ಪ್ರಚಲಿತ ವಿದ್ಯಮಾನಗಳು: 3ನೇ ಸೆಪ್ಟೆಂಬರ್ 2025
ಸಾಮಾನ್ಯ ಅಧ್ಯಯನ 2: ನಗರ ಆಡಳಿತ
ಮುನ್ಸಿಪಲ್ ಬೋರ್ಡ್‌ನಿಂದ ನಗರ ಪಾಲಿಕೆವರೆಗೆ..
ಸಂದರ್ಭ: ನಗರದ ಆಡಳಿತ 1862ರಲ್ಲಿ 18 ಸದಸ್ಯರಿಂದ ಆರಂಭವಾಗಿ, 2010ರಲ್ಲಿ 198 ಕಾರ್ಪೊರೇಟರ್‌ಗಳನ್ನು ಹೊಂದುವವರೆಗೂ ನಾಲ್ಕು ಬಾರಿ ತನ್ನ ‘ಆಡಳಿತ ವಿನ್ಯಾಸ’ವನ್ನು ಬದಲಿಸಿಕೊಂಡಿದೆ.
- ನಗರ ಆಡಳಿತಕ್ಕೇ ಪ್ರತ್ಯೇಕವಾದ ಬೋರ್ಡ್ ರಚನೆಯಾಗಿ 142 ವರ್ಷಗಳಾಗುತ್ತಿದ್ದು, ಎರಡು ಮುನ್ಸಿಪಲ್ ಬೋರ್ಡ್‌ನಿಂದ ಆರಂಭವಾಗಿ, 198 ವಾರ್ಡ್‌ಗಳ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ, ಇದೀಗ ಐದು ನಗರ ಪಾಲಿಕೆಗಳಿಗೆ ನಗರದ ಆಡಳಿತ ಹಂಚಿಕೆಯಾಗಿದೆ.
- 1862ರ ಮಾರ್ಚ್ 27ರಂದು ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು. ಬ್ರಿಟನ್ ಮಾದರಿಯಲ್ಲಿ ಅಂದಿನ ಮೈಸೂರಿನ ಆಯುಕ್ತ ಬೌರಿಂಗ್ ಅವರು 1850 ಕಾಯ್ದೆಯನ್ವಯ ಬೆಂಗಳೂರಿನಲ್ಲಿ ಮುನ್ಸಿಪಲ್ ಬೋರ್ಡ್ ರಚಿಸಿದರು. ನಾಲ್ಕು ತಿಂಗಳ ನಂತರ 1862ರ ಆಗಸ್ಟ್ 1ರಂದು ಬೆಂಗಳೂರು ಮುನ್ಸಿಪಲ್ ಬೋರ್ಡ್ ಹಾಗೂ ಮುನ್ಸಿಪಲ್ ಕಂಟೋನ್ಮೆಂಟ್ ಬೋರ್ಡ್ (ದಂಡುಪ್ರದೇಶ) ಎಂದು ರಚಿಸಲಾಯಿತು.
- ಮುನ್ಸಿಪಲ್ ಬೋರ್ಡ್‌ನಲ್ಲಿ ಒಂಬತ್ತು ಅಧಿಕಾರಿಗಳನ್ನು ಸರ್ಕಾರ ನಾಮನಿರ್ದೇಶನ ಮಾಡಿತ್ತು. ದಂಡು ಪ್ರದೇಶ ಬೋರ್ಡ್‌ನಲ್ಲಿ ತಲಾ ಆರು ಅಧಿಕಾರಿಗಳು ಹಾಗೂ ಸೈನ್ಯಾಧಿಕಾರಿಗಳು ಸದಸ್ಯರಾಗಿದ್ದರು. ಎರಡೂ ಬೋರ್ಡ್‌ಗಳು ಪ್ರತ್ಯೇಕವಾಗಿ ತಮ್ಮ ವ್ಯಾಪ್ತಿಯಲ್ಲಿ ನೈರ್ಮಲ್ಯ, ತೆರಿಗೆ, ಪೊಲೀಸ್ ಹಾಗೂ ಲೆಕ್ಕಪತ್ರದ ನಿರ್ವಹಣೆ ಮಾಡುತ್ತಿದ್ದವು.
- ಎರಡು ಬೋರ್ಡ್‌ಗಳಿಗೆ 1883ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದು, 18 ಸದಸ್ಯರು ಚುನಾಯಿತರಾದರು. ಅಧಿಕಾರಿಗಳೇ ಕಾರ್ಯ ನಿಯಂತ್ರಣ ಹೊಂದಿದ್ದರು. ಬೆಂಗಳೂರು ಮುನ್ಸಿಪಲ್ ಬೋರ್ಡ್‌ಗೆ 1897ರಲ್ಲಿ ಸರ್ಕಾರದ ಪ್ರತಿನಿಧಿಯಾದ ಅರ್ಕಾಡ್ ಶ್ರೀನಿವಾಸ ಚಾರ್ಯ ಮೊದಲ ಅಧ್ಯಕ್ಷರಾದರು. ಅಧಿಕಾರೇತರ ಸದಸ್ಯರಾದ ಪುಟ್ಟಣ್ಣಶೆಟ್ಟಿ ಅವರು 1913ರಲ್ಲಿ ಅಧ್ಯಕ್ಷರಾದರು. ಮುನ್ಸಿಪಲ್ ಕಂಟೋನ್ಮೆಂಟ್ ಬೋರ್ಡ್‌ನಲ್ಲಿ ಅಧಿಕಾರಿಗಳೇ ಇದ್ದರು.
- ದಂಡುಪ್ರದೇಶ ಹಾಗೂ ಬೆಂಗಳೂರು ಮುನ್ಸಿಪಲ್ ಬೋರ್ಡ್‌ಗಳನ್ನು 1949ರಲ್ಲಿ ಸಿಟಿ ಕಾರ್ಪೊರೇಷನ್ ಕಾಯ್ದೆಯನ್ವಯ ವಿಲೀನಗೊಳಿಸಿ, ‘ಬೆಂಗಳೂರು ಸಿಟಿ ಕಾರ್ಪೊರೇಷನ್’ (ಬೆಂಗಳೂರು ನಗರ ಸಭೆ– ಬಿಸಿಸಿ) ಎಂದು ಹೆಸರಿಸಲಾಯಿತು. ಆರ್. ಸುಬ್ಬಣ್ಣ ಪ್ರಥಮ ಮೇಯರ್ ಹಾಗೂ ವಿ.ಪಿ. ದೀನದಯಾಳು ನಾಯ್ಡು ಪ್ರಥಮ ಉಪಮೇಯರ್ ಆದರು. 1951ರಲ್ಲಿ ಬಿಸಿಸಿಗೆ ಚುನಾವಣೆ ನಡೆದು, 69 ಸದಸ್ಯರು ಆಯ್ಕೆಯಾದರು. ಆರು ಜನರು ನಾಮಕರಣ ಸದಸ್ಯರಿದ್ದರು. ಐದು ಸ್ಥಾಯಿ ಸಮಿತಿಗಳೂ ಅಸ್ತಿತ್ವಕ್ಕೆ ಬಂದವು.
- 1971ರ ಚುನಾವಣೆ ವರೆಗೂ ಬೆಂಗಳೂರು ನಗರ ಸಭೆಯ ಒಟ್ಟಾರೆ ಸದಸ್ಯರ ಸಂಖ್ಯೆ 75 (ನಾಮಕರಣ ಸದಸ್ಯರು ಸೇರಿ) ಆಗಿತ್ತು. 1983ರಲ್ಲಿ 87 ವಾರ್ಡ್‌ಗಳನ್ನಾಗಿ ವಿಂಗಡಿಸಲಾಯಿತು. 1996ರಲ್ಲಿ 100 ವಾರ್ಡ್‌ಗಳಿಗೆ ವಿಸ್ತರಣೆ ಮಾಡಿ, ‘ಬೆಂಗಳೂರು ಮಹಾನಗರ ಪಾಲಿಕೆ’ (ಬಿಎಂಪಿ) ಅಸ್ತಿತ್ವಕ್ಕೆ ಬಂದಿತು. 2007ರಲ್ಲಿ ನಗರದ ಸುತ್ತಮತ್ತಲಿನ ಏಳು ನಗರ ಸಭೆ ಹಾಗೂ ಒಂದು ಪುರಸಭೆ ಮತ್ತು 110 ಹಳ್ಳಿಗಳು ಸೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ (ಬಿಬಿಎಂಪಿ) ರಚಿಸಿ, 198 ವಾರ್ಡ್‌ಗಳನ್ನು ವಿಂಗಡಿಸಲಾಯಿತು. 2010ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದಿತ್ತು.
- 2020ರ ಸೆಪ್ಟೆಂಬರ್ 10ರಂದು ಕೌನ್ಸಿಲ್ ಅವಧಿ ಮುಕ್ತಾಯಗೊಂಡಿತ್ತು. 2022ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 243 ವಾರ್ಡ್‌ಗಳನ್ನು ಸರ್ಕಾರ ರಚಿಸಿತ್ತು. 2023ರ ಆಗಸ್ಟ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 225 ವಾರ್ಡ್‌ಗಳಿಗೆ ಮರು ವಿಂಗಡಣೆ ಮಾಡಲಾಗಿತ್ತು. 2025ರ ಸೆಪ್ಟೆಂಬರ್ 2ರಂದು ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು, ಅದೇ ವ್ಯಾಪ್ತಿಯಲ್ಲಿ ‘ಗ್ರೇಟರ್ ಬೆಂಗಳೂರು’ ಅಸ್ತಿತ್ವ ಕಂಡುಕೊಂಡು, ಐದು ನಗರ ಪಾಲಿಕೆಗಳೂ ರಚನೆಯಾಗಿವೆ.
ಮೆಯೊಹಾಲ್‌ನಿಂದ ಕೆಂಪೇಗೌಡ ಪೌರ ಸಭಾಂಗಣ
- ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮೆಯೊ ಹಾಲ್‌ನಲ್ಲಿ 1996ರವರೆಗೆ ಕಾರ್ಪೊರೇಟರ್‌ಗಳ ಸಭೆ ನಡೆಯುತ್ತಿತ್ತು. ಎನ್.ಆರ್. ಚೌಕದಲ್ಲಿ 1996ರಲ್ಲಿ ಕೆಂಪೇಗೌಡ ಸಭಾಂಗಣ ನಿರ್ಮಾಣವಾದ ಮೇಲೆ ಅಂದಿನಿಂದ ಪಾಲಿಕೆಯ ಸಭೆ ಅಲ್ಲಿ ನಡೆಯುತ್ತಿತ್ತು. ಆಡಳಿತ ಯಂತ್ರದ ಕೇಂದ್ರ ಸ್ಥಾನವೂ ಅದೇ ಆವರಣದಲ್ಲಿತ್ತು.
- 1949ರಿಂದ 1994ರವರೆಗೆ ಬೆಂಗಳೂರು ನಗರ ಸಭೆಯಲ್ಲಿ 33 ಮೇಯರ್‌ಗಳಿದ್ದರು. 1996ರಿಂದ 2006ವರೆಗೆ 10 ಮೇಯರ್‌ಗಳು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿದ್ದರು. 2010ರಿಂದ 2020ರವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 10 ಮೇಯರ್‌ಗಳನ್ನು ಕಂಡಿದೆ.
- 1967ರಿಂದ 1990ರವರೆಗಿನ ಬೆಂಗಳೂರು ನಗರ ಸಭೆಯಲ್ಲಿ 17 ಆಡಳಿತಾಧಿಕಾರಿಗಳು ವಿವಿಧ ಅವಧಿಯಲ್ಲಿದ್ದರು. 1995ರಿಂದ 1996ರವರೆಗಿನ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಆರು ಮಂದಿ ಆಡಳಿತಾಧಿಕಾರಿ, 2006ರಿಂದ 2025ರವರೆಗಿನ ಬಿಬಿಎಂಪಿ ಅವಧಿಯಲ್ಲಿ ಏಳು ಮಂದಿ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. 2020ರಿಂದ ಬಿಬಿಎಂಪಿಯಲ್ಲಿ ಅಧಿಕಾರಿಗಳ ಆಡಳಿತವೇ ಇತ್ತು. ಇದೀಗ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಆಡಳಿತ ಆರಂಭವಾಗಿದೆ.
‘ಇಂದಿನಿಂದಲೇ ಪಾಲಿಕೆಗಳಿಗೆ ತೆರಿಗೆ ಹಣ’
- ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ನಗರ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆ: ಡಿಸಿಎಂ ಡಿ.ಕೆ. ಶಿವಕುಮಾರ್
- ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಂಗ್ರಹ ವಾಗುವ ತೆರಿಗೆ ಹಣ ಆಯಾ ಪಾಲಿಕೆಗಳಿಗೆ ಬುಧವಾರದಿಂದಲೇ ಸಂದಾ ಯವಾಗಲಿದೆ. ಜಿಬಿಎ ಅಥವಾ ರಾಜ್ಯ ಸರ್ಕಾರಕ್ಕೆ ಬರುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
- ‘ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗುವುದಿಲ್ಲ. ಪಾಲಿಕೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಮುಂದೆ ಜಿಬಿಎ ಮೂಲಕ ದೊಡ್ಡ ಯೋಜನೆಗಳ ಜಾರಿ, ಉತ್ತಮ ಆಡಳಿತ, ಸೇವೆಗೆ ಮೀಸಲಾಗಿರಲಿದೆ. ಸರ್ಕಾರದಿಂದ ಬಂದ ಹಣ ಜಿಬಿಎ ಹಾಗೂ ಪಾಲಿಕೆಗಳಿಗೆ ಹೋಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಚುನಾವಣೆ ನಡೆಯಲಿದೆ’ ಎಂದು ಸುದ್ದಿಗಾರರಿಗೆ ಮಂಗಳವಾರ ಮಾಹಿತಿ ನೀಡಿದರು.
- ‘ನಗರದ ಜನಸಂಖ್ಯೆ 1.44 ಕೋಟಿ ಎಂದು ಅಂದಾಜಿಸಲಾಗಿದೆ. 2011ರ ಜನಗಣತಿ ಪ್ರಕಾರ, ವಾರ್ಡ್ನಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಈಗ 35-40 ಸಾವಿರ ಸರಾಸರಿಯಲ್ಲಿ ವಾರ್ಡ್ ರಚನೆ ಮಾಡಲಾಗುವುದು’ ಎಂದು ವಿವರಿಸಿದರು.
- ‘ಮುಂದಿನ ದಿನಗಳಲ್ಲಿ ಪೂರ್ವ, ಪಶ್ಚಿಮ, ಉತ್ತರ ದಕ್ಷಿಣ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಲು ಅವಕಾಶ ಕಲ್ಪಿಸಿದ್ದೇವೆ. ಕಾನೂನಿಗೆ ತೊಡಕಾಗಬಾರದು ಎಂಬ ಉದ್ದೇಶ ದಿಂದ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಆಯಾ ಪಾಲಿಕೆಗಳು ಸರ್ಕಾರವನ್ನು ವಿಶ್ವಾಸಕ್ಕೆ ಪಡೆದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಿವೆ. ಈಗ ಹಾಲಿ ಇದ್ದ ಪಾಲಿಕೆ ವ್ಯಾಪ್ತಿಗೆ ಜಿಬಿಎ ರಚಿಸಿ, ಐದು ಪಾಲಿಕೆ ಮಾಡಿದ್ದೇವೆ. ಆನೇಕಲ್ ಕ್ಷೇತ್ರಕ್ಕೆ ಸೇರಿದ್ದ ಒಂದು ವಾರ್ಡ್ ಬಿಟ್ಟುಹೋಗಿತ್ತು. ಈಗ ಅದನ್ನು ಸರಿಪಡಿಸಿದ್ದೇವೆ’ ಎಂದು ಹೇಳಿದರು.
- ಐತಿಹಾಸಿಕ ದಿನ:’ ‘ಬೆಂಗಳೂರಿನ ಪಾಲಿಗೆ ಇದೊಂದು ಐತಿಹಾಸಿಕ ದಿನ. ಅಧಿಕಾರ ವಿಕೇಂದ್ರೀಕರಣಗೊಳಿಸುವ ರಾಜೀವ್ ಗಾಂಧಿ ಅವರ ಆಶಯದಂತೆ ಸಂವಿಧಾನದ 74ನೇ ತಿದ್ದುಪಡಿಯನ್ನು ಪಾಲಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲಾಗಿದೆ. 1993ರ ಜೂನ್ 1ರಂದು ಕರ್ನಾಟಕದಲ್ಲಿ 74ನೇ ತಿದ್ದುಪಡಿ ಜಾರಿಗೆ ಬಂದಿತು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
- ‘ಪೂರ್ವ ನಗರ ಪಾಲಿಕೆಯ ಆದಾಯ ಪೂರ್ವ ಪಾಲಿಕೆಗೇ ಸೀಮಿತ ವಾಗಲಿದೆ. ಪಶ್ಚಿಮ ನಗರ ಪಾಲಿಕೆ ಆದಾಯ ಕಡಿಮೆ ಇದ್ದಾಗ ಸರ್ಕಾರ ಅವರಿಗೆ ನೆರವು ನೀಡಬೇಕು. ನಾವು ಪೂರ್ವದ ಹಣವನ್ನು ಪಶ್ಚಿಮದ ಪಾಲಿಕೆಗೆ ನೀಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾಗಿರಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
- ‘ಉತ್ತಮ ಆಡಳಿತ, ಸೇವೆ ನೀಡ ಬೇಕು, ಸಂವಿಧಾನ ರಕ್ಷಣೆ ಮಾಡಬೇಕು. ಈ ಹಿಂದೆ ನಗರದ ಸಣ್ಣಪುಟ್ಟ ವಿಚಾರಕ್ಕೂ ಬೆಂಗಳೂರು ಆಯುಕ್ತರಿಗೆ ಕರೆ ಮಾಡಬೇಕಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಜಿಬಿಎ ಅಧಿಕಾರಿಗಳು ನಗರದ ದೊಡ್ಡ ಯೋಜನೆಗಳ ಜವಾಬ್ದಾರಿ ಮಾತ್ರ ನಿಭಾಯಿಸುತ್ತಾರೆ. ಸುರಂಗ ರಸ್ತೆ ಸೇರಿದಂತೆ ಬೇರೆ ಬೇರೆ ಪಾಲಿಕೆಗಳ ಮೂಲಕ ಹಾದುಹೋಗುವ ದೊಡ್ಡ ದೊಡ್ಡ ಯೋಜನೆ ನೋಡಿಕೊಳ್ಳುತ್ತಾರೆ. ಆಯಾ ಪಾಲಿಕೆಗೆ ನಿಯೋಜನೆಯಾಗಿರುವ ಆಯುಕ್ತರು ಹೊಣೆಗಾರಿಕೆ ಹೊಂದಿರುತ್ತಾರೆ ’ ಎಂದರು.
ಗ್ರೇಟರ್ ಬೆಂಗಳೂರು ರಚನೆ ಹಾದಿ…
- ‘2007ರ ಜನವರಿ 16ರಂದು 198 ವಾರ್ಡ್‌ಗಳೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿತ್ತು. 2024ರ ಸೆಪ್ಟೆಂಬರ್ 22ರಂದು ಬಿ.ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಬೆಂಗಳೂರಿನಲ್ಲಿ ಉತ್ತಮ ಆಡಳಿತ ನೀಡುವ ಬಗ್ಗೆ ಅಧ್ಯಯನ ನಡೆಸಲಾಯಿತು. ಈ ಸಮಿತಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಧ್ಯಯನ ಮಾಡಿ ಒಂಬತ್ತು ವರದಿಗಳನ್ನು ಸಲ್ಲಿಸಿತ್ತು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
- ‘2015ರಲ್ಲಿ ಬೆಂಗಳೂರಿನಲ್ಲಿ ಮೂರು ಪಾಲಿಕೆಗಳನ್ನು ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಿಲಾಗಿತ್ತಾದರೂ ನಂತರ ರಾಜ್ಯ ಸರ್ಕಾರ 2019ರ ಜುಲೈ 26ರಂದು ಅದನ್ನು ಹಿಂಪಡೆಯಿತು’ ಎಂದರು.
- ‘ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲು ತೀರ್ಮಾನಿಸಿ, 2023ರ ಜುಲೈ 18ರಂದು ಬಿ.ಎಸ್ ಪಾಟೀಲ್ ಅವರ ಸಮಿತಿ ರಚಿಸಿದೆವು. ಈ ಸಮಿತಿ 2024ರ ಜುಲೈ 12ರಂದು ವರದಿ ಸಲ್ಲಿಸಿತ್ತು. ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಸಿದ್ಧಪಡಿಸಿ, ಜುಲೈ 25ರಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. ವಿರೋಧ ಪಕ್ಷಗಳ ಸದಸ್ಯರ ಸಲಹೆ ಮೇರೆಗೆ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ 15 ಸದಸ್ಯರ ಜಂಟಿ ಸದನ ಸಮಿತಿ ರಚಿಸಲಾಯಿತು. ಈ ಸಮಿತಿ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ನೀಡಿದ ವರದಿಯನ್ವಯ, 2025ರ ಮಾರ್ಚ್ 10ರಂದು ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಮಾ.12ರಂದು ವಿಧಾನ ಪರಿಷತ್‌ನಲ್ಲಿ ಚರ್ಚೆ ಮಾಡಿ ಅನುಮೋದನೆ ಪಡೆದು ರಾಜ್ಯಪಾಲರಿಗೆ ಕಳುಹಿಸಲಾಯಿತು. 2025ರ ಏಪ್ರಿಲ್ 23ರಂದು ರಾಜ್ಯಪಾಲರು ಅಂಕಿತ ಹಾಕಿದರು. ಮೇ 15ರಿಂದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಜಾರಿಗೆ ಬಂದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿತು. ಜುಲೈ 19ರಂದು ಐದು ನಗರ ಪಾಲಿಕೆಗಳ ಕರಡು ಅಧಿಸೂಚನೆ ಹೊರಡಿಸಿ, 30 ದಿನಗಳ ಕಾಲಾವಕಾಶ ನೀಡಲಾಯಿತು. 55 ಆಕ್ಷೇಪಣೆಗಳು ಬಂದಿದ್ದವು. ಇದೆಲ್ಲವನ್ನು ಬಗೆಹರಿಸಿ ಐದು ಪಾಲಿಕೆಗಳ ಗಡಿಯ ನಕ್ಷೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆಯಲಾಯಿತು. ಅಂತಿಮ ಅಧಿಸೂಚನೆ ಹೊರಡಿಸಲಾಯಿತು ಎಂದು ಮಾಹಿತಿ ನೀಡಿದರು.
ಗ್ರೇಟರ್ ಬೆಂಗಳೂರಿಗೆ 5 ಪಾಲಿಕೆ
- ರಾಜಧಾನಿಯ ಆಡಳಿತ ಯಂತ್ರವನ್ನು ನಿಭಾಯಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ಅಡಿಯಲ್ಲಿ ಐದು ನಗರ ಪಾಲಿಕೆಗಳು ರಚನೆಯಾಗಿವೆ.
- ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024’ (ಜಿಬಿಜಿಎ) ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್ ಬೆಂಗಳೂರು ಪ್ರದೇಶ’ (ಜಿಬಿಎ) ಎಂದು ಗುರುತಿಸಿ 2025ರ ಮೇ 15ರಂದು ಸರ್ಕಾರ ಅಧಿಸೂಚಿಸಿತ್ತು. ‘ಗ್ರೇಟರ್ ಬೆಂಗಳೂರು ಪ್ರದೇಶ’ದಲ್ಲೇ ಐದು ನಗರ ಪಾಲಿಕೆಗಳನ್ನು ರಚಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಬಿಬಿಎಂಪಿ ತನ್ನ ಅಸ್ತಿತ್ವ ಕಳೆದುಕೊಂಡಿದೆ.
- ಜಿಬಿಜಿಎ ಕಾಯ್ದೆಯ ಪ್ರಕರಣ 4ರ ಉಪ ಪ್ರಕರಣ (1) ಹಾಗೂ ಪ್ರಕರಣ 7ರ ಉಪ ಪ್ರಕರಣದಡಿ (1) ಅಧಿಕಾರ ಚಲಾಯಿಸಿರುವ ಸರ್ಕಾರ, ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯಾ ಸಾಂದ್ರತೆ, ಬರುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗ ಪ್ರಮಾಣ, ಆರ್ಥಿಕ ಪ್ರಾಮುಖ್ಯ ವನ್ನು ಪರಿಗಣಿಸಿ ಐದು ನಗರ ಪಾಲಿಕೆಗಳನ್ನು ರಚಿಸಿದೆ.
- ವಿಧಾನಸಭೆಯಂತೆ ವಿಂಗಡಣೆ ಇಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ 225 ವಾರ್ಡ್‌ಗಳನ್ನು ಮರುರಚಿಸಿ 2023ರ ಸೆಪ್ಟೆಂಬರ್ 25ರಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಹೊಸ ಐದು ನಗರ ಪಾಲಿಕೆಗಳನ್ನು ಬಿಬಿಎಂಪಿ ಚುನಾವಣೆ ನಡೆದಿದ್ದ 198 ವಾರ್ಡ್‌ಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ. ಜೊತೆಗೆ 225 ವಾರ್ಡ್‌ಗಳ ವಿಂಗಡಣೆ ಸಮಯದಲ್ಲಿ ಸೇರಿಸಲಾದ ಪ್ರದೇಶಗಳನ್ನು ಸೇರಿಸಿಕೊಳ್ಳಲಾಗಿದೆ.
