Fri. Oct 10th, 2025

Kannada

ಪ್ರಚಲಿತ ವಿದ್ಯಮಾನಗಳು: 8ನೇ ಸೆಪ್ಟೆಂಬರ್ 2025

ಭಾರತಕ್ಕೆ ಏಷ್ಯಾ ಕಪ್ ಗರಿ ವಿಶ್ವಕಪ್ ಟೂರ್ನಿಗೆ ರಹದಾರಿ

ಸಂದರ್ಭ: ರಾಜಗೀರ್, ಬಿಹಾರ (ಪಿಟಿಐ): ಭಾರತ ಪುರುಷರ ಹಾಕಿ ತಂಡವು ಭಾನುವಾರ ಇಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಎದುರು ಜಯಿಸಿತು. ಇದರೊಂದಿಗೆ ಮುಂದಿನ ವರ್ಷ ನಡೆಯಲಿರುವ   ಟೂರ್ನಿಗೆ ರಹದಾರಿ ಗಿಟ್ಟಿಸಿತು.

  • ದಿಲ್‌ಪ್ರೀತ್ ಸಿಂಗ್ ಅವರು ಹೊಡೆದ ಎರಡು ಗೋಲುಗಳ ಬಲದಿಂದ ಭಾರತ ಹಾಕಿ ತಂಡವು ಏಷ್ಯಾ ಕಪ್ ಗೆದ್ದು ಕೊಂಡಿತು. ಇದರೊಂದಿಗೆ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಿಕೊಂಡಿತು.
  • ಇಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತಂಡವು 4–1ರಿಂದ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾದ ವಿರುದ್ಧ ಗೆದ್ದಿತು. ಇದು ಭಾರತಕ್ಕೆ ನಾಲ್ಕನೇ ಏಷ್ಯನ್ ಟ್ರೋಫಿ ಆಗಿದೆ. ಈ ಟೂರ್ನಿಯ ಇತಿಹಾಸದಲ್ಲಿ ಅತ್ಯಧಿಕ ಟ್ರೋಫಿಗಳನ್ನು ಜಯಿಸಿದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಐದು ಬಾರಿ ಗೆದ್ದಿರುವ ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದೆ. ಭಾರತ ತಂಡವು 2003 (ಕೌಲಾಲಂಪುರ), 2007 (ಚೆನ್ನೈ) ಮತ್ತು 2017ರಲ್ಲಿ ಢಾಕಾದಲ್ಲಿ ಏಷ್ಯಾ ಕಪ್ ಜಯಿಸಿತ್ತು.
  • ಮುಂದಿನ ವರ್ಷದ ಆಗಸ್ಟ್ 14ರಿಂದ 30ರವರೆಗೆ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್ ಟೂರ್ನಿಗೆ ಭಾರತವು ನೇರಪ್ರವೇಶ ಪಡೆಯಿತು.
  • ಭಾರತ ತಂಡದ ದಿಲ್‌ಪ್ರೀತ್  ಅವರು 28ನೇ ನಿಮಿಷ ಮತ್ತು 45ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸುಖಜೀತ್ ಸಿಂಗ್ ಅವರು ಮೊದಲ ನಿಮಿಷದಲ್ಲಿಯೇ ಗೋಲು ಹೊಡೆದು ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಅಮಿತ್ ರೋಹಿದಾಸ್ (50ನೇ ನಿ) ಒಂದು ಗೋಲು ಹೊಡೆದು ಮುನ್ನಡೆ ಒದಗಿಸಿದರು. 
  • ಕೊರಿಯಾ ತಂಡದ ಏಕೈಕ ಗೋಲನ್ನು ಡಯಾನ್ ಸನ್ (51ನೇ ನಿ) ದಾಖಲಿಸಿದರು.

ಜೊಮಾಟೊ, ಸ್ವಿಗ್ಗಿ ಪ್ಲಾಟ್‌ಫಾರ್ಮ್‌ ಶುಲ್ಕ ಏರಿಕೆ

ಸಂದರ್ಭ: ಊಟ, ತಿಂಡಿಯನ್ನು ಹೋಟೆಲ್‌ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಜೊಮಾಟೊ, ಸ್ವಿಗ್ಗಿ ಮತ್ತು ಮ್ಯಾಜಿಕ್‌ಪಿನ್‌ ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್‌ ಫೀ) ಏರಿಕೆ ಮಾಡಿವೆ. ಹಬ್ಬಗಳ ಋತು ಆರಂಭವಾಗಿರುವ ಈ ಹೊತ್ತಿನಲ್ಲಿ ಕಂಪನಿಗಳು ದರ ಹೆಚ್ಚಳ ಮಾಡಿವೆ.

  • ಅಲ್ಲದೆ, ಈ ಕಂಪನಿಗಳು ಊಟ, ತಿಂಡಿಯನ್ನು ಮನೆಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಶೇಕಡ 18ರಷ್ಟು ತೆರಿಗೆ ಸೆಪ್ಟೆಂಬರ್‌ 22ರಿಂದ ಜಾರಿ ಬರಲಿರುವ ಕಾರಣಕ್ಕೆ, ಅದರ ಹೊರೆಯೂ ಗ್ರಾಹಕರಿಗೆ ವರ್ಗಾವಣೆ ಆಗುವ ನಿರೀಕ್ಷೆ ಇದೆ.
  • ಸ್ವಿಗ್ಗಿ ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ ಶುಲ್ಕವನ್ನು ಆಯ್ದ ನಗರಗಳಲ್ಲಿ ಪ್ರತಿ ಆರ್ಡರ್‌ಗೆ ₹15ಕ್ಕೆ ಹೆಚ್ಚಿಸಿದೆ. ಇದರಲ್ಲಿ ಜಿಎಸ್‌ಟಿ ಸೇರಿದೆ. ಜೊಮಾಟೊ ಜಿಎಸ್‌ಟಿ ಹೊರತುಪಡಿಸಿ ₹12.50ಕ್ಕೆ ಹೆಚ್ಚಿಸಿದೆ. ಮ್ಯಾಜಿಕ್‌ಪಿನ್‌ ₹10ಕ್ಕೆ ಏರಿಕೆ ಮಾಡಿದೆ.
  • ಒಂದು ಅಂದಾಜಿನ ಪ್ರಕಾರ, ಶೇ 18ರಷ್ಟು ಜಿಎಸ್‌ಟಿ ಪರಿಣಾಮವಾಗಿ ಜೊಮಾಟೊ ಮತ್ತು ಸ್ವಿಗ್ಗಿ ಗ್ರಾಹಕರು ಕ್ರಮವಾಗಿ ₹2 ಮತ್ತು ₹2.60 ಹೆಚ್ಚುವರಿ ಶುಲ್ಕವನ್ನು ಪ್ರತಿ ಆರ್ಡರ್‌ಗೆ ನೀಡಬೇಕಾಗುತ್ತದೆ. ದರ ಹೆಚ್ಚಳದ ಬಗ್ಗೆ ಸ್ವಿಗ್ಗಿ ಮತ್ತು ಜೊಮಾಟೊ ಪ್ರತಿಕ್ರಿಯೆ ನೀಡಿಲ್ಲ.
  • ‘ಆಹಾರ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಸೇವೆಗೆ ನಾವು ಈಗಾಗಲೇ ಶೇ 18ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದೇವೆ. ಈಗಿನ ಜಿಎಸ್‌ಟಿ ಪರಿಷ್ಕರಣೆ ನಮ್ಮ ಮೇಲೆ ಪರಿಣಾಮ ಬೀರದು. ಗ್ರಾಹಕರ ಮೇಲೂ ಜಿಎಸ್‌ಟಿ ಪರಿಷ್ಕರಣೆಯು ಪರಿಣಾಮ ಬೀರದು. ನಮ್ಮ ಪ್ಲಾಟ್‌ಫಾರ್ಮ್‌ ಶುಲ್ಕವು ₹10 ಇದೆ. ಇದು ಇತರೆ ಪ್ರಮುಖ ಕಂಪನಿಗಳ ಶುಲ್ಕಕ್ಕಿಂತ ಕಡಿಮೆ’ ಎಂದು ಮ್ಯಾಜಿಕ್‌ಪಿನ್‌ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

‘ರಾಜ್ಯದ ಎರಡನೇ ಅಧಿಕೃತ ಭಾಷೆ ತುಳು: ಸಂಪುಟದಲ್ಲಿ ಚರ್ಚೆ’

ಸಂದರ್ಭ:‘ರಾಜ್ಯದ ಎರಡನೇ ಅಧಿಕೃತ ಭಾಷೆ ತುಳು ಎಂದು ಘೋಷಿಸಬೇಕು ಎಂಬ ಬೇಡಿಕೆಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

  • ಇಲ್ಲಿ ನಡೆದ ಅಷ್ಟೆಮಿದ ಐಸಿರಿ ತುಳುವ ತರ್ಲ್ ಸಾಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
  • ‘ಇತ್ತೀಚೆಗೆ ಕುಂದಾಪುರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ಕಾರ್ಯಕ್ರಮ, ಈ ಕಾರ್ಯಕ್ರಮದಲ್ಲಿ ಸೇರಿರುವ ಜನ ನೋಡಿದರೆ ಮುಂದೆ ನೀವೆಲ್ಲರೂ ನಮ್ಮನ್ನು ಬೆಂಗಳೂರಿನಿಂದ ಖಾಲಿ ಮಾಡಿಸುತ್ತೀರೇನೋ ಎಂದು ಭಯವಾಗುತ್ತಿದೆ. ನಿಮ್ಮ ಈ ಶಕ್ತಿ, ಉತ್ಸಾಹ ನೋಡಿ ನನಗೆ ಈ ಅನುಮಾನ ಕಾಡುತ್ತಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
  • ‘ಕರಾವಳಿ ಜನ ಇಡೀ ದೇಶಕ್ಕೆ ಕರ್ನಾಟಕದ ಮೂಲಕ ಸಂಸ್ಕೃತಿ ಹಾಗೂ ಶಿಕ್ಷಣ, ಧಾರ್ಮಿಕ ಶಕ್ತಿ, ಬ್ಯಾಂಕಿಂಗ್‌ ವ್ಯವಸ್ಥೆ ಕೊಟ್ಟಿದ್ದಾರೆ. ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಇದ್ದೀರಿ. ಕರಾವಳಿ ಭಾಗ, ದಕ್ಷಿಣ ಕನ್ನಡದ ಜನ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು. ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ಡಿ.ಕೆ. ಶಿವಕುಮಾರ್ ನಿಮ್ಮವ ಎಂದು ಭಾವಿಸಿ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನಗೆ ಬೆಂಬಲವಾಗಿರಿ. ನಾನು ನಿಮ್ಮ ಆಶೀರ್ವಾದವನ್ನಷ್ಟೇ ಕೇಳುತ್ತಿದ್ದೇನೆ’ ಎಂದರು.
  • ‘ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಲು ಆ ಭಾಗದ ಶಾಸಕರು, ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಜೊತೆ ನಾನು ಚರ್ಚೆ ಮಾಡಿದ್ದೇನೆ’ ಎಂದು ತಿಳಿಸಿದರು.

ಪ್ರಚಲಿತ ವಿದ್ಯಮಾನಗಳು: 7ನೇ ಸೆಪ್ಟೆಂಬರ್ 2025


ಸಾಮಾನ್ಯ ಅಧ್ಯಯನ 2: ಅನಿವಾಸಿ ಭಾರತೀಯ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ಎನ್‌ಆರ್‌ಐ ಕೋಟಾ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ಇನ್ನು ಮುಂದೆ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಶೇ 15ರಷ್ಟು ಸೀಟುಗಳನ್ನು ಮೀಸಲಿಡಲಾಗುತ್ತಿದೆ.

  • 2025-26ನೇ ಸಾಲಿನಿಂದಲೇ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ಆದೇಶ ಹೊರಡಿಸಿದೆ. 400 ಸರ್ಕಾರಿ ಕಾಲೇಜುಗಳಿಗೆ ಸಿಕ್ಕಿವೆ.
  • ಈ ವರ್ಷ ಹೊಸ 400 ಸೀಟುಗಳಲ್ಲಿ ಎನ್‌ಆರ್‌ಐ ಕೋಟಾ ನಿಗದಿಪಡಿಸ ಲಾಗಿದೆ. ₹25 ಲಕ್ಷ ಶುಲ್ಕ ನಿಗದಿಮಾಡಲಾಗಿದೆ. ಇದರಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸರ್ಕಾರದ ಅನುದಾನದ ಮೇಲೆ ಹೆಚ್ಚು ಅವಲಂಬಿತವಾಗದೆ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ ಎಂದರು.

ಸಾಮಾನ್ಯ ಅಧ್ಯಯನ 2: ವಿಶ್ವಸಂಸ್ಥೆಯ ಸಾಮಾನ್ಯ ಸಭೆ

ಯುಎನ್‌ಜಿಎ: ಮೋದಿ ಬದಲು ಜೈಶಂಕರ್ ಭಾಷಣ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಉನ್ನತ ಮಟ್ಟದ ಸಾಮಾನ್ಯ ಚರ್ಚೆಯಲ್ಲಿ (ಯುಎನ್‌ಜಿಎ) ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಇರುವುದಿಲ್ಲ. ಭಾಷಣಗಾರರ ತಾತ್ಕಾಲಿಕ ಪರಿಷ್ಕೃತ ಪಟ್ಟಿ ಪ್ರಕಟಿಸಲಾಗಿದ್ದು, ಅದರಲ್ಲಿ ಭಾರತದ ಪ್ರಧಾನಿಯ ಹೆಸರಿಲ್ಲ. ಭಾರತದಿಂದ ಒಬ್ಬ ‘ಸಚಿವ’ ಪ್ರತಿನಿಧಿಸುತ್ತಾರೆ ಎಂಬ ಮಾಹಿತಿ ಪಟ್ಟಿಯಲ್ಲಿದೆ.

  • ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನ ಇದೇ 9ರಿಂದ ಆರಂಭವಾಗಲಿದೆ. ಈ ಅಧಿವೇಶನದಲ್ಲಿ ವಾಡಿಕೆಯಂತೆ ಮೊದಲು ಮಾತನಾಡುವ ಅವಕಾಶ ಬ್ರೆಜಿಲ್‌ ನಂತರ ಅಮೆರಿಕಕ್ಕೆ ಇದೆ.
  • ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ಯುಎನ್‌ಜಿಎ’ ವೇದಿಕೆಯಲ್ಲಿ ವಿಶ್ವ ಮುಖಂಡರನ್ನು ಉದ್ದೇಶಿಸಿ ಇದೇ 23ರಂದು ಭಾಷಣ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಬದಲು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇದೇ 27ರಂದು ಭಾಷಣ ಮಾಡಲಿದ್ದಾರೆ.
  • ಇಸ್ರೇಲ್‌, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ‘ಯುಎನ್‌ಜಿಎ’ ವೇದಿಕೆಯಲ್ಲಿ ಮಾತನಾಡಲು ಇದೇ 26ರಂದು ಅವಕಾಶ ನೀಡಲಾಗಿದೆ. 
  • ಇಸ್ರೇಲ್‌–ಹಮಾಸ್‌ ಸಂಘರ್ಷ, ರಷ್ಯಾ–ಉಕ್ರೇನ್‌ ಯುದ್ಧದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಸಾಮಾನ್ಯ ಅಧ್ಯಯನ 2:

ಅಮೆರಿಕ: ರಕ್ಷಣಾ ಇಲಾಖೆ ಹೆಸರು ‘ಯುದ್ಧ’ ಎಂದು ನಾಮಕರಣ

ವಿಶ್ವದಾದ್ಯಂತ ಯುದ್ಧ ನಿಲ್ಲಿಸುವ ಕುರಿತು ಶಾಂತಿ ಪ್ರಚಾರ ಮಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಇದೀಗ ತಮ್ಮ ದೇಶದ ರಕ್ಷಣಾ ಇಲಾಖೆಯ ಹೆಸರನ್ನೇ ‘ಯುದ್ಧ ಇಲಾಖೆ’ಯನ್ನಾಗಿ ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ. 

  • ‘ಅಮೆರಿಕವು ವಿಶ್ವದ ಶಕ್ತಿಶಾಲಿ ರಾಷ್ಟ್ರ ಎಂಬ ಸಂದೇಶ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಗೆಲುವು ಮತ್ತು ಪ್ರಬಲ ಸಾಮರ್ಥ್ಯದ ಸಂದೇಶವನ್ನು ನೀಡುತ್ತದೆ ಎಂದು ಭಾವಿಸಿದ್ದೇನೆ’ ಎಂದು ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ. 
  • ಕಾಂಗ್ರೆಸ್ (ಅಮೆರಿಕ ಸಂಸತ್ತು) ಸಂಸದರು ಮರುನಾಮಕರಣಕ್ಕೆ ಔಪಚಾರಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಮರುನಾಮಕರಣ ಆದೇಶದ ಬಳಿಕ ರಕ್ಷಣಾ ಇಲಾಖೆಯ ಕಚೇರಿಯ ಆವರಣದಲ್ಲಿನ ಫಲಕ ಹಾಗೂ ವೆಬ್‌ಸೈಟ್‌ ಸೇರಿದಂತೆ ಎಲ್ಲಾ ಕಡೆ ಹೆಸರು ಬದಲಾವಣೆ ಮಾಡಲಾಗಿದೆ. 

ಸಾಮಾನ್ಯ ಅಧ್ಯಯನ 2: ಕೇಂದ್ರ ಚುನಾವಣಾ ಆಯೋಗ; ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌)

ದೇಶವ್ಯಾಪಿ ‘ಎಸ್‌ಐಆರ್‌’ಗೆ ಸಿದ್ಧತೆ

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ವಿರೋಧ ವ್ಯಕ್ತವಾಗಿರುವಾಗಲೇ, ದೇಶದಾದ್ಯಂತ ‘ಎಸ್‌ಐಆರ್‌’ ಜಾರಿಗೊಳಿಸಲು ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. 

  • ದೇಶವ್ಯಾಪಿ ‘ಎಸ್‌ಐಆರ್‌’ ಜಾರಿಗೆ ಕೈಗೊಳ್ಳಬೇಕಿರುವ ಸಿದ್ಧತೆಗಳ ಕುರಿತು ಚರ್ಚಿಸಲು ಆಯೋಗದ ಉನ್ನತ ಅಧಿಕಾರಿಗಳು ಸೆಪ್ಟೆಂಬರ್‌ 10ರಂದು ವಿವಿಧ ರಾಜ್ಯಗಳ ಚುನಾವಣಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. 
  • ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಜ್ಞಾನೇಶ್‌ ಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ, ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ ನಡೆಸುತ್ತಿರುವ ಮೂರನೆಯ ಸಭೆ ಇದಾಗಿದೆ.  
  • ಬಿಹಾರದ ನಂತರ ದೇಶದ ಉಳಿದ ರಾಜ್ಯಗಳಲ್ಲೂ ‘ಎಸ್‌ಐಆರ್‌’ ಜಾರಿಗೊಳಿಸುವುದಾಗಿ ಚುನಾವಣಾ ಆಯೋಗ ಈ ಹಿಂದೆಯೇ ಹೇಳಿತ್ತು. 2026ರಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅಂದರೆ, ಈ ವರ್ಷಾಂತ್ಯದಿಂದಲೇ ಈ ರಾಜ್ಯಗಳಲ್ಲಿ ‘ಎಸ್‌ಐಆರ್‌’ ಪ್ರಕ್ರಿಯೆಗಳು ಆರಂಭಗೊಳ್ಳುವ ಸಾಧ್ಯತೆ ಇದೆ. 

‘ಎಸ್‌ಐಆರ್‌’ ಉದ್ದೇಶ

  • l ಜನ್ಮಸ್ಥಳ ಪರಿಶೀಲನೆಯ ಮೂಲಕ ವಿದೇಶಿ ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಿಂದ ಹೊರಗಿಡುವುದು
  • l ಬಾಂಗ್ಲಾದೇಶ, ಮ್ಯಾನ್ಮಾರ್‌ ಸೇರಿ ದೇಶದಲ್ಲಿ ನುಸುಳಿರುವ ವಿದೇಶಿ ಅಕ್ರಮ ವಲಸಿಗರನ್ನು ಗುರುತಿಸುವುದು
  • l ಮತದಾರರ ಪಟ್ಟಿಯ ಸಮಗ್ರತೆ ರಕ್ಷಿಸಲು, ಸಾಂವಿಧಾನಿಕ ಆದೇಶ ನಿರ್ವಹಿಸಲು ಆಯೋಗದ ಕ್ರಮ 
  • l ಮತಗಟ್ಟೆ ಅಧಿಕಾರಿಗಳು ಬೂತ್‌ ಮಟ್ಟದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ಮತದಾರರ ವಿವರವನ್ನು ಸಂಗ್ರಹಿಸಿ, ಖಚಿತಪಡಿಸಿಕೊಳ್ಳುವುದು  

ಘೋಷಣಾ ಪತ್ರ– ಹೊಸ ನಮೂನೆ

  • ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಬಯಸುವವರಿಗೆ ಮತ್ತು ಹೊರ ರಾಜ್ಯಗಳಿಗೆ ಸ್ಥಳಾಂತರಗೊಂಡವರಿಗೆ ‘ಎಸ್‌ಐಆರ್‌’ನಲ್ಲಿ ‘ಘೋಷಣಾ ಪತ್ರ’ ಎಂಬ ಹೊಸ ನಮೂನೆಯನ್ನು ಪರಿಚಯಿಸಲಾಗಿದೆ. 
  • ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವವರು 1987ರ ಜುಲೈ 1ರ ಮೊದಲು ಜನಿಸಿದವರಾಗಿದ್ದರೆ, ಭಾರತದಲ್ಲಿ ಜನಿಸಿದ್ದೇವೆ ಎನ್ನುವುದಕ್ಕೆ ಜನ್ಮ ದಿನಾಂಕ ಮತ್ತು ಜನ್ಮಸ್ಥಳದ ದಾಖಲೆ ಒದಗಿಸಬೇಕು. 1987ರ ಜುಲೈ 1ರಿಂದ 2004ರ ಡಿಸೆಂಬರ್‌ 2ರ ಒಳಗೆ ಜನಿಸಿದವರು ತಮ್ಮ ಪೋಷಕರ ಜನ್ಮದಿನಾಂಕ, ಜನ್ಮಸ್ಥಳದ ದಾಖಲೆಯನ್ನೂ ಒದಗಿಸಬೇಕು.

ಸುಪ್ರೀಂಕೋರ್ಟ್ ಸೂಚನೆ 

  • ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಮತ್ತು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. 
  • ಕೆಲವು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಈಗಾಗಲೇ ತಮ್ಮ ರಾಜ್ಯಗಳಲ್ಲಿ ಕೊನೆಯ ಬಾರಿ ಪರಿಷ್ಕರಣೆ ಆಗಿರುವ ಮತದಾರರ ಪಟ್ಟಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದ್ದಾರೆ. ಹೆಚ್ಚಿನ ರಾಜ್ಯಗಳು 2002–2004ರ ಅವಧಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ್ದವು. 

