಸುರಕ್ಷಿತ ಹಾಗೂ ಪರಿಸರಸ್ನೇಹಿ ಉಪಾಯ ಎನ್ನುತ್ತಾರೆ, ವಿಜ್ಞಾನಿಗಳು.
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments