Bhima Water Dispute: ‘ನೀರುಹಂಚಿಕೆ: ರಾಜ್ಯದ ಹಿತಾಸಕ್ತಿ ರಕ್ಷಣೆ’
ಮಹಾರಾಷ್ಟ್ರವು ಭೀಮಾ ನದಿಯಲ್ಲಿ ರಾಜ್ಯದ ಪಾಲನ್ನು ತಪ್ಪಿಸಲು ಹೆಚ್ಚುವರಿ ಜಲಾಶಯಗಳನ್ನು ನಿರ್ಮಿಸಿಕೊಂಡಿರುವ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಎರಡೂ ರಾಜ್ಯಗಳ ಮಧ್ಯದ ಜಲವಿವಾದವು ಕೇಂದ್ರ ಜಲ ಆಯೋಗದ ಮುಂದೆ ಇದೆ. ರಾಜ್ಯದ ಹಿತಾಸಕ್ತಿಯನ್ನು ಕಾಯಲು ಬದ್ಧರಾಗಿದ್ದೇವೆ’ ಎಂದು ಹೇಳಿದರು.
5 ಪಾಲಿಕೆಗಳಲ್ಲಿ 368 ವಾರ್ಡ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಿ, ಗಡಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 368 ವಾರ್ಡ್‌ಗಳಿವೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024 (ಜಿಬಿಜಿಎ) ಅಡಿಯಲ್ಲಿ ಸೆ.2ರಂದು ಜಿಬಿಎ ರಚಿಸಲಾಗಿತ್ತು. ಜಿಬಿಎ ವ್ಯಾಪ್ತಿಯಲ್ಲಿ ಹಿಂದಿನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ 198 ವಾರ್ಡ್‌ಗಳನ್ನು ಹಂಚಿಕೆ ಮಾಡಿ 5 ನಗರ ಪಾಲಿಕೆಗಳನ್ನು ರಚಿಸಿ, ಗಡಿ ನಿಗದಿ ಮಾಡಿ ಅಂದೇ ಅಧಿಸೂಚನೆ ಹೊರಡಿಸಲಾಗಿತ್ತು.
ಐದು ನಗರ ಪಾಲಿಕೆಗಳ ವಾರ್ಡ್ ಗಳನ್ನು ಮರು ವಿಂಗಡಿಸಲು, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನೇತೃತ್ವದಲ್ಲಿ ‘ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗ’ವನ್ನು ರಚಿಸಿ, ಸೆಪ್ಟೆಂಬರ್ 23ರಂದು ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆಯೋಗ ಒಂದು ವಾರ ತಡವಾಗಿ, ಸೆ. 30ರಂದು ವರದಿ ಸಲ್ಲಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024ರ ಪ್ರಕರಣ 29ರ ಉಪ ಪ್ರಕರಣ (1) ಮತ್ತು (3)ರ ಅನ್ವಯ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಿ, ಸಲ್ಲಿಸಲಾಗಿದ್ದ ವಾರ್ಡ್ ಮರು ವಿಂಗಡಣೆಯ ವರದಿಯನ್ನು ಸರ್ಕಾರ ಒಪ್ಪಿದೆ. ಜಿಬಿಜಿಎ ಕಾಯ್ದೆಯ 29ರಲ್ಲಿ ಪ್ರದತ್ತವಾದ ಅಧಿಕಾರದನ್ವಯ 2011ರ ಜನಗಣತಿಯ ಆಧಾರದಲ್ಲಿ, ಗ್ರೇಟರ್ ಬೆಂಗಳೂರು ಪ್ರದೇಶದ ಐದು ನಗರ ಪಾಲಿಕೆಗಳಲ್ಲಿ ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಹೊರಡಿಸಿದೆ.
ಯಾವುದೇ ಆಕ್ಷೇಪ/ ಸಲಹೆಗಳಿದ್ದರೆ ಸಾರ್ವಜನಿಕರು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ–ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ‘ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು– 560001’ ಇವರಿಗೆ ಅಕ್ಟೋಬರ್ 15ರ ಸಂಜೆ 5ರೊಳಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಆಕ್ಷೇಪಣೆ/ ಸಲಹೆಗಳನ್ನು ಪರಿಶೀಲಿಸಿ, ನಗರ ಪಾಲಿಕೆಗಳ ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡಣೆಯನ್ನು ಅಂತಿಮಗೊಳಿಸಲು ಕ್ರಮ ಕೈಗೊಳ್ಳಲಾಗು ತ್ತದೆ ಎಂದು ತಿಳಿಸಲಾಗಿದೆ.
ಕಲಾಸಿಪಾಳ್ಯಕ್ಕೆ ಡಿವಿಜಿ, ಜಯನಗರಕ್ಕೆ ಅಬ್ದುಲ್ ಕಲಾಂ
ವಾರ್ಡ್ ಹೆಸರಿನಲ್ಲಿ ಸುಭಾಷ್ ಚಂದ್ರ ಬೋಸ್, ಮಂಗಲ್ ಪಾಂಡೆ, ಕುವೆಂಪು, ಪುನೀತ್, ಅಬ್ದುಲ್ ಕಲಾಂ ಆಜಾದ್, ಕೃಷ್ಣದೇವರಾಯ, ವಿವೇಕಾನಂದ, ಅನಿಬೆಸೆಂಟ್
ಇತಿಹಾಸ ಪ್ರಸಿದ್ಧ ಮಹಾರಾಜರು, ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರರು, ಚಿತ್ರನಟರ ಹೆಸರನ್ನು ಐದು ನಗರ ಪಾಲಿಕೆಗಳ ವಿವಿಧ ವಾರ್ಡ್‌ಗಳಿಗೆ ಇಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಲಾಸಿಪಾಳ್ಯದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಸಾಹಿತಿ ಡಿ.ವಿ. ಗುಂಡಪ್ಪ ಅವರ ಹೆಸರಿಡಲಾಗಿದೆ. ದಕ್ಷಿಣ ನಗರ ಪಾಲಿಕೆಯ ಜಯನಗರ ಟಿ ಬ್ಲಾಕ್ ಪ್ರದೇಶಗಳ ವಾರ್ಡ್‌ಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ, ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಆಜಾದ್ ಅವರ ಹೆಸರನ್ನು ಕುಮಾರಸ್ವಾಮಿ ಲೇಔಟ್ 2ನೇ ಹಂತದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಇಡಲಾಗಿದೆ.
ವಿಶೇಷ ವ್ಯಕ್ತಿಗಳು ಹಾಗೂ ಸಾಧಕರ ಹೆಸರು ಪಶ್ಚಿಮ ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಹೆಚ್ಚಾಗಿದೆ. ದಕ್ಷಿಣ ನಗರ ಪಾಲಿಕೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕೇಂದ್ರ, ಉತ್ತರ, ಪೂರ್ವ ನಗರ ಪಾಲಿಕೆಗಳು ನಂತರದ ಸ್ಥಾನದಲ್ಲಿವೆ.
ಪಶ್ಚಿಮ ನಗರ ಪಾಲಿಕೆಯಲ್ಲಿ ಕಾಮಾಕ್ಷಿ ಪಾಳ್ಯ ಪ್ರದೇಶ, ಕೆಂಪಾಪುರ ಅಗ್ರಹಾರ, ಮಾಗಡಿ ರಸ್ತೆ ಕೆಎಚ್‌ಬಿ ಕಾಲೊನಿ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗಳಿಗೆ ಕ್ರಮವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ‘ಮಂಗಲ್ ಪಾಂಡೆ’, ‘ಸಂಗೊಳ್ಳಿ ರಾಯಣ್ಣ’, ’ಝಾನ್ಸಿ ರಾಣಿ ’ ಎಂದು ಹೆಸರಿಡಲಾಗಿದೆ.
ಶಂಕರನಗರ ವ್ಯಾಪ್ತಿಯ ವಾರ್ಡ್‌ಗೆ ಮೈಸೂರಿನ ಮಹಾರಾಜರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್’, ಬಾಪೂಜಿನಗರ ಪ್ರದೇಶದ ವಾರ್ಡ್‌ಗೆ ವಿಜಯನಗರದ ಅರಸ ‘ಕೃಷ್ಣದೇವರಾಯ’, ಕಂಠೀರವ ಸ್ಟುಡಿಯೊ ವ್ಯಾಪ್ತಿಯ ವಾರ್ಡ್‌ಗೆ ನಟ ‘ಡಾ. ಪುನೀತ್ ರಾಜ್‌ಕುಮಾರ್:, ದಾಸರಹಳ್ಳಿ–ರಾಜಗೋಪಾಲ ನಗರ ವ್ಯಾಪ್ತಿಯ ವಾರ್ಡ್‌ಗೆ ರಾಜಕಾರಣಿ ಶಾಂತವೇರಿ ಗೋಪಾಲಗೌಡ, ಪೀಣ್ಯ ಅಂದ್ರಹಳ್ಳಿ ವ್ಯಾಪ್ತಿಯ ವಾರ್ಡ್‌ಗೆ ‘ನಾಡಪ್ರಭು ಕೆಂಪೇಗೌಡ ನಗರ’, ನಂದಿನಿ ಲೇಔಟ್ ಪ್ರದೇಶದ ವ್ಯಾಪ್ತಿಯ ವಾರ್ಡ್‌ಗೆ ‘ಕಿತ್ತೂರು ರಾಣಿ ಚನ್ನಮ್ಮ’ ಎಂದು ಹೆಸರಿಸಲಾಗಿದೆ.
ಲಗ್ಗೆರೆ ಪ್ರದೇಶದ ವಾರ್ಡ್‌ಗೆ ‘ಫ್ರೀಡಂ ಫೈಟರ್ ವಾರ್ಡ್’ ಎಂದು ಹೆಸರಿಡಲಾಗಿದ್ದರೆ, ರಾಜಾಜಿನಗರ 4ನೇ ಎಂ. ಬ್ಲಾಕ್ ಪ್ರದೇಶದ ವಾರ್ಡ್‌ಗೆ ಜ್ಞಾನಪೀಠ ಪುರಸ್ಕೃತ ದ.ರಾ. ಬೇಂದ್ರೆ, ರಾಜಾಜಿನಗರ 6ನೇ ಬ್ಲಾಕ್‌ಗೆ ‘ಡಾ. ರಾಜ್‌ಕುಮಾರ್’ ಹಾಗೂ ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಹಂತದ ಪ್ರದೇಶಗಳ ವಾರ್ಡ್‌ಗೆ ‘ಸ್ವಾಮಿ ವಿವೇಕಾನಂದ’ ಎಂದು ಹೆಸರಿಡಲಾಗಿದೆ.
ವಾರ್ಡ್‌ಗಳಿಗೆ ಪ್ರಮುಖರ ಹೆಸರು
ದಕ್ಷಿಣ ನಗರ ಪಾಲಿಕೆಯಲ್ಲಿ ವಾರ್ಡ್‌ಗಳಲ್ಲಿ ಚಿಕ್ಕಲಸಂದ್ರ ಪ್ರದೇಶಕ್ಕೆ ‘ಸಾರ್ವಭೌಮನಗರ’, ಕೋರಮಂಗಲ 6ನೇ ಬ್ಲಾಕ್ ಸಾಮಾಜಿಕ ಹೋರಾಟಗಾರರಾದ ‘ಅನಿಬೆಸೆಂಟ್’, ಬಿಟಿಎಂ ಲೇಔಟ್ 1ನೇ ಹಂತಕ್ಕೆ ‘ವಿಶ್ವಮಾನವ ಕುವೆಂಪು’ ಬೊಮ್ಮನಹಳ್ಳಿಯ ಕೆ.ಆರ್. ಲೇಔಟ್‌ಗೆ ‘ಕೆಂಗಲ್ ಹನುಮಂತಯ್ಯ’ ಎಂದು ಹೆಸರಿಡಲಾಗಿದೆ.
ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್‌ಗಳಿಗೆ ಇಟ್ಟಗೆ ಆಂಜನಪ್ಪ ಲೇನ್, ಚೌಡಪ್ಪ ರಸ್ತೆಗೆ ‘ಐಡಿಪಿ ಸಾಲಪ್ಪ’, ಮಂಜುನಾಥ ನಗರ ಬಿ. ಬ್ಲಾಕ್, ಗಾಂಧಿನಗರ ಪ್ರದೇಶಕ್ಕೆ ‘ಸುಭಾಶ್ಚಂದ್ರ ಬೋಸ್’ ಎಂದು ನಾಮಕರಣ ಮಾಡಲಾಗಿದೆ.
ಉತ್ತರ ನಗರ ಪಾಲಿಕೆಯಲ್ಲಿ ಹಿದಾಯತ್ ನಗರಕ್ಕೆ ‘ಸಮಾಧಾನ ನಗರ’, ಎಚ್‌ಬಿಆರ್ ಲೇಔಟ್ 5ನೇ ಬ್ಲಾಕ್‌ಗೆ ಶಿಕ್ಷಣ ತಜ್ಞೆ ‘ಅರುಣಾ ಆಸಿಫ್ ಅಲಿ’, ದೇವರಜೀವನಹಳ್ಳಿಗೆ ‘ದೊಡ್ಡಣ್ಣನಗರ’ ಎಂದು ಹೆಸರಿಸಲಾಗಿದೆ.
ಪೂರ್ವ ನಗರ ಪಾಲಿಕೆಯಲ್ಲಿ ಕೊಟ್ಟೂರು–ದರ್ಗಾ ಮೊಹಲ್ಲಾಗೆ ಕವಿ ‘ಕೆ.ಎಸ್. ನಿಸಾರ್ ಅಹಮದ್’, ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ವಿಜ್ಞಾನ ನಗರಕ್ಕೆ ‘ತಲಕಾವೇರಿ’ ಎಂದು ನಾಮಕರಣ ಮಾಡಲಾಗಿದೆ.
ಶಿಲಾಯುಗ ಕಾಲದ ಅವಶೇಷ ಪತ್ತೆ
ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮೀನಕೆರೆ ಗ್ರಾಮದಲ್ಲಿ ಶಿಲಾಯುಗ ಕಾಲದ ಆದಿಮಾನವರು ಬಳಸಿದ ಶಿಲಾ ಉಪಕರಣಗಳು ಹಾಗೂ ನವ ಶಿಲಾಯುಗ ಕಾಲದ ಉಜ್ಜಿ ನಯಗೊಳಿಸಿದ ಕೈಗೊಡಲಿ, ಮಡಿಕೆ ಚೂರುಗಳು, ಬೃಹತ್ ಕುಟ್ಟು ಚಿತ್ರಗಳು ಪತ್ತೆಯಾಗಿವೆ.
ಈ ಸ್ಥಳ ಹಗರಿ ನದಿ ದಂಡೆಯ ಮೇಲಿದ್ದು, ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಅಂಚಿನಲ್ಲಿದೆ. ವಿಜಯನಗರ ತಿರುಗಾಟ ಸಂಶೋಧನಾ ತಂಡ ಈ ಶೋಧ ನಡೆಸಿದೆ.
ಗೂಳಿ, ಹಸು ಕುಟ್ಟುಚಿತ್ರ: ಮೀನಕೆರೆ ಗ್ರಾಮದ ನೈರುತ್ಯ ಭಾಗಕ್ಕಿರುವ ಕೆಂಗಮಲೆಯಪ್ಪನವರ ಹೊಲದಲ್ಲಿ ನವಶಿಲಾಯುಗ ಕಾಲಕ್ಕೆ ಸೇರಿದ (ಕ್ರಿ. ಪೂ. 3,000ಕ್ಕೆ ಹಿಂದೆ) ಹುಟ್ಟು ಕಲ್ಲುಬಂಡೆ ಯನ್ನು ಚಪ್ಪಟೆಯಾಕಾರ ಮಾಡಿ ಆ ಕಲ್ಲುಬಂಡೆಗೆ ಕುಟ್ಟಿ ಬೃಹತ್ ಗೂಳಿ ಮತ್ತು ಅದರ ಬಳಿಯಲ್ಲಿಯ ಗುಂಡು ಕಲ್ಲಿಗೆ ಕುಟ್ಟಿ ಹಸುವಿನ ಚಿತ್ರವನ್ನು ಬಿಡಿಸಿದ್ದನ್ನು ಮೀನಕೆರೆ ಗ್ರಾಮದ ಸಂಶೋಧಕ ಕಲಂದರ್ ಗಮನಿಸಿದ್ದರು. ಅವರ ಸಹಕಾರದಿಂದ ವಿಜಯನಗರ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ಇತಿಹಾಸದ ಪುಟಗಳು ಮತ್ತಷ್ಟು ತೆರೆದುಕೊಂಡವು ಎಂದು ತಂಡದ ಸದಸ್ಯರೂ ಆಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಗೋವಿಂದ, ದೃಶ್ಯಕಲಾ ವಿಭಾಗದ ಪ್ರೊ.ಕೃಷ್ಣೇಗೌಡ ಹೇಳಿದರು.
ಮಾನವಾಕೃತಿ ಕಲ್ಲು: ಮೀನಕೆರೆ ಗ್ರಾಮದ ವಾಯುವ್ಯ ದಿಕ್ಕಿಗೆ ಇರುವ ಕುಮತಿ ಗ್ರಾಮದಲ್ಲಿ ಬೃಹತ್ ಗಾತ್ರದ ಮಾನವಾಕೃತಿ ಕಲ್ಲುಗಳಿವೆ. ಅವು ಈಗಾಗಲೇ ಬೆಳಕಿಗೆ ಬಂದಿವೆ.
‘ಇವುಗಳಿಂದ ಶಿಲಾಯುಗ ಕಾಲದ ಆದಿಮಾನವನ ಸಂಸ್ಕೃತಿ ತಿಳಿಯುವ ಯತ್ನಿಸಬಹುದು. ಇಲ್ಲಿ ಏಳು ಕಲ್ಲುಗಳಿದ್ದವು, ಎರಡು ಉಳಿದಿವೆ. ಸಂರಕ್ಷಣೆ ಅಗತ್ಯ ಇದೆ’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಎಚ್. ತಿಪ್ಪೇಸ್ವಾಮಿ ಹೇಳಿದರು.
3 ಅಡಿ ಎತ್ತರದ ಗೂಳಿ ಚಿತ್ರ
ಕುಟ್ಟಿ ರಚಿಸಲಾದ ಗೂಳಿ ಚಿತ್ರವು 3 ಅಡಿ ಎತ್ತರ 3 ಅಡಿ ಅಗಲವಿದೆ. ಕೊಂಬುಗಳು ಬಾಗಿದಂತಿವೆ. ಮುಂದಿನ ಎರಡು ಕಾಲು ನೆಟ್ಟಗೆ ನಿಂತಂತಿವೆ. ಹಿಂದಿನ ಕಾಲುಗಳು ಮಡಚಿದಂತೆ ಕಾಣಿಸುತ್ತವೆ. ಗೂಳಿಯು ಎದುರಿನ ಪ್ರಾಣಿಯ ಜೊತೆಗೆ ಕಾದಾಟ ಮಾಡುತ್ತಿರುವಂತೆ ಇಲ್ಲವೇ ಹೌಹಾರಿದಂತೆ ಕಾಣಿಸುತ್ತದೆ. ಗುಂಡುಕಲ್ಲನ್ನು ಚಪ್ಪಟೆಯಾಕಾರದಲ್ಲಿ ಮಾಡಿಕೊಂಡು ಗೂಳಿ ಚಿತ್ರವನ್ನು ಕುಟ್ಟಿರಬೇಕು ಎಂದು ಅಂದಾಜಿಸಲಾಗಿದೆ.
ಘಟಕಕ್ಕೆ ಸಾಲ: ನಿಯಮ ಸಡಿಲ
ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ತಯಾರಿಕಾ ಘಟಕಗಳಿಗೆ ಅಗತ್ಯವನ್ನು ಆಧರಿಸಿದ ಕಾರ್ಯಾಚರಣೆ ಬಂಡವಾಳ ಸಾಲ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಾಣಿಜ್ಯ ಬ್ಯಾಂಕ್‌ಗಳಿಗೆ ಅವಕಾಶ ನೀಡಿದೆ. ಈ ಸೌಲಭ್ಯವು ಇದುವರೆಗೆ ಜುವೆಲ್ಲರಿಗಳಿಗೆ ಮಾತ್ರ ಲಭ್ಯವಿತ್ತು.
ಚಿನ್ನ ಅಥವಾ ಬೆಳ್ಳಿಯನ್ನು ಯಾವುದೇ ಸ್ವರೂಪದಲ್ಲಿ ಖರೀದಿಸುವ ಉದ್ದೇಶಕ್ಕೆ ಸಾಲ ಕೊಡಲು ಬ್ಯಾಂಕ್‌ಗಳಿಗೆ ಸಾಮಾನ್ಯ ಸಂದರ್ಭಗಳಲ್ಲಿ ಅಧಿಕಾರ ಇರುವುದಿಲ್ಲ. ಕಚ್ಚಾ ಚಿನ್ನ, ಬೆಳ್ಳಿಯನ್ನು ಅಡಮಾನವಾಗಿ ಇರಿಸಿಕೊಂಡು ಸಾಲ ಕೊಡಲು ಬ್ಯಾಂಕ್‌ಗಳಿಗೆ ಅವಕಾಶ ಇಲ್ಲ.
ಆದರೆ ಕಾರ್ಯಾಚರಣೆ ಬಂಡವಾಳ ಸಾಲವನ್ನು ಜುವೆಲ್ಲರಿಗಳಿಗೆ ನೀಡಲು ಬ್ಯಾಂಕ್‌ಗಳಿಗೆ ಅನುವು ಮಾಡಿಕೊಡಲಾಗಿದೆ.
ಸೋಮವಾರ ಕೆಲವು ನಿರ್ದೇಶನ ಗಳನ್ನು ಹೊರಡಿಸಿರುವ ಆರ್‌ಬಿಐ, ಜುವೆಲ್ಲರಿಗಳಿಗೆ ಕಾರ್ಯಾಚರಣೆ ಬಂಡವಾಳದ ರೂಪದಲ್ಲಿ ಸಾಲ ನೀಡಲು ಬ್ಯಾಂಕ್‌ಗಳಿಗೆ ಇರುವ ಅವಕಾಶವನ್ನು ಇತರ ತಯಾರಿಕಾ ಘಟಕಗಳಿಗೂ ಅನ್ವಯಿಸಿ ವಿಸ್ತರಣೆ ಮಾಡಿದೆ.
ತಯಾರಿಕಾ ಚಟುವಟಿಕೆ ಅಥವಾ ಕೈಗಾರಿಕಾ ಸಂಸ್ಕರಣಾ ಚಟುವಟಿಕೆಗಳಲ್ಲಿ ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ಇತರರಿಗೂ ಕಾರ್ಯಾಚರಣೆ ಬಂಡವಾಳ ಸಾಲವನ್ನು ನೀಡಲು ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.
ಚಿನ್ನ ಅಥವಾ ಬೆಳ್ಳಿಯನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ಅಥವಾ ತಯಾರಿಕಾ ಚಟುವಟಿಕೆಯಲ್ಲಿ ಇವುಗಳನ್ನು ಒಂದು ಅಗತ್ಯ ವಸ್ತುವನ್ನಾಗಿ ಬಳಕೆ ಮಾಡುವವರಿಗೆ ವಾಣಿಜ್ಯ ಬ್ಯಾಂಕ್‌ಗಳು ಹಾಗೂ 3ನೇ ಹಂತದ ಅಥವಾ 4ನೇ ಹಂತದ ನಗರ ಸಹಕಾರ ಬ್ಯಾಂಕ್‌ಗಳು ಕಾರ್ಯಾಚರಣೆ ಬಂಡವಾಳಕ್ಕೆ ಸಾಲ ನೀಡಬಹುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಚಿನ್ನ, ಬೆಳ್ಳಿ ಬೆಲೆ ಇನ್ನಷ್ಟು ಹೆಚ್ಚಳ
ನವದೆಹಲಿ (ಪಿಟಿಐ): ಚಿನ್ನದ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹500ರಷ್ಟು ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1.20 ಲಕ್ಷಕ್ಕೆ ತಲುಪಿದೆ.
ಅಮೆರಿಕದ ಡಾಲರ್ ದುರ್ಬಲ ಆಗಿದ್ದುದು ಹಾಗೂ ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿ ದರವನ್ನು ಇನ್ನಷ್ಟು ತಗ್ಗಿಸಬಹುದು ಎಂಬ ನಿರೀಕ್ಷೆಯು ಈ ಏರಿಕೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಶೇಕಡ 99.5ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು 10 ಗ್ರಾಂಗೆ ₹500ರಷ್ಟು ಹೆಚ್ಚಾಗಿ, ₹1,19,400ಕ್ಕೆ ತಲುಪಿದೆ.
ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹500ರಷ್ಟು ಹೆಚ್ಚಳವಾಗಿ ₹1,50,500ಕ್ಕೆ ತಲುಪಿದೆ. ಸೋಮವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ₹7,000ದಷ್ಟು ಏರಿಕೆ ಆಗಿತ್ತು.
ವಿದೇಶಿ ಸಾಲದ ಮೊತ್ತ ಏರಿಕೆ
ಜೂನ್ ಅಂತ್ಯದ ವೇಳೆಗೆ ಭಾರತವು ವಿದೇಶಗಳಿಂದ ಪಡೆದ ಸಾಲಗಳ ಮೊತ್ತವು 747.2 ಬಿಲಿಯನ್ ಅಮೆರಿಕನ್ ಡಾಲರ್‌ಗೆ (ಅಂದಾಜು ₹66.36 ಲಕ್ಷ ಕೋಟಿ) ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.
2025ರ ಮಾರ್ಚ್ ಅಂತ್ಯಕ್ಕೆ ಭಾರತವು ವಿವಿಧ ದೇಶಗಳಿಂದ ಪಡೆದಿದ್ದ ಸಾಲದ ಮೊತ್ತಕ್ಕೆ ಹೋಲಿಸಿದರೆ ಇದು 11.2 ಬಿಲಿಯನ್ ಡಾಲರ್‌ನಷ್ಟು (ಅಂದಾಜು ₹99 ಸಾವಿರ ಕೋಟಿ) ಹೆಚ್ಚು.
ಆದರೆ ದೇಶದ ಸಾಲವನ್ನು ದೇಶದ ಒಟ್ಟು ಜಿಡಿಪಿಯ ಗಾತ್ರದ ಜೊತೆ ಹೋಲಿಸಿದರೆ ಸಾಲದ ಪ್ರಮಾಣವು ಕಡಿಮೆ ಆಗಿರುವುದು ಕಾಣುತ್ತದೆ. ಜೂನ್ ಅಂತ್ಯಕ್ಕೆ ವಿದೇಶಿ ಸಾಲ ಮತ್ತು ಜಿಡಿಪಿ ಅನುಪಾತವು ಶೇ 18.9ಕ್ಕೆ ಇಳಿಕೆ ಆಗಿದೆ. ಇದು ಮಾರ್ಚ್‌ನಲ್ಲಿ ಶೇ 19.1ರಷ್ಟು ಇತ್ತು.
ದಿಮ್ಮಿಗಳ ಮೇಲೆ ಶೇ 10ರಷ್ಟು ಸುಂಕ
ಅಮೆರಿಕ ಆಮದು ಮಾಡಿಕೊಳ್ಳುವ ಮರ ಮತ್ತು ಮರದ ದಿಮ್ಮಿಗಳ ಮೇಲೆ ಶೇ 10ರಷ್ಟು, ಅಡುಗೆ ಮನೆ ಹಾಗೂ ಸ್ನಾನಗೃಹದ ಉಪಕರಣಗಳು, ಸೋಫಾಸೆಟ್ ಸೇರಿದಂತೆ ಪೀಠೋಪಕರಣಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿಹಾಕಿದ್ದಾರೆ.
ಈ ನೂತನ ಸುಂಕಗಳು ಅಕ್ಟೋಬರ್ 14ರಿಂದ ಜಾರಿಗೆ ಬರಲಿವೆ. ಪೇಟೆಂಟ್ ಪಡೆದ ಔಷಧ ಮತ್ತು ಭಾರಿ ಟ್ರಕ್‌ಗಳ ಆಮದು ಮೇಲೆ ಹೊಸ ಸುಂಕಗಳನ್ನು ವಿಧಿಸಿ ಕಳೆದ ವಾರ ಆದೇಶಿಸಲಾಗಿತ್ತು. ಈ ಸುಂಕಗಳು ಅಕ್ಟೋಬರ್ 1ರಿಂದಲೇ ಜಾರಿಗೆ ಬರಲಿವೆ.
ಅಮೆರಿಕವು ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ಸಂಬಂಧಿಸಿ ಜನವರಿ 1ರ ಒಳಗಾಗಿ ಒಪ್ಪಂದ ಮಾಡಿಕೊಳ್ಳಬೇಕು. ತಪ್ಪಿದಲ್ಲಿ, ಸೋಫಾ ಸೇರಿ ವಿವಿಧ ಪೀಠೋಪಕರಣಗಳ ಮೇಲಿನ ಸುಂಕವು ಶೇ 30ಕ್ಕೆ ಹೆಚ್ಚಿಸಲಾಗು ವುದು ಹಾಗೂ ಅಡುಗೆ ಮನೆ ಉಪಕರಣಗಳ ಮೇಲಿನ ಸುಂಕವನ್ನು ಶೇ50ಕ್ಕೆ ಹೆಚ್ಚಿಸಲಾಗುವುದು ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಮರದ ಉತ್ಪನ್ನಗಳ ಆಮದು ಅಮೆರಿಕದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದೆ. ಅಲ್ಲದೇ, ಈ ಉತ್ಪನ್ನಗಳ ಆಮದು ರಾಷ್ಟ್ರೀಯ ಭದ್ರತೆಗೆ ಅಪಾಯ ಒಡ್ಡಲಿದೆ ಎಂದು ಹೇಳುವ ಮೂಲಕ ಸುಂಕ ಹೆಚ್ಚಳವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
ಏರ್ ರೈಫಲ್ ಮಿಶ್ರ ತಂಡಕ್ಕೆ ಚಿನ್ನ
ತೀವ್ರ ಹೋರಾಟ ನಡೆಸಿದ ಇಶಾ ಅನಿಲ್ ಟಕ್ಸಾಲೆ ಮತ್ತು ಹಿಮಾಂಶು ಜೋಡಿ, ಸ್ವದೇಶದ ಶಾಂಭವಿ ಕ್ಷೀರಸಾಗರ– ನರೇನ್ ಪ್ರಣವ್ ಅವರನ್ನು ಸೋಲಿಸಿ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ನ 10 ಮೀ. ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಮಂಗಳವಾರ ಸ್ವರ್ಣ ಜಯಿಸಿತು.
ಪುರುಷರ ಟ್ರ್ಯಾಪ್ (50 ಗುರಿ) ಸ್ಪರ್ಧೆ ಯಲ್ಲಿ ವಿನಯ್ ಪ್ರತಾಪ್ ಚಂದ್ರಾವತ್ ಅವರು ಕಂಚಿನ ಪದಕ ಗೆದ್ದರು. ಬುಧವಾರ ಈ ಕೂಟದ ಕೊನೆಯ ದಿನ ವಾಗಿದ್ದು, ಭಾರತ ಪದಕ ಪಟ್ಟಿಯಲ್ಲಿ 23 ಪದಕಗಳೊಂದಿಗೆ ಅಗ್ರಸ್ಥಾನ ಕಾಪಾ ಡಿಕೊಂಡಿದೆ. ಇದರಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 7 ಕಂಚಿನ ಪದಕಗಳು ಸೇರಿವೆ.
ಫೈನಲ್‌ನ ಒಂದು ಹಂತದಲ್ಲಿ ಇಶಾ– ಹಿಮಾಂಶು ಜೋಡಿ 9–15ರಲ್ಲಿ ಹಿನ್ನಡೆಯಲ್ಲಿತ್ತು. ಆದರೆ ಅಮೋಘವಾಗಿ ಚೇತರಿಸಿ 17–15ರಲ್ಲಿ ಜಯಗಳಿಸಿತು. ಈ ಸ್ಪರ್ಧೆಯ ಕಂಚಿನ ಪದಕ ಐಎನ್‌ಎ (ವೈಯಕ್ತಿಕ ತಟಸ್ಥ ಅಥ್ಲೀಟ್ಸ್) ಪ್ರತಿನಿಧಿಸಿದ ವರ್ವರಾ ಕರ್ದಕೋವಾ– ಕಮಿಲ್ ನುರಿಯಖ್ಮೆಟೋವ್ ಜೋಡಿ ಪಾಲಾಯಿತು.
ಪುರುಷರ ಟ್ರ್ಯಾಪ್ ಸ್ಪರ್ಧೆಯಲ್ಲಿ ಕ್ರೊವೇಷ್ಯಾದ 20 ವರ್ಷ ವಯಸ್ಸಿನ ಟೋನಿ ಗುಡೆಲ್ ಅವರು 44 ಟಾರ್ಗೆಟ್ ಸಾಧಿಸಿ ಚಿನ್ನ ಗೆದ್ದರು. ಇದು ಈ ದೇಶಕ್ಕೆ ಮೊದಲ ಚಿನ್ನ. ಕ್ವಾಲಿಫಿಕೇಷನ್‌ನಲ್ಲಿ ಅಗ್ರಸ್ಥಾನ ಗಳಿಸಿದ್ದ ಸ್ಪೇನ್‌ನ ಐಸಾಕ್ ಹರ್ನಾಂಡೆಝ್ (41) ಬೆಳ್ಳಿ ಗೆದ್ದರು. ಚಂದ್ರಾವತ್ (34) ಮೂರನೇ ಸ್ಥಾನ ಗಳಿಸಿದರೆ, ಅರ್ಜುನ್ (29) ನಾಲ್ಕನೇ ಸ್ಥಾನ ಪಡೆದರು.
ಮಹಿಳೆಯರ 25 ಮೀ. ಪಿಸ್ತೂಲ್ ಪ್ರಿಸಿಷನ್ ಹಂತದ ನಂತರ ಭಾರತದ ತೇಜಸ್ವಿನಿ 288 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಬುಧವಾರ ರ‍್ಯಾಪಿಡ್ ಫೈರ್ ಹಂತ ನಡೆಯಲಿದ್ದು, ಒಟ್ಟಾರೆ ಮೊದಲ ಆರು ಸ್ಥಾನ ಗಳಿಸಿದವರು ಫೈನಲ್ ತಲುಪುವರು.
ಪುರುಷರ 25 ಮೀ. ಪಿಸ್ತೂಲ್ ಸ್ಪರ್ಧೆಯ ಪ್ರಿಸಿಷನ್ ಹಂತದ ನಂತರ ಭಾರತದ ರಾಘವ್ ಶರ್ಮಾ (290) ಅಗ್ರಸ್ಥಾನದಲ್ಲಿದ್ದಾರೆ. ಮುಕೇಶ್ ನೆಲವಳ್ಳಿ (289) ನಿಕಟ ಪೈಪೋಟಿ ನೀಡಿ ಎರಡನೇ ಸ್ಥಾನದಲ್ಲಿದ್ದಾರೆ.
ಐದನೇ ಪದಕ ಗೆದ್ದ ಶ್ರೀಹರಿ ನಟರಾಜ್
ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತದ ಈಜುತಾರೆ ಶ್ರೀಹರಿ ನಟರಾಜ್ ಅವರು 11ನೇ ಏಷ್ಯನ್ ಚಾಂಪಿಯನ್ ಷಿಪ್‌ನಲ್ಲಿ ಮಂಗಳವಾರ 100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಇದು ಅವರಿಗೆ ಈ ಕೂಟದಲ್ಲಿ ಐದನೇ ಪದಕ.
ಪುರುಷರ 50 ಮೀ. ಬಟರ್‌ಫ್ಲೈ ನಲ್ಲಿ ರೋಹಿತ್ ಬಿ.ಬೆನೆಡಿಕ್ಟನ್ ಅವರು ಬೆಳ್ಳಿ ಗೆದ್ದುಕೊಂಡರು. ಇದರೊಂದಿಗೆ ಭಾರತ ಈ ಕೂಟದಲ್ಲಿ 9 ಪದಕಗಳನ್ನು ಗೆದ್ದಂತಾಗಿದೆ.
ಐದನೇ ಲೇನ್‌ನಲ್ಲಿದ್ದ ಶ್ರೀಹರಿ, ಜಾಣ್ಮೆಯಿಂದ ವೇಗ ಹೆಚ್ಚಿಸಿದರು. 50 ಮೀ. ಕಳೆಯುವಷ್ಟರಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು. ಕೊನೆಯ 50 ಮೀ. ನಲ್ಲೂ ಅವರು ಅದೇ ಲಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಚೀನಾದ ವಾಂಗ್ ಹಾವೊಯು (49.19 ಸೆ.) ಮತ್ತು ಕತಾರ್‌ನ ಅಲಿ ತಮೆರ್ ಹಸನ್ (49.46 ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.
ಶ್ರೀಹರಿ 49.96 ಸೆ.ಗಳಲ್ಲಿ ಸ್ಪರ್ಧೆ ಪೂರೈಸಿದರು. ಅವರು ಸ್ವದೇಶದ ಆಕಾಶ್ ಮಣಿ (50.45 ಸೆ.) ಪೈಪೋಟಿ ಮೀರಿ ನಿಂತರು. ಆಕಾಶ್ ನಾಲ್ಕನೇ ಸ್ಥಾನ ಪಡೆದರು.
‘ಈ ಋತುವಿನಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ. ತರಬೇತಿಯೂ ಚೆನ್ನಾಗಿ ನಡೆದಿದೆ. ಹೀಟ್ಸ್‌ನಲ್ಲಿ ನಾನೇ ವೇಗವಾಗಿ ಈಜಿದ್ದೆ. ಆದರೆ ಪದಕ ಗೆದ್ದ ಇತರ ಇಬ್ಬರೂ ಅಮೋಘವಾಗಿ ಈಜಿದರು. ಪೋಡಿಯಂ ಏರಲು ಸಾಧ್ಯವಾಗಿದ್ದರಿಂದ ಸಂತಸವಾಗಿದೆ’ ಎಂದು 24 ವರ್ಷ ವಯಸ್ಸಿನ ಶ್ರೀಹರಿ ಫೈನಲ್ ನಂತರ ಪ್ರತಿಕ್ರಿಯಿಸಿದರು.
50 ಮೀ. ಬಟರ್‌ಫ್ಲೈನಲ್ಲಿ ರೋಹಿತ್ ಉತ್ತಮ ಆರಂಭ ಪಡೆದು, 23.89 ಸೆ.ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಅವರಿಂದ ತೀವ್ರ ಪೈಪೋಟಿ ಎದುರಿಸಿದರೂ ಕಜಾಕಸ್ತಾನದ ಅದಿಲ್ಬೆಕ್ ಮುಸ್ಸಿನ್ 23.74 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆಲ್ಲುವಲ್ಲಿ ಯಶಸ್ವಿ ಆದರು.
ಕರ್ನಾಟಕದವರಾದ ಧಿನಿಧಿ ದೇಸಿಂಗು ಮತ್ತು ಎಸ್.ರುತುಜಾ ಅವರು ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ ಪದಕ ಗೆಲ್ಲಲಾಗಲಿಲ್ಲ. ಅವರು ಕ್ರಮವಾಗಿ ಆರು ಮತ್ತು ಎಂಟನೇ ಸ್ಥಾನ ಗಳಿಸಿದರು.
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಸುಮಿತ್‌ಗೆ ಹ್ಯಾಟ್ರಿಕ್ ಚಿನ್ನ
ಭಾರತದ ಪ್ಯಾರಾ ಜಾವೆಲಿನ್ ಪಟು ಸುಮಿತ್ ಅಂಟಿಲ್ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಸತತ ಮೂರನೇ ಬಾರಿ ಪುರುಷರ ಎಫ್64 ವಿಭಾಗದಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್ ಪೂರೈಸಿದರು.
ಮಂಗಳವಾರ ನಡೆದ ಜಾವೆಲಿನ್ ಸ್ಪರ್ಧೆಯಲ್ಲಿ ಸುಮಿತ್ ಅವರು ತಮ್ಮ ಐದನೇ ಯತ್ನದಲ್ಲಿ 71.37 ಮೀ. ದೂರ ಎಸೆದಿದ್ದು ಅವರ ಉತ್ತಮ ಥ್ರೊ ಎನಿಸಿತು. 27 ವರ್ಷ ವಯಸ್ಸಿನ ಸುಮಿತ್ ಈ ಹಿಂದೆ 2023 ಮತ್ತು 2024ರ ಆವೃತ್ತಿಗಳಲ್ಲೂ ಚಾಂಪಿಯನ್ ಆಗಿದ್ದರು.
ಇಂದಿನ ಸಾಧನೆ ಅವರ ವೈಯಕ್ತಿಕ ಶ್ರೇಷ್ಠವೂ ಆಗಿದೆ. ಕಳೆದ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ಅವರು 70.83 ಮೀ. ದೂರ ಎಸೆದಿದ್ದು ಇದುವರೆಗಿನ ಅತ್ಯುತ್ತಮ ಎನಿಸಿತ್ತು.
ಪ್ಯಾರಾಲಿಂಪಿಕ್ಸ್‌ನಲ್ಲೂ ಅವರು ಎರಡು ಬಾರಿಯ (2021ರ ಟೋಕಿಯೊ ಮತ್ತು 2024ರ ಪ್ಯಾರಿಸ್) ಚಿನ್ನದ ಪದಕ ವಿಜೇತರಾಗಿದ್ದಾರೆ. ಹಾಲಿ ಪ್ಯಾರಾ ಏಷ್ಯನ್ ಗೇಮ್ಸ್ ಚಾಂಪಿಯನ್ ಕೂಡ ಆಗಿದ್ದಾರೆ.
ಬಿಹಾರದಲ್ಲಿ 7.42 ಕೋಟಿ ಮತದಾರರು
ಚುನಾವಣಾ ಆಯೋಗವು ಮಂಗಳವಾರ ಬಿಹಾರದ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 7.42 ಕೋಟಿ ಮತದಾರರ ವಿವರಗಳಿವೆ.
ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ರಾಜ್ಯದಲ್ಲಿ ಒಟ್ಟು 47 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ. ಆದರೆ, ಎಸ್‌ಐಆರ್‌ನ ಕರಡು ಪಟ್ಟಿಗಿಂತ (7.24 ಕೋಟಿ) ಅಂತಿಮ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ.
ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಗೈರುಹಾಜರಿ, ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣಗಳನ್ನು ನೀಡಿ 65 ಲಕ್ಷ ಮತದಾರರ ಹೆಸರುಗಳನ್ನು ಹೊರಗಿಡಲಾಗಿತ್ತು. ಕರಡುಪಟ್ಟಿಯಲ್ಲಿ ಬಿಟ್ಟುಹೋಗಿದ್ದ 21.53 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಚುನಾವಣಾ ಆಯೋಗವು ಮಂಗಳವಾರ ಬಿಹಾರದ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ 7.42 ಕೋಟಿ ಮತದಾರರ ವಿವರಗಳಿವೆ.
ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ರಾಜ್ಯದಲ್ಲಿ ಒಟ್ಟು 47 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ. ಆದರೆ, ಎಸ್‌ಐಆರ್‌ನ ಕರಡು ಪಟ್ಟಿಗಿಂತ (7.24 ಕೋಟಿ) ಅಂತಿಮ ಪಟ್ಟಿಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ.
ಆಗಸ್ಟ್‌ನಲ್ಲಿ ಪ್ರಕಟಿಸಿದ್ದ ಕರಡು ಪಟ್ಟಿಯಲ್ಲಿ ಗೈರುಹಾಜರಿ, ಸ್ಥಳಾಂತರ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣಗಳನ್ನು ನೀಡಿ 65 ಲಕ್ಷ ಮತದಾರರ ಹೆಸರುಗಳನ್ನು ಹೊರಗಿಡಲಾಗಿತ್ತು. ಕರಡುಪಟ್ಟಿಯಲ್ಲಿ ಬಿಟ್ಟುಹೋಗಿದ್ದ 21.53 ಲಕ್ಷ ಅರ್ಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗಾಜಾ: ಸಂಘರ್ಷ ಅಂತ್ಯಕ್ಕೆ 20 ಅಂಶ
ಗಾಜಾದಲ್ಲಿ ಯುದ್ಧ ಕೊನೆಗೊಳಿಸುವ ಸಂಬಂಧ ರೂಪಿಸಿರುವ ಶಾಂತಿ ಒಪ್ಪಂದಕ್ಕೆ ಒಪ್ಪಿಗೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಆದರೆ, ಈ ಪ್ರಸ್ತಾವವನ್ನು ಹಮಾಸ್ ಒಪ್ಪಿಕೊಂಡಿ ದೆಯೇ ಎಂಬುದು ದೃಢಪಟ್ಟಿಲ್ಲ.
ಪ್ಯಾಲೆಸ್ಟೀನ್‌ನ ಗಾಜಾ ಪಟ್ಟಿಯಲ್ಲಿ ಇಸ್ರೇಲ್– ಹಮಾಸ್ ನಡುವಿನ ಸಂಘರ್ಷ ಕೊನೆಗೊಳಿಸುವುದಕ್ಕಾಗಿ 20 ಅಂಶಗಳ ಯೋಜನೆಯನ್ನು ಟ್ರಂಪ್ ಮಂಡಿಸಿದ್ದಾರೆ. ಇದರ ಅನ್ವಯ, ಯುದ್ಧದಿಂದ ಜರ್ಜರಿತರಾಗಿರುವ ಪ್ಯಾಲೆಸ್ಟೀನ್‌ನ ಪ್ರದೇಶಕ್ಕೆ ತಾತ್ಕಾಲಿಕ ಆಡಳಿತ ಮಂಡಳಿ ಸ್ಥಾಪಿಸಿ, ಇದರ ನೇತೃತ್ವವನ್ನು ಡೊನಾಲ್ಡ್ ಟ್ರಂಪ್ ಅವರೇ ವಹಿಸಿ ಕೊಳ್ಳಲಿದ್ದಾರೆ. ಈ ಮಂಡಳಿಯಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಕೂಡ ಇರಲಿದ್ದಾರೆ.
‘ಎರಡು ಕಡೆಯವರೂ ಒಪ್ಪಿಗೆ ಸೂಚಿಸಿದರೆ, ಯುದ್ಧಪೀಡಿತ ಗಾಜಾ ದಿಂದ ಯಾವ ನಾಗರಿಕರೂ ಬಿಟ್ಟು ತೆರಳಬೇಕಿಲ್ಲ. ಹಮಾಸ್ ವಶದಲ್ಲಿರುವ ಬಾಕಿ ಉಳಿದ ಒತ್ತೆಯಾಳುಗಳನ್ನು 72 ಗಂಟೆಗಳ ಒಳಗಾಗಿ ಬಿಡುಗಡೆಗೊಳಿಸಬೇಕು ಎಂಬ ಪ್ರಸ್ತಾವವೂ ಒಳಗೊಂಡಿದೆ ಎಂದು ಟ್ರಂಪ್ ಹೇಳಿದ್ದಾರೆ.
ಕತಾರ್ ಕ್ಷಮೆಯಾಚಿಸಿದ ನೆತನ್ಯಾಹು
ಹಮಾಸ್ ನಾಯಕರನ್ನು ಗುರಿಯಾಗಿಸಿ ದೋಹಾದ ಮೇಲೆ ನಡೆಸಿದ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸೋಮವಾರ ಕತಾರ್‌ನ ಕ್ಷಮೆಯಾಚಿಸಿದ್ದಾರೆ ಎಂದು ಅಮೆರಿಕ ತಿಳಿಸಿದೆ.
‘ನೆತನ್ಯಾಹು ಅವರು ಶ್ವೇತಭವನದಿಂದ ದೂರವಾಣಿ ಕರೆ ಮಾಡಿ ಕತಾರ್ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರ ಕ್ಷಮೆಯಾಚಿಸಿದರು. ದಾಳಿಯಲ್ಲಿ ಕತಾರ್‌ನ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇಂತಹ ದಾಳಿ ನಡೆಸುವುದಿಲ್ಲ ಎಂದು ಮಾತುಕೊಟ್ಟರು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಮುಂದಿಟ್ಟಿರುವ ಶಾಂತಿ ಒಪ್ಪಂದಕ್ಕೆ 3–4 ದಿನಗಳಲ್ಲಿ ಹಮಾಸ್ ಒಪ್ಪಿಗೆ ಸೂಚಿಸದಿದ್ದರೆ, ಹಮಾಸ್ ಬಂಡುಕೋರ ಸಂಘಟನೆಯನ್ನು ಮಣಿಸಲು ಇಸ್ರೇಲ್‌ಗೆ ಅಮೆರಿಕವು ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ವಿಸ್ತೃತ ಯೋಜನೆಯನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಟ್ರಂಪ್, ‘ಶಾಂತಿ ಸ್ಥಾಪನೆ ಕುರಿತ ಯೋಜನೆ ಇನ್ನೂ ಅಂತಿಮಗೊಂಡಿಲ್ಲ. ಇದಕ್ಕೆ ಹಮಾಸ್ ಒಪ್ಪಿಗೆ ಸಿಗಬೇಕು’ ಎಂದು ತಿಳಿಸಿದರು.
‘ಪ್ಯಾಲೆಸ್ಟೀನಿಯನ್ನರು ತಮ್ಮ ಹಣೆಬರಹ ನಿರ್ಧರಿಸಿಕೊಳ್ಳಲು ಇದನ್ನು ಒಪ್ಪಬೇಕು’ ಎಂದರು.
‘ಒಂದೊಮ್ಮೆ ಹಮಾಸ್ ಪ್ರಸ್ತಾವ ತಿರಸ್ಕರಿಸಿದರೆ ಅಥವಾ ಒಪ್ಪಿಗೆ ಸೂಚಿಸಿದರೆ, ಇಸ್ರೇಲ್ ತನ್ನ ಕೆಲಸವನ್ನು ಪೂರ್ಣಗೊಳಿಸಲಿದೆ. ಅದು ಸುಲಭದ ಮಾರ್ಗವೇ ಇರಬಹುದು ಅಥವಾ ಕಷ್ಟದ ಮಾರ್ಗವೇ ಇರಬಹುದು. ಅದನ್ನು ನಾವು ಮುಗಿಸುತ್ತೇವೆ’ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದರು.
ಮುಂದೇನು?: ಕತಾರ್‌ನ ಪ್ರಧಾನಿ ಹಾಗೂ ಈಜಿಪ್ಟ್‌ನ ಗುಪ್ತಚರ ವಿಭಾಗದ ಮುಖ್ಯಸ್ಥರು, ಟ್ರಂಪ್ ಇಟ್ಟಿರುವ ಪ್ರಸ್ತಾವ ವನ್ನು ಹಮಾಸ್ ಸಂಧಾನಕಾರರಿಗೆ ತಿಳಿಸಲಿದ್ದಾರೆ. ಗಾಜಾದ ಆಡಳಿತ ವ್ಯವಸ್ಥೆಯಿಂದ ಹಿಂದೆ ಸರಿಯುವ ಪ್ರಸ್ತಾವಕ್ಕೆ ಹಮಾಸ್ ಈ ಹಿಂದೆಯೇ ಒಪ್ಪಿಗೆ ಸೂಚಿಸಿತ್ತು. ಆದರೆ, ನಿಶ್ಶಸ್ತ್ರೀಕರಣಗೊಳಿಸಬೇಕು ಎಂಬ ನೆತನ್ಯಾಹು ಬೇಡಿಕೆಗೆ ಒಪ್ಪಿಗೆ ಸೂಚಿಸಿಲ್ಲ.
‘ಚರ್ಚಿಸಿ ನಿರ್ಧಾರ’: ‘ಡೊನಾಲ್ಡ್ ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಗೆ ಪ್ರತಿ ಕ್ರಿಯಿಸುವ ಮೊದಲು, ಚರ್ಚಿಸಲಾಗು ವುದು’ ಎಂದು ಹಮಾಸ್ ಹೇಳಿದೆ.
ವರವಾದೀತೆ ನ್ಯಾನೋ ಗೊಬ್ಬರ?
ಈಗ ನಾನಾರೂಪದಲ್ಲಿ ನ್ಯಾನೋ ತಂತ್ರಜ್ಞಾನ ಬೆಳೆಯುತ್ತಲೇ ಇದೆ. ನ್ಯಾನೋ ತಂತ್ರಜ್ಞಾನವೆಂದರೆ 1ರಿಂದ 100 ನ್ಯಾನೋ ಮೀಟರ್‌ಗಳ ವ್ಯಾಪ್ತಿಯಲ್ಲಿಯ ವಸ್ತುಗಳನ್ನು ಕುರಿತಾದ ವಿಜ್ಞಾನ. ಒಂದು ನ್ಯಾನೋ ಮೀಟರ್ (0.000000001 ಮೀಟರ್), ಎಂದರೆ ಅದರ ದಪ್ಪವು ನಮ್ಮ ಕೂದಲೆಳೆಗಿಂತ ಸರಿಸುಮಾರು ಒಂದು ಲಕ್ಷ ಪಟ್ಟು ಕಡಿಮೆ! ಒಂದು ಕಾಲದಲ್ಲಿ ಕೇವಲ ಇದೊಂದು ‘ಸಾಧ್ಯತೆ’ ಎನಿಸಿಕೊಂಡಿದ್ದ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮ ತಂತ್ರಜ್ಞಾನ. ನ್ಯಾನೋ ತಂತ್ರಜ್ಞಾನ ಮೊದಮೊದಲು ಸೂಕ್ಷ್ಮದರ್ಶಕ ತಂತ್ರಜ್ಞಾನ ಹಾಗೂ ವಸ್ತುವಿಜ್ಞಾನದ ಕ್ಷೇತ್ರವನ್ನು ಪ್ರವೇಶಿಸಿತು. ಇಂದು ಔಷಧತಯಾರಿಕೆ, ಆರೋಗ್ಯ, ಪರಿಸರ ಮಾಲಿನ್ಯ ನಿರ್ವಹಣೆ, ಸೌರಫಲಕಗಳ ತಯಾರಿಕೆ, ಚಿಪ್‌ಗಳ ವಿನ್ಯಾಸ, ನ್ಯಾನೋ ರೋಬೋಟ್ – ಹೀಗೆ ಹಲವಾರು ವಿವಿಧ ಕ್ಷೇತ್ರಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. ನ್ಯಾನೋ ಟೆಕ್ನಾಲಜಿ ಇಂದು ಕೃಷಿಯಲ್ಲಿಯೂ ಬಳಕೆಯಾಗುತ್ತಿದೆ. ಕಳೆದ ಕಾಲು ಶತಮಾನಗಳಿಂದ ನ್ಯಾನೋ ತಂತ್ರಜ್ಞಾನವನ್ನು ಕೃಷಿಯ ಕ್ಷೇತ್ರ ದಲ್ಲಿಯೂ ಪ್ರಯೋಗ ಮಾಡಲಾಗುತ್ತಿದೆ. ಆ ಅವಿರತ ಪರಿಶ್ರಮದ ಫಲವೇ ನ್ಯಾನೋ ಗೊಬ್ಬರ.
ಗೊಬ್ಬರಗಳಲ್ಲಿನ ಪೋಷಕಾಂಶಗಳನ್ನು ಹೆಚ್ಚು ಪರಿ ಣಾಮಕಾರಿಯಾಗಿಸಲು ಗೊಬ್ಬರವನ್ನು ನ್ಯಾನೋ ಗಾತ್ರಕ್ಕೆ ತರಲಾಗುವುದು. ಅದೇ ‘ನ್ಯಾನೋ ಗೊಬ್ಬರ’. ಸಾಮಾನ್ಯ ಗೊಬ್ಬರದ ಹಾಗೆ ಮಣ್ಣಿನಲ್ಲಿ ಬೆರೆಸುವುದರ ಬದಲಾಗಿ ಇದನ್ನು ನೇರವಾಗಿ ಕಾಂಡಕ್ಕೆ ಹಾಗೂ ಎಲೆಗಳಿಗೆ ಸಿಂಪಡಿಸಲಾಗು ತ್ತದೆ. ಇದು ಸಾಂಪ್ರದಾಯಿಕ ಗೊಬ್ಬರಕ್ಕಿಂತ ಸೋವಿ, ಬಳಕೆಯ ಅವಶ್ಯಕತೆಯ ಪ್ರಮಾಣವೂ ಕಡಿಮೆ, ನಿರ್ವಹಣೆಯೂ ಸುಲಭ, ಅತ್ಯಂತ ಪರಿಣಾಮಕಾರಿ; ಅಷ್ಟೇ ಇಳುವರಿ, ಹಾಗೂ ಸುಲಭವಾಗಿ ಇದನ್ನು ಸಂಗ್ರಹಿಸಿಡಬಹುದು. ಕೃಷಿಯಲ್ಲಿ ಸುಸ್ಥಿರತೆಗಾಗಿ ಇದೊಂದು ಅತ್ಯಂತ ಮಹತ್ವದ ಪರಿಹಾರವಾಗಿದೆ. ನ್ಯಾನೋ ಗೊಬ್ಬರದಲ್ಲಿ ನಾಲ್ಕು ಬಗೆಗಳುಂಟು: ನ್ಯಾನೋ ಯೂರಿಯಾ ಅಥವಾ ನ್ಯಾನೋ ಸಾರಜನಕ, ನ್ಯಾನೋ ಫಾಸ್ಪರಸ್, ನ್ಯಾನೋ ಪೊಟ್ಯಾಸಿಯಮ್, ಹಾಗೂ ನ್ಯಾನೋ ಸೂಕ್ಷ್ಮ ಪೋಷಕಾಂಶಗಳು. ಈಗ ನ್ಯಾನೋ ಗೊಬ್ಬರದ ಕೆಲವು ಲಕ್ಷಣಗಳನ್ನು ನೋಡೋಣ.
ನ್ಯಾನೋ ಗಾತ್ರ: ಈ ಗೊಬ್ಬರದ ಪ್ರಧಾನ ಲಕ್ಷಣವೇ ಅದರ ಸೂಕ್ಷ್ಮ ಗಾತ್ರ. ಸಾಂಪ್ರದಾಯಿಕ ರಾಸಾಯನಿಕ ಗೊಬ್ಬರವು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಅದರ ಬಳಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ಬಳಸಿದ ಎಲ್ಲಾ ಗೊಬ್ಬರವೂ ಬೆಳೆಗಳಿಗೆ ಉಪಯೋಗವಾಗುವುದಿಲ್ಲ; ಪೋಷಕಾಂಶದ ಸೋರಿಕೆಯಾಗುತ್ತದೆ, ಗೊಬ್ಬರವು ನೀರಿನಲ್ಲಿ ಸೇರಿ ಹರಿದು ಹೋಗುತ್ತದೆ, ಇಲ್ಲವೇ ಮಣ್ಣಿನಲ್ಲೇ ಉಳಿದುಬಿಡುತ್ತದೆ. ಅಚ್ಚರಿಯ ವಿಷಯವೆಂದರೆ, ಗೊಬ್ಬರದಲ್ಲಿನ ಶೇ 50-70ರಷ್ಟು ಪೋಷಕಾಂಶವು ಬೆಳೆಗಳಿಗೆ ಸಿಗುವುದೇ ಇಲ್ಲ. ಇದಕ್ಕೆ ರಾಮಬಾಣವೇ ನ್ಯಾನೋ ಗೊಬ್ಬರ. ಇದರ ಗಾತ್ರ ಅತಿ ಚಿಕ್ಕದು; ಅದನ್ನು ಪೋಷಕಾಂಶಗಳ ಸಮೇತ ಕ್ಯಾಪ್ಸೂಲ್‌ನಲ್ಲಿ ತುಂಬಿ ಸಲಾಗುತ್ತದೆ. ದ್ರವದ ರೂಪದಲ್ಲಿ ನೇರವಾಗಿ ಕಾಂಡಗಳು, ಎಲೆಗಳು, ಕೆಲವೊಮ್ಮೆ ಬೇರುಗಳೂ ಹೀರಿಕೊಳ್ಳುವಂತೆ ಸಿಂಪಡಿ ಸಲಾಗುತ್ತದೆ.
ಪೋಷಕಾಂಶಗಳ ಬಿಡುಗಡೆ ನಿಧಾನ: ನ್ಯಾನೋ ಗೊಬ್ಬರವನ್ನು ಹಾಕಿದ ಮೇಲೆ ಅದರಲ್ಲಿನ ಪೋಷಕಾಂಶಗಳು ನಿಧಾನವಾಗಿ ಬಿಡುಗಡೆಯಾಗುತ್ತವೆ. ಇದರಿಂದಾಗಿ ಸಸ್ಯಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಮಾಣ ಹೆಚ್ಚುತ್ತದೆ. ಈ ವಿಶೇಷವಾದ ಲಕ್ಷಣದಿಂದಾಗಿ ಪೋಷಕಾಂಶವು ಪೋಲಾಗುವುದು ಕಡಿಮೆ ಆಗುವುದಲ್ಲದೆ, ಮತ್ತೆ ಮತ್ತೆ ಗೊಬ್ಬರದ ಸಿಂಪಡಣೆಯ ಅಗತ್ಯವೂ ಇಲ್ಲ.
ಪರಿಣಾಮಕಾರಿ: 500 ಮಿಲಿಲೀಟರ್ ನ್ಯಾನೋ ಯೂರಿಯಾವು 45 ಕೆಜಿಗಳಷ್ಟು ಸಾಂಪ್ರದಾಯಿಕ ರಾಸಾಯನಿಕ ಯೂರಿಯಾ ಗೊಬ್ಬರಕ್ಕೆ ಸಮ! ನ್ಯಾನೋ ಗೊಬ್ಬರವು ಒಳ್ಳೆಯ ಇಳುವರಿಯನ್ನು ನೀಡುವುದಲ್ಲದೆ ಕಿಸೆಗೂ ಹಗುರ.
ಪರಿಸರಸ್ನೇಹಿ: ನ್ಯಾನೋ ಗೊಬ್ಬರವು ಪರಿಸರಸ್ನೇಹಿ. ಮೊದಲನೆಯದಾಗಿ ಅನಗತ್ಯ ರಾಸಾಯನಿಕ ಸೋರಿಕೆಯು ತಪ್ಪಿ ಜಲಮಾಲಿನ್ಯವು ಕಡಿಮೆಯಾಗುತ್ತದೆ. ಎರಡನೆಯದಾಗಿ ಗೊಬ್ಬರದ ತಯಾರಿಕೆಯಲ್ಲಿ ಗಣನೀಯವಾದ ಇಳಿಕೆಯಾಗಿ ಅದರಿಂದ ಆಗುತ್ತಿರುವ ಹಸಿರುಮನೆ ಅನಿಲಗಳ ಹೊರ ಸೂಸುವಿಕೆಯಲ್ಲಿ ಕೂಡ ಇಳಿಕೆಯನ್ನು ಕಾಣಬಹುದು. v
ಭಾರತದ ಪಾತ್ರ
1960ರ ನಂತರದಲ್ಲಿ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಿ, ಮಣ್ಣನ್ನು ದುರ್ಬಲಗೊಳಿಸಿದೆ. ಆದರೆ ಈಗ ಭಾರತದ ಕೆಲವು ಸಹಕಾರಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು (ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ಸ್ ಕೋ-ಓಪರೇಟಿವ್ ಲಿಮಿಟೆಡ್ (IFFCO), ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (NFL), ಟಾಟಾ ಕೆಮಿಕಲ್ಸ್, ರಾಷ್ಟ್ರೀಯ ಕೆಮಿಕಲ್ಸ್ ಫರ್ಟಿಲೈಸರ್ಸ್ (RCF), ಮುಂತಾದವು) ಅಭಿವೃದ್ಧಿಪಡಿಸಿರುವ ನ್ಯಾನೋ ಗೊಬ್ಬರಗಳು ಕೃಷಿಯಲ್ಲಿ ಹೊಸ ಯುಗವನ್ನು ಶುರುಮಾಡಿವೆ. ಭಾರತವು ಜಗತ್ತಿಗೆ ಸುಸ್ಥಿರ ಸಮಾಜದ ಮಾದರಿಯೊಂದನ್ನು ನ್ಯಾನೋ ಗೊಬ್ಬರದ ತಂತ್ರಜ್ಞಾನ ಮೂಲಕ ಒದಗಿಸುವಂತಿದೆ. ಚೀನಾ ಹಾಗೂ ಭಾರತವನ್ನು ಹೊರತುಪಡಿಸಿ ಇದರ ಮೇಲೆ ಹೆಚ್ಚು ಸಂಶೋಧನೆಯು ಮತ್ತೆಲ್ಲಿಯೂ ಆಗಿಲ್ಲ. ಈಗಾಗಲೇ ಭಾರತದಲ್ಲಿ ಲಕ್ಷಾಂತರ ರೈತರು ನ್ಯಾನೋ ಗೊಬ್ಬರವನ್ನು ಬಳಸುತ್ತಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ IFFCOವು ಜಗತ್ತಿನಲ್ಲಿ ಅತಿ ಹೆಚ್ಚು ನ್ಯಾನೋ ಗೊಬ್ಬರವನ್ನು ತಯಾರಿಸುವ ಸಂಸ್ಥೆಯಾಗಿದ್ದು, ವರ್ಷಕ್ಕೆ 3.6 ಕೋಟಿ ನ್ಯಾನೋ ಗೊಬ್ಬರದ ಬಾಟಲಿಗಳನ್ನು ಉತ್ಪಾದಿಸಿದೆ. ‘ದಿ ಎನರ್ಜಿ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್’(ಟೆರಿ)ಯ ವರದಿಯ ಪ್ರಕಾರ ಭಾರತದಲ್ಲಿ ರಾಸಾಯನಿಕ ಗೊಬ್ಬರದ ಬಳಕೆಯು ಮುಂದಿನ ದಿನಗಳಲ್ಲಿ ಸುಮಾರು ಶೇ 50ರಷ್ಟು ಕಡಿಮೆ ಆಗಲಿದೆಯಂತೆ. ಇದು ನಮ್ಮ ನೆಲ, ಜಲ ಹಾಗೂ ಜನರ ಸ್ವಾಸ್ಥ್ಯಕ್ಕೆ ಒಳ್ಳೆಯದಾಗಲಿದೆ. ಕಾಲಕ್ರಮೇಣ ಬಳಕೆ ಹಾಗೂ ಇದರ ಕುರಿತಾದ ಸಂಶೋಧನೆಗಳು ಹೆಚ್ಚಿದಂತೆ ನ್ಯಾನೋ ಗೊಬ್ಬರದ ಬಳಕೆಯ ಬಗೆಗೆ ಇರುವ ಸಂಶಯಗಳೂ ಕಡಿಮೆಯಾಗಲಿವೆ.
Mysore Silk (Saree) Production?
ಗಾಂಧೀಜಿ ಆತ್ಮಕಥನಕ್ಕೆ 100 ವರ್ಷ
‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎಂಬ ಹೆಸರಿನ ಗಾಂಧೀಜಿಯವರ ಆತ್ಮಕಥನವು ಪ್ರಕಟಗೊಂಡು 2025ಕ್ಕೆ ನೂರು ವರ್ಷಗಳಾಗಿವೆ. ಈ ಆತ್ಮಕಥನವನ್ನು ಮಹಾದೇವ ದೇಸಾಯಿಯವರು ಗುಜರಾತಿನಿಂದ ಆಂಗ್ಲ ಭಾಷೆಗೆ ಅನುವಾದಿಸಿದರು. ಈ ಆಂಗ್ಲ ಅನುವಾದವನ್ನು ಕನ್ನಡಕ್ಕೆ ತಂದ ಪ್ರಸಿದ್ಧ ಸಾಹಿತಿ, ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮ ಶತಮಾನದ ವರ್ಷದಲ್ಲೇ ಗಾಂಧಿ ಆತ್ಮಕಥನಕ್ಕೂ ‘ಜನ್ಮ’ ಶತಮಾನದ ವರ್ಷವಾಗಿರುವುದು ಒಂದು ವಿಶೇಷ. ಗೊರೂರರ ಅನುವಾದವು ಗಾಂಧೀಜಿಯವರ ‘ಅಂತರಂಗದ ಮಾತುಗಳಿಗೆ’ ಕನ್ನಡಿಯಾದದ್ದು ಕನ್ನಡ ಓದುಗರಿಗೆ ಹೆಮ್ಮೆಯ ಕೊಡುಗೆಯಾಗಿದೆ.
ಗಾಂಧೀಜಿಯವರ ಆತ್ಮಕಥನವನ್ನು ‘ಅಂತರಂಗದ ಮಾತುಗಳು’ ಎಂದು ನಾನು ಕರೆಯಲು ಕಾರಣವಿದೆ. ಗಾಂಧೀಜಿಯವರು ತಮ್ಮ ಆತ್ಮಕಥನ ಕುರಿತಂತೆ ಹೇಳಿರುವ ಮಾತುಗಳನ್ನು ಗಮನಿಸಿ: ‘ನಾನು ಆಳವಾದ ಅಂತರಂಗ ವೀಕ್ಷಣೆಗೆ ಒಳಗಾಗಿದ್ದೇನೆ. ನನ್ನನ್ನು ನಾನೇ ಆಮೂಲಾಗ್ರವಾಗಿ ಶೋಧಿಸಿಕೊಂಡಿದ್ದೇನೆ ಮತ್ತು ಮಾನಸಿಕ ಸಂದರ್ಭಗಳನ್ನು ಪರೀಕ್ಷಿಸಿ, ವಿಶ್ಲೇಷಿಸಿಕೊಂಡಿದ್ದೇನೆ. ಆದರೂ, ನನ್ನ ನಿರ್ಧಾರಗಳನ್ನು ಅವೇ ಅಂತಿಮ ಅಥವಾ ದೋಷಾತೀತವೆಂದು ಹೇಳುವುದರಿಂದ ಬಹಳ ದೂರವೇ ಉಳಿದಿದ್ದೇನೆ’. ಗಾಂಧೀಜಿಯವರ ಈ ಮಾತುಗಳು ಅವರ ಸತ್ಯನಿಷ್ಠೆ, ಪ್ರಾಮಾಣಿಕತೆಗೆ ಸಾಕ್ಷಿಯಾಗಿರುವುದಲ್ಲದೆ, ಆತ್ಮಕಥನವನ್ನು ಆತ್ಮಾವಲೋಕನ ಕಥನವೆಂದು ಭಾವಿಸಿರುವುದನ್ನು ಸ್ಪಷ್ಟಪಡಿಸುತ್ತವೆ. ನಿಜ; ಯಾರದೇ ಆತ್ಮಕಥನವು ಆತ್ಮಾವಲೋಕನದ ಆಯಾಮವನ್ನು ಪಡೆಯದೆ ಇದ್ದರೆ ಆತ್ಮರತಿಯಾಗುವ ಅಪಾಯ ಇದ್ದೇ ಇರುತ್ತದೆ. ಆತ್ಮರತಿಗೆ ಅಹಂಕಾರದ ಸ್ಪರ್ಶವೂ ಅಗೋಚರವಾಗಿ ಕೆಲಸ ಮಾಡುತ್ತದೆ. ಆತ್ಮಕಥನಗಳು ಆಂತರಂಗಿಕ ಶೋಧವೂ, ಪರೀಕ್ಷೆಗೊಡ್ಡಿಕೊಂಡ ಪರಿಶೀಲನೆಯೂ ಆದಾಗ ಸತ್ಯಕಥನಗಳಾಗುತ್ತವೆ. ಹಾಗೆಂದು ಆತ್ಮಕಥನಕಾರರು ತಮ್ಮ ಬದುಕಿನ ಸಮಸ್ತಸತ್ಯಗಳನ್ನು ದಾಖಲಿಸಿರುತ್ತಾರೆಂದು ಭಾವಿಸಲಾಗದು. ಅನುಭವಗಳ ಆಯ್ಕೆಯೂ ಆತ್ಮಕಥನಗಳ ಅಂಗವಾಗಿರುತ್ತದೆ. ಈ ಇತಿಮಿತಿಗಳ ನಡುವೆ ವಾಸ್ತವಿಕತೆ ಮತ್ತು ಪ್ರಾಮಾಣಿಕತೆಯುಳ್ಳ ಆತ್ಮಕಥನಗಳು ಮೌಲ್ಯಯುತವಾಗುತ್ತವೆ. ಗಾಂಧೀಜಿ ಆತ್ಮಕಥನಕ್ಕೆ ಇಂತಹ ಮೌಲ್ಯ ತಾನಾಗಿಯೇ ಲಭ್ಯವಾಗಿದೆ. ಯಾಕೆಂದರೆ, ಅವರು ತಮ್ಮ ಅನುಭವಗಳನ್ನು ತಮಗೆ ತಾವೇ ಹೇಳಿಕೊಂಡಂತೆ ಬರೆಯುತ್ತಾರೆ. ಓದುಗರಿಗೆ ಬೋಧೆ ಮಾಡುತ್ತೇನೆ ಎಂಬ ಹಮ್ಮುಬಿಮ್ಮುಗಳಿಲ್ಲದೆ ನಿವೇದಿಸುತ್ತಾರೆ. ಇನ್ನೊಂದು ಗಮನಾರ್ಹ ಅಂಶವೆಂದರೆ– ಗಾಂಧಿ ಆತ್ಮಕಥನದ ಅವಧಿ 56 ವರ್ಷಗಳು ಮಾತ್ರ. ಗಾಂಧೀಜಿ ಹುಟ್ಟಿದ್ದು 1869ರ ಅಕ್ಟೋಬರ್ 2ರಂದು. ಆತ್ಮಕಥನ ಹೊರಬಂದದ್ದು 1925ರ ನವೆಂಬರ್ ತಿಂಗಳಲ್ಲಿ. ಆನಂತರ 23 ವರ್ಷಗಳ ಕಾಲ ಗಾಂಧೀಜಿ ಬದುಕಿದ್ದರು. ಈ 23 ವರ್ಷ ಗಾಂಧೀಜಿ ಬದುಕಿನ ಅತ್ಯಮೂಲ್ಯ ಆಕರಗಳೆಂದರೆ ತಪ್ಪಾಗಲಾರದು. ಯಾಕೆಂದರೆ, ಗಾಂಧೀಜಿಯವರು ಜಾತಿ, ವರ್ಣವೇ ಮುಂತಾದ ಸಾಮಾಜಿಕ ಸಂರಚನೆಗಳನ್ನು ಕುರಿತು ಮೊದಲು ಪ್ರತಿಪಾದಿಸಿದ್ದ ಸಾಂಪ್ರದಾಯಿಕ ಜಡ ಚಿಂತನೆಗಳಿಗೆ, ಚಲನಶೀಲ ಪ್ರಗತಿಪರ ಆಯಾಮ ದೊರಕಿದ್ದು, ಇದೇ ಅವಧಿಯಲ್ಲಿ.
ಗಾಂಧೀಜಿಯವರು 1919ರಲ್ಲಿ ಅಂತರ್ಜಾತಿ ವಿವಾಹ ಮತ್ತು ಅಂತರ್ಜಾತಿ ಭೋಜನ ವ್ಯವಸ್ಥೆಯನ್ನು ಒಪ್ಪಿರಲಿಲ್ಲ. ಈ ಭಾವನೆಯು 1936ರಲ್ಲಿ ಖಚಿತತೆ ಮತ್ತು ಸ್ಪಷ್ಟತೆಯೊಂದಿಗೆ ಪ್ರಕಟಗೊಂಡಿತು. ಒಬ್ಬ ಪತ್ರಿಕಾ ವರದಿಗಾರನಿಗೆ ಕೊಟ್ಟ ಸಂದರ್ಶನದಲ್ಲಿ ಗಾಂಧೀಜಿ ಹೀಗೆ ಹೇಳಿದ್ದಾರೆ: ‘ತನ್ನ ಎಲ್ಲಾ ಭಯಾನಕತೆಗಳಿಂದ ನಮಗೆ ಇವತ್ತು ಕಾಣಿಸುತ್ತಿರುವ ಜಾತಿಯನ್ನು ಶಾಸ್ತ್ರಗಳು ಪುರಸ್ಕರಿಸುವುದಾದರೆ, ನಾನು ನನ್ನನ್ನು ಹಿಂದೂವೆಂದು ಕರೆದುಕೊಂಡು ಅದರಲ್ಲಿ ಉಳಿದುಕೊಳ್ಳಲಾರೆ. ಕಾರಣ, ಅಂತರ್ಜಾತಿ ಭೋಜನ ಅಥವಾ ಅಂತರ್ಜಾತಿ ವಿವಾಹಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ. ಅಂಬೇಡ್ಕರ್ ಅವರು ಮೊದಲಿಂದಲೂ ಅಂತರ್ಜಾತಿ ವಿವಾಹದ ಪ್ರತಿಪಾದಕರಾಗಿದ್ದರು ಎಂಬ ಅಂಶವನ್ನು ಇಲ್ಲಿ ಗಮನಿಸಬೇಕು. ಗಾಂಧೀಜಿಯವರು ಅಂಬೇಡ್ಕರ್ ಅವರ ಬಗ್ಗೆ ಅಪಾರ ಆದರವುಳ್ಳವರಾಗಿದ್ದರು ಎನ್ನುವುದಕ್ಕೆ ಒಂದು ನಿದರ್ಶನವನ್ನು ನೀಡಬಹುದು. ಜಗತ್ತಿನಲ್ಲೇ ಮೊದಲ ಅಧಿಕೃತ ನಾಸ್ತಿಕ ಕೇಂದ್ರವನ್ನು ಆಂಧ್ರದಲ್ಲಿ ಸ್ಥಾಪಿಸಿದ್ದ ಗೋರಾ ಅವರ ಅಳಿಯ ಗಾಂಧೀಜಿಯವರ ಶಿಷ್ಯತ್ವವನ್ನು ಬಯಸಿದಾಗ, ‘ನೀನು ಅಂಬೇಡ್ಕರ್ ಅವರಂತೆ ಆಗಬೇಕು. ಅಸ್ಪೃಶ್ಯತೆ ಮತ್ತು ಜಾತಿ ನಿರ್ಮೂಲನಕ್ಕಾಗಿ ಕೆಲಸ ಮಾಡಬೇಕು. ಯಾವ ಬೆಲೆಯನ್ನು ತೆತ್ತಾದರೂ ಸರಿಯೇ, ಅಸ್ಪೃಶ್ಯತೆಯು ಹೋಗಲೇಬೇಕು’ (1946) ಎಂದು ಗಾಂಧೀಜಿ ಬರೆದು ತಿಳಿಸಿದರು. 1946ರಲ್ಲಿ ಗಾಂಧೀಜಿ ‘ವರ್ಗರಹಿತ, ಜಾತಿರಹಿತ ಇಂಡಿಯಾ ನಿರ್ಮಾಣದ ಅಗತ್ಯ’ವನ್ನು ಅಮೆರಿಕದ ಸಂದರ್ಶಕರೊಂದಿಗೆ ಹಂಚಿಕೊಂಡಿದ್ದರು. ಜಾತಿಯು ಬೇರುಸಹಿತ ಹೋಗಬೇಕು ಎಂದು ಆಶಿಸಿದ್ದರು. ‘ನನ್ನ ಮನಸ್ಸು ಸತತವಾಗಿ ಬೆಳೆಯುತ್ತಿದೆ’ ಎಂದೂ ಹೇಳಿದ್ದರು. ಆದರೆ ಇವರ ಬೆಳವಣಿಗೆ ಮತ್ತು ಬದಲಾವಣೆಯನ್ನು ಗಮನಿಸದ, ಗುರುತಿಸದ, ಟೀಕಾಕಾರರಿಗೆ ಆಹಾರವೂ ಆದರು.
1925ರವರೆಗಿನ ಗಾಂಧೀಜಿಯವರ ಆತ್ಮಕಥನ ಕೂಡ ಅವರ ಬೆಳವಣಿಗೆ ಮತ್ತು ಬದಲಾವಣೆಯ ಚರಿತೆಯಾಗಿದೆ. ತಾಯಿ, ತಂದೆಯವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಗಾಂಧೀಜಿ ತಮ್ಮ ದೌರ್ಬಲ್ಯಗಳನ್ನು ತೆರೆದಿಡುತ್ತಲೇ ಆನಂತರ ಆದ ಬದಲಾವಣೆಗಳನ್ನು ಉಲ್ಲೇಖಿಸುತ್ತಾರೆ. ತಮ್ಮ ಪ್ರತಿಯೊಂದು ಪ್ರಮುಖ ಪ್ರಸಂಗವನ್ನು ‘ಪ್ರಯೋಗ’ ಎಂದೇ ಕರೆಯುತ್ತಾರೆ. ಈ ಪ್ರಯೋಗಗಳ ಆಂತರ್ಯದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಭಾವನೆಯಿದೆಯೆಂದು ಸ್ಪಷ್ಟಪಡಿಸುತ್ತಾರೆ: ‘ನಾನು ಕಟ್ಟಿಕೊಡುತ್ತಿರುವ ಕಥನಗಳು, ಆಧ್ಯಾತ್ಮಿಕವಾದವು ಅಥವಾ ಖಚಿತವಾಗಿ ನೈತಿಕವಾದವು. ಧರ್ಮದ ಮೂಲಸಾರವೇ ನೈತಿಕತೆ’ ಎಂದು ಹೇಳಿದ್ದಾರೆ.
ಗಾಂಧೀಜಿಯವರಿಗೆ ಧರ್ಮವೆನ್ನುವುದು ನೈತಿಕವೇ ಹೊರತು ಸಾಂಸ್ಥಿಕ ಸ್ವರೂಪದ ನಿಯಂತ್ರಕವಲ್ಲ. ಆದ್ದರಿಂದಲೇ ಅವರು ಹಿಂದೂ ಧರ್ಮವನ್ನು ನಂಬಿ ನಡೆಯುತ್ತಲೇ ಅದರ ಒಳವಿಮರ್ಶಕರಾಗಿದ್ದರು. ದ್ವೇಷವಿಲ್ಲದ ಧಾರ್ಮಿಕ ಸಾಮರಸ್ಯದ ನೈತಿಕ ಪ್ರತಿಪಾದಕರಾಗಿದ್ದರು. ನೈತಿಕತೆಯ ಮೂಲತತ್ತ್ವಗಳಿಗೆ ವಿರುದ್ಧವಾದ ಎಲ್ಲವನ್ನೂ ನಿರಾಕರಿಸುತ್ತೇನೆ ಎಂದು ಬರೆದರು. ವೇದ, ಉಪನಿಷತ್ತು ಮುಂತಾದವುಗಳಲ್ಲಿ ನಂಬಿಕೆಯಿದ್ದರೂ ‘ಮಂತ್ರ ಪಠಣದಿಂದ ಧರ್ಮ ನಿರ್ಧಾರ ಆಗುವುದಿಲ್ಲ’ ಎಂದರು. ಯಾಕೆಂದರೆ, ನೈತಿಕತೆ ಮತ್ತು ಪ್ರಾಮಾಣಿಕತೆಗಳೇ ಅವರ ಬದುಕಿನ ಸತ್ಯಶೋಧದ ಸಾಧನವಾಗಿದ್ದವು.
ಗಾಂಧೀಜಿಯವರು ಸ್ನೇಹಿತರ ಜೊತೆಗೆ ಸಿಗರೇಟು ಸೇದಿದ್ದು, ಸಿಗರೇಟು ಖರೀದಿಸಲು ಹಣ ಕದ್ದಿದ್ದು, ಮೇಕೆಮಾಂಸ ತಿಂದಿದ್ದು, ಮುಂತಾದ ಪ್ರಸಂಗಗಳನ್ನು ಆತ್ಮಾವಲೋಕನದ ಮಾದರಿಯಲ್ಲಿ ಕಟ್ಟಿಕೊಡುತ್ತಾರೆ. ತಾಯಿ, ತಂದೆ ಹಾಗೂ ಹಿರಿಯರ ಬಗ್ಗೆ ಇದ್ದ ಗೌರವ ಮತ್ತು ಅವರ ಕಟ್ಟುಪಾಡುಗಳು ತಮ್ಮ ‘ಹವ್ಯಾಸಗಳಿಗೆ’ ಅಡ್ಡಿಯಾಗಿ ‘ಸ್ವಾತಂತ್ರ್ಯ’ವನ್ನು ಕಸಿಯುತ್ತಿವೆಯೆಂಬ ಅನುಭವದಿಂದ ಬಾಲಕ ಗಾಂಧೀಜಿ, ತಳಮಳಕ್ಕೆ ಒಳಗಾಗುತ್ತಾರೆ. ತೃಪ್ತಿಯೇ ಇಲ್ಲದ ಮಾನಸಿಕ ತಳಮಳಗಳನ್ನು ತಾಳಿಕೊಳ್ಳಲಾರದೆ ಸ್ನೇಹಿತರೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬರುತ್ತಾರೆ. ದತ್ತೂರಿ ಗಿಡದ ಬೀಜಗಳನ್ನು ತಿಂದರೆ ಸಾವು ಸಂಭವಿಸುತ್ತದೆಯೆಂದು ತಿಳಿದಿದ್ದ ಇವರು ಆ ಗಿಡಕ್ಕಾಗಿ ಹುಡುಕಿ, ಪತ್ತೆ ಮಾಡಿ, ಒಂದೆರಡು ಬೀಜ ತಿಂದು, ತಕ್ಷಣವೇ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. ‘ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಯಷ್ಟು ಅದನ್ನು ಸಾಧಿಸುವುದು ಸುಲಭವಲ್ಲ ಎಂದು ನಾನು ಮನಗಂಡೆ’ ಎಂದು ಬರೆಯುತ್ತಾರೆ.
ಮೇಕೆಮಾಂಸ ತಿಂದ ಪ್ರಸಂಗ ಮತ್ತು ಆನಂತರದ ಬೆಳವಣಿಗೆಗಳ ನಿರೂಪಣೆ ಆಸಕ್ತಿದಾಯಕವಾಗಿದೆ. ಮಾಂಸ ಸೇವನೆಯು, ಶಕ್ತಿವಂತ ಹಾಗೂ ಧೈರ್ಯವಂತನನ್ನಾಗಿ ಮಾಡುತ್ತದೆ. ಇಂಗ್ಲಿಷರನ್ನು ಮಣಿಸಲು ಇದು ಸಹಾಯಕವಾಗುತ್ತದೆ ಎಂದು ಬಾಲಕ ಗಾಂಧಿ ಭಾವಿಸುತ್ತಾರೆ. ಬ್ರಿಟಿಷರನ್ನು ಮಣಿಸಲು ಮಾಂಸ ತಿನ್ನಬೇಕೆಂಬ ಬಯಕೆ ವಿಚಿತ್ರ ಎನ್ನಿಸಿದರೂ, ಬ್ರಿಟಿಷರ ವಿರುದ್ಧ ಬಾಲ್ಯದಲ್ಲೇ ಮೂಡಿದ್ದ ಅವರ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದು. ಆನಂತರ ಧೂಮಪಾನ, ಮಾಂಸ ಸೇವನೆಗಳನ್ನು ತೊರೆದು ತಂದೆಗೆ ತಪ್ಪೊಪ್ಪಿಗೆ ಪತ್ರ ಬರೆದು ನೇರವಾಗಿ ಕೊಟ್ಟ ಸನ್ನಿವೇಶವನ್ನು ಗಾಂಧೀಜಿ ಭಾವುಕವಾಗಿ ವಿವರಿಸಿದ್ದಾರೆ. ಹಾಗೆಂದು ಗಾಂಧೀಜಿ ಮಾಂಸಾಹಾರದ ವಿರೋಧಿಯಾಗಿರಲಿಲ್ಲ. ತಾಯಿ–ತಂದೆಗೆ ನೋವಾಗುತ್ತದೆಯೆಂದು ತಾನು ಅವರು ಬದುಕಿರುವವರೆಗೆ ಮಾಂಸಾಹಾರ ಸೇವನೆ ಮಾಡುವುದಿಲ್ಲವೆಂದೂ, ಅವರು ಗತಿಸಿದ ನಂತರ ತನಗೆ ‘ಸ್ವಾತಂತ್ರ್ಯ’ ಬಂದಾಗ, ಬಹಿರಂಗವಾಗಿಯೇ ತಿನ್ನುವುದಾಗಿಯೂ ಬರೆದುಕೊಂಡಿದ್ದಾರೆ.
ಗಾಂಧಿ ಆತ್ಮಕಥನದ ಒಂದು ಮುಖ್ಯ ಘಟನೆ ಯೆಂದರೆ – ಅವರನ್ನು ಜಾತಿಭ್ರಷ್ಟರನ್ನಾಗಿ ಮಾಡಿದ್ದು. ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೊರಟಾಗ ಜಾತಿ ಮುಖಂಡರು ‘ಸಮುದ್ರಯಾನವು ತಮ್ಮ ಜಾತಿಯಲ್ಲಿ ನಿಷಿದ್ಧ’ವೆಂದು ವಿರೋಧಿಸುತ್ತಾರೆ. ಸಮುದ್ರಯಾನ ಮಾಡಿದರೆ ಬಂಧುಬಳಗದವರು ಗಾಂಧಿ ಜೊತೆಗೆ ಒಡನಾಡುವ ಹಾಗಿಲ್ಲ, ನೀರನ್ನು ಕೂಡ ಕೊಡುವಂತಿಲ್ಲ. ಆದರೆ ಗಾಂಧೀಜಿ ಬಗ್ಗಲಿಲ್ಲ. ‘ಜಾತಿ ಭ್ರಷ್ಟನನ್ನಾಗಿಸಿ; ನಾನು ಹೆದರುವುದಿಲ್ಲ’ ಎಂದರು. ಜಾತಿಯಿಂದ ಹೊರಹಾಕಲ್ಪಟ್ಟರು; ಜಾತಿಯಿಲ್ಲದವರಾದರು. ಇಂತಹ ಅನೇಕ ಪ್ರಸಂಗಗಳು ಗಾಂಧಿ ಆತ್ಮಕಥನದಲ್ಲಿ ಹಾಸುಹೊಕ್ಕಾಗಿವೆ. ವೈರುಧ್ಯಗಳೂ ಇವೆ. ಬ್ರಹ್ಮಚರ್ಯದ ಪ್ರಯೋಗ, ಅಸ್ಪೃಶ್ಯ ಮೂಲದ ಕ್ರಿಶ್ಚಿಯನ್ ಉದ್ಯೋಗಿಯ ಕಕ್ಕಸ್ಸಿನ ಕೊಡವನ್ನು ಶುದ್ಧ ಮಾಡದೆ ಇದ್ದ ಕಸ್ತೂರ್ ಬಾ ಅವರ ಬಗ್ಗೆ ನಡೆದುಕೊಂಡ ಗಂಡಾಳಿಕೆಯ ದರ್ಪ, ಆನಂತರದ ಪಶ್ಚಾತ್ತಾಪ– ಇಂತಹ ಅನೇಕ ಆತ್ಮಾವಲೋಕನ ಮತ್ತು ಮಂಥನಗಳಿಂದ ಗಾಂಧಿ ಆತ್ಮಕಥನವು ವೈರುಧ್ಯ ಗಳನ್ನು ಮೀರಿದ ಮಾಹಿತಿ ಕೇಂದ್ರವೂ ಆಗಿದೆ.
ಗಾಂಧೀಜಿಯವರು ರೈಲಿನ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ಭಾರತವನ್ನು ‘ಕಂಡುಕೊಂಡದ್ದು’ ಅವರ ಬದುಕಿನ ಒಂದು ಮುಖ್ಯಘಟ್ಟ; ತನ್ನ ‘ವರ್ಗ’ವು ಅನುಭವಿಸುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಆಗ ಮೂಡಿದ್ದು ಪಾಪಪ್ರಜ್ಞೆ. ಸೂಟುಧಾರಿಯಾಗಿದ್ದ ಗಾಂಧೀಜಿ ಅರೆಬೆತ್ತಲೆ ಉಡುಪಿಗೆ ಅಪವರ್ಗೀಕರಣಗೊಂಡದ್ದು ಮತ್ತು ಅರೆಬೆತ್ತಲೆ ಉಡುಪಿನ ವಲಯದಿಂದ ಬಂದ ಅಂಬೇಡ್ಕರ್ ಸೂಟುಧಾರಿಯಾದದ್ದು ಕೇವಲ ಉಡುಪಿನ ಬದಲಾವಣೆಯಲ್ಲ. ಗಾಂಧೀಜಿಯವರ ಪಾಪಪ್ರಜ್ಞೆಯ ಕೆಳಮುಖ ಚಲನೆ ಮತ್ತು ಅಂಬೇಡ್ಕರ್ ಅವರ ಜಾಗೃತ ಪ್ರಜ್ಞೆಯ ಮೇಲ್ಮುಖ ಚಲನೆಗೆ ಉಡುಪಿನ ಬದಲಾವಣೆ ಸಕಾರಾತ್ಮಕ ಚಾರಿತ್ರಿಕ ಸಂಕೇತ. ಎರಡೂ ಹೋರಾಟದ ಮಾದರಿಗಳು.
ಕೊನೆಗೊಂದು ಮಾತು: ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಬಾಳ ಕಥನವಿಲ್ಲದೆ ಭಾರತ ಕಥನ ಪೂರ್ಣವಾಗುವುದಿಲ್ಲ.
Tax on Movies by Trump?