ಪ್ರಚಲಿತ ವಿದ್ಯಮಾನಗಳು: 6ನೇ ಸೆಪ್ಟೆಂಬರ್ 2025

ಶಾಲೆಗಳ ಅಭಿವೃದ್ಧಿಗೆ ಇನ್ನು ‘ಸಿಎಸ್‌ಆರ್‌ ನಿಧಿ’

ಸಂದರ್ಭ: ‘ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಬಳಸಿ ಕೊಂಡು ಸರ್ಕಾರಿ ಶಾಲೆಗಳ ಸ್ಥಾಪನೆ, ಅಭಿವೃದ್ಧಿ ಮಾಡುವ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

  • ‘ಸರ್ಕಾರಿ ಶಾಲೆಗಳ ಸ್ಥಾಪನೆ, ಅತ್ಯುತ್ತಮ ಕಟ್ಟಡಗಳನ್ನು ನಿರ್ಮಿಸಿ ಕೊಡುವ ಕಂಪನಿಗಳ ಹೆಸರನ್ನೇ ಶಾಲೆಗೆ ಇಡಲು ಅನುಮತಿ ನೀಡಲಾಗುವುದು. ನಗರದ ಮಾದರಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಸಿಬಿಎಸ್‌ಇ ಮಾದರಿ ಶಿಕ್ಷಣ ಪಡೆಯಲು ಅವಕಾಶಕಲ್ಪಿಸಲಾಗುವುದು.
  • ‘ಈಗಾಗಲೇ ಒಂದಷ್ಟು ಶಾಲೆಗಳು ಪ್ರಾರಂಭವಾಗಿವೆ. ಮುಂದಿನ ಶೈಕ್ಷಣಿಕ ವರ್ಷದ ಒಳಗೆ 2,000 ಶಾಲೆಗಳ ನಿರ್ಮಾಣದ ಗುರಿ ಇಟ್ಟುಕೊಂಡಿದ್ದೇವೆ. ರಾಜ್ಯದಲ್ಲಿ ₹7,800 ಕೋಟಿಯಷ್ಟು ಸಿಎಸ್‌‌ಆರ್‌ ಹಣ ಲಭ್ಯವಿದೆ. ನನ್ನ ಕ್ಷೇತ್ರದಲ್ಲಿ ಟೊಯೊಟಾ ಕಂಪನಿ ತಲಾ‌ ₹10 ಕೋಟಿ ವೆಚ್ಚದಲ್ಲಿ ಏಳು ಕೆಪಿಎಸ್‌ ಶಾಲೆ ಕಟ್ಟಡ ನಿರ್ಮಾಣ ಮಾಡುತ್ತಿದೆ. ಅದೇ ರೀತಿ ಇತರೆ ಉದ್ಯಮಿಗಳನ್ನೂ ಉತ್ತೇಜಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಮೂರು ಪಂಚಾಯಿತಿಗಳಿಗೆ ಒಂದು‌ ಕೆಪಿಎಸ್‌ ಶಾಲೆ ಆರಂಭಿಸಲಾಗುವುದು. ಮಕ್ಕಳು ಸರ್ಕಾರಿ ಶಾಲೆಗಳನ್ನು ತೊರೆಯದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು.

‘ಜಿಎಸ್‌ಟಿ ಪರಿಷ್ಕರಣೆ: ಲಾಭ ಗ್ರಾಹಕರಿಗೆ’

ಸಂದರ್ಭ: ಜಿಎಸ್‌ಟಿ ದರಗಳ ಪರಿಷ್ಕರಣೆಯ ಪ್ರಯೋಜನಗಳನ್ನು ಗ್ರಾಹಕರಿಗೆ ಸಂಪೂರ್ಣವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿಗಾವಹಿಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್.

  • ವಿವಿಧ ವಸ್ತುಗಳ ಮೇಲಿನ ತೆರಿಗೆ ಇಳಿಕೆಯು ಅವುಗಳ ಬೆಲೆಗಳಲ್ಲಿ ಪ್ರತಿಫಲಿಸಲಿವೆ ಎಂಬ ಭರವಸೆಯನ್ನು ಉದ್ಯಮ ಕ್ಷೇತ್ರ ನೀಡಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  • ನಿತ್ಯ ಬಳಕೆಯ ಹತ್ತು ಹಲವು ಉತ್ಪನ್ನಗಳು, ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ತೀರ್ಮಾನವನ್ನು ಜಿಎಸ್‌ಟಿ ಮಂಡಳಿಯು ಇತ್ತೀಚೆಗೆ ತೆಗೆದುಕೊಂಡಿದ್ದು, ಈ ತೀರ್ಮಾನಗಳು ನವರಾತ್ರಿಯ ಮೊದಲ ದಿನವಾದ ಇದೇ 22ರಿಂದಲೇ ಜಾರಿಗೆ ಬರಲಿವೆ.

‘ಚಿಲ್ಲರೆ ಹಣದುಬ್ಬರ ಇಳಿಕೆ ನಿರೀಕ್ಷೆ’

ಸಂದರ್ಭ: ಜಿಎಸ್‌ಟಿ ಸರಳೀಕರಣದಿಂದ ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಚಿಲ್ಲರೆ ಹಣದುಬ್ಬರವು

ಶೇ 0.65ರಿಂದ ಶೇ 0.75ರಷ್ಟು ಇಳಿಕೆ ಆಗಲಿದೆ ಎಂದು ಎಸ್‌ಬಿಐ ರಿಸರ್ಚ್‌ ತಿಳಿಸಿದೆ.

  • ಮನೆ ಬಳಕೆಯ ಅಗತ್ಯ ವಸ್ತುಗಳು ಮತ್ತು ಸೇವೆಗಳ ಮೇಲಿನ ತೆರಿಗೆಯು ಜಿಎಸ್‌ಟಿ ಸರಳೀಕರಣದಿಂದ ಕಡಿಮೆ ಆಗಲಿದೆ. ಇದು ಚಿಲ್ಲರೆ ಹಣದುಬ್ಬರ ಇಳಿಕೆಗೆ ನೆರವಾಗಲಿದೆ ಎಂದು ತಿಳಿಸಿದೆ.
  • ಅಗತ್ಯ ವಸ್ತುಗಳ (ಅಂದಾಜು 295 ಸರಕುಗಳು) ಮೇಲಿನ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿದಿದೆ ಅಥವಾ ಶೂನ್ಯವಾಗಿದೆ. ಹೀಗಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 0.25ರಿಂದ ಶೇ 0.30ರಷ್ಟು ಕಡಿಮೆಯಾಗಲಿದೆ.
  • ಅಲ್ಲದೆ, ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಸಹ ಇಳಿಕೆಯಾಗಿದ್ದು, ಶೇ 0.40ರಿಂದ ಶೇ 0.45ರಷ್ಟು ಹಣದುಬ್ಬರ ಕಡಿಮೆಯಾಗಲಿದೆ. ಒಟ್ಟಾರೆ, ಮುಂದಿನ ಆರ್ಥಿಕ ವರ್ಷದ ವೇಳೆಗೆ ಹಣದುಬ್ಬರ ಶೇ 0.65ರಿಂದ ಶೇ 0.75ರಷ್ಟು ಇಳಿಕೆ ಆಗಲಿದೆ ಎಂದು ತಿಳಿಸಿದೆ.

ಟಾಟಾ ಮೋಟರ್ಸ್ ವಾಹನ ಬೆಲೆ ಇಳಿಕೆ

  • ದೇಶದ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್‌ ಸೆಪ್ಟೆಂಬರ್‌ 22ರಿಂದ ಜಾರಿಗೆ ಬರುವಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ.
  • ಟಿಯಾಗೊ ಕಾರಿನ ಬೆಲೆಯನ್ನು ₹75 ಸಾವಿರ ಕಡಿಮೆ ಮಾಡಿದೆ. ಟಿಗಾರ್‌ (₹80 ಸಾವಿರ), ಆಲ್ಟ್ರೋಜ್ (₹1.10 ಲಕ್ಷ), ಪಂಚ್‌ (₹85 ಸಾವಿರ), ನೆಕ್ಸಾನ್‌ (₹1.55 ಲಕ್ಷ), ಹ್ಯಾರಿಯರ್‌ ₹1.4 ಲಕ್ಷ ಮತ್ತು ಸಫಾರಿ ದರ ₹1.45 ಲಕ್ಷದವರೆಗೆ ಕಡಿಮೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.
  • ಜಿಎಸ್‌ಟಿ ಕಡಿತದ ಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗು ವುದು ಎಂದು ಟಾಟಾ ಮೋಟರ್ಸ್ ತಿಳಿಸಿದೆ.

‘ವ್ಯಾಪಾರ ಒಪ್ಪಂದ: ಭಾರತದ ಜೊತೆ ಶೀಘ್ರ ಮಾತುಕತೆ’

ಸಂದರ್ಭ: ವ್ಯಾಪಾರ ಒಪ್ಪಂದ ಕುರಿತಂತೆ ಅಮೆರಿಕದೊಂದಿಗೆ ಭಾರತ ಶೀಘ್ರವೇ ಮಾತುಕತೆ ನಡೆಸಲಿದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್‌ ಹೇಳಿದ್ದಾರೆ.

  • ‘ಒಂದು ಅಥವಾ ಎರಡು ತಿಂಗಳ ಒಳಗಾಗಿ ಭಾರತ ಮಾತುಕತೆಗೆ ಮುಂದಾಗಲಿದೆ. ಕ್ಷಮೆ ಕೋರುವ ಜೊತೆಗೆ ಟ್ರಂಪ್‌ ಅವರೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಕೂಡ ಯತ್ನಿಸಲಿದೆ.
  • ಪ್ರಧಾನಿ ಮೋದಿ ಅವರೊಂದಿಗಿನ ಒಪ್ಪಂದ ಯಾವ ರೀತಿಯದ್ದಾಗಿರಬೇಕು ಎಂಬುದನ್ನು ಟ್ರಂಪ್‌ ಅವರೇ ನಿರ್ಧರಿಸುವರು’ ಎಂದು ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಲುಟ್ನಿಕ್ ಹೇಳಿದ್ದಾರೆ.
  • ‘ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧಕ್ಕೂ ಮೊದಲು ರಷ್ಯಾದಿಂದ ಭಾರತ ಖರೀದಿಸುತ್ತಿದ್ದ ತೈಲದ ಪ್ರಮಾಣ ಶೇ2ಕ್ಕಿಂತಲೂ ಕಡಿಮೆ ಇತ್ತು. ಈಗ, ಭಾರತ ತನ್ನ ಬೇಡಿಕೆಯ ಶೇ40ರಷ್ಟು ತೈಲವನ್ನು ರಷ್ಯಾದಿಂದ ಖರೀದಿ ಮಾಡುತ್ತಿದೆ’ ಎಂದಿದ್ದಾರೆ.

‘ಹಣ ಮರುಪಾವತಿ: ಹಕ್ಕು ವಿವಾದ ಇತ್ಯರ್ಥಪಡಿಸಿ’

ಸಂದರ್ಭ: ಭವಿಷ್ಯನಿಧಿ ವಂತಿಗೆ ಪಾವತಿಸುವಲ್ಲಿ ವಿಫಲವಾಗಿರುವ ಅಕ್ರೊಪೆಟಲ್ ಟೆಕ್ನಾಲಜೀಸ್ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯ ಸ್ವತ್ತುಗಳ ಮಾರಾಟದಿಂದ ಸಂಗ್ರಹವಾಗಿರುವ ಹಣದ ಮೇಲೆ, ಇಪಿಎಫ್‌ಒ ಹಾಗೂ ಸಾಲ ನೀಡಿರುವ ‌ಎಕ್ಸಿಸ್‌ ಬ್ಯಾಂಕ್‌ ಮತ್ತು ಇತರ ಎರಡು ಬ್ಯಾಂಕುಗಳ ಪೈಕಿ ಯಾರು ಮೊದಲು ಹಕ್ಕು ಹೊಂದಿದ್ದಾರೆ ಎಂಬ ಬಗ್ಗೆ  ನಿರ್ಧರಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

  • ಈ ವಿಚಾರವಾಗಿ ಎಡೆಲ್‌ವೀಸ್ ಅಸೆಟ್ ರಿಕನ್‌ಸ್ಟ್ರಕ್ಷನ್ ಲಿಮಿಟೆಡ್‌ನ(ಇಎಆರ್‌ಎಲ್) ಮೇಲ್ಮನವಿ ವಜಾಗೊಳಿಸಿ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಫೆಬ್ರುವರಿ 1ರಂದು ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.
  • ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂಜಯ ಕರೋಲ್‌ ಹಾಗೂ ಸಂದೀಪ್ ಮೆಹ್ತಾ ಅವರು ಇದ್ದ ನ್ಯಾಯಪೀಠವು,ಇಎಆರ್‌ಎಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
  • ಈ ವಿವಾದಕ್ಕೆ ಸಂಬಂಧಿಸಿ ಕಕ್ಷಿದಾರರ‌ರಾಗಿರುವ ಎಲ್ಲ ಸಂಸ್ಥೆಗಳು ಹೈಕೋರ್ಟ್‌ ಮುಂದೆ ತಮ್ಮ ವಾದ ಮಂಡಿಸಲು ಸ್ವತಂತ್ರವಾಗಿವೆ ಎಂದೂ ಪೀಠ ಹೇಳಿದೆ.
  • ವಿಚಾರಣೆ ವೇಳೆ, ಇಎಆರ್‌ಎಲ್‌ ಪರ ಹಿರಿಯ ವಕೀಲ ಕೃಷ್ಣನ್ ವೇಣುಗೋಪಾಲ್, ‘ಬಾಕಿ ಇರುವ ವಂತಿಗೆ ಹಣದ ಮೇಲೆ ಇ‍ಪಿಎಫ್‌ಒಗೆ ಮೊದಲ ಹಕ್ಕು ಇದೆ’ ಎಂದರು.
  • ‘ಕಂಪನಿಗೆ ಸಾಲ ನೀಡಿರುವ ಬ್ಯಾಂಕುಗಳ ಪೈಕಿ ಎಕ್ಸಿಸ್‌ ಬ್ಯಾಂಕ್, ಒಂದು ಸ್ವತ್ತನ್ನು ₹12 ಕೋಟಿಗೆ ಮಾರಾಟ ಮಾಡಿದೆ. ಕಂಪನಿಯು ಎರಡು ಸ್ವತ್ತುಗಳನ್ನು ಒಟ್ಟು ₹7 ಕೋಟಿಗೆ ಮಾರಾಟ ಮಾಡಿದೆ. ಹೀಗಾಗಿ, ಇಪಿಎಫ್‌ಒ ತನಗೆ ಬರಬೇಕಾದ ಬಾಕಿ ಮೊತ್ತವನ್ನು ಎಕ್ಸಿಸ್‌ ಬ್ಯಾಂಕ್‌ನಿಂದ ವಸೂಲು ಮಾಡಿಕೊಳ್ಳಬಹುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
  • ‘ಪಿಎಫ್‌ ಕಾಯ್ದೆಯಡಿ, ಬಾಕಿ ಮೊತ್ತವನ್ನು ಎಕ್ಸಿಸ್‌ ಬ್ಯಾಂಕಿನಿಂದ ಮಾಡಿಕೊಳ್ಳಬೇಕೇ ಹೊರತು ಮೇಲ್ಮನವಿದಾರರಿಂದಲ್ಲ’ ಎಂದೂ ವಾದಿಸಿದರು.
  • ಇಪಿಎಫ್‌ಒ ಪರ ಹಾಜರಿದ್ದ ವಕೀಲ ದುಷ್ಯಂತ ಪರಾಶರ, ‘ಮೇಲ್ಮನವಿದಾರರ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌ನ ಕ್ರಮ ಸರಿಯಾಗಿಯೇ ಇದೆ’ ಎಂದರು.
  • ‘ಎಸ್‌ಎಆರ್‌ಎಫ್‌ಎಇಎಸ್‌ಐ ಕಾಯ್ದೆಯ ಸೆಕ್ಷನ್ 35ರ ಪ್ರಕಾರ, ಬ್ಯಾಂಕಿನ ಸಾಲ ಮರುಪಾವತಿಯೇ ಆದ್ಯತೆಯಾಗಲಿದೆ. ಹೀಗಾಗಿ, ಭವಿಷ್ಯನಿಧಿ ವಂತಿಗೆ ಸಂಬಂಧಿಸಿ ಬ್ಯಾಂಕಿನಿಂದ ಯಾವುದೇ ವಸೂಲಾತಿ ಮಾಡುವ ಹಾಗಿಲ್ಲ’ ಎಂದು ಎಕ್ಸಿಸ್‌ ಬ್ಯಾಂಕ್‌ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್‌ ಜೈನ್‌, ಪೀಠಕ್ಕೆ ತಿಳಿಸಿದರು.
  • ಎಲ್ಲ ಕಕ್ಷಿದಾರರ ವಾದ ಆಲಿಸಿದ ಪೀಠ, ‘ವಸೂಲಾಗಬೇಕಾದ ಬಾಕಿ ಮೊತ್ತದ ಮೇಲೆ ಇಪಿಎಫ್‌ಒ, ಎಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರಾವಂಕೂರ್(ಈಗ ಎಸ್‌ಬಿಐನಲ್ಲಿ ವಿಲೀನವಾಗಿದೆ) ಪೈಕಿ ಯಾರಿಗೆ ಮೊದಲ ಹಕ್ಕು ಇದೆ ಎಂಬ ಬಗ್ಗೆ ಹೈಕೋರ್ಟ್‌ ನಿರ್ಧರಿಸಲಿದೆ’ ಎಂದು ಪೀಠ, ಅರ್ಜಿ ವಿಲೇವಾರಿ ಮಾಡಿತು.

‘ದಾಖಲೆ ಇಲ್ಲದ ವಹಿವಾಟು: ಅಲ್ಲಗಳೆಯಲಾಗದು’

  • ಚೆಕ್‌, ಬ್ಯಾಂಕ್‌ ವರ್ಗಾವಣೆ ದಾಖಲೆ ಅಥವಾ ರಶೀದಿ ಇಲ್ಲ ಎಂಬ ಕಾರಣಕ್ಕೆ ಹಣಕಾಸಿನ ವಹಿವಾಟು ನಡೆದೇ ಇಲ್ಲ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
  • ‘ಹಣದ ವಹಿವಾಟು ಎಂದಮೇಲೆ ಅದರಲ್ಲಿ ನಗದು ಕೂಡ ಇರಬಹುದು. ಅದು ಅಸಹಜವೇನೂ ಅಲ್ಲ’ ಎಂದು ಕೋರ್ಟ್‌ ತಿಳಿಸಿದೆ.
  • ವ್ಯಕ್ತಿಯೊಬ್ಬರು ಅಧಿಕೃತ ವಿಧಾನಗಳ ಮೂಲಕ (ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ಸ್‌ ಅಥವಾ ಬ್ಯಾಂಕ್‌ ವಹಿವಾಟು) ಹಣ ವರ್ಗಾವಣೆಯನ್ನು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದರೆ, ಅಂತಹ ಮೊತ್ತವನ್ನು ನಗದು ಮೂಲಕ ಪಾವತಿಸಲಾಗಿಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅದರಲ್ಲೂ ಸಾಲ ಮರುಪಾವತಿ ಕುರಿತು ಸ್ಪಷ್ಟವಾಗಿ ವಚನಪತ್ರ ಇದ್ದಲ್ಲಿ ಹಾಗೆ ನಿರ್ಧರಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್‌ ಅಮಾನುಲ್ಲಾ ಮತ್ತು ವಿಪುಲ್‌.ಎಂ ಪಾಂಚೋಲಿ ಅವರ ಪೀಠ ಹೇಳಿದೆ.

ಪ್ರಚಲಿತ ವಿದ್ಯಮಾನಗಳು: 5ನೇ ಸೆಪ್ಟೆಂಬರ್ 2025

ಸಾಮಾನ್ಯ ಅಧ್ಯಯನ 1: ಇ–ಕಾಮರ್ಸ್‌ ; ಬ್ಯಾಂಕ್‌ ಮತ್ತು ಬ್ಯಾಂಕೇತರ ಸಂಸ್ಥೆ

ಗ್ರಾಹಕರಿಗೆ ನೇರವಾಗಿ ಸಾಲ ಪರವಾನಗಿ ಪಡೆದ ಅಮೆಜಾನ್

ಸಂದರ್ಭ: ಬೆಂಗಳೂರು ಮೂಲದ ಬ್ಯಾಂಕೇತರ ಹಣಕಾಸು ಕಂಪನಿ ಆಕ್ಸಿಯೊ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಾಗತಿಕ ಇ–ಕಾಮರ್ಸ್‌ ಕಂಪನಿ ಅಮೆಜಾನ್‌ ತಿಳಿಸಿದೆ. ಅಲ್ಲದೆ, ದೇಶದಲ್ಲಿ ನೇರವಾಗಿ ಗ್ರಾಹಕರಿಗೆ ಸಾಲ ನೀಡುವ ಪರವಾನಗಿ ಪಡೆಯಲಾಗಿದೆ ಎಂದು ತಿಳಿಸಿದೆ.

  • ಆಕ್ಸಿಯೊ 12 ವರ್ಷದ ಹಳೆಯದಾದ ಫಿನ್‌ಟೆಕ್‌ ಕಂಪನಿಯಾಗಿದೆ. ಸಣ್ಣ ಗ್ರಾಹಕರು ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲವನ್ನು ನೀಡುತ್ತದೆ.
  • 2018ರಿಂದ ಅಮೆಜಾನ್‌, ಆಕ್ಸಿಯೊ ಜೊತೆಗೆ ಒಪ್ಪಂದ ಮಾಡಿಕೊಂಡು ಸಾಲವನ್ನು ನೀಡುತ್ತಿತ್ತು. ಕಳೆದ ಡಿಸೆಂಬರ್‌ನಿಂದ ಸ್ವಾಧೀನ ಪ್ರಕ್ರಿಯೆ ಮಾತುಕತೆ ನಡೆಯುತ್ತಿತ್ತು. ಜೂನ್‌ನಲ್ಲಿ ಆರ್‌ಬಿಐ ಒಪ್ಪಂದಕ್ಕೆ ಅನುಮೋದಿಸಿದೆ.
  • ಆಕ್ಸಿಯೊ ಸ್ವಾಧೀನದಿಂದ ಅಮೆಜಾನ್‌ ತನ್ನ ವೇದಿಕೆಯ ಮೂಲಕ ಗ್ರಾಹಕರಿಗೆ ಮತ್ತು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ವಿವಿಧ ರೀತಿಯ ಸಾಲವನ್ನು ನೀಡಲು ಯೋಜಿಸಿದೆ.
  • ದೇಶದಲ್ಲಿ ಫ್ಲಿಪ್‌ಕಾರ್ಟ್‌ ಸೇರಿದಂತೆ ಬಹುತೇಕ ಇ–ಕಾಮರ್ಸ್‌ ಕಂಪನಿಗಳು ಬ್ಯಾಂಕ್‌ ಮತ್ತು ಬ್ಯಾಂಕೇತರ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಂಡು ಸಾಲ ನೀಡುತ್ತವೆ. ಆದರೆ, ಅಮೆಜಾನ್‌ ಈಗ ನೇರವಾಗಿ ಸಾಲ ನೀಡುವ ಪರವಾನಗಿ ಪಡೆದಿದೆ.

ಸಾಮಾನ್ಯ ಅಧ್ಯಯನ 1:

ಜಿಎಸ್‌ಟಿ: ತುಟ್ಟಿಯಾಗಲಿರುವ ಐಪಿಎಲ್‌ ಟಿಕೆಟ್

ಸಂದರ್ಭ: ಮುಂದಿನ ಆವೃತ್ತಿಯಿಂದ ಐಪಿಎಲ್‌ ಪಂದ್ಯ ವೀಕ್ಷಿಸಲು ಹೋಗುವವರು ಟಿಕೆಟ್‌ಗೆ ಹೆಚ್ಚಿನ ಹಣ ತೆರ ಬೇಕಾಗುತ್ತದೆ. ಸರ್ಕಾರ, ಇಂಥ ಪಂದ್ಯಗಳ ಟಿಕೆಟ್‌ಗೆ ವಿಧಿಸುವ ಜಿಎಸ್‌ಟಿಯನ್ನು ಶೇ 28 ರಿಂದ 40ರ ವ್ಯಾಪ್ತಿಗೆ ತಂದಿದೆ.

  • ‘ಕ್ಯಾಸಿನೊ, ರೇಸ್‌ ಕ್ಲಬ್‌ಗಳ ಪ್ರವೇಶ ಅಥವಾ ಐಪಿಎಲ್‌ನಂಥ ಕ್ರೀಡಾ ಕಾರ್ಯ ಕ್ರಮಗಳಿಗೆ ಪ್ರವೇಶದ ಟಿಕೆಟ್‌ಗಳ ಮೇಲೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಜೊತೆ ಶೇ 40 ಜಿಎಸ್‌ಟಿ ವಿಧಿಸಲಾಗುತ್ತಿದೆ.
  • ₹500 ಮೂಲದರದ ಟಿಕೆಟ್‌ಗೆ ಈ ಹಿಂದೆ ಶೇ 28 ಜಿಎಸ್‌ಟಿ ಸೇರಿ ₹640 ಆಗುತಿತ್ತು. ಈಗ ಶೇ 40 ಜಿಎಸ್‌ಟಿ ಹೇರಿಕೆ ಯಿಂದ ಟಿಕೆಟ್‌ ದರ ₹700 ಆಗಲಿದೆ.
  • ಐಪಿಎಲ್‌ ಟಿಕೆಟ್‌ಗಳನ್ನು ‘ಐಷಾರಾಮಿ ಸರಕು’ಗಳ ವ್ಯಾಪ್ತಿಗೆ ತರಲಾಗಿದೆ.
  • ಆದರೆ ಅಂತರರಾಷ್ಟ್ರೀಯ ಪಂದ್ಯಗಳ ಟಿಕೆಟ್‌ ದರ ಕೊಂಚ ಅಗ್ಗವಾಗಲಿದೆ. ಇತರೆ ಕ್ರೀಡಾ ಚಟುವಟಿಕೆಯಡಿ ಬರುವುದರಿಂದ ಈ ಪಂದ್ಯಗಳ ಟಿಕೆಟ್‌ ಮೇಲೆ ಶೇ 18 ಜಿಎಸ್‌ಟಿ ಮಾತ್ರ ವಿಧಿಸಲಾಗುತ್ತದೆ.

ಸಾಮಾನ್ಯ ಅಧ್ಯಯನ 2: ರಾಜ್ಯ ಚುನಾವಣಾ ಆಯೋಗ; ಸ್ಥಳೀಯ ಸಂಸ್ಥೆಗಳ ಚುನಾವಣೆ

ಪ್ರತ್ಯೇಕ ಮತ ಪಟ್ಟಿ, ಬ್ಯಾಲಟ್ ಪೇಪರ್

ಸಂದರ್ಭ: ತನ್ನ ವ್ಯಾಪ್ತಿಯಲ್ಲಿರುವ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಬದಲು ಮತ ಪತ್ರ (ಬ್ಯಾಲಟ್ ಪೇಪರ್) ಬಳಕೆ ಹಾಗೂ ರಾಜ್ಯ ಚುನಾವಣಾ ಆಯೋಗದ ನೇತೃತ್ವದಲ್ಲಿ ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ.

  • ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ವೂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳಿಗೆ ಹೊಸ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲು ಸರ್ಕಾರ ತೀರ್ಮಾನಿಸಿದೆ.
  • ಈ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಬದಲಿಗೆ ಮತ ಪತ್ರ (ಬ್ಯಾಲಟ್ ಪೇಪರ್) ಬಳಸಿ ಮತ ಚಲಾಯಿಸುವ ವ್ಯವಸ್ಥೆಯನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ.
  • ಇವೆರಡೂ ವಿಷಯಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗುವುದು. ಮತದಾರರ ಪಟ್ಟಿ ಪರಿಷ್ಕರಿಸಿ, ಹೊಸ ಪಟ್ಟಿ ತಯಾರಿಸಲು ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಿ ಹೊಸ ನಿಯಮಾವಳಿಗಳನ್ನು ರೂಪಿಸಲಾಗುವುದು’, ನಿಯಮಗಳನ್ನು ಅಂತಿಮಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲಾಗುವುದು.
  • ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌.ಸಂಗ್ರೇಶಿ ಅವರು ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ 2024ರ ಸೆಕ್ಷನ್‌ 35 ಅನ್ನು ಉಲ್ಲೇಖಿಸಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು.
  • ಅದರ ಆಧಾರದ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಂಚಾಯತ್‌ರಾಜ್‌ ಕಾಯ್ದೆ, ಮುನಿಸಿಪಾಲಿಟಿ ಕಾಯ್ದೆಯಲ್ಲೂ ಈ ಅವಕಾಶ ಕಲ್ಪಿಸಲಾಗಿದೆ.
  • ಅಲ್ಲದೇ, ಕೇಂದ್ರ ಚುನಾವಣಾ ಆಯೋಗದಂತೆ ರಾಜ್ಯ ಚುನಾವಣಾ ಆಯೋಗವೂ ಸ್ವಾಯತ್ತ ಸಂಸ್ಥೆ. ಕೇಂದ್ರ ಚುನಾವಣಾ ಆಯೋಗದಷ್ಟೇ ರಾಜ್ಯ ಚುನಾವಣಾ ಆಯೋಗಕ್ಕೂ ಅಧಿಕಾರ ಇದೆ. ಮತದಾರರ ಪಟ್ಟಿಯನ್ನೂ ಸ್ವತಂತ್ರವಾಗಿ ತಯಾರಿಸಬಹುದಾಗಿದೆ.
  • 2010 ಮತ್ತು 2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಇವಿಎಂಗಳನ್ನು ಬಳಸಲಾಗುತ್ತಿತ್ತು. ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಮತಪತ್ರ ಬಳಸಲಾಗುತ್ತಿದೆ. ವಿಧಾನಪರಿಷತ್ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸಲಾಗುತ್ತಿತ್ತು.

ಸಾಮಾನ್ಯ ಅಧ್ಯಯನ 2: ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಮಾಜಿ ದೇವದಾಸಿಯರ ಮರು ಸಮೀಕ್ಷೆ

2 ಸಮೀಕ್ಷೆಗಳಿಗೆ ಸಿ.ಎಂ ಚಾಲನೆ

ಸಂದರ್ಭ: ರಾಜ್ಯದಲ್ಲಿ ಸೆ. 15ರಿಂದ ಒಟ್ಟು 45 ಕೆಲಸದ ದಿನ, ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಮತ್ತು 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಯಲಿದೆ. ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ನಡೆಯುತ್ತಿರುವುದು ವಿಶೇಷ.

  • ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಯಲಿರುವ ಈ ಸಮೀಕ್ಷೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
  • ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಈ ಸಮೀಕ್ಷೆಗಳನ್ನು ನಡೆಸಲು ಸರ್ಕಾರ ಉದ್ದೇಶಿಸಿದೆ. ಎರಡೂ ಸಮೀಕ್ಷೆಗಳು ಪ್ರತ್ಯೇಕವಾಗಿ ನಡೆಯಲಿವೆ.
  • ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ‘ಕರ್ಮಣಿ ವೆಬ್ ಅಪ್ಲಿಕೇಷನ್‌’ ಹಾಗೂ ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಸೇವಾ ಸಿಂಧು ಮೂಲಕ ‘ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆ ವೆಬ್ ಅಪ್ಲಿಕೇಷನ್‌’ ಸಿದ್ಧಪಡಿಸಲಾಗಿದೆ. 
  • ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಯನ್ನು ಎಲ್ಲ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗುವುದು.
  • ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯು ಅದೇ ಸಮುದಾಯದವರ ಮೂಲಕವೇ ನಡೆಯಲಿರುವುದು ವಿಶೇಷವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.
  • ಮಾಜಿ ದೇವದಾಸಿ ಯರ ಮರು ಸಮೀಕ್ಷೆಯನ್ನು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳ ಕಚೇರಿಯಲ್ಲಿ ನಡೆಸಲಾಗು ವುದು.

ಸಮೀಕ್ಷೆಗಳ ವೈಶಿಷ್ಟ್ಯ

  • lಮೊಬೈಲ್‌ ಆ್ಯಪ್‌ ಬಳಕೆ
  • lಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಒಳಗೊಂಡ ಸಮಿತಿ
  • lಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಮಾಜಿ ದೇವದಾಸಿ ಮಹಿಳೆಯರ ಸಂಘಟನೆಗಳ ಪ್ರತಿನಿಧಿಗಳನ್ನು ಸೇರಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಆಂತರಿಕ ಸಮಿತಿ.

ಮಾಜಿ ದೇವದಾಸಿ ಸಮೀಕ್ಷೆ ಎಲ್ಲೆಲ್ಲಿ?

  • ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳು.

ಸಾಮಾನ್ಯ ಅಧ್ಯಯನ 2:

ಡಿ.ಕೆ ಶಿವಕುಮಾರ್‌ ದೇಶದ ಎರಡನೇ ಶ್ರೀಮಂತ ಸಚಿವ

ಸಂದರ್ಭ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇಶದ ಎರಡನೇ ಶ್ರೀಮಂತ ಸಚಿವ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.

  • ರಾಜ್ಯ ವಿಧಾನಸಭೆಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವರು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರ ಗಳನ್ನು ವಿಶ್ಲೇಷಿಸಿ ಎಡಿಆರ್ ವರದಿ ಬಿಡುಗಡೆ ಮಾಡಿದೆ. 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರು ಸಲ್ಲಿಸಿರುವ ಪ್ರಮಾಣಪತ್ರಗಳನ್ನು ವಿಶ್ಲೇಷಿಸಲಾಗಿದೆ.
  • ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರು ಇದ್ದಾರೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ.
  • 643 ಸಚಿವರ ಪೈಕಿ 302 ಮಂದಿ (ಶೇ 47) ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. 174 ಸಚಿವರ ವಿರುದ್ಧ (ಶೇ 27) ಗಂಭೀರ ಅಪರಾಧ ಪ್ರಕರಣಗಳಿವೆ. ಈ ಸಚಿವರು ಕೊಲೆ, ಕೊಲೆಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಸಂಪುಟದ 72ರಲ್ಲಿ 29 (ಶೇ 40) ಮಂದಿ ವಿರುದ್ಧ ಪ್ರಕರಣಗಳಿವೆ.

ಸಾಮಾನ್ಯ ಅಧ್ಯಯನ 2:

ಐಐಎಸ್‌ಸಿ ಅತ್ಯುತ್ತಮ ವಿವಿ

ಸಂದರ್ಭ: ಕೇಂದ್ರ ಶಿಕ್ಷಣ ಇಲಾಖೆಯು ಬಿಡುಗಡೆಗೊಳಿಸಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ–2025ರ (ಎನ್‌ಐಆರ್‌ಎಫ್) ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಸತತ 10ನೇ ವರ್ಷವೂ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ. 

  • ಎನ್‌ಐಆರ್‌ಎಫ್‌ನ 10ನೇ ಆವೃತ್ತಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪ್ರಕಟಿಸಿದರು.
  • ‘ಸಮಗ್ರ’ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌ (ಐಐಟಿ ಮದ್ರಾಸ್‌) ಸತತ 7ನೇ ವರ್ಷವೂ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಈ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ 2ನೇ ಸ್ಥಾನದಲ್ಲಿದ್ದರೆ, ಐಐಟಿ ಬಾಂಬೆ ಹಾಗೂ ಐಐಟಿ ದೆಹಲಿ ನಂತರದ ಸ್ಥಾನದಲ್ಲಿವೆ.
  • ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ ಅಗ್ರಸ್ಥಾನದಲ್ಲಿದೆ. ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಈ ಸಂಸ್ಥೆಯು, ಎನ್‌ಐಆರ್‌ಎಫ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಸ್ಥಾನ ಪಡೆದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಎರಡನೇ ಸ್ಥಾನದಲ್ಲಿದೆ.
  • ಕಾಲೇಜುಗಳ ವಿಭಾಗದಲ್ಲಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜು ಮೊದಲ ಹಾಗೂ ಮಿರಾಂಡಾ ಹೌಸ್‌ ಎರಡನೇ ಸ್ಥಾನದಲ್ಲಿವೆ. ಹಂಸರಾಜ್‌ ಕಾಲೇಜು ಮತ್ತು ಕಿರೋರಿ ಮಾಲ್‌ ಕಾಲೇಜು ನಂತರದ ಸ್ಥಾನದಲ್ಲಿವೆ.
  • ಎಂಜಿನಿಯರಿಂಗ್ ಕಾಲೇಜುಗಳ ಮೊದಲ 10 ಸ್ಥಾನದಲ್ಲಿವೆ 9 ಐಐಟಿಗಳಿವೆ. ಐಐಟಿ ಮದ್ರಾಸ್, ಐಐಟಿ ಬಾಂಬೆ ಹಾಗೂ ಐಐಟಿ ದೆಹಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ತಿರುಚನಾಪಳ್ಳಿಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯು (ಎನ್‌ಐಟಿ) ಪಟ್ಟಿಯಲ್ಲಿರುವ ಐಐಟಿಯೇತರ ಸಂಸ್ಥೆಯಾಗಿದೆ.
  • ರಾಜ್ಯದ ಸಂಸ್ಥೆಗಳಿಗೆ ಗೌರವ: ಸುರತ್ಕಲ್‌ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರಶಾಸ್ತ್ರ ಸಂಸ್ಥೆ,  ಕ್ರಮವಾಗಿ 54ನೇ ಹಾಗೂ 60ನೇ ಸ್ಥಾನ ಗಳಿಸಿವೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಜೆಎಸ್‌ಎಸ್ ಅಕಾಡೆಮಿ 38ನೇ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ 96ನೇ ಸ್ಥಾನ ಪಡೆದಿವೆ.
  • ಸರ್ಕಾರಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 50ನೇ ಸ್ಥಾನ ಪಡೆದಿದ್ದು, ರಾಜ್ಯದ ಯಾವುದೇ ಸರ್ಕಾರಿ ಕಾಲೇಜು ಟಾಪ್ 100ರಲ್ಲಿ ಸ್ಥಾನ ಪಡೆದಿಲ್ಲ.
  • ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಇನೋವೇಶನ್‌ ಸಂಸ್ಥೆಗಳಲ್ಲಿ ಎಂ.ಎಸ್. ರಾಮಯ್ಯ ಟೆಕ್ನಾಲಜಿ, ಕ್ರೈಸ್ಟ್‌ ವಿಶ್ವವಿದ್ಯಾಲಯ, ಐಐಟಿ ಧಾರವಾಡ, ಮ್ಯಾನೇಜ್ಮೆಂಟ್‌ ಕಾಲೇಜುಗಳಲ್ಲಿ ಅಲಯನ್ಸ್‌ ವಿಶ್ವವಿದ್ಯಾಲಯ, ವೈದ್ಯಕೀಯ ಸಂಸ್ಥೆಗಳಲ್ಲಿ ಮಣಿಪಾಲ–ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜುಗಳು, ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಬೆಳಗಾವಿಯ ಜೆಎನ್‌ಎಂಸಿ, ಎಂ.ಎಸ್. ರಾಮಯ್ಯ ಕಾಲೇಜು ಸ್ಥಾನ ಪಡೆದಿವೆ.
  • ‘ಕೆಲ ವಿಶ್ವವಿದ್ಯಾಲಯಗಳು ಎನ್‌ಐಆರ್‌ಎಫ್‌ಗೆ ಅರ್ಜಿ ಸಲ್ಲಿಸಿಲ್ಲ. ಬೋಧಕ ಸಿಬ್ಬಂದಿ ಕೊರತೆ, ಸಂಶೋಧನಾ ಚಟುವಟಿಕೆಗಳ ಸ್ಥಗಿತದ ಕಾರಣ ಕೆಲವು ಮಾನ್ಯತೆ ಕಳೆದುಕೊಂಡಿವೆ. ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗಿಯಾದರೆ ರಾಜ್ಯಕ್ಕೆ ಇನ್ನೂ ಹೆಚ್ಚಿನ ಸ್ಥಾನಗಳು ಲಭಿಸಲಿವೆ’ ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಪ್ರಮುಖ ವಿಭಾಗಗಳು

  • lಮ್ಯಾನೇಜ್‌ಮೆಂಟ್‌ ಕಾಲೇಜುಗಳ ವಿಭಾಗದಲ್ಲಿ ಅಹಮದಾಬಾದ್‌ನ ಐಐಎಂ ಮೊದಲ ಸ್ಥಾನಲ್ಲಿದ್ದರೆ ಐಐಎಂ ಬೆಂಗಳೂರು 2ನೇ ಸ್ಥಾನದಲ್ಲಿದೆ
  • lಕಾನೂನು ವಿಭಾಗದಲ್ಲಿ ‘ನ್ಯಾಷನಲ್‌ ಲಾ ಸ್ಕೂಲ್ ಆಫ್‌ ಇಂಡಿಯಾ ಯೂನಿವರ್ಸಿಟಿ’ಯು ಮೊದಲ ಸ್ಥಾನ ಪಡೆದುಕೊಂಡಿದೆ. ದೆಹಲಿಯ ನ್ಯಾಷನಲ್‌ ಲಾ ಯೂನಿವರ್ಸಿಟಿ ಹಾಗೂ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ ಯೂನಿವರ್ಸಿಟಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ
  • lಸಂಶೋಧನಾ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ ಮೊದಲ ಹಾಗೂ ಐಐಟಿ ಮದ್ರಾಸ್‌ 2ನೇ ಸ್ಥಾನದಲ್ಲಿವೆ
  • lಮುಕ್ತ ವಿಶ್ವವಿದ್ಯಾಲಯ ವಿಭಾಗದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಮೊದಲ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಮೈಸೂರು ಎರಡನೇ ಸ್ಥಾನದಲ್ಲಿದೆ

ಸಾಮಾನ್ಯ ಅಧ್ಯಯನ 2:

ಕುಕಿ ಸಂಘಟನೆ ಜತೆ ಕೇಂದ್ರ ಒಪ್ಪಂದ

ಸಂದರ್ಭ: ಮಣಿಪುರದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆ ಸ್ಥಾಪಿಸು ವುದೂ ಸೇರಿದಂತೆ ಹಲವು ನಿಯಮಗಳ ಕುರಿತ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಹಾಗೂ ಎರಡು ಪ್ರಮುಖ ಕುಕಿ ಸಂಘಟನೆ ಗಳು ಸಹಿ ಹಾಕಿದವು.

  • ‘ಕುಕಿ ರಾಷ್ಟ್ರೀಯ ಸಂಘಟಣೆ (ಕೆಎನ್‌ಒ) ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್) ಕಾರ್ಯಾಚರಣೆ ನಿಗ್ರಹ (ಎಸ್‌ಒಒ) ಒಪ್ಪಂದಕ್ಕೆ ಸಹಿ ಹಾಕಿವೆ.
  • ಕಳೆದ ಕೆಲ ದಿನಗಳಿಂದ ಗೃಹ ಸಚಿವಾಲಯದ ಅಧಿಕಾರಿಗಳು ಮತ್ತು ಕುಕಿ ಗುಂಪುಗಳ ನಿಯೋಗದ ನಡುವೆ ನಡೆದ ಸರಣಿ ಸಭೆಗಳ ಬಳಿಕ ಈ ಒಪ್ಪಂದ ನಡೆದಿದೆ ಎಂದು ಗೃಹ ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ದೆಹಲಿಯಲ್ಲಿ ಗೃಹ ಸಚಿವಾಲಯ, ಮಣಿಪುರ ಸರ್ಕಾರ, ಕೆಎನ್‌ಒ ಮತ್ತು ಯುಪಿಎಫ್ ಪ್ರತಿನಿಧಿಗಳ ನಡುವೆ ತ್ರಿಪಕ್ಷೀಯ ಸಭೆ ನಡೆಯಿತು. ಒಪ್ಪಂದಕ್ಕೆ ಸಹಿ ಹಾಕಿದ ದಿನದಿಂದ ಒಂದು ವರ್ಷದ ಅವಧಿಗೆ ಜಾರಿಗೆ ಬರುವಂತೆ ನಿಯಮಗಳು ಮತ್ತು ಷರತ್ತು ಗಳ ಅನ್ವಯ ಎಲ್ಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ’ ಎಂದು ಗೃಹ ಸಚಿವಾಲಯ ತಿಳಿಸಿದೆ.
  • ಮಣಿಪುರದ ಪ್ರಾದೇಶಿಕ ಸಮಗ್ರತೆ ಯನ್ನು ಕಾಪಾಡಿಕೊಳ್ಳಲು ಮತ್ತು ಮಾತುಕತೆಯ ಮೂಲಕ ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ತರಲು ಎಲ್ಲರೂ ಒಪ್ಪಿಕೊಂಡಿದ್ದಾರೆ.
  • ಸಂಘರ್ಷ ಪೀಡಿತ ಪ್ರದೇಶಗಳಿಂದ ಏಳು ಶಿಬಿರಗಳನ್ನು ಸ್ಥಳಾಂತರಿಸಬೇಕು. ನಿರಾಶ್ರಿತರ ಶಿಬಿರಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಹತ್ತಿರದ ಸಿಆರ್‌‍ಪಿಎಫ್‌ ಮತ್ತು ಬಿಎಸ್‌ಎಫ್‌ ಶಿಬಿರ ಗಳಿಗೆ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸ ಬೇ‌ಕು. ವಿದೇಶಿ ಪ್ರಜೆಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಮತ್ತು‌ ಸಂಘಟನೆಯ ಸದಸ್ಯರನ್ನು ಭದ್ರತಾ ಪಡೆಗಳ ಕಟ್ಟುನಿಟ್ಟಿನ ತನಿಖೆಗೆ ಒಳಪಡಿಸಲು ಕೆಎನ್ಒ ಮತ್ತು ಯುಪಿಎಫ್ ಒಪ್ಪಿಕೊಂಡಿವೆ.
  • 2008ರಲ್ಲಿ ಮೊದಲ ಬಾರಿಗೆ ಎಸ್ಒಒ ಒಪ್ಪಂದ ನಡೆದಿತ್ತು. ಬಳಿಕ ಅದನ್ನು ನಿಗದಿತ ಅವಧಿಗೆ ನವೀಕರಿಸ ಲಾಗುತ್ತಿತ್ತು. ಆದರೆ, ಜನಾಂಗೀಯ ಕಲಹದಿಂದಾಗಿ ಫೆಬ್ರುವರಿ 2024ರಿಂದ ಈ ಒಪ್ಪಂದ ಮುಂದುವರಿದಿರಲಿಲ್ಲ.

ಸಾಮಾನ್ಯ ಅಧ್ಯಯನ 2:

ಜೆಪಿಸಿ ರಚನೆ; ಮತ್ತಷ್ಟು ವಿಳಂಬ: ಸಮಿತಿಯಲ್ಲಿ ಸೇರದಿರಲು ಹಲವು ಪಕ್ಷಗಳ ನಿರ್ಧಾರ

ಸಂದರ್ಭ: ಬಂಧನಕ್ಕೆ ಒಳಗಾಗಿ 30 ದಿನ ಜೈಲಿನಲ್ಲಿದ್ದರೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಪದಚ್ಯುತಿಗೊಳಿಸುವುದಕ್ಕೆ ಅನುವು ಮಾಡಿಕೊಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಎರಡು ವಾರಗಳು ಕಳೆದಿವೆ. ಆದರೆ ಮಸೂದೆಯನ್ನು ಪರಿಶೀಲಿಸಲಿ ರುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸದಸ್ಯರ ಹೆಸರು ಇನ್ನೂ ಅಂತಿಮಗೊಂಡಿಲ್ಲ.

  • ವಕ್ಫ್‌ (ತಿದ್ದುಪಡಿ) ಮಸೂದೆ– 2024 ಮತ್ತು ‘ಒಂದು ರಾಷ್ಟ್ರ–ಒಂದು ಚುನಾವಣೆ’ಗೆ ಸಂಬಂಧಿಸಿದ ಮಸೂದೆಗಳ ಪರಿಶೀಲನೆಗೆ ಜೆಪಿಸಿ ರಚನೆ ಪ್ರಕ್ರಿಯೆ ತ್ವರಿತವಾಗಿ ನಡೆದಿತ್ತು. ಆದರೆ ಈ ಮಸೂದೆಯ ವಿಚಾರದಲ್ಲಿ ಜೆಪಿಸಿ ರಚನೆ ವಿಳಂಬವಾಗಿದೆ.
  • ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರನ್ನು ಹುದ್ದೆಯಿಂದ ಪದಚ್ಯುತಿ ಗೊಳಿಸಲು ಸಾಧ್ಯವಾಗುವಂತಹ ಮೂರು ಮಸೂದೆಗಳನ್ನು ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್‌ 20ರಂದು ಲೋಕಸಭೆಯಲ್ಲಿ ಮಂಡಿಸಿದ್ದರು. ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025, ಕೇಂದ್ರಾಡಳಿತ ಸರ್ಕಾರ ತಿದ್ದುಪಡಿ ಮಸೂದೆ, ಜಮ್ಮು ಮತ್ತು ಕಾಶ್ಮೀರ ಪುನರ್‌ರಚನೆ ತಿದ್ದುಪಡಿ ಮಸೂದೆ– 2025 ಗಳನ್ನು ಪರಿಶೀಲನೆಗೆ ಜೆಪಿಸಿಗೆ ಒಪ್ಪಿಸಲಾಗಿದೆ ಎಂದು ಶಾ ಹೇಳಿದ್ದರು.
  • ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಸಮಾಜವಾದಿ ಪಾರ್ಟಿ (ಎಸ್‌ಪಿ), ಎಎಪಿ ಮತ್ತು ಶಿವಸೇನಾ (ಯುಬಿಟಿ) ಪಕ್ಷಗಳು ಜೆಪಿಸಿ ಸೇರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿವೆ. ಈ ಮಸೂದೆ ‘ರಾಜಕೀಯ ಅಸ್ತ್ರ’ವಾಗಿ ಬಳಕೆಯಾಗಬಹುದು ಎಂಬುದು ಈ ಪಕ್ಷಗಳ ಆರೋಪ.
  • ಜೆಪಿಸಿ ಸೇರುವ ಕುರಿತು ಕಾಂಗ್ರೆಸ್ ಪಕ್ಷ ಇದುವರೆಗೂ ಲೋಕಸಭಾ ಸಚಿವಾಲಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಮಿತಿ ಸೇರುವ ಬಗ್ಗೆ ಪಕ್ಷದೊಳಗೆ ಹಾಗೂ ‘ಇಂಡಿಯಾ’ ಮೈತ್ರಿಕೂಟ ದಲ್ಲಿ ಭಿನ್ನಾಭಿಪ್ರಾಯ ಇದೆ. ತನ್ನ ನಿರ್ಧಾರವನ್ನು ಇನ್ನೂ ಬಹಿರಂಗಪಡಿಸ ದಿರುವ ಆರ್‌ಜೆಡಿಗೆ ಕೂಡ ಸಮಿತಿಗೆ ಸೇರುವ ಇಷ್ಟವಿಲ್ಲ.

ಸಾಮಾನ್ಯ ಅಧ್ಯಯನ 3: ಎ.ಐ ನಗರ

ಬಿಡದಿಯಲ್ಲಿ ದೇಶದ ಮೊದಲ ಎ.ಐ ನಗರ

ಸಂದರ್ಭ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಬಿಡದಿಯಲ್ಲಿ ನಿರ್ಮಾಣವಾಗಲಿರುವ ಬಿಡದಿ ಸಮಗ್ರ ಉಪನಗರ ಯೋಜನೆ ಅಡಿ ‘ಕೆಲಸ, ವಾಸ, ಉಲ್ಲಾಸ’ ಪರಿಕಲ್ಪನೆ ಅಡಿ ದೇಶದಲ್ಲೇ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ನಗರವನ್ನು ಅಭಿವೃದ್ಧಿಪಡಿಸಲಾಗುವುದು.

  • ಯೋಜನೆಗಾಗಿ ಒಂಬತ್ತು ಗ್ರಾಮಗಳ 8,493 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು. ಭೂಮಿ ಕೊಟ್ಟವರಿಗೆ 2013ರ ಭೂ ಸ್ವಾಧೀನ ಕಾಯ್ದೆ ಅಡಿ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪ್ರತಿ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿವರೆಗೆ ಪರಿಹಾರ ನೀಡಲಾಗುವುದು. ಒಪ್ಪಿಗೆ ಪತ್ರ ಕೊಟ್ಟವರಿಗೆ ಮೂರು ದಿನದಲ್ಲಿ ಪರಿಹಾರದ ಚೆಕ್ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
  • ‘ಪರಿಹಾರದ ಬದಲು ಯೋಜನೆಯ ಸಹಭಾಗಿತ್ವ ಪಡೆಯಲು ಮುಂದೆ ಬರುವ ರೈತರಿಗೆ, ವಸತಿ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ 50:50 ಅನುಪಾತದಲ್ಲಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿ ಪಡಿಸುವ ಪ್ರದೇಶದಲ್ಲಿ 45:55 ಅನುಪಾತದಲ್ಲಿ ನಿವೇಶನ ಒದಗಿಸಲಾಗುವುದು.
  • ಯೋಜನೆಯ ಅಂತಿಮ ಅಧಿಸೂಚನೆ ದಿನಾಂಕದಿಂದ ಪರಿಹಾರ ನೀಡುವುವರೆಗೆ ಹಾಗೂ ಅಭಿವೃದ್ಧಿ ಪಡಿಸಿದ ಜಾಗವನ್ನು ಮಾಲೀಕರಿಗೆ ಹಸ್ತಾಂತರ ಮಾಡುವವರೆಗೆ ಜೀವನೋಪಾಯದ ಬೆಂಬಲಕ್ಕಾಗಿ ಪ್ರತ್ಯೇಕವಾಗಿ ವಾರ್ಷಿಕ ಪರಿಹಾರ ನೀಡಲಾಗುವುದು.
  • ವರ್ಷಕ್ಕೆ ಪ್ರತಿ ಎಕರೆ ಖುಷ್ಕಿ ಜಮೀನಿಗೆ (ಒಣಭೂಮಿ) ₹30 ಸಾವಿರ, ತರಿಗೆ ಜಮೀನಿಗೆ (ಮಳೆ ಅಥವಾ ನೀರಾವರಿಯಿಲ್ಲದೆ ವ್ಯವಸಾಯ ಮಾಡುವ ಭೂಮಿ) ₹40 ಸಾವಿರ, ಭಾಗಾಯ್ತು ಭೂಮಿಗೆ (ನೀರಾವರಿ ಅಥವಾ ಮಳೆಯಾಶ್ರಿತ ತೋಟ) ₹50 ಸಾವಿರ ಹಾಗೂ ಭೂರಹಿತ ಕುಟುಂಬಕ್ಕೆ ₹25 ಸಾವಿರ ನೀಡಲಾಗುವುದು.

ಸಾಮಾನ್ಯ ಅಧ್ಯಯನ 3:

ಶಿಶು ಮರಣ ಪ್ರಮಾಣ ಶೇ 37ರಷ್ಟು ಇಳಿಕೆ

ಸಂದರ್ಭ: ದೇಶದಲ್ಲಿ ಶಿಶುಗಳ ಮರಣ ಪ್ರಮಾಣದಲ್ಲಿ (ಐಎಂಆರ್‌) ಗಣನೀಯ ಇಳಿಕೆ ದಾಖಲಾಗಿದೆ. 2013ಕ್ಕೆ ಹೋಲಿಸಿದರೆ 2023ರಲ್ಲಿ ಶಿಶುಗಳ ಮರಣ ಪ್ರಮಾಣವು ದಾಖಲೆಯ ಶೇ 37ರಷ್ಟು ಕಡಿಮೆಯಾಗಿದೆ.

  • ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಬಿಡುಗಡೆಗೊಳಿಸಿರುವ 2023ರ ಮಾದರಿ ನೋಂದಣಿ ವರದಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ.
  • ಒಂದು ವರ್ಷದಲ್ಲಿ ಜನಿಸಿದ ಪ್ರತಿ ಸಾವಿರ ಮಗುವಿನ ಪೈಕಿ ಮರಣ ಹೊಂದಿದ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿ ಈ ದತ್ತಾಂಶ ನಿಗದಿಪಡಿಸಲಾಗುತ್ತದೆ.
  • 2013ರಲ್ಲಿ ಶೇ 40ಕ್ಕೆ ತಲುಪಿದ್ದ ಶಿಶುಗಳ ಮರಣ ಪ್ರಮಾಣವು 2023ರ ವೇಳೆಗೆ 25ಕ್ಕೆ ಇಳಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
  • ಅಲ್ಲದೇ, 1971ಕ್ಕೆ ಹೋಲಿಸಿದರೆ ಶಿಶುಗಳ ಮರಣ ಪ್ರಮಾಣವು 2023ರ ವೇಳೆಗೆ ಬರೋಬ್ಬರಿ ಶೇ 80ರಷ್ಟು ಇಳಿಕೆಯಾಗಿದೆ. 1971ರಲ್ಲಿ ಶಿಶುಗಳ ಮರಣ ಸಂಖ್ಯೆಯು 129 ಆಗಿತ್ತು ಎಂದೂ ವರದಿ ಉಲ್ಲೇಖಿಸಿದೆ. 

ಪ್ರಚಲಿತ ವಿದ್ಯಮಾನಗಳು: 4ನೇ ಸೆಪ್ಟೆಂಬರ್ 2025

  • ಜಿಎಸ್ಟಿ ಕಡಿತ: ದಸರಾ ಉಡುಗೊರೆ

ಸಂದರ್ಭ: ಹೇರ್‌ ಆಯಿಲ್‌ನಿಂದ ಸೇರಿದಂತೆ ಕಾರ್ನ್‌ಫ್ಲೇಕ್ಸ್‌, ಟಿವಿ ಸೆಟ್‌ಗಳಿಂದ ಹಿಡಿದು ಆರೋಗ್ಯ ಮತ್ತು ಜೀವ ವಿಮೆ ಪಾಲಿಸಿ ವರೆಗಿನ ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ತೆಗೆದುಕೊಂಡಿದೆ.

  • ಅವಧಿ ವಿಮೆ, ಯುಲಿಪ್‌ ಅಥವಾ ಎಂಡೋಮೆಂಟ್ ಪಾಲಿಸಿ ಸೇರಿ ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಮ್‌ಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
  • ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳು, ಹಿರಿಯ ನಾಗರಿಕರ ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಂಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. 2017ರಲ್ಲಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ವಿಮಾ ಉತ್ಪನ್ನಗಳ ಪ್ರೀಮಿಯಂ ಮೇಲೆ ಶೇ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು.
  • ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ನೀಡಿದೆ.
  • ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್‌ 22ರಿಂದ ಜಾರಿಗೆ ಬರಲಿದೆ. ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.
  • ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ವಿವರಣೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಜಿಎಸ್‌ಟಿ ದರ ಪರಿಷ್ಕರಣೆ ಕುರಿತಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಯಾವ ರಾಜ್ಯವೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ’ ಎಂದರು.
  • ‘ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಪರಿಷ್ಕರಿಸಿ, ಕೇವಲ ಶೇ 5 ಹಾಗೂ ಶೇ 18ರಂತೆ ಎರಡು ಹಂತಗಳ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಹೈಎಂಡ್‌ ಕಾರುಗಳು, ತಂಬಾಕು ಹಾಗೂ ಸಿಗರೇಟ್‌ಗಳು ಸೇರಿ ಕೆಲ ಐಷಾರಾಮಿ ವಸ್ತುಗಳ ಮೇಲೆ ವಿಶೇಷ ಶೇ 40ರಷ್ಟು ಜಿಎಸ್‌ಟಿ ವಿಧಿಸಲು ಮಂಡಳಿ ಅನುಮೋದಿಸಿದೆ’ ಎಂದು ವಿವರಿಸಿದರು.
  • ‘ಗುಟ್ಕಾ, ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಹಾಗೂ ಸಿಗರೇಟ್‌ ಹೊರತುಪಡಿಸಿ, ಉಳಿದ ಎಲ್ಲ ವಸ್ತುಗಳ ಮೇಲಿನ ಹೊಸ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.
  • ಜಿಎಸ್‌ಟಿ ವ್ಯವಸ್ಥೆಯ ಸರಳೀಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಅಂಗವಾಗಿ ಮಾಡಿದ ಭಾಷಣದಲ್ಲಿ ಘೋಷಿಸಿದ್ದರು. ಅಲ್ಲದೇ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿರುವ ಸಂದರ್ಭದಲ್ಲಿಯೇ ಈ ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆ ತಂದಿl 1,200 ಸಿ.ಸಿಗಿಂತ ಅಧಿಕ ಸಾಮರ್ಥ್ಯದ ಹಾಗೂ 4 ಸಾವಿರ ಎಂ.ಎಂ ಉದ್ದದ ಎಲ್ಲ ಆಟೊಮೊಬೈಲ್‌ಗಳು, 350 ಸಿ.ಸಿಗಿಂತ ಹೆಚ್ಚು ಸಾಮರ್ಥ್ಯದ ಮೋಟರ್‌ ಸೈಕಲ್‌ಗಳು, ಯಾಚ್‌ಗಳು, ವೈಯಕ್ತಿಕ ಬಳಕೆಯ ಏರ್‌ಕ್ರಾಫ್ಟ್‌ಗಳು, ರೇಸಿಂಗ್‌ ಕಾರುಗಳ ಮೇಲೆ ಶೇ 40ರಷ್ಟು ತೆರಿಗೆ.
  • l 1,200 ಸಿ.ಸಿಗಿಂತ ಅಧಿಕ ಸಾಮರ್ಥ್ಯದ ಹಾಗೂ 4 ಸಾವಿರ ಎಂ.ಎಂ ಉದ್ದದ ಎಲ್ಲ ಆಟೊಮೊಬೈಲ್ಗಳು, 350 ಸಿ.ಸಿಗಿಂತ ಹೆಚ್ಚು ಸಾಮರ್ಥ್ಯದ ಮೋಟರ್ಸೈಕಲ್ಗಳು, ಯಾಚ್ಗಳು, ವೈಯಕ್ತಿಕ ಬಳಕೆಯ ಏರ್ಕ್ರಾಫ್ಟ್ಗಳು, ರೇಸಿಂಗ್ಕಾರುಗಳ ಮೇಲೆ ಶೇ 40ರಷ್ಟು ತೆರಿಗೆ.
  • l ಎಲ್ಲ .ವಿಗಳ ಮೇಲೆ ಈಗ ಇರುವ ಶೇ 5ರಷ್ಟು ಜಿಎಸ್ಟಿ ಮುಂದುವರಿಕೆ.

  • ಎಫ್ಡಿಐ: ಕರ್ನಾಟಕಕ್ಕೆ ಹೆಚ್ಚು

ಸಂದರ್ಭ: ಜೂನ್‌ ತ್ರೈಮಾಸಿಕದಲ್ಲಿ ದೇಶದಲ್ಲಿನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರಮಾಣ ಶೇ 15ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  • ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹1.42 ಲಕ್ಷ ಕೋಟಿ ವಿದೇಶಿ ನೇರ ಹೂಡಿಕೆ ಆಗಿತ್ತು. ಈ ಬಾರಿ ಇದು ₹1.63 ಲಕ್ಷ ಕೋಟಿ ಆಗಿದೆ. ಇದು ಮಾರ್ಚ್ ತ್ರೈಮಾಸಿಕದಲ್ಲಿ ₹82,210 ಕೋಟಿಯಷ್ಟಾಗಿತ್ತು.
  • ಈಕ್ವಿಟಿ ಒಳಹರಿವು, ಗಳಿಕೆಯ ಮರುಹೂಡಿಕೆ ಮತ್ತು ಇತರೆ ಬಂಡವಾಳ ಹೂಡಿಕೆಯು ಹೆಚ್ಚಳವಾಗಿದ್ದು, ಒಟ್ಟು ಹೂಡಿಕೆ ₹2.21 ಲಕ್ಷ ಕೋಟಿಯಾಗಿದೆ. ಕಳೆದ ಜೂನ್ ತ್ರೈಮಾಸಿಕದಲ್ಲಿ ₹1.98 ಲಕ್ಷ ಕೋಟಿಯಾಗಿತ್ತು.
  • ಕರ್ನಾಟಕ ಮುಂಚೂಣಿ: ರಾಜ್ಯಗಳು ಸ್ವೀಕರಿಸಿದ ವಿದೇಶಿ ಬಂಡವಾಳ ಪಟ್ಟಿಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದು, ₹50,094 ಕೋಟಿ ಸ್ವೀಕರಿಸಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ (₹47,188 ಕೋಟಿ), ತಮಿಳುನಾಡು (₹23,505 ಕೋಟಿ), ಹರಿಯಾಣ (₹11,444 ಕೋಟಿ), ಗುಜರಾತ್ (₹10,564 ಕೋಟಿ), ದೆಹಲಿ (₹8,803 ಕೋಟಿ) ಮತ್ತು ತೆಲಂಗಾಣ (₹3,477 ಕೋಟಿ) ಇವೆ.
  • ಇದೇ ಅವಧಿಯಲ್ಲಿ ಅಮೆರಿಕದ ಹೂಡಿಕೆಯ ಪ್ರಮಾಣದಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದ ದೇಶ ಅಮೆರಿಕ. ಒಟ್ಟು ₹49,379 ಕೋಟಿ ಹೂಡಿಕೆ ಈ ತ್ರೈಮಾಸಿಕದಲ್ಲಿ ಅಮೆರಿಕದಿಂದ ಆಗಿದೆ. ಕಳೆದ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹13,205 ಕೋಟಿ ಬಂಡವಾಳ ಒಳಹರಿವಾಗಿತ್ತು.
  • ಜೂನ್‌ ತ್ರೈಮಾಸಿಕದಲ್ಲಿ ಹೂಡಿಕೆ ಮಾಡಿದ ದೇಶಗಳ ಪೈಕಿ ಸಿಂಗಪುರ, ಮಾರಿಷಸ್, ಸೈಪ್ರಸ್, ಯುಎಇ, ಕೇಮನ್ ಐಸ್‌ಲ್ಯಾಂಡ್, ನೆದರ್ಲೆಂಡ್ಸ್, ಜಪಾನ್‌ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿ ಇವೆ.
  • 2000ದ ಏಪ್ರಿಲ್‌ನಿಂದ 2025ರ ವರೆಗೆ ಅಮೆರಿಕ ₹6.71 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಮೂರನೇ ಅತಿಹೆಚ್ಚು ಎಫ್‌ಡಿಐ ಹೂಡಿಕೆ ಮಾಡಿದ ದೇಶವಾಗಿದೆ. ಮಾರಿಷಸ್‌ ₹16.04 ಲಕ್ಷ ಕೋಟಿ ಹೂಡಿಕೆ ಮಾಡಿದ್ದು, ಅತಿ ಹೆಚ್ಚು ಹೂಡಿಕೆ ಮಾಡಿದ ದೇಶವಾಗಿದೆ. ಸಿಂಗಪುರ ಎರಡನೇ ಸ್ಥಾನದಲ್ಲಿದ್ದು, ₹15.80 ಲಕ್ಷ ಕೋಟಿಯಾಗಿದೆ.
  • ಕಂಪ್ಯೂಟರ್‌ ಯಂತ್ರಾಂಶ ಹಾಗೂ ತಂತ್ರಾಂಶ, ಸೇವೆಗಳು, ವ್ಯಾಪಾರ, ದೂರಸಂಪರ್ಕ, ವಾಹನೋದ್ಯಮ, ರಾಸಾಯನಿಕ ವಲಯಗಳು ಹೆಚ್ಚು ಹೂಡಿಕೆ ಸ್ವೀಕರಿಸಿವೆ ಎಂದು ತಿಳಿಸಿದೆ.
  • ಸೇವಾ ವಲಯದ ಪ್ರಗತಿ 15 ವರ್ಷದ ಗರಿಷ್ಠ

ಸಂದರ್ಭ: ದೇಶದ ಸೇವಾ ವಲಯದ ಬೆಳವಣಿಗೆ ಆಗಸ್ಟ್‌ ತಿಂಗಳಿನಲ್ಲಿ 15 ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ ದಾಖಲಿಸಿದೆ ಎಂದು ಮಾಸಿಕ ಸಮೀಕ್ಷೆಯೊಂದು ತಿಳಿಸಿದೆ.

  • ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಜುಲೈನಲ್ಲಿ 60.5 ದಾಖಲಾಗಿತ್ತು. ಆಗಸ್ಟ್‌ನಲ್ಲಿ 62.9ಕ್ಕೆ ಹೆಚ್ಚಳ ಕಂಡಿದೆ. ಹೊಸ ಕಾರ್ಯಾದೇಶ ಮತ್ತು ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದೇ ಸೂಚ್ಯಂಕ ಏರಿಕೆಗೆ ಕಾರಣ ಎನ್ನಲಾಗಿದೆ.
  • ಪಿಎಂಐ ಮಾನದಂಡಗಳ ಪ್ರಕಾರ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಪರಿಗಣಿಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತವೆಂದು ಕಾಣಲಾಗುತ್ತದೆ.
  • ‘ರಫ್ತು ಹೆಚ್ಚಳಗೊಂಡಿದ್ದರಿಂದ ಒಟ್ಟಾರೆ ಮಾರಾಟ ಏರಿಕೆ ಕಂಡಿದೆ. ಏಷ್ಯಾ, ಯುರೋಪ್‌, ಪಶ್ಚಿಮ ಏಷ್ಯಾ ಮತ್ತು ಅಮೆರಿಕದಿಂದ ವಲಯಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ’ ಎಂದು ಎಚ್ಎಸ್‌ಬಿಸಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್‌ ಭಂಡಾರಿ ಹೇಳಿದ್ದಾರೆ.
  • ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಮಾರಾಟದಿಂದ ದೇಶದ ಸೇವಾ ವಲಯದ ಕಂಪನಿಗಳು ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಳ್ಳಲು ಮುಂದಾದವು. ಇದರಿಂದ ಕಾರ್ಮಿಕರ ವೆಚ್ಚ ಹೆಚ್ಚಳವಾಯಿತು. ಪರಿಣಾಮವಾಗಿ ತಯಾರಿಕೆ ಮತ್ತು ಉತ್ಪಾದನಾ ದರ ಏರಿಕೆಯಾಯಿತು ಎಂದು ತಿಳಿಸಿದ್ದಾರೆ.
  • ಭಾರತಜರ್ಮನಿ ಸಹಕಾರ ವೃದ್ಧಿ ಅನಿವಾರ್ಯ: ಜೈಶಂಕರ್

ಸಂದರ್ಭ: ಜಾಗತಿಕ ಆರ್ಥಿಕತೆ ಹಾಗೂ ಭೌಗೋಳಿಕ ರಾಜಕೀಯ ಸನ್ನಿವೇಶಗಳಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು ಭಾರತ ಮತ್ತು ಜರ್ಮನಿಯು ತಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿಕೊಂಡು ಕಾರ್ಯಪ್ರವೃತ್ತವಾಗಬೇಕಾದ ಅನಿವಾರ್ಯವನ್ನು ಸೃಷ್ಟಿಸಿವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

  • ಜರ್ಮನಿ ವಿದೇಶಾಂಗ ಸಚಿವ ಜೋಹನ್‌ ವಡೆಫುಲ್‌ ಅವರೊಂದಿಗಿನ ಮಾತುಕತೆ ಬಳಿಕ ಜೈಶಂಕರ್‌ ಈ ಹೇಳಿಕೆ ನೀಡಿದ್ದಾರೆ.
  • ‘ವ್ಯಾಪಾರ, ರಕ್ಷಣೆ, ಸೆಮಿಕಂಡಕ್ಟರ್‌ ಉತ್ಪಾದನೆ, ತಂತ್ರಜ್ಞಾನ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಹಕಾರ ವೃದ್ಧಿಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇವೆ. ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆದು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಜೈಶಂಕರ್ ತಿಳಿಸಿದ್ದಾರೆ.
  • ನಿರ್ಣಾಯಕ ಖನಿಜಗಳ ಪುನರ್ಬಳಕೆಗೆ ₹1500 ಕೋಟಿ

ಸಂದರ್ಭ: ದೇಶದಲ್ಲಿ ನಿರ್ಣಾಯಕ ಖನಿಜಗಳ ಮರು ಬಳಕೆ ಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ₹1,500 ಕೋಟಿ ಮೊತ್ತದ ಪ್ರೋತ್ಸಾಹಕ ಯೋಜನೆಗೆ ಒಪ್ಪಿಗೆ ನೀಡಿದೆ.

  • ದ್ವಿತೀಯ ಮೂಲಗಳಿಂದ ನಿರ್ಣಾಯಕ ಖನಿಜಗಳ ಉತ್ಪಾದನೆ ಮತ್ತು ಪ್ರತ್ಯೇಕಗೊಳಿಸುವ ಮರು ಬಳಕೆಯ ಸಾಮರ್ಥ್ಯವನ್ನು ವೃದ್ಧಿ ಮಾಡುವ ಗುರಿಯನ್ನು ಈ ಯೋಜನೆಯು ಹೊಂದಿದೆ.
  • ಇ–ತ್ಯಾಜ್ಯ, ಲಿಥಿಯಂ ಇಯಾನ್ ಬ್ಯಾಟರಿ ತುಣುಕುಗಳು (ಎಲ್‌ಐಬಿ) ಮತ್ತು ಅವಧಿ ಮೀರಿದ ವಾಹನಗಳಲ್ಲಿನ ಕ್ಯಾಟಲಿಟಿಕ್‌ (ವೇಗವರ್ಧಕ/ಉತ್ಪ್ರೇರಕಗಳು) ತ್ಯಾಜ್ಯ ಸೇರಿ ವಿವಿಧ ಮೂಲಗಳಿಂದ ಮರು ಬಳಕೆ ಮಾಡುವ ಉದ್ದೇಶದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು

ಪ್ರಚಲಿತ ವಿದ್ಯಮಾನಗಳು: 3ನೇ ಸೆಪ್ಟೆಂಬರ್ 2025

ಸಾಮಾನ್ಯ ಅಧ್ಯಯನ 2: ನಗರ ಆಡಳಿತ

ಮುನ್ಸಿಪಲ್‌ ಬೋರ್ಡ್‌ನಿಂದ ನಗರ ಪಾಲಿಕೆವರೆಗೆ..

ಸಂದರ್ಭ: ನಗರದ ಆಡಳಿತ 1862ರಲ್ಲಿ 18 ಸದಸ್ಯರಿಂದ ಆರಂಭವಾಗಿ, 2010ರಲ್ಲಿ 198 ಕಾರ್ಪೊರೇಟರ್‌ಗಳನ್ನು ಹೊಂದುವವರೆಗೂ ನಾಲ್ಕು ಬಾರಿ ತನ್ನ ‘ಆಡಳಿತ ವಿನ್ಯಾಸ’ವನ್ನು ಬದಲಿಸಿಕೊಂಡಿದೆ.

  • ನಗರ ಆಡಳಿತಕ್ಕೇ ಪ್ರತ್ಯೇಕವಾದ ಬೋರ್ಡ್‌ ರಚನೆಯಾಗಿ 142 ವರ್ಷಗಳಾಗುತ್ತಿದ್ದು, ಎರಡು ಮುನ್ಸಿಪಲ್‌ ಬೋರ್ಡ್‌ನಿಂದ ಆರಂಭವಾಗಿ, 198 ವಾರ್ಡ್‌ಗಳ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ, ಇದೀಗ ಐದು ನಗರ ಪಾಲಿಕೆಗಳಿಗೆ ನಗರದ ಆಡಳಿತ ಹಂಚಿಕೆಯಾಗಿದೆ.
  • 1862ರ ಮಾರ್ಚ್‌ 27ರಂದು ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು. ಬ್ರಿಟನ್‌ ಮಾದರಿಯಲ್ಲಿ ಅಂದಿನ ಮೈಸೂರಿನ ಆಯುಕ್ತ ಬೌರಿಂಗ್ ಅವರು 1850 ಕಾಯ್ದೆಯನ್ವಯ ಬೆಂಗಳೂರಿನಲ್ಲಿ ಮುನ್ಸಿಪಲ್ ಬೋರ್ಡ್ ರಚಿಸಿದರು. ನಾಲ್ಕು ತಿಂಗಳ ನಂತರ 1862ರ ಆಗಸ್ಟ್ 1ರಂದು ಬೆಂಗಳೂರು ಮುನ್ಸಿಪಲ್ ಬೋರ್ಡ್ ಹಾಗೂ ಮುನ್ಸಿಪಲ್ ಕಂಟೋನ್ಮೆಂಟ್ ಬೋರ್ಡ್ (ದಂಡುಪ್ರದೇಶ) ಎಂದು ರಚಿಸಲಾಯಿತು.
  • ಮುನ್ಸಿಪಲ್‌ ಬೋರ್ಡ್‌ನಲ್ಲಿ ಒಂಬತ್ತು ಅಧಿಕಾರಿಗಳನ್ನು ಸರ್ಕಾರ ನಾಮನಿರ್ದೇಶನ ಮಾಡಿತ್ತು. ದಂಡು ಪ್ರದೇಶ ಬೋರ್ಡ್‌ನಲ್ಲಿ ತಲಾ ಆರು ಅಧಿಕಾರಿಗಳು ಹಾಗೂ ಸೈನ್ಯಾಧಿಕಾರಿಗಳು ಸದಸ್ಯರಾಗಿದ್ದರು. ಎರಡೂ ಬೋರ್ಡ್‌ಗಳು ಪ್ರತ್ಯೇಕವಾಗಿ ತಮ್ಮ ವ್ಯಾಪ್ತಿಯಲ್ಲಿ ನೈರ್ಮಲ್ಯ, ತೆರಿಗೆ, ಪೊಲೀಸ್ ಹಾಗೂ ಲೆಕ್ಕಪತ್ರದ ನಿರ್ವಹಣೆ ಮಾಡುತ್ತಿದ್ದವು.
  • ಎರಡು ಬೋರ್ಡ್‌ಗಳಿಗೆ 1883ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದು, 18 ಸದಸ್ಯರು ಚುನಾಯಿತರಾದರು. ಅಧಿಕಾರಿಗಳೇ ಕಾರ್ಯ ನಿಯಂತ್ರಣ ಹೊಂದಿದ್ದರು. ಬೆಂಗಳೂರು ಮುನ್ಸಿಪಲ್ ಬೋರ್ಡ್‌ಗೆ 1897ರಲ್ಲಿ ಸರ್ಕಾರದ ಪ್ರತಿನಿಧಿಯಾದ ಅರ್ಕಾಡ್ ಶ್ರೀನಿವಾಸ ಚಾರ್ಯ ಮೊದಲ ಅಧ್ಯಕ್ಷರಾದರು. ಅಧಿಕಾರೇತರ ಸದಸ್ಯರಾದ ಪುಟ್ಟಣ್ಣಶೆಟ್ಟಿ ಅವರು 1913ರಲ್ಲಿ ಅಧ್ಯಕ್ಷರಾದರು. ಮುನ್ಸಿಪಲ್ ಕಂಟೋನ್ಮೆಂಟ್ ಬೋರ್ಡ್‌ನಲ್ಲಿ ಅಧಿಕಾರಿಗಳೇ ಇದ್ದರು.
  • ದಂಡುಪ್ರದೇಶ ಹಾಗೂ ಬೆಂಗಳೂರು ಮುನ್ಸಿಪಲ್ ಬೋರ್ಡ್‌ಗಳನ್ನು 1949ರಲ್ಲಿ ಸಿಟಿ ಕಾರ್ಪೊರೇಷನ್ ಕಾಯ್ದೆಯನ್ವಯ ವಿಲೀನಗೊಳಿಸಿ, ‘ಬೆಂಗಳೂರು ಸಿಟಿ ಕಾರ್ಪೊರೇಷನ್’ (ಬೆಂಗಳೂರು ನಗರ ಸಭೆ– ಬಿಸಿಸಿ) ಎಂದು ಹೆಸರಿಸಲಾಯಿತು. ಆರ್. ಸುಬ್ಬಣ್ಣ ಪ್ರಥಮ ಮೇಯರ್ ಹಾಗೂ ವಿ.ಪಿ. ದೀನದಯಾಳು ನಾಯ್ಡು ಪ್ರಥಮ ಉಪಮೇಯರ್ ಆದರು. 1951ರಲ್ಲಿ ಬಿಸಿಸಿಗೆ ಚುನಾವಣೆ ನಡೆದು, 69 ಸದಸ್ಯರು ಆಯ್ಕೆಯಾದರು. ಆರು ಜನರು ನಾಮಕರಣ ಸದಸ್ಯರಿದ್ದರು. ಐದು ಸ್ಥಾಯಿ ಸಮಿತಿಗಳೂ ಅಸ್ತಿತ್ವಕ್ಕೆ ಬಂದವು.
  • 1971ರ ಚುನಾವಣೆ ವರೆಗೂ ಬೆಂಗಳೂರು ನಗರ ಸಭೆಯ ಒಟ್ಟಾರೆ ಸದಸ್ಯರ ಸಂಖ್ಯೆ 75 (ನಾಮಕರಣ ಸದಸ್ಯರು ಸೇರಿ) ಆಗಿತ್ತು. 1983ರಲ್ಲಿ 87 ವಾರ್ಡ್‌ಗಳನ್ನಾಗಿ ವಿಂಗಡಿಸಲಾಯಿತು. 1996ರಲ್ಲಿ 100 ವಾರ್ಡ್‌ಗಳಿಗೆ ವಿಸ್ತರಣೆ ಮಾಡಿ, ‘ಬೆಂಗಳೂರು ಮಹಾನಗರ ಪಾಲಿಕೆ’ (ಬಿಎಂಪಿ) ಅಸ್ತಿತ್ವಕ್ಕೆ ಬಂದಿತು. 2007ರಲ್ಲಿ ನಗರದ ಸುತ್ತಮತ್ತಲಿನ ಏಳು ನಗರ ಸಭೆ ಹಾಗೂ ಒಂದು ಪುರಸಭೆ ಮತ್ತು 110 ಹಳ್ಳಿಗಳು ಸೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ (ಬಿಬಿಎಂಪಿ) ರಚಿಸಿ, 198 ವಾರ್ಡ್‌ಗಳನ್ನು ವಿಂಗಡಿಸಲಾಯಿತು. 2010ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದಿತ್ತು.
  • 2020 ಸೆಪ್ಟೆಂಬರ್ 10ರಂದು ಕೌನ್ಸಿಲ್ಅವಧಿ ಮುಕ್ತಾಯಗೊಂಡಿತ್ತು. 2022ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 243 ವಾರ್ಡ್‌ಗಳನ್ನು ಸರ್ಕಾರ ರಚಿಸಿತ್ತು. 2023ರ ಆಗಸ್ಟ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 225 ವಾರ್ಡ್‌ಗಳಿಗೆ ಮರು ವಿಂಗಡಣೆ ಮಾಡಲಾಗಿತ್ತು. 2025ರ ಸೆಪ್ಟೆಂಬರ್‌ 2ರಂದು ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು, ಅದೇ ವ್ಯಾಪ್ತಿಯಲ್ಲಿ ‘ಗ್ರೇಟರ್‌ ಬೆಂಗಳೂರು’ ಅಸ್ತಿತ್ವ ಕಂಡುಕೊಂಡು, ಐದು ನಗರ ಪಾಲಿಕೆಗಳೂ ರಚನೆಯಾಗಿವೆ.

ಮೆಯೊಹಾಲ್‌ನಿಂದ ಕೆಂಪೇಗೌಡ ಪೌರ ಸಭಾಂಗಣ

  • ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮೆಯೊ ಹಾಲ್‌ನಲ್ಲಿ 1996ರವರೆಗೆ ಕಾರ್ಪೊರೇಟರ್‌ಗಳ ಸಭೆ ನಡೆಯುತ್ತಿತ್ತು. ಎನ್.ಆರ್. ಚೌಕದಲ್ಲಿ 1996ರಲ್ಲಿ ಕೆಂಪೇಗೌಡ ಸಭಾಂಗಣ ನಿರ್ಮಾಣವಾದ ಮೇಲೆ ಅಂದಿನಿಂದ ಪಾಲಿಕೆಯ ಸಭೆ ಅಲ್ಲಿ ನಡೆಯುತ್ತಿತ್ತು. ಆಡಳಿತ ಯಂತ್ರದ ಕೇಂದ್ರ ಸ್ಥಾನವೂ ಅದೇ ಆವರಣದಲ್ಲಿತ್ತು.
  • 1949ರಿಂದ 1994ರವರೆಗೆ ಬೆಂಗಳೂರು ನಗರ ಸಭೆಯಲ್ಲಿ 33 ಮೇಯರ್‌ಗಳಿದ್ದರು. 1996ರಿಂದ 2006ವರೆಗೆ 10 ಮೇಯರ್‌ಗಳು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿದ್ದರು. 2010ರಿಂದ 2020ರವರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ 10 ಮೇಯರ್‌ಗಳನ್ನು ಕಂಡಿದೆ.
  • 1967ರಿಂದ 1990ರವರೆಗಿನ ಬೆಂಗಳೂರು ನಗರ ಸಭೆಯಲ್ಲಿ 17 ಆಡಳಿತಾಧಿಕಾರಿಗಳು ವಿವಿಧ ಅವಧಿಯಲ್ಲಿದ್ದರು. 1995ರಿಂದ 1996ರವರೆಗಿನ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಆರು ಮಂದಿ ಆಡಳಿತಾಧಿಕಾರಿ, 2006ರಿಂದ 2025ರವರೆಗಿನ ಬಿಬಿಎಂಪಿ ಅವಧಿಯಲ್ಲಿ ಏಳು ಮಂದಿ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. 2020ರಿಂದ ಬಿಬಿಎಂಪಿಯಲ್ಲಿ ಅಧಿಕಾರಿಗಳ ಆಡಳಿತವೇ ಇತ್ತು. ಇದೀಗ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಆಡಳಿತ ಆರಂಭವಾಗಿದೆ.

‘ಇಂದಿನಿಂದಲೇ ಪಾಲಿಕೆಗಳಿಗೆ ತೆರಿಗೆ ಹಣ’

  • ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಗರ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆ: ಡಿಸಿಎಂ ಡಿ.ಕೆ. ಶಿವಕುಮಾರ್‌
  • ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಗ್ರಹ ವಾಗುವ ತೆರಿಗೆ ಹಣ ಆಯಾ ಪಾಲಿಕೆಗಳಿಗೆ ಬುಧವಾರದಿಂದಲೇ ಸಂದಾ ಯವಾಗಲಿದೆ. ಜಿಬಿಎ ಅಥವಾ ರಾಜ್ಯ ಸರ್ಕಾರಕ್ಕೆ ಬರುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
  • ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗುವುದಿಲ್ಲ. ಪಾಲಿಕೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಮುಂದೆ ಜಿಬಿಎ ಮೂಲಕ ದೊಡ್ಡ ಯೋಜನೆಗಳ ಜಾರಿ, ಉತ್ತಮ ಆಡಳಿತ, ಸೇವೆಗೆ ಮೀಸಲಾಗಿರಲಿದೆ. ಸರ್ಕಾರದಿಂದ ಬಂದ ಹಣ ಜಿಬಿಎ ಹಾಗೂ ಪಾಲಿಕೆಗಳಿಗೆ ಹೋಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಚುನಾವಣೆ ನಡೆಯಲಿದೆ’ ಎಂದು ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದರು.
  • ನಗರದ ಜನಸಂಖ್ಯೆ 1.44 ಕೋಟಿ ಎಂದು ಅಂದಾಜಿಸಲಾಗಿದೆ. 2011 ಜನಗಣತಿ ಪ್ರಕಾರ, ವಾರ್ಡ್ನಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಈಗ 35-40 ಸಾವಿರ ಸರಾಸರಿಯಲ್ಲಿ ವಾರ್ಡ್ ರಚನೆ ಮಾಡಲಾಗುವುದುಎಂದು ವಿವರಿಸಿದರು.
  • ‘ಮುಂದಿನ ದಿನಗಳಲ್ಲಿ ಪೂರ್ವ, ಪಶ್ಚಿಮ, ಉತ್ತರ ದಕ್ಷಿಣ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಲು ಅವಕಾಶ ಕಲ್ಪಿಸಿದ್ದೇವೆ. ಕಾನೂನಿಗೆ ತೊಡಕಾಗಬಾರದು ಎಂಬ ಉದ್ದೇಶ ದಿಂದ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಆಯಾ ಪಾಲಿಕೆಗಳು ಸರ್ಕಾರವನ್ನು ವಿಶ್ವಾಸಕ್ಕೆ ಪಡೆದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಿವೆ. ಈಗ ಹಾಲಿ ಇದ್ದ ಪಾಲಿಕೆ ವ್ಯಾಪ್ತಿಗೆ ಜಿಬಿಎ ರಚಿಸಿ, ಐದು ಪಾಲಿಕೆ ಮಾಡಿದ್ದೇವೆ. ಆನೇಕಲ್ ಕ್ಷೇತ್ರಕ್ಕೆ ಸೇರಿದ್ದ ಒಂದು ವಾರ್ಡ್ ಬಿಟ್ಟುಹೋಗಿತ್ತು. ಈಗ ಅದನ್ನು ಸರಿಪಡಿಸಿದ್ದೇವೆ’ ಎಂದು ಹೇಳಿದರು.
  • ಐತಿಹಾಸಿಕ ದಿನ:’ ‘ಬೆಂಗಳೂರಿನ ಪಾಲಿಗೆ ಇದೊಂದು ಐತಿಹಾಸಿಕ ದಿನ. ಅಧಿಕಾರ ವಿಕೇಂದ್ರೀಕರಣಗೊಳಿಸುವ ರಾಜೀವ್ ಗಾಂಧಿ ಅವರ ಆಶಯದಂತೆ ಸಂವಿಧಾನದ 74ನೇ ತಿದ್ದುಪಡಿಯನ್ನು ಪಾಲಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲಾಗಿದೆ. 1993ರ ಜೂನ್ 1ರಂದು ಕರ್ನಾಟಕದಲ್ಲಿ 74ನೇ ತಿದ್ದುಪಡಿ ಜಾರಿಗೆ ಬಂದಿತು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
  • ‘ಪೂರ್ವ ನಗರ ಪಾಲಿಕೆಯ ಆದಾಯ ಪೂರ್ವ ಪಾಲಿಕೆಗೇ ಸೀಮಿತ ವಾಗಲಿದೆ. ಪಶ್ಚಿಮ ನಗರ ಪಾಲಿಕೆ ಆದಾಯ ಕಡಿಮೆ ಇದ್ದಾಗ ಸರ್ಕಾರ ಅವರಿಗೆ ನೆರವು ನೀಡಬೇಕು. ನಾವು ಪೂರ್ವದ ಹಣವನ್ನು ಪಶ್ಚಿಮದ ಪಾಲಿಕೆಗೆ ನೀಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾಗಿರಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
  • ‘ಉತ್ತಮ ಆಡಳಿತ, ಸೇವೆ ನೀಡ ಬೇಕು, ಸಂವಿಧಾನ ರಕ್ಷಣೆ ಮಾಡಬೇಕು. ಈ ಹಿಂದೆ ನಗರದ ಸಣ್ಣಪುಟ್ಟ ವಿಚಾರಕ್ಕೂ ಬೆಂಗಳೂರು ಆಯುಕ್ತರಿಗೆ ಕರೆ ಮಾಡಬೇಕಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಜಿಬಿಎ ಅಧಿಕಾರಿಗಳು ನಗರದ ದೊಡ್ಡ ಯೋಜನೆಗಳ ಜವಾಬ್ದಾರಿ ಮಾತ್ರ ನಿಭಾಯಿಸುತ್ತಾರೆ. ಸುರಂಗ ರಸ್ತೆ ಸೇರಿದಂತೆ ಬೇರೆ ಬೇರೆ ಪಾಲಿಕೆಗಳ ಮೂಲಕ ಹಾದುಹೋಗುವ ದೊಡ್ಡ ದೊಡ್ಡ ಯೋಜನೆ ನೋಡಿಕೊಳ್ಳುತ್ತಾರೆ. ಆಯಾ ಪಾಲಿಕೆಗೆ ನಿಯೋಜನೆಯಾಗಿರುವ ಆಯುಕ್ತರು ಹೊಣೆಗಾರಿಕೆ ಹೊಂದಿರುತ್ತಾರೆ ’ ಎಂದರು.

ಗ್ರೇಟರ್‌ ಬೆಂಗಳೂರು ರಚನೆ ಹಾದಿ…

  • ‘2007ರ ಜನವರಿ 16ರಂದು 198 ವಾರ್ಡ್‌ಗಳೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿತ್ತು. 2024ರ ಸೆಪ್ಟೆಂಬರ್‌ 22ರಂದು ಬಿ.ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಬೆಂಗಳೂರಿನಲ್ಲಿ ಉತ್ತಮ ಆಡಳಿತ ನೀಡುವ ಬಗ್ಗೆ ಅಧ್ಯಯನ ನಡೆಸಲಾಯಿತು. ಈ ಸಮಿತಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಧ್ಯಯನ ಮಾಡಿ ಒಂಬತ್ತು ವರದಿಗಳನ್ನು ಸಲ್ಲಿಸಿತ್ತು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
  • ‘2015ರಲ್ಲಿ ಬೆಂಗಳೂರಿನಲ್ಲಿ ಮೂರು ಪಾಲಿಕೆಗಳನ್ನು ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಿಲಾಗಿತ್ತಾದರೂ ನಂತರ ರಾಜ್ಯ ಸರ್ಕಾರ 2019ರ ಜುಲೈ 26ರಂದು ಅದನ್ನು ಹಿಂಪಡೆಯಿತು’ ಎಂದರು.
  • ‘ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು ತೀರ್ಮಾನಿಸಿ, 2023ರ ಜುಲೈ 18ರಂದು ಬಿ.ಎಸ್ ಪಾಟೀಲ್ ಅವರ ಸಮಿತಿ ರಚಿಸಿದೆವು. ಈ ಸಮಿತಿ 2024ರ ಜುಲೈ 12ರಂದು ವರದಿ ಸಲ್ಲಿಸಿತ್ತು. ಗ್ರೇಟರ್ ಬೆಂಗಳೂರು ಆಡಳಿತ  ಮಸೂದೆ ಸಿದ್ಧಪಡಿಸಿ, ಜುಲೈ 25ರಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. ವಿರೋಧ ಪಕ್ಷಗಳ ಸದಸ್ಯರ ಸಲಹೆ ಮೇರೆಗೆ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ 15 ಸದಸ್ಯರ ಜಂಟಿ ಸದನ ಸಮಿತಿ ರಚಿಸಲಾಯಿತು. ಈ ಸಮಿತಿ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ನೀಡಿದ ವರದಿಯನ್ವಯ, 2025ರ ಮಾರ್ಚ್‌ 10ರಂದು ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ  ಮಂಡಿಸಲಾಯಿತು. ಮಾ.12ರಂದು ವಿಧಾನ ಪರಿಷತ್‌ನಲ್ಲಿ ಚರ್ಚೆ ಮಾಡಿ ಅನುಮೋದನೆ ಪಡೆದು ರಾಜ್ಯಪಾಲರಿಗೆ ಕಳುಹಿಸಲಾಯಿತು. 2025ರ ಏಪ್ರಿಲ್ 23ರಂದು ರಾಜ್ಯಪಾಲರು ಅಂಕಿತ ಹಾಕಿದರು. ಮೇ 15ರಿಂದ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ಬಂದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತು. ಜುಲೈ 19ರಂದು ಐದು ನಗರ ಪಾಲಿಕೆಗಳ ಕರಡು ಅಧಿಸೂಚನೆ ಹೊರಡಿಸಿ, 30 ದಿನಗಳ ಕಾಲಾವಕಾಶ ನೀಡಲಾಯಿತು.  55 ಆಕ್ಷೇಪಣೆಗಳು ಬಂದಿದ್ದವು. ಇದೆಲ್ಲವನ್ನು ಬಗೆಹರಿಸಿ ಐದು ಪಾಲಿಕೆಗಳ ಗಡಿಯ ನಕ್ಷೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆಯಲಾಯಿತು. ಅಂತಿಮ ಅಧಿಸೂಚನೆ ಹೊರಡಿಸಲಾಯಿತು ಎಂದು ಮಾಹಿತಿ ನೀಡಿದರು.

ಗ್ರೇಟರ್‌ ಬೆಂಗಳೂರಿಗೆ 5 ಪಾಲಿಕೆ

  • ರಾಜಧಾನಿಯ ಆಡಳಿತ ಯಂತ್ರವನ್ನು ನಿಭಾಯಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ಅಡಿಯಲ್ಲಿ ಐದು ನಗರ ಪಾಲಿಕೆಗಳು ರಚನೆಯಾಗಿವೆ.
  • ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024’ (ಜಿಬಿಜಿಎ) ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ (ಜಿಬಿಎ) ಎಂದು ಗುರುತಿಸಿ 2025ರ ಮೇ 15ರಂದು ಸರ್ಕಾರ ಅಧಿಸೂಚಿಸಿತ್ತು. ‘ಗ್ರೇಟರ್‌ ಬೆಂಗಳೂರು ಪ್ರದೇಶ’ದಲ್ಲೇ ಐದು ನಗರ ಪಾಲಿಕೆಗಳನ್ನು ರಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಬಿಬಿಎಂಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ.
  • ಜಿಬಿಜಿಎ ಕಾಯ್ದೆಯ ಪ್ರಕರಣ 4ರ ಉಪ ಪ್ರಕರಣ (1) ಹಾಗೂ ಪ್ರಕರಣ 7ರ ಉಪ ಪ್ರಕರಣದಡಿ (1) ಅಧಿಕಾರ ಚಲಾಯಿಸಿರುವ ಸರ್ಕಾರ, ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯಾ ಸಾಂದ್ರತೆ, ಬರುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗ ಪ್ರಮಾಣ, ಆರ್ಥಿಕ ಪ್ರಾಮುಖ್ಯ ವನ್ನು ಪರಿಗಣಿಸಿ ಐದು ನಗರ ಪಾಲಿಕೆಗಳನ್ನು ರಚಿಸಿದೆ.
  • ವಿಧಾನಸಭೆಯಂತೆ ವಿಂಗಡಣೆ ಇಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ 225 ವಾರ್ಡ್‌ಗಳನ್ನು ಮರುರಚಿಸಿ 2023ರ ಸೆಪ್ಟೆಂಬರ್‌ 25ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಹೊಸ ಐದು ನಗರ ಪಾಲಿಕೆಗಳನ್ನು ಬಿಬಿಎಂಪಿ ಚುನಾವಣೆ ನಡೆದಿದ್ದ 198 ವಾರ್ಡ್‌ಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ. ಜೊತೆಗೆ 225 ವಾರ್ಡ್‌ಗಳ ವಿಂಗಡಣೆ ಸಮಯದಲ್ಲಿ ಸೇರಿಸಲಾದ ಪ್ರದೇಶಗಳನ್ನು ಸೇರಿಸಿಕೊಳ್ಳಲಾಗಿದೆ.
  • 712 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆನೇಕಲ್‌ ವಿಧಾನಸಭೆ ಕ್ಷೇತ್ರದ ಸಿಂಗಸಂದ್ರ (ಕೂಡ್ಲು) ವಾರ್ಡ್‌ ಸೇರಿದಂತೆ 225 ವಾರ್ಡ್‌ಗಳನ್ನು ಪುನರ್‌ ವಿಂಗಡಿಸಿದಾಗ ಸೇರಿಕೊಂಡ ಪ್ರದೇಶಗಳು ಸೇರಿದಂತೆ 9 ಚದರ ಕಿ.ಮೀ. ವೃದ್ಧಿಸಿ 720.9 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳ ಗಡಿಗಳನ್ನು ಗುರುತಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
  • 2025ರ ಆಸ್ತಿ ತೆರಿಗೆ ಸಂಗ್ರಹವನ್ನು ಐದು ನಗರ ಪಾಲಿಕೆಗಳಿಗೆ ವಿಂಗಡಿಸಿದರೆ, ಮಹದೇವಪುರ ಹಾಗೂ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಲಿರುವ ಪೂರ್ವ ನಗರ ಪಾಲಿಕೆಗೆ ಅತಿಹೆಚ್ಚು (₹912 ಕೋಟಿ) ಸಂಗ್ರಹ ಇರಲಿದೆ. ಉತ್ತರ ನಗರ ಪಾಲಿಕೆಗೆ ಅತಿ ಕಡಿಮೆ (₹543 ಕೋಟಿ) ತೆರಿಗೆ ಸಂಗ್ರಹವಾಗಲಿದೆ.
  • ಒಂದು ಚದರ ಕಿ.ಮೀ.ಗೆ ಸರಾಸರಿ 20,225 ಜನಸಂಖ್ಯೆ ಸಾಂದ್ರತೆ ಬರುವಂತೆ ವಿಂಗಡಿಸಲಾಗಿದೆ. ಕೇಂದ್ರ ನಗರ ಪಾಲಿಕೆಯಲ್ಲಿ ಅತಿಹೆಚ್ಚು ಜನಸಂಖ್ಯೆ ಸಾಂದ್ರತೆ (32,051) ಇರಲಿದ್ದು, ಪೂರ್ವ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ಜನಸಂಖ್ಯೆ ಸಾಂದ್ರತೆ (7,738) ಇರಲಿದೆ. ಪ್ರತಿ ನಗರ ಪಾಲಿಕೆಯ ಗಡಿಯಲ್ಲಿ ಅತಿದೊಡ್ಡ ರಸ್ತೆ ಇರುವಂತೆ ವಿಂಗಡಣೆ ಮಾಡಲಾಗಿದೆ.

ನ.30ಕ್ಕೆ ವಾರ್ಡ್ ಮೀಸಲಾತಿ ಪ್ರಕಟ: ಡಿಸಿಎಂ

  • ಐದು ನಗರ ಪಾಲಿಕೆಗಳ ವಾರ್ಡ್‌ ಪುನರ್‌ ವಿಂಗಡಣೆಗೆ ಆಯೋಗ ರಚಿಸಿದ್ದು, ನವೆಂಬರ್‌ 1ಕ್ಕೆ ವಾರ್ಡ್‌ಗಳ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ನ.30ರಂದು ವಾರ್ಡ್‌ಗಳ ಮೀಸಲಾತಿ ಅಧಿಸೂಚನೆ ಹೊರಡಿಸಿ, ಚುನಾವಣೆ ನಡೆಸಲಾಗುತ್ತದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.
  • ‘ನಾವು ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ್ದು, ನಮಗೆ ಕಾಲಮಿತಿ ಇದೆ. ವಾರ್ಡ್‌ ಮೀಸಲಾತಿ ಅಧಿಸೂಚನೆಯಾದ ನಂತರ ಆಯೋಗಕ್ಕೆ ನೀಡಿ, ಚುನಾವಣೆ ನಡೆಸಲು ಮನವಿ ಮಾಡಲಾಗುತ್ತದೆ. ಚುನಾವಣೆ ನಡೆಸಲು ಪೂರ್ವಸಿದ್ಧತೆ ಆರಂಭಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅತಿ ಶೀಘ್ರದಲ್ಲೇ ಅವರು ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ’ ಎಂದು ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
  • ‘ಪಾಲಿಕೆಗಳ ಮೇಲೆ ಜಿಬಿಎ ಇರುವುದರಿಂದ 74ನೇ ತಿದ್ದುಪಡಿಗೆ ತೊಂದರೆಯಾಗುವುದಿಲ್ಲವೇ, ಇದನ್ನು ಪ್ರಶ್ನಿಸಿ ಯಾರಾದರೂ ನ್ಯಾಯಾಲಯದ ಮೊರೆ ಹೋಗುವುದಿಲ್ಲವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್‌, ‘ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿ, ತಿರಸ್ಕೃತವಾಗಿವೆ. ಸುಪ್ರೀಂ ಕೋರ್ಟ್ ಪ್ರಮಾಣಪತ್ರ ಒಪ್ಪಿದೆ. ವಾರ್ಡ್ ಪುನರ್ ವಿಂಗಡಣೆ ಬಳಿಕ, ನವೆಂಬರ್ 3ರಂದು ವಿಚಾರಣೆಗೆ ಬರುವಂತೆ ತಿಳಿಸಿದೆ’ ಎಂದರು.
  • ಸಕಾರಣವಿಲ್ಲದ ಡಿಎನ್ಎ ಪರೀಕ್ಷೆ ಸಲ್ಲ

ಸಂದರ್ಭ: ‘ಸಕಾರಣ ಮತ್ತು ಅಗತ್ಯ ಇಲ್ಲದೇ ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯ, ಸಾಂವಿಧಾನಿಕ ಚೌಕಟ್ಟು ಗಳ ಅಡಿಯಲ್ಲಿ ದಂಪತಿಗಳಿಗೆ ಕೊಡಮಾಡಿದ ಗೋಪ್ಯತೆ ಹಾಗೂ ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ’ ಎಂದು ಹೈಕೋರ್ಟ್‌, ಆಸ್ತಿ ಪಾಲುದಾರಿಕೆಯ ಪ್ರಕರಣವೊಂದರಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

  • ಈ ಸಂಬಂಧ 39 ವರ್ಷದ ಪುರುಷರೊಬ್ಬರು ಸಲ್ಲಿಸಿದ್ದ ರಿಟ್‌ ಅರ್ಜಿ (ಡಬ್ಲ್ಯು.ಪಿ 20342/2025) ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
  • ‘ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗುವ ಅರ್ಜಿ ಗಳಿಗೆ ಉತ್ತರಿಸುವಾಗ ವಿಚಾರಣಾ ನ್ಯಾಯಾಲಯಗಳು ಸದರಿ ತೀರ್ಪಿನ ಸಮಯದಲ್ಲಿ ಮಾಡಲಾಗಿರುವ ಎಲ್ಲ ಅವಲೋಕನಾ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯ ಬೇಕು. ಅಂತೆಯೇ, ಈ ತೀರ್ಪನ್ನು ಸಂಬಂಧ ಪಟ್ಟ ನ್ಯಾಯಾಲಯಗಳಿಗೆ ರವಾನಿಸಬೇಕು’ ಎಂದು ಹೈಕೋರ್ಟ್‌ ರಿಜಿಸ್ಟ್ರಿಗೆ ತಾಕೀತು ಮಾಡಿದೆ.

ಕಲಂ 112ರ ಘನತೆಗೆ ಧಕ್ಕೆಯಾಗಬಾರದು…

  • ‘ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 112ರ ಅಸ್ತಿತ್ವವೇ ಸಾರ್ವಜನಿಕ ನೈತಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಅಥವಾ ಶಾಂತಿಯ ಭದ್ರತೆಯನ್ನು ಹೊಂದಿದೆ. ದಾಂಪತ್ಯ ಅಸ್ತಿತ್ವದಲ್ಲಿರುವಾಗ ಮತ್ತು ಗರ್ಭ ಧರಿಸಿದ 280 ದಿನಗಳ ಮೇಲೆ ಮಗು ಜನಿಸಿದರೆ ಅದು ಆತನೇ ತಂದೆ ಎಂದು ತಿಳಿಯಬೇಕು. ಈ ನಿರ್ಣಾಯಕ ಪುರಾವೆಯನ್ನು ಮೀರಿ ಒಂದು ವೇಳೆ ಮಗುವಿನ ಪಿತೃತ್ವವನ್ನು ಪ್ರಶ್ನಿಸಿದ್ದೇ ಆದರೆ ಅದು 112ರಲ್ಲಿ ಅಡಕವಾಗಿರುವ ತತ್ವಗಳನ್ನು ಮೀರಿದ ಕಾರಣಕ್ಕೆ ಉದ್ಭವಿಸಿದೆ ಎನ್ನುವಂತಿರಬೇಕು. ಇಂತಹ ಮೀರಿದ ಸಂದರ್ಭಗಳಲ್ಲಿ ಮಾತ್ರವೇ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡುವುದು ಸಮ್ಮತ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
  • ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಂ.ವಿಜಯಕೃಷ್ಣ ಭಟ್‌ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಸಂವಿಧಾನದಲ್ಲಿ ನಿಗದಿಪಡಿಸಿದಂತೆ ಪರೀಕ್ಷೆ, ಗೋಪ್ಯತೆಯ ಹಕ್ಕು ಮತ್ತು ಘನತೆಯ ನಡುವೆ ಹೆಣೆದುಕೊಂಡಿರುವ ಸೂಕ್ಷ್ಮ ಸಮತೋಲನವನ್ನು ನಾವು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 112ರಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸದ ಹೊರತು ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಬಾರದು’ ಎಂದು ಸ್ಪಷ್ಟಪಡಿಸಿದೆ.
  • ಪ್ರಕರಣವೇನು?: ಮೊದಲ ಹೆಂಡತಿಯ ಇಬ್ಬರು ವಯಸ್ಕ ಗಂಡು ಮಕ್ಕಳು ಹಾಗೂ ಎರಡನೇ ಹೆಂಡತಿಯ ವಯಸ್ಕ ಮಗನ ಮಧ್ಯೆ ಆಸ್ತಿ ಪಾಲುದಾರಿಕೆಗೆ ಸಂಬಂಧಿಸಿದಂತೆ 2016ರಿಂದ ಚನ್ನರಾಯಪಟ್ಟಣದ ಹಿರಿಯ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಅಸಲು ದಾವೆಯ ವ್ಯಾಜ್ಯ ಮುಂದುವರಿದಿತ್ತು. ವ್ಯಾಜ್ಯದ ಸಮಯದಲ್ಲಿ ಅರ್ಜಿದಾರರನ್ನು ಪಾಟೀ ಸವಾಲಿಗೆ ಒಳಪಡಿಸಿದಾಗ ಅವರ ಪಿತೃತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು.
  • ‘ರಿಟ್‌ ಅರ್ಜಿದಾರರು, ನಮ್ಮ ತಂದೆಗೆ ಜನಿಸಿದ ಮಗನಲ್ಲ. ನಮ್ಮ ತಂದೆಗೆ ಆದಾಗಲೇ ವಾಸೆಕ್ಟಮಿ (ನಸ್ಬಂದಿ) ಆಪರೇಷನ್‌ ಆಗಿತ್ತು. ಅವರಿಗೆ ಮಕ್ಕಳಾಗುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ, ಇವರ ಪಿತೃತ್ವದ ಸತ್ಯಾಸತ್ಯತೆ ಅರಿಯಲು ಡಿಎನ್‌ಎ ಪರೀಕ್ಷೆ ನಡೆಸಲು ಆದೇಶಿಸಬೇಕು’ ಎಂದು ಮೊದಲ ಹೆಂಡತಿಯ ಇಬ್ಬರು ಮಕ್ಕಳು (ಅಸಲು ದಾವೆಯ ವಾದಿಗಳು) ಕೋರಿದ್ದರು.
  • ಈ ತಕರಾರನ್ನು ಮಾನ್ಯ ಮಾಡಿದ್ದ ಸಿವಿಲ್‌ ನ್ಯಾಯಾಧೀಶರು, ಸಿವಿಲ್‌ ಪ್ರಕ್ರಿಯಾ ಸಂಹಿತೆ–1908ರ ನಿಯಮ 26, ನಿಯಮ 10 ಎ ಅಡಿಯಲ್ಲಿ ಡಿಎನ್‌ಎ ಪರೀಕ್ಷೆಗೆ ಸಮ್ಮತಿ ನೀಡಿ 2025ರ ಏಪ್ರಿಲ್‌ 5ರಂದು ಆದೇಶಿಸಿದ್ದರು.
  • ಇದನ್ನು ಪ್ರಶ್ನಿಸಿದ್ದ 39 ವರ್ಷದ ಅರ್ಜಿದಾರರು, ‘ವಿಚಾರಣಾ ನ್ಯಾಯಾಲಯ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕು’ ಎಂದು ಕೋರಿದ್ದರು. ಈ ಮನವಿಯನ್ನು ಮನ್ನಿಸಿರುವ ನ್ಯಾಯಪೀಠ, ‘ಒಂದು ವೇಳೆ ಡಿಎನ್‌ಎ ಪರೀಕ್ಷೆ ನಡೆಸಿ ಏನಾದರೂ ವರದಿ ಸಿದ್ಧಪಡಿಸಿದ್ದರೆ ಅಂತಹ ವರದಿ ಅಮಾನ್ಯವಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.

ಕಲಂ 112ರ ಘನತೆಗೆ ಧಕ್ಕೆಯಾಗಬಾರದು…

  • ‘ಕಲಂ 112 ಸಾಮಾನ್ಯ ಸಂದರ್ಭಗಳಲ್ಲಿ ಮಹಿಳೆಯ ಘನತೆ ಏನು ಎತ್ತ ಎಂಬುದರ ಸೂಕ್ಷ್ಮ ಸಿದ್ಧಾಂತವನ್ನು ಒಳಗೊಂಡಿದೆ. ಮಗುವಿನ ತಂದೆ ತಾನೇ ಎಂಬುದು ಗೊತ್ತಿದ್ದರೂ ಕೆಲವೊಮ್ಮೆ ಪುರುಷ ನಿರಾಧಾರ ಆರೋಪ ಹೊರಿಸಿಬಿಡುತ್ತಾನೆ. ಮಹಿಳೆಯ ವ್ಯಕ್ತಿತ್ವವನ್ನು ನಾಶ ಮಾಡಿಬಿಡುತ್ತಾನೆ. ಈ ಹುಮ್ಮಸ್ಸಿನಲ್ಲಿ ರಕ್ತ–ಡಿಎನ್‌ಎ ಪರೀಕ್ಷೆಗೆ ಕೋರುತ್ತಾನೆ. ಆಗ ಮಹಿಳೆಯ ಘನತೆಗೆ ವಿನಾಕಾರಣ ಪೆಟ್ಟು ಬಿದ್ದಂತಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
  • ಡಿಎನ್‌ಎ ಪರೀಕ್ಷೆ ಎಂದರೇನು?: ಡಿ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲವು (ಡಿಎನ್‌ಎ) ಮೂಲಭೂತವಾಗಿ ಆನುವಂಶಿಕ ಸಂಕೇತವಾಗಿದೆ. ಇದು ಇಬ್ಬರೂ ಪೋಷಕರಿಂದ ಅವರ ಮಕ್ಕಳಿಗೆ ಗುಣಲಕ್ಷಣಗಳನ್ನು ಹೊತ್ತೊಯ್ಯುತ್ತದೆ. ಪ್ರತಿಯೊಬ್ಬರಲ್ಲೂ ಇದು ವಿಶಿಷ್ಟವಾದ ಸಂಕೇತವನ್ನು ಹೊಂದಿರುತ್ತದೆ. ಯಾವುದೇ ಆನುವಂಶಿಕ ಅಸ್ವಸ್ಥತೆಗಳ ಮೌಲ್ಯಮಾಪನಕ್ಕೆ ಅಥವಾ ಕಾನೂನು ಉದ್ದೇಶಗಳ ದೃಢೀಕರಣಕ್ಕಾಗಿ ಪಿತೃತ್ವವನ್ನು ಸಾಬೀತುಪಡಿಸುವ ಸಂದರ್ಭದಲ್ಲಿ ಈ ಪರೀಕ್ಷೆ ಕೈಗೊಳ್ಳಲಾಗುತ್ತದೆ.
  • ಮರಾಠರಿಗೆ ಮೀಸಲಾತಿ: ಒಪ್ಪಿಗೆ

ಸಂದರ್ಭ: ‘ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿದೆ. ಸ್ನೇಹಿತರೇ ನಾವು ಗೆದ್ದುಬಿಟ್ಟೆವು’ ಎಂದು ಹೋರಾಟಗಾರ ಮನೋಜ್‌ ಜರಾಂಗೆ ಘೋಷಿಸಿದರು. ಕಳೆದ 5 ದಿನಗಳಿಂದ ಸಾವಿರಾರು ಹೋರಾಟಗಾರರೊಂದಿಗೆ ಜರಾಂಗೆ ಅವರು ಇಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

  • ‘ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿದೆ. ಸ್ನೇಹಿತರೇ ನಾವು ಗೆದ್ದುಬಿಟ್ಟೆವು’ ಎಂದು ಹೋರಾಟಗಾರ ಮನೋಜ್‌ ಜರಾಂಗೆ ಘೋಷಿಸಿದರು.
  • ಐದು ದಿನಗಳಿಂದ ಸಾವಿರಾರು ಹೋರಾಟಗಾರರೊಂದಿಗೆ ಜರಾಂಗೆ ಅವರು ಇಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
  • ಮರಾಠ ಸಮುದಾಯದವರಿಗೆ ಈಗ ಹಿಂದುಳಿದ ವರ್ಗದ ಕೋಟಾದಡಿ ಮೀಸಲಾತಿ ದೊರೆಯಲಿದೆ. ಮರಾಠರಿಗೆ ಮೀಸಲಾತಿ ನೀಡುವ ವಿಷಯ ಪರಿಶೀಲಿಸಲು ರಚಿಸಿದ ಸಂಪುಟ ಉಪಸಮಿತಿಯು ಜರಾಂಗೆ ಅವರ ಬಹುಪಾಲು ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಒಪ್ಪಿಗೆ ನೀಡಿರುವುದಾಗಿ ಸಮಿತಿಯ ಮುಖ್ಯಸ್ಥ, ಸಚಿವ ರಾಧಾಕೃಷ್ಣ ವಿಖೆ ಪಾಟೀಲ್‌ ಅವರು ಜರಾಂಗೆ ಅವರಿಗೆ ತಿಳಿಸಿದರು.
  • ಸಮಿತಿಯ ಕರಡು ಪ್ರತಿಯನ್ನು ಜರಾಂಗೆ ಅವರು ಓದಿ ಹೇಳುತ್ತಿದ್ದಂತೆಯೇ ಇಲ್ಲಿನ ಆಜಾದ್‌ ಮೈದಾನದಲ್ಲಿ ಹೋರಾಟಗಾರರು ಹಲಗೆ ಹೊಡೆದು, ಕುಣಿದು ಕುಪ್ಪಳಿಸಿ ಸಂಭ್ರಮಿಸಿ ದರು. ‘ಸರ್ಕಾರದೊಂದಿಗೆ ಮಾತ ನಾಡಲು ಸಿದ್ಧನಿದ್ದೇನೆ. ನನ್ನ ಬೇಡಿಕೆಗಳು ಈಡೇರದ ಹೊರತು ಮುಂಬೈ ಬಿಟ್ಟು ತೆರಳುವುದಿಲ್ಲ’ ಎಂದು ಜರಾಂಗೆ ಅವರು ಬೆಳಿಗ್ಗೆಯಷ್ಟೇ ಹೇಳಿದ್ದರು.
  • ‘ಮರಾಠ ಮೀಸಲಾತಿ ಹೋರಾಟಗಾರರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಸೆಪ್ಟೆಂಬರ್‌ ಅಂತ್ಯದ ಒಳಗಾಗಿ ಕೈಬಿಡಲಾಗುವುದು ಎಂದು ಉಪ ಸಮಿತಿಯವರು ಹೇಳಿದ್ದಾರೆ’ ಎಂದರು.
  • ‘ಕುಣಬಿ ಮತ್ತು ಮರಾಠರು ಒಂದೇ ಸಮುದಾಯದವರು ಎಂದು ಸರ್ಕಾರಿ ಆದೇಶ ಹೊರಡಿಸಲು ಕಾನೂನು ಪ್ರಕಾರ ಇರುವ ಆಯ್ಕೆಗಳ ಕುರಿತು ಹುಡುಕಾಟ ನಡೆಯುತ್ತಿದೆ. ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎರಡು ತಿಂಗಳು ಬೇಕಾಗಬಹುದು’ ಎಂದು ಸಚಿವ ರಾಧಾಕೃಷ್ಣ ಹೇಳಿದರು.
  • ಜರಾಂಗೆ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿ, ಕಣ್ಣೀರು ಹಾಕಿದರು. ಮೈದಾನದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಹೈಕೋರ್ಟ್‌ ತರಾಟೆ

  • ‘ಅನುಮತಿ ಪಡೆಯದೆಯೇ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಂಗಳವಾರ ಮಧ್ಯಾಹ್ನ 3ರ ಒಳಗೆ ಆಜಾದ್‌ ಮೈದಾನವನ್ನು ಖಾಲಿ ಮಾಡಬೇಕು’ ಎಂದು ಬಾಂಬೆ ಹೈಕೋರ್ಟ್‌ ಹೇಳಿತ್ತು. ‘ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ’ ಎಂದು ರಾಜ್ಯ ಸರ್ಕಾರವನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಜರಾಂಗೆ ಅವರ ಮನವಿ ಮೇರೆಗೆ ಬುಧವಾರ ಬೆಳಿಗ್ಗೆವರೆಗೆ ಪ್ರತಿಭಟನೆ ನಡೆಸಲು ಕೋರ್ಟ್‌ ಅನುಮತಿ ನೀಡಿತ್ತು.
  • ಈ ಬಳಿಕ ಸಂಪುಟದ ಉಪ ಸಮಿತಿಯ ಮುಖ್ಯಸ್ಥ ರಾಧಾಕೃಷ್ಣ ಅವರು ಜರಾಂಗೆ ಅವರನ್ನು ಮಧ್ಯಾಹ್ನದ ವೇಳೆಗೆ ಭೇಟಿ ಮಾಡಿದರು.
  • ನೂರಾರು ಪ್ರತಿಭಟನಕಾರರು ದಕ್ಷಿಣ ಮುಂಬೈನ ಬೀದಿಗಳಲ್ಲಿ ಮತ್ತು ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ ಆವರಣದಲ್ಲಿ ಬೀಡುಬಿಟ್ಟಿದ್ದರು. ಇದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತಿತ್ತು.
  • ‘ಜರಾಂಗೆ ಮತ್ತು ಅವರ ಅನುಯಾಯಿಗಳು ಮೈದಾನವನ್ನು ಖಾಲಿ ಮಾಡದೆ ಇದ್ದರೆ ದಂಡ ವಿಧಿಸಲಾಗುವುದು. ಇವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು’ ಎಂದೂ ಕೋರ್ಟ್ ಎಚ್ಚರಿಸಿತ್ತು.

  • 2 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ

ಸಂದರ್ಭ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೋರಿಕೆ ತಡೆಗಟ್ಟಲು ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದ ‘ಕರ್ನಾಟಕ ಸರಕು ಸೇವೆಗಳ ಮಸೂದೆ- 2025’ ಹಾಗೂ  ₹3,351.96 ಕೋಟಿ ಮೊದಲ ಪೂರಕ ಅಂದಾಜು ಒಳಗೊಂಡ ‘ಕರ್ನಾಟಕ ಧನ ವಿನಿಯೋಗ ಮಸೂದೆ–2025’ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

  • ‘ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌’ ಅನ್ನು ಕೆಲವರು ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದಾರೆ. ತಂಬಾಕು–ಅಡಿಕೆ ಆಧಾರಿತ ಪದಾರ್ಥಗಳಲ್ಲಿ (ಗುಟ್ಕಾ, ಪಾನ್‌ ಮಸಾಲಾ) ತೆರಿಗೆ ಸೋರಿಕೆ ಆಗುತ್ತಿದ್ದು, ಯಾವ ರೀತಿ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಹುಡುಕಿ ಅದನ್ನು ತಡೆಗಟ್ಟಲು ‘ಕರ್ನಾಟಕ ಸರಕು ಸೇವೆಗಳ ಕಾಯ್ದೆ’ ನೆರವಾಗಲಿದೆ.

ಪ್ರಚಲಿತ ವಿದ್ಯಮಾನಗಳು: 2ನೇ ಸೆಪ್ಟೆಂಬರ್ 2025

ಸಾಮಾನ್ಯ ಅಧ್ಯಯನ 2: ರಾಜಕೀಯ; ಮಹಾನಗರಗಳಲ್ಲಿ ಆಡಳಿತ ಸುಧಾರಣೆಗಳು

ಜಿಬಿಎ ನಿಗಾದಡಿ ಪಾಲಿಕೆಗಳ ಕಾರ್ಯ

ಸಂದರ್ಭ: ನಗರ ಪಾಲಿಕೆಗಳ ಆಡಳಿತದಲ್ಲಿ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ)  ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುತ್ತಿದ್ದರೂ, ಚುನಾವಣೆ ಆಗುವವರೆಗೂ ಮುಖ್ಯ ಆಯುಕ್ತರ ಅಡಿಯಲ್ಲೇ ಐದೂ ನಗರ ಪಾಲಿಕೆಗಳ ಆಯುಕ್ತರು ಕಾರ್ಯ ನಿರ್ವಹಿಸಲಿದ್ದಾರೆ.

  • ಜಿಬಿಎ ಹಾಗೂ ನಗರ ಪಾಲಿಕೆಯ ಪ್ರಸ್ತಾವಿತ ಕಾರ್ಯನಿರ್ವಹಣೆಯ ಪಟ್ಟಿಯಂತೆ (ಆರ್ಗನೈಸೇಷನ್‌ ಚಾರ್ಟ್‌) ಬೃಹತ್‌ ಕಾಮಗಾರಿಗಳನ್ನು ನಿರ್ವಹಿಸುವ ಬಿ–ಸ್ಮೈಲ್‌ ಸೇರಿದಂತೆ ಜಿಬಿಎನಲ್ಲಿ ತಾಂತ್ರಿಕ ಜಾಗೃತಿ ಕೋಶ (ಟಿವಿಸಿಸಿ), ಗುಣಮಟ್ಟ ನಿಯಂತ್ರಣ (ಕ್ಯೂಸಿ), ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌), ಯೋಜನೆ ವಿಭಾಗಗಳು ಜಿಬಿಎ ಮುಖ್ಯ ಆಯುಕ್ತರ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
  • ಟಿವಿಸಿಸಿ, ಕ್ಯೂಸಿ,  ಬಿಎಸ್‌ಡಬ್ಲ್ಯು ಎಂಎಲ್‌, ಯೋಜನೆ ವಿಭಾಗಗಳ ಮುಖ್ಯ ಎಂಜಿನಿಯರ್‌ಗಳಿಗೆ ತಲಾ ಒಬ್ಬರು ಅಧೀಕ್ಷಕ ಎಂಜಿನಿಯರ್‌ (ಎಸ್‌ಇ), ತಲಾ 10 ಕಾರ್ಯಪಾಲಕ ಎಂಜಿನಿಯರ್‌ (ಇಇ), ತಲಾ 20 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ), ತಲಾ 20 ಸಹಾಯಕ ಎಂಜಿನಿಯರ್‌ (ಎಇ) ಇರಲಿದ್ದಾರೆ.  ಬಿ–ಸ್ಮೈಲ್‌ನಲ್ಲಿ ಸಿಒಒ ಜೊತೆಗೆ ನಾಲ್ವರು ಮುಖ್ಯ ಎಂಜಿನಿಯರ್‌, ನಾಲ್ವರು ಎಸ್ಇ, 20 ಇಇ, 30 ಎಇಇ, 50 ಎಇಗಳಿರುತ್ತಾರೆ.
  • ಜಿಬಿಎ ಮುಖ್ಯ ಆಯುಕ್ತರಡಿ ಐದು ಪಾಲಿಕೆಗಳ ಆಯುಕ್ತರು ಕಾರ್ಯ ನಿರ್ವಹಿಸಬೇಕಿದೆ. ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಕಂದಾಯ, ಆಸ್ತಿ, ಮಾರುಕಟ್ಟೆ, ಆಡಳಿತ, ಹಣಕಾಸು, ಜಾಹೀರಾತು, ಸರ್ವೆ, ಮಾಹಿತಿ ತಂತ್ರಜ್ಞಾನ ವಿಭಾಗದ ಜವಾಬ್ದಾರಿ ನೀಡಲಾಗಿದೆ.
  • ಜಂಟಿ ಆಯುಕ್ತರಿಗೆ ಯೋಜನೆ, ಆರೋಗ್ಯ–ಸ್ವಾಸ್ಥ್ಯ, ಶಿಕ್ಷಣ, ಅರಣ್ಯ–ತೋಟಗಾರಿಕೆ– ಕೆರೆ, ನಗರ ಯೋಜನೆ, ಟಿಡಿಆರ್‌, ಕಲ್ಯಾಣ ವಿಭಾಗಗಳನ್ನು ಹಂಚಲಾಗಿದೆ. ಜಿಬಿಎನಲ್ಲಿರುವ ವಿಶೇಷ ಆಯುಕ್ತರು ಹೆಚ್ಚುವರಿ– ಜಂಟಿ ಆಯುಕ್ತರು ಹೊಂದಿರುವ ಜವಾಬ್ದಾರಿಗಳನ್ನೇ ಹೊಂದಿದ್ದು, ಅವರು ಇವರ ಮೇಲೆ ಹಿಡಿತ ಸಾಧಿಸಲಿದ್ದಾರೆ.
  • ನಗರ ಪಾಲಿಕೆಗಳಲ್ಲಿ ತಲಾ ಮೂವರು ಮುಖ್ಯ ಎಂಜಿನಿಯರ್‌ಗಳಿರುತ್ತಾರೆ. ಯೋಜನೆ ಹಾಗೂ ವಲಯ ಮಟ್ಟದ ಕಾಮಗಾರಿಗಳನ್ನು ಇವರು ನಿರ್ವಹಿಸ ಲಿದ್ದಾರೆ. ವಾರ್ಡ್‌ ಎಂಜಿನಿಯರಿಂಗ್‌ ಕಾಮಗಾರಿ,  ತ್ಯಾಜ್ಯ ನಿರ್ವಹಣೆ, ಬೀದಿ ದೀಪ, 50 x 80 ಅಡಿಗಳವರೆಗಿನ ಕಟ್ಟಡಗಳಿಗೆ ನಕ್ಷೆ ಅನುಮೋದನೆಗೆ ಸಿಒ– ವಾರ್ಡ್‌ ಎಂಬ ಹುದ್ದೆ ಸೃಷ್ಟಿಸಲಾಗಿದೆ.

ಕಾರ್ಯಾಚರಣೆಗೆ ಸಿದ್ಧತೆ: ಮಹೇಶ್ವರ್‌ ರಾವ್‌

  • ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಕಾರ್ಯಕಲಾಪಗಳನ್ನು ನಡೆಸಲು ಸಜ್ಜಾಗಿದ್ದು, ಐದು ನಗರ ಪಾಲಿಕೆಗಳ ರಚನೆಯ ಅಧಿಸೂಚನೆ ಹೊರಬೀಳುತ್ತಿದ್ದಂತೆಯೇ ನಿಯೋಜಿತ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
  • ‘198 ವಾರ್ಡ್‌ಗಳು ನಗರ ಪಾಲಿಕೆಗಳಿಗೆ ವಿಂಗಡಣೆಯಾಗಲಿದ್ದು, ಅದರಂತೆಯೇ ಕಾರ್ಯನಿರ್ವಹಿಸಲಿವೆ. ಕಾಮಗಾರಿಗಳು ಅಥವಾ ಬಿಲ್‌ ಪಾವತಿಗೆ ಅಷ್ಟೇನು ತೊಂದರೆಯಾಗದು. 
  • ಬಿಬಿಎಂಪಿ ಬಜೆಟ್‌ ಅನ್ನೇ ಮುಂದುವರಿಸಲಾಗು ತ್ತದೆ. ನಗರ ಪಾಲಿಕೆಗಳು ರಚನೆಗೊಂಡ ಮೇಲೆ ಅವರಿಗೆ ಅನುಸಾರವಾಗಿ ಪುನರ್‌ ವಿಮರ್ಶೆ ಮನವಿಯನ್ನು ಸಲ್ಲಿಸಿದರೆ ಜಿಬಿಎ ಅದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತದೆ’ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.

‘ಉಪ ಆಯುಕ್ತರಿಗೆ ಆಯುಕ್ತರ ಹೊಣೆ’

  •  ‘ಆಡಳಿತಾತ್ಮಕ ಅನುಭವ ಇರುವ, ಉಪ ಆಯುಕ್ತ ರುಗಳಾಗಿ ಕೆಲಸ ನಿರ್ವಹಿಸಿರುವ ಹಿರಿಯ ಅಧಿಕಾರಿಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ಪಾಲಿಕೆಗಳಿಗೆ ಆಯುಕ್ತರನ್ನಾಗಿ ನೇಮಿಸಲು ತೀರ್ಮಾನಿಸಲಾಗಿದೆ’.

ಆಯಾ ಪಾಲಿಕೆಗೆ ಎ, ಬಿ, ಸಿ, ಡಿ ನೌಕರರು

  • ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎ, ಬಿ, ಸಿ, ಡಿ ವೃಂದದ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಯು ಹೊಸದಾಗಿ ರಚನೆಯಾಗುವ ಯಾವ ನಗರ ಪಾಲಿಕೆಗೆ ಬರುತ್ತದೋ ಅದರಡಿ ಕೆಲಸ ನಿರ್ವಹಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
  • ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಬಿಬಿಎಂಪಿ ನಿರಶನಗೊಂಡಿರುವುದ ರಿಂದ, ಬಿಬಿಎಂಪಿಗೆ ಮಂಜೂರಾಗಿರುವ ವಿವಿಧ ವೃಂದದ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ.
  • ಜಿಬಿಎಗೆ ಅಥವಾ ಇತರೆ ನಗರ ಪಾಲಿಕೆಗೆ ವರ್ಗಾಯಿಸಲು ನಿರ್ದಿಷ್ಟ ಆದೇಶ ಹೊರಡಿಸಿದರೆ ಮಾತ್ರ ಅವರು ಬೇರೆಡೆಗೆ ಹೋಗಬಹುದು. 198 ವಾರ್ಡ್ ಕಚೇರಿಗಳು ಯಾವ ನಗರ ಪಾಲಿಕೆಗಳ ವ್ಯಾಪ್ತಿಗೆ ಬರುತ್ತವೋ ಅಲ್ಲಿಯೇ ಆ ಸಿಬ್ಬಂದಿಯ ಕೆಲಸ ಮುಂದುವರಿಯುತ್ತದೆ.
  • ಬಿಬಿಎಂಪಿ ಕೇಂದ್ರ ಕಚೇರಿ ಅಥವಾ ಯಾವುದೇ ಕಚೇರಿಯಲ್ಲಿರುವ ಸಿಬ್ಬಂದಿಯ ಹುದ್ದೆ ಮುಂದುವರಿಸಿರುವ ಆದೇಶವಿಲ್ಲದಿದ್ದರೆ, ಅಂತಹವರು ಸರ್ಕಾರ ಅಥವಾ ಜಿಬಿಎಯಲ್ಲಿ ಸ್ಥಳ ನಿರೀಕ್ಷಣೆಗಾಗಿ ವರದಿ ಮಾಡಿಕೊಳ್ಳಬೇಕು.
  • ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು ಜಿಬಿಎ ಮುಖ್ಯ ಆಯುಕ್ತರ ಬಳಿ ವರದಿ ಮಾಡಿಕೊಂಡು, ಐದು ನಗರ ಪಾಲಿಕೆಗಳು, ಬಿ-ಸ್ಮೈಲ್ ಗೆ ಕಡತಗಳನ್ನು ವರ್ಗಾಯಿಸುವ ಪೂರ್ಣ ಜವಾಬ್ದಾರಿ ನಿಭಾಯಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
  • ವ್ಯವಸ್ಥಾಪಕರು, ಎಫ್ ಡಿಎ, ಎಸ್ ಡಿಎ, ಸ್ಟೆನೊಗ್ರಾಫರ್, ಚಾಲಕರು ಮತ್ತು ಗ್ರೂಪ್-ಡಿ ನೌಕರರು (1,820), ಲೆಕ್ಕಾಧಿಕಾರಿಗಳು (44), ಆಡಳಿತ ವಿಭಾಗ (3), ಕ್ಲಿನಿಕಲ್ ಹೆಲ್ತ್, ಕೌನ್ಸಿಲ್, ಶಿಕ್ಷಣ, ಮುಖ್ಯ- ಅಧೀಕ್ಷಕ- ಕಾರ್ಯಪಾಲಕ, ಸಹಾಯಕ, ಕಿರಿಯ ಎಂಜಿನಿಯರ್ ಗಳು, ಅರಣ್ಯ, ಕಾನೂನು ಘಟಕ, ತೋಟಗಾರಿಕೆ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ, ಕಂದಾಯ, ಆಸ್ತಿ, ಜಾಹೀರಾತು, ಟಿಡಿಆರ್, ಮಾರುಕಟ್ಟೆ, ನೈರ್ಮಲ್ಯ, ಪೌರಕಾರ್ಮಿಕರು, ಸರ್ವೆ, ನಗರ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಬಿಎ ಹಾಗೂ ಐದು ನಗರ ಪಾಲಿಕೆಗಳು, ವಲಯ ಕಚೇರಿಗಳಿಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

ಮೂಲಗಳು: ಪ್ರಜಾವಾಣಿ

ಸಾಮಾನ್ಯ ಅಧ್ಯಯನ 2: ದುರ್ಬಲ ವರ್ಗಗಳ ಕಲ್ಯಾಣ

ಅನ್ನಪೂರ್ಣ ಯೋಜನೆ ಜಾರಿ

ಸಂದರ್ಭ: ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ನಿತ್ಯ ಕೆಲಸ ಮಾಡುವ 700ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆ ಜಾರಿಗೊಳಿಸಲಾಗಿದೆ.

  • ಪ್ರತಿ ತಿಂಗಳು ₹1500 ಅನ್ನು ಅನ್ನಪೂರ್ಣ ಯೋಜನೆಯಡಿ ಸ್ವಚ್ಛತಾ ಕಾರ್ಮಿಕರು ಪಡೆಯಲಿದ್ದಾರೆ. ಆ್ಯಕ್ಸಿಸ್ಬ್ಯಾಂಕ್ಜೊತೆಗೂಡಿ ಯೋಜನೆ ಜಾರಿಗೊಳಿಸಲಾಗಿದೆ.
  • ಕರ್ನಾಟಕದ ಇತರೆ ನಗರಗಳಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಆದರೆ, ಉಪಾಹಾರದ ಬದಲು ತಮಗೆ ಇಷ್ಟವಾದ ಆಹಾರ ಸೇವಿಸಲಿ ಎನ್ನುವ ಉದ್ದೇಶದಿಂದ ನೇರವಾಗಿ ಹಣ ನೀಡಲಾಗುತ್ತಿದೆ.

ಮೂಲಗಳು: ಪ್ರಜಾವಾಣಿ

ಕ್ರೀಡಾ ಸಂಗತಿಗಳು

ಮಹಿಳಾ ಏಕದಿನ ವಿಶ್ವಕಪ್‌: ಗೆಲ್ಲುವ ತಂಡಕ್ಕೆ ₹39.55 ಕೋಟಿ!

ಸಂದರ್ಭ: ಮುಂಬರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್ನರು ಟೂರ್ನಿಯ ಇತಿಹಾಸ ದದಲ್ಲೇ ಅತ್ಯಧಿಕ ಮೊತ್ತದ ಬಹುಮಾನ ಮೊತ್ತ ಗಳಿಸಲಿದ್ದಾರೆ. ವಿಜೇತರಿಗೆ ನೀಡುವ ಬಹುಮಾನದ ಹಣವನ್ನು ₹11.65 ಕೋಟಿಯಿಂದ ₹39.55 ಕೋಟಿಗೆ ಏರಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಪ್ರಕಟಿಸಿದೆ.

  • 2023ರ ಪುರುಷರ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡ ₹31.35 ಕೋಟಿ ಗಳಿಸಿತ್ತು.
  • ಮಹಿಳಾ ವಿಶ್ವಕಪ್‌ನ 13ನೇ ಆವೃತ್ತಿ ಸೆಪ್ಟೆಂಬರ್‌ 30ರಂದು ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿವೆ. ಎಂಟು ತಂಡಗಳು ಕಣದಲ್ಲಿರುವ ಈ ಟೂರ್ನಿಯ ಬಹುಮಾನ ಮೊತ್ತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
  • ಈ ಬಾರಿ ಟೂರ್ನಿಯ ಒಟ್ಟು  ಬಹುಮಾನ ಮೊತ್ತ ₹122.5 ಕೋಟಿ ($13.88 ದಶಲಕ್ಷ). ನ್ಯೂಜಿಲೆಂಡ್‌ನಲ್ಲಿ ಕಳೆದ ಬಾರಿಯ (2022ರ) ಆವೃತ್ತಿಗೆ ಹೋಲಿಸಿದರೆ ಇದು ಶೇ 297ರಷ್ಟು ಅಧಿಕ. ಈ ಏರಿಕೆಯು 2023ರ ಪುರುಷರ ಏಕದಿನ ವಿಶ್ವಕಪ್‌ ಟೂರ್ನಿಯ ಬಹುಮಾನ ಮೊತ್ತ (ಸುಮಾರು ₹88.26 ಕೋಟಿ) ಮೀರಿಸಿದೆ ಎಂದು ಐಸಿಸಿ ವಿವರಿಸಿದೆ.
  • ರನ್ನರ್‌ ಅಪ್‌ ಸ್ಥಾನ ಪಡೆಯುವ ತಂಡ ₹19.77 ಕೋಟಿ ಮೊತ್ತ ($2.24 ದಶಲಕ್ಷ) ಸಂಪಾದಿಸಲಿದೆ. ಇದು ಕಳೆದ ಬಾರಿಯ ಮೊತ್ತವಾದ ₹5.30 ಕೋಟಿಗೆ ಹೋಲಿಸಿದಲ್ಲಿ ಶೇ. 273ರಷ್ಟು ಹೆಚ್ಚು.
  • ಸೆಮಿಫೈನಲ್‌ನಲ್ಲಿ ಸೋತ ತಂಡಗಳು ₹9.89 ಕೋಟಿ ಮೊತ್ತ ತಮ್ಮದಾಗಿಸಿಕೊಳ್ಳಲಿವೆ. 2022ರಲ್ಲಿ ಸೆಮಿಫೈನಲ್‌ನಲ್ಲಿ ಸೋತ ತಂಡಗಳು ಪಡೆದ ಬಹುಮಾನ ಮೊತ್ತ ₹2.65 ಕೋಟಿ.
  • ಗುಂಪು ಹಂತದಲ್ಲಿ ಗೆಲ್ಲುವ ತಂಡಗಳು ₹30.29 ಲಕ್ಷ ಸಂಪಾದಿಸಲಿವೆ. ಐದು ಮತ್ತು ಆರನೇ ಸ್ಥಾನ ಪಡೆಯುವ ತಂಡಗಳಿಗೆ ₹62 ಲಕ್ಷ ದೊರೆಯಲಿದೆ. ಏಳು ಮತ್ತು ಎಂಟನೇ ಸ್ಥಾನ ಪಡೆಯುವ ತಂಡಗಳು ₹24.71 ಲಕ್ಷ ಸಂಪಾದಿಸಲಿವೆ. ಭಾಗವಹಿಸುವ ಪ್ರತಿಯೊಂದು ತಂಡಗಳಿಗೆ ₹22 ಲಕ್ಷ ಸಿಗಲಿದೆ.
  • ‘ಮಹಿಳಾ ಕ್ರಿಕೆಟ್‌ಗೆ ಜನಪ್ರಿಯತೆ ಹೆಚ್ಚಿಸುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. 2024ರ ವಿಶ್ವಕಪ್‌ಗೆ ಮೊದಲು ಘೋಷಿಸಿದಂತೆ ಬಹುಮಾನ ಮೊತ್ತದಲ್ಲಿ ಸಮಾನತೆ ತರುವ ಉದ್ದೇಶದಿಂದಲೂ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  • ಈ ಬಾರಿಯ ವಿಶ್ವಕಪ್‌ ಪಂದ್ಯಗಳು ಐದು ತಾಣಗಳಲ್ಲಿ– ಭಾರತದ ಗುವಾಹಟಿ, ಇಂದೋರ್‌, ನವಿ ಮುಂಬೈ, ವಿಶಾಖಪಟ್ಟಣ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿ (ತಟಸ್ಥ ತಾಣ)– ನಡೆಯಲಿವೆ. ಪಾಕಿಸ್ತಾನ ತನ್ನ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ.
  • ‘ಮಹಿಳಾ ಕ್ರಿಕೆಟ್‌ಗೆ ಆದ್ಯತೆ ನೀಡುವುದು ಈ ಕ್ರಮದ ಹಿಂದಿನ ಉದ್ದೇಶ. ಮಹಿಳಾ ಕ್ರಿಕೆಟ್‌  ಬೆಳವಣಿಗೆಯ ದೃಷ್ಟಿಯಿಂದ ಇದು ಮಹತ್ವದ ಮೈಲಿಗಲ್ಲಾಗಿದೆ’ ಎಂದು ಐಸಿಸಿ ಅಧ್ಯಕ್ಷ ಜಯ್‌ ಶಾ ತಿಳಿಸಿದರು.

ಮೂಲಗಳು: ಪ್ರಜಾವಾಣಿ

ಕ್ರೀಡಾ ಸಂಗತಿಗಳು

ನವದೆಹಲಿಯಲ್ಲಿ ಮುಂದಿನ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್

ಸಂದರ್ಭ: ಭಾರತವು 2026ರ ವಿಶ್ವಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಅತಿಥ್ಯ ವಹಿಸಿಕೊಂಡಿದೆ. ರಾಜಧಾನಿ ನವದೆಹಲಿ ಯಲ್ಲಿ 30ನೇ ಆವೃತ್ತಿಯ ಈ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ ನಡೆಯಲಿದೆ.

  • 17 ವರ್ಷಗಳ ನಂತರ ಭಾರತಕ್ಕೆ ವಿಶ್ವ ಚಾಂಪಿಯನ್‌ಷಿಪ್ ಮರಳುತ್ತಿದೆ. 2009ರಲ್ಲಿ ಕೊನೆಯ ಬಾರಿ ಈ ಚಾಂಪಿಯನ್‌ಷಿಪ್‌ ಭಾರತದಲ್ಲಿ (ಹೈದರಾಬಾದಿನಲ್ಲಿ) ನಡೆದಿತ್ತು.
  • ಪ್ಯಾರಿಸ್‌ನಲ್ಲಿ 29ನೇ ವಿಶ್ವ ಚಾಂಪಿಯನ್‌ಷಿಪ್‌ನ ಸಮಾರೋಪದಲ್ಲಿ ಆತಿಥ್ಯದ ಘೋಷಣೆ ಮಾಡಲಾಯಿತು.
  • ‘ಪ್ಯಾರಿಸ್‌ನಲ್ಲಿ ಆಯೋ ಜನೆಗೊಂಡ ರೀತಿಯಲ್ಲೇ ಈ ಚಾಂಪಿಯನ್‌ಷಿಪ್‌ ಅನ್ನು ಗುಣಮಟ್ಟ ಮತ್ತು ವೈಭವದಿಂದ ನಡೆಸಲು ಶತಪ್ರಯತ್ನ ಹಾಕಲಿದ್ದೇವೆ.
  • ಬ್ಯಾಡ್ಮಿಂಟನ್ ಪರಿವಾರವನ್ನು ದೆಹಲಿಗೆ ಸ್ವಾಗತಿಸಲು ನಾವು ಎದುರುನೋಡುತ್ತಿದ್ದೇವೆ’ ಎಂದು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ ಗೌರವ ಮಹಾ ಕಾರ್ಯದರ್ಶಿ ಅವರನ್ನು ಉಲ್ಲೇಖಿಸಿ ಬಿಎಐ ಪ್ರಕಟಣೆ ತಿಳಿಸಿದೆ.

ಮೂಲಗಳು: ಪ್ರಜಾವಾಣಿ

ಪ್ರಚಲಿತ ವಿದ್ಯಮಾನಗಳು: 1ನೇ ಸೆಪ್ಟೆಂಬರ್ 2025

ಸಾಮಾನ್ಯ ಅಧ್ಯಯನ 2: ಸರ್ಕಾರೇತರ ಸಂಸ್ಥೆ; ಶಿಕ್ಷಣ ಮತ್ತು ಮಹಿಳಾ ಸಬಲೀಕರಣ

‘ಎಜುಕೇಟ್‌ ಗರ್ಲ್ಸ್‌’ಗೆ ಮ್ಯಾಗ್ಸೆಸೆ

ಸಂದರ್ಭ: ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ವಿವಿಧ ರೀತಿಯ ಶೋಷಣೆಯಿಂದ ಅವರನ್ನು ವಿಮೋಚನೆ ಗೊಳಿಸುವಲ್ಲಿ ನಿರತವಾಗಿರುವ ಸ್ವಯಂ ಸೇವಾ ಸಂಸ್ಥೆ ‘ಎಜುಕೇಟ್‌ ಗರ್ಲ್ಸ್’ಗೆ ಈ ಬಾರಿಯ ಪ್ರತಿಷ್ಠಿತ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.
  • ಎಜುಕೇಟ್ಗರ್ಲ್ಸ್‌’ ಸಂಸ್ಥೆಯು ರೇಮನ್ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತದ ಮೊದಲ ಸಂಘಟನೆಯಾಗಿದೆ. ಇದೊಂದು ಐತಿಹಾಸಿಕ ಕ್ಷಣ’ ಎಂದು ರೇಮನ್‌ ಮ್ಯಾಗ್ಸೆಸೆ ಅವಾರ್ಡ್ ಫೌಂಡೇಷನ್‌ (ಆರ್‌ಎಂಎಎಫ್‌) ಪ್ರಕಟಣೆಯಲ್ಲಿ ತಿಳಿಸಿದೆ.
  • ‘ದಿ ಫೌಂಡೇಷನ್ ಟು ಎಜುಕೇಟ್ ಗರ್ಲ್ಸ್‌ ಗ್ಲೋಬಲಿ’ ಎಂಬುದು ಸಂಸ್ಥೆಯ ಮೂಲ ಹೆಸರಾಗಿದ್ದು, ಇದು ‘ಎಜುಕೇಟ್‌ ಗರ್ಲ್ಸ್‌’ ಎಂದೇ ಪ್ರಸಿದ್ಧ. ಸಫೀನಾ ಹುಸೇನ್ಅವರು ಸಂಘಟನೆಯನ್ನು 2007ರಲ್ಲಿ ಸ್ಥಾಪಿಸಿದ್ದಾರೆ.
  • ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ ನವೆಂಬರ್ 7ರಂದು ನಡೆಯುವ ಸಮಾರಂಭದಲ್ಲಿ 67ನೇ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
  • ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿನ ಕಾರ್ಯಕ್ಕಾಗಿ ಮಾಲ್ದೀವ್ಸ್ ಶಾಹಿನಾ ಅಲಿ ಹಾಗೂ ಫಿಲಿಪ್ಪೀನ್ಸ್ ಫ್ಲಾವಿಯಾನೊ ಆಂಟೊನಿಯೊ ಎಲ್ವಿಲ್ಲಾನುಯೆವಾ ಅವರಿಗೂ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ಐತಿಹಾಸಿಕ ಕ್ಷಣ: ಸಫೀನಾ

  • ‘ಸಂಸ್ಥೆಗೆ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿರುವುದು ಭಾರತದ ಪಾಲಿಗೆ ಐತಿಹಾಸಿಕ ಕ್ಷಣ. ದೇಶದ ಮೂಲೆಯೊಂದರಲ್ಲಿ ಒಬ್ಬ ಬಾಲಕಿಯಿಂದ ಈ ಶಿಕ್ಷಣ ಅಭಿಯಾನ ಆರಂಭಗೊಂಡಿತು. ಜನರೇ ಮುನ್ನಡೆಸುತ್ತಿರುವ ಚಳವಳಿಯೊಂದು ಈಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವುದು ಖುಷಿ ತಂದಿದೆ’ ಎಂದು ‘ಎಜುಕೇಟ್‌ ಗರ್ಲ್ಸ್‌’ನ ಸಂಸ್ಥಾಪಕಿ ಸಫೀನಾ ಹುಸೇನ್‌.
  • ‘ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಟೀಮ್‌ ಬಾಲಿಕಾ’ದ ಸ್ವಯಂ ಸೇವಕರು, ಪಾಲುದಾರರು, ಬೆಂಬಲ ನೀಡುತ್ತಿರುವವರಿಗೆ ಈ ಪ್ರಶಸ್ತಿಯಿಂದ ಗೌರವ ಸಿಕ್ಕಂತಾಗಿದೆ. ಅಲ್ಲದೇ, ಲಕ್ಷಾಂತರ ಬಾಲಕಿಯರು ತಮ್ಮ ಶಿಕ್ಷಣದ ಹಕ್ಕನ್ನು ಮರಳಿ ಪಡೆದಿರುವುದನ್ನು ಸಹ ಈ ಪ್ರಶಸ್ತಿ ದೃಢೀಕರಿಸುತ್ತದೆ.
  • ‘ಸಾಂಪ್ರದಾಯಿಕ ಕಟ್ಟಳೆಗಳ ಬಂಧನ ಹಾಗೂ ಅನಕ್ಷರತೆಯಿಂದ ಬಾಲಕಿಯರು ಮತ್ತು ಯುವತಿಯರನ್ನು ಮುಕ್ತರನ್ನಾಗಿಸುವುದು, ಆ ಮೂಲಕ ಅವರಲ್ಲಿ ಧೈರ್ಯ ತುಂಬುವುದು, ಕೌಶಲಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡಿ, ಅವರಲ್ಲಿನ ಸುಪ್ತಪ್ರತಿಭೆಯನ್ನು ಪೋಷಿಸುವ ದಿಸೆಯಲ್ಲಿ ‘ಎಜುಕೇಟ್‌ ಗರ್ಲ್ಸ್‌’‌ ಪ್ರದರ್ಶಿಸಿದ ಬದ್ಧತೆ ಗಮನಿಸಿ, ಏಷ್ಯಾದ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಂಘಟನೆಯನ್ನು ಆಯ್ಕೆ ಮಾಡಲಾಗಿದೆ’ ಎಂದು ಆರ್‌ಎಂಎಎಫ್‌ ತಿಳಿಸಿದೆ.
  • ರಾಜಸ್ಥಾನದಲ್ಲಿ ಆರಂಭಗೊಂಡ ಸಂಘಟನೆಯು ಶಾಲೆಯಿಂದ ದೂರ ಉಳಿದ ಹಾಗೂ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಬಾಲಕಿಯರನ್ನು ಗುರುತಿಸಿ, ಅವರನ್ನು ಪುನಃ ಶಿಕ್ಷಣದ ಮುಖ್ಯ ವಾಹಿನಿಗೆ ತರುವ ಕೆಲಸ ಆರಂಭಿಸಿತು. ಅವರು ಉನ್ನತ ಶಿಕ್ಷಣ ಪೂರೈಸಿ, ಉದ್ಯೋಗ ಪಡೆಯುವವರೆಗೆ ಅವರ ಬೆಂಬಲಕ್ಕೆ ನಿಲ್ಲುವ ಕಾರ್ಯ ಮಾಡುತ್ತಿದೆ ಎಂದು ಫೌಂಡೇಷನ್‌ ಹೇಳಿದೆ.
  • ‘ಪ್ರಾಯೋಗಿಕವಾಗಿ 50 ಗ್ರಾಮಗಳ ಶಾಲೆಗಳಲ್ಲಿ ತನ್ನ ಕಾರ್ಯಕ್ರಮ ಆರಂಭಿಸಿದ್ದ ಸಂಘಟನೆ, ದೇಶದಾದ್ಯಂತ 30 ಸಾವಿರಕ್ಕೂ ಅಧಿಕ ಗ್ರಾಮಗಳಿಗೆ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ. 20 ಲಕ್ಷಕ್ಕೂ ಅಧಿಕ ಬಾಲಕಿಯರಿಗೆ ಶಿಕ್ಷಣ ನೀಡಿದೆ’ ಎಂದೂ ತಿಳಿಸಿದೆ.

ಮೂಲಗಳು: ಪ್ರಜಾವಾಣಿ

ಸಾಮಾನ್ಯ ಅಧ್ಯಯನ 2: ಭಾರತದಲ್ಲಿ ಮಳೆಯ ಮಾದರಿ

ಪಂಜಾಬ್‌: 25 ವರ್ಷದಲ್ಲೇ ಅಧಿಕ ಮಳೆ

ಸಂದರ್ಭ:ಪಂಜಾಬ್‌ನಲ್ಲಿ ಆಗಸ್ಟ್‌ ತಿಂಗಳಲ್ಲಿ 25.37 ಸೆಂ.ಮೀ.ನಷ್ಟು ಮಳೆ ಸುರಿದಿದೆ. ಈ ಪ್ರಮಾಣವು ವಾಡಿಕೆಗಿಂತ ಶೇ 74ರಷ್ಟು ಅಧಿಕವಾಗಿದೆ. ಕಳೆದ 25 ವರ್ಷಗಳಲ್ಲೇ ಈ ಪ್ರಮಾಣದ ಮಳೆಯನ್ನು ರಾಜ್ಯ ಕಂಡಿರಲಿಲ್ಲ.
  • ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ.
  • ಜನರ ಸುರಕ್ಷತೆಗಾಗಿ ಸೇನೆಯು ‘ಮಾನವ ನೆರವು ಮತ್ತು ವಿಪತ್ತು ಪರಿಹಾರ’ (ಎಚ್‌ಎಡಿಆರ್‌) ಕಾರ್ಯಾಚರಣೆ ನಡೆಸುತ್ತಿದೆ. ವಾಯುಪಡೆಯು 20 ವಿಮಾನಗಳು, ಮೂರು ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
  • ತೀವ್ರ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮೂರು ರಾಷ್ಟ್ರೀಯ ಹೆದ್ದಾರಿಗಳೂ ಸೇರಿ ಒಟ್ಟು 822 ರಸ್ತೆಗಳು ಮುಚ್ಚಿವೆ. 1,236 ವಿದ್ಯುತ್‌ ಪರಿವರ್ತಕಗಳು ಮತ್ತು 424 ಜಲ ಪೂರೈಕೆ ಯೋಜನೆಗಳಿಗೆ ಹಾನಿಯಾಗಿದೆ.

ಮೂಲಗಳು: ಪ್ರಜಾವಾಣಿ

ಪ್ರಚಲಿತ ವಿದ್ಯಮಾನಗಳು: 31ನೇ ಆಗಸ್ಟ್ 2025

7 ವರ್ಷ ಬಳಿಕ ಮೋದಿ ಚೀನಾಕ್ಕೆ
ಎರಡು ದಿನಗಳ ಜಪಾನ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಲು ಶನಿವಾರ ಚೀನಾದ ತಿಯಾನ್‌ಜಿನ್‌ಗೆ ಬಂದಿಳಿದರು.

  • ತಿಯಾನ್‌ಜಿನ್‌ ನಗರದಲ್ಲಿ ‘ಎಸ್‌ಸಿಒ’ ಶೃಂಗಸಭೆ ನಡೆಯಲಿದೆ. ಸುಮಾರು ಏಳು ವರ್ಷಗಳ ಬಳಿಕ ಮೋದಿ ಅವರು ಚೀನಾಕ್ಕೆ ತೆರಳಿದ್ದಾರೆ.
  • ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿನ ಸಂಘರ್ಷದ ಬಳಿಕ ಭಾರತ–ಚೀನಾ ನಡುವಿನ ಸಂಬಂಧ ಹಳಸಿತ್ತು. ಸಂಬಂಧ ಸುಧಾರಣೆ ನಿಟ್ಟಿನಲ್ಲೂ ಮೋದಿ ಅವರ ಭೇಟಿ ಪ್ರಾಮುಖ್ಯ ಪಡೆದಿದೆ.
  • ಇನ್ನೊಂದೆಡೆ ಅಮೆರಿಕದ ಸುಂಕ ಸಮರದಿಂದ (ಶೇ 50ರಷ್ಟು ಸುಂಕ) ಮೋದಿ ಅವರು ಜಪಾನ್‌, ಚೀನಾ ಸೇರಿ ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗೆ ಆರ್ಥಿಕ ಪಾಲುದಾರಿಕೆ ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ನಿಗದಿಯಾಗಿರುವ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
  • ‘ಎಸ್‌ಸಿಒ’ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವಿವಿಧ ದೇಶಗಳ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ.
  • ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯದ ನ್ಯಾಟೊ ಮಿಲಿಟರಿ ಮೈತ್ರಿಕೂಟದ ವಿರುದ್ಧ, ಮಧ್ಯ ಏಷ್ಯಾದ ರಾಷ್ಟ್ರಗಳ ನಡುವಿನ ಸಂಬಂಧ ಗಾಢವಾಗಿಸುವ ನಿಟ್ಟಿನಲ್ಲಿ ರಷ್ಯಾ ಮತ್ತು ಚೀನಾಕ್ಕೂ ‘ಎಸ್‌ಸಿಒ’ ವೇದಿಕೆ ಮಹತ್ವದ್ದಾಗಿದೆ.
  • ಪುಟಿನ್ ಮಾತುಕತೆ: ಉಕ್ರೇನ್‌ – ರಷ್ಯಾ ಸಂಘರ್ಷದ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿದ್ದ ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್‌ ಅವರೊಂದಿಗೆ ಪುಟಿನ್‌ ಮಾತುಕತೆ ನಡೆಸಲಿದ್ದಾರೆ. ಇರಾನ್‌ ಅಧ್ಯಕ್ಷ ಪೆಜೆಶ್ಕಿಯಾನ್‌ ಅವರೊಂದಿಗೆ ಟೆಹರಾನ್‌ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್‌ ಹೇಳಿದೆ.
  • 20ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗಿ: ಶಾಂಘೈ ಸಹಕಾರ ಸಂಘಟನೆಯಲ್ಲಿ ಚೀನಾ, ಭಾರತ, ರಷ್ಯಾ, ಪಾಕಿಸ್ತಾನ, ಇರಾನ್‌, ಕಜಾಕಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ, ಉಜ್ಬೆಕಿಸ್ತಾನ ಮತ್ತು ಬೆಲಾರಸ್‌ ಸೇರಿ 10 ಸದಸ್ಯ ದೇಶಗಳಿವೆ.
  • ಇದಲ್ಲದೆ 16 ದೇಶಗಳು ‘ಎಸ್‌ಸಿಒ’ನ ವೀಕ್ಷಕರು ಅಥವಾ ಸಂವಾದ ಪಾಲುದಾರ ದೇಶಗಳಾಗಿವೆ. ತಿಯಾನ್‌ಜಿನ್‌ನಲ್ಲಿ ನಡೆಯಲಿರುವ ಸಭೆಯಲ್ಲಿ 20ಕ್ಕೂ ಹೆಚ್ಚು ದೇಶಗಳ ನಾಯಕರು ಭಾಗವಹಿಸಲಿದ್ದಾರೆ.

ಜಿನ್‌ಪಿಂಗ್ ಜತೆ ಚರ್ಚೆ ಇಂದು

  • ಶೃಂಗಸಭೆ ಸಂದರ್ಭದಲ್ಲಿ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜಗತ್ತಿನಾದ್ಯಂತ ಬಹುತೇಕ ಎಲ್ಲ ಪ್ರಮುಖ ದೇಶಗಳ ಆರ್ಥಿಕತೆ ಮೇಲೆ ಅಮೆರಿಕದ ಸುಂಕ ಹೇರಿಕೆಯು ನಕಾರಾತ್ಮಕ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಚೀನಾ ಅಧ್ಯಕ್ಷರೊಂದಿಗೆ ನಡೆಸಲಿರುವ ಮಾತುಕತೆ ಮಹತ್ವ ಪಡೆದುಕೊಂಡಿದೆ.ಭಾರತ– ಚೀನಾ ಆರ್ಥಿಕ ಸಹಕಾರ ವಿಸ್ತರಣೆ ಮತ್ತು ಗಡಿ ವಿಚಾರವೂ ಉಭಯ ಮುಖಂಡರ ನಡುವಿನ ಸಭೆಯಲ್ಲಿ ಚರ್ಚೆಗೆ ಬರಲಿದೆ.
  • ‘ಜಾಗತಿಕವಾಗಿ ಆರ್ಥಿಕ ಸ್ಥಿರತೆ ತರುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವುದು ಭಾರತ ಮತ್ತು ಚೀನಾ ಎರಡೂ ದೇಶಗಳಿಗೆ ಮಹತ್ವದ್ದು, ಭಾರತ–ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧವು, ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಸಮೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಮೋದಿ ಹೇಳಿದ್ದಾರೆ.

‘ಸುವರ್ಣ ಅಧ್ಯಾಯ’

  • ‘ಜಪಾನ್‌ ಭೇಟಿಯು ಫಲದಾಯಕವಾಗಿದೆ. ಉಭಯ ದೇಶಗಳ ನಡುವೆ ಮಹತ್ವದ 13 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರ ಪ್ರಯೋಜನ ದೇಶದ ಜನರಿಗೆ ಲಭಿಸಲಿದೆ. ಜಪಾನ್‌ ಪ್ರಧಾನಿ ಶಿಗೆರು ಇಶಿಬಾ, ಅಲ್ಲಿನ ಸರ್ಕಾರ ಮತ್ತು ಜನರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
  • ‘ಭಾರತ – ಜಪಾನ್‌ ನಡುವೆ ಆರ್ಥಿಕ ಪಾಲುದಾರಿಕೆಯ ಹೊಸ ಮತ್ತು ಸುವರ್ಣ ಅಧ್ಯಾಯವೊಂದು ಆರಂಭಗೊಂಡಿದೆ’ ಎಂದು ಪ್ರಧಾನಿ ಹೇಳಿದ್ದಾರೆ.