- 712 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚಿಸಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆನೇಕಲ್ ವಿಧಾನಸಭೆ ಕ್ಷೇತ್ರದ ಸಿಂಗಸಂದ್ರ (ಕೂಡ್ಲು) ವಾರ್ಡ್ ಸೇರಿದಂತೆ 225 ವಾರ್ಡ್‌ಗಳನ್ನು ಪುನರ್ ವಿಂಗಡಿಸಿದಾಗ ಸೇರಿಕೊಂಡ ಪ್ರದೇಶಗಳು ಸೇರಿದಂತೆ 9 ಚದರ ಕಿ.ಮೀ. ವೃದ್ಧಿಸಿ 720.9 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳ ಗಡಿಗಳನ್ನು ಗುರುತಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
- 2025ರ ಆಸ್ತಿ ತೆರಿಗೆ ಸಂಗ್ರಹವನ್ನು ಐದು ನಗರ ಪಾಲಿಕೆಗಳಿಗೆ ವಿಂಗಡಿಸಿದರೆ, ಮಹದೇವಪುರ ಹಾಗೂ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಲಿರುವ ಪೂರ್ವ ನಗರ ಪಾಲಿಕೆಗೆ ಅತಿಹೆಚ್ಚು (₹912 ಕೋಟಿ) ಸಂಗ್ರಹ ಇರಲಿದೆ. ಉತ್ತರ ನಗರ ಪಾಲಿಕೆಗೆ ಅತಿ ಕಡಿಮೆ (₹543 ಕೋಟಿ) ತೆರಿಗೆ ಸಂಗ್ರಹವಾಗಲಿದೆ.
- ಒಂದು ಚದರ ಕಿ.ಮೀ.ಗೆ ಸರಾಸರಿ 20,225 ಜನಸಂಖ್ಯೆ ಸಾಂದ್ರತೆ ಬರುವಂತೆ ವಿಂಗಡಿಸಲಾಗಿದೆ. ಕೇಂದ್ರ ನಗರ ಪಾಲಿಕೆಯಲ್ಲಿ ಅತಿಹೆಚ್ಚು ಜನಸಂಖ್ಯೆ ಸಾಂದ್ರತೆ (32,051) ಇರಲಿದ್ದು, ಪೂರ್ವ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ಜನಸಂಖ್ಯೆ ಸಾಂದ್ರತೆ (7,738) ಇರಲಿದೆ. ಪ್ರತಿ ನಗರ ಪಾಲಿಕೆಯ ಗಡಿಯಲ್ಲಿ ಅತಿದೊಡ್ಡ ರಸ್ತೆ ಇರುವಂತೆ ವಿಂಗಡಣೆ ಮಾಡಲಾಗಿದೆ.
ನ.30ಕ್ಕೆ ವಾರ್ಡ್ ಮೀಸಲಾತಿ ಪ್ರಕಟ: ಡಿಸಿಎಂ
- ಐದು ನಗರ ಪಾಲಿಕೆಗಳ ವಾರ್ಡ್ ಪುನರ್ ವಿಂಗಡಣೆಗೆ ಆಯೋಗ ರಚಿಸಿದ್ದು, ನವೆಂಬರ್ 1ಕ್ಕೆ ವಾರ್ಡ್‌ಗಳ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ನ.30ರಂದು ವಾರ್ಡ್‌ಗಳ ಮೀಸಲಾತಿ ಅಧಿಸೂಚನೆ ಹೊರಡಿಸಿ, ಚುನಾವಣೆ ನಡೆಸಲಾಗುತ್ತದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
- ‘ನಾವು ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ್ದು, ನಮಗೆ ಕಾಲಮಿತಿ ಇದೆ. ವಾರ್ಡ್ ಮೀಸಲಾತಿ ಅಧಿಸೂಚನೆಯಾದ ನಂತರ ಆಯೋಗಕ್ಕೆ ನೀಡಿ, ಚುನಾವಣೆ ನಡೆಸಲು ಮನವಿ ಮಾಡಲಾಗುತ್ತದೆ. ಚುನಾವಣೆ ನಡೆಸಲು ಪೂರ್ವಸಿದ್ಧತೆ ಆರಂಭಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅತಿ ಶೀಘ್ರದಲ್ಲೇ ಅವರು ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ’ ಎಂದು ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
- ‘ಪಾಲಿಕೆಗಳ ಮೇಲೆ ಜಿಬಿಎ ಇರುವುದರಿಂದ 74ನೇ ತಿದ್ದುಪಡಿಗೆ ತೊಂದರೆಯಾಗುವುದಿಲ್ಲವೇ, ಇದನ್ನು ಪ್ರಶ್ನಿಸಿ ಯಾರಾದರೂ ನ್ಯಾಯಾಲಯದ ಮೊರೆ ಹೋಗುವುದಿಲ್ಲವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ನ್ಯಾಯಾಲಯಗಳಲ್ಲಿ ಅರ್ಜಿ ಹಾಕಿ, ತಿರಸ್ಕೃತವಾಗಿವೆ. ಸುಪ್ರೀಂ ಕೋರ್ಟ್ ಪ್ರಮಾಣಪತ್ರ ಒಪ್ಪಿದೆ. ವಾರ್ಡ್ ಪುನರ್ ವಿಂಗಡಣೆ ಬಳಿಕ, ನವೆಂಬರ್ 3ರಂದು ವಿಚಾರಣೆಗೆ ಬರುವಂತೆ ತಿಳಿಸಿದೆ’ ಎಂದರು.
- ‘ಸಕಾರಣವಿಲ್ಲದ ಡಿಎನ್ಎ ಪರೀಕ್ಷೆ ಸಲ್ಲ’
ಸಂದರ್ಭ: ‘ಸಕಾರಣ ಮತ್ತು ಅಗತ್ಯ ಇಲ್ಲದೇ ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುವುದು ವಿವಾಹದ ಪಾವಿತ್ರ್ಯ, ಸಾಂವಿಧಾನಿಕ ಚೌಕಟ್ಟು ಗಳ ಅಡಿಯಲ್ಲಿ ದಂಪತಿಗಳಿಗೆ ಕೊಡಮಾಡಿದ ಗೋಪ್ಯತೆ ಹಾಗೂ ಘನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ’ ಎಂದು ಹೈಕೋರ್ಟ್, ಆಸ್ತಿ ಪಾಲುದಾರಿಕೆಯ ಪ್ರಕರಣವೊಂದರಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
- ಈ ಸಂಬಂಧ 39 ವರ್ಷದ ಪುರುಷರೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿ (ಡಬ್ಲ್ಯು.ಪಿ 20342/2025) ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
- ‘ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗುವ ಅರ್ಜಿ ಗಳಿಗೆ ಉತ್ತರಿಸುವಾಗ ವಿಚಾರಣಾ ನ್ಯಾಯಾಲಯಗಳು ಸದರಿ ತೀರ್ಪಿನ ಸಮಯದಲ್ಲಿ ಮಾಡಲಾಗಿರುವ ಎಲ್ಲ ಅವಲೋಕನಾ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿಯ ಬೇಕು. ಅಂತೆಯೇ, ಈ ತೀರ್ಪನ್ನು ಸಂಬಂಧ ಪಟ್ಟ ನ್ಯಾಯಾಲಯಗಳಿಗೆ ರವಾನಿಸಬೇಕು’ ಎಂದು ಹೈಕೋರ್ಟ್ ರಿಜಿಸ್ಟ್ರಿಗೆ ತಾಕೀತು ಮಾಡಿದೆ.
ಕಲಂ 112ರ ಘನತೆಗೆ ಧಕ್ಕೆಯಾಗಬಾರದು…
- ‘ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 112ರ ಅಸ್ತಿತ್ವವೇ ಸಾರ್ವಜನಿಕ ನೈತಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಅಥವಾ ಶಾಂತಿಯ ಭದ್ರತೆಯನ್ನು ಹೊಂದಿದೆ. ದಾಂಪತ್ಯ ಅಸ್ತಿತ್ವದಲ್ಲಿರುವಾಗ ಮತ್ತು ಗರ್ಭ ಧರಿಸಿದ 280 ದಿನಗಳ ಮೇಲೆ ಮಗು ಜನಿಸಿದರೆ ಅದು ಆತನೇ ತಂದೆ ಎಂದು ತಿಳಿಯಬೇಕು. ಈ ನಿರ್ಣಾಯಕ ಪುರಾವೆಯನ್ನು ಮೀರಿ ಒಂದು ವೇಳೆ ಮಗುವಿನ ಪಿತೃತ್ವವನ್ನು ಪ್ರಶ್ನಿಸಿದ್ದೇ ಆದರೆ ಅದು 112ರಲ್ಲಿ ಅಡಕವಾಗಿರುವ ತತ್ವಗಳನ್ನು ಮೀರಿದ ಕಾರಣಕ್ಕೆ ಉದ್ಭವಿಸಿದೆ ಎನ್ನುವಂತಿರಬೇಕು. ಇಂತಹ ಮೀರಿದ ಸಂದರ್ಭಗಳಲ್ಲಿ ಮಾತ್ರವೇ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡುವುದು ಸಮ್ಮತ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
- ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಂ.ವಿಜಯಕೃಷ್ಣ ಭಟ್ ಅವರ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಸಂವಿಧಾನದಲ್ಲಿ ನಿಗದಿಪಡಿಸಿದಂತೆ ಪರೀಕ್ಷೆ, ಗೋಪ್ಯತೆಯ ಹಕ್ಕು ಮತ್ತು ಘನತೆಯ ನಡುವೆ ಹೆಣೆದುಕೊಂಡಿರುವ ಸೂಕ್ಷ್ಮ ಸಮತೋಲನವನ್ನು ನಾವು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಭಾರತೀಯ ಸಾಕ್ಷ್ಯ ಕಾಯ್ದೆ-1872ರ ಕಲಂ 112ರಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಪೂರೈಸದ ಹೊರತು ನ್ಯಾಯಾಲಯಗಳು ಡಿಎನ್ಎ ಪರೀಕ್ಷೆಗೆ ಅನುಮತಿ ನೀಡಬಾರದು’ ಎಂದು ಸ್ಪಷ್ಟಪಡಿಸಿದೆ.
- ಪ್ರಕರಣವೇನು?: ಮೊದಲ ಹೆಂಡತಿಯ ಇಬ್ಬರು ವಯಸ್ಕ ಗಂಡು ಮಕ್ಕಳು ಹಾಗೂ ಎರಡನೇ ಹೆಂಡತಿಯ ವಯಸ್ಕ ಮಗನ ಮಧ್ಯೆ ಆಸ್ತಿ ಪಾಲುದಾರಿಕೆಗೆ ಸಂಬಂಧಿಸಿದಂತೆ 2016ರಿಂದ ಚನ್ನರಾಯಪಟ್ಟಣದ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಅಸಲು ದಾವೆಯ ವ್ಯಾಜ್ಯ ಮುಂದುವರಿದಿತ್ತು. ವ್ಯಾಜ್ಯದ ಸಮಯದಲ್ಲಿ ಅರ್ಜಿದಾರರನ್ನು ಪಾಟೀ ಸವಾಲಿಗೆ ಒಳಪಡಿಸಿದಾಗ ಅವರ ಪಿತೃತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು.
- ‘ರಿಟ್ ಅರ್ಜಿದಾರರು, ನಮ್ಮ ತಂದೆಗೆ ಜನಿಸಿದ ಮಗನಲ್ಲ. ನಮ್ಮ ತಂದೆಗೆ ಆದಾಗಲೇ ವಾಸೆಕ್ಟಮಿ (ನಸ್ಬಂದಿ) ಆಪರೇಷನ್ ಆಗಿತ್ತು. ಅವರಿಗೆ ಮಕ್ಕಳಾಗುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ, ಇವರ ಪಿತೃತ್ವದ ಸತ್ಯಾಸತ್ಯತೆ ಅರಿಯಲು ಡಿಎನ್‌ಎ ಪರೀಕ್ಷೆ ನಡೆಸಲು ಆದೇಶಿಸಬೇಕು’ ಎಂದು ಮೊದಲ ಹೆಂಡತಿಯ ಇಬ್ಬರು ಮಕ್ಕಳು (ಅಸಲು ದಾವೆಯ ವಾದಿಗಳು) ಕೋರಿದ್ದರು.
- ಈ ತಕರಾರನ್ನು ಮಾನ್ಯ ಮಾಡಿದ್ದ ಸಿವಿಲ್ ನ್ಯಾಯಾಧೀಶರು, ಸಿವಿಲ್ ಪ್ರಕ್ರಿಯಾ ಸಂಹಿತೆ–1908ರ ನಿಯಮ 26, ನಿಯಮ 10 ಎ ಅಡಿಯಲ್ಲಿ ಡಿಎನ್‌ಎ ಪರೀಕ್ಷೆಗೆ ಸಮ್ಮತಿ ನೀಡಿ 2025ರ ಏಪ್ರಿಲ್ 5ರಂದು ಆದೇಶಿಸಿದ್ದರು.
- ಇದನ್ನು ಪ್ರಶ್ನಿಸಿದ್ದ 39 ವರ್ಷದ ಅರ್ಜಿದಾರರು, ‘ವಿಚಾರಣಾ ನ್ಯಾಯಾಲಯ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕು’ ಎಂದು ಕೋರಿದ್ದರು. ಈ ಮನವಿಯನ್ನು ಮನ್ನಿಸಿರುವ ನ್ಯಾಯಪೀಠ, ‘ಒಂದು ವೇಳೆ ಡಿಎನ್‌ಎ ಪರೀಕ್ಷೆ ನಡೆಸಿ ಏನಾದರೂ ವರದಿ ಸಿದ್ಧಪಡಿಸಿದ್ದರೆ ಅಂತಹ ವರದಿ ಅಮಾನ್ಯವಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದೆ.
ಕಲಂ 112ರ ಘನತೆಗೆ ಧಕ್ಕೆಯಾಗಬಾರದು…
- ‘ಕಲಂ 112 ಸಾಮಾನ್ಯ ಸಂದರ್ಭಗಳಲ್ಲಿ ಮಹಿಳೆಯ ಘನತೆ ಏನು ಎತ್ತ ಎಂಬುದರ ಸೂಕ್ಷ್ಮ ಸಿದ್ಧಾಂತವನ್ನು ಒಳಗೊಂಡಿದೆ. ಮಗುವಿನ ತಂದೆ ತಾನೇ ಎಂಬುದು ಗೊತ್ತಿದ್ದರೂ ಕೆಲವೊಮ್ಮೆ ಪುರುಷ ನಿರಾಧಾರ ಆರೋಪ ಹೊರಿಸಿಬಿಡುತ್ತಾನೆ. ಮಹಿಳೆಯ ವ್ಯಕ್ತಿತ್ವವನ್ನು ನಾಶ ಮಾಡಿಬಿಡುತ್ತಾನೆ. ಈ ಹುಮ್ಮಸ್ಸಿನಲ್ಲಿ ರಕ್ತ–ಡಿಎನ್‌ಎ ಪರೀಕ್ಷೆಗೆ ಕೋರುತ್ತಾನೆ. ಆಗ ಮಹಿಳೆಯ ಘನತೆಗೆ ವಿನಾಕಾರಣ ಪೆಟ್ಟು ಬಿದ್ದಂತಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
- ಡಿಎನ್‌ಎ ಪರೀಕ್ಷೆ ಎಂದರೇನು?: ಡಿ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲವು (ಡಿಎನ್‌ಎ) ಮೂಲಭೂತವಾಗಿ ಆನುವಂಶಿಕ ಸಂಕೇತವಾಗಿದೆ. ಇದು ಇಬ್ಬರೂ ಪೋಷಕರಿಂದ ಅವರ ಮಕ್ಕಳಿಗೆ ಗುಣಲಕ್ಷಣಗಳನ್ನು ಹೊತ್ತೊಯ್ಯುತ್ತದೆ. ಪ್ರತಿಯೊಬ್ಬರಲ್ಲೂ ಇದು ವಿಶಿಷ್ಟವಾದ ಸಂಕೇತವನ್ನು ಹೊಂದಿರುತ್ತದೆ. ಯಾವುದೇ ಆನುವಂಶಿಕ ಅಸ್ವಸ್ಥತೆಗಳ ಮೌಲ್ಯಮಾಪನಕ್ಕೆ ಅಥವಾ ಕಾನೂನು ಉದ್ದೇಶಗಳ ದೃಢೀಕರಣಕ್ಕಾಗಿ ಪಿತೃತ್ವವನ್ನು ಸಾಬೀತುಪಡಿಸುವ ಸಂದರ್ಭದಲ್ಲಿ ಈ ಪರೀಕ್ಷೆ ಕೈಗೊಳ್ಳಲಾಗುತ್ತದೆ.
- ಮರಾಠರಿಗೆ ಮೀಸಲಾತಿ: ಒಪ್ಪಿಗೆ
ಸಂದರ್ಭ: ‘ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿದೆ. ಸ್ನೇಹಿತರೇ ನಾವು ಗೆದ್ದುಬಿಟ್ಟೆವು’ ಎಂದು ಹೋರಾಟಗಾರ ಮನೋಜ್ ಜರಾಂಗೆ ಘೋಷಿಸಿದರು. ಕಳೆದ 5 ದಿನಗಳಿಂದ ಸಾವಿರಾರು ಹೋರಾಟಗಾರರೊಂದಿಗೆ ಜರಾಂಗೆ ಅವರು ಇಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
- ‘ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಲು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಒಪ್ಪಿಕೊಂಡಿದೆ. ಸ್ನೇಹಿತರೇ ನಾವು ಗೆದ್ದುಬಿಟ್ಟೆವು’ ಎಂದು ಹೋರಾಟಗಾರ ಮನೋಜ್ ಜರಾಂಗೆ ಘೋಷಿಸಿದರು.
- ಐದು ದಿನಗಳಿಂದ ಸಾವಿರಾರು ಹೋರಾಟಗಾರರೊಂದಿಗೆ ಜರಾಂಗೆ ಅವರು ಇಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
- ಮರಾಠ ಸಮುದಾಯದವರಿಗೆ ಈಗ ಹಿಂದುಳಿದ ವರ್ಗದ ಕೋಟಾದಡಿ ಮೀಸಲಾತಿ ದೊರೆಯಲಿದೆ. ಮರಾಠರಿಗೆ ಮೀಸಲಾತಿ ನೀಡುವ ವಿಷಯ ಪರಿಶೀಲಿಸಲು ರಚಿಸಿದ ಸಂಪುಟ ಉಪಸಮಿತಿಯು ಜರಾಂಗೆ ಅವರ ಬಹುಪಾಲು ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಒಪ್ಪಿಗೆ ನೀಡಿರುವುದಾಗಿ ಸಮಿತಿಯ ಮುಖ್ಯಸ್ಥ, ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಜರಾಂಗೆ ಅವರಿಗೆ ತಿಳಿಸಿದರು.
- ಸಮಿತಿಯ ಕರಡು ಪ್ರತಿಯನ್ನು ಜರಾಂಗೆ ಅವರು ಓದಿ ಹೇಳುತ್ತಿದ್ದಂತೆಯೇ ಇಲ್ಲಿನ ಆಜಾದ್ ಮೈದಾನದಲ್ಲಿ ಹೋರಾಟಗಾರರು ಹಲಗೆ ಹೊಡೆದು, ಕುಣಿದು ಕುಪ್ಪಳಿಸಿ ಸಂಭ್ರಮಿಸಿ ದರು. ‘ಸರ್ಕಾರದೊಂದಿಗೆ ಮಾತ ನಾಡಲು ಸಿದ್ಧನಿದ್ದೇನೆ. ನನ್ನ ಬೇಡಿಕೆಗಳು ಈಡೇರದ ಹೊರತು ಮುಂಬೈ ಬಿಟ್ಟು ತೆರಳುವುದಿಲ್ಲ’ ಎಂದು ಜರಾಂಗೆ ಅವರು ಬೆಳಿಗ್ಗೆಯಷ್ಟೇ ಹೇಳಿದ್ದರು.
- ‘ಮರಾಠ ಮೀಸಲಾತಿ ಹೋರಾಟಗಾರರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಸೆಪ್ಟೆಂಬರ್ ಅಂತ್ಯದ ಒಳಗಾಗಿ ಕೈಬಿಡಲಾಗುವುದು ಎಂದು ಉಪ ಸಮಿತಿಯವರು ಹೇಳಿದ್ದಾರೆ’ ಎಂದರು.
- ‘ಕುಣಬಿ ಮತ್ತು ಮರಾಠರು ಒಂದೇ ಸಮುದಾಯದವರು ಎಂದು ಸರ್ಕಾರಿ ಆದೇಶ ಹೊರಡಿಸಲು ಕಾನೂನು ಪ್ರಕಾರ ಇರುವ ಆಯ್ಕೆಗಳ ಕುರಿತು ಹುಡುಕಾಟ ನಡೆಯುತ್ತಿದೆ. ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎರಡು ತಿಂಗಳು ಬೇಕಾಗಬಹುದು’ ಎಂದು ಸಚಿವ ರಾಧಾಕೃಷ್ಣ ಹೇಳಿದರು.
- ಜರಾಂಗೆ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿ, ಕಣ್ಣೀರು ಹಾಕಿದರು. ಮೈದಾನದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಹೈಕೋರ್ಟ್ ತರಾಟೆ
- ‘ಅನುಮತಿ ಪಡೆಯದೆಯೇ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಂಗಳವಾರ ಮಧ್ಯಾಹ್ನ 3ರ ಒಳಗೆ ಆಜಾದ್ ಮೈದಾನವನ್ನು ಖಾಲಿ ಮಾಡಬೇಕು’ ಎಂದು ಬಾಂಬೆ ಹೈಕೋರ್ಟ್ ಹೇಳಿತ್ತು. ‘ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ’ ಎಂದು ರಾಜ್ಯ ಸರ್ಕಾರವನ್ನೂ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಜರಾಂಗೆ ಅವರ ಮನವಿ ಮೇರೆಗೆ ಬುಧವಾರ ಬೆಳಿಗ್ಗೆವರೆಗೆ ಪ್ರತಿಭಟನೆ ನಡೆಸಲು ಕೋರ್ಟ್ ಅನುಮತಿ ನೀಡಿತ್ತು.
- ಈ ಬಳಿಕ ಸಂಪುಟದ ಉಪ ಸಮಿತಿಯ ಮುಖ್ಯಸ್ಥ ರಾಧಾಕೃಷ್ಣ ಅವರು ಜರಾಂಗೆ ಅವರನ್ನು ಮಧ್ಯಾಹ್ನದ ವೇಳೆಗೆ ಭೇಟಿ ಮಾಡಿದರು.
- ನೂರಾರು ಪ್ರತಿಭಟನಕಾರರು ದಕ್ಷಿಣ ಮುಂಬೈನ ಬೀದಿಗಳಲ್ಲಿ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಆವರಣದಲ್ಲಿ ಬೀಡುಬಿಟ್ಟಿದ್ದರು. ಇದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತಿತ್ತು.
- ‘ಜರಾಂಗೆ ಮತ್ತು ಅವರ ಅನುಯಾಯಿಗಳು ಮೈದಾನವನ್ನು ಖಾಲಿ ಮಾಡದೆ ಇದ್ದರೆ ದಂಡ ವಿಧಿಸಲಾಗುವುದು. ಇವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು’ ಎಂದೂ ಕೋರ್ಟ್ ಎಚ್ಚರಿಸಿತ್ತು.
- 2 ಮಸೂದೆಗಳಿಗೆ ರಾಜ್ಯಪಾಲರ ಅಂಕಿತ
ಸಂದರ್ಭ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೋರಿಕೆ ತಡೆಗಟ್ಟಲು ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದ ‘ಕರ್ನಾಟಕ ಸರಕು ಸೇವೆಗಳ ಮಸೂದೆ- 2025’ ಹಾಗೂ ₹3,351.96 ಕೋಟಿ ಮೊದಲ ಪೂರಕ ಅಂದಾಜು ಒಳಗೊಂಡ ‘ಕರ್ನಾಟಕ ಧನ ವಿನಿಯೋಗ ಮಸೂದೆ–2025’ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
- ‘ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ ಅನ್ನು ಕೆಲವರು ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದಾರೆ. ತಂಬಾಕು–ಅಡಿಕೆ ಆಧಾರಿತ ಪದಾರ್ಥಗಳಲ್ಲಿ (ಗುಟ್ಕಾ, ಪಾನ್ ಮಸಾಲಾ) ತೆರಿಗೆ ಸೋರಿಕೆ ಆಗುತ್ತಿದ್ದು, ಯಾವ ರೀತಿ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಹುಡುಕಿ ಅದನ್ನು ತಡೆಗಟ್ಟಲು ‘ಕರ್ನಾಟಕ ಸರಕು ಸೇವೆಗಳ ಕಾಯ್ದೆ’ ನೆರವಾಗಲಿದೆ.